Wednesday, December 16, 2009

ಮಗಾ ಮದ್ವೆ ಯಾವಾಗ್ಲೋ?

ಆಗ ತಾನೇ ಸ್ಟವ್ ಮೇಲೆ ಟೀ ಇಟ್ಟಿದ್ದೆ, ಒಬ್ಬೊಬ್ಬರಿಗೆ ಮುಕ್ಕಾಲು ಲೋಟದ ಹಾಗೆ ೪ ಜನಕ್ಕೆ. ಪಾತ್ರೆ ಜೋಡುಸ್ತಿದ್ದೆ. ಹಾಲ್ನಲ್ಲಿ ಮೀಟರ್ ಬಾಬುಗೆ ರೆಡ್ಡಿ ಬ್ರದರ್ಸ್ ಬಗ್ಗೆ ಮೀಟರ್ ಹಾಕ್ತಿದ್ದ. ಬಾಬು ಹೂಂ ಹೂಂ ಅಂತಿದ್ದ. ಅಷ್ಟು ಹೇಳೋದಕ್ಕೂ ಅವನಲ್ಲಿ ಚೈತನ್ಯವಿರಲಿಲ್ಲ ಅಂತ ಅವನ ಪ್ರತಿಕ್ರಿಯೆಯಿಂದ ವ್ಯಕ್ತವಾಗುತ್ತಿತ್ತು (ಒಬ್ಬ ಮನುಷ್ಯ ಎಷ್ಟು ಸಲ ಹೂಂ ಅಂತಾನೆ ಇರೋಕಾಗತ್ತೆ).

ಆ ವಿಚಾರದಲ್ಲಿ ಉಲ್ಲ ಸೇಫ್ ಆಗಿದ್ದ, ಅವ್ನು ರೂಮಿನಲ್ಲಿ ಕುತ್ಕೊಂಡು ಅವ್ನ ಹುಡುಗಿಗೆ ಮೀಟರ್ ಹಾಕ್ತಿದ್ದ.

ಕಾಲಿಂಗ್ ಬೆಲ್ ಸದ್ದಾಯ್ತು 'ಓ ಮುಕ್ಕಾಲು ಟೀ ಅರ್ಧಕ್ಕೆ ಬಂತಲ್ಲಪ್ಪ' ಅಂದ್ಕೊಂಡೆ.

ಬಾಬು ಹೋಗಿ ಬಾಗ್ಲು ತೆಗ್ದ, ಅವನಿಗೆ ಭಯಂಕರ ಖುಷಿಯಾಗಿರಬೇಕು ಹೂಂ ಅಂತ ಹೇಳೋದು ತಪ್ತಲ್ಲ ಅಂತ.

ಪೋಕಿ ಒಳಗೆ ಬಂದ ಜೊತೆಗೆ ವೆಂಕ ಸಹ ಬಂದ. ಪೋಕಿ ಬಂದವನೇ ಉಲ್ಲನ್ನ ನೋಡಿ 'ಓ ಅಣ್ಣ ಫುಲ್ ಬ್ಯುಸಿ' ಅಂದ.

ನಾನು ೬ ಲೋಟ ತಂದು ಹಾಲ್ನಲ್ಲಿ ಇಟ್ಟು ೫ ಜನಕ್ಕೂ ಅರ್ಧರ್ಧ ಲೋಟ ಬರೋ ಹಾಗೆ ಹಾಕಿಟ್ಟೆ.

ಟೀ ಕುಡೀತಾ......

'ಏನು ಸಾಬಿ ಫುಲ್ ಕಚ್ತವ್ನೆ' ಅಂತ ಪೋಕಿ ಅಂದ.

'ಮಗ ಹುಡುಗಿ ಸಿಕ್ಕಿದ್ರೆ ಎಲ್ರು ಹಂಗೆ' ಅಂತ ಮೀಟರ್ ಅಂದ.

ಅದೆಲ್ಲ್ಲ ಇರ್ಲಿ ಪೋಕಿ 'ನಿನ್ನ ಮದುವೆ ಕಥೆ ಏನೋ?' ಅಂದೆ.

ಅಯ್ಯೋ ಅದ್ರ ಕಥೆ ಏನು ಕೇಳ್ತೀಯಾ ಬಿಡು ಅಂದ.

'ಅದ್ಹೆಂಗಾಗತ್ತೆ ಹೇಳು ಮಗ, ಸರಿ ಇಲ್ಲಿವರೆಗೆ ಎಷ್ಟು ನೋಡಿದೀಯ? ' ಅಂದೆ.

ಒಂದು ೧೦ ಮಗ ಅಂದ.

'ಅದ್ರಲ್ಲಿ ನೀನೆಷ್ಟು ರಿಜೆಕ್ಟ್ ಮಾಡಿದ್ದು, ಅವರೆಷ್ಟು' ಅಂತ ಬಾಬು ಅಂದ.

ನಮ್ಕಡೆಯಿಂದ ಒಂದು ೭ ಅವ್ರ್ಕಡೆಯಿಂದ ಮಿಕ್ಕಿದ್ದು ಅಂದ.

ಪರವಾಗಿಲ್ಲ ಕತ್ತೆತ್ತಿಕೊಂಡು ಓಡಾಡಬಹುದು ಅಂದೆ.

ಹೂಂ ಹಂಗೆ ಅಂದ್ಕೋ ಅಂದ.

ಏನೇನಕ್ಕೆ ರಿಜೆಕ್ಟ್ ಮಾಡಿದ್ಯೋ ಅಂದೆ.


ಒಂದಷ್ಟು ಫೋಟೋ ನೋಡಿ ಹೋದ್ರೆ ಅಲ್ಲಿ ಚೆನ್ನಾಗಿರಲಿಲ್ಲ ಮಗ, ಇನ್ನಷ್ಟು ಕುಟುಂಬ ಅದು ಇದು ಅಂತ ಇರತ್ತಲ್ಲ....

'೧೦ ರಲ್ಲಿ ಒಂದೂ ಸರಿಯಾಗ್ಲಿಲ್ವ' ಅಂದೆ.

ಒಬ್ಳನ್ನು ನೋಡಿದ್ದೆ ಎಲ್ಲರಿಗೂ ಒಪ್ಪಿಗೆ ಆಗಿತ್ತು. ನಮ್ಮ ಮನೆಯವರೆಲ್ಲ ಒಂದಿನ ಆ ಹುಡುಗಿ ಮನೆಗೆ ಹೋದ್ವಿ. ಹುಡುಗಿ ಜ್ಯೂಸ್ ತಂದು ಎಲ್ಲರಿಗೂ ಕೊಡ್ತಿದ್ಲು, ನನ್ನ ಪಕ್ಕದಲ್ಲಿ ನನ್ನ ಅಕ್ಕನ ಮಗ ಕೂತಿದ್ದ. ಅವನನ್ನಜ್ಯೂಸ್ ತಗೋ ಅಂದ್ಲು, ಇವ್ನು ಯಾಕೋ ನಾಚ್ಕೊಂಡು ಬೇಡ ಅಂದ. ಇನ್ನೊಂದ್ಸಲ ಕೇಳಿದ್ಲು ಆಗಲೂ ಬೇಡ ಅಂದ. ಆಗ ಅವ್ಳು 'ಬೇಕಿದ್ರೆ ತಗೋ ಬ್ಯಾಡದಿದ್ರೆ ಬಿಡು' ಅಂತ ಅಲ್ಲೇ ಲೋಟ ಇಟ್ಟು ಹೋದ್ಲು.

ಅದರಲ್ಲೇನಿದೆ ಮಗ ಸರಿ ಅಲ್ವ ಅಂದೆ.

ಸರಿನೇ, ಆದ್ರೆ ಮುಖದ ಪ್ರತಿಕ್ರಿಯೆ, ಲೋಟ ಇಟ್ಟ ರೀತಿ ಬೇರೇನೆ ಇತ್ತು ಮಗ ಅಂದ.

ಒಳ್ಳೆ ಕಥೆ ಹೋಗ್ಲಿ ಬಿಡು ಅಂದೆ.



ಈಗ ಒಂದು ಆಪ್ಶನ್ ಕೊಟ್ಟಿದ್ದಾರೆ 'ನಮಗೂ ನೋಡಿ ಸಾಕಾಗಿದೆ ನೀನೆ ಯಾರನ್ನಾದ್ರು ಹುಡ್ಕೋ ಹೋಗು ಅಂದಿದ್ದಾರೆ ಮನೇಲಿ' ಅಂದ.

ಸರಿ ಆಮೇಲೆ, ಯಾರನ್ನಾದ್ರು ಹುಡ್ಕಿದ್ಯಾ ಅಂದೆ.

ಹೂಂ ಮಗ ಒಬ್ಳನ್ನ ತೋರ್ಸಿದೆ 'ಲವ್ ಮ್ಯಾರೇಜ್ ಆಗೋದಾದ್ರೆ ಇದಕ್ಕಿಂತ ಒಳ್ಳೆ ಹುಡ್ಗೀನೆ ಸಿಕ್ತಾಳೆ ಹೋಗು' ಅಂದ್ರು ಅಂದ.

ವೆಂಕ ಇದ್ದವನು 'ಪೋಕಿ, ರೆಫೆರೆನ್ಸ್ ಮಾಡಿದ್ರೆ, ನಮಗೆ ಕಮಿಷನ್ ಎಷ್ಟಪ್ಪ' ಅಂದ.

'ನನ್ಮಗನೇ' ಅಂದು ಪೋಕಿ ಸುಮ್ನಾದ.

ಪಾಪ ಪೋಕಿ.



ಚಿಕ್ಕು ನಿಂದು ಯಾವಾಗ ಮಗ ಅಂದ.

'ಪೋಕಿ, ನಿಮ್ದೆಲ್ಲಾ ನೋಡಿ ಇನ್ನೊಂದು ವರ್ಷ ಆರಾಮಾಗಿ ಇರೋಣ ಅಂತ ಒಂದು ವರ್ಷದ ಮಟ್ಟಿಗೆ ಮುಂದೂಡಿದ್ದೇನೆ' ಅಂದೆ.

ಬೇಡ ಮಗ, ಈಗ್ಲಿಂದನೆ ಹುಡ್ಕೋಕೆ ಶುರು ಮಾಡು ಇಲ್ಲಾಂದ್ರೆ ಬಾರೀ ಕಷ್ಟ ಅಂದ.

ಸರಿ ನೋಡೋಣ ತಗೋ ಅಂದು, ಮಧ್ಯಾಹ್ನದ ಊಟಕ್ಕೇನು ಅಡಿಗೆ ಮಾಡೋದು ಅಂದ್ಕೊಂಡು ಅಡಿಗೆ ಮನೆಗೆ ಹೋದೆ. ಅವ್ರು ಮಾತಾಡ್ತಾನೆ ಇದ್ರು.

ದೂರದಲ್ಲಿ ಸೊಪ್ಪು ಅಂತ ಕೂಗಿದ್ದು ಕೇಳುಸ್ತು 'ಲೇ ಮೀಟ್ರು, ಕೆಳಗೆ ಹೋಗಿ ಸೊಪ್ಪು ತಾರೋ' ಅಂದೆ.

'ಹಲ್ಕಾ ನನ್ಮಗ ಇಂಟರೆಸ್ಟಿಂಗ್ ಡಿಸ್ಕಶನ್ ನಡೀತಿದೆ ಕೇಳೋಣ' ಅಂದ್ಕೊಂಡರೆ ಅದ್ಕೂ ಕಲ್ಲು ಹಾಕ್ದಾ ಅಂತ ಮನಸ್ನಲ್ಲಿ ಬೈಕಂಡು ಹೋದ ಅಂತ ಅವ್ನು ಹೋಗೋ ಸ್ಪೀಡ್ಗೆ ಅಂದ್ಕೊಂಡೆ

.................................................


ಚೇತನ್ ಜನವರಿಲಿ ನನ್ನ ಮದ್ವೆ ಖಂಡಿತ ಬರಬೇಕು ಆಯ್ತಾ? ಅಂತ ವೆಂಕಟೇಶನ್ (ನನ್ನ ಕಲೀಗ್) ಮದ್ವೆಗೆ ಕರ್ದ.


ಆಯ್ತು ಅಂದೆ.

ಸ್ವಲ್ಪ ಹೊತ್ತಿಗೆ ಸಿಂಗ್ ಕಮ್ಯುನಿಕೇಟರ್ನಲ್ಲಿ ಪಿಂಗ್ ಮಾಡಿ ಟೀ ಸಿಂಬಲ್ ತೋರ್ಸಿದ. ನಾನು ನಡಿ ಮಗ ಅಂದೆ.

ಕೆಫಿಟೇರಿಯಾದಲ್ಲಿ 'ಮಗ, ಎಲ್ಲರಿಗೂ ಮದ್ವೆ ಆಗ್ತಿದೆ' ನಾವೇ ಕಾಲಿ ಹೊಡಿತಿರೋದು ನೋಡೋ ಅಂದ.

'ಟೈಮ್ ಸರಿಯಿಲ್ದಾಗ ಮನುಷ್ಯ ತಲೆ ಕೆರಕೊಂಡ್ರು, ತಲೇಲಿ ಗಾಯ ಆಗಿ ಗಾಯ ಕ್ಯಾನ್ಸರ್ ಆಗಿ.....' ಮಗ ನಾನು ಹೊರಟೆ ಅಂತ ಹೋಗೆಬಿಡೋದಾ


ಅಲ್ವೋ ಈಗಿನ್ನು ಬಂದೀದಿಯಾ, ಇಷ್ಟು ಬೇಗ ಹೊರಟ್ರೆ, ಬಾ ಮಗ ಕೂತ್ಕೋ ಅಂದೆ.

ಇಲ್ಲ ಮಗ ಕೆಲಸ ಇದೆ ಅಂತ ಹೋದ.

ಅವ್ನ ಫ್ಲಾಷ್ಬ್ಯಾಕ್ ಹೇಳ್ಬೆಕಲ್ವ....

ಅವ್ನು ಯಾವ್ದೋ ಹುಡುಗಿ ಲವ್ ಮಾಡ್ತಿದ್ನಂತೆ, ಅವ್ಳು ಕೈ ಕೊಟ್ಟಿದ್ದಾಳೆ. ಹಂಗಾಗಿ ಮೇಲಿನ ಡೈಲಾಗ್ ಹೇಳಿದ್ರೆ ಸಾಕು ಫ್ಲಾಷ್ಬ್ಯಾಕ್ಗೆ ಹೋಗಿಬಿಡ್ತಾನೆ.

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ.

.......................................................



ಅವ್ರಿಗೆ ಅಂತ ಸಪರೇಟ್ ರೂಂ ಕೊಟ್ರೂ ಮತ್ತೂ ನಾವು ಇರಲ್ಲಿಗೆ ಬಂದು ಕಚ್ತಾರೆ, ನಾವು, ನಮ್ಮ್ಹತ್ರ ಮಾತಾಡ್ತಿದ್ದಾರೆನೋ ಅಂತ ಏನೋ ಅಂದ್ರೆ ತಿರ್ಗೂ ನೋಡೋಲ್ಲ.
ಇಂಥವ್ರು ನಮ್ಮಂಥ ಬ್ಯಾಚುಲರ್ ರೂಂನಲ್ಲಿದ್ರೆ ಬಾರೀ ಕಷ್ಟ ಕಣ್ರೀ..

- ಅಡಿಗೆ ಮಾಡೋದಕ್ಕೆ ಸಹಾಯ ಮಾಡೋಲ್ಲ.
- ಪಾತ್ರೆ ತೊಳೆಯೋಲ್ಲ.
- ಕಸ ಎತ್ತಿಹಾಕೊಲ್ಲ.
- ಜಗತ್ನಲ್ಲಿ ಏನು ಆಗ್ತಿದೆ ಅನ್ನೋ ಪರಿವೇನೆ ಇರಲ್ಲ.

ಇವ್ರು ಕಚ್ಹೋ ರೇಂಜ್ಗೆ ಮೊಬೈಲ್ ತೂತು ಬೀಳತ್ತೋ, ಇವ್ರ ಕಿವಿ ತೂತು ಬೀಳತ್ತೋ ದೇವ್ರೇ ಕಾಪಾಡ್ಬೇಕು. ಒಟ್ನಲ್ಲಿ ಮೊಬೈಲ್ ಕಂಪನಿಗಳಿಗೆ ಸುಗ್ಗಿಹಬ್ಬ.

ಬಿಲ್ ಬಂದಾದ್ಮೇಲೆ ಈ ರೀತಿ ಹಾಡ್ಬಹುದೇನೋ

'ಈ ಸಂಭಾಷಣೆ ನಮ್ಮ ಈ ಮೊಬೈಲ್ ಸಂಭಾಷಣೆ

ಅತಿ ಮಧುರ ಬಿಲ್ಲು ಭಯಂಕರ

ಭಯಂಕರಾ, ಭಯಂಕರಾ , ಭಯಂಕರಾ'


ಮೊಬೈಲ್ ರಿಂಗ್ ಆಗ್ತಿದೆ ನಮ್ಹುಡ್ಗಿ ಇರ್ಬೇಕು ತಡೀರಿ ಒಂದೆರಡು ಗಂಟೆ ಬಂದೆ :)

ತಿಳ್ಕಂಡವ್ರೆ ಹಿಂಗೆ...

ನೆನ್ನೆ ನಾನು ವೆಂಕ ಬೈಕ್ನಲ್ಲಿ ಆಫೀಸಿಗೆ ಹೋಗ್ತಿದ್ವಿ. ಆಡುಗೋಡಿ ಹತ್ರ ಸಿಗ್ನಲ್ನಲ್ಲಿ ಗಾಡಿ ನಿಲ್ಸಿದ್ವಿ. ಪಕ್ಕದಲ್ಲಿ ಒಂದು ಸ್ಯಾಂಟ್ರೋ ಕಾರ್ ಬಂದು ನಿಲ್ತು. ಇಬ್ರು ಕೂತಿದ್ರು, ಮುಂದುಗಡೆ ೪-೫ ಕಾಲಿ ಬಿಸ್ಕತ್ ಪ್ಯಾಕ್ ಇಟ್ಟಿದ್ರು, ಡ್ರೈವ್ ಮಾಡ್ತಿದ್ದೋನು, ಅವನ್ನ ತೆಗದು ಹೊರಗಡೆ ಎಸೆದ.

ನಾನು ಇನ್ನೇನು ಬೈಬೇಕು ಅಂತ ಶುರು ಮಾಡೋವಷ್ಟರಲ್ಲಿ ವೆಂಕ ಅವ್ನಿಗೆ ಕೈ ತೋರ್ಸಿ 'ನೀನೇನು ಹೊಟ್ಟೆಗೆ ಅನ್ನ ತಿನ್ತೀಯೋ....ತಿನ್ತೀಯೋ' ಅಂದ.


ಪಕ್ಕದಲ್ಲಿ ಕೂತಿದ್ದವನು ಗಾಬರಿಯಾಗಿ ನೋಡ್ತಿದ್ದ. ಡ್ರೈವ್ ಮಾಡ್ತಿದ್ದೋನು ಬೈಸ್ಕೊಂಡು ಕಮಕ್ ಅನ್ನದೆ ತೆಪ್ಪಗೆ ಕೂತಿದ್ದ.
..........................................................


ಅದೇ ಸಾಯಂಕಾಲ ಬಸ್ನಲ್ಲಿ ಹೋಗ್ತಿದ್ದೆ, ನನ್ನ ಪಕ್ಕದಲ್ಲಿ ಒಬ್ಬ ಬಂದು ಕೂತ. ನಾಗರೀಕನ ತರನೇ ಇದ್ದ.

ಕೂತಿದ್ದೆ ತಡ ಮೂಗಿಗೆ ಕೈ ಹಾಕಿ ಮುಂದಿನ ಸೀಟ್ಗೆ ಒರ್ಸೋಕೆ ಶುರು ಮಾಡಿದ, ೧೦ ನಿಮಿಷ ಹಾಗೇ ಮಾಡ್ತಿದ್ದ. ನನಗಿನ್ನು ನೋಡಿ ಸುಮ್ನೆ ಕೂರೋಕಾಗ್ಲಿಲ್ಲ. ಬ್ಯಾಗ್ನಲ್ಲಿದ್ದ ಹಳೇ ಪೇಪರ್ ಒಂದು ಹರಿದು ಕೊಡೋದಕ್ಕೆ ಹೋದೆ.

ಪುಣ್ಯಾತ್ಮನಿಗೆ ಅರ್ಥ ಆಗಿರ್ಬೇಕು 'ಬೇಡ ಸಾರ್ ಅಂದ'.

ಅಲ್ಲಿಂದ ಅವನು ಮೂಗಿಗೆ ಕೈ ಹಾಕಲಿಲ್ಲ.

ಅಷ್ಟಕ್ಕೂ ಅವರು ಮಾಡಿದ ತಪ್ಪಾದರೂ ಏನು?

ಬಹುಶ: ನಿಮಗೆ ಗೊತ್ತಿರಬಹುದು, ಸುಮಾರು ೪-೫ ವರ್ಷದ ಹಿಂದೆ ಅನ್ಸತ್ತೆ. ಇಂಟೆಲ್ ಉದ್ಯೋಗಿ ಒಬ್ರನ್ನ ಅವರ
ಹೆಂಡತಿಯಾಗುವವಳು ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದು. ಆ ಮನುಷ್ಯ ಅವರ ಪಾಡಿಗೆ ಅವ್ರಿದ್ರು, ಯಾರದೋ ಪ್ರೀತಿಗೆ ಇನ್ಯಾರೋ ಬಲಿಯಾಗಬೇಕಾಯ್ತು, ಅದೂ ಅಲ್ಲದೆ ಅವರನ್ನೇ ನಂಬಿಕೊಂಡಿದ್ದ ಅವರ ಅಪ್ಪ ಅಮ್ಮಂದಿರ ನೋವನ್ನು ಕೇಳುವವರಾರು?

ಅವಳ ತೆವಲಿಗೆ ಇನ್ಯಾರೋ ಬಲಿಪಶು.
........................

ಮೊನ್ನೆ ನಡೆದ ವಿಷಯಕ್ಕೆ ಬರೋಣ. ತಪ್ಪು ಮಾಡಿದ್ದು ಆನಂದ್ ಮತ್ತೆ ಪ್ರಿಯಾಂಕ, ಆದರೆ ತಿರುಮಲಾ ಬಲಿಪಶು. ಅವರಿಬ್ಬರ ಮೂರ್ಖತನ ಇನ್ನೊಂದು ಕುಟುಂಬಕ್ಕೆ ದುರ್ಗತಿ. ಪ್ರಿಯಾಂಕ ಮೂರ್ಖಳಾದದ್ದು ನಿಜ, ಆದರೂ ನಿಧಾನವಾಗಿ ಎಚ್ಚೆತ್ತುಕೊಂಡಿದ್ದಾಳೆ.

ಅವರಿಬ್ಬರ ತೆವಲಿಗೆ ತಿರುಮಲಾ ಬಲಿ.

ಇನ್ನೊಬ್ಬರ ಜೀವನವನ್ನ ಹಾಳು ಮಾಡೋ ಈ ವಿಕೃತ ಮನಸ್ಸು ಏಕೆ?

Thursday, September 10, 2009

ಮಳೆಗಾಲದ ನೆನಪುಗಳು

ಆಗ ಅಂದ್ರೆ ನಾವು ಸಣ್ಣವರಿದ್ದಾಗ ನಮ್ಮೂರಿನಲ್ಲಿ ಮಳೆಗಾಲ ಅಂದ್ರೆ ಏನೋ ಒಂಥರಾ ಖುಷಿ

ಆಗೆಲ್ಲಾ ಮಲೆನಾಡಲ್ಲಿ ಮಳೆಗಾಲ ಬಂತು ಅಂದ್ರೆ ಸಾಕು ಜನ ಗದ್ದೆಮೀನು ಹಿಡಿಯೋದಕ್ಕೆ ಕೂಳೆ ತಗೊಂಡು ಗದ್ದೆ ಕಡೆ ಹೊರಟುಬಿಡ್ತಿದ್ರು. ಯಾವ ಗದ್ದೆ ನೋಡಿದ್ರೂ ಕೂಳೆನೇ. ನಾನೂ ಸಹ ನಮ್ಮ ತಾತ‌ನ ಜೊತೆ ಕೂಳೆ ತಗೊಂಡು ನಮ್ಮ ಗದ್ದೆಗೆ ಹೊರಟುಬಿಡ್ತಿದ್ದೆ. ಬೆಳಗ್ಗೆ ಹಾಕಿದ್ರೆ ಮಧ್ಯಾಹ್ನನೋ ಸಂಜೆನೋ ಬಂದು ತಗೊಂಡು ಹೋಗ್ಬೇಕಿತ್ತು.

ಕೂಳೆ ಹಾಕಿ ಮನೆಗೆ ಹೋಗಿ ಅರ್ಧ ಗಂಟೆ ಆಗಿರ್ತಿರ್ಲಿಲ್ಲ ನಮ್ಮ ತಾತಂಗೆ ನಡಿ ತಾತ ಹೋಗಣ ಅಂತಿದ್ದೆ, ನಂಗೆ ತರ ತರಹದ ಮೀನು ನೋಡೋ ಆಸೆ. ನಮ್ಮ ತಾತ ತಡಿ ಮಗ ಸ್ವಲ್ಪ ಹೊತ್ತು ಬಿಟ್ಟು ಹೋಗೋಣ ಅಂತ, ಅವ್ರಿಗೆ ಜಾಸ್ತಿ ಮೀನು ಬೀಳಲಿ ಅಂತ ಆಸೆ. ಅಂತೂ ತಾತನ ಆಸೆಯೇ ಯಾವಾಗ್ಲೂ ಗೆಲ್ತಿತ್ತು (ಮನೆಯವರೆಲ್ಲರೂ ಮೀನು ತಿನ್ನಬೇಕಲ್ಲ, ನನ್ನ ಆಸೆ ಗೆದ್ರೆ ನಾನೊಬ್ನೇ ತಿನ್ನಬೇಕಾಗತ್ತೆ.

ಗ‌ದ್ದೆಗೆ ಹೋಗಿ, ನ‌ಮ್ಮ ತಾತ‌ ಕೂಳೆ ತೆಗೀತಾ ಇದ್ರೆ ನಾನು ಆ ಬ‌ಣ್ಣ ಬ‌ಣ್ಣದ‌ ಮೀನುಗ‌ಳು ಅವು ಕುಣಿದಾಡೋದ‌ನ್ನ ನೋಡ್ತಿದ್ದೆ. ನ‌ಮ್ಮಜ್ಜ ಎಲ್ಲಾ ಮೀನು ತೆಗೆದಾದ‌ ಮೇಲೆ ಗ‌ದ್ದೆಯ‌ಲ್ಲಿ ಇನ್ನೂ ಮೀನು ಇದ್ರೆ ಮ‌ತ್ತೆ ಕೂಳೆ ಹಾಕ್ತಿದ್ರು, ಮಾರ‌ನೇ ದಿನ‌ದ‌ ಊಟ‌ಕ್ಕೆ :).

ನ‌ಮ್ಮಮ್ಮ ಕಾರ‌ ರೆಡಿ ಮಾಡ್ಕೊಂಡು ಕಾಯ್ತಿದ್ರು, ಅಕ‌ಸ್ಮಾತ್ ಮೀನು ಬಿದ್ದಿಲ್ದೆ ಇದ್ರೆ ಅದೇ ಕಾರ‌ ತ‌ರ‌ಕಾರಿ ಸಾರಿಗೆ :)

ಇನ್ನೋ ತಿನ್ನೋ ವಿಷ‌ಯ‌, ಆಹಾ ಗದ್ದೆಮೀನು ಸಾರು, ಅಕ್ಕಿ ರೊಟ್ಟಿ ಇದ್ರೆ ಸ್ವರ್ಗ‌ ಸುಖ‌. ಯಾವ ಮೀನು ಸಾರು ಸಹ‌ ಗದ್ದೆಮೀನಿನ‌ ಸಾರಿಗೆ ಪೈಪೋಟಿ ಕೊಡೋಕಾಗ‌ಲ್ಲ.

ಒಮ್ಮ್ಮೆ ಹಿಂಗಾಯ್ತು, ಬೆಳಗ್ಗೆ ನಾನು,ತಾತ‌ ಕೂಳೆ ತಗೊಂಡು ನಮ್ಮ ಗದ್ದೆಗೆ ಹೋಗಿ ಹಾಕಿಬ‌ಂದ್ವಿ. ಸಾಯ‌ಂಕಾಲ‌ ಹೋದ್ವಿ, ನಾನು ಗದ್ದೆ ಬದಿಯಲ್ಲಿ ಕೂತಿದ್ದೆ. ನ‌ಮ್ಮಜ್ಜ ಕೂಳೆ ಎತ್ತೋವಾಗ‌ ಯಾಕೋ ತುಂಬಾ ಭಾರ‌ ಇದೆ, ಬಾರೀ ಮೀನು ಬಿದ್ದಿರ್ಬೇಕು ಕ‌ಣೋ ಅಂತ‌ ಕೂಳೆಯ‌ ಕೆಳ‌ಗಿದ್ದ ಬ‌ಟ್ಟೆ ತೆಗೆದ್ರು, ಇದ್ದಕಿದ್ದಂತೆ ಕೇರೆ ಹಾವೊಂದು ಹೊರ‌ಗೆ ಬ‌ರ‌ಬೇಕೇ, ನಾನು ಎದ್ನೋ ಬಿದ್ನೋ ಅಂತ‌ ಪ‌ರಾರಿ, ನ‌ಮ್ಮ ಗ‌ದ್ದೆಯ‌ ಇನ್ನೊಂದು ತುದಿಯ‌ಲ್ಲಿದ್ದೆ. ನ‌ಮ್ಮ ತಾತ‌ ಕೂಗಿದಾಗ್ಲೇ ಅಲ್ಲಿಗೆ ಹೋಗಿದ್ದು. ಅವ್ರು ಕೂಳೆಯ‌ನ್ನ ಎಸೆದಿದ್ರು, ಹಾವು ಹೋಗಿತ್ತು ಸ್ವಲ್ಪ ಮೀನಿತ್ತು. ಇವ‌ತ್ತಿಗೆ ತ‌ರ‌ಕಾರಿ ಸಾರೇ ಗ‌ತಿ ಅಂದ್ಕೊಂಡು ಕೂಳೆ ಮ‌ತ್ತೆ ಹಾಕಿ ಮ‌ನೆಗೆ ಹೆಜ್ಜೆ ಹಾಕಿದ್ವಿ.
ಮ‌ಳೆಗಾಲ‌ ಅಂದ್ರೆ ಜ್ನಾಪ‌ಕ‌ ಬ‌ರೋ ಮ‌ತ್ತೊಂದು ವಿಷ‌ಯ‌ ಅಂದ್ರೆ ಹ‌ಲ‌ಸಿನ‌ ಗಾಳ (ಬೀಜ). ಮ‌ಳೆ ಬ‌ರೋಕೆ ಸ್ವಲ್ಪ ದಿನ‌ಗ‌ಳ‌ ಹಿಂದೆ ತಿಂದ‌ ಹ‌ಲ‌ಸಿನ‌ಹ‌ಣ್ಣಿನ‌ಲ್ಲಿ ಗಾಳ‌ಗ‌ಳ‌ನ್ನು ಬೇರೆ ಮಾಡಿ ಬಿಸಿಲ‌ಲ್ಲಿ ಒಣ‌ಗಿಸ್ತಿದ್ರು. ಅವು ಮ‌ಳೆಗಾಲ‌ಕ್ಕೆ ಉಪ‌ಯೋಗ‌ಕ್ಕೆ ಬ‌ರ್ತಿದ್ವು. ಕೆಂಡ‌ಕ್ಕೆ ಹಾಕಿ ಬೇಯಿಸ್ಕೊಂಡು ಆ ಮಳೆ, ಚಳಿಯಲ್ಲಿ ಅಡಿಗೆ ಮನೆಯಲ್ಲಿ ತಿನ್ತಾ ಕೂತ್ರೆ ಅದೆಷ್ಟು ಹೊಟ್ಟೆಗೆ ಹೋಗ್ತಿದ್ವೋ..

ಮ‌ನೆ ಕ‌ಡಾಯ‌ಕ್ಕೆ ಮ‌ಳೆಗಾಲ‌ದ‌ ನೀರೇ (ಬೋರ್ವೆಲ್ಗೆ ಹೋಗಿ ಆ ಮ‌ಳೆಯ‌ಲ್ಲಿ ನೆನೆದು ಯಾರು ನೀರು ತ‌ರ್ತಾರೆ). ಹೆಂಚಿನ‌ ಕೆಳ‌ಗೆ ಕೊಡ‌ ಇಟ್ಟು ಆ ಕೊಡ‌ಕ್ಕೆ ಬೀಳೋ ನೀರು ನೋಡೋದೇ ಪ‌ರ‌ಮಾನ‌ಂದ‌, ತುಂಬಿದ‌ ತ‌ಕ್ಷಣ‌ ಬ‌ಚ್ಚಲುಮ‌ನೆಯ‌ ಕ‌ಡಾಯ‌ಕ್ಕೆ ಹೋಗಿ ಹಾಕ್ಬೇಕು, ಒಂದೊಂದ್ಸಲ‌ ನೀರು ತ‌ಗೊಂಡು ಹೋಗೋವಾಗ‌ ಚಾವ‌ಡಿ ಅಥ‌ವಾ ನ‌ಡುಮ‌ನೆಯ‌ಲ್ಲಿ ಜಾರಿಬಿದ್ದು ಕೈ ಕಾಲು ಮುರಿದುಕೊಂಡ‌ ಪ್ರಸ‌ಂಗ‌ಗ‌ಳು, ಕೊಡ ಒಡೆದ ಪ್ರಸ‌ಂಗ‌ಗ‌ಳು ಆಗಿದ್ದುಂಟು. ಕೈ ಕಾಲು ಮುರಿದಾಗ‌ ಸುಮ್ನಿರ್ತಿದ್ದವರು ಕೊಡ‌ ಒಡೆದಾಗ‌ ಮ‌ಹಾ ಮ‌ಂಗ‌ಳಾರತಿ ಮಾಡ್ತಿದ್ರು :)

ಶಾಲೆಗೆ 5 ಕಿ.ಮೀ ನ‌ಡೆದುಕೊಂಡು ಹೋಗ್ಬೇಕಾಗಿತ್ತು, ಮ‌ಳೆಗಾಲ‌ದ‌ಲ್ಲಿ ತೋಟದಲ್ಲಿ (ಬೇರೆಯವರದ್ದು) ಹ‌ಲ‌ಸಿನ‌ಹ‌ಣ್ಣು, ಕಿತ್ತಲೆಹ‌ಣ್ಣು, ಮೂಸ‌ಂಬಿ ಇರ್ತಿದ್ವು. ಬೆಳ‌ಗ್ಗೆ ಹೋಗೋವಾಗ‌, ಲೇ ಸಾಯ‌ಂಕಾಲ‌ ಈ ಮ‌ರ‌ಕ್ಕೆ ಹೋಗೋಣ‌ ಕ‌ಣ್ಲ ಅಂತ‌ ಸ್ಕೆಚ್ ಹಾಕ್ತಿದ್ವಿ, ಸಾಯ‌ಂಕಾಲ‌ ಆ ಮ‌ರ‌ದ‌ ತಿಥಿ, ಕೆಲ‌ವೊಮ್ಮೆ ನ‌ಮ‌ಗಿಂತ‌ ಮೊದ‌ಲು ಬ‌ಂದ ಹುಡುಗ‌ರು ತಿಥಿ ಮಾಡಿರ್ತಿದ್ರು :)

ಹಿಂಗೆ ಒಂದ್ಸಲ‌, ನಾನು ನ‌ನ್ನ ಫ್ರೆಂಡ್ ಸಾಯ‌ಂಕಾಲ‌ ಒಬ್ರ ತೋಟ‌ಕ್ಕೆ ನುಗ್ಗಿ, ಅವ್ನು ಹ‌ಲ‌ಸಿನ‌ಮ‌ರ‌ ಹ‌ತ್ತಿದ್ದ, ನಾನು ಕೆಳ‌ಗೆ ಕಾಯ್ತಿದ್ದೆ. 2 ಬಿಳುವ‌ ಹ‌ಣ್ಣು ಇದೆ ಕ‌ಣೋ ಅಂದ‌, ಸ‌ರಿ ಇಳಿಸ್ಕೊಂಡು ಬಾ ಅಂತ‌ ಅಂದೆ ಅಷ್ಟೊತ್ತಿಗೆ ಎಲ್ಲಿದ್ರೋ ತೋಟ‌ದ‌ ಯ‌ಜ‌ಮಾನ‌, ನ‌ನ್ನ ಎದುರಿಗೆ ಬ‌ಂದು ನಿಲ್ಲೋದಾ.

ನಾನು ಎಸ್ಕೇಪಾಗೋಣ‌ ಅಂದ್ರೆ ಅವ್ನು ಮೇಲಿದ್ದಾನೆ, ಫ್ರೆಂಡ್ ಬೇರೆ ಬಿಡೋ ಹಾಗಿಲ್ಲ, ಅಕಸ್ಮಾತ್ ಎಸ್ಕೇಪಾದ್ರೂ ಮುಂದೊಂದು ದಿನ ನಾನು ಮರ ಹತ್ತಿದ್ರೆ ಈ ನನ್ಮಗ ಕೈ ಕೊಟ್ಟೇ ಕೊಡ್ತಾನೆ, ಇನ್ನೇನು ಮಾಡೋದು ಅಂತ‌ ಸುಮ್ನೆ ನಿಂತೆ.
ಅಷ್ಟರಲ್ಲಿ ನಾಲ್ಕೈದು ಏಟು ಪಟ ಪಟ ಬಿದ್ದ ಹಾಗಾಯ್ತು, ಯಾವ್ದೋ ಸೊಪ್ಪು ಮುರ್ಕೊಂಡು ಒಂದೆರ‌ಡು ಏಟು ಬಾರ್ಸಿದ್ರು ನ‌ಂಗೆ, ಅವ್ನು ಇಳಿಯೋಕೆ ಮೀನ‌ ಮೇಷ‌ ಎಣಿಸ್ತಿದ್ದ, ಇವ್ರೊಂದು ಆವಾಜ್ಃ ಹಾಕಿದ್ರು, 2 ಹ‌ಲ‌ಸಿನ‌ಹ‌ಣ್ಣನ್ನು ಇಟ್ಕೊಂಡು ನಿಧಾನ‌ ಇಳಿದ‌. ಅವ್ನಿಗೂ ಒಂದೆರ‌ಡು ಬಿದ್ವು.

'ಇದೇ ಕೆಲ್ಸ ಮಾಡ್ರೋ, ಸ್ಕೂಲ್ ಮುಗಿಸಿ ತೆಪ್ಪಗೆ ಮ‌ನೆಗೆ ಹೋಗೋದು ಬಿಟ್ಟು ಕ‌ದಿಯೋಕೆ ಹೋಗ್ತೀರ‌ಲ್ಲೋ ಅಂದ್ರು, ಇನ್ನೊಂದ್ಸಲ ಹಿಂಗೆ ಮಾಡಿದ್ರೆ ಗೊತ್ತಲ್ಲ ಅಂದ್ರು' ನಾವು ಏನೂ ಹೇಳ‌ದೆ ಸುಮ್ನೆ ನಿಂತಿದ್ವಿ.

ಆಮೇಲೆ ಅವ್ರೇ ಹ‌ಲ‌ಸಿನ‌ಹ‌ಣ್ಣನ್ನು ಬ‌ಗೆದು ನ‌ಮ್ಗೆ ಸ್ವಲ್ಪ ಕೊಟ್ರು, ನಾವು ಏನೂ ಮಾಡ‌ದೇ ಸುಮ್ನೆ ನಿಂತಿದ್ವಿ.ತಿನ್ರೋ ಅಂದ್ರು, ಅವ್ರೊಟ್ಟಿಗೆ ತಿಂದು ಮ‌ನೆಗೆ ಓಡಿದ್ವಿ.

ಇನ್ನು ಶಾಲೆಯಲ್ಲಿ, ಯಾವಾಗ ಸಾಯಂಕಾಲ ಆಗತ್ತೋ ಯಾವಾಗ ಪಿ.ಇ ಕ್ಲಾಸ್ ಶುರುವಾಗತ್ತೋ ಅಂತ ಕಾಯ್ತಿದ್ವಿ. ಆ ಟೈಮ್ ಬಂದ ತಕ್ಷಣ ಫೀಲ್ಡ್ಗೆ ಎಸ್ಕೇಪ್. ಕಬಡ್ಡಿ, ಕೋ ಕೋ ಆಡಿ ನಮ್ಮ ಬಣ್ಣ, ಬಟ್ಟೆಯ ಬಣ್ಣ ಗದ್ದೆಯಲ್ಲಿ ಮಳೆಗಾಲದಲ್ಲಿ ಕೆಲಸ ಮಾಡೋರಿಗೆ ಸ್ಪರ್ಧೆ ಕೊಡೋ ಹಾಗಿರ್ತಿತ್ತು.


ಜೂನ್ ‍ ಜುಲೈ ತಿಂಗಳಿರಬಹುದು, ಮಳೆಗಾಲದ ಸಮಯ. ಒಂದ್ಸಲ ನಮ್ಮ ಮನೆಯ ಮಂಜ ಮಧ್ಯಾಹ್ನಕ್ಕೆ ಬೇಸಾಯ ಮುಗಿಸಿದ. ನಾನು ಊಟ ಮಾಡ್ಕೊಂಡು ಗದ್ದೆಗೆ ಹೋದೆ. ಮಂಜ ಇದ್ದವನು, ಗೌಡ್ರೇ ಚೆನ್ನಾಗಿ ಮೇಯ್ಸಿ ನಾಳೆನೂ ಬೇಸಾಯ ಮಾಡ್ಬೇಕು ಅಂದ. ಹೂಂ ಆಯ್ತು ಊಟಕ್ಕೆ ಮನೆಗೆ ಹೋಗು ಅಂದೆ.

ಮಾಮೂಲಿಯಂತೆ ದನ ಕಾಯಬೇಕಾದ ಕೆಲಸ ನನಗೆ ಬಂತು (ಶನಿವಾರ, ಭಾನುವಾರ ಬೇಸಾಯ ಆದ್ಮೇಲೆ ನಮ್ಮ ಕೆಲಸ ದ‌ನ ಕಾಯೋದೇ).

ಸರಿ ಅವ್ನು ಎತ್ತು ಬಿಟ್ಟಾದ ಮೇಲೆ ನಾನು ಬಸವ ಮತ್ತೆ ಹಂಡ (ಎತ್ತುಗಳ‌ ಹೆಸರು) ಕಾಯ್ತಾ ಕೂತೆ, ಎಲ್ಲೋ ದೂರದಲ್ಲಿ 4 5 ಹುಡುಗ್ರು ಗೋಲಿ ಆಡ್ತಿದ್ರು. ಆಗೆಲ್ಲಾ ಮನೆ ಬಿಡೋವಾಗ್ಲೇ ಜೇಬಲ್ಲಿ ಗೋಲಿ ಇಟ್ಕೊಂಡು ಹೋಗ್ತಿದ್ವಿ, ನನ್ನ ಜೇಬಲ್ಲೂ ಗೋಲಿ ಇದ್ವು.

ಎತ್ತು ಅಲ್ಲೇ ಬಿಟ್ಟು ಆಡೋಕೆ ಹೋಗೋಣ ಅಂದ್ಕೊಂಡು ಹೊರಟೆ. ಸುಮಾರು 1 ಗಂಟೆ ಆಡಿರಬಹುದು, ಸಂಜೆ 4 ಆಗಿತ್ತು ಅನ್ಸತ್ತೆ. ಎತ್ತು ಇದವೇನೋ ಅಂತ ಕಣ್ಣು ಹಾಯ್ಸಿದ್ರೆ, ಹಂಡ ನಾಪತ್ತೆ.

ಈ ಪರಿಸ್ಥಿಥಿಯಲ್ಲಿ ಮನೆಗೆ ಹೋದ್ರೆ ನಮ್ಮಪ್ಪ ನನ್ನ ತಿಥಿ ಮಾಡ್ತಾರೆ ಹಾಗಾಗಿ ಬಸವನ್ನ ಹಟ್ಟಿಗೆ ಕಟ್ಟಿ ಹಂಡ‌ನನ್ನ ಹುಡ್ಕೋಕೆ ಹೋದ್ರೆ ಆಯ್ತು ಅಂತ ಅವ್ನನ್ನ ಹೊಡ್ಕೊಂಡು ಮನೆ ಕಡೆ ಹೆಜ್ಜೆ ಹಾಕಿದೆ.

ನ‌ಮ್ಮ ಬೀದಿಯ‌ಲ್ಲಿ ನ‌ಮ್ದೇ ಕೊನೇ ಮ‌ನೆ, ನ‌ಮ್ಮ ಮ‌ನೆ ಹ‌ತ್ತಿರ‌ ಎಡ‌ದೆ ಕ‌ಡೆ ಹೋದ್ರೆ ತೋಟ‌ಕ್ಕೆ ಹೋಗ‌ಬ‌ಹುದು, ಬ‌ಲ‌ಕ್ಕೆ ಹೋದ್ರೆ ಹ‌ಟ್ಟಿಗೆ. ಬೇಗ‌ ಬೇಗ‌ ಹೆಜ್ಜೆ ಹಾಕ್ತಿದ್ದೆ ನ‌ಮ್ಮಪ್ಪ ಮೇಲಿಂದ‌ನೇ ನೋಡಿದ್ರು,

ಅವ್ರಿಗೆ ಗೊತ್ತಾಯ್ತು ಈ ನನ್ಮಗ ಎಲ್ಲೋ ಆಡೋದಕ್ಕೆ ಹೋಗಿದ್ದಾನೆ ಹಾಗಾಗಿ ಹ‌ಂಡ‌ ಓಡಿಹೋಗಿದೆ ಅಂತ‌.

ಕೈಲಿ ಕ‌ಡ‌ಲೆಕ‌ಡ್ಡಿ ಬ‌ರ್ಲು (ಪ‌ರ್ಕೆ, ಹಿಡ್ಲು) ಇಟ್ಕೊಂಡು ಮೆಟ್ಟಿಲು ಇಳಿತಿದ್ರು. ನಾನು, ಇನ್ನು ಇಲ್ಲೇ ಇದ್ರೆ ನ‌ನ್ನ ಗ್ರಹ‌ಚಾರ‌ ನೆಟ್ಟಗೆ ಇರೋಲ್ಲ ಅಂದ್ಕೊಂಡು, ತೋಟ‌ಕ್ಕೆ ನುಗ್ಗಿದೆ (ಮ‌ಳೆ ಅಲ್ವ ನ‌ಮ್ಮಪ್ಪ ಬ‌ರೋಲ್ಲ ಅಂದ್ಕೊಂಡು) ಆದ್ರೆ ನೋಡ್ತೀನಿ ಹಿಂದೆ ನ‌ನ್ನನ್ನೇ ಅಟ್ಟಿಸ್ಕೊಂಡು ಬ‌ರ್ತಿದ್ರು

ಒಂದು 20 ನಿಮಿಷೆ ಬೆರ್ಸಿರಬಹುದು, ನಾನಂತೂ ಹಿಂದೆ ನೋಡದೆ ಬರೀ ಶಬ್ಧದ ಗ್ರಹಿಕೆಯಿಂದಲೇ ಸುಮ್ನೆ ಓಡ್ತಿದ್ದೆ (ನಾನು ಹಾಗೆ ಓಡ್ತಿದ್ದನ್ನ ನೋಡಿದ ನಮ್ಮ ಮನೆಯ ಚಿಕ್ಕ ಈಗ್ಲೂ ನೆನೆಸಿಕೊಂಡು ನಗಾಡ್ತಿರ್ತಾನೆ). ಸ್ವಲ್ಪ ಹೊತ್ತಾದ ಮೇಲೆ ತಿರುಗಿ ನೋಡಿದೆ, ನಮ್ಮಪ್ಪ ಸುಸ್ತಾಗಿ ನಿಂತಿದ್ರು. ಇನ್ನು ವಾಪಸ್ ಮನೆಗೆ ಹೋದ್ರೆ ಹೊಡ್ದೇ ಹೊಡೀತಾರೆ ಅಂದ್ಕೊಂಡು ಸಾಯಂಕಾಲದ ಹೊತ್ತಿಗೆ ಸಿಟ್ಟು ಸ್ವಲ್ಪವಾದ್ರೂ ಕಡಿಮೆ ಆಗಿರತ್ತೆ ಅಂದ್ಕೊಂಡು ಕೆಳಗಿರೋ ನಮ್ಮಣ್ಣನ ಮನೆಗೆ ಕದ್ದು ಹೋದೆ.

ರಾತ್ರಿ ವಾಪ‌ಸ್ ಮ‌ನೆಗೆ ಬ‌ಂದೆ, ಸ‌ದ್ಯ ಅಪ್ಪನ‌ ಕೈಲಿ ಕ‌ಡ‌ಲೆಕ‌ಡ್ಡಿ ಬ‌ರ್ಲು ಇರ್ಲಿಲ್ಲ. ಸ್ವಲ್ಪ ಹೊತ್ತು ಕಾಯ್ದಿದ್ದು ಅನುಕೂಲನೇ ಆಯ್ತು, ಒದೆ ತಿನ್ನೋದ್ರಿಂದ‌ ಉಳಿದುಕೊಂಡೆ. ಆದ್ರೆ ಬೈಗುಳ‌ ಎದುರಿಸುವುದ‌ಕ್ಕೆ ಸಿದ್ಧನಾಗ‌ಬೇಕಿತ್ತು, ನ‌ನ್ನನ್ನು ನೋಡಿದ್ದೆ ತ‌ಡ‌ 'ಹೊಟ್ಟೆಗೆ ಅನ್ನ ತಿಂತೀರೋ .... ತಿಂತೀರೋ, ನಿಮ್ಗೆಲ್ಲ ಯಾಕೆ ಬೇಕು ಗ‌ದ್ದೆ ತೋಟ‌, ಹೇಳೋ ಒಂದು ಕೆಲ್ಸನೂ ನೆಟ್ಟಗೆ ಮಾಡೋಲ್ಲ, ನಾಳೆಗೆ ಬೇಸಾಯ‌ಕ್ಕೆ ಏನು ಮಾಡೋದು ಈಗ‌. ಬೆಳ್ಗೆ ಬೇಗ‌ ಎದ್ದು ಕಾಲೋನಿಗೆ ಹೋಗಿ ಮ‌ಂಜ‌, ಚಿಕ್ಕನ್ನ ಕ‌ರ್ಕೊಂಡು ಬಾ ಅಂತ ಅಂದ್ರು. ಮಲೆನಾಡಲ್ಲಿ ಅದೂ ಮಳೆಗಾಲದಲ್ಲಿ ಬೆಳ್ಗೆ 6ಕ್ಕೆ ಎದ್ದು ಹೋಗೋದು ಬಾರೀ ಕಷ್ಟದ ಕೆಲಸ. ಆ ಚಳಿಗೆ, ರಗ್ಗು ಹೊದ್ಕೊಂಡು ಮಲ್ಗಿದ್ರೆ ಎದ್ದೇಳೋಕೆ ಮನ್ಸೇ ಬರೋಲ್ಲ. ಏನು ಮಾಡೋದು, ವಿಧ್ ಇಲ್ಲ 'ನಾ ಮಾಡಿದ ಕರ್ಮ ಎನಗೆ' ಅಂದ್ಕೊಂಡು ಮಾರನೇ ದಿನ ಬೇಗ ಎದ್ದು ಹೋಗಿ ಅವ್ರಿಗೆ ಹೇಳಿ ಬಂದೆ.

ಒಂದೆರಡು ದಿನಗಳಾದ ಮೇಲೆ ಹಂಡ ಯಾರ್ದೋ ತೋಟದಲ್ಲಿ ಸಿಕ್ತು.

ಮಳೆಗಾಲದಲ್ಲಿ, ತೋಟಗಳಲ್ಲಿ ಚಕೋತ ಮೂಸಂಬಿ ಕಿತ್ತಲೆ ತುಂಬಾ ಹ‌ಣ್ಣುಗ‌ಳು ಇರ್ತಿದ್ವು. ನ‌ಮ್ಮ ಏರಿಯಾದ‌ಲ್ಲಿ ನಾವೊಂದು ಏಳೆಂಟು ಮ‌ಕ್ಕಳ‌ದ್ದೇ ಕಾರುಬಾರು. ಸಾಮಾನ್ಯವಾಗಿ, ಬೇರೆಯ‌ವ‌ರ‌ ತೋಟ‌ದ‌ಲ್ಲಿ ಕ‌ದಿಯ‌ಬೇಕಾದ‌ ಪ್ರಸ‌ಂಗ‌ ಬ‌ರ್ತಿತ್ತು. ಮ‌ರ‌ ಹ‌ತ್ತುವುದ‌ರ‌ಲ್ಲಿ ಪ‌ಳ‌ಗಿದ್ದ ನಾನು (ಈಗ‌ ಮ‌ರೆತುಹೋಗಿದೆ) ಹ‌ತ್ತಿ ಹ‌ಣ್ಣುಗ‌ಳ‌ನ್ನು ಕೀಳ‌ಬೇಕಾಗುತ್ತಿತ್ತು. ಒಂದಿನ‌ ಎಲ್ಲಾ ಸೇರಿ, ಒಂದು ತೋಟ‌ಕ್ಕೆ ನುಗ್ಗಿದೆವು (ಒಳ್ಳೆ ಕಾಡೆಮ್ಮೆ, ಕಾಡು ಕೋಣ‌ ಹೋಗೋ ರೀತಿ ಹೇಳ್ತಾನ‌ಲ್ಲ ಅಂದ್ಕೊಂಡಿದ್ರೆ, ನಿಜ‌, ಹಾಗೇ ನುಗ್ತಿದ್ವಿ).

ಏಸಲ್ಲೇಶ್ವರ

ನಿನ್ನೆ ನಾನು ಬಾಬು ಮಲ್ಲೇಶ್ವರಂಲ್ಲಿ ಸೇವಾ ಸದನಕ್ಕೆ ಹೋಗೋಣ ಅಂತ ನಿರ್ಧಾರ ಮಾಡಿ ಹೊರಟ್ವಿ, ಅಲ್ಲಿ ಕಳಲು ವಾದನ ಮತ್ತೆ ಭರತ ನಾಟ್ಯ ಕಾರ್ಯಕ್ರಮ ಇತ್ತು. ನವರಂಗಿಂದ ಮಲ್ಲೇಶ್ವರಂಗೆ ನಡ್ಕೊಂಡು ಹೋಗ್ತಿದ್ವಿ. ಎಮ್ ಇ ಎಸ್ ಕಾಲೇಜ್ ಹತ್ರ ಹೋಗೋವಾಗ, ಕಾಲೇಜ್ ಎದ್ರುಗಡೆ ಏಸು, ಅಲ್ಲಾ ಮತ್ತೆ ಈಶ್ವರನ ಫೋಟೋ ಹಾಕಿ ಇಲ್ಲಿ ಮೂತ್ರ ಮಾಡ್ಬಾರ್ದು ಅಂತ ಹಾಕಿದ್ರು.

ನಾನು, ಬಾಬುಗೆ. ಬಾಬು, ಕುಡ್ಕ ಬಂದ್ರೆ ಯಾವ ದೇವ್ರು ಅಂತ ನೋಡೋಲ್ಲ ಸುಮ್ನೆ ಅಭಿಷೇಕ ಮಾಡಿ ಹೋಗ್ತಾನೆ ಅಂದೆ.

ಮತ್ತೆ, ಮೂರೂ ದೇವ್ರನ್ನ ಒಂದೇ ಫೋಟೋದಲ್ಲಿ ಹಾಕಿದ್ರೆ ಹೆಂಗೆ ಅಂದೆ? ಬಾಬು ಇದ್ದವನು, ಹಂಗೆ ಮಾಡಿದ್ರೆ ಒಳ್ಳೆದು ಬ್ರಹ್ಮ ವಿಷ್ಣು ಮಹೇಶ್ವರನ ಹಾಗೆ ಮೂರೂ ದೇವ್ರನ್ನ ಒಂದೇ ಫೋಟೋದಲ್ಲಿ ಹಾಕ್ಬಹುದು ಅಂದ.

ಒಳ್ಳೆ ಉಪಾಯ ಬಾಬು ಅಂದು, ಅದ್ಕೆ ಹೆಸ್ರು ಹಿಂಗೆ ಕೊಟ್ರೆ ಹೆಂಗೆ ಅಂದೆ.

ಹೆಂಗೆ ಚಿಕ್ಕು? ಅಂದ

"ಏಸಲ್ಲೇಶ್ವರ" ಅಂದೆ. ಮಸ್ತ್ ಐಡಿಯಾ ಅಂದ....

ತಿಥಿಗೆ ಕರೀತಾರೆ ಹೋಗಿಬರೋವಂತೆ

ಮೊನ್ನೆ ಊರಿಗೆ ಹೋಗಿದ್ದೆ, ಮನೆಯಲ್ಲಿ ಟಿ.ವಿ ನೋಡ್ತಿದ್ದೆ. ಗೌಡ್ರು ಫ್ಹಿಲ್ಮ್ ಹಾಕಿದ್ರು, ಕ್ಲೈಮ್ಯಾಕ್ಸ್ ಸೀನ್ ಬಂತು. ನಮ್ಮಮ್ಮನೂ ನೋಡೋದಕ್ಕೆ ಬಂದು ಕೂತ್ಕೊಂಡ್ರು. ಫ್ಹಿಲ್ಮಲ್ಲಿ ಶೃತಿ ಸಾಯ್ತಾಳೆ ಅವಳಣ್ಣ (ಅಂಬರೀಷ್) ಹೆಣವನ್ನು ಹೊತ್ಕೊಂಡು ಹೋಗ್ತಾನೆ. ಅಲ್ಲಿಗೆ ಚಿತ್ರದ ಕೊನೆ.

ನಮ್ಮಮ್ಮ ಅದನ್ನ ನೋಡಿ ‘ಛೆ, ಸುಡೋದನ್ನಾದ್ರೂ ತೋರಿಸ್ಬಹುದಿತ್ತು ಅಂತ ಅಂದ್ರು’

ನಾನು ಅದಕ್ಕೆ ‘ಸ್ವಲ್ಪ ಹೊತ್ತು ಕಾಯಿ, ಬ್ರೇಕ್ನ ನಂತರ ತಿಥಿಗೆ ಕರೀತಾರೆ ಹೋಗಿಬರೋವಂತೆ ಅಂದೆ’

........................................................................................................................‍‍‍‍‍‍‍‍‍‍‍‍

ಊಟಕ್ಕೆ ನಾನು, ನಮ್ಮಪ್ಪ ಕೂತಿದ್ವಿ. ತಟ್ಟೆಗೆ ಅಮ್ಮ ಪಲಾವ್ ಹಾಕಿದ್ರು. ಅದಾದ ಮೇಲೆ ಒಂದು ಪಾತ್ರೆಯಲ್ಲಿ ಅನ್ನ ತಂದಿಟ್ರು (ನಮ್ಮಲ್ಲಿ ಅನ್ನ ಜಾಸ್ತಿ ಮಾಡ್ತಾರೆ, ಮಾರನೇ ದಿನ ರೊಟ್ಟಿ ಮಾಡಲಿಕ್ಕೆ).

ನಮ್ಮಪ್ಪ ಅದನ್ನ ನೋಡಿ 'ಓಹೋ ಒಂದು ಖಂಡುಗ ಮಾಡಿದ್ದಾರೆ ನೋಡೋ ಮಾರಾಯ. ಇನ್ನೊಂದು ವಾರ ಅಡಿಗೆ ಮಾಡದೆ ಆರಾಮಾಗಿರ್ಬಹುದು ನಿಮ್ಮ ಅಮ್ಮ'
........................................................................................................................

ನಿನ್ನೆ ನಮ್ಮಮ್ಮ ನಮ್ಮೂರಿಂದ ಬೆಂಗ್ಳೂರಿಗೆ ಬರೋ ಬಸ್ಸಿನ ಕಂಡಕ್ಟರ್ ಹತ್ತಿರ ಹೋಗಿ 'ನಮ್ಮ ಮಗಳು ಬೆಂಗ್ಳೂರಲ್ಲಿ ಕಾಯ್ತಿರ್ತಾಳೆ ಅವಳಿಗೆ ಈ ಹಲಸಿನಹಣ್ಣು ತಲುಪಿಸಿಬಿಡಿ' ಅಂತ ಹೇಳಿದ್ರಂತೆ. ಅದ್ಕೆ ಕಂಡಕ್ಟರ್, ಡ್ರೈವರ್ ಇಬ್ರೂ ಸಹ 'ಅಮ್ಮ, ಹಣ್ಣು ಸುವಾಸನೆ ಬರ್ತಿದೆ, ನಾವೇ ಕತ್ತರಿಸಿ ತಿನ್ತೀವಿ' ಅಂದ್ರಂತೆ.

ಪ್ಯಾಪಿಲಾನ್

ಬಹುಶಃ ಇಂತಹದೊಂದು ಆತ್ಮಕಥೆ ಓದ್ತೀನಿ ಅಂತ ಅಂದ್ಕೊಂಡಿರ್ಲಿಲ್ಲ, ಮೀಟರ್ ಆಗಾಗ ಹೇಳ್ತಿದ್ದ. ಆಮೇಲೆ ದೊಡ್ಡ ಗಾತ್ರದ ಪುಸ್ತಕಗಳನ್ನ ಓದೋದಕ್ಕೆ ಯಾಕೋ ಹಿಂಜರಿಕೆ, ಮುಗಿಸೋಕಾಗಲ್ಲ ಅಂತ. ಒಂದು ಸಲ ಪ್ರಯತ್ನ ಕೂಡ ಮಾಡಿದ್ದೆ ಆದ್ರೆ ಕಾಲು ಭಾಗ ಮುಗಿಸುವಷ್ಟರಲ್ಲಿ ಸುಸ್ತಾಗಿ ಹೋಗಿದ್ದೆ.

ಮೊನ್ನೆ ಉಲ್ಲಂಗೆ ಕೇಳ್ದೆ ಯಾವ್ದಾದ್ರೂ ಇದ್ರೆ ಕೊಡು ಊರಿಗೆ ಹೋಗ್ತಿದೀನಲ್ಲ ಸಮಯ ಕಳೆಯೋದಕ್ಕೆ ಆಗತ್ತೆ ಅಂದೆ. ಪೂರ್ಣಚಂದ್ರ ತೇಜಸ್ವಿಯವರು ಅನುವಾದಿಸಿರುವ ಪ್ಯಾಪಿಲಾನ್ ಪುಸ್ತಕದ 2 ಭಾಗಗಳನ್ನು ಕೊಟ್ಟ.

ಇವತ್ತಿಗೆ ಒಂದನ್ನು ಮುಗಿಸಿ ಇನ್ನೊಂದನ್ನು ಕೈಗೆತ್ತಿಕೊಂಡಿದ್ದೇನೆ.

ಹತಾಶೆ,ನೋವು,ತಾಳ್ಮೆ,ಸಂಕಷ್ಟ,ಆತ್ಮವಿಶ್ವಾಸ,ನಂಬಿಕೆ,ಭರವಸೆ,ತಳಮಳ,ಬದುಕುವ ಹಂಬಲ,ಮಾನವೀಯತೆ,ಪ್ರಾಮಾಣಿಕತೆ ಇನ್ನೂ ಏನೇನೋ..... ಇವುಗಳ ಕೊನೆಯ ಹಂತ ಯಾವ ಮಟ್ಟದ್ದು ಅಂತ ತಿಳಿದುಕೊಳ್ಳಲು ಇದನ್ನೋದಬೇಕು.

ಯಾವುದೋ ಕ್ಷುಲ್ಲಕ‌ ಕಾರ‌ಣ‌ಕ್ಕೋ ಅಥ‌ವಾ ಬ‌ಲ‌ವಾದ‌ ಕಾರ‌ಣ‌ಕ್ಕೋ ತ‌ಮ್ಮನ್ನ ತಾವೇ ಬ‌ಲಿ ಕೊಡುವ‌ವ‌ರು ಇದ‌ನ್ನೊಮ್ಮೆ ಓದಿದ‌ರೆ ಬ‌ಹುಶ‌ಃ ಅವ‌ರಿನ್ನೊಮ್ಮೆ ಅದ‌ರ‌ ಬ‌ಗ್ಗೆ ಒಂದು ಕ್ಷಣ‌ವೂ ಯೋಚಿಸುವುದಿಲ್ಲವೇನೋ.

Thursday, July 16, 2009

ಈ ಸಂಪತ್ತಿಗೆ ಕಟಿಂಗ್ ಎಲ್ಲಿ ಚೆನ್ನಾಗಿ ಮಾಡ್ತಾರೆ ಅಂತ ಬೇರೆ ಕೇಳ್ಬೇಕಿತ್ತೇ?

ತುಂಬಾ ದಿನಗಳ ಹಿಂದೆ ಉಲ್ಲ ನಾನು ಶಟಲ್ ಆಡೋದಕ್ಕೆ ಹೋಗಿದ್ವಿ, ಆಟ ಆದ್ಮೇಲೆ ಉಲ್ಲ ನಾನು ಕಟಿಂಗ್ ಮಾಡ್ಸೋಕೆ ಹೋಗ್ಬೇಕು. ಚಿಕ್ಕ, ಇಲ್ಲಿ ಹತ್ತಿರದಲ್ಲಿ ಒಳ್ಳೆ ಕಟಿಂಗ್ ಶಾಪ್ ಎಲ್ಲಿದೆ ಅಂದ. ನಮ್ಮ ಮನೆ ಹತ್ತಿರ ಡಿ.ಸಿ.ಸಿ ಬ್ಯಾಂಕ್ ಇದೆಯಲ್ಲಾ ಅದೇ ರಾಜ್ ಕುಮಾರ್ ರೋಡಲ್ಲಿ ಅದರ ಪಕ್ಕ ಇದೆ ಹೋಗು ಅಂದೆ, ಸರಿ ಅಂತ ಹೋದ, ನಾನು ಮನೆಗೆ ಬಂದು ಸ್ನಾನ ಮಾಡಿ ಆಫೀಸಿಗೆ ಹೊರಡೋದಕ್ಕೆ ರೆಡಿಯಾಗ್ತಿದ್ದೆ.

ಉಲ್ಲ ಬಂದ, ಅವ್ನನ್ನ ನೋಡಿ....

ಲೇ, ಈ ಸಂಪತ್ತಿಗೆ ಕಟಿಂಗ್ ಎಲ್ಲಿ ಚೆನ್ನಾಗಿ ಮಾಡ್ತಾರೆ ಅಂತ ಬೇರೆ ಕೇಳ್ಬೇಕಿತ್ತೇ ನನ್ನ ಹತ್ತಿರ ಅಂದೆ.
ಏನಾಗಿರ್ಬಹುದು ಹೇಳಿ...............
.
.
ಬಾಂಡಲಿಯಾಗಿ ಹೋಗಿದ್ದ

Wednesday, July 15, 2009

ಪುಶ್ ಬ್ಯಾಕ್

ನಿನ್ನೆ ಯಶವಂತಪುರದಲ್ಲಿ ಚಾಲುಕ್ಯ ಎಕ್ಸ್ಪ್ರೆಸ್ ಇಳಿದು ನವರಂಗ್ ಹೋಗಲಿಕ್ಕೆ ಬಸ್ಗೆ ಕಾಯ್ತಿದ್ದೆ, ಒಂದು ಪ್ರೈವೇಟ್ ಬಸ್ ಬಂತು, ಹತ್ತಿ ಬಾಗಿಲ ಹತ್ತಿರ ಖಾಲಿ ಇದ್ದ ಸೀಟಲ್ಲಿ ಹೋಗಿ ಕೂತೆ.
ಸೀಟ್ಗಳು ರಾಜಹಂಸದ ತರ ಇದ್ವು (ಬಸ್ಸೇನೋ ಮಾಮೂಲಿ ಪ್ರೈವೇಟ್ ಗಾಡಿಗಳ ಹಾಗಿತ್ತು), ನಾನು ಕುಳಿತ ಸೀಟ್ ಸ್ವಲ್ಪ ಹಿಂದೆ ಹೋಯ್ತು, ಓ ಪುಶ್ ಬ್ಯಾಕ್ ಇರ್ಬೇಕು (ಆದ್ರೆ ಕೆಳಗೆ ಮೂವ್ ಮಾಡ್ಲಿಕ್ಕೆ ಏನೂ ಇರ್ಲಿಲ್ಲ) ಅಂದ್ಕೊಂಡು ಇನ್ನೂ ಹಿಂದೆ ಮಾಡಣ ಅಂತ ಸೀಟ್ ಹಾಗೆ ಹಿಂದೆ ದೂಡುತ್ತಾ ಹೋದೆ, ಸೀಟ್ ಹಿಂದೆ ಹೋಗ್ತಿತ್ತು.
ಅಷ್ಟರಲ್ಲಿ ಕಂಡಕ್ಟರ್ ಇದ್ದವನು, ಸರ್ ಆ ಸೀಟ್ ಮುರಿದುಹೋಗಿದೆ, ಬೇರೆ ಸೀಟಲ್ಲಿ ಹೋಗಿ ಕುಳಿತುಕೊಳ್ಳಿ ಅಂದ
ವಿಧಿಯಿಲ್ಲದೆ ನನ್ನ ಸೀಟನ್ನು ರಕ್ಷಿಸಿಕೊಳ್ಳಲು ನಾನು ಇನ್ನೊಂದು ಸೀಟಿಗೆ ಹೋಗಿ ಕುಳಿತುಕೊಳ್ಳಬೇಕಾಯಿತು.

Monday, July 13, 2009

ನಂಗೇ ಬಿಸ್ಕಿಟ್

ನಿನ್ನೆ ಬೆಳಗ್ಗೆ ವೆಂಕ (ಕುಲ್ಡ) ನಮ್ಮ ಮನೆಗೆ ಬಂದ, ದಿನಾ ಶಟಲ್ ಆಡ್ತೀವಲ್ಲ ಹಾಗಾಗಿ, ಬ್ಯಾಟ್ ತಗೊಂಡು ಹೊರಟ್ವಿ.
ಶಟಲ್ ಆಡಿ ಆದ್ಮೇಲೆ ಜಿಮ್ಮಿಗೆ ಹೋಗ್ಬೇಕು ಅಂತ ಬೈಕ್ ತಂದು ನಿಲ್ಸಿದ್ದ. ನಾವುಗಳು ಬೈಕ್ ನಿಲ್ಲಿಸೋ ಜಾಗದಲ್ಲಿ ವೆಂಕನೂ ನಮ್ಮ ಮನೆಗೆ ಬಂದಾಗ ನಿಲ್ಲಿಸ್ತಿದ್ದ,
ಮೊನ್ನೆ ರಾತ್ರಿ ಅವ್ನು ಬಂದಿದ್ನಲ್ಲ (ಬೈಕ್ ತಗೊಂಡು ಹೋಗಿದ್ದ). ನಾನು ನಂಬ್ತೀನಿ ಅಂದ್ಕೊಂಡು ನನಗೆ ಬಿಸ್ಕೆಟ್ ಹಾಕ್ಬೇಕು ಅಂದ್ಕೊಂಡು ವೆಂಕ......'ಅಯ್ಯೋ ನಿನ್ನೆ ರಾತ್ರಿ ಬೈಕೇ ತಗೊಂಡು ಹೋಗಿಲ್ಲ ಇಲ್ಲೇ ಬಿಟ್ಟಿದೀನಿ' ಅಂದ.
ಅದಕ್ಕೆ ನಾನು (ಮೀಟರ್ ಬೈಕ್ ವೆಂಕನ ಬೈಕ್ ಹತ್ತಿರ ಇತ್ತು ಆದ್ರೆ ಬಾಬು ಬೆಳಗ್ಗೆ ಅವ್ನ ಫ್ರೆಂಡ್ ಕರ್ಕೊಂಡು ಬಂದು ಒಳಗೆ ನಿಲ್ಸಿದ್ದ),
'ಓ, ನಿನ್ನ ಬೈಕ್ ಬಿಟ್ಟು ಮೀಟರ್ ಬೈಕ್ ತಗೊಂಡು ಹೋಗಿದೀಯಾ' (ಕುಲ್ಡ ಅಲ್ವ ಅದ್ಕೆ, ನನ್ಮಗ ನಂಗೇ ಬಿಸ್ಕಿಟ್ ಹಾಕಿದ್ಯಲ್ಲ ನೋಡೀಗ) ಅಂದೆ.
ನನ್ನ ಮುಖ ನೋಡಿ 'ನನ್ಮಗನೇ' ಅಂದ್ಕೊಂಡು ಸುಮ್ಮನೆ ನನ್ನ ಜೊತೆ ಶಟಲ್ ಆಡೋದಿಕ್ಕೆ ಕಾಲು ಹಾಕಿದ...

Wednesday, July 1, 2009

ಸಿಹಿ ಚಪಾತಿ

ಮೊನ್ನೆ ಹಲಸಿನಹಣ್ಣನ್ನು ಊರಿಂದ ತಂದಿದ್ದೆ, ತೋಳೆ ಬಿಡಿಸಿ ಒಂದು ಪಾತ್ರೆಗೆ ಹಾಕಿಟ್ಟಿದ್ದೆ, ಎಲ್ಲಾ ಕರಗಿ ಹೋಗಿತ್ತು. ಅದನ್ನು ಎಸೆದು ಪಾತ್ರೆ ತೊಳೆಯೋದಕ್ಕೆ ಇಟ್ಟಿದ್ದೆ. ನನ್ನ ಫ್ರೆಂಡ್ ಎಲ್ಲಾ ಪಾತ್ರೆ ತೊಳೆಯೋವಾಗ ಅದನ್ನು ತೊಳೆದು ಇಟ್ಟಿದ್ದ.
ನಾನು ಇವತ್ತು ಊಟಕ್ಕೆ ಆಫೀಸಿಗೆ ಚಪಾತಿ ಮಾಡೋಣ ಅಂದ್ಕೊಂಡು ಆ ಪಾತ್ರೆ ತಗೊಂಡು (ಆಗ ಹಲಸಿನ ಸುವಾಸನೆ ಬರ್ತಿರ್ಲಿಲ್ಲ) ರಾತ್ರಿ ಹಿಟ್ಟು ಕಲಸಿಟ್ಟೆ.
ಬೆಳಗ್ಗೆ ಎದ್ದು ಪಾತ್ರೆ ತೆಗೆದು ನೋಡಿದ್ರೆ, ಹಲಸಿನಹಣ್ಣಿನ ಸುವಾಸನೆ ಗಂ ಅಂತಿತ್ತು, ಅಯ್ಯಯ್ಯೊ ಹಿಂಗಾಯ್ತಲ್ಲ ಅಂದ್ಕೊಂಡು ವಿಧಿ ಇಲ್ಲದೆ ಅದ್ರಿಂದನೇ ಚಪಾತಿ ಮಾಡಿದ್ದು.
ಚಪಾತಿ ಪೂರ್ತಿ ಹಲಸಿನಹಣ್ಣಿನ ಸುವಾಸನೆ, ಪಲ್ಯ ಏನು ಗೊತ್ತೇನ್ರಿ ಬೀಟ್ಱೋಟ್ ಪಲ್ಯ ...

ನಾವು ನಮ್ಮ ಬಗ್ಗೆ ಮಾತಾಡಿದ್ವಿ ನಿಮ್ಮ ಬಗ್ಗೆ ಅಲ್ಲ...

ಹೋದ ಭಾನುವಾರ, ಮೀಟರ್ ಅವ್ನ ಫ್ರೆಂಡ್ ಮನೆಗೆ ಹೋಗಿದ್ದ. ನಾನು, ಬಾಬು, ವೆಂಕ, ಶಾಮ ತಿಂಡಿಗೆ ನಳಪಾಕಕ್ಕೆ ಹೋಗುವುದೆಂದು ತೀರ್ಮಾನಿಸಿದೆವು. ಮೀಟರ್ಗೆ ಕಾಲ್ ಮಾಡಿ ಅಲ್ಲಿಗ ಬಾ ಅಂತ ಅಂದ್ವಿ. ನಾವು ನಳಪಾಕಕ್ಕೆ ಹೋಗಿದ್ವಿ, ಆಗ ಮೀಟರ್ ನಮ್ಮ ಮನೆಗೆ ಹೋಗಾದ ಮೇಲೆ ನಂಗೆ ಕಾಲ್ ಮಾಡಿದ, ಎಲ್ಲಿದೀರಪ್ಪಾ ಅಂದ ನಳಪಾಕಕ್ಕೆ ಬಾ ಅಂದ್ವಿ. 2 ನಿಮಿಷದಲ್ಲಿ ಬಂದ, ಬಂದವನೇ ಕೈ ತೊಳೆಯೋದಕ್ಕೆ ಹೋದ.
ನಾನು, ವೆಂಕ ಸುಮ್ನೆ ಅವ್ನ ಕಾಲು ಎಳೆಯೋಣ ಅಂದ್ಕೊಂಡು ಅವ್ನು ಬಂದಾದ ಮೇಲೆ, ಏನು ಮೀಟರ್ ನಿನ್ನ ಫ್ರೆಂಡ್ ಮನೆನಲ್ಲೂ ಬ್ರಷ್ ಮಾಡಿಲ್ಲ, ನಮ್ಮ ಮನೆಯಿಂದ ಬೇರೆ ಬೇಗ ಬಂದೆ, ಇಲ್ಲಿ ಕೈ ತೊಳೆಯೋದಕ್ಕೆ ಹೋದವನು ಬೇಗ ಬಂದೆ, ಕೊನೇ ಪಕ್ಷ ಇಲ್ಲಾದ್ರೂ ಬಾಯಿ ಮುಕ್ಕಳಿಸಿಕೊಂಡು ಬರಬಹುದಿತ್ತಲ್ವ ಅಂತ ಅಂದ್ವಿ.
ಅದ್ಕೆ ಮೀಟರ್, ಹುಲಿ ಸಿಂಹಗಳು ಬ್ರಷ್ ಮಾಡಲ್ಲ ನಿಮ್ಗೆ ಗೊತ್ತಾ ಅಂದ.
ನಾನು, ವೆಂಕ ಅದ್ಯಾಕೆ ಆ ಪ್ರಾಣಿಗಳನ್ನೇ ಹೇಳ್ತೀಯಾ, ಹಂದಿ ಕತ್ತೆಗಳನ್ನು ಹೇಳಬಹುದಿತ್ತಲ್ಲ ಅಂದ್ವಿ (ಮುಂದಿನ‌ ಡೈಲಾಗ್ ಬರತ್ತೆ ಅಂತ ಗೊತ್ತಿತ್ತು, ಅಷ್ಟರೊಳಗೆ ನಮ್ಮ ಬಾಯಿಯಿಂದ ಈ ಮಾತುಗಳು ಹೊರಟಾಗಿತ್ತು).
ಅದ್ಕೆ ಮೀಟರ್, ನಾವು ನಮ್ಮ ಬಗ್ಗೆ ಮಾತಾಡಿದ್ವಿ ನಿಮ್ಮ ಬಗ್ಗೆ ಅಲ್ಲ ಅಂತ ಅನ್ನೋದಾ.....

ಮದುವೆ

ಸುಮಾರು 4-5 ತಿಂಗಳುಗಳಿಂದ ಈ ಪದ ಎಷ್ಟು ಸಲ ಕಿವಿಗೆ ಬಿದ್ದಿದೆಯೋ ದೇವ್ರೇ ಬಲ್ಲ. ರೂಮಿಗೆ ಹೋದ್ರೆ ಹುಡುಗ್ರ ಜೊತೆ, ಅಕ್ಕನ ಮನೆಗೆ (ಬೆಂಗ್ಳೂರಲ್ಲಿ) ಹೋದ್ರೆ, ಇನ್ನೊಬ್ರು ಅಕ್ಕನ ಮನೆಗೆ ಹೋದ್ರೆ, ಊರಿಗೆ ಹೋದ್ರೆ, ಅಕ್ಕನ ಮನೆಗೆ (ಶಿವಮೊಗ್ಗದಲ್ಲಿ) ಹೋದ್ರೆ, ಕಂಪನಿಯಲ್ಲಿ, ಅತ್ತೆ ಮನೆಗೆ ಹೋದ್ರೆ, ಅತ್ತೆ ಮಕ್ಕಳ ಹತ್ರ ಫೋನಿನಲ್ಲಿ ಮಾತಾಡಿದ್ರೆ, ಮನೆಯಲ್ಲಿ ಫೋನ್ ಎತ್ತಿದ್ರೆ, ನ‌ಮ್ಮ ಎಲ್ಲಾ ಹುಡುಗ್ರು ಬ‌ಂದಾಗ‌.........
............ಎಲ್ಲಾ ಕಡೆ ಒಂದೇ ಸುದ್ದಿ ಮದುವೆ, ಮದುವೆ, ಮದುವೆ, ಮದುವೆ..............
ನ‌ಮ್ಮ ರೂಮಿನ‌ಲ್ಲಿರೋ 4 ಜನ ಸ್ವಲ್ಪ ದೂರ ಇರೋ ವೆಂಕನೂ ಇನ್ನೇನು ಯುದ್ಧಕ್ಕೆ ಶುರುವಾಗಿದ್ದಾರೆ ಅಂದ್ರೆ ಎಲ್ಲರೂ ಹುಡುಗಿ ಹುಡುಕ್ತಾ ಇದ್ದಾರೆ, ಹಾಗಾಗಿ ರೂಮಿನ‌ಲ್ಲಿ ಪ್ರತಿದಿನ‌ ಮ‌ದುವೆಯ‌ದ್ದೇ ಸುದ್ದಿ, ಮೀಟರ್, ಬಾಬು, ನಾನು ಆಗಾಗ ವೆಂಕ. ಉಲ್ಲ ಇದ‌ಕ್ಕೆಲ್ಲಾ ಬ‌ರ‌ಲ್ಲ ಯಾಕ‌ಂದ್ರೆ ಅವ್ನಿಗೆ ಹುಡುಗಿ ಪ‌ಕ್ಕಾ ಆಗಿದ್ದಾಳೆ. ಸೌಜಂಗೆ ಈ ತರದ ತೊಂದ್ರೆಗಳೇ ಇಲ್ಲ ಯಾಕಂದ್ರೆ ಅವ್ನು ಪ್ರೇಮ ವಿವಾಹವಾಗಿದ್ದಾನೆ.
ಊರಿನ‌ಲ್ಲಿ ಮ‌ನೆ ಕ‌ಟ್ಟಿ ಆದ್ಮೇಲೆ ಮ‌ದುವೆ ಅಂತ‌ ನ‌ಮ್ಮಪ್ಪನ‌ ಲೆಕ್ಕಾಚಾರ‌, ಮ‌ನೆ ಶುರು ಮಾಡೋಕಿಂತ‌ ಮುಂಚೆನೇ ಆಫ‌ರ್ಗ‌ಳು ಬ‌ರೋದ‌ಕ್ಕೆ ಶುರುವಾಯ್ತು, ಅಪ್ಪ ಅಮ್ಮ ಮ‌ನೆ ಕ‌ಟ್ಟಿ ಆದ್ಮೇಲೆ ಮ‌ದುವೆ ಅಂತ‌ ಅವ್ರೆಲ್ಲರಿಗೂ ಹೇಳೋದೇ ಆಯ್ತು.
ಸ‌ರಿ ಮ‌ನೆ ಕ‌ಟ್ಟಿ ಆಯ್ತು, ಗೃಹಪ್ರವೇಶನೂ ಆಯ್ತು, ಆ ದಿನ ಬಂದವರಲ್ಲಿ ಒಂದೆರಡು ಜನ (ಅವ್ರು ನಂಗೆ ಅಷ್ಟಾಗಿ ಪರಿಚಯವಿರಲಿಲ್ಲ) ನನ್ನನ್ನು ಏನು ಮಾಡ್ತಿದೀಯಾ, ಯಾವ ಕಂಪನಿ, ಎಲ್ಲಿ ಹೀಗೆಲ್ಲಾ ವಿಚಾರಿಸಿದ್ರು, ನಾನು ಹೀಗೆ ಸುಮ್ನೆ ವಿಚಾರಿಸ್ತಿದ್ದಾರೆ ಅಂತ ಅಂದ್ಕೊಂಡೆ.
ಗೃಹಪ್ರವೇಶ, ಆಯ್ತು..........................
ಸ್ವಲ್ಪ ದಿನ ಆದ್ಮೇಲೆ, ನಮ್ಮ ಊರಿನವರೇ ಒಬ್ರು ಅವ್ರ ಹೆಂಡ್ತಿ ಕಡೆ ಒಂದು ಒಳ್ಳೆ ಕುಟುಂಬ ಇದೆ, ಹುಡುಗಿ ಚೆನ್ನಾಗಿದ್ದಾಳೆ ನೋಡಿ ಅಂದ್ರು. ಸ‌ರಿ, ನ‌ಮ್ಮಪ್ಪ ಅವ್ರಿಗೆ ಹುಡುಗಿ ಜಾತ‌ಕ‌ ಕೊಡೋದ‌ಕ್ಕೆ ಹೇಳಿ ಕುಟುಂಬದ‌ ಬ‌ಗ್ಗೆ ತಿಳಿದುಕೊಳ್ಳೋ ಪ್ರಯ‌ತ್ನ ಶುರು ಮಾಡಿದ್ರು.
ನ‌ನ್ನ ಬ‌ಗ್ಗೆ ತಿಳಿದುಕೊಳ್ಳೋದ‌ಕ್ಕೆ ಹುಡುಗಿ ಕ‌ಡೆಯ‌ವ‌ರು ನ‌ನ್ನ ಕ‌ಸಿನ್ ಮುಖಾಂತ‌ರ‌ ನ‌ನ್ನ ಆಫೀಸ್ ವಿಳಾಸ‌ ಮ‌ತ್ತೆ ನ‌ನ್ನ ಮೊಬೈಲ್ ನಂಬ‌ರ್ ಇಸ್ಕೊಂಡ್ರು. ನೋಡ‌ ಮಾರಾಯ‌, ಅವ್ರು ನಿನ್ನ ಆಫೀಸ್ಗೆ ಬ‌ಂದು ನಿನ್ನನ್ನು ಮಾತಾಡಿಸಬ‌ಹುದು ಕ‌ಣ‌ ಮಾರಾಯ‌ ಅಂತ‌ ನ‌ನ್ನ ಕ‌ಸಿನ್ ಅಂದ‌, ಆಯ್ತು ಕ‌ಣ‌ಪ್ಪ ಹಾಗೆ ಆಗ್ಲಿ ಅಂದೆ.
ಅದಾದ ಮೇಲೆ ನನಗೆ ಪ್ರತಿದಿನನೂ ಯಾರೋ ನನ್ನನ್ನು ಫಾಲೋ ಮಾಡ್ತಿದ್ದಾರೇನೋ ಅನ್ನಿಸೋಕೆ ಶುರುವಾಯ್ತು.ಒಂದಿನ, ನನ್ನ ಆಫೀಸಲ್ಲಿ ಆಫೀಸ್ ಬಾಯ್ ಬಂದಿರ್ಲಿಲ್ಲ, ರಿಸಪ್ಶನಿಷ್ಟ್ ಊಟಕ್ಕೆ ಹೋಗಬೇಕಾಗಿತ್ತು ನನ್ನ ಕಲೀಗ್ಸ್ ಎಲ್ಲಾ ಊಟಕ್ಕೆ ಹೋದ ಕಾರಣ ಅನಿವಾರ್ಯವಾಗಿ ನಾನು ಅಲ್ಲಿ ಕೂರಬೇಕಾಯ್ತು, ಆಗ ನಮ್ಮ ಕಸಿನ್ ಗೆ ಫೋನ್ ಮಾಡಿ ಅಕಸ್ಮಾತ್ ಈಗೇನಾದ್ರೂ ಹುಡುಗಿ ಕಡೆಯವರು ನನ್ನನ್ನು ನೋಡೋದಕ್ಕೆ ಬಂದ್ರೆ ನೋಡಿದ ತಕ್ಷಣ ರಿಜೆಕ್ಟ್ ಮಾಡ್ತಾರೆ ಕಣೋ ಅಂದೆ, ಅವ್ನು ನಿಂಗ್ಯಾಕೋ ಈ ಪರಿಸ್ಥಿತಿ ಬಂತು ಅಂತ ಹೇಳಿ ಕಿತ್ಕೊಂಡು ನಗೋಕೆ ಶುರು ಮಾಡಿದ.
ನ‌ಮ್ಮ ಅಮ್ಮನೂ ಫೋನ್ ಮಾಡಿ ಏನ‌ ಮಾರಾಯ‌, ಫೋನ್ ಎತ್ತಿ ಎತ್ತಿ ಸಾಕಾಗಿ ಹೋಗಿದೆ ನೀನು ಬಾರೀ ಕ‌ಷ್ಟ ಕೊಡ್ತಾ (ತಮಾಷೆಗೆ) ಇದೀಯಾ ಅಂದ್ರು, ಏನು ಮಾಡೋದ‌ಮ್ಮ ನಿಮ್ಮ ಮ‌ಗ‌ ಅಲ್ವ, ನಿಮ್ಮ ಕ‌ರ್ತ‌ವ್ಯ ಮಾಡ್ಬೇಕು ಅಂದೆ. ಎಲ್ಲೋ ದೂರ‌ದ‌ಲ್ಲಿದ್ದ ನ‌ಮ್ಮಪ್ಪ ನಾನು ಮಾತಾಡ್ತಿದೀನಿ ಅನ್ನೋದು ತಿಳಿದುಕೊಂಡು ಅವ್ನಿಗೆ ಒಂದು 4-5 ಲ‌ಕ್ಷ ರೆಡಿ ಮಾಡಿಕೊಂಡಿರೋದ‌ಕ್ಕೆ ಹೇಳಿರೋದು ಅಂತ‌ ಹೇಳಿದ್ರು, ನಾನು ಅದ್ಕೆ ಅಮ್ಮ, ಸಾಮುಹಿಕ‌ ವಿವಾಹ‌ದ‌ಲ್ಲಿ ನಾನೂ ಒಬ್ಬ ಆಗ್ತೀನಿ ಬಿಡು ಅಂದೆ, ಯಾಕೆ ಧ‌ರ್ಮ‌ಸ್ಥಳ‌ಕ್ಕೆ ಹೋಗಿ ಆಗ್ಬಿಡು ಆದ್ರೆ ನಾವು ತೋರ್ಸಿದ‌ ಹುಡುಗಿನ‌ಂತೂ ಕ‌ಳ್ಸಲ್ಲ ಅಂದ್ರು!!
ಅತ್ತೆಗೆ ಫೋನ್ ಮಾಡಿದ್ದೆ, ಹಿಂಗೆ ಈ ವಿಚಾರ ಮಾತಾಡ್ತಿದ್ದೆ, ಅತ್ತೆ ಇದ್ದವರು ಹುಡುಗಿ 5.7 ಇಂಚು ಅಂತೆ ಕಣೋ ಅಂದ್ರು. ಅತ್ತೆ 1 ಇಂಚು ಜಾಸ್ತಿಯಾಯ್ತಲ್ಲ ಅಂದೆ, 1- 2 ಇಂಚು ಏನು ವ್ಯತ್ಯಾಸ ಆಗಲ್ಲ ಹುಡುಗಿ ಒಳ್ಳೆಯವಳಿದ್ದು ಚೆನ್ನಾಗಿದ್ರೆ ಅಂತ ಅಂದ್ರು, ಆಗಲಿ ಅಂದೆ.
ನಿನ್ನೆ ಅಪ್ಪ ಫೋನ್ ಮಾಡಿ ಒಂದು ಆಫರ್ ಬಂದಿದೆ M.L.A ಮಗಳು ಅಂದ್ರು, ರಾಜಕೀಯ ಅಂದ್ರೆ ನೂರು ಮಾರು ದೂರ ಹೋಗೋ ನಾನು....ಏನಪ್ಪ ಇದು, ಬೇರೆ ಯಾರನ್ನಾದ್ರೂ ನೋಡಿ ರಾಜಕೀಯದವರೆಲ್ಲಾ ಬೇಡ ಅಂದೆ.
------------------------------------------------------------------------------------------------------------------------------------------------ಅಬ್ಬಾ, ಇದೆಕ್ಕೆಲ್ಲಾ ಪೂರ್ಣ ವಿರಾಮ ಇಡೋದಕ್ಕೆ ಇನ್ನೂ ಎಷ್ಟು ದಿನ ಕಾಯ್ಬೇಕೋ?? ಇನ್ನು 4 5 ತಿಂಗ್ಳಿಗೇ ಇಷ್ಟು ಕ‌ಥೆಗ‌ಳು....ಮುಂದೆ ಮುಂದೆ ಹೋದ್ರೆ ಇನ್ನೆಷ್ಟೋ??

Thursday, June 18, 2009

ಯುಗಾದಿ ಹಬ್ಬದಂದು...

ಯುಗಾದಿ ಹಬ್ಬಕ್ಕೆ ಊರಿಗೆ ಹೋಗಿದ್ದೆ. ಹಬ್ಬದ ದಿನ ಬೆಳಗ್ಗೆ ಸ್ನಾನ ಮಾಡಿ, ಮಾವಿನಸೊಪ್ಪು ತರಲು ತೋಟಕ್ಕೆ ಹೋಗಿ ಮರ ಹತ್ತಿ ಸೊಪ್ಪು ಕುಯ್ದು ತಂದು ತೋರಣ ಕಟ್ಟಿ ನನ್ನ ಕೆಲಸವಾಯಿತೆಂದು ಟೀ.ವಿ ಹಾಕಿ ಕುಳಿತು ಕಲಾಸಿಪಾಳ್ಯ ನೋಡ್ತಾ ಕೂತ್ಕೊಂಡೆ.
ಅರ್ಧ ನೋಡಿರಬೇಕು, ಅಮ್ಮ ಬಂದು ಪೂಜೆ ಮಾಡಿಸ್ಕೊಂಡು ಬಾ ದೇವಸ್ಥಾನಕ್ಕೆ ಹೋಗಿ ಅಂದ್ರು. ನಾನು, ಅಮ್ಮ ಆಮೇಲೆ ಹೋದ್ರೆ ಆಗಲ್ವ ಆಗ್ಲೇ ಅರ್ಧ ಫಿಲ್ಮ್ ನೋಡಿದೀನಿ ಅಂದೆ..
ಅದಕ್ಕೆ ಅಮ್ಮ ಕ್ಯಾಕರಿಸಿ ಉಗಿದ್ರು (ಅವಿನಾಶ್ ಕಲಾಸಿಪಾಳ್ಯ ಫಿಲ್ಮಲ್ಲಿ ದರ್ಶನ್ ಗೆ ಬಯ್ಯೋ ಹಾಗೆ).
ಅಲ್ಲೇ ಇದ್ದ ಅಕ್ಕನ ನೋಟ, ದರ್ಶನ್ ರೌಡಿಗಳಿಗೆ ಕೊಡೋ ಲುಕ್ ಇತ್ತು.
ನಾನು ವಿಧಿಯಿಲ್ಲದೆ ದೇವಸ್ಥಾನದ ಕಡೆ ಹೆಜ್ಜೆ ಹಾಕಬೇಕಾಯಿತು....

ಇದೇನ ಸಭ್ಯತೆ ಇದೇನ ಸಂಸ್ಕೃತಿ...

ನಿನ್ನೆ ಕೆಲಸ ಮುಗಿಸಿಕೊಂಡು ಬಸ್ಸಿನಲ್ಲಿ ಹೋಗೋವಾಗ ಎಫ್ ಎಂ ಕೇಳ್ತಿದ್ದೆ, ಸಂಜೆ 6.30ಕ್ಕೆ 104 ಸ್ಟೇಶನ್ನಲ್ಲಿ ಏನೋ ಸ್ಪರ್ಧೆ ನಡೀತಾ ಇತ್ತು. ಸರಿ ಕೇಳೋಣ ಅಂದ್ಕೊಂಡು ಹಾಕಿ ಕುಳಿತೆ.
ಹಾಡು ಹೇಳೋ ಸ್ಪರ್ಧೆ ಅನ್ಸತ್ತೆ, ಒಬ್ಬಳು ಹುಡುಗಿ ಕರೆ ಮಾಡಿದ್ಲು. ಕಾರ್ಯಕ್ರಮ ನಡೆಸಿಕೊಡುವವನು ಶುರುಮಾಡಿ ಅಂದ, ಅವಳು 'ನಗುವ ನಯನ ಮಧುರ ಮೌನ...' ಅಂತ ಹಾಡಿದ್ಲು.
ಹಾಡಿದ ಮೇಲೆ, ಈ ನನ್ಮಗ ಆ ಹುಡುಗಿ ವಯಸ್ಸು ಕೇಳಿದ, ಅವಳು 19 ಅಂದ್ಲು. ಅದಕ್ಕೆ ಇವನು, ಇನ್ನೊಂದೆರಡು ವರ್ಷ ಜಾಸ್ತಿ ಇದ್ದಿದ್ರೆ ನಿಮ್ಮನ್ನ ಮದ್ವೆಯಾಗಿಬಿಡ್ತಿದ್ದೆ ಅನ್ನೋದಾ....
ಇದೇನಾ ಇವರುಗಳು ಇಲ್ಲಿವರೆಗೆ ಕಲಿತದ್ದು??
ಆ ಹುಡುಗನಿಗಂತೂ ಇನ್ನೂ ಬುದ್ಧಿ ಬಂದಿಲ್ಲ ಅಂದ್ರೂ ಆ ಸ್ಟೇಶನ್ನಲ್ಲಿ ಅವರನ್ನು ಸಂದರ್ಶನ ಮಾಡುವವರಿಗಾದ್ರೂ ಬುದ್ಧಿ ಬೇಡ್ವ???

ದಯವಿಟ್ಟು ಮಾನಿಟರ್ ಆರಿಸಿ ...

ನೀವು ಊಟಕ್ಕೆ ಹೋಗೋವಾಗ, ಕಾಫೀ, ಟೀ ಕುಡಿಯಲಿಕ್ಕೆ ಹೋಗೋವಾಗ ದಯವಿಟ್ಟು ಮಾನಿಟರ್ ಆರಿಸಿ ಹೋಗಿ.
ನಮ್ಮೂರಿನಲ್ಲಂತೂ ದಿನಕ್ಕೆ 6 ರಿಂದ 8 ಗಂಟೆ ಕರೆಂಟ್ ಇದ್ರೆ ಅದೇ ಹೆಚ್ಚು, ಅಲ್ಲಿಗೆ ಈ ಶತಮಾನ ಕಳೆದ್ರೂ ಜಾಸ್ತಿ ಕರೆಂಟ್ ಕೊಡೊಲ್ಲ. ಇಲ್ಲಾದ್ರು ಸ್ವಲ್ಪ ಉಳಿಸಿದ್ರೆ ಇಲ್ಲಿಗೇ ಇನ್ನೊಂದು ರೂಪದಲ್ಲಿ ಅನುಕೂಲ ಆಗತ್ತೆ.
ಯೋಚನೆ ಮಾಡಿ ಅಂತ ಹೇಳೋದಕ್ಕಿಂತ ಕಾರ್ಯರೂಪಕ್ಕೆ ತಗೊಂಡುಬನ್ನಿ ಅಂತ ಹೇಳೋದಕ್ಕೆ ಇಷ್ಟಪಡ್ತೀನಿ.

ನೀವೇನಂತೀರಿ???

ನಮ್ಮಕ್ಕನ ಮಗಳು ಒಂದು ಮೆಸೇಜ್ ಕಳ್ಸಿದ್ಲು....ಅದು ಹೀಗಿತ್ತು...
ಇವ‌ತ್ತಿನ‌ ಪ್ರಪ‌ಂಚ‌ದ‌ ನಿರಾಕ‌ರಿಸ‌ಲಾಗ‌ದ ಸ‌ತ್ಯಗ‌ಳು
1) ಇವ‌ತ್ತು ನ‌ಮ್ಮ ಹ‌ತ್ತಿರ‌ ದೊಡ್ಡ ಮ‌ನೆಗ‌ಳಿವೆ ಆದ‌ರೆ ಚಿಕ್ಕ ಕುಟುಂಬ‌.
2) ಜಾಸ್ತಿ ಪ‌ದ‌ವಿ ಆದ‌ರೆ ಸಾಮಾನ್ಯ ಜ್ನಾನ‌ ಕ‌ಡಿಮೆ.
3) ಕಾಯಿಲೆಗ‌ಳಿಗೆ ಹೊಸ‌/ಮುಂದುವ‌ರಿದ‌ ಚಿಕಿತ್ಸಾ ವಿಧಾನ‌ಗ‌ಳು ಆದ‌ರೆ ಕೆಟ್ಟ ಆರೋಗ್ಯ.
4) ಚ‌ಂದ್ರನ‌ನ್ನು ತ‌ಲುಪಿದ್ದೇವೆ ಆದ‌ರೆ ಪ‌ಕ್ಕದ‌ ಮ‌ನೆಯ‌ವ‌ರು ಯಾರು/ಹೇಗೆ ಅನ್ನೋದು ಗೊತ್ತಿಲ್ಲ.
5) ತುಂಬಾ ಆದಾಯ‌ ಆದ‌ರೆ ಮ‌ನ‌ಶ್ಯಾಂತಿ ಇಲ್ಲ.
ಲಿಸ್ಟ್ ಮಾಡ್ತಾ ಹೋದ್ರೆ ತುಂಬಾ ಇದೆ...


ಎಷ್ಟು ಸ‌ತ್ಯ ಅಲ್ವ???ನೀವೇನಂತೀರಿ???

ಅವ್ರು ಹಂಗೆ ನಾವ್ಯೆಲ್ಲ ಯಾಕೆ ಹಿಂಗೆ ???

ನಾನು ದಿನ ನಮ್ಮ ಆಫೀಸಿಗೆ ರಾಜಾಜಿನಗರದಿಂದ ಬಿ.ಎಂ.ಟಿ.ಸಿ ಬಸ್ಸಿನಲ್ಲಿ ಕೋರಮಂಗಲಕ್ಕೆ ಹೋಗ್ತೀನಿ. ಆ ಬಸ್ಸು ಮಹಾಲಕ್ಷ್ಮಿ ಲೇ ಔಟ್ನಿಂದ ಕೇಂದ್ರೀಯ ಸದನಕ್ಕೆ ಹೋಗುತ್ತೆ, ತುಂಬಾ ಜನ ಸರಕಾರಿ ನೌಕರರು ಅದರಲ್ಲಿ ಪ್ರಯಾಣ ಮಾಡ್ತರೆ. ಇವತ್ತು ನಾನು ಬ್ಯಾಗ್ ಹಾಕಿಕೊಂಡು ನಿಂತ್ಕೊಂಡಿದ್ದೆ, ಒಬ್ರು ಒಂದು 50 ವರ್ಷ ಇರಬಹುದು, ಅವ್ರದೊಂದು ಬ್ಯಾಗ್ ಇತ್ತು, ಪಾಪ ಆ ಮನುಷ್ಯ ನನ್ನ ಬ್ಯಾಗ್ನ ಕೇಳಿ ಇಟ್ಕೊಂಡ್ರು, ಅಲ್ದಲೆ ಇನ್ನೊಬ್ರದ್ದನ್ನು ಕೇಳಿ ಇಟ್ಕೊಂಡ್ರು. ಅವ್ರ ಹತ್ತಿರ 3 ಬ್ಯಾಗ್ .
ಎದುರುಗಡೆ ಒಬ್ಬ ಕೂತಿದ್ದ ನನ್ನ ವಯಸ್ಸಿನವನು, ಸುಮಾರು 24ರಿಂದ 27 ವರ್ಷ ಇರಬಹುದು. ಆ ಹುಡುಗ ಅವ್ರನ್ನ ನೋಡಿದ್ರು ನೋಡದವನ ಹಾಗೆ ಕೂತಿದ್ದ. ಆಮೇಲೆ ನಂಗೆ ಸೀಟು ಸಿಕ್ತು, ನಾನು 2 ಬ್ಯಾಗ್ ಅವ್ರಿಂದ ಇಸ್ಕೊಂಡು ಕೂತೆ.
ದೊಡ್ಡೋರಲ್ಲಿ ಇರೋ ಸಹಾಯ ಮನೋಭಾವ ನಮ್ಮಲ್ಲಿ ಯಾಕೆ ಇಲ್ಲ...
ಅವ್ರು ಹಂಗೆ ನಾವ್ಯೆಲ್ಲ ಯಾಕೆ ಹಿಂಗೆ???

Friday, March 20, 2009

ಒಂದು ದಿನದ ಸಕಲೇಶಪುರ ಟ್ರೆಕ್......

ಸಕಲೇಶಪುರ ಟ್ರೆಕ್ ಹೋಗಬೇಕು ಅಂತ 2 ವಷ‌೯ದಿಂದ ಅಂದುಕೊಂಡಿದ್ದ ನಾವು ಕೊನೆಗೂ 7ರಂದು ಹೋಗುವ ನಿಶ್ಛಯವಾಯಿತು.
ನಾನು,ವೆಂಕ,ಸೌಜ,ಜಯ,ಪಕ್ಯ,ಜುಮ್ಮ,ಮಿತ್ರೇಶ್,ಪಣಿ,ವಿನಯ್,ರಶ್ಮಿ,ಶುಭ,ಶ್ವೇತ ಒಟ್ಟು 12 ಜನ ರಾತ್ರಿ 12ಕ್ಕೆ ಟಿಟಿಯಿಂದ ಬೆಂಗಳೂರನ್ನು ಬಿಟ್ಟೆವು. ವೆಂಕನ ಕಾಲು ಎಳೆಯುವುದರಿಂದ ನಮ್ಮ ಪ್ರಯಾಣ ಶುರುವಾಯಿತು. ವೆಂಕ,ಸೌಜ,ಜಯ,ಪಕ್ಯ,ಚಿಕ್ಕ (ಮೀಟರ್, ಉಲ್ಲ, ಶೆಟ್ಟಿ ಈ ಟ್ರೆಕ್ಗೆ ಬಂದಿರ್ಲಿಲ್ಲ) ಇದ್ರೆ ಯಾರು ಯಾರ ಕಾಲು ಎಳಿತರೋ ದೇವ್ರೆ ಬಲ್ಲ.
ಅಂತು ನಿದ್ರೆ ಇಲ್ಲದೆ ಬೆಳಗ್ಗೆ 5.30ಕ್ಕೆ ದೋಣಿಗಾಲ್ ತಲುಪಿದ್ವಿ, ಕ್ಯಾಬ್ ಡ್ರೈವರ್ಗೆ ಸುಬ್ರಮಣ್ಯ ಸಮೀಪ ಗುಂಡ್ಯಕ್ಕೆ ಹೋಗೋದಕ್ಕೆ ಹೇಳಿ ದೋಣಿಗಾಲ್ ರೈಲ್ವೆ ಸ್ಟೇಶನ್ ತಲುಪಿದ್ವಿ , ಕೆಲವರು ದೇಹಬಾಧೆನ ತೀರಿಸಿಕೊಂಡ್ರು ಇನ್ನು ಕೆಲವರು ಬರ್ದಲೆ ಹಾಗೆ ಉಳಿಸಿಕೊಂಡ್ರು. ದೋಣಿಗಾಲ್ ರೈಲ್ವೆ ಸ್ಟೇಶನ್ನಲ್ಲಿ ಬ್ರಶ್ ಮಾಡಿ, ಮುಖ ತೊಳೆದು ತಂದಿದ್ದ ಕೇಕ್, ಕಾರ ಬನ್ ತಿಂದ್ಕೊಂಡು ಬ್ಯಾಗ್ ಏರಿಸ್ಕೊಂಡು 6 ಗಂಟೆಯಿಂದ ನಮ್ಮ ಟ್ರೆಕ್ ಶುರು ಮಾಡಿದ್ವಿ.ರೈಲ್ವೆ ಟ್ಱಾಕ್ನ್ ಮೇಲೆ ನಮ್ಮ ಪಯಣ ಸೇತುವೆ,ಸುರಂಗಗಳನ್ನು ದಾಟಿ ಸಾಗಿತು. ಸಣ್ಣ ಸೇತುವೆಗಳನ್ನು ದಾಟುವಾಗ ಮೊದ‌ಮೊದಲು ಸ್ವಲ್ಪ ಭಯವಾದರೂ ಈ ತರದ ದಾರಿಗಳು ನಮ್ಮ ಟ್ರೆಕ್ಗಳಲ್ಲಿ (ಇದೇ ಗ್ರೂಪ್, ಇಲ್ಲಿವರೆಗೆ ಏನಿಲ್ಲ ಅಂದ್ರು 10ರಿಂದ 12 ಟ್ರೆಕ್ ಮಾಡಿರಬಹುದು) ಮಾಮೂಲಿ ಆಗಿರೊದ್ರಿಂದ ದಾಟುವುದು ಅಷ್ಟು ಕಷ್ಟ ಆಗಲಿಲ್ಲ, ಅಲ್ಲದೆ ಮುಂದಿನ ಹಾದಿಯಲ್ಲಿ 15ರಿಂದ 20 ಸೇತುವೆ,ಸುರಂಗಗಳನ್ನು ಕ್ರಮಿಸಬೇಕಾಯಿತು, ಹಾಗಾಗಿ ಭಯ ಹೋಗಿ ಇದು ಸಾಮಾನ್ಯದ ಹಾದಿ ಎನ್ನುವ ಸ್ತಿತಿಗೆ ಬಂತು. ಹೊಟ್ಟೆ ಹಸಿದಾಗ ಆಗಾಗ ತಿನ್ನುವುದು, ಅಲ್ಲಲ್ಲಿ ಫೋಟೊ ತೆಗೆಯುತ್ತಾ, ಜಯನ ಫೋಟೊ ಹಾಳು ಮಾಡುತ್ತಾ , ಆಗಾಗ ಯಾರನ್ನಾದ್ರು ಕಾಡಿಸುತ್ತಾ, ಬಕ್ರ ಮಾಡುತ್ತ ನಮ್ಮ ಟ್ರೆಕ್ ಸಾಗ್ತಾ ಇತ್ತು.
ಮಧ್ಯಾಹ್ನ ಆಗ್ತಾ ಆಗ್ತಾ ಹೊಟ್ಟೆ ಹಸಿಯೋಕೆ ಶುರುವಾಯಿತು, ಒಂದು 10 ಕಿ.ಮೀ ನಡೆದಾಗಿತ್ತು, ಮಧ್ಯದಲ್ಲಿ ಒಂದು ಫಾಲ್ಸ್ ಸಿಕ್ತು, ನಾವು ಟ್ರೆಕ್ ಹೋದ ಕಡೆಯೆಲ್ಲಾ ಒಂದು ಫಾಲ್ಸ್ ಸಿಕ್ಕತ್ತೆ, ಅದೇನು ಪುಣ್ಯ ಮಾಡಿದೀವೋ ಗೊತ್ತಿಲ್ಲ , ಅಲ್ಲಿ ಸ್ವಲ್ಪ ನೀರಿನಲ್ಲಿ ಆಟ ಆಡಿ ಆಮೇಲೆ ಊಟ ಮಾಡಿ ಆದ ಮೇಲೆ ಮತ್ತೆ ಟ್ರೆಕ್ ಶುರುವಾಯಿತು, 8 ಕಿ.ಮೀ ನಡೆದ ಮೇಲೆ ಯಡಕಮುರಿ ರೈಲ್ವೆ ಸ್ಟೇಶನ್ ತಲುಪಿದ್ವಿ, ಆಗ ಸಮಯ ಸಂಜೆ 4.30. ಇಲ್ಲಿವರೆಗೆ ಎಲ್ಲಾ ಸರಿಯಾಗೇ ಇತ್ತು, ನಾವು ಅಂದುಕೊಂಡಿದ್ದು ಏನು ಅಂದ್ರೆ ಯಡಕಮುರಿಯಿಂದ ರಸ್ತೆ ಇದೆ ಅಲ್ಲಿಂದ ಗುಂಡ್ಯಕ್ಕೆ ಹೋಗಿ ಟಿಟಿನ ಹಿಡಿಬಹುದು ಅಂತ ತಿಳಿದುಕೊಂಡಿದ್ದೆವು.
ಆದರೆ......................ತಾನೊಂದು ಬಗೆದರೆ ದೈವವೊಂದು ಬಗೆದಂತೆ ಅನ್ನೊ ಹಾಗೆ....
ಇಲ್ಲಿವರೆಗೆ ಆಗಿದ್ದು ಟ್ರೆಕ್ ಆದ್ರೆ ಇನ್ನು ಮುಂದೆ ಆಗಿದ್ದು ಸಾಹಸ....
ಸ‌ರಿ, ಸ್ಟೇಶನ್ ತ‌ಲುಪಾದ‌ ಮೇಲೆ ಸ್ಟೇಶನ್ ಮಾಷ್ಟ್ರ‌ನ‌ ವಿಚಾರಿಸೋದ‌ಕ್ಕೆ ಹೋದ್ವಿ, ಅವ್ನು ಇನ್ನು 13 ಕಿ.ಮೀ ರೈಲ್ವೆ ಟ್ರ್ಯಾಕ್ ಮೇಲೆ ಟ್ರೆಕ್ ಮಾಡ‌ಬೇಕು ಸುಬ್ರಮಣ್ಯ ರೈಲ್ವೆ ಸ್ಟೇಶನ್ ತಲುಪ‌ಲ್ಲಿಕ್ಕೆ ಅಂದ್ರು, ಅಷ್ಟೊತ್ತಿಗೆ ಟಿಟಿ ಸಿಕ್ಕಿದ್ರೆ ಹೋಗಿ ಬಿದ್ಕೊಳ್ಳೊ ಪ‌ರಿಸ್ತಿತಿನ‌ಲ್ಲಿದ್ದ ನಾವು ಆ ವಿಚಾರ‌ ಕೇಳಿ ಸ್ವಲ್ಪ ಹೊತ್ತು ಏನು ಮಾಡ‌ಬೇಕು ಅಂತ‌ ತೋಚ‌ಲಿಲ್ಲ. ಆಮೇಲೆ ಯಾವ‌ದಾದ್ರು ಶಾಟ್೯ ಕ‌ಟ್ ಇದೆಯಾ ಅಂತ‌ ವಿಚಾರಿಸಿದಾಗ‌, ಕಾಡಿನ‌ ದಾರಿಯ‌ಲ್ಲಿ 6 ಕಿ.ಮೀ ಹೋದ್ರೆ ಗುಂಡ್ಯ ಸಿಗ‌ತ್ತೆ ಅಂದ್ರು, ಆದ್ರೆ ಅಲ್ಲಿ ಆನೆ ಮತ್ತೆ ವಿಷಸರ್ಪಗಳು ಇರುತ್ತದೆ ನೋಡ್ಕೊಂದು ಹೋಗಿ ಅಂದ್ರು ಅಲ್ಲದೆ ಒಂದು 4 ಕಿ.ಮೀ. ಆಚೆ ಒಂದು ಸಣ್ಣ ಡ್ಯಾಮ್ ಬರತ್ತೆ, 6 ಘಂಟೆಗೆ ನೀರು ಬಿಡ್ತರೆ ಅಷ್ಟರೊಳಗೆ ನೀವು ಹೋಗಬೇಕು ಅಂದ್ರು. ಆಗ ಸಮಯ 4.45. ಸ‌ರಿ ಅದೇ ದಾರಿನ‌ಲ್ಲೆ ಹೋಗೋಣ‌ ಅಂತ‌ ನಿಧಾ೯ರ ಮಾಡಿ ಕಾಡಿನ‌ ಹಾದಿ ಹಿಡಿದೆವು.
ಅಬ್ಬ!!!!! ಆ ದಾರಿ ನೋಡಿದ್ರೆ ಊರಿನಲ್ಲಿರೋರು ಇರ್ಲಿ ಕಾಡು ಮನುಷ್ಯರು, ಕಾಡು ಪ್ರಾಣಿಗಳು ಹೋಗೋದು ಕಷ್ಟ ಅನ್ನೋ ಸ್ತಿತಿಯಲ್ಲಿತ್ತು. ಪಾಪ ಆ ಹೆಣ್ಣುಮಕ್ಕಳ ಪ‌ರಿಸ್ತಿತಿಯಂತೂ ಹೇಳತೀರದು, 1 ಕಿ.ಮೀ ಕಷ್ಟಪಟ್ಟು ನಡೆದಾದ ಮೇಲೆ ಆ ರಸ್ತೆ ಕಥೆ ನೋಡಿ ಎಲ್ಲರನ್ನು ಒಂದು ಕಡೆ ನಿಲ್ಲಲು ಹೇಳಿ, ನಾನು ಜಯ,ಜುಮ್ಮ ಸ್ವಲ್ಪ ಮುಂದೆ ಹೋದೆವು, ಆಗ ಒಂದು ಸಣ್ಣ ಹೊಳೆ ಸಿಕ್ತು, ಜಯ ಮತ್ತು ಜುಮ್ಮ ಇಬ್ಬರನ್ನು ಒಂದು ಕಡೆ ನಿಲ್ಲಲು ಹೇಳಿ ನಾನು ಆ ಹೊಳೆಯನ್ನು ದಾಟಿ ಮುಂದಿನ ದಾರಿಯನ್ನು ಹುಡುಕಲು ಹೊರಟೆ, ಆ ದಾರಿ ಬಾರಿ ಕಿರಿದಾಗಿತ್ತು ಅಕಸ್ಮಾತ್ ಆನೆ ಬಂದಿದ್ರು ಎಸ್ಕೇಪ್ ಆಗೋ ಚಾನ್ಸೆ ಇರ್ಲಿಲ್ಲ, ಬಂದಿದ್ರು ಬಾರಣ್ಣ ನಿನಗೆ ಕಾಯ್ತಾ ಇದ್ದೆ ಅನ್ನಬಹುದಿತ್ತು ಅಷ್ಟೆ.
ಇನ್ನೇನು, ಆ ದಾರಿನಲ್ಲಿ ಹೋಗೋಕಾಗಲ್ಲ ಅಂತ ಅನ್ನಿಸಿದ ಮೇಲೆ ಜಯ,ಜುಮ್ಮ ಇರೋ ಕಡೆ ಬಂದು ವಾಪಸ್ ಹೋಗೋಣ ಅಂದೆ. ಜೀವ ಅನ್ನೋದಿದ್ರೆ ಇಂತ ಸಾವಿರ ಟ್ರೆಕ್ ಮಾಡಬಹುದು ಅಂದ್ಕೊಂಡು 'ಬಂದ ದಾರಿಗೆ ಸುಂಕ ಇಲ್ಲ' ಅಂದ್ಕೊಂಡು ವಾಪಸ್ ಮತ್ತೆ 1 ಕಿ.ಮೀ ನಡೆದು 'ಹಳೆ ಗಂಡನ ಪಾದವೇ ಗತಿ' ಅಂತ ಯಡಕಮುರಿ ರೈಲ್ವೆ ಸ್ಟೇಶನ್ ಹತ್ತಿರ ಬಂದ್ವಿ. ಅಷ್ಟೊತ್ತಿಗಾಗಲೆ ಎಲ್ಲರೂ ಹಣ್ಣುಗಾಯಿ ನೀರುಗಾಯಿ ಆಗಿದ್ವಿ.
ಸ್ಟೇಶನ್ ಮಾಷ್ಟರ್ (ಬಿಹಾರಿಯವನು) ನ‌ಮ‌ಗೆ ಆ ದಾರಿಯ‌ಲ್ಲಿ ಹೋಗ‌ಬೇಡಿ ಅಂತ‌ ಅಂದಿದ್ದ, ಆದ‌ರೂ ನಾವು ಅವ‌ನ‌ ಮಾತು ಕೇಳ‌ದೆ ಹೋಗಿದ್ದೆವು, ವಾಪ‌ಸ್ ಬ‌ಂದಾಗ‌ ಅವ‌ನು ನ‌ಮ್ಮನ್ನು ನೋಡಿ ಮ‌ನ‌ಸ್ಸಿನ‌ಲ್ಲೆ ಮ‌ಂಡಿಗೆ ತಿಂದಿರ್ತ‌ನೆ, ಸ‌ರಿ ಈಗ‌ ಅವ್ನೆ ನ‌ಮ‌ಗೆ ದೇವ್ರು ಆದ್ರೆ ಆ ದೇವ್ರನ್ನ ನ‌ಮ್ಮ ಕ‌ಡೆ ನೋಡೋ ಹಾಗೆ ಮಾಡೋದ‌ಕ್ಕೆ ಸೌಜ, ಕ‌ನ‌ಕ‌ದಾಸ‌ರು ಶ್ಱೀ ಕ್ರಿಶ್ಹ್ಣನಿಗೆ ಅವನ ಕಡೆ ನೋಡೋದಕ್ಕೆ ಪ್ರಯತ್ನ ಪ‌ಟ್ಟಿದ್ದಕ್ಕಿಂತ‌ಲೂ ಬಾರೀ ಕ‌ಷ್ಟಪ‌ಡ‌ಬೇಕಾಯಿತು, ಯಾಕ‌ಂದ್ರೆ ಗೂಡ್ಸ್ ರೈಲ್ ಆಗ್ಲಿ ಅಥವಾ ಪ್ಯಾಸೆಂಜರ್ ರೈಲ್ ಆಗ್ಲಿ ನಿಲ್ಸೋಕೆ ಆ ದೇವ್ರೆ ಸಿಗ್ನಲ್ ಬ‌ಟ‌ನ್ ಪ್ರೆಸ್ಸ್ ಮಾಡ್ಬೇಕಿತ್ತು ಅಂದ್ರೆ ಆತ‌ನ‌ ಅಪ್ಪಣ್ಣೆ ಬೇಕಾಗಿತ್ತು.
ಆಗ ಸಮಯ 6.15 ಆಗಿತ್ತು. ಸೌಜ ಸ್ಟೇಶನ್ ಮಾಷ್ಟರ್ ಹತ್ತಿರ ಬರೋ ರೈಲ್ ಬಗ್ಗೆ ಹೋಗಿ ವಿಚಾರಿಸಿಕೊಂಡು ಬಂದ, ನಾನು ಹೇಳಿದ್ರೂ ಗೂಡ್ಸ್ ರೈಲ್ ಡ್ರೈವರ್ ಒಪ್ಪಿದ್ರೆ ನಿಲ್ಲಿಸಬಹುದು ಅಂತ ಅವ್ನು ಹೇಳಿದ್ನಂತೆ, ಸರಿ ನಮ್ಮ ಹಣೆಬರಹ ಹೆಂಗಿರತ್ತೊ ಹಾಗೆ ಆಗತ್ತೆ ಅಂತ ಅಲ್ಲೆ ಪ್ಲಾಟ್ಫಾರ್ಮ್ನಲ್ಲಿ ಕೂತ್ಕೊಂಡ್ವಿ.
ಆಗ ವೆಂಕ ನಮ್ಮ ಹಾಗೆ ಟ್ರೆಕ್ ಬಂದವ್ರಲ್ಲಿ ಒಬ್ರನ್ನ ಮಾತಾಡ್ಸ್ತಿದ್ದ, ಅವ್ರು ಹೆಣ್ಣುಮಕ್ಕಳನ್ನ ನೋಡಿ, ಸಾರ್ ಇಲ್ಲಿಂದ 3.5 ಕಿ.ಮೀ ನಡೆದುಕೊಂಡು ಹೋದ್ರೆ ನಮ್ಮ ಪರಿಚಯದವರೊಬ್ರು ಜೀಪ್ನಲ್ಲಿ ಬರ್ತರೆ (ಅವ್ರ್ಯಾರಿಗೋ ಊಟ ಕೊಡೋದಕ್ಕೆ ಬಂದಿದ್ರಂತೆ) ನೀವು ಅಲ್ಲಿಗೆ ಹೋದ್ರೆ ಗುಂಡ್ಯ ತನಕ ಜೀಪ್ನಲ್ಲಿ ಹೋಗಬಹುದು ಅಂದ್ರು, ಆದ್ರೆ ಕಾಡಾನೆಗಳು ರಾತ್ರಿ ಹೊತ್ತು ಬರೋ ಚ್ಯಾನ್ಸ್ ಇರತ್ತೆ ನೋಡ್ಕೊಂಡು ಹೋಗ್ಬೇಕು ಅಂದ್ರು, ಸರಿ ಹಾಗೆ ಮಾಡುವ ಅಂತ ಎಲ್ಲರನ್ನು ಕೇಳಿದ್ರೆ ಹೆಣ್ಣುಮಕ್ಕಳ್ಯಾರು ನಮ್ಮ ಹತ್ತಿರ ಇನ್ನೊಂದು ನಯಾಪೈಸೆಯಷ್ಟು ದೂರನೂ ನಡೆಯೋಕಾಗಲ್ಲ ಅಂದ್ರು.
ಛೆ, ಏನಪ್ಪ ಮಾಡೋದು ಅಂತ ಯೋಚಿಸುತ್ತಿರುವಾಗ...
ನಾನು ಅಲ್ಲಿದ್ದವರಿಗೆ, ನಾನು, ವೆಂಕ ಜೀಪ್ ಇರೋ ಜಾಗಕ್ಕೆ ಹೋಗಿ ಅಲ್ಲಿಂದ‌ ಗುಂಡ್ಯಕ್ಕೆ ಹೋಗಿ ಆಮೇಲೆ ಸುಬ್ರಮಣ್ಯಕ್ಕೆ ಹೋದ್ರೆ ಹೆಂಗೆ ಅಂದೆ. ಅದಕ್ಕೆ ಎಲ್ಲರೂ ಬೇಡ ಅಂದ್ರು, ಸ್ವಲ್ಪ ಹೊತ್ತಾದ ಮೇಲೆ ಸೌಜ, ಸರಿ ಹಾಗೆ ಮಾಡಿ ಅಂದ.
ವೆಂಕ ನಾನು ಹೊರಟ್ವಿ.ಮೊದಲೇ ಸುಸ್ತಾಗಿ ಹೋಗಿದ್ದ ನಾವು ವಿಧಿಯಿಲ್ಲದೆ ನಡೆಯಬೇಕಾಯಿತು. 6.30, ಕತ್ತಲಾಗುತ್ತಾ ಬರುತ್ತಿತ್ತು. ಆನೆ, ಹಾವುಗಳ ಭಯ, ಸರಿ 2 ಕಿ.ಮೀ ಹೋಗಿರಬೇಕು, ಆಗ ಊಟ ತರುತ್ತಿರುವವರು ಸಿಕ್ಕಿದ್ರು, ಅವ್ರನ್ನ ಕೇಳಿದಾಗ, ಸಾರ್ ಅವ್ರು ಬಹುಶಃ ಹೋಗಿರ್ತಾರೆ, ಯಾಕಂದ್ರೆ ಆ ದಾರಿಯಲ್ಲಿ ಆನೆಗಳು ತುಂಬಾ ಇವೆ. ಇಲ್ಲಿವರೆಗೆ ಬಂದಿದ್ದೀರಾ ಅಲ್ಲಿ ತನಕ ಹೋಗಿ ಬನ್ನಿ ಅಂತ ಅಂದ್ರು.
ಈಗ‌ ಇಬ್ಬರಿಗೂ ಮ‌ತ್ತೊಂದು ಸ‌ಮ‌ಸ್ಯೆ ಎದುರಾಯಿತು. ಅಕ‌ಸ್ಮಾತ್ ಜೀಪ್ ಅಲ್ಲಿಲ್ಲ ಅಂದ್ರೆ ಏನು ಮಾಡುವುದು???1. ಗೂಡ್ಸ್ ರೈಲಿಗೆ ಅಡ್ಡ ಹಾಕುವುದು.2. ಇನ್ನೊಂದು ವಾಪ‌ಸ್ ಯ‌ಡ‌ಕ‌ಮುರಿ ರೈಲ್ವೇ ಸ್ಟೇಷನ್ ಹೋಗುವುದು (ಮ‌ತ್ತೆ 3.5 ಕಿ.ಮೀ).
ಜೀಪ್ ಇರೋ ಜಾಗ‌ದ‌ ಹ‌ತ್ತಿರ‌ ಸ‌ಮೀಪಿಸುತ್ತಿರುವಾಗ‌ ನ‌ಮ‌ಗೆ ಅಲ್ಲಿ ಕೆಲ‌ಸ‌ ಮುಗಿಸಿ ಮ‌ನೆಗೆ ಹೋಗುವುದ‌ಕ್ಕೆ ‍ಕಾಯುತ್ತಿದ್ದ ರೈಲ್ವೇ ಕಾರ್ಮಿಕ‌ರು ಸಿಕ್ಕಿದ್ರು, ಮುಂದೆ ರ‌ಸ್ತೆ ಇದೆ ಹೋಗಿ ನೋಡು ಅಂದ್ರು, ಆಗ‌ ಸುಬ್ರಮಣ್ಯಕ್ಕೆ ಬರುವ ಗೂಡ್ಸ್ ರೈಲ್ ಸ‌ದ್ದಾಯಿತು. ನಾವು ಜೀಪ್ ಇದೆಯಾ ಅಂತ‌ ನೋಡ‌ಲು ಒಂದು ಸ‌ಣ್ಣ ಸೇತುವೆ ಮ‌ತ್ತೆ ಸುರ‌ಂಗ‌ವ‌ನ್ನು ದಾಟ‌ಬೇಕಾಗಿತ್ತು, ಇತ್ತ ಕ‌ಡೆ ಗೂಡ್ಸ್ ರೈಲ್ ಅತ್ತ ಕ‌ಡೆ ಜೀಪ್....
ಆಗ ನಾನು, ವೆಂಕ ನೀನು ಇಲ್ಲೇ ಇರು ನಾನು ಆ ಸೇತುವೆ ಮ‌ತ್ತೆ ಸುರಂಗ ದಾಟಿ ಜೀಪ್ ನೋಡ್ಕೊಂಡು ಬೇಗ ಓಡಿ ಬರ್ತೀನಿ ಅಂದೆ, ಸರಿ ಹಾಗೇ ಮಾಡು ಆದ್ರೆ ಎಲ್ಲಾ ಬೇಗ ಆಗ್ಬೇಕು ಅಂದ, ಅಂದ್ರೆ ಆ ಟೈಮಲ್ಲಿ ಸೇತುವೆ ಮ‌ತ್ತೆ ಸುರಂಗ ದಾಟಿ ಜೀಪ್ ನೋಡಿ ಮತ್ತೆ ವಾಪಸ್ ಬಂದು ರೈಲ್ ನಿಂತ್ರೆ ಹತ್ತಬೇಕಾದಂತ ಪರಿಸ್ಥಿತಿ.

ಸರಿ ಓಡಿದೆ, ಹೋಗಿ ನೋಡಿದ್ರೆ ಆಗಿನ್ನೂ ಜೀಪ್ ಹೋದ ಸದ್ದು ಕೇಳಿಸ್ತು. ವಿಧಿಯಿಲ್ಲದೆ ಮತ್ತೆ ವಾಪಸ್ ಆಗ್ಬೇಕು, ಮತ್ತೆ ಓಡಿ ಅಂತೂ ವೆಂಕ ಇರೋ ಜಾಗ ತಲುಪಿದೆ. ಇನ್ನೇನು ಈ ಕಾರ್ಮಿಕರು ರೈಲ್ ನಿಲ್ಲಿಸ್ತಾರೆ ನಮ್ಮನ್ನೂ ಹತ್ತಿಸಿಕೊಂಡು ಹೋಗ್ತಾರೆ ಅಂತ ಸ್ವಲ್ಪ ಧೈರ್ಯ ಬಂತು (ಯಾಕಂದ್ರೆ ವೆಂಕ,ನಾನು ಅವರೊಟ್ಟಿಗೆ ಮಾತಾಡಿ ಚೆನ್ನಾಗಿ ಪರಿಚಯ ಮಾಡಿಕೊಂಡಿದ್ವಿ.

ರೈಲ್ ಬಂತು ಅವ್ರು ಅಡ್ಡ ಹಾಕಿದ್ರು ಆದ್ರೆ ಉಹುಂ ನಿಲ್ಲಿಸ್ಲಿಲ್ಲ....

ನಾನು,ವೆಂಕ ಜೊತೆಗೆ ಆ ಕಾರ್ಮಿಕರು, ಬ್ಯಾಗ್ನಲ್ಲಿ ತಿನ್ನೋದಕ್ಕೆ ಏನೂ ಇಲ್ಲ, ವೆಂಕ ಟ್ರಿಪ್ನಲ್ಲಿ ದುಡ್ಡು ಕೊಟ್ಟು ಪರ್ಸ್ ಖಾಲಿ ಮಾಡ್ಕೊಂಡಿದ್ದ, ನಾನು ಆ ತಿಂಗಳು ಬರ್ಬಾದ್ ಆಗಿಹೋಗಿದ್ದೆ. ಚಿಕ್ಕ ಎಷ್ಟಿದೆಯೋ ದುಡ್ಡು ಅಂದ, ತೆಗೆದು ನೋಡಿದೆ 100 ಇತ್ತು, ತೋರ್ಸಿದೆ.

ರಾತ್ರಿ 7:30, ಜೇಬ‌ಲ್ಲಿ ದುಡ್ಡಿಲ್ಲ, ತಿನ್ನೋದ‌ಕ್ಕೆ ಏನಿಲ್ಲ, ಮೊಬೈಲ್ ಸಿಗ್ನಲ್ ಇಲ್ಲ, ವೆಂಕ‌ನ‌ ಮೊಬೈಲ್ ಚಾರ್ಜಿಲ್ಲದೆ ಬೇಸ‌ತ್ತು ನಿದ್ರೆ ಮಾಡ್ತಿತ್ತು, ನ‌ನ್ನ ಮೊಬೈಲ್ ಎಲ್ಲೋ ಸ್ವಲ್ಪ ಜೀವ‌ ಇಟ್ಕೊಂಡಿತ್ತು, ಅದಕ್ಕೂ ಸುಸ್ತಾಗಿ ಹೋಗಿತ್ತು, 2 ದಿನ‌ ಚಾರ್ಜಿಲ್ಲದೆ.

ಈಗೇನು ಮಾಡ್ಬೇಕು ಅಂತ‌ ಗೊತ್ತಾಗ‌ದೆ ಸ್ವಲ್ಪ ಹೊತ್ತು ಹಾಗೆ ಕೂತ್ಕೊಂಡ್ವಿ, ಅಷ್ಟೊತ್ತಿಗೆ ಸುಬ್ರಮಣ್ಯ . ವೆಂಕ‌, ಮುಂದೆ ಹೋಗಿ ಸಿಗ್ನಲ್ ಸಿಗ‌ತ್ತೇನು ಅಂತ‌ ನೋಡ್ಕೊಂಡು ಬ‌ರ್ತೀನಿ ಇಲ್ಲೇ ಇರು ಅಂದೆ, ಸ‌ರಿ ಅಂದ‌. ತುಂಬಾ ಕ‌ತ್ತಲು, ಕ್ಷಣ ಕ್ಷಣ‌ ಮೊಬೈಲ್ ಚಾರ್ಜ್ ಕ‌ಡಿಮೆಯಾಗ್ತಿತ್ತು

ಇವ್ನಿಗೆ ಗೊತ್ತು ಅಂತ ಖುಷಿಪಡ್ಲೋ ಅಥವಾ ಅವ್ಳಿಗೆ ಗೊತ್ತಿಲ್ಲ ಅಂತ ದುಃಖ‌ಪಡ್ಲೋ....

ಸ್ವಲ್ಪ ದಿನದ ಹಿಂದೆ ನಾನು ಮತ್ತೆ ನನ್ನ ಫ್ರೆಂಡ್ (ಸರಬ್ಜಿತ್ ಸಿಂಗ್ ಅವ್ನ ಹೆಸ್ರು) ಊಟಕ್ಕೆ ಬೈಕ್ನಲ್ಲಿ ಹೋಗ್ತಿದ್ವಿ. ಒಂದು ಸಿಗ್ನಲ್ ಸಿಕ್ತು ಬೈಕ್ ನಿಲ್ಲಿಸಿಕೊಂಡಿದ್ವಿ, ಸ್ವಲ್ಪ ಹೊತ್ತಾದ ಮೇಲೆ ನಾನು ಬಲಕ್ಕೆ ತಿರುಗಿದೆ, ಆಗ ಒಬ್ರು ಆಟೋ ಡ್ರೈವರ್ ನಮ್ಮನ್ನೆ ಪಿಳಿಪಿಳಿ ಅಂತ ನೋಡ್ತಿದ್ರು.
ನಾನು ಏನು ಸಾರ್ ಹಾಗೆ ನೋಡ್ತಿದ್ದೀರಾ ಅಂದೆ...
ಅದಕ್ಕೆ ಅವ್ರು ನ‌ಂಗೆ, ಸಾರ್ ನೀವು ಮೊಬೈಲಿನ‌ಲ್ಲಿ ಮಾತಾಡ್ತಿದ್ದೀರಾ ಅಂತ‌ ಅನ್ದ್ಕೊಂಡೆ ಆದ್ರೆ ಮ‌ತ್ತೆ ಅನುಮಾನ‌ ಬ‌ಂತು ಅಂದು ನನ್ನ ಫ್ರೆಂಡ್ ಕ‌ಡೆ ತಿರುಗಿ, ಏನ್ಸಾರ್ ಇಷ್ಟು ಚೆನ್ನಾಗಿ ಕ‌ನ್ನಡ‌ ಮಾತಾಡ್ತೀರಾ ಅಂತ‌ ಕೇಳಿದ್ರು, ಅದ್ಕೆ ಇವ್ನು ಹೂಂ ಸಾರ್ ಬ‌ರ‌ತ್ತೆ (ತುಂಬಾ ವ‌ರ್ಷ‌ದ‌ ಹಿಂದೆ ಅವ್ರು ಮೈಸೂರಿನ‌ಲ್ಲಿ ವಾಸ‌ವಾಗಿದ್ದಾರೆ) ಅಂತ‌ ಅಂದ‌.
ಲಿಪಿ ಬ‌ರೆಯೋಕೆ ಬ‌ರ‌ತ್ತಾ ಸಾರ್ ಅಂದ್ರು, ಇವ್ನು ಬ‌ರ‌ತ್ತೆ ಅಂದ‌.
ಆಗ‌ ಅವ್ರು, ನ‌ನ್ನ ಮ‌ಗ‌ಳು ಇದ್ದಾಳೆ ಸಾರ್ (ಬಿ.ಎಸ್ಸಿ ಮಾಡ್ತಿದ್ದಾರ‌ಂತೆ) ಆದ್ರೆ ಅವ್ಳಿಗೆ ಲಿಪಿ ಅಷ್ಟು ಚೆನ್ನಾಗಿ ಬ‌ರ‌ಲ್ಲ ಅಂತ‌ ಅಂದ್ರು!!!!
ಇವ್ನು ಬಿಡಿ ಇಲ್ಲಿಗೆ ಬಂದು ಪೂರ್ತಿ ಕ‌ನ್ನಡ‌ದ‌ವ‌ನೆ ಆಗಿದ್ದಾನೆ, ಆದ್ರೆ ಇಲ್ಲೇ ಹುಟ್ಟಿರೋರ‌ ಕ‌ಥೆ ಹೀಗೆ...

ಕರ್ವಾಲೋ ಓದಿದಾಗ....


ತೇಜಸ್ವಿಯವರ ಕರ್ವಾಲೋ ಓದಿದಾಗ ನನಗನಿಸಿದ್ದು...
1) ಚಾರಣ ಮಾಡಿದ ಅನುಭವ.
2) ನನ್ನ ಊರಿನ ಜನಗಳೊಂದಿಗೆ ಮಾತಾಡಿದ ಅನುಭವ.
3) ತೋಟದಲ್ಲಿ ತಿರುಗಾಡಿದ ಅನುಭವ.
4) ಅದರಲ್ಲಿಯ ತೇಜಸ್ವಿ ಪಾತ್ರ ನಮ್ಮಪ್ಪನಿಗೆ ಹೋಲಿಕೆಯಾದ ಅನುಭವ.
ಒಟ್ಟಿನಲ್ಲಿ ಒಂದು ಸರಳವಾದ ಸುಂದರವಾದ ಪುಸ್ತಕ‌

ಲಗೋರಿ, ಚಿನ್ನಿದಾಂಡು, ಗೋಲಿ, ಬುಗುರಿ...


ನಮ್ಮ ಆಫೀಸ್ ಎದುರುಗಡೆ ಸ್ಕೂಲಿದೆ, ಅಲ್ಲಿ ಹುಡುಗಿಯರು ಕುಂಟಬಿಲ್ಲೆ ಆಡ್ತಿದ್ರು ಅದನ್ನು ನೋಡಿ ನನ್ನ ಹಳೆಯ ದಿನಗಳು ಜ್ನಾಪಕಕ್ಕೆ ಬಂತು.
ಎಷ್ಟು ಚೆನ್ನಾಗಿತ್ತಲ್ವ ಲಗೋರಿ, ಚಿನ್ನಿದಾಂಡು, ಗೋಲಿ, ಬುಗುರಿ, ಮರಕೋತಿಯಾಟ, ಕಳ್ಳ ಪೋಲಿಸ್ ಇನ್ನೂ ಏನೇನೋ....ಆಮೇಲೆ ಯಾವುದೇ ರೀತಿಯ ಚಿಂತೆಗಳಿರಲಿಲ್ಲ.
ಈಗ, ನಾವು ಉಸಿರಾಡ್ತ ಇದೀವಾ ಅಂತ ತಿಳಿದುಕೊಳ್ಳೋದಕ್ಕೂ ಪುರುಸೊತ್ತಿಲ್ಲ

ಕೆಲಸಕ್ಕೆ ಹೋಗುತ್ತಿದ್ಡಾಗ ಓಕಳಿಪುರಂ ಹತ್ತಿರ....

ನಾನು ಬಸ್ಸಿನಲ್ಲಿ ಕಂಪನಿಗೆ ಹೋಗುವಾಗ ಹಾಗೆ ಸುಮ್ಮನೆ ಗೋಡೆಗಳಲ್ಲಿ ಬರೆದಿರುವ ಚಲನಚಿತ್ರಗಳ ಮೇಲೆ ಕಣ್ನು ಹಾಯಿಸುತ್ತಿರುತ್ತೇನೆ....ಹಾಗೆ ಒಂದು ದಿನ ಕೆಳಗಿನ ಚಲನಚಿತ್ರಗಳ ಹೆಸರುಗಳನ್ನು ನೋಡಿ....
1) ಸುನಾಮಿ.2) ಒಂಟಿಮನೆ.3) ನಿನಗಾಗಿ ಕಾದಿರುವೆ.4) ಜೋಶ್.
ಹೀಗೆ ಬರೆಯುವ ಮನಸ್ಸಾಯ್ತು...
ಒಂಟಿಮನೆಯಲ್ಲಿ ನಿನಗಾಗಿ ಕಾದಿರುವ ಸುನಾಮಿ ಎಂಬ ಜೋಶ್....

ನಾಯಿ ಇದೆ ಎಚ್ಚರಿಕೆ.....!!!!

ನಾಯಿಯನ್ನು (ನಾಯಿ ಇದೆ ಎಚ್ಚರಿಕೆ ಅಂತ ಬೋರ್ಡ್ ಹಾಕಿರುವ) ಸಾಕಿರುವ ಬೆಂಗಳೂರಿನ ಬಾಂಧವರೆಲ್ಲರಿಗೂ ನನ್ನ ನಮಸ್ಕಾರಗಳು.
ಏನ್ರಣ್ಣ ಚೆನ್ನಾಗಿದ್ದೀರಾ?.
ನಿಮ್ಮ ನಾಯಿ ಚೆನ್ನಾಗಿದೆಯಾ?.
ನಿಮ್ಮ ನಾಯಿಗೆ ನೀವು ತಿನ್ನೋ ತಿಂಡಿ/ಊಟನೆ ಕೊಡ್ತೀರಲ್ಲ.... ಇಲ್ಲಂದ್ರೆ ಅದಕ್ಕೆ ವಿಶೇಷವಾಗಿರೋ ಸ್ನ್ಯಾಕ್ಸ್ ಕೊಡ್ತೀರಾ...
ನಿಮ್ಮ ಸೋಫಾ ಮೇಲೆ ಮಲಗಿಸಿಕೊಳ್ತೀರಾ...ಇಲ್ಲಂದ್ರೆ ಅದಕ್ಕೆ ಒಂದು ರೂಮ್ ಮಾಡ್ಸಿರ್ತೀರಾ...
ಎಲ್ಲ ಸರಿ...ಆದ್ರೆ....
ಎಲ್ಲ ವ್ಯವ‌ಸ್ತೆ ಮಾಡೋ ನೀವು ಅದ‌ಕ್ಕೆ ಒಂದು ಟಾಯ್ಲೆಟ್ ಮಾಡೋಕಾಗ‌ಲ್ವ?
ಸಾರ್ವ‌ಜ‌ನಿಕ‌ರು ಉಪ‌ಯೋಗಿಸೋ ಜಾಗ‌ನ‌ ಹೊಲ‌ಸು ಮಾಡೋಕೆ ನಿಮ‌ಗೆ ಅನುಮ‌ತಿ ಕೊಟ್ಟೋರು ಯಾರು?
ಅಪ‌ರಿಚಿತ‌ರ‌ನ್ನು ನಿಮ್ಮ ಮ‌ನೆಗೆ ಬಿಡ‌ದ‌ ನಾಯಿಯ‌ನ್ನ ಅಪ‌ರಿಚಿತ‌ ಜಾಗ‌ಕ್ಕೆ ಕ‌ರೆದುಕೊಂಡು ಹೋಗಿ ಯಾಕೆ ಹಾಳು ಮಾಡ್ತೀರಾ?
ಏನಂತೀರಾ??

ಕ‌ಕ್ಕಾಬಿಕ್ಕಿ.....

ಕೆಲಸ ಮುಗಿಸಿಕೊಂಡು ಸುಜಾತ ಟಾಕೀಸ್ ಹತ್ತಿರ ಬಸ್ಸಿನಿಂದ ಇಳಿದು ಅಕ್ಕನ ಮನೆಗೆ ನಡೆದುಕೊಂಡು ಹೋಗ್ತಿದ್ದೆ, ಅಲ್ಲೊಂದು ಬ್ಯಾಂಕ್ ಹತ್ತಿರ ಇದ್ದಕ್ಕಿದ್ದ ಹಾಗೆ ಒಬ್ಬಬಿದ್ದು ಒದ್ದಾಡ್ತ ಇದ್ದ, ಅವನ ಜೊತೆ ಅವನ 3 ಗೆಳೆಯರು ಇದ್ರು, ಸುಮಾರು 25 ವರ್ಷ ವಯಸ್ಸಿನವರಿರಬಹುದು. ಅವನು ಒದ್ದಾಡೋದು ನೋಡಿ ಅವ್ರೆಲ್ಲ ಗಾಬರಿಯಾಗಿ ಅವನನ್ನು ಹಿಡ್ಕೊಂಡು ಏನೋ ತಮಿಳಲ್ಲಿ ಉಡ್ರ ಉಡ್ರ ಮಚ ಅಂತಿದ್ರೆ ವಿನಹ ಏನು ಮಾಡ್ಬೇಕು ಅಂತ ಗೊತ್ತಾಗ್ತಿರ್ಲಿಲ್ಲ. ನಾನು ಫಿಟ್ಸ್ ಏನ್ರಿ ಅಂತ ಅವ್ರನ್ನ ಕೇಳಿದಕ್ಕೆ ಅವ್ರು ಇರ್ಬೇಕು ಸಾರ್ ಅಂದ್ರು, ಸರಿ ನಾನು ನನ್ನ ಬ್ಯಾಗ್ನಲ್ಲಿದ್ದ ಕೀ ಅವನ ಕೈಗೆ ಕೊಟ್ಟೆ.
ಒಂದು ನಿಮಿಷ ಏನು ಬದಲಾವಣೆ ಆಗೋ ಲಕ್ಷಣ‌ ಕಾಣಲಿಲ್ಲ, ಬಾಯಿಗೆ ಕೀ ಇಡ್ರಿ ಅಂದೆ, ಅವ್ನು ಇಟ್ಟ, ಉಹುಂ ಆಗ್ಲೂ ಏನು ಬದಲಾವಣೆ ಇಲ್ಲ. ನಾನು ಏನು ಕಥೆನಪ್ಪ ಇದು ಅಂತ ಯೋಚ್ನೆ ಮಾಡ್ತಿರೋ ಹೊತ್ತಿಗೆ ಅವ್ನ ಇನ್ನೊಬ್ಬ ಗೆಳೆಯ ಬಂದು, ಸಾರ್ ಆ ನನ್ಮಗ ಕುಡ್ಕೊಂಡು ಟೈಟ್ ಆಗವ್ನೆ, ನೀವು ಕೀ ಇಸ್ಕೊಂಡು ಹೋಗಿ ಅಂದ!!!!
ನಾನು ಕ‌ಕ್ಕಾಬಿಕ್ಕಿ.....
ಟ್ರ್ಯಾಜಿಡಿನ‌ಲ್ಲಿ ನ‌ಡಿಬೇಕಾಗಿದ್ದ ಕ‌ಥೆ ಕಾಮಿಡಿ ಟ್ರ್ಯಾಕ್ಗೆ ಬ‌ಂದು ನಿಲ್ತು....

ಒಂದ್ಸಾರಿ ತಿರುಗಿ ನೋಡ್ಬಿಟ್ಟೆ...

ನಮ್ಮ ಅಕ್ಕನ ಮನೆಯಿಂದ ಊಟ ಮಾಡಿ ವಾಪಸ್ ಮನೆಗೆ ಹೋಗ್ತಿದ್ದೆ. ನವರಂಗ್ ಹತ್ತಿರ ಒಂದು ಮನೆ ಹೊರಗಡೆ ಒಂದು ಹುಡುಗಿ ಬಟ್ಟೆ ತೊಳಿತಿದ್ಲು, ಮುಂದುಗಡೆಯಿಂದ ಬಂದ ಒಬ್ಬ ಹುಡುಗ ಅವಳನ್ನ ಹಾಗೆ ತಿರುಗಿ ನೋಡಿಕೊಂಡು ಹೋದ. ಆ ಹುಡುಗಿ ಅವನನ್ನೇನು ನೋಡಲಿಲ್ಲ ಆದರೆ ಆ ಕ್ಷಣಕ್ಕೆ ಸರಿಯಾಗಿ ನೋಡ್ಬಿಟ್ ನೋಡ್ಬಿಟ್ ನೋಡ್ಬಿಟ್ಟೆ ಒಂದ್ಸಾರಿ ತಿರುಗಿ ನೋಡ್ಬಿಟ್ಟೆ ಅಂತ ಹಾಡು ಹೇಳಿದ್ಲು...
ಆ ತರ ಸನ್ನಿವೇಶಕ್ಕೆ ಅವರಿಬ್ಬರು ಸಾಕ್ಷಿಯಾಗಿದ್ರೂ, ಅವರಿಗೆ ಅದರ ಅನುಭವ ಆಗಲಿಲ್ಲ...
ಸುಮ್ನೆ ಹೋಗ್ತಿದ್ದ ನನಗೆ ಆಗಿದ್ದು ಸೋಜಿಗ...

ಕೈ ಇರೋವಾಗ ಬಾಯಿ ಯಾಕಯ್ಯಾ?

ನಾವೆಲ್ಲಾ ಗೆಳೆಯರು ನಮ್ಮ ಒಬ್ಬ ಗೆಳೆಯನ ಮದುವೆಗೆ ಮೊಳಕಾಲ್ಮೂರಿಗ ಹೋಗಿದ್ದೆವು, ಮುಹೂರ್ತ ಆದ ಮೇಲೆ ಎಲ್ಲರೂ ಊಟಕ್ಕೆ ಹೋಗಿ ಕುಳಿತೆವು. ಎಲ್ಲರಿಗೂ ಊಟ ಹಾಕಿಕೊಂಡು ಬರ್ತಿದ್ರು, ಎಲೆ ಮೇಲೆ ಪಲ್ಯ, ಪಾಯಸ ಆಸೀನವಾಗಿದ್ದವು.
ಇದ್ದಕ್ಕಿದ್ದಂತೆ ಮೋಹನ್ (ಮೀಟರ್ ಅಂತ ಅಡ್ಡ ಹೆಸರು) ಸ್ವಲ್ಪ ಎಡವಿದ, ಅವನ ಬಾಯಿ ಎಲೆಯ ಹತ್ತಿರ ಹೋಯ್ತು, ಆಗ ಮೇಘರಾಜ್ (ಕೊಪ್ಪಅಂತ ಅಡ್ಡ ಹೆಸರು)ಮೀಟರಿಗೆ 'ಕೈ ಇರೋವಾಗ ಬಾಯಿ ಯಾಕೆ ಹಾಕ್ತೀಯೋ ಮೀಟರ್' ಅಂತ ಅಂದ. ತಕ್ಷಣ, ಮೀಟರ್

'ಪಾಯಸ ನೋಡಿ ತುಂಬಾ ದಿನ ಆಗಿತ್ತು ಕೊಪ್ಪ, ಹಾಗಾಗಿ ಬಾಯಿ ಅಲ್ಲಿಗೆ ಹೋಯ್ತು' ಅಂತ ಎನ್ನಬೇಕೆ...

(ಅ)ತಿಥಿ

ಒಂದು ದಿನ‌ ನಮ್ಮ ಅಕ್ಕನ ಮನೆಯಿಂದ ಊಟ ಮಾಡಿ ವಾಪಸ್ ಮನೆಗೆ ಹೋಗ್ತಿದ್ದೆ. ರಾಜಾಜಿನಗರ 2ನೇ ಬ್ಲಾಕ್ ಹತ್ತಿರ ಒಂದು ಬಾರ್ ಇತ್ತು, ಅದರ ಹೆಸರು 'ಅತಿಥಿ ಬಾರ್ ಮತ್ತು ರೆಸ್ಟೋರೆಂಟ್', ಅದನ್ನು ನೋಡಿದಾಗ ಅಲ್ಲಿ ಮನಸ್ಸಿಗೆ ಬಂದದ್ದು ಹೀಗೆ....
ಒಳಗೆ ಹೋಗುವಾಗ ಅವನು ಅತಿಥಿ
ಹೊರಗೆ ಬರುವಾಗ ಅವನ ತಿಥಿ

Thursday, March 19, 2009

ಆಗ ಡಿ ಡಿ ಒಂದು ಈಗ ನೂರೊಂದು..

ಆಗೆಲ್ಲ ಮನೆಗಳಲ್ಲಿ ಒಂದು ಟಿ.ವಿ, ಒಂದೇ ಚಾನೆಲ್.
ಅದರಲ್ಲಿ ಬರೋ ಕಾರ್ಯಕ್ರಮಗಳಿಗೆ ಕಾತರದಿಂದ ಕಾಯ್ತಿದ್ವಿ, ಕನ್ನಡ ಬರೋಕಿಂತ ಮೊದ್ಲು...
ರಾಮಾಯಣ, ಮಹಾಭಾರತ, ಚಿತ್ರಹಾರ್, ಮೋಗ್ಲಿ, ತೆಹಕಿಕಾತ್, ಮಾಲ್ಗುಡಿ ಡೇಸ್, ಸ್ಟ್ರೀಟ್ ಹಾಕ್, ರಂಗೋಲಿ.
ಆಮೇಲೆ ಕರ್ನಾಟಕ ಪ್ರಾದೇಶಿಕ ಪ್ರಸಾರ ಬಂದ್ಮೇಲೆ...
ಮಾಯಾಮೃಗ, ಗುಡ್ಡದ ಭೂತ, ಚಿತ್ರಮಂಜರಿ, ಭಾನುವಾರದ ಸಂಜೆಯ ಚಲನಚಿತ್ರ.
ಆದರೆ ಈಗ, ಬೇಡ ಬಿಡಿ

ರೈಲ್ವೆ ಇಲಾಖೆ ಲಾಭದಲ್ಲಿ ಆದರೆ ಅಲ್ಲಿಯ ಕಾರ್ಮಿಕರ ಪಾಡು???


ನೀವೆಲ್ಲ, ಲಾಲೂ ಬ‌ಜೆಟ್ ಟಿ.ವಿ ಯ‌ಲ್ಲಿ, ಪೇಪ‌ರ್ನ‌ಲ್ಲಿ ನೋಡಿರ್ತೀರ‌, ರೈಲ್ವೆ ಇಲಾಖೆ ಬಾರೀ ಲಾಭದಲ್ಲಿ ಇದೆ ಅನ್ನೋದ‌ನ್ನು ಕೇಳಿರ್ತೀರ‌, ಆದ‌ರೆ ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಕ‌ತೆ ಕೇಳಿ....

ನಾವು ಹೋದವಾರ ಸಕಲೇಶಪುರ ಟ್ರೆಕ್ ಹೋದಾಗ, ಸಂಜೆ 7 ಘಂಟೆಗೆ ಅನಿವಾರ್ಯವಾಗಿ ಸುಬ್ರಮಣ್ಯಕ್ಕೆ ಗೂಡ್ಸ್ ರೈಲ್ಲನ್ನು ಹತ್ತುವ ಪ್ರಸಂಗ ಬ‌ಂತು (ಆಮೇಲೆ ಹ‌ತ್ತಲಿಲ್ಲ ಅನ್ನುವುದು ಬೇರೆಯ‌ ಮಾತು, ಇದ‌ನ್ನ ನ‌ನ್ನ ಸಕಲೇಶಪುರ ಟ್ರೆಕ್ ಲೇಖ‌ನ‌ದ‌ಲ್ಲಿ ವಿವ‌ರಿಸ್ತಿದೀನಿ), ನಾನು, ವೆಂಕ ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಜೊತೆ ಗೂಡ್ಸ್ ರೈಲಿನ‌ಲ್ಲಿ ಹೋಗುವುದೆಂದು ತೀರ್ಮಾನಿಸಿದೆವು, ಸ‌ರಿ ಅವ್ರೆಲ್ಲ ಅವ್ರ ಕೆಲಸ‌ ಮುಗಿಸಿ ಗೂಡ್ಸ್ ರೈಲ್ ಬ‌ರುವ‌ ಹಾದಿಯ‌ನ್ನು ಎದುರು ನೋಡ್ತಿದ್ರು, ಅವ್ರ ಸುಪ‌ರ್ವೈಸ‌ರ್ ಸ‌ಹ‌ ಅಲ್ಲಿದ್ರು. ನಾವು ಆ ಕಾರ್ಮಿಕರ ಜೊತೆ ಮಾತಾಡ್ತ ಇದ್ವಿ, ಗೂಡ್ಸ್ ರೈಲ್ ಬ‌ರುವ‌ ಸೂಚ‌ನೆ ಆ ಸುಪ‌ರ್ವೈಸ‌ರ್ಗೆ ಗೊತ್ತಾಯ್ತು, ಅವ್ನು ಇಂತ ಕಡೆ ನಿಲ್ಸೋಕೆ ಹೇಳಿದ‌ ಅನ್ಸತ್ತೆ, ಹಾಗಾಗಿ ನಾವು ಹ‌ತ್ತಲು ತ‌ಯಾರಾಗುತ್ತಿದ್ದೆವು. ಗೂಡ್ಸ್ ರೈಲ್ ಬಂತು, ಆದ‌ರೆ ಡ್ರೈವ‌ರ್ ಮ‌ಹಾಶ‌ಯ‌ ನಿಲ್ಲಿಸ‌ಲಿಲ್ಲ, ಇನ್ನೊಂದು ಗೂಡ್ಸ್ ರೈಲ್ ಕಾಯುವ‌ ಪ‌ರಿಸ್ತಿತಿ ಬ‌ಂತು. ಅದ್ಯಾವ‌ಗ‌ ಬ‌ರ‌ತ್ತೋ ದೇವ‌ರೇ ಬ‌ಲ್ಲ, ಅವ್ನೂ ನಿಲ್ಲಿಸ‌ದೆ ಇದ್ರೆ ಇವ್ರ‌ ಗ‌ತಿ???

ಹಾಗ‌ಂತ‌ ಅವ್ರನ್ನ ಕೇಳಿದಾಗ‌ ಅವ್ರು, ನಿಲ್ಲಿಸ‌ದೆ ಇದ್ರೆ ದೋಣಿಗಾಲ್ ರೈಲ್ವೆ ಸ್ಟೇಶನ್ ಹತ್ತಿರ ಬ‌ರ‌ಬೇಕು, ಆಮೇಲೆ ಅಲ್ಲೆ ಉಳಿದುಕೊಳ್ಳಬೇಕು ಅಂತ ಅಂದ್ರು, ಅದು ಅಲ್ಲಿಂದ‌ 3.5 ಕಿ.ಮೀ., ಯೋಚ‌ನೆ ಮಾಡಿ ರಾತ್ರಿ ಇನ್ನೊಂದು ಗೂಡ್ಸ್ ರೈಲ್ ಕಾದು ಮ‌ತ್ತೆ ವಾಪಸ್ ಬ‌ರ‌ಬೇಕು ಅಂದ್ರೆ....

ಎಂತಾ ವ್ಯವ‌ಸ್ತೆ, ರೈಲ್ವೆ ಇಲಾಖೆ ಕೋಟಿ ಕೋಟಿ ಲಾಭದಲ್ಲಿ...ಆದರೆ ಅಲ್ಲಿಯ ಕಾರ್ಮಿಕರು ತ‌ಮ್ಮ ದೈನ‌ಂದಿನ‌ ಕೆಲ‌ಸ‌ ಮುಗಿಸಿ ಮ‌ನೆಗೆ ಹೋಗುವುದಕ್ಕೆ ಯಾವುದೇ ವ್ಯವ‌ಸ್ತೆ ಇಲ್ಲ.

3 ಟೈಯರ್, ಏ.ಸಿ, ಫಸ್ಟ್ ಕ್ಲಾಸ್, ಸೆಕಂಡ್ ಕ್ಲಾಸ್ ಇರೋದು ಒಂದು ಕ‌ಡೆ ಆದ್ರೆ ಗೂಡ್ಸ್ ರೈಲ್ನಲ್ಲಿ ಮ‌ನೆಗೆ ಹೋಗಿ ತನ್ನ ಕುಟುಂಬ ನೋಡೂದಕ್ಕೆ ಹೆಣ‌ಗಾಡೋ ಕಾರ್ಮಿಕ‌ ಇನ್ನೊಂದು ಕ‌ಡೆ!!!!!

ಬೆತ್ತಲೆ ಜಗತ್ತಿನ ಲೇಖಕರಿಗೆ....

ಪ್ರತಾಪ್ ಸಿಂಹರವರೆ ನಮಸ್ಕಾರ,
ಚೆನ್ನಾಗಿದ್ದೀರಾ. ಫೆಬ್ರವರಿ 21ರಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾದ‌ ನಿಮ್ಮ ಕುರುಡು ಕಾಂಚಾಣ ಲೇಖನ ಓದಿದೆ, ಚೆನ್ನಾಗಿ ಬರೆದಿದ್ದೀರಿ ಆದರೆ ಜನರಲೈಸಾಗಿ ಬರೆದಿದ್ದೀರಾ, ಬಾರೀ ಬೇಜಾರಾಯ್ತು. ನಿಮ್ಮ ಲೇಖನದಲ್ಲಿ ಬರೋ ವಿಚಾರಗಳನ್ನೆ ತೆಗೆದುಕೊಂಡು ಮಾತಾಡುವ...
1) ಅಪ್ಪ ನಿವ್ಱ್ಱತ್ತಿಯಾಗುವಾಗ ಪಡೆಯುತ್ತಿದ್ದ ಸಂಬಳವನ್ನ ಮಗ ಕೆಲಸಕ್ಕೆ ಸೇರಿದ ಮೊದಲ ತಿಂಗಳೇ ಪಡೆದುಕೊಳ್ಳಲಾರಂಭಿಸಿದ. ‍‍ಸತ್ಯ, ಅಪ್ಪ (ಕೆಲವು ಅಪ್ಪಂದ್ರು ಎಲ್ಲರೂ ಅಲ್ಲ...) ಬಿ.ಎ, ಬಿ.ಕಾಂ, ಬಿ.ಎಸ್ಸಿ ಓದಿದ ಸರ್ಕಾರಿ ಕೆಲಸಕ್ಕೆ ಸೇರಿದ, 10ಕ್ಕೆ ಮನೆ ಬಿಟ್ಟು ಆಫೀಸಿಗೆ ಹೋಗ್ತನೆ 5 ಗಂಟೆಗೆ ವಾಪಸ್ ಮನೆಗೆ ಹೊರಡ್ತನೆ, ಮಧ್ಯದಲ್ಲಿ ಕಾಫಿ, ಟೀ, ಊಟಕ್ಕೆ 2 ಗಂಟೆ ಗುಳುಂ ಮಾಡಿರ್ತಾನೆ, ಅಂದ್ರೆ ಒಟ್ಟು 5 ಗಂಟೆ ಕೆಲಸ ಮಾಡ್ತನೆ,
ಅದೇ ನೀವು ಹೇಳಿದ ಸಾಫ್ಟ್ವೇರ್ ಇಂಜಿನಿಯರ್, ಬೆಳಗ್ಗೆ 8ಕ್ಕೆ ಮನೆ ಬಿಡ್ತಾನೆ (ಇನ್ನು ಕೆಲವರು ಅದಕ್ಕಿಂತ ಬೇಗ) ರಾತ್ರಿ ಎಷ್ಟೊತ್ತಿಗೆ ವಾಪಸ್ ಬರ್ತನೆ ಗೊತ್ತಿರಲ್ಲ, ಏನಿಲ್ಲ ಅಂದ್ರು 9 ಅಥವಾ 10ಕ್ಕೆ ಮನೆಗೆ ಬರ್ತನೆ , ಅಂದ್ರೆ 11ರಿಂದ 12 ಗಂಟೆ ಆಫೀಸಿನಲ್ಲೇ ಇರ್ತಾನೆ, ಊಟಕ್ಕೆ 30 ನಿಮಿಷ, ಕಾಫಿ, ಟೀ ಅವನ ಡೆಸ್ಕ್ಗೆ ತಂದಿಟ್ಕೊಂಡು ಕುಡೀತಾ ಕೆಲಸ ಮಾಡ್ತಾನೆ, ಹಾಗಾಗಿ ಏನಿಲ್ಲ ಅಂದ್ರು 10ರಿಂದ 11 ಗಂಟೆಗಳ ಕಾಲ ಕೆಲಸ ಮಾಡ್ತನೆ.
ಹಾಗಾಗಿ ಅಪ್ಪಂಗೆ 100ರೂ ಬಂದು ಮಗನಿಗೆ 200ರಿಂದ 250ರೂ ಬರೋದ್ರಲ್ಲಿ ಯಾವ ಅತಿಶಯೋಕ್ತಿಯಿಲ್ಲ.
2) ಇಪ್ಪತ್ತ್ಮೂರು ವರ್ಷಕ್ಕೆ ಕೈ ತುಂಬಾ ದುಡ್ಡೇನೋ ಬಂತು, ದುಡ್ಡಿನ‌ ಬೆಲೆ ಅರ್ಥ‌ ಮಾಡಿಕೊಳ್ಳುವ‌ ವ‌ಯ‌ಸ್ಸು ಅದಾಗಿರ‌ಲಿಲ್ಲ.
ನಮಗೆ 5 ಪೈಸೆಗೆ ಎಷ್ಟು ಗೋಲಿ ಬರ್ತಿತ್ತು ಅಂತನೂ ಗೊತ್ತು, ಈಗ 5 ಪೈಸೆ ಬೆಲೆ ಏನು ಅಂತನೂ ಗೊತ್ತು. ನಮ್ಮಪ್ಪ ಅಮ್ಮ ಪ್ರತಿ ಸೆಮೆಸ್ಟರ್ನಲ್ಲಿ ಫ್ರೀ/ಪೇಮೆಂಟ್ ಸೀಟ್ ದುಡ್ಡು ಕಟ್ಟೋವಾಗ ನಮಗೆ ಅನ್ನಿಸ್ತಾ ಇದ್ದದ್ದು ಏನು ಗೊತ್ತ, ಇಷ್ಟು ಖರ್ಚು ಮಾಡ್ತಾ ಇದ್ದಾರಲ್ಲ ನಾನು ಅವರು ಖರ್ಚು ಮಾಡಿರೋ ಅಷ್ಟು ದುಡ್ಡನ್ನ ಹೇಗಪ್ಪ ದುಡಿಯೋದು ಪ್ರತಿಯೊಬ್ಬ ಇಂಜಿನಿಯರ್ ಸಹ ಯೋಚಿಸಿರ್ತಾನೆ, ಊರಿಗ ಹೋದ್ರೆ ಪ್ರಯಾಣಕ್ಕೆ ದುಡ್ಡು ಖರ್ಚು ಮಾಡ್ಬೇಕಲ್ಲ ಅಂತ ಎಷ್ಟೋ ಹುಡುಗ್ರು ಹಾಸ್ಟೆಲ್ನಲ್ಲೇ ಇದ್ದು ಓದ್ತಿದ್ರು. ಪುಸ್ತಕಗಳ ಬೆಲೆ ಜಾಸ್ತಿ ಅಂತ ಬಹಳ ಜನ ಜೆರಾಕ್ಸ್ ಮಾಡಿಸ್ತಿದ್ರು.
ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಕೆಲಸ ಹುಡುಕಲು ಬಂದಾಗ, ಬಿ.ಎಂ.ಟಿ.ಸಿ ಬಸ್ ಪಾಸ್ ತೆಗೆದುಕೊಂಡು ಎಲ್ಲೆಲ್ಲಿ ಕಂಪನಿಗಳಿದ್ವು ಅಲ್ಲೆಲ್ಲಾ ರೆಸ್ಯೂಮ್ ಕೊಟ್ಟು ಬರ್ತಿದ್ವಿ, ಈಗ್ಲೂ ಸಹ ತುಂಬಾ ಜನ ಸಾಫ್ಟ್ವೇರ್ ಇಂಜಿನಿಯರ್ಸ್ ಬಿ.ಎಂ.ಟಿ.ಸಿ ಬಸ್ನಲ್ಲೇ ಓಡಾಡ್ತಿರ್ತಾರೆ (ಅದ್ರಲ್ಲಿ ನಾನೂ ಸಹ ಒಬ್ಬ).
ಸ‌ಂಬಳ ಬಂದ್ರೆ ನಮ್ಮ ಜೀವನಕ್ಕೆ ಸಾಕಾಗುವಷ್ಟು ಇಟ್ಕೊಂಡು ಮಿಕ್ಕಿದ್ದು ಅಪ್ಪಂಗೋ ಇಲ್ಲ ಉಳಿತಾಯ ಖಾತೆನಲ್ಲಿ ಹಾಕ್ತೀವಿ.
ನಮಗೆ ದುಡ್ಡಿನ ಬೆಲೆ ಗೊತ್ತಿಲ್ಲ ಅಂತೀರಲ್ಲ ನೀವು.
3) ಐ.ಟಿಯ‌ವ‌ರು ಏನು ಮಾಡ್ತಾ ಇದ್ದಾರೆ ಅಂತ‌ ಸಾಮಾನ್ಯ ವ್ಯಕ್ತಿಗೆ ಇನ್ನೂ ಅರ್ಥ‌ ಆಗಿಲ್ಲ.
ನಾನು ಸಾಫ್ಟ್ವೇರ್ ಇಂಜಿನಿಯರ್, ನಾನು ಇದ‌ನ್ನ ಮಾಡ್ತಿದ್ದೀನಿ ಅಂತ‌ ಯಾರಿಗಾದ್ರು ಹೇಳಿದ್ರೆ ಇವ‌ನ್ಯಾರೋ ತ‌ಲೆಹಿಡುಕ‌ ಅಂತಾರೆ.ಹಾಗಾಗಿ ತಿಳಿದುಕೊಳ್ಳೋ ಪ್ರಯ‌ತ್ನ ಮಾಡ್ಕೋಬೇಕು ಸಾರ್, ನ‌ಮ್ಮ ಮಾವ‌ 60 ವ‌ರ್ಷ‌ದ‌ವ‌ರು ಅವ್ರು, ನೀವೇನು ಮಾಡ್ತೀರಾ ಅಂತ‌ ಕೇಳಿ ತಿಳಿದುಕೊಂಡ್ರು. ಗುರು, ಸಿಪಾಯಿ ಬ‌ಗ್ಗೆ ಹೇಗೆ ಗೊತ್ತಾಯ್ತು ಹೇಳಿ, ಹೀಗೆ ಒಬ್ಬರಿಗೊಬ್ಬರು ಮಾತಾಡೋದ್ರಿಂದ‌ ಅಥ‌ವ‌ ಅನುಭ‌ವ‌ದಿಂದ‌. ಐ.ಟಿ ಅಂದ್ರೆ ದುಡ್ಡು ಅನ್ನೋದು ನಿಮ‌ಗೆ ಯಾರೋ ಹೇಳಿರ್ತಾನೆ ನೀವು ಇನ್ನ್ಯಾರಿಗೋ ಹೇಳ್ತೀರಾ.
ಇನ್ನೊಂದು ವಿಷ‌ಯ‌ ಏನು ಗೊತ್ತಾ, ದುಡ್ಡಿನ‌ ವಿಷ‌ಯ‌ ಬ‌ಂದಾಗ‌ ತುಂಬಾ ಜ‌ನ‌ರ‌ ಕಿವಿ ನೆಟ್ಟಗಾಗೋದು ಸ‌ಹ‌ಜ‌. ಯಾವುದೇ ವ್ಯವ‌ಹಾರ‌ ತೆಗೆದುಕೊಳ್ಳಿ, ಭ‌ತ್ತ, ರಾಗಿ, ಅಡ‌ಕೆ, ಕಾಫಿ. ತುಂಬಾ ಜ‌ನ‌ ಕ‌ಡಿಮೆ ದುಡ್ಡಿಗೆ ಮಾರಿ ಇನ್ನು ಕೆಲ‌ವ‌ರು ಜಾಸ್ತಿ ದುಡ್ಡಿಗೆ ಮಾರಿದ್ರೆ ಎಲ್ಲರೂ ಕೇಳೋದೇನ‌ಂದ್ರೆ ಅವ್ನಿಗೆ ಎಷ್ಟು ದುಡ್ಡು ಬ‌ಂತ್ರೀ ಅಂತ‌.
4) ಅವ‌ರ‌ ನಿಷ್ಟೆ ಏನಿದ್ದರೂ ದುಡ್ಡಿಗೆ.
ಯಾರು ಹೇಳಿದ್ದು ಹಾಗ‌ಂತ‌, ತುಂಬಾ ಜ‌ನ‌ ಕೆಲ‌ಸ‌ ಬಿಟ್ಟು ಬೇರೆ ಕ‌ಂಪ‌ನಿಗ‌ಳಿಗೆ ಯಾಕೆ ಹೋಗ್ತಾರೆ ಅಂದ್ರೆ, ಅವ‌ರಿಗೆ ತ‌ಕ್ಕನಾದ‌ ಕೆಲ‌ಸ‌ಕ್ಕೆ ಹಾಕಿರೋದಿಲ್ಲ ಇಲ್ಲಂದ್ರೆ ಅವ‌ರ‌ ಮ್ಯಾನೇಜ‌ರ್ ಸ‌ರಿ ಇರ‌ಲ್ಲ, ಬಾರೀ ಕ‌ಡಿಮೆ ಜ‌ನ‌ ದುಡ್ಡು ಅಂತ‌ ಹೋಗೋದು, ನ‌ಮ್ಮ ಗೆಳೆಯ‌ರ‌ಲ್ಲೇ ಎಷ್ಟೋ ಜ‌ನ‌ ಇವ‌ತ್ತಿಗೂ ಒಂದೇ ಕ‌ಂಪ‌ನೆಯ‌ಲ್ಲೇ ತುಂಬಾ ವರ್ಷದಿಂದ‌ ಕೆಲ‌ಸ‌ ಮಾಡ್ತಿದ್ದಾರೆ.
5) ಸೆಲ್ ಫೋನ್ ಸ‌ಂಖ್ಯೆ ಹೆಚ್ಚಳ‌ ಪ್ರಗ‌ತಿಯ‌ ಸ‌ಂಕೇತ‌ವೇ?
ಐ.ಟಿಯ‌ವ‌ರ‌ ಕೈಲಿ ದುಡ್ಡಿದೆ ಕಾರ್ಮಿಕ‌ರ‌ ಕೈಲಿಲ್ಲ, ಆದ್ರೂ ಯಾಕ್ರೀ ಸೆಲ್ ಫೋನ್ ತ‌ಗೋಳ್ತಾರೆ ಅವ್ರು, ನೀವು ಹೇಳೋದು ಐ.ಟಿಯ‌ವ‌ರಿಗೆ ದುಡ್ಡಿನ‌ ಬೆಲೆ ಗೊತ್ತಿಲ್ಲ, ಕಾರ್ಮಿಕ‌ರು????. ಅವ್ರಿಗೆ ದುಡ್ಡಿನ‌ ಬೆಲೆ ಗೊತ್ತು ಆದ್ರೂ ಸೆಲ್ ಫೋನ್ ತ‌ಗೋಳ್ತಾರೆ, 120ರೂ ಕೂಲಿಯ‌ಲ್ಲಿ 50ರೂ ಸೆಲ್ ಫೋನಿಗೆ ಖ‌ರ್ಚು ಮಾಡ್ತಾರೆ, ಛೆ, ದುಡ್ಡಿನ‌ ಬೆಲೆ ಗೊತ್ತಿರೋರು ಹೀಗೆಲ್ಲ ಮಾಡ‌ಬಾರ‌ದು, ನೀವಾದ್ರೂ ಅವ್ರಿಗೆ ಹೇಳ‌ಬಾರ‌ದ‌??
6) ಇವ‌ತ್ತು ಒಬ್ಬ ಐ.ಟಿಯ‌ವ‌ನು ಕೆಲ‌ಸ‌ ಕ‌ಳೆದುಕೊಂಡ‌ರೆ ಪ್ಯಾನಿಕ್ ಆಗುತ್ತಾನೆ, ಅವ‌ನಿಗೆ ಬೇರೆ ಕೆಲ‌ಸ‌ವೂ ಗೊತ್ತಿಲ್ಲ
ಬೇರೆ ಕ‌ಡೆ ಏನು ಆಗೇ ಇಲ್ವೇನ್ರಿ? ಆರ್ಥಿಕ ಹಿಂಜರಿತದಿಂದ ಗಾರ್ಮೆಂಟ್ಗಳ‌ಲ್ಲಿ ಕೆಲ‌ಸ‌ ಮಾಡೋರು ಆತ್ಮಹ‌ತ್ಯೆ ಮಾಡಿಕೊಂಡಿದ್ದಾರೆ, ಐ.ಟಿಯ‌ಲ್ಲಿ ಹಾಗೆ ಮಾಡಿಕೊಂಡಿರೋದ‌ನ್ನ ಇಲ್ಲಿವ‌ರೆಗೆ ಕೇಳಿಲ್ಲ. ಯಾಕ‌ಂದ್ರೆ ಮುಂದೆ ಸಿಕ್ಕತ್ತೆ ಅನ್ನೋ ಭ‌ರ‌ವ‌ಸೆ ಅವ್ನಿಗೆ ಇರ‌ತ್ತೆ, ಅದೂ ಅಲ್ದಲೆ ಅವ್ನು ಅಷ್ಟು ಸುಲ‌ಭ‌ವಾಗಿ ಇಂಜಿನಿಯ‌ರಿಂಗ್ ಪಾಸಾಗಿ ಬ‌ಂದಿರೊಲ್ಲ, ಅಲ್ಲಿವ‌ರೆಗೆ ಅವ‌ನು ಎಷ್ಟು ಕ‌ಷ್ಟಪ‌ಟ್ಟಿರ್ತಾನೆ ಅಂದ್ರೆ ಏನೇ ಕ‌ಷ್ಟ ಬ‌ಂದ್ರೂ ಎದುರಿಸೋದ‌ಕ್ಕೆ ಸೈ ಅನ್ನೋ ಮ‌ನೋಭಾವ‌ ಬ‌ಂದಿರ‌ತ್ತೆ, ಅಷ್ಟೊಂದು ಸುಲ‌ಭ‌ವಾಗಿ ಸೋಲೊಲ್ಲ.
ಸ್ವಲ್ಪ ಕಾಯೋಣ‌ ನ‌ಮ್ಮ ಫ್ಹೀಲ್ಡ್ನಲ್ಲೇ ಸಿಗ‌ಬ‌ಹುದು ಅನ್ನೋ ಭ‌ರ‌ವ‌ಸೆ ಇಟ್ಕೊಂಡಿರ್ತಾನೆ ಹೊರತು ಬೇರೆ ಕೆಲ‌ಸ‌ದ‌ ಬ‌ಗ್ಗೆ ಅಷ್ಟಾಗಿ ಯೋಚ‌ನೆ ಮಾಡಿರುವುದಿಲ್ಲ. ಅನ್ನ ಬೇಕು ಅಂದ್ರೆ ಹೆಂಗೋ ಜೀವ‌ನ‌ ಮಾಡ್ತಾರೆ, ಅದ‌ಕ್ಕೆ ಬೇರೆಯ‌ವ‌ರು ವ್ಯಂಗ್ಯವಾಗಿ ಮ‌ರುಕ‌ಪ‌ಡೋ ಅವ‌ಶ್ಯಕ‌ತೆಯಿಲ್ಲ.
7) ಐ.ಟಿಯಿಂದಾಗಿ ಸಾವಿರಾರು ಕುಟುಂಬ‌ಗ‌ಳು ಉದ್ಧಾರ‌ವಾದ‌ವು ಎನ್ನುವುದು ಎಷ್ಟು ಸ‌ತ್ಯವೋ ಐ.ಟಿಯ‌ವ‌ರ‌ ಹ‌ಣ‌ದ‌ ಮ‌ದ‌ದಿಂದಾಗಿ ಹ‌ತ್ತು ಪ‌ಟ್ಟು ಹೆಚ್ಚು ಕುಟುಂಬ‌ಗ‌ಳು ಸ‌ಂಕ‌ಷ್ಟಕ್ಕೂ ಸಿಲುಕಿದ‌ವು.
ಸಾಫ್ಟ್ವೇರ್ ಇಂಜಿನಿಯರ್ ಕುಟುಂಬ‌ ಉದ್ಧಾರ‌, ರಿಯ‌ಲ್ ಎಸ್ಟೇಟ್ ಉದ್ಧಾರ‌, ಗಾರ್ಮೆಂಟ್ಸ್ ಉದ್ಧಾರ‌, ಪ್ರವಾಸೋದ್ಯಮ‌ ಉದ್ಧಾರ‌, ಹಾಂ, ನಿಮ್ಮ ಪ‌ತ್ರಿಕೆಗ‌ಳ‌ ಸಂಖ್ಯೆಯ‌ಲ್ಲಿ ಉದ್ಧಾರ‌!!!!!
ಯಾರೋ ಸ್ವಲ್ಪ ಜ‌ನ‌ ಮಾಡೋದ‌ಕ್ಕೆ ಎಲ್ಲರ‌ನ್ನೂ ದೂಷಿಸ‌ಬೇಡಿ, ಅಪ್ಪನ‌ ಹ‌ತ್ರ ದುಡ್ಡು ಇರ‌ತ್ತೆ, ಮ‌ಗನೂ/ಮಗಳೂ ದುಡೀತಿರ್ತಾನೆ/ಳೆ, ಅಪ್ಪ ಮ‌ಗನ‌ನ್ನ/ಮಗಳನ್ನ ದುಡ್ಡು ಏನು ಮಾಡಿದೆ ಅಂತ‌ ಕೇಳೊಲ್ಲ, ಸ‌ಹ‌ಜ‌ವಾಗಿ ಅವ್ರು ಯಾರ ಅಂಕೆಯಿಲ್ಲದೆ ಖ‌ರ್ಚು ಮಾಡ್ತರೆ.
ಕೊನೆಯದಾಗಿ ,ನೀವು ನೋಡೋವಾಗ‌ ಕೆರೆಯ‌ಲ್ಲಿರೋ ತಾವ‌ರೆ ಹೂಗ‌ಳ‌ಲ್ಲಿ ಕೆಲ‌ವೊಂದು ಕ‌ರ‌ಗಿ ಹೋಗಿರ್ತ‌ವೆ ಕೆಲ‌ವು ಚೆನ್ನಾಗಿರ್ತ‌ವೆ,ಕ‌ರ‌ಗಿ ಹೋಗಿರೋ ತಾವ‌ರೆ ಹೂಗ‌ಳ‌ನ್ನು ಮಾತ್ರ ನೋಡಿ ಎಲ್ಲಾ ತಾವ‌ರೆ ಹೂಗ‌ಳು ಹಾಗೆ ಆಗಿವೆ ಅಂತ‌ ತಿಳಿದುಕೊಳ್ಳುವುದು ಅಥ‌ವಾ ಯಾರೋ ಹಾಗೆ ಹೇಳಿದ್ರು ಅಂತ‌ ಇನ್ನೊಬ್ಬರಿಗೆ ಹೇಳುವುದು ಬುದ್ಧಿವ‌ಂತ‌ರ‌ ಲ‌ಕ್ಷಣ‌ವ‌ಲ್ಲ.

ಕಾಫೀ....



ಕಾಫಿ, ಹೆಸರು ಕೇಳಿದ್ರೆ ಸಾಕು ಮೈಯೆಲ್ಲ ರೋಮಾಂಚನ ಆಗತ್ತೆ, ಇನ್ನೇನಾದ್ರು ಕೈಗೆ ಸಿಕ್ಕಿಬಿಟ್ರೆ....
ಚಿಕ್ಕಮಗಳೂರು, ಕಾಫಿಯ ಕಣಿವೆ, ಆ ಕಣಿವೆಯಲ್ಲಿ ನಮ್ಮದೊಂದು ಪುಟ್ಟ ಹಳ್ಳಿ.
ಪೇಟೆಯ ಜಂಜಡಗಳಿಂದ ತುಂಬಾ ದೂರದಲ್ಲಿರುವ ಹಳ್ಳಿ, 60 ಮನೆಗಳು, ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧಿಕರು (ಅಣ್ಣ, ತಮ್ಮ, ದೊಡ್ಡಪ್ಪ, ದೊಡ್ಡಮ್ಮ,ಚಿಕ್ಕಪ್ಪ, ಚಿಕ್ಕಮ್ಮ....).
ಎಲ್ಲೆಲ್ಲಿ ನೋಡಿದರೂ ಹಸಿರು ಹಸಿರು ಹಸಿರು....ಕಾಫಿ ತೋಟ, ಭತ್ತದ ಗದ್ದೆ, ಹಳ್ಳದ ಸಾಲು...ಎಷ್ಟು ನೋಡಿದರೂ ಮತ್ತೆ ಮತ್ತೆ ನೋಡಬೇಕೆನ್ನುವ ಬಯಕೆ.
ಬೆಳಗ್ಗೆ 7 ಗಂಟೆಯಾದರೂ ಸೂರ್ಯನ ಕಿರಣಗಳು ಗಿಡ ಮರಗಳ ಸಾಲಿನಿಂದ ಬಂದು ಭೂಮಿಯನ್ನು ತಲುಪಲು ಹರಸಾಹಸ ಮಾಡುತ್ತಿರುತ್ತವೆ, ಚಳಿ ಅನ್ನೋದು ಕುಣಿದಾಡುತ್ತಿರುತ್ತದೆ. ಆಗ ಎದ್ದು ಹಲ್ಲುಜ್ಜಿ ಮುಖ ತೊಳೆದು ಮನೆ ಎದುರುಗಡೆ ಬಂದು ಮುಳ್ಳಯ್ಯನಗಿರಿ, ರಂಗನಬೆಟ್ಟ ನೋಡಿದ್ರೆ ಆಗೋ ಉಲ್ಲಾಸ ವರ್ಣನಾತೀತ, ಆ ಹಕ್ಕಿಗಳ ಕಲರವ, ಎಲೆಗಳ ಮೇಲಿರುವ ಹನಿಗಳು, ಅದರ ಮೇಲೆ ಸೂರ್ಯನ ಕಿರಣಗಳ ಚಿತ್ತಾರ....
ಅದೇ ಸಮಯಕ್ಕೆ ನಾನು ಎದ್ದು ಬಂದದ್ದನ್ನು ನೋಡಿ ನಮ್ಮಮ್ಮ, ಮಗಾ ಕಾಫಿ ಕೊಡ್ಲಾ ಅಂತ ಕೇಳಿದ್ರೆ ಯಾರು ಬೇಡ ಅಂತ ಹೇಳ್ತಾರೆ.
ಅಡಿಗೆ ಮ‌ನೆಗೆ ಹೋಗಿ ಅಮ್ಮ ಕಾಫಿ ಮಾಡ್ತಿದ್ರೆ ಆ ಸುವಾಸ‌ನೆಯೇ ಸಾಕು ಅರ್ಧ‌ ಚ‌ಳಿ ಹೋಗಿಸ‌ಲಿಕ್ಕೆ.
ಇನ್ನು ಅಮ್ಮ ಬಂದು ಆ ಕಾಫಿ ಕೈಗಿಟ್ರೆ ಪೂರ್ತಿ ಚ‌ಳಿ ಮೈ ಬಿಟ್ಟು ಹೋಗ‌ತ್ತೆ.
ಆಹಾ, ಮುಳ್ಳಯ್ಯನಗಿರಿ, ರಂಗನಬೆಟ್ಟ ನೋಡ್ತಾ ಒಂದೊಂದೇ ಗುಟುಕು ಕುಡಿತಿದ್ರೆ ಸಿಗೋ ಸ‌ಂತೋಷ......