ಪ್ರತಾಪ್ ಸಿಂಹರವರೆ ನಮಸ್ಕಾರ,
ಚೆನ್ನಾಗಿದ್ದೀರಾ. ಫೆಬ್ರವರಿ 21ರಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನಿಮ್ಮ ಕುರುಡು ಕಾಂಚಾಣ ಲೇಖನ ಓದಿದೆ, ಚೆನ್ನಾಗಿ ಬರೆದಿದ್ದೀರಿ ಆದರೆ ಜನರಲೈಸಾಗಿ ಬರೆದಿದ್ದೀರಾ, ಬಾರೀ ಬೇಜಾರಾಯ್ತು. ನಿಮ್ಮ ಲೇಖನದಲ್ಲಿ ಬರೋ ವಿಚಾರಗಳನ್ನೆ ತೆಗೆದುಕೊಂಡು ಮಾತಾಡುವ...
1) ಅಪ್ಪ ನಿವ್ಱ್ಱತ್ತಿಯಾಗುವಾಗ ಪಡೆಯುತ್ತಿದ್ದ ಸಂಬಳವನ್ನ ಮಗ ಕೆಲಸಕ್ಕೆ ಸೇರಿದ ಮೊದಲ ತಿಂಗಳೇ ಪಡೆದುಕೊಳ್ಳಲಾರಂಭಿಸಿದ. ಸತ್ಯ, ಅಪ್ಪ (ಕೆಲವು ಅಪ್ಪಂದ್ರು ಎಲ್ಲರೂ ಅಲ್ಲ...) ಬಿ.ಎ, ಬಿ.ಕಾಂ, ಬಿ.ಎಸ್ಸಿ ಓದಿದ ಸರ್ಕಾರಿ ಕೆಲಸಕ್ಕೆ ಸೇರಿದ, 10ಕ್ಕೆ ಮನೆ ಬಿಟ್ಟು ಆಫೀಸಿಗೆ ಹೋಗ್ತನೆ 5 ಗಂಟೆಗೆ ವಾಪಸ್ ಮನೆಗೆ ಹೊರಡ್ತನೆ, ಮಧ್ಯದಲ್ಲಿ ಕಾಫಿ, ಟೀ, ಊಟಕ್ಕೆ 2 ಗಂಟೆ ಗುಳುಂ ಮಾಡಿರ್ತಾನೆ, ಅಂದ್ರೆ ಒಟ್ಟು 5 ಗಂಟೆ ಕೆಲಸ ಮಾಡ್ತನೆ,
ಅದೇ ನೀವು ಹೇಳಿದ ಸಾಫ್ಟ್ವೇರ್ ಇಂಜಿನಿಯರ್, ಬೆಳಗ್ಗೆ 8ಕ್ಕೆ ಮನೆ ಬಿಡ್ತಾನೆ (ಇನ್ನು ಕೆಲವರು ಅದಕ್ಕಿಂತ ಬೇಗ) ರಾತ್ರಿ ಎಷ್ಟೊತ್ತಿಗೆ ವಾಪಸ್ ಬರ್ತನೆ ಗೊತ್ತಿರಲ್ಲ, ಏನಿಲ್ಲ ಅಂದ್ರು 9 ಅಥವಾ 10ಕ್ಕೆ ಮನೆಗೆ ಬರ್ತನೆ , ಅಂದ್ರೆ 11ರಿಂದ 12 ಗಂಟೆ ಆಫೀಸಿನಲ್ಲೇ ಇರ್ತಾನೆ, ಊಟಕ್ಕೆ 30 ನಿಮಿಷ, ಕಾಫಿ, ಟೀ ಅವನ ಡೆಸ್ಕ್ಗೆ ತಂದಿಟ್ಕೊಂಡು ಕುಡೀತಾ ಕೆಲಸ ಮಾಡ್ತಾನೆ, ಹಾಗಾಗಿ ಏನಿಲ್ಲ ಅಂದ್ರು 10ರಿಂದ 11 ಗಂಟೆಗಳ ಕಾಲ ಕೆಲಸ ಮಾಡ್ತನೆ.
ಹಾಗಾಗಿ ಅಪ್ಪಂಗೆ 100ರೂ ಬಂದು ಮಗನಿಗೆ 200ರಿಂದ 250ರೂ ಬರೋದ್ರಲ್ಲಿ ಯಾವ ಅತಿಶಯೋಕ್ತಿಯಿಲ್ಲ.
2) ಇಪ್ಪತ್ತ್ಮೂರು ವರ್ಷಕ್ಕೆ ಕೈ ತುಂಬಾ ದುಡ್ಡೇನೋ ಬಂತು, ದುಡ್ಡಿನ ಬೆಲೆ ಅರ್ಥ ಮಾಡಿಕೊಳ್ಳುವ ವಯಸ್ಸು ಅದಾಗಿರಲಿಲ್ಲ.
ನಮಗೆ 5 ಪೈಸೆಗೆ ಎಷ್ಟು ಗೋಲಿ ಬರ್ತಿತ್ತು ಅಂತನೂ ಗೊತ್ತು, ಈಗ 5 ಪೈಸೆ ಬೆಲೆ ಏನು ಅಂತನೂ ಗೊತ್ತು. ನಮ್ಮಪ್ಪ ಅಮ್ಮ ಪ್ರತಿ ಸೆಮೆಸ್ಟರ್ನಲ್ಲಿ ಫ್ರೀ/ಪೇಮೆಂಟ್ ಸೀಟ್ ದುಡ್ಡು ಕಟ್ಟೋವಾಗ ನಮಗೆ ಅನ್ನಿಸ್ತಾ ಇದ್ದದ್ದು ಏನು ಗೊತ್ತ, ಇಷ್ಟು ಖರ್ಚು ಮಾಡ್ತಾ ಇದ್ದಾರಲ್ಲ ನಾನು ಅವರು ಖರ್ಚು ಮಾಡಿರೋ ಅಷ್ಟು ದುಡ್ಡನ್ನ ಹೇಗಪ್ಪ ದುಡಿಯೋದು ಪ್ರತಿಯೊಬ್ಬ ಇಂಜಿನಿಯರ್ ಸಹ ಯೋಚಿಸಿರ್ತಾನೆ, ಊರಿಗ ಹೋದ್ರೆ ಪ್ರಯಾಣಕ್ಕೆ ದುಡ್ಡು ಖರ್ಚು ಮಾಡ್ಬೇಕಲ್ಲ ಅಂತ ಎಷ್ಟೋ ಹುಡುಗ್ರು ಹಾಸ್ಟೆಲ್ನಲ್ಲೇ ಇದ್ದು ಓದ್ತಿದ್ರು. ಪುಸ್ತಕಗಳ ಬೆಲೆ ಜಾಸ್ತಿ ಅಂತ ಬಹಳ ಜನ ಜೆರಾಕ್ಸ್ ಮಾಡಿಸ್ತಿದ್ರು.
ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಕೆಲಸ ಹುಡುಕಲು ಬಂದಾಗ, ಬಿ.ಎಂ.ಟಿ.ಸಿ ಬಸ್ ಪಾಸ್ ತೆಗೆದುಕೊಂಡು ಎಲ್ಲೆಲ್ಲಿ ಕಂಪನಿಗಳಿದ್ವು ಅಲ್ಲೆಲ್ಲಾ ರೆಸ್ಯೂಮ್ ಕೊಟ್ಟು ಬರ್ತಿದ್ವಿ, ಈಗ್ಲೂ ಸಹ ತುಂಬಾ ಜನ ಸಾಫ್ಟ್ವೇರ್ ಇಂಜಿನಿಯರ್ಸ್ ಬಿ.ಎಂ.ಟಿ.ಸಿ ಬಸ್ನಲ್ಲೇ ಓಡಾಡ್ತಿರ್ತಾರೆ (ಅದ್ರಲ್ಲಿ ನಾನೂ ಸಹ ಒಬ್ಬ).
ಸಂಬಳ ಬಂದ್ರೆ ನಮ್ಮ ಜೀವನಕ್ಕೆ ಸಾಕಾಗುವಷ್ಟು ಇಟ್ಕೊಂಡು ಮಿಕ್ಕಿದ್ದು ಅಪ್ಪಂಗೋ ಇಲ್ಲ ಉಳಿತಾಯ ಖಾತೆನಲ್ಲಿ ಹಾಕ್ತೀವಿ.
ನಮಗೆ ದುಡ್ಡಿನ ಬೆಲೆ ಗೊತ್ತಿಲ್ಲ ಅಂತೀರಲ್ಲ ನೀವು.
3) ಐ.ಟಿಯವರು ಏನು ಮಾಡ್ತಾ ಇದ್ದಾರೆ ಅಂತ ಸಾಮಾನ್ಯ ವ್ಯಕ್ತಿಗೆ ಇನ್ನೂ ಅರ್ಥ ಆಗಿಲ್ಲ.
ನಾನು ಸಾಫ್ಟ್ವೇರ್ ಇಂಜಿನಿಯರ್, ನಾನು ಇದನ್ನ ಮಾಡ್ತಿದ್ದೀನಿ ಅಂತ ಯಾರಿಗಾದ್ರು ಹೇಳಿದ್ರೆ ಇವನ್ಯಾರೋ ತಲೆಹಿಡುಕ ಅಂತಾರೆ.ಹಾಗಾಗಿ ತಿಳಿದುಕೊಳ್ಳೋ ಪ್ರಯತ್ನ ಮಾಡ್ಕೋಬೇಕು ಸಾರ್, ನಮ್ಮ ಮಾವ 60 ವರ್ಷದವರು ಅವ್ರು, ನೀವೇನು ಮಾಡ್ತೀರಾ ಅಂತ ಕೇಳಿ ತಿಳಿದುಕೊಂಡ್ರು. ಗುರು, ಸಿಪಾಯಿ ಬಗ್ಗೆ ಹೇಗೆ ಗೊತ್ತಾಯ್ತು ಹೇಳಿ, ಹೀಗೆ ಒಬ್ಬರಿಗೊಬ್ಬರು ಮಾತಾಡೋದ್ರಿಂದ ಅಥವ ಅನುಭವದಿಂದ. ಐ.ಟಿ ಅಂದ್ರೆ ದುಡ್ಡು ಅನ್ನೋದು ನಿಮಗೆ ಯಾರೋ ಹೇಳಿರ್ತಾನೆ ನೀವು ಇನ್ನ್ಯಾರಿಗೋ ಹೇಳ್ತೀರಾ.
ಇನ್ನೊಂದು ವಿಷಯ ಏನು ಗೊತ್ತಾ, ದುಡ್ಡಿನ ವಿಷಯ ಬಂದಾಗ ತುಂಬಾ ಜನರ ಕಿವಿ ನೆಟ್ಟಗಾಗೋದು ಸಹಜ. ಯಾವುದೇ ವ್ಯವಹಾರ ತೆಗೆದುಕೊಳ್ಳಿ, ಭತ್ತ, ರಾಗಿ, ಅಡಕೆ, ಕಾಫಿ. ತುಂಬಾ ಜನ ಕಡಿಮೆ ದುಡ್ಡಿಗೆ ಮಾರಿ ಇನ್ನು ಕೆಲವರು ಜಾಸ್ತಿ ದುಡ್ಡಿಗೆ ಮಾರಿದ್ರೆ ಎಲ್ಲರೂ ಕೇಳೋದೇನಂದ್ರೆ ಅವ್ನಿಗೆ ಎಷ್ಟು ದುಡ್ಡು ಬಂತ್ರೀ ಅಂತ.
4) ಅವರ ನಿಷ್ಟೆ ಏನಿದ್ದರೂ ದುಡ್ಡಿಗೆ.
ಯಾರು ಹೇಳಿದ್ದು ಹಾಗಂತ, ತುಂಬಾ ಜನ ಕೆಲಸ ಬಿಟ್ಟು ಬೇರೆ ಕಂಪನಿಗಳಿಗೆ ಯಾಕೆ ಹೋಗ್ತಾರೆ ಅಂದ್ರೆ, ಅವರಿಗೆ ತಕ್ಕನಾದ ಕೆಲಸಕ್ಕೆ ಹಾಕಿರೋದಿಲ್ಲ ಇಲ್ಲಂದ್ರೆ ಅವರ ಮ್ಯಾನೇಜರ್ ಸರಿ ಇರಲ್ಲ, ಬಾರೀ ಕಡಿಮೆ ಜನ ದುಡ್ಡು ಅಂತ ಹೋಗೋದು, ನಮ್ಮ ಗೆಳೆಯರಲ್ಲೇ ಎಷ್ಟೋ ಜನ ಇವತ್ತಿಗೂ ಒಂದೇ ಕಂಪನೆಯಲ್ಲೇ ತುಂಬಾ ವರ್ಷದಿಂದ ಕೆಲಸ ಮಾಡ್ತಿದ್ದಾರೆ.
5) ಸೆಲ್ ಫೋನ್ ಸಂಖ್ಯೆ ಹೆಚ್ಚಳ ಪ್ರಗತಿಯ ಸಂಕೇತವೇ?
ಐ.ಟಿಯವರ ಕೈಲಿ ದುಡ್ಡಿದೆ ಕಾರ್ಮಿಕರ ಕೈಲಿಲ್ಲ, ಆದ್ರೂ ಯಾಕ್ರೀ ಸೆಲ್ ಫೋನ್ ತಗೋಳ್ತಾರೆ ಅವ್ರು, ನೀವು ಹೇಳೋದು ಐ.ಟಿಯವರಿಗೆ ದುಡ್ಡಿನ ಬೆಲೆ ಗೊತ್ತಿಲ್ಲ, ಕಾರ್ಮಿಕರು????. ಅವ್ರಿಗೆ ದುಡ್ಡಿನ ಬೆಲೆ ಗೊತ್ತು ಆದ್ರೂ ಸೆಲ್ ಫೋನ್ ತಗೋಳ್ತಾರೆ, 120ರೂ ಕೂಲಿಯಲ್ಲಿ 50ರೂ ಸೆಲ್ ಫೋನಿಗೆ ಖರ್ಚು ಮಾಡ್ತಾರೆ, ಛೆ, ದುಡ್ಡಿನ ಬೆಲೆ ಗೊತ್ತಿರೋರು ಹೀಗೆಲ್ಲ ಮಾಡಬಾರದು, ನೀವಾದ್ರೂ ಅವ್ರಿಗೆ ಹೇಳಬಾರದ??
6) ಇವತ್ತು ಒಬ್ಬ ಐ.ಟಿಯವನು ಕೆಲಸ ಕಳೆದುಕೊಂಡರೆ ಪ್ಯಾನಿಕ್ ಆಗುತ್ತಾನೆ, ಅವನಿಗೆ ಬೇರೆ ಕೆಲಸವೂ ಗೊತ್ತಿಲ್ಲ
ಬೇರೆ ಕಡೆ ಏನು ಆಗೇ ಇಲ್ವೇನ್ರಿ? ಆರ್ಥಿಕ ಹಿಂಜರಿತದಿಂದ ಗಾರ್ಮೆಂಟ್ಗಳಲ್ಲಿ ಕೆಲಸ ಮಾಡೋರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಐ.ಟಿಯಲ್ಲಿ ಹಾಗೆ ಮಾಡಿಕೊಂಡಿರೋದನ್ನ ಇಲ್ಲಿವರೆಗೆ ಕೇಳಿಲ್ಲ. ಯಾಕಂದ್ರೆ ಮುಂದೆ ಸಿಕ್ಕತ್ತೆ ಅನ್ನೋ ಭರವಸೆ ಅವ್ನಿಗೆ ಇರತ್ತೆ, ಅದೂ ಅಲ್ದಲೆ ಅವ್ನು ಅಷ್ಟು ಸುಲಭವಾಗಿ ಇಂಜಿನಿಯರಿಂಗ್ ಪಾಸಾಗಿ ಬಂದಿರೊಲ್ಲ, ಅಲ್ಲಿವರೆಗೆ ಅವನು ಎಷ್ಟು ಕಷ್ಟಪಟ್ಟಿರ್ತಾನೆ ಅಂದ್ರೆ ಏನೇ ಕಷ್ಟ ಬಂದ್ರೂ ಎದುರಿಸೋದಕ್ಕೆ ಸೈ ಅನ್ನೋ ಮನೋಭಾವ ಬಂದಿರತ್ತೆ, ಅಷ್ಟೊಂದು ಸುಲಭವಾಗಿ ಸೋಲೊಲ್ಲ.
ಸ್ವಲ್ಪ ಕಾಯೋಣ ನಮ್ಮ ಫ್ಹೀಲ್ಡ್ನಲ್ಲೇ ಸಿಗಬಹುದು ಅನ್ನೋ ಭರವಸೆ ಇಟ್ಕೊಂಡಿರ್ತಾನೆ ಹೊರತು ಬೇರೆ ಕೆಲಸದ ಬಗ್ಗೆ ಅಷ್ಟಾಗಿ ಯೋಚನೆ ಮಾಡಿರುವುದಿಲ್ಲ. ಅನ್ನ ಬೇಕು ಅಂದ್ರೆ ಹೆಂಗೋ ಜೀವನ ಮಾಡ್ತಾರೆ, ಅದಕ್ಕೆ ಬೇರೆಯವರು ವ್ಯಂಗ್ಯವಾಗಿ ಮರುಕಪಡೋ ಅವಶ್ಯಕತೆಯಿಲ್ಲ.
7) ಐ.ಟಿಯಿಂದಾಗಿ ಸಾವಿರಾರು ಕುಟುಂಬಗಳು ಉದ್ಧಾರವಾದವು ಎನ್ನುವುದು ಎಷ್ಟು ಸತ್ಯವೋ ಐ.ಟಿಯವರ ಹಣದ ಮದದಿಂದಾಗಿ ಹತ್ತು ಪಟ್ಟು ಹೆಚ್ಚು ಕುಟುಂಬಗಳು ಸಂಕಷ್ಟಕ್ಕೂ ಸಿಲುಕಿದವು.
ಸಾಫ್ಟ್ವೇರ್ ಇಂಜಿನಿಯರ್ ಕುಟುಂಬ ಉದ್ಧಾರ, ರಿಯಲ್ ಎಸ್ಟೇಟ್ ಉದ್ಧಾರ, ಗಾರ್ಮೆಂಟ್ಸ್ ಉದ್ಧಾರ, ಪ್ರವಾಸೋದ್ಯಮ ಉದ್ಧಾರ, ಹಾಂ, ನಿಮ್ಮ ಪತ್ರಿಕೆಗಳ ಸಂಖ್ಯೆಯಲ್ಲಿ ಉದ್ಧಾರ!!!!!
ಯಾರೋ ಸ್ವಲ್ಪ ಜನ ಮಾಡೋದಕ್ಕೆ ಎಲ್ಲರನ್ನೂ ದೂಷಿಸಬೇಡಿ, ಅಪ್ಪನ ಹತ್ರ ದುಡ್ಡು ಇರತ್ತೆ, ಮಗನೂ/ಮಗಳೂ ದುಡೀತಿರ್ತಾನೆ/ಳೆ, ಅಪ್ಪ ಮಗನನ್ನ/ಮಗಳನ್ನ ದುಡ್ಡು ಏನು ಮಾಡಿದೆ ಅಂತ ಕೇಳೊಲ್ಲ, ಸಹಜವಾಗಿ ಅವ್ರು ಯಾರ ಅಂಕೆಯಿಲ್ಲದೆ ಖರ್ಚು ಮಾಡ್ತರೆ.
ಕೊನೆಯದಾಗಿ ,ನೀವು ನೋಡೋವಾಗ ಕೆರೆಯಲ್ಲಿರೋ ತಾವರೆ ಹೂಗಳಲ್ಲಿ ಕೆಲವೊಂದು ಕರಗಿ ಹೋಗಿರ್ತವೆ ಕೆಲವು ಚೆನ್ನಾಗಿರ್ತವೆ,ಕರಗಿ ಹೋಗಿರೋ ತಾವರೆ ಹೂಗಳನ್ನು ಮಾತ್ರ ನೋಡಿ ಎಲ್ಲಾ ತಾವರೆ ಹೂಗಳು ಹಾಗೆ ಆಗಿವೆ ಅಂತ ತಿಳಿದುಕೊಳ್ಳುವುದು ಅಥವಾ ಯಾರೋ ಹಾಗೆ ಹೇಳಿದ್ರು ಅಂತ ಇನ್ನೊಬ್ಬರಿಗೆ ಹೇಳುವುದು ಬುದ್ಧಿವಂತರ ಲಕ್ಷಣವಲ್ಲ.
No comments:
Post a Comment