Tuesday, February 23, 2010

ಬ್ರಮ್ಹಗಿರಿಯ ಚಾರಣ


2 ವರ್ಷಗಳ ಹಿಂದೆ ಬ್ರಮ್ಹಗಿರಿಗೆ ಹೋಗ್ಬೇಕು ಅಂತ ಅರ್ಧಕ್ಕೆ ಹೋಗಿ ವಾಪಸ್ ಬಂದಿದ್ದ ನಮಗೆ ಮುಂದೊಂದು ದಿನ ಹೇಗಾದ್ರು ಮಾಡಿ ತುದಿ ತಲುಪ್ಲೇಬೇಕು ಅಂತ ನಿರ್ಧಾರ ಮಾಡಿದ್ವಿ. ಪಕ್ಯ, ವೆಂಕ ಮನಸ್ಸು ಮಾಡಿ ಎಲ್ಲ ಬುಕ್ ಮಾಡಿ ಹೊರಡೋದಕ್ಕೆ ಸಿದ್ಧವಾದೆವು. ಆದ್ರೆ ಈ ಟ್ರಿಪ್ನಲ್ಲಿ ನಮ್ಮ್ಹುಡುಗ್ರು ಕೈ ಕೊಟ್ಟಿದ್ರು - >


(ಮೀಟರ್ - ಶಿವರಾತ್ರಿ ಜಾತ್ರೆಗೆ ಊರಿಗೆ ಹೋಗ್ಬೇಕು ಅಂತ ಡ್ರಾಪ್ ಆದ, ಜಾತ್ರೆಯಲ್ಲಿ ಯಾರಾದ್ರು ಒಳ್ಳೆ ಹುಡ್ಗಿ ಸಿಗ್ತಾಳೆ ಅಂತ ಪ್ಲಾನ್ ಹಾಕ್ದ್ದ ಅಂತ ಕಾಣತ್ತೆ.

ಉಲ್ಲ - ಶಿವರಾತ್ರಿಯಲ್ಲಿ ಜಾಗರಣೆ ಇರ್ಬೇಕು ಅಂದ್ಕೊಂಡಿದ್ದ.

ಶೆಟ್ಟಿ - ಹೋಗಿರೋ ಜಾಗನೇ ಏನು ಹೋಗದು ಬರಲ್ಲ ಅಂದಿದ್ದ, ಪಾಪ ಮಿಸ್ ಮಾಡ್ಕೊಂಡ.


ಜಯ, ಸೌಜ ಮತ್ತೆ ರಶ್ಮಿ - ಕಂಪನಿ ಪಾರ್ಟಿ ಅಂತ ಇಲ್ಲೇ ಉಳ್ ಕೊಂಡ್ರು, ಜಯ ಬರ್ದೇ ಇರೋದು ನೋಡಿ ನನ್ನ ವೆಂಕನ ಕ್ಯಾಮೆರಾಗಳು ಕುಣಿದಾಡುತಿದ್ವು).

ಅಂತೂ ಪಕ್ಯ ನಾವೆಲ್ಲಾ ಸೇರಿ 7 ಜನನ್ನ ಹೊರಡಿಸಿದ್ದ, ಆದ್ರೆ ಕೊನೆ ದಿನ ಅವನಿಗೆ ಕಾಲ್ ಮಾಡಿ ಏನಾದ್ರೂ ತರೋದು ಇದ್ರೆ ಹೇಳಪ್ಪ ಅಂತ ಕೇಳೋಣ ಅನ್ನೋವಷ್ಟರಲ್ಲಿ ೩ ಜನ ಕೈ ಎತ್ತಿದ್ದಾರೆ ಕಣೋ ಅಂದ.
ಸರಿ ಆಯ್ತು ಬಿಡಪ್ಪ, ನಾವು 4 ಜನ ಆಗಿದ್ದಾಗಲಿ ನಡಿ ಹೋಗೋಣ, ವೆಂಕನಿಗೆ ಹೇಳಿ ಮಿಕ್ಕಿದ್ದು ಏನೇನು ತಗೋಬೇಕು ತಗೋ ಬಾ ಅಂದರಾಯ್ತು ಅಂದು ಕೆಲಸ ಮುಗಿಸಿಕೊಂಡು ಲಗೇಜ್ ಪ್ಯಾಕ್ ಮಾಡೋದಕ್ಕೆ ಮನೆ ಬಸ್ ಹತ್ತಿದೆ.

ಎಲ್ಲ ಪ್ಯಾಕ್ ಮಾಡ್ಕೊಂಡು ವೆಂಕನ ರೂಮಿಗೆ ಹೋಗಿ ಅಲ್ಲಿಂದ ಆಟೋದಲ್ಲಿ ಮಜೆಸ್ಟಿಕ್ಗೆ ಹೋದ್ವಿ. ಸ್ವಲ್ಪ ಹೊತ್ತಾದ ಮೇಲೆ ಪಕ್ಯ ಮತ್ತೆ ಅವನ ಫ್ರೆಂಡ್ ರಂಜನ್ (ಡುಮ್ಮ - ಪಕ್ಯ ಕರೆಯೋದು) ಬಂದ್ರು. 11.30ರ ವೋಲ್ವೋಗೆ ಹತ್ತು ಕುಳಿತ್ವಿ, ಎರಡು ದಿನ ಬೆಂಗಳೂರಿಗೆ ಬರಲ್ಲ ಅಂತ ಸಲಾಂ ಹೊಡೆದು ಡ್ರೈವರ್ ಕೊಟ್ಟ ರಗ್ಗನ್ನು ಹೊದ್ಕೊಂಡು ನಿದ್ರಾದೇವಿಗೆ ಶರಣಾದೆವು.

ಬಸ್ಸು ಮುಂಜಾನೆ 4.30ರ ಸುಮಾರಿಗೆ ಗೋಣಿಕೊಪ್ಪಲಿನಲ್ಲಿ ನಮ್ಮನ್ನು ಕೆಡವಿ ಅದರ ಹಾದಿ ಹಿಡಿಯಿತು. ಗೋಣಿಕೊಪ್ಪಲಿನಿಂದ ಶ್ರೀ ಮಂಗಲಕ್ಕೆ 5.45ಕ್ಕೆ ಮೊದಲ ಬಸ್, ಅಲ್ಲಿವರೆಗೆ ನಾವು ಗೋಣಿಕೊಪ್ಪಲಿನಲ್ಲೆ ಕಾಲ ದೂಡಬೇಕಿತ್ತು ಜೊತೆಗೆ ಬೆಳಗಿನ ಕೆಲಸಗಳನ್ನು!.
ಅರ್ಧ ಗಂಟೆ ಹರಟೆ ಹೊಡ್ಕೊಂಡು ಕೂತವರು ಪಕ್ಯನಿಗೆ ಹೋಗಿ ಯಾವುದಾದರು ಲಾಡ್ಜ್ ಇದೆಯಾ ವಿಚಾರಿಸ್ಕೊಬಾ ಅಂದ್ವಿ.

ಪಕ್ಯ ಹೋಗಿ 10 ನಿಮಿಷ ಆದ್ಮೇಲೆ ಬಂದವನು, 1 ಲಾಡ್ಜ್ ಇದೆ ಆದ್ರೆ 2 ಬೆಡ್ರೂಮ್ ಅಂತೆ 600 ರೂ ಹೇಳ್ದಾ ಅಂದ.
ವೆಂಕ ಇದ್ದವನು 'ಲೇ ಹೆಗ್ನ, ನಾವೇನು 24 ಗಂಟೆ ಲಾಡ್ಜ್ನಲ್ಲಿರಲ್ಲ ಒಂದೆರಡು ಗಂಟೆಗೆ ಮಾತ್ರ ಅಂತ ಕೇಳಬೇಕಿತ್ತು'.
ನೀನೆ ಹೋಗಿ ಕೆಳ್ಕೊಬಾರಪ್ಪ ಅಂದ ಪಕ್ಯ.
ಬಾ ಅಂತ ಪಕ್ಯನ್ನ ವೆಂಕ ಎಳ್ಕೊಂಡು ಹೋದ.
ಹೋಗಿ 10 ನಿಮಿಷದೊಳಗೆ ಶ್ರೀ ಮಂಗಲಕ್ಕೆ ಹೋಗೋ ಬಸ್ ಬಂತು. ನಾನು ವೆಂಕನಿಗೆ ಕಾಲ್ ಮಾಡಿ 'ಲೇ, ಬಸ್ ಬಂತು ಕಣ್ರೋ' ಅಂದೆ.
ಪಾಪ ಟಾಯ್ಲೆಟ್ನಲ್ಲಿದ್ದ ಅನ್ಸತ್ತೆ 'ಹೋಗ್ಲಿ ಬಿಡು ಇನ್ನೊಂದು ಬಸ್ ಕ್ಯಾಚ್ ಮಾಡಣ' ಅಂದ.

10 ನಿಮಿಷ ಆದ್ಮೇಲೆ ಇಬ್ರೂ ಬಂದ್ರು.
ಅಬ್ಬ ಈಗಂತೂ ಫುಲ್ ಆರಾಮ್ ಅಂದ್ರು ಇಬ್ರು.

'ಏನ್ರಪ್ಪ ಲಾಡ್ಜ್ ಸಿಕ್ತಾ? ಹಾಗಿದ್ರೆ' ರಂಜನ್ ಕೇಳ್ದ.

ಇಲ್ಲ ಅಂದ ವೆಂಕ.

ಮತ್ತೆ ಹೆಂಗೆ ಫುಲ್ ಆರಾಮ್??


'ಆ ಲಾಡ್ಜ್ ಹತ್ರ ಹೋದ್ವಿ 500 ರೂ ಕಡಿಮೆ ಬರ್ಲಿಲ್ಲ, ಅಷ್ಟು ಕೊಡೋದು ವೇಸ್ಟ್ ಅಂದ್ಕೊಂಡು ಹೊರಡೋದಕ್ಕೆ ರೆಡಿಯಾದ್ವಿ. ರಿಸಪ್ಶನಿಷ್ಟ್ ಮಲಗೋಕೆ ರೆಡಿಯಾಗ್ತಿದ್ದ, ಅವ್ನು ಮಲಗಿದ್ದು ಕನ್ಫರ್ಮ್ ಆದ್ಮೇಲೆ , ಪಕ್ಕದಲ್ಲೇ ಟಾಯ್ಲೆಟ್ ಇತ್ತು ಹೋಗಿ ಮುಗಿಸ್ಕೊಂಡು ಬಂದ್ವಿ' ಅಂದ ವೆಂಕ.

'ನನ್ಮಕ್ಳ ಇದೇ ಕೆಲಸ ಮಾಡಿ, ನಮ್ಮ ಕಥೆ ಈಗ ಹಾಗಿದ್ರೆ' ಅಂದೆ.

'ಆ ರೋಡ್ ಡೆಡ್ ಎಂಡ್ನಲ್ಲಿ ಲಾಡ್ಜ್ ಇದೆ ಫಸ್ಟ್ ಫ್ಲೋರ್ನಲ್ಲಿ, ಹೋಗಿ ನಿಮ್ಮ ಲಕ್ ಟ್ರೈ ಮಾಡಿ'.

ಸರಿನಪ್ಪ ಅಂದ್ಕೊಂಡು ನಾನು ಹೊರಟೆ. ಹೋಗಿ ನೋಡಿದೆ ಇನ್ನೂ ಪುಣ್ಯಾತ್ಮ ಸುಖ ನಿದ್ರೆಯಲ್ಲಿದ್ದ. ನಿಂಗೆ ದೇವ್ರು ಇದೇ ರೀತಿ ಸುಖ ನಿದ್ರೆ ಕೊಡಲಿ ನಾನು ವಾಪಸ್ ಹೋಗೋವರೆಗೂ ಅಂದ್ಕೊಂಡು ನನ್ನ ಕೆಲಸಕ್ಕೆ ಹೋದೆ. ಅಕಸ್ಮಾತ್ ವಾಪಸ್ ಹೋಗೋವಾಗ ಸಿಕ್ಕಿದ್ರೆ ಏನು ಹೇಳೋದು ಅಂತ ಮನಸ್ನಲ್ಲೇ ಸ್ಕೆಚ್ ಹಾಕೊಂಡು ಪ್ರಕ್ರ್ರುತಿ ಕರೆ ಮುಗಿಸಿ ವಾಪಸ್ ಹೊರಟೆ, ಸದ್ಯ ಅವ್ನು ಎದ್ದಿರಲಿಲ್ಲ.

ಆಗ್ಲೇ ೬.೩೦ ಆಗಿತ್ತು, ಹೊಟ್ಟೆ ಬೇರೆ ಚುರುಗುಡ್ತಿತ್ತು. ಆಗ ತಾನೇ ಒಂದು ಹೋಟೆಲ್ ಓಪನ್ ಆಗಿತ್ತು, ಎಲ್ಲರೂ ಅಲ್ಲಿಗೆ ಹೆಜ್ಜೆ ಹಾಕಿದೆವು. ಅಲ್ಲೇ ಇದ್ದ ಸಿಂಕಲ್ಲೇ ಬ್ರಶ್ ಮಾಡಿ ಇಡ್ಲಿ,ಬನ್, ಚೌ ಚೌ ಬಾತ್ ಆರ್ಡರ್ ಮಾಡಿದೆವು. ಬೆಟ್ಟ ಹತ್ತಬೇಕಲ್ಲ ಬೆಳಗ್ಗೆ ಜಾಸ್ತಿ ತಿಂದರೆ ಚೆನ್ನಾಗಿ ಹತ್ತಬಹುದು ಅಂತ ಸರಿಯಾಗಿ ತಿಂದ್ವಿ.

ತಿಂಡಿ ತಿಂದು ಹೊರಗೆ ಬಂದ ಕೂಡಲೇ ಬಸ್ ಸ್ಟ್ಯಾಂಡ್ನಲ್ಲಿ ಶ್ರೀ ಮಂಗಲ, ಇರ್ಪು, ಕುಟ್ಟ ಅಂತ ಕೂಗ್ತಿದ್ರು. 7.15ರ ಸುಮಾರಿಗೆ ಶ್ರೀ ಮಂಗಲ ಬಸ್ ಹತ್ತಿದ್ವಿ. ವೆಂಕ, ಪಕ್ಯ, ರಂಜನ್ ಬಸ್ ಹತ್ತಿದ ತಕ್ಷಣವೇ ಪಾಚ್ಕೊಂಡ್ರು. ಬಸ್ ಶ್ರೀ ಮಂಗಲ ಬರೋ ಹೊತ್ತಿಗೆ 8.15 ಆಗಿತ್ತು. ಇಳಿದವರೇ ಟ್ರೆಕ್ ಮಾಡೋದಕ್ಕೆ ಅನುಮತಿ ಪಡೆಯೋದಕ್ಕೆ ಫಾರೆಸ್ಟ್ ಆಫೀಸಿಗೆ ಹೋದ್ವಿ.
ಅಲ್ಲಿ 8.15 ಆದ್ರೂ ಹೊರಗಡೆ ಲೈಟ್ ಹಾಗೇ ಉರೀತಿತ್ತು, ಅವ್ರು ಬರೋದು ೯ ಅಂತ ಗೊತ್ತಾಯ್ತು. ಅಲ್ಲೇ ಸ್ವಿಚ್ ಇದೆಯೇನೋ ಅಂತ ನೋಡಿದ್ವಿ, ಉಹುಂ, ಇರ್ಲಿಲ್ಲ. ನಾನು ಪಕ್ಯನಿಗೆ ಹೇಳ್ದೆ, ಅವನು ವೆಂಕನ ಸಲಹೆಯ ಮೇರೆಗೆ ಮೈನ್ ಸ್ವಿಚ್ ಆರಿಸಿ ಬಂದ.


ಇನ್ನೂ ಮುಕ್ಕಾಲು ಗಂಟೆ ಏನು ಮಾಡೋದು ಅಂದ್ಕೊಂಡು ಶ್ರೀ ಮಂಗಲ ಪೇಟೆ ಸುತ್ತೋಕೆ ೩ ಜನ ಹೊರಟ್ವಿ, ರಂಜನ್ ಅಲ್ಲೇ ಬಿಟ್ಟು.
ಪೇಟೆ ಸುತ್ತಾಡಿ ೧ ಲೋಟ ಕಾಫಿ ಕುಡಿದು ವಾಪಸ್ ಹೋದ್ವಿ, ಆಗ ತಾನೇ ಬಂದಿದ್ರು, ಪರ್ಮಿಶನ್ ತಗೊಂಡಾದ್ಮೇಲೆ ಆ ವಯ್ಯಂಗೆ ಹೊರಗಡೆ ಲೈಟ್ ಉರೀತಿತ್ತು ಮೈನ್ ಸ್ವಿಚ್ ಆರಿಸಿದ್ವಿ ಈಗ ಆನ್ ಮಾಡ್ತೀವಿ , ಅದ್ರ ಸ್ವಿಚ್ ಆಫ್ ಮಾಡಿ ಅಂದ್ವಿ, ಅವ್ನು ಹಂಗೆ ಮುಖ ನೋಡಿ ಆಗ್ಲಿ ಸಾರ್ ಅಂದ.

ಶ್ರೀ ಮಂಗಲದಿಂದ ಇರ್ಪುಗೆ ಬಸ್ನಲ್ಲಿ ಹೋಗ್ಬೇಕಿತ್ತು, ಅಕ್ಕಿ ದಿನಸಿ ಸಾಮಾನು ತಗೊಂಡು ಬಸ್ ಹತ್ತಿದೆವು. ಇನ್ನೇನು ಬಸ್ ಹೊರಡ್ಬೇಕು ಅಷ್ಟರಲ್ಲಿ ಇನ್ನೊಂದು ಟ್ರೆಕ್ ಟೀಮ್ ಬಂತು. ಒಬ್ಬನ ಕೈಲಿ ಪ್ಲಾಸ್ಟಿಕ್ ತಟ್ಟೆ ಇತ್ತು. ನಮಗೆ ಅನುಮಾನ ಬಂದು, ಪಕ್ಯ ತಟ್ಟೆ ತೆಗೆದುಕೊಂಡಿದೀಯೇನೋ ಅಂದೆ, ಅವ್ನು ಇಲ್ಲ ಅಂತ ಮುಖ ಅಲ್ಲಾಡಿಸಿದ. 'ಅದ್ಯಾವ ಸೀಮೆ ಟ್ರಿಪ್ ಆರ್ಗನೈಸ್ ಮಾಡ್ತೀರೋ, ನಿನ್ನ ಜನ್ಮಕ್ಕೆ ಒಂದಿಷ್ಟು, ಹೋಗಿ ತಗೋ ಬಾ' ವೆಂಕ ಕ್ಯಾಕರಿಸಿ ಉಗಿತಿದ್ದ.
ಪಕ್ಯ ಓಡಿ ಹೋಗಿ ತಂದ.


ಬಸ್ ಇರ್ಪು ತಲುಪುವ ಹೊತ್ತಿಗೆ 10.30 ಗಂಟೆ ಆಗಿತ್ತು. ಜಾತ್ರೆ ನಡೀತಿತ್ತು ಶಿವರಾತ್ರಿ ಹಬ್ಬದ ಪ್ರಯುಕ್ತ. ಅಲ್ಲಿಂದ ೩ ಜನ ಗೈಡ್ ಒಟ್ಟಿಗೆ ಹೊರಟ್ವಿ, ಒಟ್ಟು 3 ಟೀಮ್ (18 ಜನ) ನಮ್ದು ಸೇರಿ. ಶುರುವಾಯ್ತು ಅಲ್ಲಿಂದ ನಮ್ಮ ಚಾರಣ......

ಕ್ಕಿಗಳ ಕಲರವ, ಪ್ರಕ್ರ್ರತಿಯ ಸೌಂದರ್ಯ ಆಸ್ವಾದಿಸುತ್ತಾ , ಒಬ್ಬೊಬ್ಬರ ಕಾಲು ಎಳೀತಾ,ಸಿಕ್ಕ ಸಿಕ್ಕ ಜರಿಗಳಲ್ಲಿ ತಂಪಾದ, ಅಷ್ಟೇ ಶುದ್ಧವಾದ ನೀರು ಕುಡೀತಾ, ಬಾಟಲಿಗೆ ನೀರು ತುಂಬಿಸಿಕೊಂಡು ಸೆಖೆ ಆದ್ರೆ ಮುಖಕ್ಕೆ ತಲೆಗೆ ಸುರಿದುಕೊಂಡು, ನಮ್ಮ ಪಯಣ ಸಾಗಿತ್ತು.

೧ ಗಂಟೆ ನಡೆದಿರಬಹುದು, ಅಷ್ಟೊತ್ತಿಗೆ ಎದ್ರುಗಡೆಯಿಂದ ಇಬ್ರು ಬರ್ತಿದ್ರು, ಗಂಡ ಹೆಂಡತಿ ಟ್ರೆಕ್ ಹೋಗಿ ವಾಪಸ್ ಬರ್ತಿದ್ರು. ಮುಂದೆ ಹೋಗಿದ್ದ ಗೈಡ್ ಅವರನ್ನ ವಾಪಸ್ ಕರ್ಕೊಂಡು, ಬೈಕೊಂಡು ಬರ್ತಿದ್ದ ಕನ್ನಡದಲ್ಲಿ, ಅವ್ರಿಗೆ ಕನ್ನಡ ಬರ್ತಿರ್ಲಿಲ್ಲ. 'ಟ್ರೆಕ್ ಮಾಡೋದಕ್ಕೆ ಪರ್ಮಿಶನ್ ಇಲ್ಲದೆ ಹೋಗಿದ್ದಾರೆ ಸಾರ್, ಇವರಿಗೆ ಜೈಲ್ಗೆ ಹಾಕಿಸಬೇಕು ಸಾರ್ ಇಲ್ಲಾಂದ್ರೆ ನಮ್ಮನ್ನ ಹಾಕ್ತಾರೆ' ಗೈಡ್ ನಮ್ಮನ್ನ ನೋಡಿ ಒಂದೇ ಸಮನೆ ಉಗಿತಿದ್ದ.

ನಾವು ಏನಾಯ್ತು ಅಂತ ಅವರನ್ನ ಕೇಳಿದಕ್ಕೆ '೮ ಗಂಟೆಗೆ ಫಾರೆಸ್ಟ್ ಆಫೀಸಿಗೆ ಹೋದ್ವಿ, ಯಾರೂ ಇರ್ಲಿಲ್ಲ. ಫೋನ್ ಸಹ ಮಾಡಿದ್ವಿ, ಯಾರೂ ಎತ್ತಲಿಲ್ಲ. ಇನ್ನೇನು ಮಾಡೋದು ಅಂತ ಟ್ರೆಕ್ ಮಾಡೋದಕ್ಕೆ ಶುರು ಮಾಡಿದ್ವಿ' ಅಂದ.

ನನ್ಮಕ್ಳು ಮೊದ್ಲೇ ತಪ್ಪು ಮಾಡಿದ್ರು ಅದ್ರ ಜೊತೆಗೆ ಬೇಡದೆ ಇರೋ ವಿಷಯಗಳು.
ಅಷ್ಟೊತ್ತಿಗೆ ಗೈಡ್ ಇದ್ದವನು 'ಸಾರ್, ಕಥೆ ಹೇಳ್ತಾ ಇರ್ತಾರೆ ಇವ್ರು. ಅವರನ್ನ ಫಾರೆಸ್ಟ್ ಆಫೀಸಿಗೆ ಕರ್ಕೊಂಡು ಹೋಗ್ತೀವಿ ನೀವು ಇಲ್ಲೇ ಇರಿ'.

ನಾವೆಲ್ಲರೂ ಹೋಗ್ಲಿ ಬಿಡಿ ಸಾರ್ ಹೆಂಗಿದ್ರೂ ವಾಪಸ್ ಹೋಗ್ತಿದ್ದಾರಲ್ಲ ಅಂದ್ವಿ.

ಇಲ್ಲ ಸಾರ್ ಹಂಗೆಲ್ಲ ಆಗಲ್ಲ, ಹೆಚ್ಚು ಕಡಿಮೆ ಆದ್ರೆ ನಮ್ಮ ಕುತ್ತಿಗೆಗೆ ಬರತ್ತೆ ಸಾರ್ ಅಂದ ಇನ್ನೊಬ್ಬ ಗೈಡ್.

ಆಮೇಲೆ ೩ ಜನನೂ ಏನೋ ಮಾತಾಡ್ಕೊಂಡು ವೆಂಕನ್ನ 'ನೀವು ಬನ್ನಿ ಸಾರ್' ಇಲ್ಲ ಅಂತ ಅವರನ್ನೂ ಕರ್ಕೊಂಡು ಆಚೆಗೆ ಹೋದ್ರು.

ಏನೋ ಡೀಲ್ ಮಾಡ್ಕೊಂಡು ಅವರಿಬ್ಬರನ್ನ ವಾಪಸ್ ಕಳ್ಸಿ ೪ ಜನನೂ ವಾಪಸ್ ಬಂದ್ರು.
ಎಷ್ಟಕ್ಕೆ ಡೀಲಾಯ್ತು ವೆಂಕ?

೧೫೦೦.೦೦

ಮೂವರಿಗೂ ೫೦೦ ರೂ ಹಾಗಿದ್ರೆ . ೨೦೦೦ ಕೇಳಬೇಕಿತ್ತು, ೫೦೦ ರೂ ನಮ್ಮ ಖರ್ಚಿಗೆ ಇಟ್ಕೊಬಹುದಿತ್ತಲ್ಲ? :)

ಮಾಡಬಹುದಿತ್ತು....ಹೋಗ್ಲಿ ಬಿಡಿ

೧೫ ನಿಮಿಷ ಈ ಆಟ ಮುಗಿದ ಮೇಲೆ ಮತ್ತೆ ಪಯಣ ಶುರುವಾಯಿತು. ಸುಮಾರು ೧೨.೩೦ಕೆ ಒಂದು ಹೊಳೆ ಸಿಕ್ತು (ಲಕ್ಷ್ಮಣತೀರ್ಥ). ಹೊಟ್ಟೆ ಬೇರೆ ಚುರುಗುಡ್ತಿತ್ತು, ಬೆಳಗ್ಗೆ ಬೇರೆ ಬೇಗ ತಿಂದ ಪರಿಣಾಮ ಎಲ್ಲರೂ ತಿನ್ನೋದಕ್ಕೆ ಕಾತರರಾಗಿದ್ದರು.
ಪಕ್ಯ ಬ್ಯಾಗಿಂದ ಚಪಾತಿ ಮತ್ತೆ ಟೊಮೇಟೊ ಪಲ್ಯ ತೆಗೆದ. ಗೈಡ್ಗೆ ಕೊಟ್ಟು ಎಲ್ಲರೂ ೩-೩ ಚಪಾತಿ ತಿಂದು ಹೊಳೆಯಲ್ಲಿ ಕೈ ತೊಳೆದುಕೊಂಡು ಮತ್ತೆ ಹೆಜ್ಜೆ ಹಾಕಿದೆವು. ಇಲ್ಲಿವರೆಗೆ ಕಾಡಿನ ತಂಪಲ್ಲಿ ಆರಾಮಾಗಿ ಹೋಗ್ತಿದ್ದ ನಮಗೆ ಬಯಲು ಜಾಗ ಸಿಕ್ತು. ಅರ್ಧ ಗಂಟೆ ನಡೆಯೋವಷ್ಟರಲ್ಲಿ ಸುಸ್ತಾಗಿ ಸಿಕ್ಕ ಬಂಡೆ ಮೇಲೆ ಹಾಗೇ ಬಿದ್ಕೊಂಡ್ವಿ.

ಆದ್ರೆ ಡುಮ್ಮ ಇನ್ನು ಹತ್ತುತ್ತನೇ ಇದ್ದ. ಅವ್ನು ಬರೋವರೆಗೋ ಕಾದ್ವಿ. ಬಂದಾದ್ಮೇಲೆ ಪಕ್ಯ 'ಲೋ ಡುಮ್ಮ, ನಿನ್ನಿಂದನೆ ಲೇಟ್ ಆಗ್ತಿರೋದು, ಇಲ್ಲಂದಿದ್ರೆ ಇಷ್ಟೊತ್ತಿಗೆ ಆ ಟೀಮಿಗಿಂತ ಮೊದ್ಲು ಹೋಗ್ತಿದ್ವಿ'.

ಅದ್ಕೆ ರಂಜನ್ 'ಇವೆಲ್ಲ ಡಂಗಾಣಿಗಳು ಬೇಡಮ್ಮ, ನಂಗೇನೂ ನೀವು ಕಾಯೋದು ಬೇಡ ನಾನು ನಿಧಾನಕ್ಕೆ ಬರ್ತೀನಿ. ನೀವು ಹೋಗ್ತಿರಿ'.

'ಅದ್ಹೇಗಾಗತ್ತೆ, ನೀನು ಬಂದ್ರೆ ನಮ್ಮ ಟೀಮಿಗೆ ಒಂತರಾ ಗಾಂಭೀರ್ಯ' ಅಂತಂದ ಪಕ್ಯ.

ನಾನಿದ್ದೋನು 'ಗಾಂಭೀರ್ಯ ಅಲ್ಲ ಮಗಾ, ಗಜ ಗಾಂಭೀರ್ಯ ಅನ್ನು' ಅಂದೆ :).

ಅಲ್ಲಿವರೆಗೆ ನಿರ್ಜೀವವಾಗಿದ್ದ ಮೊಬೈಲ್ಗಳು ಸಿಗ್ನಲ್ ಸಿಕ್ಕ ಪರಿಣಾಮ ಒಂದೇ ಸಮನೆ ಹೊಡೆದುಕೊಳ್ಳತೊಡಗಿದವು(ಮೆಸೇಜು, ಕಾಲ್). ಅವ್ರ ಅಪ್ಪ ಅಮ್ಮನಿಗೆ, ಹೆಂಡತಿಗೆ, ಗರ್ಲ್ಫ್ರೆಂಡ್ಗೆ ಕಾಲ್ ಮಾಡಿ ತಾವು ಇರೋ ಜಾಗ ಹೇಳಾದಮೇಲೆ ಮತ್ತೆ ಕಾಲುಗಳು ಬೆಟ್ಟದ ಕಡೆ ಹೆಜ್ಜೆ ಹಾಕಿದವು.
೧.೩೦ಕ್ಕೆ ಸರಿಯಾಗಿ ಗೆಸ್ಟ್ ಹೌಸ್ ತಲುಪಿದ್ವಿ.

೧೫ ನಿಮಿಷ ರೆಸ್ಟ್ ತಗೊಂಡು ಬ್ರಮ್ಹಗಿರಿ ಪೀಕ್ಗೆ ಹೋಗೋಣ ಅಂತ ಗೈಡ್ ಅಂದ.

ಬ್ಯಾಗ್ ಅಲ್ಲೇ ಗೆಸ್ಟ್ ಹೌಸ್ನಲ್ಲಿ ಎಸೆದು ಮತ್ತೆ ಶುರುವಾದ ಪಯಣ ಸುಮಾರು ೨ ತಾಸು ಎಲ್ಲೂ ಕೂರದೆ ಮುಂದುವರೆಯಿತು ಕಾರಣ ಸಮನಾದ ಹಾದಿ, ಅಲ್ಲದೆ ದೂರದ ಬೆಟ್ಟಗಳು, ಮೋಡಗಳು ನಮ್ಮ ಹರಟೆ ಇವುಗಳಿಂದ ನಮ್ಮ ದಾರಿ ಸಾಗಿದ್ದೇ ತಿಳಿಯಲಿಲ್ಲ.
ಕೊನೆಗೂ ಬ್ರಮ್ಹಗಿರಿಯ ತುದಿ ಹತ್ತುವ ಜಾಗ ಬಂತು. ಎಲ್ಲರಿಗೂ ಆ ಬೆಟ್ಟ ನೋಡಿ ಶಾಕ್ ಹೊಡೆದ ಹಾಗಾಯ್ತು. ೭೦-೭೫ ಡಿಗ್ರಿಯಲ್ಲಿದ್ದ ಬೆಟ್ಟವನ್ನ ನೋಡಿ ಹೇಗಪ್ಪ ಹತ್ತೋದು ಅಂತ ಎಲ್ಲರ ಮನಸ್ಸಿನಲ್ಲೂ ಪ್ರಶ್ನೆಗಳ ಸರಮಾಲೆ ಏಳುತ್ತಿತ್ತು.

ಡುಮ್ಮ ಇದ್ದವನು 'ನನ್ನ ಕೈಲಿ ಆಗಲ್ಲ ನೀವು ಹೋಗಿ' ಅಂದ. ನಾವು ಹತ್ತೋದಕ್ಕೆ ರೆಡಿ ಇದೀವೇನೋ ಅನ್ನೋರ ಹಾಗೆ!!!!!

೫ ನಿಮಿಷ ಎಲ್ಲ ಯೋಚನೆ ಮಾಡಿ ಹತ್ತಿದರೆ ಆಯ್ತು ಅಂತ ನಿರ್ಧಾರ ಮಾಡಿ ಹತ್ತೋದಕ್ಕೆ ಶುರು ಮಾಡಿದ್ವಿ, ಆಗ ೩.೩೦ ಆಗಿತ್ತು.

ನಾನು,ಪಕ್ಯ ಮುಂದಿದ್ವಿ, ವೆಂಕ ಸ್ವಲ್ಪ ಹಿಂದಿದ್ದ.

'ಪಕ್ಯ, ಎಷ್ಟು ಆಗತ್ತೋ ಅಷ್ಟು ಓಡೋಣ' ಅಂದೆ. ಈ ತರ ತಲೆಹಿಡಕ ಐಡಿಯಾಗಳು ನಮ್ಮಲ್ಲಿ ಸಾಮಾನ್ಯವಾಗಿದ್ದರಿಂದ ಪಕ್ಯ 'ಹೂಂ' ಅಂದ. ಸ್ವಲ್ಪ ಜಾರಿದ್ರೆ ಬಿದ್ದು ಮತ್ತೆ ಬೆಟ್ಟದ ತಳ ತಲುಪೋ ಹಾಗಿದ್ದ ಜಾಗದಲ್ಲಿ ಓಡೋದಕ್ಕೆ ಶುರುಮಾಡಿದ್ವಿ. ೨ ನಿಮಿಷ ಓಡಿ ಭಯಂಕರ ಸುಸ್ತಾಗಿ ೫ ನಿಮಿಷ ರೆಸ್ಟ್ ತಗೊಂಡ್ವಿ. ವೆಂಕ ಇನ್ನೂ ಕೆಳಗೆ ಇದ್ದ.

ಕೆಲವರು ಕೋಲು ಹಿಡ್ಕೊಂಡು ಹತ್ತುತ್ತಿದ್ರು ಇನ್ನ ಕೆಲವರು ತೆವಳಿಕೊಂಡು ಹೋಗ್ತಿದ್ರು :).

ನಾವು ಯಾವುದರ ಸಹಾಯವಿಲ್ಲದೆ ಹತ್ತುತ್ತಿದ್ದೆವು, ನಡೆಯುವಾಗ ಹಿಂದಿರುಗಿ ನೋಡ್ತಿರ್ಲಿಲ್ಲ,ಆಯಾ ತಪ್ಪಿ ಬೀಳೋ ಸಂಭವ ಜಾಸ್ತಿಯಿದ್ದುದ್ದರಿಂದ. ನಿಂತು ತಿರುಗಿ ನೋಡಿ ಮತ್ತೆ ಮುಂದುವರೆಯುತ್ತಿದ್ದೆವು. ಅಂತೂ ಅರ್ಧ ಗಂಟೆಯಾಗುವಷ್ಟರಲ್ಲಿ ಸುಸ್ತಾಗಿ ಹೋಗಿದ್ದೆವು, ತುದಿ ಸ್ವಲ್ಪಾನೆ ಕಾಣಿಸ್ತಿತ್ತು. ೧೦ ನಿಮಿಷ ಬಂತು ಪಕ್ಯ ನಡಿ ಅಂತ ಹೊರಟ್ವಿ.

ಕೊನೆಗೂ ಬಂತು, ಯಾವದನ್ನ ನೋಡ್ಬೇಕು ಅಂತ ೨ ಸಲ ಟ್ರೆಕ್ ಮಾಡ್ಕೊಂಡು ಬಂದ್ವೋ ಅದು.

ಶರ್ಟ್ ಬಿಚ್ಚೆಸೆದು ಹಾಗೇ ಹುಲ್ಲಿನ ಮೇಲೆ ಇಬ್ರೂ ಬಿದ್ಕೊಂಡ್ವಿ. ಒಂದು ಟೀಮ್ ಆಗ್ಲೇ ಹೋಗಿತ್ತು, ಇನ್ನೊಂದು ಟೀಮಿನ ಸ್ವಲ್ಪ ಜನ ಬೆಟ್ಟದಲ್ಲಿ ಕೂತಿದ್ರು. ೫ ನಿಮಿಷ ಆದ್ಮೇಲೆ ವೆಂಕ ಬಂದ. ಸುಸ್ತಾಗಿದ್ದ ನಾವು ಕೇಕ್ ತಿಂದು ಜ್ಯೂಸ್ ಕುಡಿದು ಸ್ವಲ್ಪ ಡುಮ್ಮಂಗೆ ಇಟ್ವಿ.

ಒಂದು ವಿಷಯ ೨ ಟೀಮ್ನಲ್ಲಿ ಕಾಮನ್ ಇದ್ದಿದ್ದು ಅಂದ್ರೆ ಡುಮ್ಮಂದಿರೆ!!! ಅವ್ರಿಬ್ರೂ ಕಾಲು ಗಂಟೆ ಆದ್ರೂ ಬರ್ಲಿಲ್ಲ. ಮೇಲಿಂದ ಹೋಗಿ ನೋಡಿದ್ವಿ, ಇಬ್ರೂ ಕಾಣಲಿಲ್ಲ....ಮೇಲಿಂದ ಕಿರುಚಿದ್ವಿ. ಉಹುಂ, ಶಬ್ಧನೆ ಇಲ್ಲ.
ಸ್ವಲ್ಪ ಹೊತ್ತು ನೋಡಿ ಆಮೇಲೆ ಸ್ವಲ್ಪ ಕೆಳಗೆ ಹೋಗಿ ನೋಡುವ ಅಂದೆ.

೧೦ ನಿಮಿಷ ಬಿಟ್ಟು ಆ ಟೀಮಿನ ಡುಮ್ಮ ಬಂದ. ನಮ್ಮ ಡುಮ್ಮ?? :(
ಅವರನ್ನ ಕೇಳಿದಾಗ 'ಬರ್ತಾ ಇದ್ದಾರೆ, ಕೆಳಗೆ ಇದ್ದಾರೆ'.

ಪಕ್ಯ ನಾನು ಹೋದ್ವಿ, ಸ್ವಲ್ಪ ಹೊತ್ತು ಕೂಗಿದ ಮೇಲೆ ಅವನು ಹೋ ಅಂದ ಸದ್ದು ಕೇಳುಸ್ತು, ಮುಂದೆ ಹೋಗಿ ನೋಡಿದ್ವಿ. ಒಬ್ನೇ ಬರೋ ಹಾಗೆ ಇರ್ಲಿಲ್ಲ. ಪಕ್ಯ ಇದ್ದವನು ನಾನು ಹೋಗಿ ಕರ್ಕೊಂಡುಬರ್ತೀನಿ ಅಂದ. ಒಬ್ರು ಬರೋದೆ ಕಷ್ಟ ಆಗಿರೋ ದಾರಿಯಲ್ಲಿ ಪಕ್ಯ ಅಂತೂ ಡುಮ್ಮನನ್ನ ಕೈ ಹಿಡ್ಕೊಂಡು ಕರ್ಕೊಂಡು ಬಂದ.

ಆದ್ರೂ ರಂಜನ್ಗೆ(ಡುಮ್ಮ) ಒಂದು ಹ್ಯಾಟ್ಸಾಫ್ ಹೇಳಲೇಬೇಕು, ಆ ಪೀಕ್ ಹತ್ತೋ ಧೈರ್ಯ ಮಾಡಿದ್ದಕ್ಕೆ.


ನಮ್ಮ ಫೋಟೋ ಅವ್ರ ಹತ್ರ ತೆಗೆಸಿ ಅವ್ರ ಫೋಟೋ ನಾವು ತೆಗೆದು ಮತ್ತೆ ವಾಪಸ್ ಇಳಿಯೋದಕ್ಕೆ ಶುರು ಮಾಡಿದ್ವಿ. ನಾವು ಬಂದ ದಾರಿನಲ್ಲೇ ಇಳಿದಿದ್ರೆ ನಮ್ಮನ್ನ ಮಣ್ಣು ಮಾಡೋ ಅವಶ್ಯಕತೆನೂ ಇರ್ತಿರ್ಲಿಲ್ಲ. ಅದ್ಕೆ ಬರೀ ಹುಲ್ಲು ಇರೋ ಜಾಗದಲ್ಲೇಇಳಿಯೋದಕ್ಕೆ ಶುರು ಮಾಡಿದ್ವಿ. ಅಲ್ಲೆಲ್ಲ ಬರೀ ಇಲಿಗಳು ತೂತು ಮಾಡಿದ್ವು, ನಮ್ಮ ಪುಣ್ಯಕ್ಕೆ ಎಲ್ಲೂ ಹಾವು ಇರ್ಲಿಲ್ಲ. ಇದ್ದಿದ್ರೆ ಡೈರೆಕ್ಟಾಗಿ ಕೆಳಗೆ ಲ್ಯಾಂಡ್ ಆಗ್ತಿದ್ವೇನೋ.

ನಾನು ವೆಂಕ ೧೦ ನಿಮಿಷಕ್ಕೆ ಕೆಳಗೆ ಬಂದ್ವಿ. ಪಕ್ಯ ಮತ್ತೆ ಡುಮ್ಮ ನಿಧಾನ ಬರ್ತಿದ್ರು.

ಅಲ್ಲಿಂದ ಮತ್ತೆ ೧.೩೦ ಗಂಟೆಗಳ ಕಾಲ ಸಮನಾದ ಜಾಗದಲ್ಲಿ ವೇಗವಾಗಿ ನಮ್ಮ ಕಾಲುಗಳು ಹೆಜ್ಜೆ ಹಾಕಿದವು. ಸಂಜೆ ಆದ ಕಾರಣ, ಸೂರ್ಯ ಚೆನ್ನಾಗಿ ಕಾಣುತ್ತಿದ್ದ ಜೊತೆಗೆ ದೂರದ ಬೆಟ್ಟಗಳು, ಆ ಚೆಲುವನ್ನು ಆಸ್ವಾದಿಸುತ್ತಾ ಹೆಜ್ಜೆಗಳ ವೇಗ ಜಾಸ್ತಿಯಾಗುತ್ತಿತ್ತು ಕತ್ತಲಾಗುತ್ತಿದ್ದರಿಂದ .
ಮಾರ್ಗ ಮಧ್ಯದ ಕಾಡಿನಲ್ಲಿ ಪಕ್ಯ 'ಅಡಿಗೆಗೆ ಸೌದೆ ತಗೊಳ್ರೋ' ಅಂದಿದ್ದ. ಎಲ್ಲರೂ ಸ್ವಲ್ಪ ಸ್ವಲ್ಪ ತಗೊಂಡು ಗೆಸ್ಟ್ ಹೌಸ್ ಕಡೆ ಹೆಜ್ಜೆ ಹಾಕಿದ್ವಿ.

ರಾತ್ರಿ ೭ ಗಂಟೆ ಆಗಿತ್ತು ಗೆಸ್ಟ್ ಹೌಸ್ ತಲುಪುವ ಹೊತ್ತಿಗೆ. ಸೌದೆ ಎಸೆದು ಕ್ಯಾಮೆರಾ ಇಟ್ಟು ೧೦ ನಿಮಿಷ ರೆಸ್ಟ್ ತಗೊಂಡಾದ್ಮೇಲೆ ಗೆಸ್ಟ್ ಹೌಸ್ನಲ್ಲಿದ್ದ ಕೊಡ ತಗೊಂಡು ನೀರು ತರೋದಕ್ಕೆ ಪಕ್ಯ ನಾನು ಹೊರಟ್ವಿ.

ನನ್ನ ಮೊಬೈಲ್ ಲೈಟಲ್ಲೇ ಹೊಳೆ ಹುಡುಕ್ತಾ ನಾನು ಪಕ್ಯ ಹೆಜ್ಜೆ ಹಾಕಿದ್ವಿ. ಅಷ್ಟೊತ್ತಿಗಾಗ್ಲೆ ಉಳಿದ ಟೀಮಿನವರು ನೀರು ತರ್ತಿದ್ರು. ಅಂತೂ ಒಂದು ಕೊಡ ನೀರನ್ನ ಕಷ್ಟಪಟ್ಟು ತುಂಬಿಸಿ ಪಕ್ಯ ಹೊತ್ಕೊಂಡು ಬಂದ ನಾನು ಬೆಳಕಾಗಿದ್ದೆ ಅವನಿಗೆ.

ಡುಮ್ಮ,,ಕುಳ್ಡ ತರಕಾರಿ ಹೆಚ್ತಿದ್ರು. ಪಕ್ಯನ್ನ ನೋಡಿದ್ದೇ ತಡ ಕುಳ್ಡ ಇದ್ದವನು 'ಲೇ, ಪಲಾವ್ ಮಾಡ್ತೀನಿ ಅಂತ ಹೀರೆಕಾಯಿ ತಂದಿದೀಯಲ್ಲೋ ಮಂಗ ನನ್ಮಗನೇ, ಅದ್ರ ಜೊತೆಗೆ ಬೀನ್ಸ್ ಬಲಿತು ಹೋಗಿದೆ, ಕ್ಯಾರೆಟ್ ಬೇರೆ ಇಲ್ಲ. ಅದೇನೋ ಪಲಾವ್ ಮಾಡಿ ಕಿಸಿದು ದಬಹಾಕ್ತೀನಿ ಅಂದ್ಯಲ್ಲ...ಇದೇನಾ. ಸರಿ ಮಾಡು ಅದ್ಹೇನು ಮಾಡ್ತೀಯಾ ನೋಡೋಣ'.

ನಾನು ಆಗಿದ್ರೆ ಕುಳ್ಡನ ತಲೆ ಮೇಲೆ ಕೊಡದಲ್ಲಿದ್ದ ಎಲ್ಲ ನೀರು ಸುರೀತಿದ್ನೇನೋ ಆದ್ರೆ ಪಕ್ಯ ಸುಮ್ನೆ ಕೇಳ್ತಿದ್ದ.

'ನಾನು ನನ್ನ ಫ್ರೆಂಡ್ಗೆ ಹೇಳ್ದೆ ಅವ್ನು ಇಷ್ಟನ್ನ ತಂದ' ಪಕ್ಯ ಅಂದ.

ಬೈತಾನೆ ವೆಂಕ ನಾನೇ ಮಾಡ್ತೀನಿ ಅಂತ ಪಲಾವ್ ಮಾಡಿದ. ಆದ್ರೆ ರುಚಿನೇ ಇರ್ಲಿಲ್ಲ, ಇನ್ನೇನು ಮಾಡೋದು ಅಂತ ಅದನ್ನೇ ನಾನು ವೆಂಕ ತಿಂದ್ವಿ. ಪಕ್ಯ ಡುಮ್ಮ ಕುಡಿದಾದ್ಮೇಲೆ ಊಟ ಮಾಡ್ತೀವಿ ಅಂದ್ರು. ಇನ್ನೊಂದು ಟೀಮಿನವರು ಅಂತ್ಯಾಕ್ಷರಿ ಹಾಡ್ತಿದ್ರು ನಾವೂ ಆಗಾಗ ಒಂದೊಂದು ಫಿಲಂ ಹೆಸರು ಹೇಳ್ತಿದ್ವಿ.

ಪಕ್ಯ ಡುಮ್ಮ ಕುಡಿದಾದ್ಮೇಲೆ ಊಟ ಮಾಡೋದಕ್ಕೆ ಕೂತ್ರು, ಯಾಕೋ ರುಚಿ ಹತ್ಲಿಲ್ಲ ಅನ್ಸತ್ತೆ, ಗೈಡ್ಗಳು ಸಾರು ಮಾಡಿದ್ರು ಅದನ್ನೇ ಪಲಾವ್ ಮೇಲೆ ಸುರ್ಕೊಂಡು ತಿಂದ್ರು.
ಪಲಾವ್ ಮೇಲೆ ಸಾಂಬಾರ್!!!!

ಊಟ ಆದ್ಮೇಲೆ ಮಲಗೋಕೆ ರೆಡಿಯಾದ್ವಿ. ಪಕ್ಕದ ರೂಮಲ್ಲಿದ್ದ ಒಂದು ಬೆಡ್ ತಂದು ನಮ್ಮ ರೂಮಿಗೆ ಹಾಕೊಂಡು ಎಲ್ರೂ ಮಲಗಿದೆವು. ಕುಳ್ಡ, ಡುಮ್ಮ ಕಿತ್ಕೊಂಡು ಗೊರಕೆ ಹೊಡೆಯೋದಕ್ಕೆ ಶುರು ಮಾಡಿದ್ರು. ಒಂದು ಗಂಟೆ ನಿದ್ರೆ ಬರ್ಲಿಲ್ಲ ಆಮೇಲೆ ಆಯಾಸ ಆಗಿದ್ದ ಪರಿಣಾಮ ನಿದ್ರೆ ಹತ್ತಿತು.

ಬೆಳಗ್ಗೆ ೭ ಗಂಟೆಗೆ ಎದ್ದು ಎಲ್ಲ ಕೆಲಸ ಮುಗಿಸಿ ಮ್ಯಾಗಿ ತಿಂದ್ಕೊಂಡು ನರಿಮಲೆ ಬೆಟ್ಟಕ್ಕೆ ಹೊರಟ್ವಿ.

೧೦ ಗಂಟೆಗೆ ಬೆಟ್ಟ ತಲುಪಿದ್ವಿ. ನಾವು ನರಿಮಲೆ ಅಂದ್ರೆ ತುಂಬಾ ನರಿ ಇರ್ತವೇನೋ ಅಂದ್ಕೊಂಡು ಗೈಡ್ ಕೇಳಿದ್ವಿ ಯಾಕೆ ನರಿಮಲೆ ಅಂತಾರೆ ಅಂತ.
'ಕೊಡಗು ಭಾಷೇಲಿ ನರಿ ಅಂದ್ರೆ ಹುಲಿ ಅಂತ ಆಗೆಲ್ಲ ಇಲ್ಲಿ ಹುಲಿ ತುಂಬಾ ಇದ್ವು ಅದ್ಕೆ ಹಾಗಂತಿದ್ರು'.

೩೦ ನಿಮಿಷ ಕೂತು ಮತ್ತೆ ಕೆಳಗಿಳಿಯೋದಕ್ಕೆ ಶುರು ಮಾಡಿದ್ವಿ. ೧೨.೩೦ ರ ಹೊತ್ತಿಗೆ ಇರ್ಪು ಫಾಲ್ಸ್ ಹತ್ರ ಬಂದ್ವಿ.
ಭಾನುವಾರ ಆದ್ದರಿಂದ ಸ್ವಲ್ಪ ಜಾಸ್ತಿ ಜನಾನೇ ಇದ್ರು. ಅಲ್ಲೇ ಬಂದೆ ಮೇಲೆ ಚಿಟ್ಟೆಗಳು ಇದ್ವು. ಕ್ಯಾಮೆರಾ ತೆಗೆದು ೩-೪ ಫೋಟೋ ತೆಗೆದೆ(ಪಿಕಾಸ ಲಿಂಕ್ ನೋಡಿ)
ನಾನು ಕುಳ್ಡ ನೀರಿಗೆ ಇಳಿಯೋದಕ್ಕೆ ರೆಡಿ ಆದ್ವಿ, ಪಕ್ಯನ್ನ ಕರೆದ್ವಿ ಬರಲ್ಲ ಅಂದ. ನೀರು ಬೀಳೋತನಕ ಕಬ್ಬಿಣದ ಜಾಲರಿ ಹಾಕಿದ್ರು. ಸೆಕೆಯಲ್ಲಿ ಬೆವೆತಿದ್ದ ದೇಹಕ್ಕೆ ತಣ್ಣೀರು ಸಿಕ್ಕ ಪರಿಗೆ ದೇಹ ಗಡಗಡ ನಡುಗ್ಲಿಕ್ಕೆ ಶುರುವಾಯ್ತು. ಕುಲ್ಡನಿಗೆ ಕಬ್ಬಿಣ ಎಲ್ಲಿ ತನಕ ಇತ್ತು ಅನ್ನೋದು ಕಾಣಿಸಲಿಲ್ಲ ಅನ್ಸತ್ತೆ. ಜಾರಿ ಕಾಲು ತರಚಿಕೊಂಡು ಇಂಗು ತಿಂದ ಮಂಗನ ಹಾಗೆ ಬಂಡೆ ಮೇಲೆ ಹೋಗಿ ಕುಳಿತಿದ್ದ. ನಾನು ಹೋಗಿ ಯಾಕೋ ಏನಾಯ್ತೋ ಅಂತ ಕೇಳಿದ್ರೆ ಕಾಲು ತೋರ್ಸಿದ.


೨ ಗಂಟೆಯ ತನಕ ನೀರಲ್ಲಿ ಆಟ ಆಡಿ ನಾನು ವೆಂಕ ಇರ್ಪು ಕಡೆ ಹೊರಟ್ವಿ. ಪಕ್ಯ ಡುಮ್ಮ ಅಲ್ಲೇ ಇದ್ದ ಹೋಟೆಲ್ ಹತ್ರ ರೆಸ್ಟ್ ತಗೋತಿದ್ರು.
ಹೊಟ್ಟೆ ಬೇರೆ ಚುರುಗುಡ್ತಿತ್ತು, ೨ ದಿನದಿಂದ ಬ್ರೆಡ್ ಬನ್ ತಿಂದಿದ್ದ ನಮಗೆ ಮತ್ತೆ ಅದೇ ತಿನ್ನಬೇಕಲ್ಲ ಅನ್ನನಾದ್ರು (ಪಲಾವ್ ಪಲಾವ್ ಆಗಿರ್ಲಿಲ್ವಲ್ಲ) ಸಿಕ್ಕಿದ್ರೆ ಅಂತ ಯೋಚನೆ ಮಾಡ್ತಿದ್ವಿ, ಅಷ್ಟೊತ್ತಿಗೆ ಇನ್ನೊಂದು ಟೀಮಿನವರು ದೇವಸ್ಥಾನದಲ್ಲಿ ಊಟ ಕೊಡ್ತಿದ್ದಾರೆ ಹೋಗಿ ಅಂದ್ರು.

ಅಷ್ಟು ಹೇಳಿದ್ದೆ ತಡ ಎಲ್ರೂ ಶೂ ಬಿಚ್ಚಿ ದೇವಸ್ಥಾನದ ಕಡೆ ಓಡಿದ್ದೇ!!!

ಬಹುಷ ಅನ್ನ ನಮಗೇ ಕಾಯ್ತಿತ್ತೇನೋ. ೪ ಜನಕ್ಕೆ ಸರಿಯಾಗಿತ್ತು. ಆಮೇಲೆ ಬಂದೋರಿಗೆ ಖಾಲಿ ಖಾಲಿ.

ಊಟ ಮಾಡ್ಕೊಂಡು ಬಸ್ ಸ್ಟಾಪ್ ಹತ್ರ ಹೋಗಿ ಕೂತ್ಕೊಂಡು ಆ ಟೀಮಿನ ಜೊತೆ ಹರಟೆ ಹೊಡೀತಿದ್ವಿ ಅಷ್ಟೊತ್ತಿಗೆ ೩.೪೫ಕ್ಕೆ ಇರ್ಬೇಕು ಗೋಣಿಕೊಪ್ಪಲಿಗೆ ಹೋಗೋ ಬಸ್ ಬಂತು. ಹತ್ತಿ ಕುಳಿತು ಕೆಲವರು ಗಡದ್ದಾಗಿ ನಿದ್ದೆ ಮಾಡಿದ್ರು. ಬಸ್ ಗೋಣಿಕೊಪ್ಪಲು ತಲ್ಪೋ ಹೊತ್ತಿಗೆ ೫.೩೦ ಆಗಿತ್ತು. ಬಸ್ ಇದ್ದಿದ್ದು ೧೧.೪೫ಕ್ಕೆ. ಪೇಟೆ ಸ್ವಲ್ಪ ಸುತ್ತಾಡಿ, ಪಕ್ಯ ಡುಮ್ಮ ಕುಡೀಬೇಕು ಅಂದ್ಮೇಲೆ ೭ ಗಂಟೆಗೆ ಒಂದು ಬಾರಿಗೆ ಹೋಗಿ
ಕುಳಿತವರು ಅಲ್ಲೇ ಊಟ ಮಾಡಿ ಏಳೋವಾಗ ೧೧ ಗಂಟೆ.

ಅಲ್ಲಿಗೆ ಮೊದಲು ಹೋದವರು ನಾವೇ ಕೊನೆಗೆ ಬಂದವರು ನಾವೇ!!!!



ಗೋಣಿಕೊಪ್ಪಲಿಗೆ ಬಂದ ಮೊದಲ ದಿನ ಬೆಳಗ್ಗೆ ಕುಳಿತ ಜಾಗದಲ್ಲೇ ಹೋಗಿ ಮತ್ತೆ ಕುಳಿತೆವು.

೧೧.೪೫ಕ್ಕೆ ಬಂದ ವೋಲ್ವೋ ಬಸ್ ಹತ್ತಿ ಕುಳಿತ ನಾವು ಮೆಜೆಸ್ಟಿಕ್ ತಲುಪೋ ಹೊತ್ತಿಗೆ ಬೆಳಗ್ಗೆ ೫.೧೫. ಅಲ್ಲಿಂದ ಡುಮ್ಮ ಪಕ್ಯ ಅವ್ರ ರೂಮಿಗೆ ಹೊರಟರು ನಾನು ವೆಂಕ ನವರಂಗ್ ಬಸ್ ಹತ್ತಿದ್ವಿ. ಇಳಿದಾದ ಮೇಲೆ ವೆಂಕ ಅವ್ನ ಮನೆಗೆ ಹೋದ. ನಾನು ಮನೆ ತಲುಪಿ ಬ್ಯಾಗ್ ಎಸೆದು ಹಾಸಿಗೆ ಮೇಲೆಬಿದ್ದೆ.

Thursday, February 4, 2010

ಹಾಲು ಕೊಳ್ತೀರಾ?

ಊಟ ಆಗಿತ್ತು, ಅಮ್ಮ ನನಗೆ ಅಪ್ಪನಿಗೆ ಹಾಲು ತಂದು ಇಟ್ಟು ಅಡಿಗೆ ಮನೆಗೆ ಕೆಲಸ ಮಾಡೋದಕ್ಕೆ ಹೋದ್ರು. ನಮ್ಮಪ್ಪ ಹಾಲು ಕುಡೀತಾ 'ಹಾಲು ದೇಹಕ್ಕೆ ಒಳ್ಳೆಯದು ರಾತ್ರಿ ೧ ಲೋಟ ಕುಡೀತಾ ಇರಿ' ಅಂತ ಅಂದ್ರು.

ನಾವು ತುಂಬಾ ದಿನದಿಂದ ಕುಡೀತಾನೆ ಇದೀವಿ ಅಂದೆ.
ಸಾಮಾನ್ಯವಾಗಿ ತಪ್ಪು ಮಾತಾಡದ ನಮ್ಮಪ್ಪ ಅಂದು 'ಓ ಹೌದಾ, ನೀವೇನು ಹಾಲು ಕೊಂಡು ಕೊಳ್ತೀರಾ?' ಅಂದ್ರು .

'ಇಲ್ಲ, ಹಸು ಸಾಕಿದೀವಿ!!' ಅಂದೆ.

ನಮ್ಮಮ್ಮ ಅಡಿಗೆ ಮನೆಯಲ್ಲಿದ್ದವರು ಚಾವಡಿಗೆ ಬಂದು 'ನಾವು ತಪ್ಪಿ ಹೇಳಿದ್ರೆ ಕಂಗಳಿ ಜನಗಳು ಅಂತಿದ್ರಿ, ಈಗ ಹೇಳಿ' ಅಂತ ತಡೀಲಾರದೆ ನಗ್ತಿದ್ರು.

Wednesday, February 3, 2010

ಎಸ್ಸೆಮ್ಮೆಸ್ಸು

೩೦ರಂದು ಎಸ್ಸೆಮ್ಮೆಸ್ಸು ಬಂತೊಂದು
ಸೇವಿಂಗ್ಸ್ ಅಕೌಂಟ್ಗೆ ಕಾಸು ಬಿತ್ತೆಂದು

ಅದ ತೋರಿಸಿದೆ ನನ್ನ ಹುಡುಗಿಗೆ
ಕರೆದುಕೊಂಡು ಹೋದಳು ಮಾಲ್ ಗೆ

ಮಾರನೇ ದಿನ ಮತ್ತೊಂದು ಎಸ್ಸೆಮ್ಮೆಸ್ಸು
ತೋರಿಸುತ್ತಿತ್ತು ನನ್ನ ಅಕೌಂಟ್ ಟುಸ್ಸ್

Monday, February 1, 2010

ಹುಡುಗಿ ನೋಡ್ಲಿಕ್ಕ

ಏನೋ ಹುಡುಗಿ ನೋಡ್ಲಿಕ್ಕ ಅಂದ
ಇಲ್ಲ ಇಲ್ಲ ಊರಲ್ಲಿ ಸ್ವಲ್ಪ ಕೆಲಸ ಇದ ಎಂದ

ಈ ಅಂದ ಚಂದ ನನ್ನತ್ರ ಬೇಡ ಅಂದ
ನಿನ್ನತ್ರ ಸುಳ್ಯಾಕ ಹೇಳ್ತಿನಿರು ಎಂದ

ಅಧೇನ್ಹೇಳು ಮುಂದ ಅಂದ

ಈ ವಾರ ಒಂದ
ಮುಂದಿನವಾರದೊಳಗ ಹನ್ನೊಂದಂದ