Thursday, June 2, 2011

ಮುಂಗಾರಿನ ಮೋಡಗಳೇ ಸ್ವಲ್ಪ ಇಲ್ಲಿ ನೋಡಿ


ಜೂನ್. ಮೇ ತಿಂಗಳವರೆಗೆ ಬೆಚ್ಚಗಿನ ಅನುಭವ ಕಳೆದು ತಂಪಾಗುವ ಕಾಲ.
ಕಾದ ಭುವಿಗೆ ಕಳೆಗಟ್ಟುವ ಸಂಭ್ರಮ.
ಮಳೆ ಶುರುವಾದಾಕ್ಷಣ ಅಪ್ಪನಿಗೆ ನೇಗಿಲು, ಮರವನ್ನು ಹೊರತೆಗೆದು, ಎತ್ತುಗಳನ್ನು ಕೊಟ್ಟಿಗೆಯಿಂದ ಹೊರಡಿಸಿ ಗದ್ದೆಗೆ ಕರೆದುಕೊಂಡು ಹೋಗುವ ಸಂಭ್ರಮ.
ಮನೆಯಾಕೆಗೆ ಒಂದೆಡೆ ಗದ್ದೆಗೆ ಹೋಗುವ ಎಲ್ಲರಿಗೂ ಕಾಫಿ, ರೊಟ್ಟಿ ಮತ್ತು ಪಲ್ಯ ಮಾಡುವ ಕೆಲಸ. ಮತ್ತೊಂದೆಡೆ ಮಗ, ಮಗಳನ್ನು ಶಾಲೆಗೆ ಹೊರಡಿಸುವ ಕಸುಬು.

ಮಕ್ಕಳಿಬ್ಬರಿಗೂ ಬೇಸಿಗೆಯ ರಜೆಯ ನೆನಪುಗಳು ಇನ್ನೂ ಹಸಿರಾಗಿ ಹಾಗೇ ಇರುವಾಗ ಶುರುವಾದ ಶಾಲೆಗೆ ಮನಸ್ಸಿನಲ್ಲೇ ಬಯ್ಯುತ್ತಾ, ಹೇಗೆ ಹೋಗುವುದಪ್ಪಾ ಈ ಜಿಟಿ ಜಿಟಿ ಮಳೆಯಲ್ಲಿ, ಶಾಲೆ ಇಲ್ಲದಿದ್ದರೆ ಅಪ್ಪನ ಜೊತೆ ತಾನೂ ಬೇಸಾಯ ಮಾಡಬಹುದಿತ್ತು ಎಂದು ಮಗನ ಯೋಚನೆಯಾದರೆ, ಮಗಳಿಗೆ ಪಕ್ಕದಮನೆ ಗೆಳತಿಯೊಂದಿಗೆ ಅಲ್ಲಿ ಇಲ್ಲಿ ಸುತ್ತಾಡುವ ಬಯಕೆ, ಆದರೇನು ಮಾಡುವುದು ಅವಳೂ ಶಾಲೆಗೆ ತನ್ನೊಂದಿಗೆ ಬರುತ್ತಾಳೆ. ಅಮ್ಮನಿಗೆ ಯುನಿಫಾರ್ಮ್ ಇಲ್ಲ, ಶೂ ಕಳೆದುಹೋಗಿದೆ ಎಂದು ಸುಳ್ಳು ಹೇಳಿದರೂ ಕೇಳದ ಅಮ್ಮನನ್ನು ಅವಳಿಗೆ ಕೇಳಿಸದ ಹಾಗೆ ಬಯ್ಯುತ್ತಾ ಇಬ್ಬರೂ ಬ್ಯಾಗನ್ನು ಏರಿಸಿಕೊಂಡು, ಕೈಯಲ್ಲಿ ಕೊಡೆ ಹಿಡಿದುಕೊಂಡು ಮನೆಯಿಂದ ಹೊರಟು ಅಮ್ಮನಿಗೆ ಹೇಳಿ ಬೀದಿಯಲ್ಲಿ ಇರುವ ಎಲ್ಲ ತನ್ನ ಸಹಪಾಟಿಗಳನ್ನು ಅಂದರೆ ದೊಡ್ಡಪ್ಪ, ಚಿಕ್ಕಪ್ಪ ಇವರ ಮಕ್ಕಳನ್ನು ದಾರಿಯಲ್ಲೇ ಬನ್ನಿ ಎಂದು ಕೂಗುತ್ತಾ, ಎಲ್ಲರೂ ಒಟ್ಟಿಗೆ ಹೊರಟರೆ ಸ್ವಲ್ಪ ಹೊತ್ತಿಗೆ ಬೇಜಾರಾಗಿದ್ದ ಮನಸ್ಸು ಖುಷಿಯಿಂದ ತೇಲಾಡುತ್ತಿತ್ತು.

ಕೊಡೆಯನ್ನು ಹಿಡಿದುಕೊಂಡು ಬೀಸೋ ಮಳೆ ಗಾಳಿಯಿಂದ ಬ್ಯಾಗನ್ನು ರಕ್ಷಿಸಿಕೊಂಡು, ಮೈ ನೆನೆಯದ ಹಾಗೆ ಹಿಡಿದುಕೊಂಡು ೪-೫ ಕಿ ಮೀ ದೂರದಲ್ಲಿರುವ ಶಾಲೆಗೆ ೧೦-೧೫ ಜನ ಒಟ್ಟಿಗೆ ಹೋಗುತ್ತಾ, ಗದ್ದೆಯಲ್ಲಿ, ಹೊಳೆ ದಾಟುತ್ತಾ ಆಮೇಲೆ ರಸ್ತೆಯಲ್ಲಿ ಸಾಗುತ್ತಾ, ಬ್ಯಾಗಲ್ಲಿದ್ದ ಕೋಡುಬಳೆಯನ್ನೋ ಶಂಕರಪಾಳವನ್ನೋ ತೆಗೆದು ಎಲ್ಲರಿಗೂ ಕೊಡುತ್ತಾ ತಾನೂ ತಿನ್ನುತ್ತಾ ಆ ಚಳಿಯಲ್ಲಿ ಹೋಗುತ್ತಿದ್ದರೆ ಆಹಾ ಮೈಯೆಲ್ಲಾ ರೋಮಾಂಚನ.


ಮನೆಯಿಂದ ಹೊರಟು
ಬ್ಯಾಗನ್ನು ಏರಿಸಿಕೊಂಡು

ಕೊಡೆಯನ್ನು ಹಿಡಿದುಕೊಂಡು

ಗೆಳೆಯರನ್ನು ಕರೆದುಕೊಂಡು
ಪ್ರಕೃತಿಯ ಸೊಬಗನ್ನು ಸವಿದುಕೊಂಡು
ಮಳೆಯಲ್ಲಿ ನೆನೆದುಕೊಂಡು
ಬಟ್ಟೆಯನ್ನು ಒರೆಸಿಕೊಂಡು
ದಾರಿಯಲ್ಲಿ ಸಾಗಿ
ಶಾಲೆ ಸೇರಿ

ಶಾಲೆಯಲ್ಲಿ ಪ್ರಾರ್ಥನೆ ಮುಗಿಸಿ ಪೇಪರ್ ಓದಿ, ಕ್ಲಾಸಿನ ಒಳಗೆ ಹೋದರೆ ಮಧ್ಯಾಹ್ನದವರೆಗೂ ಅಲ್ಲೇ, ಗೆಳೆಯ ಗೆಳತಿಯರ ಜೊತೆ ಹರಟೆ, ಇಷ್ಟವಾದ ಇಷ್ಟವಿಲ್ಲದ ಮೇಷ್ಟ್ರಗಳ ಪಾಠ. ಊಟಕ್ಕೆ ಬಿಟ್ಟಾಗ ಬ್ಯಾಗಲ್ಲಿದ್ದ ಬಾಕ್ಸನ್ನು ತೆಗೆದು ಎಲ್ಲರೊಟ್ಟಿಗೆ ಕೂತರೆ, ಎಲ್ಲರಿಂದಲೂ ಸ್ವಲ್ಪ ಸ್ವಲ್ಪ ತೆಗೆದುಕೊಂಡು ತಾನೂ ಸ್ವಲ್ಪ ಕೊಟ್ಟು ತಿಂದರೆ ಅಲ್ಲಿಗೆ ಮಧ್ಯಾಹ್ನ ಮುಕ್ತಾಯ.

ಮತ್ತೆ ಕ್ಲಾಸ್, ಮಳೆಗಾಲವಾದ್ದರಿಂದ ಹೊರಗಡೆ ಆಟಕ್ಕೆ ರಜೆ. ಸಂಜೆಯಾದೊಡನೆ ಮತ್ತೆ ಊರಿನ ಎಲ್ಲ ಹುಡುಗರು, ಹುಡುಗಿಯರ ಜೊತೆ ವಾಪಸ್ ಮನೆ ಕಡೆ ಪ್ರಯಾಣ.
ಮನೆಗೆ ಬಂದು ಬ್ಯಾಗೆಸೆದು ಅಡಿಗೆ ಮನೆಗೆ ಹೋಗಿ ಅಮ್ಮನಿಂದ ಬಿಸಿ ಬಿಸಿ ಕಾಫಿ ಮಾಡಿಸಿಕೊಂಡು ಕುಡಿದು ಹಿತ್ತಲಿನ ಕಡೆ ಹೋದರೆ ಹಲಸಿನಹಣ್ಣಿನ ಗಮ, ಮನೆಯ ಆಳು ಕತ್ತರಿಸುತ್ತಿದ್ದರೆ ಕೈಗೆ ಎಣ್ಣೆ ಬಳಿದುಕೊಂಡು ಒಂದೊಂದು ಸ್ವಾಡಾವನ್ನು (೧ ಪೀಸ್ ) ತೆಗೆದುಕೊಂಡು ಪೂರ್ತಿ ಮುಗಿಸಿ ಮತ್ತೊಂದು, ಮಗದೊಂದು ಹೊಟ್ಟೆ ತುಂಬುವವರೆಗೆ.

ಸಂಜೆ ಚಾವಡಿಯಲ್ಲಿ ಕುಳಿತು ಪುಸ್ತಕವನ್ನು ತೆಗೆದುಕೊಂಡು ಮನೆಯ ಮುಂದೆ ಬೀಳುತ್ತಿರುವ ಮಳೆ, ಹೆಂಚಿನಿಂದ ಸೋರುತ್ತಿರುವ ಹನಿಯನ್ನು ನೋಡುತ್ತಾ ಓದುವ ಕೆಲಸ.


ಸ್ವಲ್ಪ ತಡೆಯಿರಿ.ಇದೇನು ಕಥೇನಾ ಅಂತ ಕೇಳ್ಬೇಡಿ, ಸ್ವಲ್ಪ ಹಿಂದೆ ಹೋದ್ರೆ ಅಂದ್ರೆ ೧೦-೧೫ ವರ್ಷಗಳವರೆಗೂ ಇದ್ದ ಸ್ತಿತಿ.
ಈಗ, ಮಳೆ ಹಾಗೇ ಬರ್ತಿದೆ, ಅಪ್ಪ ಅಮ್ಮನಿಗೆ ವಯಸ್ಸಾಗಿದೆ, ಅದೇ ಹೆಂಚಿನ ಮನೆಯಲ್ಲಿ ೨ ಜೀವಗಳೂ ಜೀವ ಸವೆಸುತ್ತಿವೆ, ಈಗ ನಗರದಲ್ಲಿರುವ ಮಕ್ಕಳಿಗೆ ಮದುವೆಯಾಗಿ ಮಕ್ಕಳಾಗಿವೆ, ಆದರೆ ಆ ಮಕ್ಕಳಿಗೆ ಹಳ್ಳಿ ಅಂದರೆ ವರ್ಷದಲ್ಲಿ ಒಂದೆರಡು ಬಾರಿ ಅಜ್ಜ ಅಜ್ಜಿಯ ಮನೆಗೆ ಹೋಗಿ ಬರುವ ಒಂದು ಜಾಗವಷ್ಟೆ. ಶಾಲೆ ಇದೆಯೋ ಇಲ್ಲವೋ, ಇದ್ದರೂ ಎಲ್ಲೋ ಕೆಲವರು ಅಲ್ಲಿಗೆ ಕಳಿಸುತ್ತಿದ್ದಾರೆ. ಸದಾ ಮಕ್ಕಳಿಂದ ಗಿಜಿಗಿಜಿಗುಡುತ್ತಿದ್ದ ಊರು ಈಗ ಆ ಶಬ್ಧವನ್ನು ಮರೆತಿದೆ.
ಗದ್ದೆಗಳು ಹಾಗೇ ಇವೆ, ಅದರ ಮೇಲೆ ನೇಗಿಲಿನ ಬರೆಯಿಲ್ಲ, ನೇಗಿಲು ಎನ್ನುವುದು ಈಗ ಮ್ಯೂಸಿಯಂ ಪೀಸಾಗಿದೆ. ಎಲ್ಲರ ಮನೆಯಲ್ಲಿರುತ್ತಿದ್ದ ದನ ಕರುಗಳು ಈಗ ಕೆಲವೇ ಕೆಲವು ಮನೆಗಳಲ್ಲಿವೆ. ಬೇಸಾಯ ಮಾಡಲು, ಸಸಿ ನೆಡಲು ಜನಗಳೇ ಇಲ್ಲ.
ಬರೀ ಮಳೆಯೊಂದೇ ಆಗಿಗೂ ಈಗಿಗೂ ಕೊಂಡಿಯಾಗಿ ನಿಂತಿದೆ. ಮನುಷ್ಯ ಮರಗಳಿಗೂ ಕೊಡಲಿ ಹಾಕುತ್ತಲೇ ಹೋದರೆ ಅದೂ ನೆನಪಿನ ಭಾಗವಾಗಿ ಸೇರುವ ಸಂಭವವಿದೆ.

ಬರಲಿರುವ ಮಳೆಯೇ
ಹಿಂದಿನ ದಿನಗಳನ್ನು ತಿರುಗಿ ತರಲಾಗದಿದ್ದರೂ
ಮುಂಗಾರಿನ ಆ ನೆನಪುಗಳನ್ನು ಮತ್ತೆ ಬರಿಸು

ಯಾಕೋ ಬೆಂಗಳೂರಿನಲ್ಲಿ ನೆನ್ನೆ ಮತ್ತೆ ಇಂದು ಮಳೆಯಾದಾಗ, ಆ ತುಂತುರು ನೀರಿನಲ್ಲಿ ನೆನೆದಾಗ ಹಾಗೂ ಮುಂಗಾರಿನ ಮೋಡಗಳನ್ನು ನೋಡಿದಾಗ ಇದೆಲ್ಲ ನೆನಪಿಗೆ ಬಂತು.

ತಿರು(ಕ)ಪತಿ

ಒಳ್ಳೆಯ ಪತ್ನಿ ಸಿಕ್ಕರೆ
ಹೋಗಬಹುದು ತಿರುಪತಿ

ಕೆಟ್ಟ ಪತ್ನಿ ಸಿಕ್ಕರೆ
ಆಗಬಹುದು ತಿರುಕ ಪತಿ

ಆಗ - ಈಗ

ಆಗ ಹಾಕುತ್ತಿದ್ದರು ಚೂಡಿದಾರ್
ಈಗ ಯಾರು ಮಾಡುತ್ತಿಲ್ಲ ಅದಕ್ಕೆ ಕೇರ್

ಆಗ ಹಾಕುತ್ತಿರಲಿಲ್ಲ ಜೀನ್ಸು
ಈಗ ಹಾಕುತ್ತಿದ್ದಾರೆ ಸಿಕ್ಕಿದ್ದೇ ಚಾನ್ಸು

ಆಗ ಗೊತ್ತಿರಲಿಲ್ಲ ಟೀ ಶರ್ಟ್
ಈಗ ಹಾಕಬೇಡ ಎಂದರೆ ಆಗುವರು ಹರ್ಟ್

ಆಗ ತೋರಿಸುತ್ತಿರಲಿಲ್ಲ ಬರಿ ಕೈ
ಈಗ ತೋರಿಸುತ್ತಾರೆ ಪೂರ್ತಿ ಮೈ


ಆಗ ಇರಲಿಲ್ಲ ಬ್ಯೂಟಿ ಪಾರ್ಲರ್
ಈಗ ಎಲ್ಲೆಲ್ಲೂ ಅದರದೇ ದರ್ಬಾರ್


ಆಗ ಮಾಡಿಸುತ್ತಿರಲಿಲ್ಲ ಹೇರ್ ಕಟ್
ಈಗ ಮಾಡಿಸುತ್ತಾರೆ ಹೇರ್ ಸ್ಟ್ರೈಟ್

ಆಗ ಹಣೆಯ ಮೇಲಿತ್ತು ಬಿಂದಿ
ಈಗ ಎಲ್ಲೆಂದರೆ ಕೇಳುವರು ಏನಂದಿ

ಆಗ ಕೈಗೆ ತೊಡುತ್ತಿದ್ದರು
ಬಳೆ
ಈಗ ಎಲ್ಲೆಂದರೆ ಹೇಳುವರು ಹೋಗಲೇ

ಆಗ ತೊಡುತ್ತಿದ್ದರು ಕಾಲಿಗೆ ಗೆಜ್ಜೆ
ಈಗ ಎಲ್ಲೆಂದರೆ ಎತ್ತುವರು ಹೈ ಹೀಲ್ಡ್ಹಾಕಿದ ಹೆಜ್ಜೆ

ಆಗ ಹಾಕುತ್ತಿದ್ದರು ರಂಗೋಲಿ
ಈಗ ಹೊಡೆಯುತಾರದಕೆ ಗೋಲಿ

ಆಗ ಮೂಗಲ್ಲಿ ನತ್ತು
ಈಗ ಕೊಡುತ್ತಿಲ್ಲ ಅದಕೆ ಒತ್ತು

ನಾವು ಮತ್ತು ಅವರು - ಕಸಬ್ ಮತ್ತು ಲಾಡೆನ್

ಕಂಡ ಕಂಡವರನ್ನು

ಕಣ್ಣೆದುರಿಗೇ

ಕೊಂದ

ಕೊಲೆಗಾರನನ್ನಿಟ್ಟುಕೊಂಡು

ಕೋಟಿಗಟ್ಟಲೆ

ಖರ್ಚುಮಾಡುತ್ತಿಹೆವು

...........

ಕಣ್ಣಿಗೆ

ಕಾಣಿಸದೆ

ಕೊಲೆಗೆಯ್ಯುತ್ತಿದ್ದವನನ್ನು

ಕಣ್ಣಿಗೆ

ಕಾಣದ ಹಾಗೆ

ಕಿತ್ತೆಸೆದಿದ್ದಾರವರು


ನಿರೀಕ್ಷೆಯ ಹಾದಿಯಲಿ

ಮೌನದ ವೀಣೆಗೆ ಮಾತಿನ ತಂತಿಯ ಮೀಟಿ
ನಾದವ ಹೊರಡಿಸಬಾರದೆ

ಒಲವಿನ ಹಣತೆಗೆ ಪ್ರೀತಿಯ ಧಾರೆಯ ಹರಿಸಿ
ದೀಪವ ಬೆಳಗಬಾರದೆ

ಕಣ್ಣಿನ ಬಿಂಬಕೆ ನೋಟದ ಹೊನಲು ಹರಿಸಿ
ಮುಗುಳ್ನಗೆಯ ಹರಿಬಿಡಬಾರದೆ

ಕತ್ತಲಿನ ಕನಸನು ಬೆಳಕಲಿ ನನಸಾಗಿಸಿ
ಮನವ ಬೆಳಗಬಾರದೆ

ಕವಲುಗಳ ಹಾದಿಯಲಿ ಹರುಷದ ಹೊಳೆಯ ಹರಿಸಿ
ಭಾವನೆಗಳ ತಣಿಸಬಾರದೆ

ವಿರಹದ ಬೇಗೆಗೆ ಸನಿಹದ ಇಂಪು ಬರಿಸಿ
ಕಂಪನು ಬೀರಬಾರದೆ

ದಣಿದ ದೇಹಕೆ ಸ್ಪರ್ಶದ ಸಿಂಚನ ನೀಡಿ
ಮುತ್ತಿನ ಹೊಳೆಯ ಹರಿಸಬಾರದೆ

ನಿರೀಕ್ಷೆಯ ಹಾದಿಯಲಿ ಪಯಣದ ಸವಿಯ ಸವಿದು
ಗಮ್ಯವ ಸೇರಬಾರದೆ

ನನಗೂ ಸ್ವಲ್ಪ ಕೊಡಿ




ಮಾರ್ಚ್ ತಿಂಗಳ ಎಲ್ಲ ವೀಕೆಂಡಲ್ಲೂ ಊರಿಗೆಹೋಗಿದ್ದೆ. ಊರಲ್ಲಿ ಮಳೆಗಾಗಿ ಕಾಯ್ತಿದ್ರು. ಸಲನಾದ್ರೂ ಚೆನ್ನಾಗಿ ಮಳೆ ಬಂದು ಕಾಫಿಚೆನ್ನಾಗಿ ಹೂ ಬಿಡ್ಲಿ ಅಂತಿದ್ರು. ನಾನೂಹೋದಾಗಲೆಲ್ಲ ಮಳೆಗೆ ಕಾಯ್ತಿದ್ದೆ, ಜೊತೆಗೆಕಾಫಿಯ ಹೂವಿಗೆ ಸಹ. ಹೂವಿನಿದ ತುಂಬಿಕಂಗೊಳಿಸುವ ತೋಟವನ್ನ ನೋಡೋದೇ ಕಣ್ಣಿಗೆಹಬ್ಬ, ಎಲ್ಲಿ ಕಣ್ಣು ಹಾಯಿಸಿದರೂ ಬಿಳೀಹೂಗಳದ್ದೇ ರಾಶಿ, ಅಲ್ಲದೆ ಹೂವಿನ ಘಮಲು,ಆಹಾ ಏನು ಪರಿಮಳ, ದಿನಾ ಪೂರ್ತಿ ಅಲ್ಲೇಕುಳಿತಿರೋಣ ಎಂದನ್ನಿಸುತ್ತದೆ. ವರ್ಷ ಸೌಭಾಗ್ಯ ಸಿಕ್ಕಿರ್ಲಿಲ್ಲ ಯಾಕಂದ್ರೆ ಹೂವು ಆಗಿದ್ದುವಾರದ ಮಧ್ಯದಲ್ಲಿ :(. ವೀಕೆಂಡ್ ಬರೋಹೊತ್ತಿಗೆ ಎಲ್ಲ ಹೂವು ಉದುರಿಹೋಗಿರ್ತಿತ್ತು.

ಒಂದಿನ ಮೋಡ ಆದ ಹಾಗೆ ಆಗ್ತಿತ್ತು, ದೂರದಗಿರಿಯಲ್ಲಿ ಕಪ್ಪನೆಯ ಮೋಡ, ಸ್ವಲ್ಪ ಹೊತ್ತಾದಮೇಲೆ ಮಳೆ. ಇತ್ತ ಕಡೆ ಗಾಳಿ ಬೀಸುತ್ತಿತ್ತು,ಮಳೆಯೂ ಬರುತ್ತಿರುವ ಹಾಗನ್ನಿಸುತ್ತಿತ್ತು. ಎಲ್ಲೋ ದೂರದ ಆಸೆ, ಇನ್ನೇನು ಕಾಲು ಘಂಟೆಯಲ್ಲಿ ಇಲ್ಲಿಗೆ ಬರತ್ತೆ, ಹೋಗಿ ನೆನೆಯಬಹುದು ಅಂತ.ಆಮೇಲೆ ಮಳೆ ಬಂದ್ರೆ - ದಿನ ಆದ್ಮೇಲೆ ಚಿಗುರು ಬಿಟ್ಟು ಹೂವು ಆಗೋ ಹೊತ್ತಿಗೆ ವಾರ ಆಗತ್ತೆ, ಮುಂದಿನ ವಾರ ಬರಬಹುದು ಅಂತದೂರದ ಆಸೆ. ದೂರದಲ್ಲಿ ಜೋರಾಗಿ ಸುರಿಯುತ್ತಿದ್ದ ಮಳೆ ಗಾಳಿ ಬೀಸುತ್ತಿದ್ದಂತೆ ಇತ್ತ ಕಡೆ ಬರ್ತಾ ಇತ್ತು. ಅಲ್ಲೇ ಕಣದಲ್ಲಿ ನಿಂತು ನೋಡುತ್ತಿದ್ದನನಗೆ, ಪಕ್ಕದ ಊರಲ್ಲಿ ಹನಿಗಳು ಬಿದ್ದಾಗ ಆದ ಸಂತಸ ಅಷ್ಟಿಷ್ಟಲ್ಲ. ಆದರೆ ಸ್ವಲ್ಪ ಹೊತ್ತಾದ ಮೇಲೆ ಅಲ್ಲಿ ಬೀಳುವುದೂ ಕಡಿಮೆಯಾಯ್ತು.ಕಾಯುತ್ತಿದ್ದ ನಾನು ಸಪ್ಪೆ ಮೊರೆ ಹಾಕಿಕೊಂಡು ಮನೆ ಒಳಗೆ ಹೋದೆ.

ಬೆಂಗಳೂರಿಗೆ ಬಂದ ಮಾರನೇ ದಿನ ಅಮ್ಮ ಫೋನ್ ಮಾಡಿ ಮಳೆ ಬಂತು ಅಂದಾಗ ಮೊದಲಿಗೆ ಸ್ವಲ್ಪ ದುಃಖ ಆದರೆ ಮರುಕ್ಷಣವೇ ಖುಷಿ.ಮುಂದಿನ ವಾರ ಹೇಗಿದ್ದರೂ ಯುಗಾದಿಗೆ ಊರಿಗೆ ಹೋಗಬೇಕು ಆಗ ಇಡೀ ತೋಟ ಸುತ್ತಾಡಿ ಅಲ್ಲಿಯ ಸೊಬಗನ್ನು, ಜೊತೆಗೆಸುವಾಸನೆಯನ್ನೂ ಸವಿಯಬಹುದಲ್ಲ ಎಂದೆನಿಸಿತು.

ಯಾವಾಗ ಶುಕ್ರವಾರ ಆಗತ್ತೋ ಅಂತಕಾಯ್ತಿದ್ದೆ. ಅಂತೂ ಬಂತು, ರಾತ್ರಿ ಹೊರಟುಬೆಳಗ್ಗೆ ಚಿಕ್ಕಮಗಳೂರು ತಲುಪಿ ಊರಿನ ಬಸ್ಹತ್ತಿದಾಗ ತಲೆಯಲ್ಲಿದ್ದದ್ದು ಒಂದೇ ಯೋಚನೆ,ಹೂವು ಹೂವು ಹೂವು. ಅರ್ಧ ಘಂಟೆಪ್ರಯಾಣದ ನಂತರ ಊರು ತಲುಪಿಬಸ್ಸಿನಿಂದ ಇಳಿದು ತೋಟದ ಹಾದಿಯಲ್ಲಿಮನೆಯ ಕಡೆ ಹೆಜ್ಜೆ ಹಾಕುವಾಗಸ್ವರ್ಗದಲ್ಲಿದ್ದೆನೇನೋ ಅನ್ನೋ ಅನುಭವ.

ಕಾದು ಕೆಂಪಾಗಿದ್ದ ಇಳೆಯನ್ನು
ಆಗಸವು ವರ್ಷಧಾರೆಯ ಸುರಿಸಿ
ಹನಿಯಿಂದ ಚುಂಬಿಸಿ
ಎಲ್ಲೆಡೆ ಹಸಿರನ್ನು ಪಸರಿಸಿದೆ



ದಿನ ಪೂರ್ತಿ ನಾನು ನನ್ನ ಬಹುತೇಕಸಮಯವನ್ನು ತೋಟದಲ್ಲೇ ಕಳೆದಿದ್ದೆ.
.................................................

ಯುಗಾದಿಯ ದಿನ ನನ್ನ ಕೆಲಸ ಮುಗಿಸಿ, ಅಂದರೆ ತೋಟಕ್ಕೆ ಹೋಗಿ ಮಾವಿನ ಎಲೆ, ಹಲಸಿನ ಎಲೆ ತಂದು ತೋರಣ ಮಾಡಿ ಕಟ್ಟಿದ್ದಾಯ್ತು.ಇನ್ನೇನಿದ್ದರೂ ದೇವರಿಗೆ ಆರತಿ ಮಾಡಿ ಹೊಟ್ಟೆಗೆ ಕೆಲಸ. ಅದಕ್ಕೆ ಇನ್ನೂ ಸಮಯವಿದ್ದುದ್ದರಿಂದ ಅವತ್ತಿನ ಪೇಪರ್ ತಂದು ಅಂಗಳದಲ್ಲಿ ಕುಳಿತೆ.ಬಿಸಿಲು ತುಂಬಾ ಇತ್ತು. ಪೇಪರ್ ಹರಡಿಕೊಂಡು ಏನೋ ಓದುತ್ತಿದ್ದೆ, ಸಡನ್ನಾಗಿ ಮೋತಿ (ಮನೆಯ ನಾಯಿ) ಓಡಿಬಂದು ನನ್ನನ್ನ ನೋಡಿ ಬಾಲಅಲ್ಲಾಡಿಸಿ ಲಾನಲ್ಲಿದ್ದ ಹೂವಿನ ಪಾಟಿನ ಹತ್ತಿರ ಹೋಗಿ ನೀರಿಗೆ ತನ್ನ ನಾಲಿಗೆ ಚಾಚಿ ನೀರನ್ನು ಹೀರತೊಡಗಿತು. ಅಲ್ಲಿ ಅದಕ್ಕೆ ಇದ್ದ ಒಂದೇಒಂದು ನೀರಿನ ಮೂಲ ಅಂದರೆ ಅದೇ :( ನೀರು ಕುಡಿದು ನನ್ನ ಪಕ್ಕ ಬಂದು ಮಲಗಿತು.


ಹಾಗೆ ಸ್ವಲ್ಪ ಹೊತ್ತು ಅಲ್ಲೇ ಕುಳಿತಿದ್ದೆ, ಆಗಪಾರಿವಾಳವೊಂದು ಬಂದು ಪಾಟಿನ ಹತ್ತಿರಕುಳಿತು ಅತ್ತ ಇತ್ತ ಹಲವಾರು ಬಾರಿ ನೋಡಿಆಮೇಲೆ ನೀರಿಗೆ ತನ್ನ ಕೊಕ್ಕನ್ನು ಹಾಕಿತು.ಮಾಡುವುದಕ್ಕೆ ಬೇರೆ ಕೆಲಸಇರಲಿಲ್ಲವಾದುದರಿಂದ
ಅಲ್ಲೇ ಕುಳಿತು ಇನ್ನೂ ಯಾವ್ಯಾವ ಹಕ್ಕಿಗಳುಬರಬಹುದು ಅಂತ ಕಾಯ್ತಿದ್ದೆ. ಕಾಗೆ, ಮಡಿವಾಳಹಕ್ಕಿ, ನನಗೆ ಹೆಸರು ಗೊತ್ತಿಲ್ಲದ ಹಲವುಹಕ್ಕಿಗಳು ಬಂದು ನನ್ನನ್ನು ನೋಡಿ, ಕೆಳಗೆಮಲಗಿದ್ದ ಮೋತಿಯನ್ನೊಮ್ಮೆ ನೋಡಿ ಯಾರೂತೊಂದರೆ ಮಾಡುವುದಿಲ್ಲ ಎಂದರಿತು ನೀರನ್ನುಕುಡಿದು ಹೋಗುತ್ತಿದ್ದವು. ಲಾನ್ ಮಾಡಿ ಪಾಟಲ್ಲಿನೀರು ಇಟ್ಟದ್ದು ಹೀಗಾದರೂ ಉಪಯೋಗಕ್ಕೆಬಂದಿತ್ತು.

..............................................................................

ರಾತ್ರಿ ಹೊರಟು ಬೆಳಗ್ಗೆ ಬೆಂಗಳೂರಿಗೆ ಬಂದೆ, ನಮ್ಮ ಮನೆಯ (ಬೆಂಗಳೂರಿನಲ್ಲಿಯ ಬಾಡಿಗೆ ಮನೆ) ವರಾಂಡ ಅಗಲವಿತ್ತು, ಆಫೀಸಿಗೆ ಹೊರಡುವಮುನ್ನ ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ನೀರನ್ನು ಇಟ್ಟು ಹೋಗಿದ್ದೆ. ಕೆಲಸ ಮುಗಿಸಿ ಸಂಜೆ ವಾಪಸ್ ಬರೋ ಹೊತ್ತಿಗೆ ಕಾಲು ಭಾಗ ನೀರುಖಾಲಿಯಾಗಿತ್ತು, ಅಬ್ಬ ಯಾವ್ದೋ ಹಕ್ಕಿಗಳು ಕುಡಿದಿರಬಹುದು ಅಂತ ಅಂದ್ಕೊಂಡೆ.


ಸಂಜೆ ಬಂದ ಮೀಟರ್, 'ಏನಪ್ಪಾ ನೀರು ಇಟ್ಟಿದೀಯ' .
'
ಹ್ಞೂ, ಬಾಯಾರಿಕೆ ಆದಾಗ ಹೀಗೆ ಯಾವ್ದಾದ್ರೂ ಹಕ್ಕಿಗಳು ಕುಡಿಯಲಿ ಅಂತ'
'
ಅದೇನು ಹಕ್ಕಿ ಕುಡಿದು ಖಾಲಿಯಾಗಿರೋದು ಅಂದ್ಕೊಂಡ್ಯ?'
'
ಹ್ಞೂ, ಮತ್ತೆ ಇನ್ಹೇಗೆ ಖಾಲಿಯಾಗತ್ತೆ?'
'
ಬಿಸಿಲಿಗೆ ಡಬ್ಬ ಕಾದು ನೀರು ಖಾಲಿಯಾಗಿರೋದು'

ನಂಗೆ ಬೇಜಾರಾಯ್ತು. ಛೆ, ಹೀಗಾಯ್ತಲ್ಲ ಅಂತ. ಆದರೂ ವಾರ ಪೂರ್ತಿ ನೀರು ತುಂಬಿಸಿ ಹೋಗ್ತಿದ್ದೆ, ಸಂಜೆ ಹೊತ್ತಿಗೆ ಕಾಲು ಭಾಗಖಾಲಿಯಾಗಿರ್ತಿತ್ತು. ಆದ್ರೆ ಹೇಗೆ ಅನ್ನೋದು ಇನ್ನೂ ನಿಗೂಢವಾಗಿತ್ತು. ಆಗಲಿ ವೀಕೆಂಡ್ನಲ್ಲಿ ಚೆಕ್ ಮಾಡೋಣ ಅಂದ್ಕೊಂಡೆ.
ಶನಿವಾರ ನೀರು ಹಾಕಿ ಚಾವಡಿಯಲ್ಲಿ ಬಂದು ಪೇಪರ್ ಓದುತ್ತಾ ಅಲ್ಲಿ ಆಗಾಗ ನೋಡುತ್ತಾ ಕುಳಿತೆ. ಅರ್ಧ ಘಂಟೆ ಆದರೂ ಯಾವುದರಸುಳಿವಿರಲಿಲ್ಲ. ಮೀಟರ್ ಹೇಳಿದ್ದೇ ಸರಿ ಅಂದ್ಕೊಂಡೆ. ಇನ್ನು ಅಲ್ಲಿಟ್ಟು ಪ್ರಯೋಜನವಿಲ್ಲ, ಸಂಜೆ ಅದನ್ನ ಎಸೆದು ಬಿಡೋಣ ಅಂದ್ಕೊಂಡೆ.
ಒಳಗೆ ಹೋಗಿ ಕಾಫಿ ಮಾಡ್ಕೊಂಡು ಬಂದು ಮತ್ತೆ ಪೇಪರ್ ಓದ್ತಾ ಕೂತೆ. ಹಾಗೆ ಅತ್ತ ಕಡೆ ಕಣ್ಣು ಹಾಯಿಸಿದೆ, ಅಳಿಲೊಂದು ಬಂದು ಡಬ್ಬನಆಕಡೆ ಈಕಡೆ ಮೂಸಿ, ಒಳಗೆ ನೀರಿರುವುದನ್ನು ನೋಡಿ ಕುಡಿದು ಓಡಿಹೋಯ್ತು. ಅಬ್ಬ, ಆಗ ಸಮಾಧಾನವಾಯ್ತು. ಆಮೇಲೆ ಆಗಾಗ ಕಾಗೆ,ಪಾರಿವಾಳಗಳು ಬಂದು ನೀರು ಕುಡಿದು ಹೋಗುತ್ತಿದ್ದವು.

ಅಂದಿನಿಂದ ಡಬ್ಬದಲ್ಲಿ ನೀರು ತುಂಬಿ ಆಫೀಸಿಗೆ ಹೊರಡುವದಾಗಿದೆ.

Wednesday, June 1, 2011

ಚುರ್ಮುರಿ - ೧೩

೪೩) ರಸ್ತೆಯಲ್ಲಿ ಬಿದ್ದಿದ್ದ ಮಾಂಸವನ್ನು ತಿನ್ನಲು ಹೋದ ನಾಯಿ ಸ್ವಲ್ಪ ಹೊತ್ತಿಗೆ ತಾನೇ ಮಾಂಸವಾಗಿತ್ತು.

೪೪) ಮಳೆಯಲ್ಲಿ ತನ್ನ ಕಾರಿನ ಕೊಳೆ ತೊಳೆದುಹೋಗಲಿ ಎಂದು ಅವನು ಹೊರಗಡೆ ಕಾರನ್ನು ನಿಲ್ಲಿಸಿದ, ಬೃಹತ್ ಗಾತ್ರದ ಆಲಿಕಲ್ಲುಗಳು ಅವನ ಕಾರನ್ನು ಮುದ್ದೆ ಮಾಡಿದ್ದವು.

೪೫) ಮೆಜೆಸ್ಟಿಕ್ನಲ್ಲಿ ಕಷ್ಟಪಟ್ಟು, ಎಲ್ಲರೊಂದಿಗೆ ಗುದ್ದಾಡಿ ತನ್ನ ಬ್ಯಾಗನ್ನು ಸ್ವಲ್ಪ ಹರಿದುಕೊಂಡು ಬಸ್ಸಿನಲ್ಲಿ ಹಾಗೂ ಹೀಗೂ ಒಂದು ಸೀಟನ್ನು ಹಿಡಿದುಕೊಂಡು ಕುಳಿತನು. ಆನಂದ್ ರಾವ್ ಸರ್ಕಲ್ ಹತ್ತಿರ ಬಸ್ ಕೆಟ್ಟು ನಿಂತಿತು.

೪೬) ಅವನು ನ್ಯಾನೋ ಕಾರನ್ನು ಕೊಂಡುಕೊಂಡು, ಅದನ್ನು ಓಡಿಸಲು ಒಬ್ಬ ಡ್ರೈವರನ್ನು ಇಟ್ಟುಕೊಂಡನು.

೪೭) ಅವಳ ಮುಖದಲ್ಲಿತ್ತೊಂದು ಪಿಂಪಲ್ ಹಾಗಾಗಿ ಕಾಣುತ್ತಿರಲಿಲ್ಲ ಅವಳ ಡಿಂಪಲ್.

ಮುಖವಾಡವ ಕಳಚಿಬಿಡು

ಬರುವೆನೆಂದು ಹೇಳಿ
ಬಾರದೆ ಹೋದೆ

ಕಾದು ಕುಳಿತಿದ್ದೆ
ನಿನ್ನ ಆಗಮನಕೆ

ಬರೆಯುವೆನೆಂದು ಹೇಳಿ
ಬರೆಯದೆ ಹೋದೆ

ಕಾದು ಕುಳಿತಿದ್ದೆ
ನಿನ್ನ ಆಮಂತ್ರಣಕೆ

ಕರೆಯುವೆನೆಂದು ಹೇಳಿ
ಕರೆಯದೆ ಹೋದೆ

ಕಾದು ಕುಳಿತಿದ್ದೆ
ನಿನ್ನ ಕಾಗದಕೆ

ಸೌಜನ್ಯಕ್ಕಾದರೂ
ಬಾರೆನೆನ್ನಬಹುದಿತ್ತಲ್ಲ

ನಿನ್ನ ಮೇಲಿಟ್ಟ ನಂಬಿಕೆ
ಹುಸಿಯಾಯಿತಲ್ಲ

ಇನ್ನಾದರೂ ಮುಖವಾಡವ ಕಳಚಿ
ಸಹಜದತ್ತ ಮುಖ ಮಾಡು