Thursday, June 17, 2010

ಸ್ವಲ್ಪ ಫ್ಲಾಶ್ಬ್ಯಾಕ್ಗೆ ಹೋಗಿಬನ್ನಿ

ಅಂಬಾಸಿಡರ್ ಕಾರ್ ಟಾರ್ ರೋಡ್ ದಾಟಿ ಮಣ್ಣಿನ ರಸ್ತೆಗೆ ಬಂದ ತಕ್ಷಣ ಸಡನ್ನಾಗಿ ನಿಲ್ತು. ಲಗೋರಿ ಆಡ್ತಿದ್ದ ನಾವು ಹೆದರಿ ದೇವಸ್ಥಾನದ ಒಂದು ಮೂಲೆಗೆ ಹೋಗಿ ಕದ್ದು ಕುಳಿತೆವು (ಯಾಕಂದ್ರೆ ಆಗೆಲ್ಲ ಅಂಬಾಸಿಡರ್ ಕಾರಲ್ಲಿ ಬಂದವ್ರು ಮಕ್ಳನ್ನ ಕಿಡ್ನಾಪ್ ಮಾಡ್ಕೊಂಡು ಹೋಗ್ತಾರೆ ಅಂತಿದ್ರು, ಹಾಗಾಗಿ).


ಇದ್ದಕ್ಕಿದ್ದ ಹಾಗೆ ನಮ್ಜೊತೆ ಇದ್ದ ಅಕ್ಕ ಓಡಿ ಕಾರ್ ಹತ್ತೇಬಿಟ್ಲು. ನಮಗೆಲ್ಲ ಶಾಕ್. ಕಾರ್ ಹಾಗೆ ಮುಂದಕ್ಕೆ ಹೋಯ್ತು. ನಾವು ಓಡಿ ಹಿಂದುಗಡೆಯಿಂದ ನೋಡಿದ್ರೆ ನಮ್ಮಪ್ಪ ಕಾರಲ್ಲಿದ್ರು.

ಒಂದೇ ಉಸಿರಿಗೆ ಕಾರ್ ಹಿಂದೆ ಓಡೋದಕ್ಕೆ ಶುರು ಮಾಡಿದ್ವಿ. ಕಾರು ಹೋಗಿ ನಮ್ಮನೆ ಹತ್ತಿರ ನಿಲ್ತು. ಅಕ್ಕ ಕಾರಿಂದಿಳಿದು ನಗ್ತಿದ್ಲು. ನಮಗೆಲ್ಲ ಹೊಟ್ಟೆ ಉರಿ, ನಮ್ಮನ್ನ ಕಾರಲ್ಲಿ ಹತ್ತಿಸಿಕೊಳ್ಳಲಿಲ್ಲ ಅಂತ. ಸ್ವಲ್ಪ ಹೊತ್ನಲ್ಲಿ ಹೊಟ್ಟೆ ಉರಿ ಕಡಿಮೆ ಆಗಿತ್ತು ಯಾಕಂದ್ರೆ ಕಾರಿಂದ ಟಿ.ವಿ ಇಳಿಸ್ತಿದ್ರು, ನಮಗೆಲ್ಲರಿಗೂ ಖುಷಿಯೋ ಖುಷಿ. ಆಂಟೆನ ಏರಿಸಿ ಟಿ.ವಿ ಹಾಕಿದ ತಕ್ಷಣ ತೆರೆಯ ಮೇಲೆ ಬಂದ ವೈಟ್ ಸ್ಕ್ರೀನ್ ನೋಡಿ ಏನೋ ವಿಸ್ಮಯ ಕಂಡ ಹಾಗೆ. ಆಂಟೆನ ತಿರುಗಿಸಿ ಹಾಸನ ಸ್ಟೇಶನ್ಗೆ ಸೆಟ್ ಮಾಡಿದ ತಕ್ಷಣ ಡಿ.ಡಿ ೧ ಬಂತು, ಟಿ.ವಿಯಲ್ಲಿ ದೃಶ್ಯ ನೋಡಿ ಕಣ್ಣಿಗೆ ಹಬ್ಬ.

ಬಂದ ಹೊಸತರಲ್ಲಿ ರಾಮಾಯಣ ನೋಡೋದಕ್ಕೆ ನಮ್ಮನೆ ಹಾಲ್ ಫುಲ್ ಆಗಿರೋದು.ಆಮೇಲಾಮೇಲೆ ಸುರಭಿ, ತೆಹಕೀಕಾತ್,ಮಹಾಭಾರತ, ಚಿತ್ರಹಾರ್, ಮೋಗ್ಲಿ, ಮಾಲ್ಗುಡಿ ಡೇಸ್, ಸ್ಟ್ರೀಟ್ ಹಾಕ್, ರಂಗೋಲಿ. ೨ ತಿಂಗಳಿಗೊಮ್ಮೆ ರೀಜನಲ್ ಫಿಲಂ ಅಂತ ಕನ್ನಡ ಚಿತ್ರ ಹಾಕೊದನ್ನೇ ಕಾಯ್ತಿದ್ವಿ.

ಸ್ವಲ್ಪ ವರ್ಷ ಆದ್ಮೇಲೆ ಕನ್ನಡ ಚಾನೆಲ್ ಡಿ.ಡಿ ೯ ಬರೋದಕ್ಕೆ ಶುರುವಾಯ್ತು, ಆ ದಿನ ಕನ್ನಡ ಬರತ್ತೆ ಅಂತ ಅರ್ಧ ಗಂಟೆ ಮೊದಲೇ ಟಿ.ವಿ ಹಾಕ್ಕೊಂಡು ಕೂತಿದ್ವಿ. ಬಹುಷ ಸಂಜೆ ೪ ಅಥವಾ ೪.೩೦ ಇರ್ಬೇಕು. 'ಜೋಗದ ಸಿರಿ ಬೆಳಕಿನಲ್ಲಿ...' ಹಾಕಿದ್ರು, ನೋಡಿ ಫುಲ್ ಖುಷ್.

ಆಮೇಲಾಮೇಲೆ ಮಾಯಾಮೃಗ, ಗುಡ್ಡದ ಭೂತ, ಚಿತ್ರಮಂಜರಿ, ಸಬೀನಾ ಭಾನುವಾರದ ಸಂಜೆಯ ಚಲನಚಿತ್ರ ನಮ್ಮ ದೈನಂದಿನ ಬದುಕಿನ ಭಾಗವಾಗಿ ಹೋದವು. ರಾತ್ರಿ ೯.೩೦ ೧೦ ಅನ್ನೋ ಹೊತ್ತಿಗೆ ಎಲ್ಲ ಕೆಲಸ ಮುಗಿಸಿ ಪಾಚ್ಕೊತಿದ್ವಿ.

ಆಮೇಲೆ ಕಾಲೇಜ್ ಅಂತ ಹೊರಗಡೆ ಹೋದಮೇಲೆ ಟಿ.ವಿಯ ಸಂಪರ್ಕ ಕಡಿಮೆಯಾಯ್ತು. ಡಿಗ್ರಿಯಲ್ಲೂ ಸಹ ಹಾಸ್ಟೆಲ್ನಲ್ಲಿರೋವಾಗ ಆಗಾಗ ಕ್ರಿಕೆಟ್ ನೋಡ್ತಿದ್ವಿ ಅಷ್ಟೆ.

ಆಮೇಲೆ ಬೆಂಗ್ಳೂರ್ನಲ್ಲಿ ಕೆಲಸ, ಬ್ಯಾಚಲರ್ಸ್ ರೂಮ್, ಟಿ.ವಿ ಅವಶ್ಯಕತೆ ಕಾಣಿಸ್ಲಿಲ್ಲ (ಹರಟೆ ಹೊಡೆಯೋಕೆ ಸಮಯ ಇಲ್ದಿರೋವಾಗ ಇನ್ನು ಟಿ.ವಿ ತಗೊಂಡು ಏನು ಮಾಡೋದು ಅಂತ). ಕೆಲಸ ಮುಗಿಸಿ ರೂಮಿಗೆ ಬಂದು ಹರಟೆ ಹೊಡೆದು ಅಡಿಗೆ ಮಾಡಿ ಊಟ ಮುಗಿಸಿ ಮಲಗಿಕೊಳ್ಲೋದ್ರಲ್ಲಿ ಸಮಯ ಆಗಿರೋದು.

ಈ ನಡುವೆ ಇದ್ದ ಡೆಸ್ಕ್ಟಾಪ್ಗಳು ಹೋಗಿ ಲ್ಯಾಪ್ಟಾಪ್ ಬಂದವು, ಅದರಲ್ಲೇ ಫಿಲ್ಮ್ ನೋಡೋದಾಯ್ತು.

ಈ ಗ್ಯಾಪಲ್ಲಿ ಟಿ.ವಿಯಲ್ಲಿ ಭಯಂಕರ ಬದಲಾವಣೆಗಳಾಗಿ ಹೋಗಿತ್ತು. ಎಲ್ಲೆಲ್ಲೂ ರಿಯಾಲಿಟಿ ಶೋಗಳಾಟ. ನಮ್ಮ ಹಳ್ಳಿಗಳಲ್ಲೂ ಭಾರೀ ಬದಲಾವಣೆ, ೧೦ ಗಂಟೆಗೆ ಲೈಟ್ ಆರಿಸುತ್ತಿದ್ದ ಮನೆಗಳು ಈಗ ರಾತ್ರಿ ೧೨-೧ ಆದ್ರೂ ಬೆಳಕನ್ನ ಹೊರಸೂಸುತಿರ್ತವೆ. ಕೇಬಲ್, ಟಾಟಾ ಸ್ಕೈ, ಡಿಶ್ ಟಿ.ವಿ, ಸನ್ ಡೈರಕ್ಟ್ ಇವುಗಳ ಮಹಿಮೆಯಿಂದ.

ಸಂಜೆ ಕೆಲಸ ಮುಗಿಸಿ ದೇವಸ್ಥಾನದ ಹತ್ತಿರನೋ, ಬಾವಿ ಕಟ್ಟೆ ಹತ್ತಿರನೋ, ಶಾಲೆ ಬಳಿನೋ ಜನ ತೋಟ-ಗದ್ದೆ, ಮಳೆ-ಬೆಳೆ ಹೀಗೆ ಕಷ್ಟ-ಸುಖ ಮಾತಾಡ್ತಿದ್ದವರು ಈಗ ಅಲ್ಲೆಲ್ಲೂ ಕಾಣಿಸಲ್ಲ.

ಅಕಸ್ಮಾತ್ ಅಪ್ಪಿ-ತಪ್ಪಿ ಯಾರಾದ್ರೂ ಇದ್ರೆ 'ಲೋ, ಸ್ಕೋರ್ ಏನಾಯ್ತೋ?' , 'ಕರೆಂಟ್ ಹೋಗಿಬಿಡ್ತಲ್ಲೋ, ಛೆ ರಾಖಿ ಸಾವಂತ್ ಮದ್ವೆ ಮಿಸ್ ಆಯ್ತು? ಯಾರ್ನ ಮದ್ವೆ ಆದ್ಲೋ ಸ್ವಯಂವರದಲ್ಲಿ?' ಈ ತರ ಮಾತುಗಳು.

ಡಿ.ಡಿ ೧,೯ ಚೆನ್ನಾಗಿತ್ತಲ್ವ??

Monday, June 14, 2010

ಗೌಡ್ರು ರಂಗಣ್ಣ ಮತ್ತೆ ರಾಜಕೀಯ - ೨

ರಂಗಣ್ಣ ರೆಸಾರ್ಟ್ ಓಪನ್ ಮಾಡಿ ೧ ತಿಂಗಳಾಗಿತ್ತು, ಗೌಡ್ರಿಗೆ ಅವ್ನು ಸಿಕ್ಕದೆ ತುಂಬಾ ದಿನಗಳಾಗಿತ್ತು.

ಗೌಡ್ರ ತೋಟಕ್ಕೆ ಹೋಗ್ಬೇಕಂದ್ರೆ ರಂಗಣ್ಣನ ರೆಸಾರ್ಟ್ ಮುಂದೇನೆ ಹೋಗ್ಬೇಕು.

ತುಂಬಾ ದಿನ ಆಗಿದ್ರಿಂದ ಗೌಡ್ರು ತೋಟಕ್ಕೆ ಹೊರಟ್ರು, ರಂಗಣ್ಣನ ರೆಸಾರ್ಟ್ ಹತ್ತಿರ ಹೋಗ್ತಿದ್ದಂತೆ ಎದ್ರುಗಡೆಯಿಂದ ಒಬ್ಬ ವ್ಯಕ್ತಿ ಬರ್ತಿದ್ದ. ಬಹುಷ ರೆಸಾರ್ಟ್ಗೆ ಬಂದಿರೋ ವ್ಯಕ್ತಿ ಇರ್ಬೇಕು ಅಂದ್ಕೊಂಡು ಗೌಡ್ರು ಮುಂದೆ ಹೋಗ್ತಿದ್ರು.

'ಗೌಡ್ರೆ' ಅಂಥ ಆ ವ್ಯಕ್ತಿ ಕೂಗಿದ್ದನ್ನು ನೋಡಿ ಗಲಿಬಿಲಿಗೊಂಡರು ಗೌಡ್ರು.

ಜೀನ್ಸ್ ಪ್ಯಾಂಟ್, ಕೂಲಿಂಗ್ ಗ್ಲಾಸ್ ಹಾಕಿದ್ದ ವ್ಯಕ್ತಿ ನೋಡಿ 'ಯಾರು ನೀವು?' ಅಂದ್ರು ಗೌಡ್ರು.

ನಾನು ಗೌಡ್ರೆ ರಂಗಣ್ಣ.

ನೀನೇನ್ಲಾ, ಏನ್ಲಾ ನಿನ್ನ ಅವತಾರ, ಲಕ್ಷಣವಾಗಿ ಪಂಚೆ ಹಾಕಳ್ತಿದ್ದವ್ನು ಇದೆಂಥದ್ಲಾ ಹಾಕಂಡಿದೀಯ?

ಇಲ್ಲ ಗೌಡ್ರೆ, ಇದು ಜೀನ್ಸ್ ಪ್ಯಾಂಟ್, ಟೀ ಶರ್ಟ್. ಇಲ್ಲಿ ಬರೋ ಹೈಕ್ಳು ಲೆವೆಲ್ಗೆ ನಾವೂ ಇರ್ಬೇಕಲ್ವ ಅದ್ಕೆ ಈ ಗೆಟಪ್.

ಸೆಟಪ್ ಗೂತ್ತು ಕಣ್ಲಾ ಅದೆಂತದ್ಲ ಗೆಟಪ್?

ಅಯ್ಯೋ ಗೌಡ್ರೆ, ಹೊರ್ಗಡೆಯಿಂದ ಬಂದರಿಗೆ ನಾವು ಚೆನ್ನಾಗಿ ಕಾಣ್ಬೇಕಲ್ವ ಅದ್ಕೆ ಹಿಂಗೆ ಅಂದೆ.

ಕಣ್ಣು ಕಾಣಿಸಲ್ವೇನ್ಲಾ, ಕನ್ನಡಕ ಬೇರೆ ಹಾಕಂಡಿದೀಯ?

ಗೌಡ್ರೆ ಅದು ಕೂಲಿಂಗ್ ಗ್ಲಾಸ್.

ಎಣ್ಣೆ ಹೊಡೆಯೋ ಗಲಾಸ್ ಗೊತ್ತು ಅದೆಂತದ್ಲ ಕೂಲಿಂಗ್ ಗ್ಲಾಸ್?

ಇದು ಹಾಕಂಡ್ರೆ ಕಣ್ಣು ತಂಪಾಗಿರತ್ತೆ ಗೌಡ್ರೆ.

ಅದೇನೋ ಸರಿ ಆದ್ರೆ ನಿನ್ನ ಕಣ್ಣೇ ಕಾಣ್ಸಲ್ವಲ್ಲ, ನಿನ್ನ ಕೆಟ್ಟ ದೃಷ್ಟಿ ಯಾರಿಗೂ ಬೀಳ್ಬಾರ್ದು ಅಂತಾನಾ?

ಗೌಡ್ರೆ ನಿಮ್ದು ಬರೀ ತಮಾಷೇನೆ ಆಯ್ತು.

ಆಮೇಲೆ, ಏನಾಯ್ತಲ ನಿಂದು ಪಾರ್ಟಿ ಸೇರ ಪ್ಲಾನ್?

ಸೇರ್ದೆ ಗೌಡ್ರೆ.

ಇನ್ನು ಉದ್ಧಾರ ಆಯ್ತು ಬಿಡು ನಮ್ಮೂರು.
ಆಮೇಲೆ ನಿಮ್ಮ ಪಕ್ಷ್ದರ್ದು ಏನ್ಲಾ ಹೊಸ ಕಥೆ?

ಏನು ಗೌಡ್ರೆ?

ಅದ್ಯಾರೋ ಎಣ್ಣೆ ಹೊಡೆಯೋನಿಗೆ ಎಣ್ಣೆ ಪೋಸ್ಟ್ ಕೊಟ್ಟವ್ರಂತೆ, ಅಲ್ಲ ಕಣ್ಲ ಆಗೆಲ್ಲ ಇದ್ಯಾ ಗೊತ್ತ್ರೋನನ್ನ ಇದ್ಯಾ ಮಂತ್ರಿ ಅಂತ ಕಾನೂನು ಗೊತ್ತ್ರೋನನ್ನ ಕಾನೂನು ಮಂತ್ರಿ ಅಂಥ ಮಾಡ್ತಿದ್ರು, ನಿಮ್ಮ ಪಾರ್ಟಿಲೇನ್ಲ ಹಿಂಗೆ?

ರಾಜ್ಕೀಯ್ದಲ್ಲಿ ಯಾರು ಸಾಚಾಗಳವ್ರೆ ಗೌಡ್ರೆ?

ಅದೂ ಸರಿನೆ ಅನ್ನು, ಅಲ್ಲ ಕಣ್ಲ ಅವ್ನ್ದೆನೆನೇನ ಹಗರಣ ಐತಂತ್ಲ.

ಎಂಥ ಗೌಡ್ರೆ?

ಅದೇ ಆ ನರ್ಸಮ್ಮನ ಹತ್ರ ಹೋಗಿ ಇಂಜೆಕ್ಷನ್ ಚುಚ್ಸ್ಕೊಂಡು ಬರೋದ್ರ ಬದ್ಲು ಇವ್ನೇ ಇಂಜೆಕ್ಷನ್ ಚುಚ್ಚಕೆ ಹೋಗಿದ್ನಂತೆ?

ಎಲ್ಲರ್ದು ಈ ಕಥೆಗಳು ಇದ್ದಿದ್ದೆ ಗೌಡ್ರೆ, ಕೆಲವ್ರದ್ದು ವಿಸ್ಯ ಗೊತ್ತಾಗತ್ತೆ ಇನ್ನು ಉಳ್ದೋರದ್ದು ಗೊತ್ತೇ ಆಗಲ್ಲ, ಒಳಗೊಳಗೆ ಮುಚ್ಚಾಕ್ತರೆ, ಆದ್ರೆ ನಮ್ಮೂರು ನರ್ಸಮ್ಮ ಹಂಗಿಲ್ಲ ಗೌಡ್ರೆ ಬಾಲ ಒಳ್ಳೆವ್ಳು.

ಓ ಹಿಂಗಾ ಇಸ್ಯ, ಭಲೇ ಕಿಲಾಡಿ ಕಣ್ಲ ನೀನು, ಸರ್ಯಾದ ಪಕ್ಷಕ್ಕೆ ಸೇರ್ತಿದೀಯ, ಹೋಗು, ನಮ್ಮ ರಾಜ್ಯದಲ್ಲಿ ಇನ್ನೇನಾದ್ರು ಉಳ್ದಿದ್ರೆ ಅದ್ನೂ ಮುಕ್ಕ್ಹೋಗು.

ಅಂದ ಗೌಡ್ರು ತೋಟದ ಕಡೆ ಹೆಜ್ಜೆ ಹಾಕಿದ್ರು.

Thursday, June 10, 2010

ಹುಡುಗ - ಹುಡುಗಿ

ಪ್ರೈಮರಿ ಸ್ಕೂಲಲ್ಲಿ ನನ್ನ ಪಾದವೇ ನನಗೆ ಸೈಕಲ್

ನಿಮ್ಮಪ್ಪ ಕೊಡಿಸಿದ್ದರು ನಿನಗೆ ಬೈಸಿಕಲ್

ಹೈಸ್ಕೂಲಲ್ಲಿ ನನಗೂ ಸಿಕ್ತು ಸೈಕಲ್
ನಾನಾಗ ತೋರಿಸಿದ್ದೆ ನನ್ನ ಸ್ಟೈಲ್

ಮಾರನೇ ದಿನ ನೀ ತಂದೆ ಸ್ಕೂಟಿಯನ್ನು
ನೀನಾಗ ನೋಡಬೇಕಿತ್ತು ನನ್ನ ಮುಖವನ್ನು

ಕಾಲೇಜಿನಲ್ಲಿ ನನ್ನ ಜೊತೆಗಿತ್ತು ಪಲ್ಸರ್
ನಿನ್ನ ಜೊತೆಗಿತ್ತು ಡಿಜ್ಜೈರ್

ಕೆಲಸ ಹುಡುಕಲೆಂದು ಬೆಂಗಳೂರಿಗೆ ಬಂದಿದ್ದೆ
ನೀನಾಗ ನಿನ್ನ ಗಂಡನ ಜೊತೆ ಅಮೆರಿಕಕ್ಕೆ ಹಾರಿದ್ದೆ

(ಇದು ನನ್ನ ಗೆಳೆಯ ಹೇಳಿದ್ದನ್ನ ಕವನಗಳ ರೂಪದಲ್ಲಿ ಇಳಿಸಿದ್ದೇನೆ)