ರಂಗಣ್ಣ ರೆಸಾರ್ಟ್ ಓಪನ್ ಮಾಡಿ ೧ ತಿಂಗಳಾಗಿತ್ತು, ಗೌಡ್ರಿಗೆ ಅವ್ನು ಸಿಕ್ಕದೆ ತುಂಬಾ ದಿನಗಳಾಗಿತ್ತು.
ಗೌಡ್ರ ತೋಟಕ್ಕೆ ಹೋಗ್ಬೇಕಂದ್ರೆ ರಂಗಣ್ಣನ ರೆಸಾರ್ಟ್ ಮುಂದೇನೆ ಹೋಗ್ಬೇಕು.
ತುಂಬಾ ದಿನ ಆಗಿದ್ರಿಂದ ಗೌಡ್ರು ತೋಟಕ್ಕೆ ಹೊರಟ್ರು, ರಂಗಣ್ಣನ ರೆಸಾರ್ಟ್ ಹತ್ತಿರ ಹೋಗ್ತಿದ್ದಂತೆ ಎದ್ರುಗಡೆಯಿಂದ ಒಬ್ಬ ವ್ಯಕ್ತಿ ಬರ್ತಿದ್ದ. ಬಹುಷ ರೆಸಾರ್ಟ್ಗೆ ಬಂದಿರೋ ವ್ಯಕ್ತಿ ಇರ್ಬೇಕು ಅಂದ್ಕೊಂಡು ಗೌಡ್ರು ಮುಂದೆ ಹೋಗ್ತಿದ್ರು.
'ಗೌಡ್ರೆ' ಅಂಥ ಆ ವ್ಯಕ್ತಿ ಕೂಗಿದ್ದನ್ನು ನೋಡಿ ಗಲಿಬಿಲಿಗೊಂಡರು ಗೌಡ್ರು.
ಜೀನ್ಸ್ ಪ್ಯಾಂಟ್, ಕೂಲಿಂಗ್ ಗ್ಲಾಸ್ ಹಾಕಿದ್ದ ವ್ಯಕ್ತಿ ನೋಡಿ 'ಯಾರು ನೀವು?' ಅಂದ್ರು ಗೌಡ್ರು.
ನಾನು ಗೌಡ್ರೆ ರಂಗಣ್ಣ.
ನೀನೇನ್ಲಾ, ಏನ್ಲಾ ನಿನ್ನ ಅವತಾರ, ಲಕ್ಷಣವಾಗಿ ಪಂಚೆ ಹಾಕಳ್ತಿದ್ದವ್ನು ಇದೆಂಥದ್ಲಾ ಹಾಕಂಡಿದೀಯ?
ಇಲ್ಲ ಗೌಡ್ರೆ, ಇದು ಜೀನ್ಸ್ ಪ್ಯಾಂಟ್, ಟೀ ಶರ್ಟ್. ಇಲ್ಲಿ ಬರೋ ಹೈಕ್ಳು ಲೆವೆಲ್ಗೆ ನಾವೂ ಇರ್ಬೇಕಲ್ವ ಅದ್ಕೆ ಈ ಗೆಟಪ್.
ಸೆಟಪ್ ಗೂತ್ತು ಕಣ್ಲಾ ಅದೆಂತದ್ಲ ಗೆಟಪ್?
ಅಯ್ಯೋ ಗೌಡ್ರೆ, ಹೊರ್ಗಡೆಯಿಂದ ಬಂದರಿಗೆ ನಾವು ಚೆನ್ನಾಗಿ ಕಾಣ್ಬೇಕಲ್ವ ಅದ್ಕೆ ಹಿಂಗೆ ಅಂದೆ.
ಕಣ್ಣು ಕಾಣಿಸಲ್ವೇನ್ಲಾ, ಕನ್ನಡಕ ಬೇರೆ ಹಾಕಂಡಿದೀಯ?
ಗೌಡ್ರೆ ಅದು ಕೂಲಿಂಗ್ ಗ್ಲಾಸ್.
ಎಣ್ಣೆ ಹೊಡೆಯೋ ಗಲಾಸ್ ಗೊತ್ತು ಅದೆಂತದ್ಲ ಕೂಲಿಂಗ್ ಗ್ಲಾಸ್?
ಇದು ಹಾಕಂಡ್ರೆ ಕಣ್ಣು ತಂಪಾಗಿರತ್ತೆ ಗೌಡ್ರೆ.
ಅದೇನೋ ಸರಿ ಆದ್ರೆ ನಿನ್ನ ಕಣ್ಣೇ ಕಾಣ್ಸಲ್ವಲ್ಲ, ನಿನ್ನ ಕೆಟ್ಟ ದೃಷ್ಟಿ ಯಾರಿಗೂ ಬೀಳ್ಬಾರ್ದು ಅಂತಾನಾ?
ಗೌಡ್ರೆ ನಿಮ್ದು ಬರೀ ತಮಾಷೇನೆ ಆಯ್ತು.
ಆಮೇಲೆ, ಏನಾಯ್ತಲ ನಿಂದು ಪಾರ್ಟಿ ಸೇರ ಪ್ಲಾನ್?
ಸೇರ್ದೆ ಗೌಡ್ರೆ.
ಇನ್ನು ಉದ್ಧಾರ ಆಯ್ತು ಬಿಡು ನಮ್ಮೂರು.
ಆಮೇಲೆ ನಿಮ್ಮ ಪಕ್ಷ್ದರ್ದು ಏನ್ಲಾ ಹೊಸ ಕಥೆ?
ಏನು ಗೌಡ್ರೆ?
ಅದ್ಯಾರೋ ಎಣ್ಣೆ ಹೊಡೆಯೋನಿಗೆ ಎಣ್ಣೆ ಪೋಸ್ಟ್ ಕೊಟ್ಟವ್ರಂತೆ, ಅಲ್ಲ ಕಣ್ಲ ಆಗೆಲ್ಲ ಇದ್ಯಾ ಗೊತ್ತ್ರೋನನ್ನ ಇದ್ಯಾ ಮಂತ್ರಿ ಅಂತ ಕಾನೂನು ಗೊತ್ತ್ರೋನನ್ನ ಕಾನೂನು ಮಂತ್ರಿ ಅಂಥ ಮಾಡ್ತಿದ್ರು, ನಿಮ್ಮ ಪಾರ್ಟಿಲೇನ್ಲ ಹಿಂಗೆ?
ರಾಜ್ಕೀಯ್ದಲ್ಲಿ ಯಾರು ಸಾಚಾಗಳವ್ರೆ ಗೌಡ್ರೆ?
ಅದೂ ಸರಿನೆ ಅನ್ನು, ಅಲ್ಲ ಕಣ್ಲ ಅವ್ನ್ದೆನೆನೇನ ಹಗರಣ ಐತಂತ್ಲ.
ಎಂಥ ಗೌಡ್ರೆ?
ಅದೇ ಆ ನರ್ಸಮ್ಮನ ಹತ್ರ ಹೋಗಿ ಇಂಜೆಕ್ಷನ್ ಚುಚ್ಸ್ಕೊಂಡು ಬರೋದ್ರ ಬದ್ಲು ಇವ್ನೇ ಇಂಜೆಕ್ಷನ್ ಚುಚ್ಚಕೆ ಹೋಗಿದ್ನಂತೆ?
ಎಲ್ಲರ್ದು ಈ ಕಥೆಗಳು ಇದ್ದಿದ್ದೆ ಗೌಡ್ರೆ, ಕೆಲವ್ರದ್ದು ವಿಸ್ಯ ಗೊತ್ತಾಗತ್ತೆ ಇನ್ನು ಉಳ್ದೋರದ್ದು ಗೊತ್ತೇ ಆಗಲ್ಲ, ಒಳಗೊಳಗೆ ಮುಚ್ಚಾಕ್ತರೆ, ಆದ್ರೆ ನಮ್ಮೂರು ನರ್ಸಮ್ಮ ಹಂಗಿಲ್ಲ ಗೌಡ್ರೆ ಬಾಲ ಒಳ್ಳೆವ್ಳು.
ಓ ಹಿಂಗಾ ಇಸ್ಯ, ಭಲೇ ಕಿಲಾಡಿ ಕಣ್ಲ ನೀನು, ಸರ್ಯಾದ ಪಕ್ಷಕ್ಕೆ ಸೇರ್ತಿದೀಯ, ಹೋಗು, ನಮ್ಮ ರಾಜ್ಯದಲ್ಲಿ ಇನ್ನೇನಾದ್ರು ಉಳ್ದಿದ್ರೆ ಅದ್ನೂ ಮುಕ್ಕ್ಹೋಗು.
ಅಂದ ಗೌಡ್ರು ತೋಟದ ಕಡೆ ಹೆಜ್ಜೆ ಹಾಕಿದ್ರು.
No comments:
Post a Comment