Thursday, May 30, 2013

ಮರಳಿ ಬರುತ್ತಿದೆ ಮತ್ತೆ ಮಾನ್ಸೂನ್
........................................


೨ ತಿಂಗಳ ಹಿಂದೆ ಎಲ್ಲೋ ಬಿಸಾಕಿದ್ದ ಸ್ಕೂಲ್ ಬ್ಯಾಗನ್ನ ಹುಡುಕಿ ತಂದು, ಒರೆಸಿ, ಜಾಮಿಟ್ರಿ ಬಾಕ್ಸನ್ನ ತೆಗೆದು ಕೈವಾರ, ಕೋನಮಾಪಕ, ಪೆನ್ಸಿಲ್ ರಬ್ಬರ್, ಮೆಂಡರ್ ಎಲ್ಲ ಸರಿಯಾಗಿ ಇದೆಯೇ ಎಂದು ತೆಗೆದು ನೋಡಿ ಮತ್ತೆ ಬ್ಯಾಗಿನೊಳಗೆ ತುರುಕಿ, ಅಮ್ಮ ಕೊಟ್ಟ ಟಿಫಿನ್ ಬಾಕ್ಸನ್ನ ಹಾಕಿಕೊಂಡು, ತೊಳೆದಿಟ್ಟ ಯುನಿಫಾರ್ಮನ್ನ ಧರಿಸಿ, ಗೋಡೆಯ ಸಂಧಿಯಲ್ಲಿ ಒರಗಿಸಿದ್ದ ಹಳೆಯ ಛತ್ರಿಯನ್ನ ಹೊರತೆಗೆದು ಚಾವಡಿಗೆ ಬಂದು ಚಪ್ಪಲಿಯನ್ನ ಹಾಕಿಕೊಂಡು, ಛತ್ರಿಯ ಬಟನ್ ಅದುಮಿ ಎರಡೂ ಕೈನಿಂದ ಮೇಲೆತ್ತಿ ಸಿಕ್ಕಿಸಿ ಮನೆಯಿಂದ ಅಂಗಳಕ್ಕೆ ಕಾಲಿಟ್ಟರೆ ಈಗಿರುವ ರೀತಿಯಲ್ಲೇ ಹಿಂದಿರುಗಿ ಬರುವ ಸಾಧ್ಯತೆಯಂತೂ ಅಸಂಭವ.


ಮುಂದೆ ಓದಿ.............



ಲೇಖನದ ಶೀರ್ಷಿಕೆಯನ್ನ 'ಮರಳಿ ಬರುತ್ತಿದೆ ಮತ್ತೆ ಮುಂಗಾರು ಮಳೆ' ಅಂತ ಇಡೋಣ ಅಂದ್ರೆ ಆ ಹೆಸರು ಎಷ್ಟು ಪ್ರಸಿದ್ಧಿಯಾಗಿದೆ ಅಂತಂದ್ರೆ ಮುಂಗಾರು ಮಳೆ ಅಂದ್ರೆ ಮಳೆ ಅಲ್ಲ ಫಿಲ್ಮ್ ಅನ್ನುವಷ್ಟರ ಮಟ್ಟಿಗೆ. ಮುಂಗಾರು ಮಳೆ ಅಂದ್ರೆ ಏನು ಅಂತ ಗೊತ್ತಿಲ್ಲದವರಿಗೂ ಆ ಚಿತ್ರ ಬಂದ ಮೇಲೆ ಅದು ಚಿತ್ರವಾಗಿಯೇ ಚಿತ್ತದಲ್ಲಿ ಉಳಿದುಬಿಟ್ಟಿದೆ ಹಾಗಾಗಿ ಮಾನ್ಸೂನ್ ಎಂದು ಹೆಸರಿಸಿದ್ದೇನೆ, ಆದರೂ ಪ್ರಾಸಕ್ಕೇನು ತೊಂದರೆಯಾಗಿಲ್ಲ!!.

ಎಲ್ಲಿಂದಲೋ ಬಂದ ಮೋಡಗಳೆಲ್ಲಾ ಒಂದಾಗಿ ಕಾದ ನೆಲಕೆ ಹನಿಗಳ ಸಿಂಚನವೀಯುತ್ತಿದ್ದರೆ ಮನೆಯಂಗಳಕೆ ಬಂದು ಮಳೆಗೆ ಮೈಯೊಡ್ಡುವ ಹಂಬಲ ಮನಸೊಳಗೆ ಚಿಗುರೊಡೆಯದಿದ್ದರೆ ಕೇಳಿ. ಇಳೆಯನ್ನ ತಂಪಾಗಿಸುವ ಜವಾಬ್ದಾರಿ ತನ್ನದೇ ಎಂಬಂತೆ ವರುಣ ಮಳೆಯನ್ನ ಸುರಿಸುತ್ತಲೇ ಇರುತ್ತಾನೆ. ಆ ಹನಿಗಳ ನೋಡಿ ಒಬ್ಬೊಬ್ಬರ ಮನದಲ್ಲಿ ಥರ ಥರ ಆಲೋಚನೆ. ಕೊಟ್ಟಿಗೆಯಲ್ಲಿರುವ ನೇಗಿಲು ಹಗ್ಗದ ಚಿಂತೆ ರೈತನಿಗಾದರೆ, ಎತ್ತುಗಳಿಗೆ ಇನ್ನು ಮುಂದೆ ಬಿಡುವಿಲ್ಲದ ಕೆಲಸ ಎನ್ನುವ ಚಿಂತೆ! ಬೇಸಿಗೆ ರಜೆಯನ್ನ ಮಳೆಗಾಲಕ್ಕೂ ವಿಸ್ತರಿಸಿದ್ದರೆ ಇವರ ಗಂಟೇನು ಹೋಗುವುದೋ ಎಂದು ಬ್ಯಾಗಿಗೆ ಪುಸ್ತಕವನ್ನ ಹಾಕಿ ಬ್ಯಾಗನ್ನ ನೇತಾಕಿಕೊಂಡು ಕೊಡೆಯನ್ನ ಹಿಡಿದುಕೊಂಡು ಮಳೆಯನ್ನ ಶಪಿಸುತ್ತಾ ಅದರಲ್ಲೇ ಆಟ ಆಡಿಕೊಂಡು ಶಾಲೆಗೆ ತಲುಪುವ ಮಕ್ಕಳ ಪಡೆ ಒಂದು ಕಡೆಯಾದರೆ ಅಮ್ಮನಿಗೆ ಗಂಡನನ್ನ ಹೊಲಕ್ಕೆ ಕಳುಹಿಸಿ ಮಕ್ಕಳಿಗೆ ತಿಂಡಿ ಕೊಟ್ಟು ಮಧ್ಯಾಹ್ನದ ಊಟವನ್ನ ಅವರ ಬ್ಯಾಗಿನಲ್ಲಿ ಹಾಕಿ ಅವರನ್ನ ಕಳುಹಿಸಿ ಆನಂತರ ಗಂಡನಿಗೆ ತಿಂಡಿಯನ್ನ ತೆಗೆದುಕೊಂಡು ಹೋಗುವ ಕಾಯಕ.

ತಿಳಿಯಾದ ಆಗಸವನ್ನ ಮುಂಗಾರಿನ ಮೋಡಗಳು ನಿಧಾನವಾಗಿ ಆವರಿಸುವ ಪ್ರಕ್ರಿಯೆಯೇ ಅದ್ಭುತ. ಮೇ ಕೊನೆಯ ಅಥವಾ ಜೂನ್ ಮೊದಲ ವಾರದ ಯಾವುದೋ ಒಂದು ದಿನದಲ್ಲಿ ನೋಡ ನೋಡುತ್ತಿದ್ದಂತೆಯೇ ನೀಲಿ ಆಗಸವನ್ನ ಮುತ್ತುವಾ ಮೋಡಗಳು ಒಂದೊಂದಾಗಿ ಚಲಿಸುತ್ತಾ ಇಡೀ ವಾತಾವರಣವನ್ನ ಬದಲಾಯಿಸಿಬಿಡುತ್ತವೆ. ಕಣ್ಣಿಗೆ ಕಾಣುತ್ತಿದ್ದ ಸೂರ್ಯ ಒಮ್ಮೆಲೆ ಮರೆಯಾಗಿಬಿಡುತ್ತಾನೆ ಮತ್ತೆ ಅವನು ಕಾಣುವುದು ಮುಂಗಾರು ಮುಗಿದ ನಂತರವೇ ಅಂದರೆ ಏನಿಲ್ಲವೆಂದರೂ ಸುಮಾರು ೩ ತಿಂಗಳ ನಂತರವೇ. ಅಲ್ಲಿಯವರೆಗೂ ಬರೀ ಮೋಡಗಳದ್ದೇ ಸಾಮ್ರಾಜ್ಯ. ಮಿಂಚು, ಗುಡುಗುಗಳದ್ದೇ ಕಾರುಬಾರು. ಹನಿಗಳ ನಡುವೆ ಜಾಗವೇ ಇಲ್ಲವೇನೋ ಎಂಬಂತೆ ಸುರಿಯುವ ಜಿಟಿಜಿಟಿ ಮಳೆ.

ಬೆಳಗ್ಗೆದ್ದು ಬಿಸಿ ಬಿಸಿ ಕಾಫಿ ಕುಡಿದು ಕೊಟ್ಟಿಗೆಗೆ ಹೋಗಿ ನೇಗಿಲನ್ನ ಹೊತ್ತುಕೊಂಡು ಎತ್ತುಗಳನ್ನ ಹೊಡೆದುಕೊಂಡು ಬೆಳಗ್ಗೆ ಹೊರಟರೆ ಸುಮಾರು ೪- ೫ ತಾಸು ರೈತನ ಗಮನ ಗದ್ದೆ, ನೇಗಿಲು, ಹಾಗೂ ಎತ್ತುಗಳ ಮೇಲೆ. ಅದರ ನಡುವೆ ಹೆಂಡತಿ ತಂದುಕೊಟ್ಟ ತಿಂಡಿಯನ್ನ ತಿಂದು ಮತ್ತೆ ಬೇಸಾಯ ಮಾಡಿದರೆ ಅಲ್ಲಿಗೆ ಅಂದಿನ ಕೆಲಸಕ್ಕೆ ವಿರಾಮ. ಇನ್ನೇನಿದ್ದರೂ ಎತ್ತುಗಳನ್ನ ಮೇಯಿಸಿ ಕೊಟ್ಟಿಗೆಗೆ ಹೊಡೆದುಕೊಂಡು ಹೋಗುವುದು, ಅದು ಆತನ ಮಗನ ಕೆಲಸ. ಅವನಿಗೋ ಆ ಮಳೆಯಲ್ಲಿ ತನ್ನ ಗೆಳೆಯರೊಡಗೂಡಿ ಹೊಳೆಗೆ ಈಜಲು ಹೋಗುವಾಸೆ. ಆದರೆ ಅಪ್ಪನ ಕೋಪ ನೆನೆಸಿಕೊಂಡು ವಿಧಿಯಿಲ್ಲದೆ ಮೈಮೇಲೆ ಗೋಣಿ ಚೀಲವನ್ನ ಹಾಕಿಕೊಂಡು ಮಳೆಯಲ್ಲಿ ನೆನೆಯದಂತೆ ಮರದ ಬುಡದಲ್ಲಿ ಕುಳಿತು ಎತ್ತುಗಳನ್ನ ಮೇಯಿಸಲೇಬೇಕು.

೨ ತಿಂಗಳ ಹಿಂದೆ ಎಲ್ಲೋ ಬಿಸಾಕಿದ್ದ ಸ್ಕೂಲ್ ಬ್ಯಾಗನ್ನ ಹುಡುಕಿ ತಂದು, ಒರೆಸಿ, ಜಾಮಿಟ್ರಿ ಬಾಕ್ಸನ್ನ ತೆಗೆದು ಕೈವಾರ, ಕೋನಮಾಪಕ, ಪೆನ್ಸಿಲ್ ರಬ್ಬರ್, ಮೆಂಡರ್ ಎಲ್ಲ ಸರಿಯಾಗಿ ಇದೆಯೇ ಎಂದು ತೆಗೆದು ನೋಡಿ ಮತ್ತೆ ಬ್ಯಾಗಿನೊಳಗೆ ತುರುಕಿ, ಅಮ್ಮ ಕೊಟ್ಟ ಟಿಫಿನ್ ಬಾಕ್ಸನ್ನ ಹಾಕಿಕೊಂಡು, ತೊಳೆದಿಟ್ಟ ಯುನಿಫಾರ್ಮನ್ನ ಧರಿಸಿ, ಗೋಡೆಯ ಸಂಧಿಯಲ್ಲಿ ಒರಗಿಸಿದ್ದ ಹಳೆಯ ಛತ್ರಿಯನ್ನ ಹೊರತೆಗೆದು ಚಾವಡಿಗೆ ಬಂದು ಚಪ್ಪಲಿಯನ್ನ ಹಾಕಿಕೊಂಡು, ಛತ್ರಿಯ ಬಟನ್ ಅದುಮಿ ಎರಡೂ ಕೈನಿಂದ ಮೇಲೆತ್ತಿ ಸಿಕ್ಕಿಸಿ ಮನೆಯಿಂದ ಅಂಗಳಕ್ಕೆ ಕಾಲಿಟ್ಟರೆ ಈಗಿರುವ ರೀತಿಯಲ್ಲೇ ಹಿಂದಿರುಗಿ ಬರುವ ಸಾಧ್ಯತೆಯಂತೂ ಅಸಂಭವ.

ಅದೇ ಬೀದಿಯಲ್ಲಿರುವ ತನ್ನ ಸಹಪಾಠಿಗಳನ್ನೆಲ್ಲಾ ಕರೆದು ಅವರ ಸಂಗಡ ಹೊರಟರೆ ಅಲ್ಲಿಂದ ಮುಂದೆ ಇವರಾಡಿದ್ದೇ ಆಟ. ಎಲ್ಲರೂ ಅವರವರ ಬೇಸಿಗೆ ರಜೆಯ ಅನುಭವಗಳನ್ನ ಹಂಚಿಕೊಳ್ಳುತ್ತಾ ಗದ್ದೆ ತೋಟಗಳನ್ನು ದಾಟುತ್ತ ಕಂಡ ಹಣ್ಣಿನ ಮರಗಳನ್ನ ನೋಡಿ ಸಂಜೆ ವಾಪಸ್ ಬರುವಾಗ ಯಾವ್ಯಾವ ಮರಕ್ಕೆ ಲಗ್ಗೆ ಹಾಕಬೇಕೆಂದು ಪರಸ್ಪರ ಮಾತನಾಡಿಕೊಳ್ಳುತ್ತಾ ಹಳ್ಳ ಕೊಳ್ಳಗಳನ್ನ ಕ್ರಮಿಸಿ ಶಾಲೆಯನ್ನ ತಲುಪಿದರೆ ಒಂದು ಅಧ್ಯಾಯ ಮುಗಿದಂತೆ. ಕ್ಲಾಸ್ ಮುಗಿಸಿ ಕೊನೆಯ ಒಂದು ಗಂಟೆ ಆ ಮಳೆಯಲ್ಲೇ ಆಟವಾಡಿ ಬ್ಯಾಗನ್ನು ಏರಿಸಿಕೊಂಡು ಗೆಳೆಯರೊಂದಿಗೆ ಮನೆಯತ್ತ ಪಯಣ, ದಾರಿಯಲ್ಲಿ ಸಿಕ್ಕ ನೇರಳೆ ಹಣ್ಣೋ, ಹಲಸಿನ ಹಣ್ಣೋ, ಮಾವಿನ ಹಣ್ಣೋ, ಕಿತ್ತಳೆ ಹಣ್ಣಿನ ಮರವನ್ನ ಹತ್ತಿ ಆ ಮರದ ಹಣ್ಣುಗಳು ಇವರ ಉದರಕ್ಕೆ ಹೋಗದಿದ್ದರೆ ಅದು ಅಂದು ಅವರಿಗೆ ಆದ ಅಪಮಾನವೇ ಸರಿ.

ಮನೆಗೆ ಬಂದು ಛತ್ರಿ ಮಡಿಸಿ ಬಾಗಿಲಿನ ಮೂಲೆಯಲ್ಲಿಟ್ಟು, ಚಪ್ಪಲಿ ಕಳಚಿ ಹೆಂಚಿನಿಂದ ಬೀಳುತ್ತಿರುವ ನೀರಿಂದ ಕಾಲು ತೊಳೆದು ಮನೆಯೊಳಕ್ಕೆ ಓಡಿ ಬ್ಯಾಗನ್ನೆತ್ತಿ ಮೂಲೆಯಲ್ಲೆಸೆದು ಅಡುಗೆ ಮನೆಗೆ ಓಡಿ, ಯುನಿಫಾರ್ಮ್ ಸ್ತಿತಿ ನೋಡಿ ಅಮ್ಮ ಬಯ್ಯುತ್ತಿದ್ದರೂ ಲೆಕ್ಕಿಸದೆ ಬೆಂಕಿಯನ್ನ ಕಾಯಿಸುತ್ತಾ ಬಿಸಿಬಿಸಿ ಬೆಲ್ಲದ ಕಾಪಿಯನ್ನ ಹೀರುವ ಹಿತ ಅವಿಸ್ಮರಣೀಯ.

ಬಾಲ್ಕನಿಯಲ್ಲೋ, ಚಾವಡಿಯಲ್ಲೋ ಕುಳಿತು ಎದುರಿಗೆ ಕಾಣುವ ಗಿಡ, ಮರಗಳು ಹಾಗೂ ಬೆಟ್ಟ ಗುಡ್ಡಗಳ ಮೇಲೆ ಸುರಿಯುವ ಮಳೆಯ ಸೊಬಗ ನೋಡುವುದೇ ಒಂದು ಅದ್ಭುತ ದೃಶ್ಯಕಾವ್ಯ. ಆ ತಂಪನೆಯ ವಾತಾವರಣದಲ್ಲಿ ನಿಮ್ಮ ಕೈಗೊಂದು ಲೋಟ ಕಾಫಿ ಬಂದುಬಿಟ್ಟರೆ ಸ್ವರ್ಗ ಮೂರೇ ಗೇಣು. ಒಂದೊಮ್ಮೆ ನೀವು ಕಾಫಿ ಪ್ರಿಯರಾಗಿರದಿದ್ದಲ್ಲಿ ನಿಮ್ಮಷ್ಟು ದುರದೃಷ್ಟವಂತರು ಯಾರೂ ಇರಲಿಕ್ಕಿಲ್ಲ, ಎದುರಿಗಿರುವ ವ್ಯಕ್ತಿಯ ಕೈನಲ್ಲಿ ಬಿಸಿ ಬಿಸಿ ಹಬೆಯಾಡುತ್ತಿರುವ ಕಾಫಿಯನ್ನ ಕಂಡು ಕುಡಿಯುವ ಯೋಚನೆ ಬಂದರೂ ಬರಬಹುದೇನೋ. ಮಳೆಯ ಸಾನಿಧ್ಯ, ಕೈನಲ್ಲಿ ಕಾಫಿ ನಿಮ್ಮ ಮೈಮನ ತಣಿಸುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಹಾಗಂತ ನಿಮ್ಮ ಅಮ್ಮನ ಬಳಿಯೋ ಹೆಂಡತಿಯ ಬಳಿಯೋ ಕೋಲ್ಡ್ ಕಾಫಿ ಕೊಡು ಎಂದು ಕೇಳಿದಿರಾ ಜೋಕೆ.

ಮತ್ತೊಮ್ಮೆ ಬರುತ್ತಿದೆ ಮಳೆಗಾಲ, ಗತಿಸಿ ಹೋದ ಬಾಲ್ಯವನ್ನ ಮತ್ತೊಮ್ಮೆ ಮರಳಿ ನೆನಪಿಸುವ ಕಾಲ. ಕಳೆದುಹೋದ ಭಾವಗಳ ಇನ್ನೊಮ್ಮೆ ಮರಳಿ ಪಡೆಯುವ ಕಾಲ. ಆಗಸದಿಂದ ಮುತ್ತಿಕ್ಕುವ ಹನಿಗೆ ಮೈಯೊಡ್ಡುವ ಕಾಲ. ಮರಳಿ ಬನ್ನಿ ನೆನಪಿನ ಬುಟ್ಟಿಯೊಂದಿಗೆ ಮುಂಗಾರು ಮುಗಿಯುವ ಮುನ್ನ.

...ಚೇತನ್ ಕೋಡುವಳ್ಳಿ