ಆಗ ತಾನೇ ಸ್ಟವ್ ಮೇಲೆ ಟೀ ಇಟ್ಟಿದ್ದೆ, ಒಬ್ಬೊಬ್ಬರಿಗೆ ಮುಕ್ಕಾಲು ಲೋಟದ ಹಾಗೆ ೪ ಜನಕ್ಕೆ. ಪಾತ್ರೆ ಜೋಡುಸ್ತಿದ್ದೆ. ಹಾಲ್ನಲ್ಲಿ ಮೀಟರ್ ಬಾಬುಗೆ ರೆಡ್ಡಿ ಬ್ರದರ್ಸ್ ಬಗ್ಗೆ ಮೀಟರ್ ಹಾಕ್ತಿದ್ದ. ಬಾಬು ಹೂಂ ಹೂಂ ಅಂತಿದ್ದ. ಅಷ್ಟು ಹೇಳೋದಕ್ಕೂ ಅವನಲ್ಲಿ ಚೈತನ್ಯವಿರಲಿಲ್ಲ ಅಂತ ಅವನ ಪ್ರತಿಕ್ರಿಯೆಯಿಂದ ವ್ಯಕ್ತವಾಗುತ್ತಿತ್ತು (ಒಬ್ಬ ಮನುಷ್ಯ ಎಷ್ಟು ಸಲ ಹೂಂ ಅಂತಾನೆ ಇರೋಕಾಗತ್ತೆ).
ಆ ವಿಚಾರದಲ್ಲಿ ಉಲ್ಲ ಸೇಫ್ ಆಗಿದ್ದ, ಅವ್ನು ರೂಮಿನಲ್ಲಿ ಕುತ್ಕೊಂಡು ಅವ್ನ ಹುಡುಗಿಗೆ ಮೀಟರ್ ಹಾಕ್ತಿದ್ದ.
ಕಾಲಿಂಗ್ ಬೆಲ್ ಸದ್ದಾಯ್ತು 'ಓ ಮುಕ್ಕಾಲು ಟೀ ಅರ್ಧಕ್ಕೆ ಬಂತಲ್ಲಪ್ಪ' ಅಂದ್ಕೊಂಡೆ.
ಬಾಬು ಹೋಗಿ ಬಾಗ್ಲು ತೆಗ್ದ, ಅವನಿಗೆ ಭಯಂಕರ ಖುಷಿಯಾಗಿರಬೇಕು ಹೂಂ ಅಂತ ಹೇಳೋದು ತಪ್ತಲ್ಲ ಅಂತ.
ಪೋಕಿ ಒಳಗೆ ಬಂದ ಜೊತೆಗೆ ವೆಂಕ ಸಹ ಬಂದ. ಪೋಕಿ ಬಂದವನೇ ಉಲ್ಲನ್ನ ನೋಡಿ 'ಓ ಅಣ್ಣ ಫುಲ್ ಬ್ಯುಸಿ' ಅಂದ.
ನಾನು ೬ ಲೋಟ ತಂದು ಹಾಲ್ನಲ್ಲಿ ಇಟ್ಟು ೫ ಜನಕ್ಕೂ ಅರ್ಧರ್ಧ ಲೋಟ ಬರೋ ಹಾಗೆ ಹಾಕಿಟ್ಟೆ.
ಟೀ ಕುಡೀತಾ......
'ಏನು ಸಾಬಿ ಫುಲ್ ಕಚ್ತವ್ನೆ' ಅಂತ ಪೋಕಿ ಅಂದ.
'ಮಗ ಹುಡುಗಿ ಸಿಕ್ಕಿದ್ರೆ ಎಲ್ರು ಹಂಗೆ' ಅಂತ ಮೀಟರ್ ಅಂದ.
ಅದೆಲ್ಲ್ಲ ಇರ್ಲಿ ಪೋಕಿ 'ನಿನ್ನ ಮದುವೆ ಕಥೆ ಏನೋ?' ಅಂದೆ.
ಅಯ್ಯೋ ಅದ್ರ ಕಥೆ ಏನು ಕೇಳ್ತೀಯಾ ಬಿಡು ಅಂದ.
'ಅದ್ಹೆಂಗಾಗತ್ತೆ ಹೇಳು ಮಗ, ಸರಿ ಇಲ್ಲಿವರೆಗೆ ಎಷ್ಟು ನೋಡಿದೀಯ? ' ಅಂದೆ.
ಒಂದು ೧೦ ಮಗ ಅಂದ.
'ಅದ್ರಲ್ಲಿ ನೀನೆಷ್ಟು ರಿಜೆಕ್ಟ್ ಮಾಡಿದ್ದು, ಅವರೆಷ್ಟು' ಅಂತ ಬಾಬು ಅಂದ.
ನಮ್ಕಡೆಯಿಂದ ಒಂದು ೭ ಅವ್ರ್ಕಡೆಯಿಂದ ಮಿಕ್ಕಿದ್ದು ಅಂದ.
ಪರವಾಗಿಲ್ಲ ಕತ್ತೆತ್ತಿಕೊಂಡು ಓಡಾಡಬಹುದು ಅಂದೆ.
ಹೂಂ ಹಂಗೆ ಅಂದ್ಕೋ ಅಂದ.
ಏನೇನಕ್ಕೆ ರಿಜೆಕ್ಟ್ ಮಾಡಿದ್ಯೋ ಅಂದೆ.
ಒಂದಷ್ಟು ಫೋಟೋ ನೋಡಿ ಹೋದ್ರೆ ಅಲ್ಲಿ ಚೆನ್ನಾಗಿರಲಿಲ್ಲ ಮಗ, ಇನ್ನಷ್ಟು ಕುಟುಂಬ ಅದು ಇದು ಅಂತ ಇರತ್ತಲ್ಲ....
'೧೦ ರಲ್ಲಿ ಒಂದೂ ಸರಿಯಾಗ್ಲಿಲ್ವ' ಅಂದೆ.
ಒಬ್ಳನ್ನು ನೋಡಿದ್ದೆ ಎಲ್ಲರಿಗೂ ಒಪ್ಪಿಗೆ ಆಗಿತ್ತು. ನಮ್ಮ ಮನೆಯವರೆಲ್ಲ ಒಂದಿನ ಆ ಹುಡುಗಿ ಮನೆಗೆ ಹೋದ್ವಿ. ಹುಡುಗಿ ಜ್ಯೂಸ್ ತಂದು ಎಲ್ಲರಿಗೂ ಕೊಡ್ತಿದ್ಲು, ನನ್ನ ಪಕ್ಕದಲ್ಲಿ ನನ್ನ ಅಕ್ಕನ ಮಗ ಕೂತಿದ್ದ. ಅವನನ್ನಜ್ಯೂಸ್ ತಗೋ ಅಂದ್ಲು, ಇವ್ನು ಯಾಕೋ ನಾಚ್ಕೊಂಡು ಬೇಡ ಅಂದ. ಇನ್ನೊಂದ್ಸಲ ಕೇಳಿದ್ಲು ಆಗಲೂ ಬೇಡ ಅಂದ. ಆಗ ಅವ್ಳು 'ಬೇಕಿದ್ರೆ ತಗೋ ಬ್ಯಾಡದಿದ್ರೆ ಬಿಡು' ಅಂತ ಅಲ್ಲೇ ಲೋಟ ಇಟ್ಟು ಹೋದ್ಲು.
ಅದರಲ್ಲೇನಿದೆ ಮಗ ಸರಿ ಅಲ್ವ ಅಂದೆ.
ಸರಿನೇ, ಆದ್ರೆ ಮುಖದ ಪ್ರತಿಕ್ರಿಯೆ, ಲೋಟ ಇಟ್ಟ ರೀತಿ ಬೇರೇನೆ ಇತ್ತು ಮಗ ಅಂದ.
ಒಳ್ಳೆ ಕಥೆ ಹೋಗ್ಲಿ ಬಿಡು ಅಂದೆ.
ಈಗ ಒಂದು ಆಪ್ಶನ್ ಕೊಟ್ಟಿದ್ದಾರೆ 'ನಮಗೂ ನೋಡಿ ಸಾಕಾಗಿದೆ ನೀನೆ ಯಾರನ್ನಾದ್ರು ಹುಡ್ಕೋ ಹೋಗು ಅಂದಿದ್ದಾರೆ ಮನೇಲಿ' ಅಂದ.
ಸರಿ ಆಮೇಲೆ, ಯಾರನ್ನಾದ್ರು ಹುಡ್ಕಿದ್ಯಾ ಅಂದೆ.
ಹೂಂ ಮಗ ಒಬ್ಳನ್ನ ತೋರ್ಸಿದೆ 'ಲವ್ ಮ್ಯಾರೇಜ್ ಆಗೋದಾದ್ರೆ ಇದಕ್ಕಿಂತ ಒಳ್ಳೆ ಹುಡ್ಗೀನೆ ಸಿಕ್ತಾಳೆ ಹೋಗು' ಅಂದ್ರು ಅಂದ.
ವೆಂಕ ಇದ್ದವನು 'ಪೋಕಿ, ರೆಫೆರೆನ್ಸ್ ಮಾಡಿದ್ರೆ, ನಮಗೆ ಕಮಿಷನ್ ಎಷ್ಟಪ್ಪ' ಅಂದ.
'ನನ್ಮಗನೇ' ಅಂದು ಪೋಕಿ ಸುಮ್ನಾದ.
ಪಾಪ ಪೋಕಿ.
ಚಿಕ್ಕು ನಿಂದು ಯಾವಾಗ ಮಗ ಅಂದ.
'ಪೋಕಿ, ನಿಮ್ದೆಲ್ಲಾ ನೋಡಿ ಇನ್ನೊಂದು ವರ್ಷ ಆರಾಮಾಗಿ ಇರೋಣ ಅಂತ ಒಂದು ವರ್ಷದ ಮಟ್ಟಿಗೆ ಮುಂದೂಡಿದ್ದೇನೆ' ಅಂದೆ.
ಬೇಡ ಮಗ, ಈಗ್ಲಿಂದನೆ ಹುಡ್ಕೋಕೆ ಶುರು ಮಾಡು ಇಲ್ಲಾಂದ್ರೆ ಬಾರೀ ಕಷ್ಟ ಅಂದ.
ಸರಿ ನೋಡೋಣ ತಗೋ ಅಂದು, ಮಧ್ಯಾಹ್ನದ ಊಟಕ್ಕೇನು ಅಡಿಗೆ ಮಾಡೋದು ಅಂದ್ಕೊಂಡು ಅಡಿಗೆ ಮನೆಗೆ ಹೋದೆ. ಅವ್ರು ಮಾತಾಡ್ತಾನೆ ಇದ್ರು.
ದೂರದಲ್ಲಿ ಸೊಪ್ಪು ಅಂತ ಕೂಗಿದ್ದು ಕೇಳುಸ್ತು 'ಲೇ ಮೀಟ್ರು, ಕೆಳಗೆ ಹೋಗಿ ಸೊಪ್ಪು ತಾರೋ' ಅಂದೆ.
'ಹಲ್ಕಾ ನನ್ಮಗ ಇಂಟರೆಸ್ಟಿಂಗ್ ಡಿಸ್ಕಶನ್ ನಡೀತಿದೆ ಕೇಳೋಣ' ಅಂದ್ಕೊಂಡರೆ ಅದ್ಕೂ ಕಲ್ಲು ಹಾಕ್ದಾ ಅಂತ ಮನಸ್ನಲ್ಲಿ ಬೈಕಂಡು ಹೋದ ಅಂತ ಅವ್ನು ಹೋಗೋ ಸ್ಪೀಡ್ಗೆ ಅಂದ್ಕೊಂಡೆ
.................................................
ಚೇತನ್ ಜನವರಿಲಿ ನನ್ನ ಮದ್ವೆ ಖಂಡಿತ ಬರಬೇಕು ಆಯ್ತಾ? ಅಂತ ವೆಂಕಟೇಶನ್ (ನನ್ನ ಕಲೀಗ್) ಮದ್ವೆಗೆ ಕರ್ದ.
ಆಯ್ತು ಅಂದೆ.
ಸ್ವಲ್ಪ ಹೊತ್ತಿಗೆ ಸಿಂಗ್ ಕಮ್ಯುನಿಕೇಟರ್ನಲ್ಲಿ ಪಿಂಗ್ ಮಾಡಿ ಟೀ ಸಿಂಬಲ್ ತೋರ್ಸಿದ. ನಾನು ನಡಿ ಮಗ ಅಂದೆ.
ಕೆಫಿಟೇರಿಯಾದಲ್ಲಿ 'ಮಗ, ಎಲ್ಲರಿಗೂ ಮದ್ವೆ ಆಗ್ತಿದೆ' ನಾವೇ ಕಾಲಿ ಹೊಡಿತಿರೋದು ನೋಡೋ ಅಂದ.
'ಟೈಮ್ ಸರಿಯಿಲ್ದಾಗ ಮನುಷ್ಯ ತಲೆ ಕೆರಕೊಂಡ್ರು, ತಲೇಲಿ ಗಾಯ ಆಗಿ ಗಾಯ ಕ್ಯಾನ್ಸರ್ ಆಗಿ.....' ಮಗ ನಾನು ಹೊರಟೆ ಅಂತ ಹೋಗೆಬಿಡೋದಾ
ಅಲ್ವೋ ಈಗಿನ್ನು ಬಂದೀದಿಯಾ, ಇಷ್ಟು ಬೇಗ ಹೊರಟ್ರೆ, ಬಾ ಮಗ ಕೂತ್ಕೋ ಅಂದೆ.
ಇಲ್ಲ ಮಗ ಕೆಲಸ ಇದೆ ಅಂತ ಹೋದ.
ಅವ್ನ ಫ್ಲಾಷ್ಬ್ಯಾಕ್ ಹೇಳ್ಬೆಕಲ್ವ....
ಅವ್ನು ಯಾವ್ದೋ ಹುಡುಗಿ ಲವ್ ಮಾಡ್ತಿದ್ನಂತೆ, ಅವ್ಳು ಕೈ ಕೊಟ್ಟಿದ್ದಾಳೆ. ಹಂಗಾಗಿ ಮೇಲಿನ ಡೈಲಾಗ್ ಹೇಳಿದ್ರೆ ಸಾಕು ಫ್ಲಾಷ್ಬ್ಯಾಕ್ಗೆ ಹೋಗಿಬಿಡ್ತಾನೆ.
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ.
.......................................................
ಅವ್ರಿಗೆ ಅಂತ ಸಪರೇಟ್ ರೂಂ ಕೊಟ್ರೂ ಮತ್ತೂ ನಾವು ಇರಲ್ಲಿಗೆ ಬಂದು ಕಚ್ತಾರೆ, ನಾವು, ನಮ್ಮ್ಹತ್ರ ಮಾತಾಡ್ತಿದ್ದಾರೆನೋ ಅಂತ ಏನೋ ಅಂದ್ರೆ ತಿರ್ಗೂ ನೋಡೋಲ್ಲ.
ಇಂಥವ್ರು ನಮ್ಮಂಥ ಬ್ಯಾಚುಲರ್ ರೂಂನಲ್ಲಿದ್ರೆ ಬಾರೀ ಕಷ್ಟ ಕಣ್ರೀ..
- ಅಡಿಗೆ ಮಾಡೋದಕ್ಕೆ ಸಹಾಯ ಮಾಡೋಲ್ಲ.
- ಪಾತ್ರೆ ತೊಳೆಯೋಲ್ಲ.
- ಕಸ ಎತ್ತಿಹಾಕೊಲ್ಲ.
- ಜಗತ್ನಲ್ಲಿ ಏನು ಆಗ್ತಿದೆ ಅನ್ನೋ ಪರಿವೇನೆ ಇರಲ್ಲ.
ಇವ್ರು ಕಚ್ಹೋ ರೇಂಜ್ಗೆ ಮೊಬೈಲ್ ತೂತು ಬೀಳತ್ತೋ, ಇವ್ರ ಕಿವಿ ತೂತು ಬೀಳತ್ತೋ ದೇವ್ರೇ ಕಾಪಾಡ್ಬೇಕು. ಒಟ್ನಲ್ಲಿ ಮೊಬೈಲ್ ಕಂಪನಿಗಳಿಗೆ ಸುಗ್ಗಿಹಬ್ಬ.
ಬಿಲ್ ಬಂದಾದ್ಮೇಲೆ ಈ ರೀತಿ ಹಾಡ್ಬಹುದೇನೋ
'ಈ ಸಂಭಾಷಣೆ ನಮ್ಮ ಈ ಮೊಬೈಲ್ ಸಂಭಾಷಣೆ
ಅತಿ ಮಧುರ ಬಿಲ್ಲು ಭಯಂಕರ
ಭಯಂಕರಾ, ಭಯಂಕರಾ , ಭಯಂಕರಾ'
ಮೊಬೈಲ್ ರಿಂಗ್ ಆಗ್ತಿದೆ ನಮ್ಹುಡ್ಗಿ ಇರ್ಬೇಕು ತಡೀರಿ ಒಂದೆರಡು ಗಂಟೆ ಬಂದೆ :)
No comments:
Post a Comment