Friday, July 8, 2011

ನನ್ನ ಸಾಲುಗಳು

1) ಗಗನವು ಗಮ್ಯದ ಗುರಿಯಾದರೆ ಮೊದಲು
ಭುವಿಯ ಬಿಡುವ ಪ್ರಯತ್ನವಾಗಬೇಕು

2)
ಕಹಿಘಟನೆಗಳ ಮರೆತು ಮುನ್ನಡೆದರೆ
ಸಿಹಿಘಟನೆಗಳ ಸಾಲಿಗೆ ಮುನ್ನುಡಿಯಾಗುತ್ತದೆ

3)
ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ.


ಸ್ಪರ್ಶ - ನೋಟ

ಆ ಮಂಜಿನ ಹನಿಯೂ ಕೂಡ ನಾಚಿ ನಕ್ಕಿತ್ತು ನಿನ್ನ ನೋಡಿ
ಅದಕ್ಕೇನು ಮಾಡಿದ್ದೆ ನೀ ಮೋಡಿ

ಆ ಇಬ್ಬನಿಯು ತಾಕಿತ್ತು ನಿನ್ನ ಮೈಯನ್ನ
ಅದು ತೀರಿಸಿತ್ತು ನಿನ್ನ ಸ್ಪರ್ಶಿಸುವ ಹಂಬಲವನ್ನ

ಆ ದಿನ ನಾ ನೋಡಿದ್ದೇ ನಿನ್ನನು
ನೋಡಬೇಕೆಂದೆನಿಸಲಿಲ್ಲ
ನಿನ್ನ ಬಿಟ್ಟು ಇನ್ಯಾರನು

April 20, 2010

ಚುರ್ಮುರಿ -೧೨

೩೮) ತನ್ನನ್ನು ಸಾಕುತ್ತಿರುವನು ಕಟುಕ ಎಂದು ತಿಳಿದ ಕುರಿ, ಅಲ್ಲಿಂದ ಬೇರೆ ಕಡೆಗೆ ಓಡಿಹೋಯಿತು. ಆದರೆ ಪ್ರಪಂಚದಲ್ಲಿರುವವರೆಲ್ಲರೂ ಕಟುಕರು ಎಂದು ತಿಳಿಯುವಷ್ಟರಲ್ಲಿ ಅದು ತನ್ನ ಪ್ರಾಣವನ್ನೇ ಕಳೆದುಕೊಂಡಿತ್ತು.


೩೯) ಅವನು ಮದುವೆಗೆ ಮುಂಚೆ ನವರಂಗ್ ಚಿತ್ರಮಂದಿರದಲ್ಲಿ ೫೦ ರೂ ಕೊಟ್ಟು ಸಿನೆಮಾ ನೋಡುತ್ತಿದ್ದನು, ಮದುವೆಯಾದ ಮೇಲೆ ಮಂತ್ರಿ ಮಾಲ್ನಲ್ಲಿರುವ ಐನಾಕ್ಸನಲ್ಲಿ ೫೦೦ ರೂ ಕೊಟ್ಟು ಸಿನೆಮಾ ನೋಡುತ್ತಿದ್ದಾನೆ.


೪೦) ಅವನು ಕಾರಿನಲ್ಲಿದ್ದರೂ ತಲೆಗೆ ಕ್ಯಾಪ್ ಹಾಕಿಕೊಂಡು ಚಾಲನೆ ಮಾಡುತ್ತಿದ್ದನು.


೪೧) ತನ್ನ ಎದುರಿಗೆ ಎಷ್ಟೋ ಜನ ಭಿಕ್ಷುಕರು (ಕೈ ಇಲ್ಲದಿದ್ದವರು, ಕಾಲು ಇಲ್ಲದಿದ್ದವರು) ಭಿಕ್ಷೆ ಬೇಡಿಕೊಂಡು ಹೋದರೂ ಕಾಸು ಬಿಚ್ಚದಿದ್ದ ಅವನು, ಮಂಗಳಮುಖಿ ಬಂದಾಗ ಕೇಳುವುದಕ್ಕಿಂತ ಮೊದಲೇ ಕಾಸನ್ನು ತೆಗೆದು ಕೊಟ್ಟನು.


೪೨) ಅಲ್ಲೊಂದು ಕನ್ನಡದ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿತ್ತು. ಗುಂಡಿ ತೆಗೆಯುತ್ತಿದ್ದವರು, ಚಪ್ಪರ, ಶಾಮಿಯಾನ ಹಾಕುತ್ತಿದ್ದವರು ತಮಿಳು ತೆಲುಗಿನವರಾಗಿದ್ದರು.

ಸಂಕ್ರಾಂತಿಗೊಂದು ಮುನ್ನುಡಿ

ಮೋಡವೊಂದು ಹನಿಯಾಗಿ
ಹನಿಯಿಂದ ನೀರಾಗಿ
ಆ ನೀರು ಧರೆಗುರುಳಿ

ಧರೆಯಿಂದ ಸಸಿಯೊಂದು
ಚಿಗುರೊಡೆದು
ಆ ಚಿಗುರು ತೆನೆಯಾಗಿ

ತೆನೆಯೆಲ್ಲ ಅಂಗಳದಿ ಹರಡಿ
ಸಂಕ್ರಾಂತಿಯ ಸಂಭ್ರಮಕೆ ಸಾಕ್ಷಿಯಾಗಲಿ


January 13, 2011 - 10:53am

ನೆನಪುಗಳ ಮೆರವಣಿಗೆಯಲ್ಲಿ

ಅಂತೂ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಬಂದು ಹುಡುಗರೆಲ್ಲ ಸೇರಿ ಬಾಡಿಗೆ ಮನೆ ಮಾಡಿ ಆಮೇಲೆ ಒಂದು ಕೆಲಸ ಹುಡ್ಕಿದ್ದಾಯ್ತು. ಇನ್ನೇನು ಆರಾಮು ಅಂದ್ಕೊಂಡ್ರೆ ಸಮಸ್ಯೆ ಶುರುವಾಗಿದ್ದೆ ಆಗ. ಬೆಳಗ್ಗೆ ಎದ್ರೆ ಏನು ತಿಂಡಿ ಮಾಡೋದು ಅನ್ನೋ ಯೋಚನೆ, ಏನೋ ಮಾಡೋಣ ಅಂದ್ಕೊಂಡು ಶುರು ಮಾಡಿದ್ರೆ, ಇಲ್ಲ ಈರುಳ್ಳಿ ಅಥವಾ ಟೊಮೇಟೊ ಅಥವಾ ಮೆಣಸಿನಕಾಯಿ ಅಥವಾ ಹೆಸರುಬೇಳೆ ಹೀಗೆ ಏನಾದರೂ ಒಂದು ಮಿಸ್. ಅಂತೂ ತಿಂಡಿ ಮಾಡಿ ಆಫೀಸಿಗೆ ರೆಡಿ ಆಗಿ ಬಸ್ ಹಿಡಿಯೋಕೆ ಹೋದ್ರೆ, ನಮ್ಮ ಹಳ್ಳಿ ಬಸ್ಸಾದ್ರೂ ಆಗಬಹುದು ಉಹುಂ ಬಿ.ಎಂ.ಟಿ.ಸಿ ಬಸ್ ಸಹವಾಸ ಅಲ್ಲ. ಮಕ್ಕಳನ್ನು ಕಂಡ್ರೆ ಬೆಂಗ್ಳೂರಿನ ಬೀದಿ ನಾಯಿಗಳು ಅಟ್ಟಿಸಿಕೊಂಡು ಹೋಗಿ ಕಚ್ಹೋ ಹಾಗೆ ಜನಗಳು ಸೀಟ್ ಹಿಡ್ಕೊಳ್ಳೋಕೆ ನುಗ್ತಿರ್ತಾರೆ. ಆ ಟ್ರಾಫಿಕ್ನಲ್ಲಿ ಆ ರಶ್ನಲ್ಲಿ ಆಫೀಸ್ ತಲ್ಪೋಹೊತ್ತಿಗೆ ಹೈರಾಣಾಗಿ ಹೋಗಿರ್ತೇವೆ.

ಆಫೀಸಲ್ಲಿ ಆ ಡೆಡ್ ಲೈನ್ಗಳು, ಮೀಟಿಂಗ್ಗಳು, ಟ್ಯೂಬ್ ಲೈಟ್ಗಳು, ಕಣ್ಣು ಕುಕ್ಕುವ ಮಾನಿಟರ್ಗಳು, ಟೇಸ್ಟ್ ಇಲ್ಲದ ಟೀ, ಕಾಫೀಗಳು, ಬೇಡದೆ ಇರೋ ಗಾಸಿಪ್ಗಳು. ಅಬ್ಬ ಸಾಕಪ್ಪಾ ಇದೇನು ಜೀವನ ಅನ್ಸಿಬಿಡತ್ತೆ ಆದ್ರೆ ಏನು ಮಾಡೋ ಹಾಗಿಲ್ಲ, ಹೊಟ್ಟೆಪಾಡು.

ಕೆಲಸ ಮುಗಿಸಿ ಮತ್ತೆ ಮನೆ ಕಡೆ ಹೊರಟ್ರೆ ಮತ್ತೆ ಅದೇ ಬಿ.ಎಂ.ಟಿ.ಸಿ ಬಸ್, ಸಂತೆಯಂತೆ ಜನ, ಟ್ರಾಫಿಕ್ ಜಾಮ್. ಮನೆ ತಲುಪೋ ಹೊತ್ತಿಗೆ ನಮ್ಮ ಪಾಡು ಹೇಗಾಗಿರತ್ತೆ ಅಂದ್ರೆ ನೀರಿನಲ್ಲಿ ಅದ್ದಿಟ್ಟ ಬಟ್ಟೆಯನ್ನು ತೆಗೆದು ಹಿಂಡಿಹಾಕ್ತಾರಲ್ಲ ಹಾಗೆ ಆಗಿರ್ತೀವಿ. ರಾತ್ರಿ ಮತ್ತದೇ ಕಥೆ, ಬೆಳಗ್ಗೆ ನಡೆದ ಘಟನೆಗಳ ಪುನರಾವರ್ತನೆ.

.......................................................

ಆಗ

ಮಲೆನಾಡು, ಬೆಳಗ್ಗೆ ೭ ಗಂಟೆ ಭಯಂಕರ ಚಳಿ, ಮೈ ಮೇಲೆ ಹೊದ್ದುಕೊಂಡ ೨ ರಗ್ಗನ್ನು ಮತ್ತೆ ಮತ್ತೆ ಎಳೆದುಕೊಂಡು ಮೈ ಮುದುಡಿಕೊಂಡು ಮಲಗಿಬಿಟ್ರೆ ಸ್ವರ್ಗ ಸುಖ. ಆದರೆ ಅದೇ ಹೊತ್ತಿಗೆ ಅಪ್ಪ ಎದ್ದು ಬಾಗಿಲಿನ ಚಿಲಕ ತೆಗೆದ ತಕ್ಷಣ ರೊಟ್ಟಿ ತಟ್ಟುತ್ತಿದ್ದ ಅಮ್ಮ ನನ್ನ ಹತ್ತಿರ ಬಂದು 'ಎದ್ದೇಳೋ, ಅಪ್ಪ ಎದ್ರು' (ಇಲ್ಲಾಂದ್ರೆ ಮಕ್ಕಳಿಗೆ ಒಂದೋ ಬೈಗುಳ ಅಥವಾ ಒದೆ ಬೀಳತ್ತಲ್ಲ ಅಂತ) ಅಂದ ತಕ್ಷಣ ಆ ಚಳಿಯನ್ನೂ ಲೆಕ್ಕಿಸದೆ ಹಾಕಿದ್ದ ಎರಡು ರಗ್ಗನ್ನು ಕಿತ್ತೆಸೆದು ಪಕ್ಕದಲ್ಲಿರುವ ಟೇಬಲ್ಲಿಂದ ಯಾವುದೋ ಒಂದು ಪುಸ್ತಕ ತೆಗೆದುಕೊಂಡು ಕೈನಲ್ಲಿ ಹಿಡಿದುಕೊಂಡು ಕೂತು, ಅಪ್ಪ ನಾನು ಮಲಗುವ ನಡುಮನೆ ಪ್ರವೇಶಿಸಿ ಬಾತ್ರೂಮಿಗೆ ಹೋಗುವಷ್ಟರಲ್ಲಿ ಪುಸ್ತಕವನ್ನು ಆಚೆ ಇಟ್ಟು ಎಸೆದ ರಗ್ಗನ್ನು ಮತ್ತೆ ಮೈ ಮೇಲೆ ಎಳೆದುಕೊಂಡು ಮತ್ತೆ ಅದೇ ಪೊಸಿಷನ್ನಲ್ಲಿ ನಿದ್ರಾದೇವಿಗೆ ಶರಣಾಗುತ್ತಿದ್ದೆ. ಅವರು ಸ್ನಾನ ಮುಗಿಸಿ ವಾಪಸ್ ಬರೋ ಹೊತ್ತಿಗೆ ಊಟದ ಹಾಲ್ನಲ್ಲಿದ್ದ ರೇಡಿಯೋದಲ್ಲಿ ಬರುತ್ತಿದ್ದ ನ್ಯೂಸ್ (ಧಾರವಾಡ ಕೇಂದ್ರ) ಮುಗಿದು ಚಿತ್ರಗೀತೆ ಶುರುವಾಗುವ ಹೊತ್ತಿಗೆ ಮತ್ತೆ ಎಚ್ಚರವಾಗುತ್ತಿತ್ತು (ಈ ಬಾರೀ ಅಮ್ಮನ ಸಹಾಯ ಬೇಕಾಗುತ್ತಿರಲಿಲ್ಲ). ಇದು ನಿತ್ಯದ ದಿನಚರಿ.

ಆಮೇಲೆ ಎದ್ದು ಸ್ನ್ನಾನ ಮಾಡೋದು ಅಂದ್ರೆ ಅದರಂಥ ನರಕ ಹಿಂಸೆ ಯಾವುದೂ ಇರುತ್ತಿರಲಿಲ್ಲ. ಸ್ಕೂಲಿಗೆ ಬೇಗ ಹೋಗಿ ಗೋಲಿಯೋ ಬುಗುರಿಯೋ ಆಡುವಾಸೆ ಆದರೆ ಅಮ್ಮ ಸ್ನಾನ ಮಾಡಿ ಕಳಿಸದೇ ಬಿಡುತ್ತಿರಲಿಲ್ಲ. ಅಂತೂ ಹಂಡೆಯ ನೀರು ನಮ್ಮನ್ನು ಅಣಕಿಸದೆ ಇರುತ್ತಿರಲಿಲ್ಲ.

ರೊಟ್ಟಿ ತಿಂದು, ಸ್ಕೂಲ್ ಯುನಿಫಾರ್ಮ್ ಹಾಕಿಕೊಂಡು ಚಾವಡಿಯಿಂದ ೪ ಮೆಟ್ಟಿಲು ಹಾರಿ ಕಣಕ್ಕೆ ಜಿಗಿದರೆ ನನ್ನನ್ನು ಹಿಡಿಯುವವರಾರಿರಲಿಲ್ಲ, ಅಕಸ್ಮಾತ್ ಮಳೆ ಬಂದು ಕಣದಲ್ಲಿ ಪಾಚಿ ಕಟ್ಟಿದ್ದರೆ ಅಲ್ಲೇ ಜಾರಿ ಬಿದ್ದು ಹಸಿರಾಗಿದ್ದ ಶರ್ಟ್ ಮತ್ತು ಚಡ್ಡಿಯನ್ನು ಅಮ್ಮನಿಗೆ ತೋರಿಸಿ ಇವತ್ತು ಸ್ಕೂಲಿಗೆ ಹೋಗುವುದಿಲ್ಲ ಅಂದರೆ ಕಣದಲ್ಲೇ ನಿಲ್ಲಿಸಿ ಪಕ್ಕದಲ್ಲಿದ್ದ ಬ್ಯಾರಲ್ಲಿಂದ ನೀರು ತೆಗೆದುಕೊಂಡು ಅಲ್ಲೇ ಕೊಳೆಯನ್ನು ತೆಗೆದು ಈಗ ನಡಿ ಅಂದಾಗ ವಿಧಿಯಿಲ್ಲದೇ ಸ್ಕೂಲಿಗೆ ಹೆಜ್ಜೆ ಹಾಕಬೇಕಿತ್ತು.

ಮನೆಯಿಂದ ಸ್ಕೂಲಿಗೆ ೧೦ ನಿಮಿಷ ದಾರಿ ಆದರೂ ಬೆಲ್ ಹೊಡೆದ ಮೇಲೆ ಓಡುತ್ತಿದ್ದ ನಾನು, ಸ್ಕೂಲ್ ಹತ್ತಿರ ಬಂದಾಗ ಬಗ್ಗಿಕೊಂಡು ಹೋಗಿ ನಾನು ನಿಲ್ಲಬೇಕಾದ ಸಾಲಿನಲ್ಲಿ ನಿಲ್ಲುತ್ತಿದ್ದೆ. ಸ್ವಾಮಿ ದೇವನೇ, ಜೈ ಭಾರತ ಜನನಿಯ ತನುಜಾತೆ ಮುಗಿದ ತಕ್ಷಣ, ಪೇಪರ್ ಓದಿ, ಅಂದಿನ ಸುಭಾಷಿತ ಬರೆದು ಶಾಲೆ ಒಳಗೆ ಓಡಿ ಮಣೆಯ ಮೇಲೆ ಕೂತುಬಿಡುತ್ತಿದ್ದೆವು.

ಮಾಮೂಲಿಯಂತೆ ಪಾಠಗಳು ನಡೆಯುತ್ತಿರುತ್ತಿದ್ದವು, ಅಕಸ್ಮಾತ್ ಹೋಂ ವರ್ಕ್ ಮಾಡಿರಲಿಲ್ಲವೆಂದರೆ ಕೆಳಗೆ ಕುಳಿತು ಕಾಲುಸಂಧಿಯಲ್ಲಿ ಬಲ ಕೈಯನ್ನು ಎಡ ಕಿವಿಗೂ ಎಡ ಕೈಯನ್ನು ಬಲ ಕಿವಿಗೂ ಹಿಡಿದು ಕೂರಬೇಕಾಗುತ್ತಿತ್ತು, ಅಕಸ್ಮಾತ್ ಹಾಗೆ ಕೂತವನನ್ನು ಬೇರೆ ಯಾರಾದರೂ ನೋಡಿ ಕಿಸಕ್ಕನೆ ನಕ್ಕರ ಅವರಿಗೂ ಅದೇ ಗತಿಯಾಗುತ್ತಿತ್ತು.

ಇನ್ನೊಂದು ತರದ ಶಿಕ್ಷೆಯೆಂದರೆ ಸೀಮೆಸುಣ್ಣವನ್ನು ಎರಡು ಬೆರಳಿಗೆ ಸಿಕ್ಕಿಸಿ ಬೆರಳನ್ನು ಹಿಂದೆ ಮುಂದೆ ಮಾಡುತ್ತಿದ್ದರು. ಇದೆಲ್ಲದರ ಜೊತೆಗೆ ಮಾಮೂಲಿಯಂತೆ ಬೆಟ್ಟದ ರುಚಿ ಇದ್ದೆ ಇರುತ್ತಿತ್ತು.

ಆಗೆಲ್ಲ ವಿಮಾನದ ಶಬ್ದ ಬಂದರೆ ಸ್ಕೂಲ್ ಒಳಗಿದ್ದರೂ ಎಲ್ಲ ಹುಡುಗರೂ ಹೊರಗಡೆ ಓಡಿ ಬಂದು ಅದನ್ನು ನೋಡುತ್ತಿದರು, ನಮ್ಮ ಜೊತೆಗೆ ಶಿಕ್ಷಕರು ಸಹ ನೋಡುವುದಕ್ಕೆ ಬರುತ್ತಿದ್ದರು. ಮಧ್ಯಾಹ್ನ ಊಟಕ್ಕೆ ಬೆಲ್ ಹೊಡೆದ ತಕ್ಷಣ ಬ್ಯಾಗ್ ಎತ್ತಿಕೊಂಡು ಓಡಲು ಶುರು ಮಾಡಿದೆವೆಂದರೆ ಮನೆಗೆ ಹೋಗಿಯೇ ನಿಲ್ಲುತ್ತಿದ್ದದ್ದು. ಅಮ್ಮನ ಕೈ ತುತ್ತು ತಿಂದು ೧ ಗಂಟೆ ಮನೆಯಲ್ಲಿದ್ದು ಮತ್ತೆ ಬೆಲ್ ಹೊಡೆದ ತಕ್ಷಣ ಓಟ

೩ ಗಂಟೆಯವರೆಗೆ ಪಾಠ, ಆಮೇಲೆ ೧.೩೦ ಗಂಟೆ ಆಟ. ಲಗೋರಿ, ಗೋಲಿ, ಕೋ ಕೋ, ವಾಲಿಬಾಲ್ ಆಡಿ ೪.೩೦ಕ್ಕೆ ಸ್ಕೂಲ್ ಬಿಟ್ರೆ ಮತ್ತೆ ಯಾರದೋ ತೋಟದಲ್ಲಿ (ಕೆಲವೊಂದು ನಮ್ಮ ತೋಟದಲ್ಲಿದ್ದರೂ) ಹಲಸಿನಹಣ್ಣು , ಕಿತ್ತಲೆಹಣ್ಣು, ಸೀಬೆಹಣ್ಣು, ನೇರಳೆ ಹಣ್ಣು, ಮೂಸಂಬಿ ಹೋಗಿ ಕದ್ದು ತಿಂದು ಮನೆಗೆ ಬರೋ ಹೊತ್ತಿಗೆ ಸಂಜೆ ೭ ಗಂಟೆ. ಮುಂದುಗಡೆಯಿಂದ ಮನೆಗೆ ಹೋದರೆ ಅಪ್ಪ ಅಲ್ಲೇ ಪೇಪರ್ ಓದುತ್ತ ಕೂರುವುದರಿಂದ ನನ್ನನ್ನು ನೋಡಿದ ತಕ್ಷಣ ಒದೆ ಎಂಬುದು ಕಟ್ಟಿಟ್ಟ ಬುತ್ತಿ. ಅಪ್ಪನ ಕಣ್ತಪ್ಪಿಸಿ ಮನೆ ಹಿಂದುಗಡೆ ಹೋಗಿ ಒಳಗೆ ಸೇರಿ ಬಟ್ಟೆ ಎಲ್ಲ ಬದಲಾಯಿಸಿ ಪುಸ್ತಕ ಹಿಡಿದುಕೊಂಡರೆ ಆಗಲೇ ಸಮಾಧಾನ.

………………………………………………

ಬರ್ತಿರೋ ಮಳೆ ನೋಡ್ತಾ (ಹೋಗಿ ನೆನೆಯೋಣ ಅಂದ್ರೂ ಅದಕ್ಕೆ ಆಸ್ಪದವಿಲ್ಲ) ,ಆಫೀಸಿನ ಗಾಜಿನ ಬಾಗಿಲ ಪಕ್ಕದಲ್ಲಿರೋ ಕುರ್ಚಿಯಲ್ಲಿ ಕಾಫಿ ಕುಡೀತಾ, ಎದುರುಗಡೆ ಕಾಣೋ ಮೈದಾನದಲ್ಲಿ ಆ ಮಳೆಯಲ್ಲೂ ಸಣ್ಣ ಮಕ್ಕಳ ಆಟ ನೋಡ್ತಿದ್ರೆ ನಮ್ಮ ಚೆಲ್ಲಾಟಗಳು, ಬಾಲ್ಯದ ನೆನಪುಗಳು ಹಾಗೆಯೇ ಬಿಸಿ ಕಾಫಿಯ ಹಬೆ ತೇಲಿ ಹೋದ ಹಾಗೆ ಅನುಭವ.

ನೆನಪುಗಳ ಮಳೆಯಲ್ಲಿ

ತೋಯ್ದು ಹೋಗಿದ್ದೇನೆ ನಾನಿಲ್ಲಿ

ಬಾಲ್ಯದ ಹೂದೋಟದಲ್ಲಿ

ಕಳೆದುಹೋಗಿದ್ದೇನೆ ಇಂದಿಲ್ಲಿ

ಚುರ್ಮುರಿ - ೧೧

೩೩) ಅವಳು ಲಂಗ ದಾವಣಿ ಹಾಕಿಕೊಂಡು ಹೈ ಹೀಲ್ಡ್ ಸ್ಲಿಪ್ಪರ್ ಹಾಕಿಕೊಂಡಿದ್ದಳು.


೩೪) ಅವರಿಬ್ಬರೂ ಕನ್ನಡ ಚಿತ್ರ ನೋಡುವುದಕ್ಕೆ ಹೋಗಿದ್ದರು, ಇಬ್ಬರೂ ಕನ್ನಡಿಗರೇ, ಆದರೆ ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದರು.


೩೫) ಮದುವೆಯಾಗುವುದಕ್ಕೆ ಮೊದಲು ಅವನು ನವರಂಗ್ ಚಿತ್ರಮಂದಿರದಲ್ಲಿ ೫೦ ರೂ ಕೊಟ್ಟು ಸಿನೆಮಾ ನೋಡುತ್ತಿದ್ದ, ಮದುವೆಯಾದ ಮೇಲೆ ಮಂತ್ರಿ ಮಾಲ್ನಲ್ಲಿರುವ ಐನಾಕ್ಸ್ ಚಿತ್ರಮಂದಿರದಲ್ಲಿ ೫೦೦ ರೂ ಕೊಟ್ಟು ನೋಡುತ್ತಿದ್ದಾನೆ.


೩೬) ಅವನು ಕಾರಿನಲ್ಲಿ ತಲೆಗೆ ಕ್ಯಾಪ್ (ತಲೆಯಲ್ಲಿ ಕೂದಲಿದ್ದರೂ) ಹಾಕಿಕೊಂಡಿದ್ದನು.


೩೭) ಪಲ್ಲವಿ ಚಿತ್ರಮಂದಿರದ ಹತ್ತಿರ ಇರುವ ಬಸ್ ನಿಲ್ದಾಣದ ಬೋರ್ಡ್ ಕನ್ನಡದಲ್ಲಿ ಪಲ್ಲವಿ ಚಿತ್ರಮಂದಿರ ತೋರಿಸುತ್ತಿದ್ದರೆ, ಚಿತ್ರಮಂದಿರದ ಒಳಗೆ ಕನ್ನಡದ ಸದ್ದೇ ಇರಲಿಲ್ಲ.

ಮಲೆಗಳಲ್ಲಿ ಮದುಮಗಳು

೨೦೦೬ನೇ ಇಸವಿ, ಅರಮನೆ ಮೈದಾನದಲ್ಲಿ ಪುಸ್ತಕ ಪ್ರದರ್ಶನ ಇತ್ತು. ನೋಡೋಣ ಅಂತ ನಾನು, ಉಲ್ಲ, ಧೋಪ, ಬಾಬು ಹೋಗಿದ್ವಿ. ಹಾಗೆ ಎಲ್ಲ ನೋಡ್ಕೊಂಡು ಹೋಗ್ತಿದ್ವಿ, ನನಗೆ ಅಲ್ಲಿವರೆಗೂ ಯಾವುದೇ ಕಾದಂಬರಿ ಓದಿದ ಅನುಭವ ಇರ್ಲಿಲ್ಲ, ಹಾಗೆ ಪುಸ್ತಕದ ಮಳಿಗೆಯಲ್ಲಿ ಹಾದುಹೋಗುವಾಗ ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ ಕಣ್ಣಿಗೆ ಬಿತ್ತು. ಬೇರೆ ಲೇಖಕರದ್ದೂ ಇತ್ತು ಆದರೆ ನಮಗೆ ಚಿರಪರಿಚಿತವಾದ ಹೆಸರು ಕುವೆಂಪು.

ನೋಡಿದ ಕೂಡಲೇ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನ ಕೊಂಡುಕೊಳ್ಳುವ ಮನಸ್ಸಾಯಿತು. ಯಾಕೆ?. ಹೆಸರಿನ ಮಹತ್ವವಿರಬೇಕು. ಮಲೆ ಹೆಸರಿಂದು, ಆಮೇಲೆ ಮದುಮಗಳನ್ನ ನೋಡಿ ಕೊಂಡುಕೊಂಡಿದ್ದು ಅನ್ನಬೇಡಿ :).

ನನ್ನೂರು ಮಲೆನಾಡು, ಸಹಜವಾಗಿ ಕುತೂಹಲ ಏನು ಬರೆದಿರಬಹುದು ಅಂತ. ಅಂತೂ ಕೊಂಡುಕೊಂಡು ಬಂದೆ.

ಒಂದು ವೀಕೆಂಡ್ ಓದೋಣ ಅಂತ ತೆಗದ್ರೆ ೭೧೨ ಪುಟಗಳು!!!!!!!. ಕಾದಂಬರಿಯನ್ನ ಓದಲಿಕ್ಕೆ ಶುರುಮಾಡಿರದ ನಾನು ಮೊದಲ ಕಾದಂಬರಿಯ ಅಷ್ಟು ಪುಟಗಳನ್ನ ನೋಡಿ ಸುಸ್ತಾಗಿ ಹೋಗಿದ್ದೆ. ೩೦-೪೦ ಪುಟಗಳನ್ನ ಓದೋಹೊತ್ತಿಗೆ ಸುಸ್ತಾಗಿ ಹೋಗಿದ್ದೆ, ಹಲವು ಪಾತ್ರಗಳು, ಅಬ್ಬ ಆ ಕನ್ನಡ, ಅವುಗಳನ್ನು ಉಚ್ಚಾರಣೆ ಮಾಡುವುದೇ ಭಾರೀ ಕಷ್ಟ. ಇದನ್ನ ನನ್ನ ಕೈಲಿ ಓದುವದಕ್ಕೆ ಆಗುವುದಿಲ್ಲವೆಂದು ಊರಿಗೆ ಹೋಗಿ ಇಟ್ಟಿದ್ದೆ.

ಆಮೇಲೂ ಕೂಡ ಆಗಾಗ ಊರಿಗೆ ಹೋದಾಗ ೫೦-೫೦ ಪುಟಗಳನ್ನ ಓದಿ ಮತ್ತೆ ಇದೆ ಕಥೆ ಅಂದ್ಕೊಂಡು ೫೦-೬೦ ನೆಯ ವಯಸ್ಸಿನಲ್ಲಿ ಓದಿದರಾಯಿತು ಎಂದುಕೊಂಡೆ :).

ಅದಾದ ಮೇಲೆ ತೇಜಸ್ವಿ, ಭೈರಪ್ಪ, ಕಾರಂತ, ಲಂಕೇಶ್ ಇವರ ಕಾದಂಬರಿಗಳನ್ನ ಓದುತ್ತಿದ್ದೆ. ಈ ನಡುವೆ ತುಂಬಾ ಕಾದಂಬರಿಗಳನ್ನ ಓದಿದ ನಾನು ಈ ಸಲ ದೀಪಾವಳಿಗೆ ೯ ದಿನ ರಜೆ ಇದ್ದುದ್ದರಿಂದ ಏನಾದರಾಗಲಿ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದೇಬಿಡುವ ಎಂದು ತೀರ್ಮಾನಿಸಿ ಊರಲ್ಲಿ ಪುಸ್ತಕ ಹಿಡಿದು ಕುಳಿತೆ. ಕಾದಂಬರಿ ಓದಿಸಿಕೊಂಡು ಹೋಯ್ತು. ಅವರು ಉಪಯೋಗಿಸಿರುವ ಕನ್ನಡ ಪದಗಳು, ವಾಕ್ಯಗಳ ರಚನೆ ಅಬ್ಬಬ್ಬ ಅದನ್ನ ಮೀರಿಸುವುದಕ್ಕೆ ಇನ್ನೊಬ್ಬ ಕುವೆಂಪು ಹುಟ್ಟಿ ಬರಬೇಕೇನೋ, ಬಂದರೂ ಕನ್ನಡ ಅನ್ನುವುದು ಕಂಗ್ಲೀಶಾಗಿರುವುದರಿಂದ ಅದು ಅಸಾಧ್ಯ. ನೀವು ಮಲೆನಾಡಿಗರಾಗಿದ್ದರೆ ನಿಮಗೆ ಕಾದಂಬರಿ ಆಪ್ತವಾಗುತ್ತ ಹೋಗುತ್ತದೆ, ಅದರಲ್ಲೂ ನೀವೇನಾದರೂ ಹಳ್ಳಿಯಲ್ಲಿದ್ದು, ತೋಟ, ಗದ್ದೆಯಿದ್ದು ಕೆಲಸ ಮಾಡಿಸಿ ಅನುಭವವಿದ್ದಲ್ಲಿ ನೀವು ಕಾದಂಬರಿಯ ಒಂದು ಅಂಗವಾಗಿದ್ದೀರೆನೋ ಎಂದೆನಿಸಬಹುದು :)

ಎಲ್ಲ ಜಾತಿಯವರೂ ಬಂದು ಹೋಗುತ್ತಾರೆ, ಗೌಡ, ಹೆಗ್ಗಡೆ, ಬ್ರಾಮ್ಹಣ, ದಲಿತ, ಮುಸ್ಲಿಂ.

ಪಾತ್ರದಲ್ಲಿ ಮುಖ್ಯವಾಗಿ ಸೆಳೆಯುವುದೆಂದರೆ ಗುತ್ತಿ ಮತ್ತು ಅವನ ನಾಯಿ. ಗುತ್ತಿಯ ಸಾಹಸಗಳು, ಒಡೆಯನ ಸಾಹಸಕ್ಕೆ ನೆರವಾಗುವ ಅವನ ನಾಯಿ ಹುಲಿಯ, ರೋಚಕ ಅನುಭವಗಳನ್ನು ನೀಡುತ್ತದೆ.

ಎಲ್ಲ ತರಹದ ಮನುಷ್ಯನ ಸ್ವಭಾವಗಳು ವಿಭಿನ್ನ ಪಾತ್ರಗಳಲ್ಲಿ ಬಂದು ಹೋಗುತ್ತವೆ.

ಮಲೆನಾಡಿನ ಚಿತ್ರಣ. ದಲಿತರ ಕೇರಿಗಳಲ್ಲಿ ನಡೆಯುವ ಘಟನೆಗಳು, ಮುಕುಂದಯ್ಯನ ಮೃದು ಸ್ವಭಾವ, ಅವನ ಪ್ರೀತಿ, ತಿಮ್ಮಪ್ಪ ಹೆಗ್ಗಡೆಯ ಧೂರ್ತ ವ್ಯಕ್ತಿತ್ವ, ತನ್ನಪ್ಪನನ್ನು ಕಳೆದುಕೊಂಡು ತನ್ನಮ್ಮನ ರೋಧನೆಯನ್ನು ಸಹಿಸಲಾರದ ಹುಡುಗ ಧರ್ಮುವಿನ ತೊಳಲಾಟ. ಹೇಗಾದರೂ ಚಿನ್ನಮ್ಮನನ್ನ ಪಡೆಯಬೇಕೆಂಬ ಭರಮೈ ಹೆಗ್ಗಡೆಯ ಹಂಬಲ. ಯುವ ದಂಪತಿಗಳಾದ ಐತ ಪೀಂಚಲು ಇವರ ಮುಗ್ದ ಸ್ವಭಾವಗಳು. ನಾಗತ್ತೆಯ ಸಂಚುಗಳನ್ನರಿಯದ ನಾಗಕ್ಕ, ಹೂವಳ್ಳಿ ವೆಂಕಣ್ಣನ ಪ್ರತಾಪಗಳು....

ಯಾವ ಅಧ್ಯಾಯವೂ ಎಲ್ಲೂ ಬೇಸರ ಬರಿಸದೆ ಮುಂದೆ ಏನಾಗಬಹುದು ಎಂದು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ನನ್ನೂರಿನಲ್ಲಿ ಈ ಕಾದಂಬರಿಯನ್ನ ಓದುತ್ತಿದ್ದರೆ ಅಲ್ಲೇ ಎಲ್ಲೋ ಇವುಗಳು ನಡೆಯುತ್ತಿದೆಯೇನೋ ಎಂದೆನಿಸುತ್ತಿತ್ತು. ೧ ವಾರದಲ್ಲಿ ೫೦೦ ಪುಟಗಳನ್ನು ಮುಗಿಸಿ ಆಗಿದೆ ಇನ್ನೂ ೨೧೨ ಪುಟಗಳು ಬಾಕಿ ಇವೆ. ಬಹುಷ ಮುಂದಿನ ಪೀಳಿಗೆಯವರಿಗೆ ಇದನ್ನು ಓದಲು ಕಷ್ಟವಾಗಬಹುದೇನೋ (ಹಳೆಗನ್ನಡ, ಹೊಸಗನ್ನಡ, ಕ್ಲಿಷ್ಟಕರವಾದ ಪದಗಳು), ನಮ್ಮ ಪೀಳಿಗೆಯವರು ಓದಬಹುದು, ಓದದಿದ್ದವರು ಖಂಡಿತ ಓದಲೇಬೇಕಾದಂತಹ ಕಾದಂಬರಿ.

ಇಲ್ಲಿಯವರೆಗೆ ನನ್ನ ಮೆಚ್ಚಿನ ಕಾದಂಬರಿ ಕರ್ವಾಲೋ ಆಗಿತ್ತು ಈಗ ಮಲೆಗಳಲ್ಲಿ ಮದುಮಗಳು. ಮಗನ ಸ್ಥಾನವನ್ನು ಅಪ್ಪ ಆಕ್ರಮಿಸಿಕೊಂಡಿದ್ದಾರೆ :)

ಆ ಒಂದು ವಾರ

ಒಂದು ವಾರ ಟ್ರಾಫಿಕ್ಕಿಲ್ಲ, ಸಿಗ್ನಲ್ಲಿಲ್ಲ
ಬಸ್ಸು ಬೈಕು ಕಾರುಗಳ ಆರ್ಭಟವಿಲ್ಲ
ಪಾಂ ಪಾಂ, ಕೀಂ ಕೀಂಗಳ ಕರ್ಕಶ ಶಬ್ಧವಿರಲಿಲ್ಲ
ವಿಧವಿಧವಾದ ಹಕ್ಕಿಗಳ ನಿನಾದವಿತ್ತಲ್ಲ
ನೆಟ್ ಇಲ್ಲ ಇ-ಮೈಲ್ ಇಲ್ಲ
ಕಂಪ್ಯೂಟರ್ ಮುಖವೇ ಇಲ್ಲ
ತರಕಾರಿ ತರುವ ತೊಂದರೆ ಇಲ್ಲ
ಈರುಳ್ಳಿ ಟೊಮೇಟೊ ಹಚ್ಚುವ ಗೋಜಿಲ್ಲ
ಹಾಲು ತರುವ ಪ್ರಮೇಯವಿರಲಿಲ್ಲ
ಆದರೂ ಕಾಫಿ ಬಂದು ಕೈಗೆ ಕುಳಿತಿರುತ್ತಿತ್ತಲ್ಲ
ಮೊಬೈಲ್ ಮಲಗಿತ್ತು
ಲ್ಯಾಂಡ್ಲೈನಿಗೆ ಗತ್ತು ಬಂದಿತ್ತು
ಪ್ಯಾಂಟ್ ಹೋಗಿ
ಪಂಚೆ ಬಂದಿತ್ತು
ಊರಲ್ಲಿ ವಾರ ಕಳೆದದ್ದೇ ಗೊತ್ತಾಗಲಿಲ್ಲ
ಇಲ್ಲಿ ದಿನವೇ ಹೋಗುತ್ತಿಲ್ಲ

ಸೃಷ್ಟಿಯ ಸಂಭ್ರಮ


ನೋಟವೊಂದು ನಗೆಯಾಗಿ

ನಗೆಯಿಂದ ನುಡಿಯಾಗಿ

ನುಡಿಯಿಂದ ನಲಿವಾಗಿ

ನಲಿವಿಂದ ಒಲವಾಗಿ

ಒಲವಿಂದ ಬಂಧನವಾಗಿ

ಬಂಧನದಿಂದ ಸಂಗಮವಾಗಿ

ಸಂಗಮದಿಂದ ಸೃಷ್ಟಿಯಾಗಿ

ಸೃಷ್ಟಿಯಿಂದ ಸಂಭ್ರಮವಾಗಿ

ಸಂಭ್ರಮಳ ಸಾಂಗತ್ಯ

ಸವಿನೆನಪನ್ನೀಯುತ್ತಿದೆ

ಚುರ್ಮುರಿ - ೧೦

೨೮) ನಮ್ಮ ದೇಶದಲ್ಲಿ ಮಹಾತ್ಮರಾಗುವುದರಿಂದ ಆಗುವ ಲಾಭಕ್ಕಿಂತ ನಷ್ಟಗಳೇ ಹೆಚ್ಚು.

೨೯) ಅವರಿಬ್ಬರೂ ಸಹೋದ್ಯೋಗಿಗಳು, ಒಬ್ಬ ಬ್ರಾಹ್ಮಣ, ಇನ್ನೊಬ್ಬ ದಲಿತ. ಬ್ರಾಹ್ಮಣ ಮೊದಲ ದರ್ಜೆಯ ಕ್ಲರ್ಕ್ ಆಗಿದ್ದ, ಆಮೇಲೆ ಸೇರಿದ ದಲಿತ ಎರಡನೇ ದರ್ಜೆಯ ಕ್ಲರ್ಕ್ ಆಗಿ ಬ್ರಾಹ್ಮಣನ ಕೈಕೆಳಗೆ ಕೆಲಸ ಮಾಡುತ್ತಿದ್ದ. ಸ್ವಲ್ಪ ವರ್ಷಗಳ ನಂತರ ದಲಿತ ಸುಪರಿಟೆನ್ಡೆಂಟ್ ಆದ. ಬ್ರಾಹ್ಮಣ ಇನ್ನೂ ಅದೇ ಹುದ್ದೆಯಲ್ಲಿದ್ದಾನೆ ಆದರೆ ದಲಿತನ ಕೈಕೆಳಗೆ.

೩೦) ಮಲ್ಲಿಕಾ ಶೆರಾವತಳನ್ನು ದೇವಸ್ಥಾನಕ್ಕೆ ಸೀರೆ ಯಾಕೆ ಹಾಕಿಕೊಂಡು ಹೋದಳೆಂದು ಯಾರೋ ಕೇಳಿದ್ದಾರೆ. ಆ ಪುಣ್ಯಾತ್ಗಿತ್ತಿ ಅಲ್ಲಾದರೂ ಬಟ್ಟೆಯಲ್ಲಿರಲು ಬಿಡಿ.

೩೧) ಆಗೆಲ್ಲ ಬೆಳಗ್ಗೆ ಬಹುತೇಕ ಮನೆಗಳಲ್ಲಿ ಬೆಳಗ್ಗೆ ಕೌಸಲ್ಯ ಸುಪ್ರಜಾ ರಾಮ. ಈಗ ಬೆಳಗ್ಗೆ ಸಕತ್ ಹಾಟ್ ಮಗಾ, ಮಸ್ತ್ ಮಜಾ ಮಾಡಿ, ಕೇಳಿ ಕೇಳಿಸಿ.

೩೨) ಅವಳು ೫.೫ ಅಡಿ ಎತ್ತರ ಇದ್ದರೂ ಹೈ ಹೀಲ್ಡ್ ಚಪ್ಪಲಿ ಹಾಕಿಕೊಂಡಿದ್ದಳು.

ಹೇಳಿಹೋಗುವೆಯಾ ನೀ?

ಓ ರವಿಯೇ

ನಿನಗಾರು ಹೇಳಿದರು

ಕತ್ತಲನ್ನು ಹೊಡೆದೋಡಿಸಲು

ಓ ಹಕ್ಕಿಗಳೇ

ನಿಮಗಾರು ಹೇಳಿದರು

ಆಗಸದಲ್ಲಿ ರೆಕ್ಕೆಯನ್ನು ಬಿಚ್ಚಿ ಹಾರಲು

ಓ ದುಂಬಿಗಳೇ

ನಿಮಗಾರು ಹೇಳಿದರು

ಹೂವುಗಳ ಮಕರಂದವನ್ನು ಹೀರಲು

ಓ ಮೇಘಗಳೇ

ನಿಮಗಾರು ಹೇಳಿದರು

ವರ್ಷಧಾರೆಯನ್ನು ಹರಿಸಲು

ಓ ಕಾಮನಬಿಲ್ಲೇ

ನಿನಗಾರು ಹೇಳಿದರು

ಸಪ್ತವರ್ಣಗಳ ಸುರಿಸಲು

ಓ ಕೋಗಿಲೆಯೇ

ನಿನಗಾರು ಹೇಳಿದರು

ಗಾನಸುಧೆಯನ್ನು ಹರಿಸಲು

ಓ ನಕ್ಷತ್ರಗಳೇ

ನಿಮಗಾರು ಹೇಳಿದರು

ಬಾನಿನಲ್ಲಿ ರಂಗೋಲಿಯನ್ನು ಬಿಡಿಸಲು

ಓ ಶಶಿಯೇ

ನಿನಗಾರು ಹೇಳಿದರು

ಬೆಳದಿಂಗಳನ್ನು ಭುವಿಗೆ ಹರಡಲು

ಓ ಧರೆಯೇ

ನಿನಗಾರು ಹೇಳಿದರು

ಈ ಎಲ್ಲ ಸೃಷ್ಟಿಯ ವೈಚಿತ್ರ್ಯಗಳಿಗೆ ಸಾಕ್ಷಿಯಾಗಲು

ಸ್ವಲ್ಪ ಹೆಚ್ಚು ಕಡಿಮೆಯಾಗಿದ್ರೆ

ನಿನ್ನೆ ರಾತ್ರಿ ಅಕ್ಕನ ಮನೆಯಲ್ಲಿ ಊಟ ಮಾಡ್ಕೊಂಡು ವಾಪಸ್ ನಮ್ಮ ಮನೆಗೆ ಹೋಗ್ತಿದ್ದೆ. ವೆಸ್ಟ್ ಆಫ್ ಕಾರ್ಡ್ ರೋಡ್ ಹತ್ತಿರ ಇರೋ ಪಾರ್ಕ್ ಹತ್ತಿರ ಇರೋ ರೋಡಲ್ಲಿ ಹೋಗ್ತಿದ್ದೆ. ಸುಮಾರು ರಾತ್ರಿ ೧೦ ಘಂಟೆ.ರೋಡ್ ಹತ್ತಿರ ಒಬ್ಬ ಬೈಕ್ ನಿಲ್ಲಿಸ್ಕೊಂಡು ಅವ್ನ ಹುಡುಗಿ ಜೊತೆ ಮಾತಾಡ್ತಿದ್ದ. ಅವರ ನಿಂತ ಜಾಗದಿಂದ ಸ್ವಲ್ಪ ಮುಂದೆ ಒಂದು ಮನೆಯಿಂದ ಬೆಕ್ಕು ರೋಡ್ ದಾಟಿ ಹೋಯ್ತು. ನನ್ನ ಪಾಡಿಗೆ ನಾನು ಮುಂದೆ ಹೋಗ್ತಿದ್ದೆ, ಸಡನ್ನಾಗಿ ಹಿಂದ್ಗಡೆ ಬಂದ ಒಂದು ಸ್ಕೂಟಿ ನಿಲ್ತು, ತಿರುಗಿ ನೋಡಿ ಯಾರು ಅಂತ ನೋಡದೆ ಹಾಗೆ ಮುಗುಳ್ನಕ್ಕೆ (ಬೆಕ್ಕು ನೋಡಿ ಗಾಡಿ ನಿಲ್ಸಿದಕ್ಕೆ) ಮುಂದೆ ಹೊರಟೆ.

ಸ್ವಲ್ಪ ಮುಂದೆ ಹೋದವನು ಮತ್ತೆ ಹಿಂದೆ ತಿರುಗಿ ನೋಡಿದೆ. ಆಗ ಗೊತ್ತಾಯ್ತು ಆ ಸ್ಕೂಟಿಯಲ್ಲಿ ಲೇಡಿ ಪೋಲಿಸ್ ಇದ್ರು :(

ಅವ್ರು ಹೋಗಿ ಆ ಜೋಡಿಗಳ ಹತ್ರ ಹೋಗಿ 'ಏನಮ್ಮ, ಎಲ್ಲಿ ನಿಮ್ಮ ಮನೆ?'. ಅವರಿಬ್ಬರಿಗೂ ಆಗ್ಲೇ ಹೆದರಿಕೆ ಶುರುವಾಗಿತ್ತು, ಆ ಹುಡುಗಿ ಅಲ್ಲೇ ಎಲ್ಲೋ ಮುಂದೆ ಮೇಡಂ ಅಂತಿದ್ಲು. 'ಮತ್ತೆ ನಡಿ ಮನೆಗೆ ಟೈಮ್ ಸೆನ್ಸ್ ಇಲ್ವಾ?' ಅಂದ್ರು. ಆಯ್ತು ಮೇಡಂ ಅಂದ ಇಬ್ಬರು ಅಲ್ಲಿಂದ ಕಾಲ್ಕಿತ್ತ್ರು.

ನಾನು ಮೊದಲು ಮುಗುಳ್ನಕ್ಕಿದ್ದವನು, ಗಂಭೀರನಾಗಿ ಮನೆ ಕಡೆ ಹೆಜ್ಜೆ ಹಾಕಿದೆ.
October 6, 2010

ಚುರ್ಮುರಿ - ೯

೨೫) ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳಿಗೆ ಪ್ರಸ್ತುತ ಸರ್ಕಾರದಿಂದ ಸಿಕ್ಕಿರುವ ರಜೆಗಳ ಕೊಡುಗೆ ಬೇರ್ಯಾವುದೇ ಸರ್ಕಾರದಿಂದ ದಕ್ಕಿಲ್ಲ.


೨೬) ಅಪ್ಪ ಕೃಷಿಕ, ಮಗ ಸಾಫ್ಟ್ವೇರ್ ಇಂಜಿನಿಯರ್. ಅಪ್ಪ ಕಷ್ಟಪಟ್ಟು ದುಡಿದು ಹೊಲ-ಗದ್ದೆ, ತೋಟಗಳನ್ನು ಮಾಡಿದ. ಮಗ ೪೫ ವರ್ಷವಾದರೂ ತೆಗೆದುಕೊಂಡ ಒಂದು ಅಪಾರ್ಟ್ಮೆಂಟಿಗೆ ಸಾಲವನ್ನು ಕಟ್ಟುತ್ತಲೇ ಇದ್ದಾನೆ.


೨೭) ಅವಳಿಗೆ ವಯಸ್ಸು ೨೬, ಒಳ್ಳೆಯ ವರ ಬಂದರೂ ಇನ್ನೂ ೨ ವರ್ಷವಾದರೂ ಮದುವೆಯಾಗಲಿಲ್ಲವೆಂದಳು. ೨ ವರ್ಷದ ಖುಷಿಗಾಗಿ ಮುಂದಿನ ಜೀವನವನ್ನು ತನಗಿಷ್ಟವಿಲ್ಲದವನ ಜೊತೆ ಕಳೆಯಬೇಕಾಯಿತು.

ಗೌರಿ ಗಣೇಶ ರಮ್ಜಾನ್ ಹಬ್ಬಗಳು....

ಭಟ್ರ ಪಂಚರಂಗಿಯ ಸ್ಪೂರ್ತಿಯಿಂದ ....

ಗೌರಿ ಗಣೇಶ ರಮ್ಜಾನ್ ಹಬ್ಬಗಳು, ಸಾಲು ಸಾಲು ರಜೆಗಳು, ಖಾಲಿ ಹೊಡೆಯಲಿರುವ ಆಫೀಸುಗಳು, ಅಲ್ಲಿನ ಕ್ಯಾನ್ಟೀನಗಳು, ಕೆಫಿಟೆರಿಯಾಗಳು.
ಟ್ರಾಫಿಕ್ ಜ್ಯಾಮ್ಗಳು, ತುಂಬಿ ಹೋಗಿರುವ ಕಾರುಗಳು, ರೈಲುಗಳು, ಬಿ.ಎಂ.ಟಿ.ಸಿ, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು.

ವೇಗದೂತಗಳಲ್ಲಿ ತುಂಬಿರುವ ೪೦ ಕೆ.ಜಿಯ ಸರ್ಕಾರಿ ನೌಕರರು, ಪಕ್ಕದಲ್ಲಿ ಕುಳಿತಿರುವ ೭೦ ಕೆ.ಜಿಯ ಹೆಂಡತಿಯರುಗಳು, ಮಧ್ಯದಲ್ಲಿ ಗೊಣ್ಣೆ ಸುರಿಸುತ್ತಿರುವ ಮಕ್ಕಳುಗಳು.
ನಿಧಾನ ಸಾಗುತ್ತಿರುವ ಊರಿನ ದಾರಿಗಳು.

ರಾಜಹಂಸಗಳು, ಐರಾವತಗಳು. ತುಂಬಿ ತುಳುಕುತ್ತಿರುವ ಸಾಫ್ಟ್ವೇರ್ ಇಂಜಿನ್ಯರಗಳು, ಬೇಡ ಅಂದರೂ ಜ್ಞಾಪಕ ಬರುತ್ತಿರುವ ಕೀಬೋರ್ಡ್ ಮೌಸ್ಗಳು. ತೊಡೆಯ ಮೇಲಿರುವ ಲ್ಯಾಪ್ಟಾಪ್ಗಳು.
ಕಿವಿಗೆ ತೂರಿಸಿಕೊಂಡಿರುವ ಇಯರ್ಫೋನ್ಗಳು.

ಮದುವೆಯಾದ ಮೇಲೆ ಮೊದಲ ಹಬ್ಬಕ್ಕೆ ಹೆಂಡತಿಯ ಊರಿಗೆ ಹೋಗುತ್ತಿರುವ ಹುಡುಗನೂ, ಪಕ್ಕದಲ್ಲಿ ಹೆಂಡತಿ ಮತ್ತು ಅವಳ ತುಂಬಿದ ಬ್ಯಾಗುಗಳು, ಹುಡುಗನ ಖಾಲಿ ಜೇಬುಗಳು.

ಸ್ವಲ್ಪ ದಿನ ಖಾಲಿ ಹೊಡೆಯಲಿರುವ ನವರಂಗ್ಗಳು, ನಂದಿನಿಗಳು. ದರ್ಶಿನಿ ನಂದಿನಿ ಹೋಟೆಲ್ಲುಗಳು. ಶಾಪಿಂಗ್ ಮಾಲ್ಗಳು.

ಊರುಗಳು, ಅಪ್ಪ ಅಮ್ಮ ಚಿಕ್ಕಪ್ಪ ಚಿಕ್ಕಮ್ಮ, ದೊಡ್ಡಪ್ಪ ದೊಡ್ದಮ್ಮಗಳು. ಅಣ್ಣ ಅತ್ತಿಗೆಗಳು.
ಗೌರಿ ಹೂವುಗಳು, ಗೌರಿ ಪೂಜೆಗಳು, ಗೌರಿ ದಾರಗಳು, ಬಳೆಗಳು, ಗಣೇಶ ಮೂರ್ತಿಗಳು, ಕೋಡುಬಳೆಗಳು,ಕರ್ಜಿಕಾಯಿಗಳು, ಹೋಳಿಗೆಗಳು, ಕಡುಬುಗಳು, ಸಂಕ್ರಪಾಳಗಳು. ತಿಂದು ಉಬ್ಬಿಹೋಗಿರುವ ಹೊಟ್ಟೆಗಳು.

ಬೇಡ ಅಂದರೂ ಕರೆಯುತ್ತಿರುವ ಆಫೀಸುಗಳು.ಅದೇ ವೇಗದೂತಗಳು, ರಾಜಹಂಸಗಳು, ಐರಾವತಗಳು. ಬೆಂಗಳೂರಿನ ದಾರಿಗಳು

ಚುರ್ಮುರಿ - ೮

೨೨) ತಾನು ಹಾಕಿಕೊಂಡಿರುವ ಟೀ-ಶರ್ಟ್ ಸಣ್ಣದೆಂದು ಗೊತ್ತಿದ್ದರೂ ಅವಳು ಅದನ್ನು ಕೆಳಗೆಳೆದುಕೊಳ್ಳುತ್ತಿದ್ದಳು.

೨೩) ಅವನು ಬೆಳ್ಳಗಿದ್ದರೂ ಪೌಡರನ್ನು ಲಪ್ಪ ಬಳಿದ ಹಾಗೆ ಬಳಿದುಕೊಂಡಿದ್ದ.

೨೪) ತನ್ನ ಮಗಳನ್ನು ವೈದ್ಯೆ ಮಾಡಬೇಕೆಂದು ಅವನು ಅವಳನ್ನು ಕೂಲಿ ನಾಲಿ ಮಾಡಿ ಓದಿಸುತ್ತಿದ್ದ. ಒಂದು ದಿನ ಅವನಿಗೆ ಅಪಘಾತವಾಗಿ ಕಾಲು ಮುರಿದುಹೋಯ್ತು, ಅವನ ಮಗಳು ಈಗ ತನ್ನ ಅಪ್ಪನ ಕಾಲನ್ನು ಸರಿ ಮಾಡಿಸಲು
ಆಸ್ಪತ್ರೆಯಲ್ಲಿ ಗೋಗರೆಯುತ್ತಿದ್ದಾಳೆ.

ಮರೀಚಿಕೆ

ನೀ ಎಲ್ಲಿ ಹೋದೆ ಹೇಳದೆ
ನಿನ್ನ ನೋಡದೆ
ನಿನ್ನ ಮಾತು ಕೇಳದೆ
ಹೋಗುತ್ತಿಲ್ಲ ಈ ಗಳಿಗೆ

ಮರೆತೆಯಾ ಆ ಮೊದಲ ಭೇಟಿ
ಆ ತುಂತುರು ಹನಿಗಳ ದಾಟಿ
ಆ ಮೋಹಕ ನಗುವಿಗೆ
ಆ ಚೆಲುವಿಗೆ
ಮನಸೋತ ನಾನು
ಹಿಂಬಾಲಿಸಿದೆ ನಿನ್ನನು

ನಮ್ಮ ಪ್ರೀತಿಗೆ ನಾಚಿ
ಆ ರವಿಯು ಬೆವರಿದ್ದ
ಆ ಶಶಿಯು ನಡುಗಿದ್ದ

ಮುಂಜಾನೆಯ ಮಂಜನ್ನು ಮಬ್ಬಾಗಿಸಿ
ಸುಂದರ ಸಂಜೆಗಳನ್ನು ಸಾಯಿಸಿ
ಕಾರಣವಿಲ್ಲದೆ ಕಣ್ಮರೆಯಾದೆಯಲ್ಲ ಪ್ರೇಯಸಿ

ಚೌ ಚೌ - ೧

೧)
ನಲ್ಲೆ
ನಿನ್ನ ನೋಡಿ ನಾ ಕೆಟ್ಟೆ


ಸ್ವಲ್ಪ ದಿನಗಳಾದ ಮೇಲೆ
ನೀ ನನಗೆ ಕೈ ಕೊಟ್ಟೆ

೨)
ರೀ, ಮನೇಲಿ ದಿನಸಿ ಖಾಲಿ
ಎಂದಳಾಕೆ


ನೀನಿದ್ದರೆ ಎಲ್ಲವೂ ಖಾಲಿ
ಎಂದುಕೊಂಡನಾತ

೩)
ನಾಳೆ ವೀಕೆಂಡ್, ಹೋಗೋಣ ಫೋರಮ್?
ಅವಳೆಂದಳು


ಗೆಳೆಯನ ಜೊತೆ ಹೊಡೆಯಬೇಕು ರಮ್
ಅಂದುಕೊಂಡನವನು

ಚುರ್ಮುರಿ ೭

೧೯) ಅವಳು ಚಳಿಗಾಲದಲ್ಲಿ ಮಿನಿಸ್ಕರ್ಟ್ ಹಾಕಿಕೊಂಡು ಮನೆಯಿಂದ ಹೊರಟಳು. ಅಪ್ಪ ಅಮ್ಮ ಅದನ್ನು ನೋಡಿದರೂ ನೋಡದವರ ಹಾಗೆ ಇದ್ದರು.


೨೦) ಮನುಷ್ಯ ಬಾಗಬೇಕು ನಿಜ ಆದರೆ ಸೊಂಟ ಮುರಿಯುವಷ್ಟಲ್ಲ.


೨೧) ಅವನು ಮೊದಲೆಲ್ಲ ಹೋಟೆಲಿನಲ್ಲಿ ಕಾಫೀ ಕುಡಿಯುವ ನೆಪದಲ್ಲೋ ಅಥವಾ ಆಫೀಸಿನ ಹೊರಗಡೆ ಬಂದೋ ಲಂಚವನ್ನು ತೆಗೆದುಕೊಳ್ಳುತ್ತಿದ್ದ ಆದರೆ ಈ ನಡುವೆ ಕಛೇರಿಯ ಕುರ್ಚಿಯಲ್ಲೇ ಕುಳಿತು ನೇರವಾಗಿ ಲಂಚ ಕೇಳುತ್ತಾನೆ.

ಸಣ್ಣ ಕಥೆ - ಎರಡು ಕಾಫೀ

ಇದು ನನ್ನ ಮೊದಲ ಕಥೆ (ಮೊದಲು ಕೆಲವು ಬರೆದಿದ್ದೆ ಆದರೆ ಅವೆಲ್ಲ ಹಾಸ್ಯ ಲೇಖನಗಳಾಗಿದ್ದವು), ತಮ್ಮ ಸಲಹೆ ಮತ್ತು ಅಭಿಪ್ರಾಯಗಳ ನಿರೀಕ್ಷೆಯಲ್ಲಿ.


ಐ ಲವ್ ಯು ನಂದಿನಿ.
ಇದು ಕಥೆಯ ಮಧ್ಯಭಾಗದ ಮುಂಚೆ ಬರೋ ಕೊನೇ ಸೀನ್.

ವೀಕೆಂಡ್, ಶನಿವಾರ ಸಂಜೆ ೫ ಗಂಟೆ, ತನ್ನ ರೂಮ್ಮೇಟ್ ರೂಪಾಳಿಗೆ ತಾನು ಮಲ್ಲೇಶ್ವರಂಗೆ ಹೋಗುವುದಾಗಿ ಹೇಳಿ ಜೀನ್ಸ್ ಟಾಪ್ ಏರಿಸ್ಕೊಂಡು ತನ್ನ ಸ್ಕೂಟಿ ತಗೊಂಡು ವುಮೆನ್ಸ್ ಹಾಸ್ಟೆಲ್ಲಿಂದ ಹೊರಟಳು. ನವರಂಗ್ ಸಿಗ್ನಲ್ ಬಂತು, ಗಾಡಿ ನಿಲ್ಸಿದ್ಲು. ಪಕ್ಕದಲ್ಲಿ ಒಂದು ಆಟೋ ಬಂದು ನಿಲ್ತು, ಅದರೊಳಗಿದ್ದ ವ್ಯಕ್ತಿ 'ಮೇಡಂ, ಈ ಅಡ್ರೆಸ್ ಎಲ್ಲಿ ಬರತ್ತೆ ಸ್ವಲ್ಪ ಹೇಳ್ತೀರಾ?'.

ರೈಟ್ ಟರ್ನ್ ತಗೊಂಡು ನವರಂಗ್ ಥಿಯೇಟರ್ ಸ್ಟ್ರೈಟ್ ಹೋಗಿ ಮುಂದೆ ಒಂದು ಸಿಗ್ನಲ್ ಸಿಗತ್ತೆ, ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ಅಲ್ಲಿ ಯಾರನ್ನಾದ್ರೂ ಕೇಳಿ ಹೇಳ್ತಾರೆ.

ಧನ್ಯವಾದ ಮೇಡಂ.

'ಆಂ' ಎಂದಳು ನಂದಿನಿ, ಬೆಂಗ್ಳೂರಲ್ಲಿ ಥ್ಯಾಂಕ್ ಯು ಅಂತ ಹೇಳಿರೋರನ್ನ ಕೇಳಿದೀನಿ, ಇದೇನಪ್ಪ ಡಿಫ್ರೆಂಟ್ ಅನ್ನೊಷ್ಟೊತ್ತಿಗೆ ಸಿಗ್ನಲ್ ಬಿತ್ತು, ಸ್ಕೂಟಿ ಸ್ಟಾರ್ಟ್ ಮಾಡ್ಕೊಂಡು ಹೊರಟ್ಲು.

ಸಂಪಿಗೆ ರೋಡ್ ಸುತ್ತು ಹಾಕಿಕೊಂಡು ಬಂದು ೮ನೇ ಕ್ರಾಸ್ಗೆ ಎಂಟ್ರಿ ಆಗ್ಬೇಕು...
.....................................

ಊರಿಂದ ಬಂದ ಗೆಳೆಯ ಗೌಡ ಮತ್ತೆ ರೂಮ್ಮೇಟ್ ಸಂದೇಶನ ಜೊತೆ ಮಧ್ಯಾಹ್ನ ನಳಪಾಕಕ್ಕೆ ಊಟಕ್ಕೆ ಹೋಗಿ ಗಡದ್ದಾಗಿ ಊಟ ಮಾಡಿ ರೂಮಿಗೆ ಬಂದು ಹಾಸಿಗೆ ಮೇಲೆ ಬಿದ್ದ ಶ್ಯಾಮ್ ಏಳುವಾಗ ಸಂಜೆ ೪.೩೦ ಆಗಿತ್ತು.


ಎದ್ದು ನೋಡ್ತಾನೆ , ಇಬ್ರೂ ಇರ್ಲಿಲ್ಲ.


ಫ್ರೆಶ್ ಆದ್ಮೇಲೆ ಸಂದೇಶಂಗೆ ಕಾಲ್ ಮಾಡಿ 'ಮಗಾ, ಎಲ್ಲಿ ಹೋಗಿದೀಯೋ ಮಲ್ಲೇಶ್ವರಂ ಕಡೆ ಹೋಗ್ತಿದೀನಿ, ಬರ್ತೀಯಾ?'
ಆ ಕಡೆಯಿಂದ 'ಇಲ್ಲ ಮಗ ಬರಲ್ಲ, ಅಕ್ಕನ ಮನೇಲಿ ಇದ್ದೀನಿ. ನೀನು ಮಲ್ಕೊಂಡಿದ್ಯಲ್ಲ ಹಾಗಾಗಿ ಹೇಳ್ದೆ ಹೋದೆ'

'ಸರಿ ಬಿಡು ನಾನೊಬ್ನೇ ಹೋಗಿ ಬರ್ತೀನಿ' ಅಂದು ಕಾಲ್ ಕಟ್ ಮಾಡಿ ಪಲ್ಸರ್ ಸ್ಟಾರ್ಟ್ ಮಾಡ್ಕೊಂಡು ಹೊರಟ.

ಸಂಪಿಗೆ ರೋಡ್ ಹತ್ರ ಹೋದ, ೮ನೇ ಕ್ರಾಸ್ ಹತ್ತಿರ ಬರ್ತಿದ್ದ ಹಾಗೇ ಜೇಬಲ್ಲಿ ದುಡ್ಡಿಲ್ಲ ಅನ್ನೋದು ಜ್ಞಾಪಕಕ್ಕೆ ಬಂತು. ಏನಪ್ಪಾ ಮಾಡೋದು ಅಂತ ಯೋಚಿಸುತ್ತಿದ್ದವನಿಗೆ ೮ನೇ ಕ್ರಾಸ್ ಪಕ್ಕದಲ್ಲಿ ಎಸ್.ಬಿ.ಐ ಏ.ಟಿ.ಎಂ ಇರೋದು ಜ್ಞಾಪಕಕ್ಕೆ ಬಂತು, ೮ನೇ ಕ್ರಾಸಿಗೆ ಗಾಡಿ ನುಗ್ಸಿದ, ಅರ್ಧ ದಾರಿಗೆ ಬರೋವಷ್ಟರಲ್ಲಿ ಗೊತ್ತಾಯ್ತು ಅದು ಒನ್ ವೇ, ತಾನು ಬರ್ತಿರೋದು ರಾಂಗ್ ಸೈಡ್ನಲ್ಲಿ ಅಂತ.
ಅರ್ಧ ಬಂದಾಗಿದೆ, ಬೇಗ ಹೋಗ್ಬಿಡೋಣ ಅಂತ ಗಾಡಿ ನುಗ್ಗಿಸ್ದ.


………………………………………………………………


ಅದೇ ಸಮಯಕ್ಕೆ ನಂದಿನಿ ಎದರುಗಡೆಯಿಂದ ೮ನೇ ಕ್ರಾಸ್ಗೆ ಬರೋಕೆ ಲೆಫ್ಟ್ ಟರ್ನ್ ತಗೊಳ್ತಿದ್ಲು. ಧಿಡೀರ್ ಬಂದ ಸ್ಕೂಟಿ, ತನ್ನ ವೇಗ ಬೇರೆ. ಗಾಡಿ ಕಂಟ್ರೋಲ್ ಮಾಡೋಕಾಗದೆ ಶ್ಯಾಮ್ ಹೋಗಿ ಸ್ಕೂಟಿಗೆ ಗುದ್ದಿದ. ನಂದಿನಿ ಬಿದ್ಲು.
ಸಾವರಿಸಿಕೊಂಡು ಶ್ಯಾಮ್ ಎದ್ದು ಅವಳನ್ನ ಹಿಡಿದು ಎಬ್ಬಿಸಿದ.
ಸ್ವಲ್ಪ ಕೈ ಗಾಯ ಆಗಿತ್ತು ಅವ್ಳಿಗೆ 'ಏಯ್, ಕಣ್ಣು ಕಾಣಲ್ವ, ಒನ್ ವೇ ಬೇರೆ ಅದ್ರ ಜೊತೆಗೆ ಫಾಸ್ಟಾಗಿ ಬರ್ತಾನೆ. ೮ನೇ ಕ್ರಾಸಲ್ಲಿ ಎಲ್ಲ ನೋಡಲಿ ಅಂತ ಬಿಲ್ಡಪ್ಪ'


ಲಕ್ಷಣವಾಗಿದ್ದ ಅವಳನ್ನೇ ನೋಡುತ್ತಿದ್ದ ಶ್ಯಾಮ್ಗೆ ಅವಳು ಹೇಳಿದ ಮಾತುಗಳು ಕೇಳಿಸಲಿಲ್ಲ.


ಹೆಲೋ ಮಿಸ್ಟರ್, ಕನಸು ಕಾಣ್ತಿದೀರಾ?


'ಸಾರಿ ಮೇಡಂ, ತಪ್ಪಾಯ್ತು'


'ಅದೆಲ್ಲ ಗೊತ್ತಿಲ್ಲ, ಮೊದ್ಲು ನಡೀರಿ ಪೋಲಿಸ್ ಸ್ಟೇಶನ್ಗೆ'.
'ಇಷ್ಟಕ್ಕೆಲ್ಲ ಪೋಲಿಸ್ ಸ್ಟೇಶನ್ಗೆ ಏನಕ್ಕೆ ಮೇಡಂ?'
'ಯಾಕೆ, ಸಾಯ್ಸಾದ್ಮೇಲೆ ಹೋಗಣ ಅಂದ್ಕೊಂಡ್ರ?, ನಡೀರಿ ಸುಮ್ನೆ'.
'ಮೇಡಂ, ಹೊರಗಡೆನೆ ಡೀಲ್ ಮಾಡ್ಕೊಳ್ಳೋಣ' ಈ ಸಲ ಧ್ವನಿ ಸ್ವಲ್ಪ ಸಣ್ಣಗಿತ್ತು.

ಇವಳಿಗೆ ಏನನ್ಸ್ತೋ ಏನೋ 'ಸರಿ' ಅಂದ್ಲು.
'ಪಕ್ಕದಲ್ಲೇ ಇರೋ ಕಾಫಿ ಶಾಪಿಗೆ ಹೋಗೋಣ ಬನ್ನಿ, ನಿಮಗೆ ಬೇರೆ ಪೆಟ್ಟು ಬಿದ್ದಿದೆ, ಸ್ವಲ್ಪ ಸುಧಾರಿಸಿಕೊಂಡ ಹಾಗೆ ಆಗತ್ತೆ'
ದುರುಗುಟ್ಟಿಕೊಂಡು ನೋಡಿದ್ಲು. ಇವಳಿಗೂ ಕೈ ಬೇರೆ ನೋಯ್ತಿತ್ತು. ಆಮೇಲೆ ಅದೇ ಸರಿ ಅನ್ಸಿ 'ನಡೀರಿ' ಅಂದ್ಲು.


ವೇಟರ್ ಬಂದು ಏನು ಬೇಕು ಅಂದ.


ಎರಡು ಕಾಫಿ, ಶ್ಯಾಮ್ ಹೇಳಿದ
ಕಾಫಿ ಆರ್ಡರ್ ಮಾಡಿದ್ಮೇಲೆ ಶ್ಯಾಮ್ ಎದ್ರಿಗೆ ಕೂತು ಕರ್ಚಿಫ್ನಲ್ಲಿ ಕೈ ಒರೆಸುಕೊಳ್ಳುತ್ತಿದ್ದವಳನ್ನ 'ನಿಮ್ಮ ಹೆಸರೇನು?' ಅಂದ.
ನಂದಿನಿ.
ಒಂದೆರಡು ನಿಮಿಷ ಅಲ್ಲಿ ಮೌನ.
ಅಷ್ಟೊತ್ತಿಗೆ ೨ ಕಾಫಿ ಅಂದು ಸರ್ವರ್ ೨ ಲೋಟ ಇಟ್ಟು ಹೋದ.
ನಿಮ್ಮ ಹೆಸರೇನು?
ಶ್ಯಾಮ್ ಅಂತ, ಸಾಫ್ಟ್ವೇರ್ ಇಂಜಿನ್ಯರ್.
ನಾನು ಹೆಸರು ಮಾತ್ರ ಕೇಳಿದ್ದು.
ಮುಂದಿನದು ಕೇಳ್ತೀರಾ ಅಂತ ಮೊದ್ಲೇ ಹೇಳ್ದೆ.
ಸಣ್ಣಗೆ ನಕ್ಕಳು ನಂದಿನಿ.
ನೀವು ಏನು ಮಾಡ್ತಿದೀರ ಅಂತ ಹೇಳ್ಲಿಲ್ಲ.
ನಾನೂ ಸಾಫ್ಟ್ವೇರ್ ಇಂಜಿನ್ಯರ್ರೆ.
ಕಾಫಿ ಕುಡಿದು ಸ್ವಲ್ಪ ಹೊತ್ತಾದ ಮೇಲೆ ವೇಟರ್ ಬಂದು ಬಿಲ್ ಅಂದು ಇಟ್ಟು ಹೋದ.


ಶ್ಯಾಮ್ ಪರ್ಸ್ ತೆಗೆದ, ನೋಡಿದ್ರೆ ಖಾಲಿ.
ನಂದಿನಿ, ನೀವು ತಪ್ಪು ತಿಳಿದುಕೊಳ್ಳಲಿಲ್ಲ ಅಂದ್ರೆ ಒಂದು ಮಾತು.
ಅದೇನು ಹೇಳಿ .
ನಾನು ಒನ್ ವೇನಲ್ಲಿ ಗಾಡಿ ಓಡ್ಸಿದ್ದು ೮ನೇ ಕ್ರಾಸ್ ಹತ್ತಿರ ಇರೋ ಎಸ್.ಬಿ.ಐ ಏ.ಟಿ.ಎಂ ಹತ್ರ ದುಡ್ಡು ತರೋಕೆ ಅಂತ. ಆಮೇಲೆ ಆಕ್ಸಿಡೆಂಟ್, ಹಾಗಾಗಿ ಜೇಬಲ್ಲಿ ದುಡ್ಡು ಇಲ್ಲ.
ಸರಿ ಬಿಡಿ ನಾನೇ ಕೊಡ್ತೀನಿ.
ಜೊತೆಗೆ ನಿಮ್ಮ ಗಾಡಿ ಡ್ಯಾಮೇಜ್ದು ಕೊಡ್ಬೇಕು, ಏ.ಟಿ.ಎಂನಿಂದ ತೆಗೆದುಕೊಡ್ತೀನಿ.
ಏನು ಬೇಡ ಬಿಡಿ, ಸ್ವಲ್ಪ ಸ್ಕ್ರಾಚ್ ಆಗಿದೆ ಅಷ್ಟೆ.
ಇಲ್ಲ ಇಲ್ಲ ಬನ್ನಿ ಅಂತ ಏ.ಟಿ.ಎಂ ಹತ್ರ ಹೋಗಿ ೫೦೦ ರೂ ದುಡ್ಡು ತೆಗೆದುಕೊಟ್ಟ.


ಇಷ್ಟೆಲ್ಲಾ ಆಗೋ ಹೊತ್ತಿಗೆ ಇವಳಿಗೆ ಊರಿಂದ ಅಪ್ಪ ಕಾಲ್ ಮಾಡಿದ್ರು ಆದ್ರೆ ಈ ಗಜಿಬಿಜಿಲಿ ಎತ್ತೋದಕ್ಕೆ ಆಗಲಿಲ್ಲ.
ಸರಿ ನಾನಿನ್ನು ಹೊರಡ್ತೀನಿ ಅಂದು ನಂದಿನಿ ವಾಪಸ್ ಹಾಸ್ಟೆಲ್ ಕಡೆ ಸ್ಕೂಟಿ ತೆಗೆದುಕೊಂಡು ಹೊರಟಳು.


ಹಾಸ್ಟೆಲ್ಲಿಗೆ ಹೋಗಿ ಅಪ್ಪನಿಗೆ ಕಾಲ್ ಮಾಡಿದಾಗ 'ಇವತ್ತು ರಾತ್ರಿ ಊರಿಗೆ ಹೊರಟು ಬಾ, ನಾಳೆ ಒಬ್ಬ ಹುಡುಗ ಮತ್ತೆ ಅವ್ನ ಕುಟುಂಬದವರು ಬರ್ತಿದ್ದಾರೆ' ಅಂದ್ರು.


ಸರಿ ಅಂದು ಊರಿಗೆ ಹೊರಟಳು ಆ ರಾತ್ರಿ.


ಹೋಗಿ ಹುಡುಗನನ್ನು ನೋಡಿದಳು, ಮಾತನಾಡಿದಳು. ಯಾಕೋ ಇಷ್ಟವಾಗಲಿಲ್ಲ, ಅಪ್ಪನಿಗೆ ತನ್ನ ತೀರ್ಮಾನ ಹೇಳಿ ವಾಪಸ್ ಬೆಂಗಳೂರಿಗೆ ಅವತ್ತು ರಾತ್ರಿ ಹೊರಟ್ಲು.


..................................


ಸ್ವಲ್ಪ ದಿನಗಳಾದ್ಮೇಲೆ, ಒಂದಿನ ಆಫೀಸಿಗೆ ಬಸ್ಸಲ್ಲಿ ಹೋಗಬೇಕಾದ್ರೆ ಪಕ್ಕದ ಸೀಟಲ್ಲಿ ಒಬ್ಬ ಬಂದು ಕೂತ.


ಏನ್ರೀ ನಂದಿನಿ ಹೇಗಿದ್ದೀರ?


ಬಸ್ಸಲ್ಲಿ ಯಾರಪ್ಪ ಇದು ಅಂತ ತಿರುಗಿ ನೋಡಿದ್ರೆ ಆಕ್ಸಿಡೆಂಟ್ ಮಾಡಿದ ಆಸಾಮಿ.


ಚೆನ್ನಾಗಿದೀನಿ ಕಣ್ರೀ ಶ್ಯಾಮ್. ಮತ್ತೆ ಒನ್ ವೇಲಿ ಬಂದು ಆಕ್ಸಿಡೆಂಟ್ ಮಾಡ್ಬೇಡ್ರಿ ಅಂತ ನಕ್ಕಳು.


ಅವನೂ ಸಹ,


ನೋಡ್ರೀ ಅವತ್ತು ಆಕ್ಸಿಡೆಂಟ್ ಆಗಿದ್ದಕ್ಕೆ ತಾನೇ ನೀವು ನಂಗೆ ಪರಿಚಯ ಆಗಿದ್ದು.


ಹೌದು ಹಾಗಂತ ಯಾವಾಗ್ಲೂ ಹಾಗೆ ಹೋಗ್ಬೇಡಿ, ನನ್ನಂತ ಒಳ್ಳೆಯವ್ರೇ ಯಾವಾಗ್ಲೂ ಸಿಗಲ್ಲ.


ಇಲ್ಲ ಬಿಡಿ ಇನ್ನು ಹೋಗಲ್ಲ.


ನಾನು ಯಾವಾಗ್ಲೂ ಇದೆ ಬಸ್ಸಲ್ಲಿ ಹೋಗೋದು ನಿಮ್ಮನ್ನ ಇದೆ ಮೊದ್ಲು ನೋಡ್ತಿರೋದು ಇಲ್ಲಿ.


ನಮ್ಮ ಆಫೀಸ್ ಇಲ್ಲಿಗೆ ಶಿಫ್ಟ್ ಆಯ್ತು, ಹಾಗಾಗಿ ಇನ್ಮೇಲೆ ಈ ಬಸ್ಸೇ, ನೀವು ಬೇರೆ ಇದೀರಾ, ಬಸ್ಸಲ್ಲಿ ಒಳ್ಳೆ ಕಂಪನಿ ಬಿಡಿ.



ದಿನಾ ಬಸ್ಸಿನಲ್ಲಿ ಭೇಟಿಯಾಗುತ್ತಿದ್ದರು, ಮೊಬೈಲ್ ನಂಬರ್ ಎಕ್ಸ್ಚೆಂಜ್ ಆಯ್ತು.


ಅಂದು ಶುಕ್ರವಾರ.


ಹೀಗೆ ಮಾತಾಡ್ತಾ ಶ್ಯಾಮ್ 'ನಂದಿನಿ, ವೀಕೆಂಡ್ ಏನು ಪ್ಲಾನ್'


ಏನಿಲ್ಲ.


ನಾಳೆ ಮಲ್ಲೇಶ್ವರಂ ಐನಾಕ್ಸಲ್ಲಿ ಯಾವ್ದಾದ್ರೂ ಫಿಲಂ ನೋಡೋಣ?


ಸಂಜೆ ನನ್ನ ಫ್ರೆಂಡ್ ಕೇಳ್ತೀನಿ, ಆಮೇಲೆ ಕಾಲ್ ಮಾಡ್ತೀನಿ.


ಅವ್ರು ಬರ್ಲೆಬೇಕಾ?


ಅವ್ಳು ಎಲ್ಲಿಗಾದ್ರೂ ಬರೋದೆ ಕಡಿಮೆ. ಅಕಸ್ಮಾತ್ ಬರಲ್ಲ ಅಂದ್ರು ನಾನು ಬಹುಷಃ ಬರ್ತೀನಿ.


ಆಯ್ತು ನಾಳೆ ನಿಮ್ಮ ಹಾಸ್ಟೆಲ್ ಹತ್ರ ಬಂದು ನಿಮ್ಮನ್ನ ಪಿಕ್ ಮಾಡ್ತೀನಿ.


ಅದೇನು ಬೇಡ ನಾನೇ ಮಂತ್ರಿ ಮಾಲ್ ಹತ್ರ ಬರ್ತೀನಿ, ಅದ್ಕೂ ಮುಂಚೆ ಯಾವ್ದಕ್ಕೂ ಒಂದ್ಸಲ ಕಾಲ್ ಮಾಡ್ತೀನಿ.


ಸರಿ ಹಾಗೆ ಆಗ್ಲಿ ಅಂದ ಶ್ಯಾಮ್.


ಶನಿವಾರ ನಂದಿನಿಗೆ ಏನೂ ಕೆಲಸ ಇಲ್ದಿದ್ರಿಂದ ಫಿಲಂ ನೋಡೋದಕ್ಕೆ ಹೋದ್ಲು.


ಶ್ಯಾಮ್ ಜೊತೆ ಸ್ವಲ್ಪ ಮಂತ್ರಿ ಮಾಲ್ನಲ್ಲಿ ತಿರುಗಾಡಿ ಒಟ್ಟಿಗೆ ಫಿಲಂ ನೋಡಿದ್ರು.



ಹೀಗೆ ಕೆಲವು ವೀಕೆಂಡ್ ಸಿನೆಮಾ, ಮಾಲ್, ಹೋಟೆಲ್ ಅಂತ ಸಾಗಿತು


ಒಂದು ವೀಕೆಂಡ್ ಶ್ಯಾಮ್ ಸ್ಯಾಂಕಿ ಟ್ಯಾಂಕ್ಗೆ ಹೋಗೋಣ ಅಂದ.


ಸರಿ ಅಂದಿದ್ಲು ನಂದಿನಿ.


ಅವತ್ತು ಭಾನುವಾರ ಇಬ್ಬರೂ ಸ್ಯಾಂಕಿ ಟ್ಯಾಂಕ್ ಒಂದು ರೌಂಡ್ ಹೊಡೆದು ಅಲ್ಲೇ ಒಂದು ಕಡೆ ಕೂತ್ಕೊಂಡರು.


ಸ್ವಲ್ಪ ಹೊತ್ತು ಹಾಗೆ ಮೌನವಾಗಿದ್ದರು.


ಮೌನ ಮುರಿದ ಶ್ಯಾಮ್ 'ನಂದಿನಿ, ನಿನ್ನ್ಹತ್ರ ಒಂದು ವಿಷ್ಯ ಹೇಳ್ಬೇಕಿತ್ತು'


ಹೇಳೋ....


ಅದೂ ಅದೂ


ಅದೇನು ಹಾಗೆ ತಡವರಿಸ್ತಿದೀಯ, ನೀಟಾಗಿ ಹೇಳು.


'ಐ ಲವ್ ಯು ನಂದಿನಿ'


ಅವನ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಸ್ಯಾಂಕಿ ಟ್ಯಾಂಕನ್ನು ವೀಕ್ಷಿಸುತ್ತಿದ್ದ ಅವಳು ಸಡನ್ನಾಗಿ ಇವನತ್ತ ತಿರುಗಿದಳು.


..............................


ಆಕ್ಸಿಡೆಂಟ್ ಆಗಿ ೨ ದಿನ ಆಗಿತ್ತು. ಅಂದು ಸೋಮವಾರ ಕೆಲಸ ಮುಗಿಸಿ ಮೋದಿ ಆಸ್ಪತ್ರೆ ಹತ್ತಿರ ಬಸ್ಸಿನಿಂದ ಇಳಿದಳು.
ಮಾಮೂಲಿಯಂತೆ ಕದಂಬ ಹೋಟೆಲ್ಲಿಗೆ ಹೋಗಿ ಕಾಫಿ ಕುಡಿಯುತ್ತಾ ಕೂತಳು. ಹಾಗೆ ಸುಮ್ಮನೆ ಕಣ್ಣು ಹಾಯಿಸುತ್ತಿದ್ದಾಗ ಪಕ್ಕದ ಬೆಂಚಿನಲ್ಲಿ ಕುಳಿತ ವ್ಯಕ್ತಿಯನ್ನೊಮ್ಮೆ ನೋಡಿದಳು. ಎಲ್ಲೋ ನೋಡಿದ ನೆನಪು, ಹಾ, ಮೊನ್ನೆ ಅಡ್ರಸ್ ಕೇಳಿದ ಹುಡುಗ.


ಅಲ್ಲೇ ಹೋಗಿ 'ನೆನ್ನೆ ಅಡ್ರಸ್ ಕೇಳಿದ್ರಲ್ಲ, ಸಿಕ್ತೇನ್ರಿ?


ಓ ನೀವಾ ಮೇಡಂ ಬನ್ನಿ ಕೂತ್ಕೊಳ್ಳಿ.


ಹೂ ಸಿಕ್ತು ಕಣ್ರೀ.


ನಾನು ಸಾಗರ್, ನಿಮ್ಮ್ಹೆಸ್ರು?


ನಂದಿನಿ.


ಕಾಫಿ ಕೊಡ್ಸೋಣ ಅಂದ್ರೆ ಆಗ್ಲೇ ಕುಡೀತಿದೀರ ಎಂದ ಸಾಗರ್.


ಓ ಪರವಾಗಿಲ್ಲ ಬಿಡಿ,


ನಾನು ಸಂಜೆ ಯಾವಾಗಲೂ ಕೆಲಸ ಮುಗಿಸಿಬಂದ್ಮೇಲೆ ಇಲ್ಲಿಗೆ ಕಾಫಿ ಕುಡಿಯೋಕೆ ಬರೋದು, ನೀವು ಇದೆ ಟೈಮಿಗೆ ಬಂದ್ರೆ ನಾಳೆ ಕೊಡಿಸ್ಬಹುದು.


ನಾನು ಸಂಜೆ ಇದೇ ಟೈಮಿಗೆ ಬರ್ತೀನಿ, ಆಸ್ಪತ್ರಯಿಂದ ಹೊರಗಡೆ ಬರೋದೆ ಇಷ್ಟೊತ್ತಿಗೆ.


ಆದ್ರೆ ನೆನ್ನೆ ಮೊನ್ನೆನೂ ಬಂದಿದ್ದೆ, ನೀವು ಕಾಣಲಿಲ್ಲ.


ಮೊನ್ನೆ ಸ್ವಲ್ಪ ಸಣ್ಣ ಆಕ್ಸಿಡೆಂಟ್ ಆಗಿತ್ತು ಹಾಗಾಗಿ ಬರ್ಲಿಲ್ಲ.


ಎಲ್ಲಿ, ಏನಾಯ್ತು?
ಏನಿಲ್ಲ, ಮೊನ್ನೆ, ಅದೇ ನೀವು ಅಡ್ರಸ್ ಕೇಳಿದ ದಿನ, ಮಲ್ಲೇಶ್ವರಂ ಹತ್ರ ಹೋಗೋವಾಗ ಯಾರೋ ಒಬ್ಬ ರಾಂಗ್ ಸೈಡಲ್ಲಿ ಬಂದು ಗುದ್ದಿದ, ಸ್ವಲ್ಪ ಕೈಗೆ ಪೆಟ್ಟಾಗಿತ್ತು ಈಗ ಪರ್ವಾಗಿಲ್ಲ.


ಅದಿರ್ಲಿ, ಆಸ್ಪತ್ರೆ ಅಂದ್ರಲ್ಲ, ಹುಷಾರಿಲ್ವ ನಿಮ್ಗೆ.


ಇಲ್ಲ ನಾನು ಚೆನ್ನಾಗಿದೀನಿ, ನಮ್ಮಮ್ಮನ್ನ ಆಸ್ಪತ್ರೆಗೆ ಅಡ್ಮಿಟ್ ಮಾಡಿದೀನಿ, ಕಣ್ಣು ಆಪರೇಷನ್ ಇದೆ ಹಾಗಾಗಿ.


ಮತ್ತೆ ಯಾವಾಗ ಆಪರೇಷನ್?


ಇನ್ನೊಂದೆರಡು ದಿನದಲ್ಲಿ ಅಂದಿದ್ದಾರೆ, ಅದಾದ್ಮೇಲೆ ೧೫-೨೦ ದಿನ ಇರ್ಬೇಕಂತೆ.


ಮತ್ತೆ ಅವ್ರಿಗೆ ತಿಂಡಿ ಊಟ ಎಲ್ಲ ಹೇಗೆ?


ಎಲ್ಲ ಆಸ್ಪತ್ರೆಯಲ್ಲೇ ಕೊಡ್ತಾರೆ. ನಾನು ಹೀಗೆ ಹೋಟೆಲ್ನಲ್ಲಿ.


ಓ ಕೆ. ಮತ್ತೆ ನೀವೇನು ಮಾಡ್ಕೊಂಡಿರೋದು.


ನಾನು ಊರಲ್ಲಿ ತೋಟ ಗದ್ದೆ ನೋಡ್ಕೊಂಡು ಇದ್ದೀನಿ.


ನೀವು?


ನಾನು ಸಾಫ್ಟ್ವೇರ್ ಇಂಜಿನ್ಯರ್. ಇಲ್ಲೇ ವುಮೆನ್ಸ್ ಹಾಸ್ಟೆಲ್ಲಲ್ಲಿ ಇದ್ದೀನಿ.


ನಿಮ್ಮ ಕೆಲ್ಸನೇ ವಿಚಿತ್ರ ಅಲ್ವೇನ್ರಿ, ಯಾವಾಗ್ಲೂ ಕಂಪ್ಯೂಟರ್ನಲ್ಲೇ ಮುಳ್ಗಿರ್ತೀರ, ಹೊರಗಡೆ ಏನು ಆಗಿರತ್ತೆ ಅಂತ ಗೊತ್ತಾಗಲ್ಲ. ನಮ್ಮ ಕೆಲಸಕ್ಕೂ ನಿಮ್ಮ ಕೆಲಸಕ್ಕೂ ಭಾರೀ ಅಜಗಜಾಂತರ.


ನಿಜ ಕಣ್ರೀ, ನಾನೂ ಕೆಲಸ ಸಿಗೊಕಿಂತ ಮೊದ್ಲು ಆರಮಾಗಿದ್ದೆ ಅನ್ಸ್ತಿತ್ತು, ಸೇರಾದ್ಮೇಲೆ ನೀವು ಹೇಳಿದ ಹಾಗೆ ಅದರಲ್ಲೇ ಮುಳುಗಿಹೋಗಿದೀನಿ.


ಸರಿ ಸಾಗರ್ ನಾನಿನ್ನು ಬರ್ತೀನಿ, ಸಿಗುವ ನಾಳೆ.


ಆಯ್ತು ಹೋಗ್ಬನ್ನಿ.
ಒಂದೆರಡು ದಿನ ಹೀಗೆ ಭೇಟಿ ಆದ್ರು.


ಒಂದಿನ ಇಬ್ರೂ (ಸಾಗರ್ ಮತ್ತೆ ನಂದಿನಿ) ಭೇಟಿಯಾದಾಗ ಆಪರೇಷನ್ ಸಕ್ಸಸ್ ಆಗಿದ್ದು ಹೇಳ್ದ. ಇನ್ನೊಂದು ೨೦ ದಿನ ಆದ್ಮೇಲೆ ಡಿಸ್ಚಾರ್ಜ್ ಅಂತೆ.


ತುಂಬಾ ಖುಷಿಯಾಯ್ತು ಕೇಳಿ ಅಂದ್ಲು ನಂದಿನಿ.


ಕಾಫಿ ಕುಡಿತೀರಲ್ಲ?


ಅಫ್ಕೋರ್ಸ್ ಅದ್ಕೆ ಬಂದಿರೋದಿಲ್ಲಿಗೆ.


ಸರಿ ಹಾಗಿದ್ರೆ ಅಂದು ಸಾಗರ್ ವೇಟರ್ ಹತ್ತಿರ ಬಂದಾಗ ಎರಡು ಕಾಫಿ ಆರ್ಡರ್ ಮಾಡಿದ.


ಸಾಗರ್ ನಂದಿನ ಕಡೆ ತಿರುಗಿ, ಆಮೇಲೆ ನಂದಿನಿಯವ್ರೆ ಮಲ್ಲೇಶ್ವರಂ ಸೇವಾ ಸದನದಲ್ಲಿ ಭರತನಾಟ್ಯ ಇದೆ ಅಂತ ಪೇಪರ್ನಲ್ಲಿ ನೋಡಿದೆ, ನಿಮಗೆನಾದ್ರೂ ಇಂಟರೆಸ್ಟ್ ಇದ್ದು ನೀವು ನಾಳೆ ಸಂಜೆ ಫ್ರೀ ಇದ್ರೆ ಬನ್ನಿ ಹೋಗೋಣ, ನಾನಂತೂ ಹೋಗ್ತೀನಿ.


ಖಂಡಿತ ಬರ್ತೀನಿ ಸಾಗರ್, ನಾನು ಈ ತರದ ಯಾವದೇ ಕಾರ್ಯಕ್ರಮಕ್ಕೆ ಹೋಗಿಲ್ಲ, ನಾಳೆ ಬಂದೆ ಬರ್ತೀನಿ ಅಂದ್ಲು.


ಯಾವ್ದಕ್ಕೂ ನಿಮ್ಮ ನಂಬರ್ ಕೊಡಿ ಅಂತ ನಂದಿನಿ ಸಾಗರ್ ನಂಬರ್ ತೆಗೆದುಕೊಂಡಿದ್ದಳು.


ಸರಿ ಹಾಗಿದ್ರೆ ಹೋಟೆಲ್ ಹತ್ರಾನೆ ಕಾಯ್ತಿರ್ತೀನಿ ನಿಮಗೆ.


ಆಯ್ತು ಹಾಗಿದ್ರೆ ನಾಳೆ ಸಿಗೋಣ ಎಂದ ನಂದಿನಿ ಹಾಸ್ಟೆಲ್ ಕಡೆ ಹೊರಟ್ಲು.


ಮಾರನೇ ದಿನ ಸಂಜೆ ಸೇವಾ ಸದನಕ್ಕೆ ಭರತನಾಟ್ಯ ನೋಡೋದಕ್ಕೆ ಇಬ್ಬರೂ ಹೋದ್ರು. ಕಾರ್ಯಕ್ರಮ ಮುಗಿದಾಗ ನಂದಿನಿಗೆ ತಾನು ಬೆಂಗಳೂರಿನಲ್ಲಿದ್ದು ಇವೆಲ್ಲವನ್ನೂ ಮಿಸ್ ಮಾಡ್ಕೊತಿದೀನಲ್ಲ ಅಂತ ಬೇಜಾರಾಯ್ತು ಜೊತೆಗೆ ಸಾಗರ್ಗೆ ಥ್ಯಾಂಕ್ಸ್ ಹೇಳಿದ್ಲು.


ಹೀಗೆ ಸಾಗರ್ ತಾನಿದ್ದ ಸ್ವಲ್ಪ ದಿನಗಳಲ್ಲಿಯೇ ಸಂಗೀತ, ನಾಟಕ, ನೃತ್ಯ ಅಂತ ನಂದಿನಿಯನ್ನು ಕರೆದುಕೊಂಡು ಹೋದ.


ಕೊನೆಗೆ ಒಂದಿನ ಸಾಗರ್ ಹೊರಡುವ ದಿನ ಬಂತು, ನಂದಿನಿ ಬೇಜಾರು ಆಗಿದ್ಲು.


ಬೆಂಗಳೂರಿಗೆ ಮತ್ತೆ ಯಾವಾಗಲಾದರೂ ಬಾ ಎಂದು ಅವನನ್ನು ಬೀಳ್ಕೊಟ್ಟಳು


...........................


ಸ್ವಲ್ಪ ತಿಂಗಳುಗಳಾದ ಮೇಲೆ ಶ್ಯಾಮ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾಗ ಅವನ ಮೊಬೈಲಿಗೆ ಒಂದು ಕರೆ ಬಂತು. ಗೌಡನ ಕಾಲ್.


'ಏನು ಮಗಾ, ಆರಮಾಗಿದೀಯ?, ಕೆಲಸ ಎಲ್ಲಾ ಹೆಂಗಿದೆ? ಆಕಡೆಯಿಂದ ಗೌಡನ ಪ್ರಶ್ನೆ.


ಚೆನ್ನಾಗಿದೀನಿ ಗೌಡ, ಕೆಲಸ ಎಲ್ಲ ಆರಾಮಾಗಿದೆ, ಇದೇನು ಧಿಡೀರ್ ಅಂತ ಕಾಲ್ ಮಾಡಿದೀಯ?


ಹ್ಞೂ ಮಗಾ, ಮುಂದಿನ ಭಾನುವಾರ ನನ್ನ ಮದುವೆ ಖಂಡಿತ ಬರ್ಬೇಕು, ಕಾಗದ ನಾಳೆ ಕಳ್ಸ್ತೀನಿ,ನಮ್ಮೂರಲ್ಲಿ ಪೋಸ್ಟ್ಗಳ ಕಥೆ ನಿಂಗೆ ಗೊತ್ತಲ್ಲ ಅದ್ಕೆ ಯಾವ್ದಕ್ಕೂ ಅಡ್ರಸ್ ಒಂದ್ಸಲ ಬರ್ಕೋ ಮಗಾ.


ಸರಿ ಹೇಳು ಗೌಡ ಎಂದು ಅಡ್ರಸ್ ಬರ್ಕೊಂಡು, ಮದ್ವೆಗೆ ಬರ್ಲೆಬೇಕಲ್ಲಪ್ಪ ಅಂದ.


ಅದೇ ಮತ್ತೆ ಎಂದು ಹೇಳಿ ಗೌಡ ಫೋನ್ ಇಟ್ಟ.


ಭಾನುವಾರ ಬೆಳ್ಗೆ ಬೇಗ ಹೊರಟ ಶ್ಯಾಮ್, ಗೌಡ ಮದುವೆ ಆಗ್ತಿರೋ ಕಲ್ಯಾಣ ಮಂಟಪಕ್ಕೆ ಹೋದ.


ಹುಡುಗ ಹುಡುಗಿ ಹೆಸರು ನೋಡಿದ ಶ್ಯಾಮ್ಗೆ ಯಾವುದೇ ಅನುಮಾನವೂ ಬರಲಿಲ್ಲ, ಆದರೆ ಮುಹೂರ್ತ ಆಗ್ತಿರೋ ಮದುವೆ ಮಂಟಪದ ಹತ್ತಿರ ಹೋಗಿ ನೋಡ್ತಾನೆ ಈಕಡೆ ಗೌಡ (ಸಾಗರ್ ಗೌಡ) ಆಕಡೆ ನಂದಿನಿ.


(ನಂದಿನಿಗೆ ಸಾಗರ್ ತುಂಬಾ ಇಷ್ಟವಾಗಿದ್ದ, ಅವಳೇ ಅವನಿಗೆ ಒಂದಿನ ಕರೆ ಮಾಡಿ ತನ್ನ ಪ್ರೇಮವನ್ನು ತಿಳಿಸಿದ್ದಳು, ಅವನೂ ಒಪ್ಪಿದ. ಶ್ಯಾಮ್ನನ್ನು ಸ್ನೇಹಿತನನ್ನಾಗಿ ಸ್ವೀಕರಿಸಿದ್ದಳು, ಹಾಗೆಯೇ ಅವನ ಪ್ರೇಮವನ್ನು ನಯವಾಗಿ ತಿರಸ್ಕರಿಸಿದ್ದಳು)

ಮೊದಲ ಮಳೆಯಲಿ

ಮೊದಲ ಮಳೆಯಲಿ
ನೆನೆಯುವಾಸೆ

ಧರೆಯ ಸ್ಪರ್ಶಿಸುವ ತುಂತುರು ನಾದಕೆ
ಕಿವಿಗೊಡುವಾಸೆ

ಹನಿಗಳ ಚಿಟಪಟ ಶಬ್ಧಕೆ
ನೃತ್ಯವಾಡುವಾಸೆ

ಮಳೆ ನಿಂತ ಮೇಲೆ ಮಣ್ಣಿನ ಸುವಾಸನೆಯ
ಹೀರುವಾಸೆ

ಎಲೆಗಳ ಮೇಲಿನ ದೃಶ್ಯವೈಭವವನ್ನು
ನೋಡುವಾಸೆ

ಕಾನನದ ಸುಂದರ ಸೊಬಗನ್ನು
ಸವಿಯುವಾಸೆ

ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೨

ಲ್ಯಾಪ್ಟಾಪಿನಲ್ಲಿ ಹಾಕಿದ ಎದುರಿಗೆ ಕಂಡ ಮಲೆನಾಡಿನ ಚಿತ್ರವನ್ನು ನೋಡುತ್ತಾ ಹಾಗೆಯೇ ಹಿಂದೆ ಕುರ್ಚಿಗೆ ಒರಗಿ ಕಾಫಿಯನ್ನು ಹೀರುತ್ತಾ, ತನ್ನಊರು, ಮಲೆನಾಡಿನ ಸುಂದರ ಪರಿಸರ, ಅಲ್ಲಲ್ಲಿ ಒಂದೊಂದು ಮನೆ, ಸುತ್ತಲೂ ಕಾಡು, ಮನೆಯ ಪಕ್ಕ ಹರಿಯುವ ಸಣ್ಣ ಹೊಳೆ, ಅಲ್ಲೆಲ್ಲೋ ಹಕ್ಕಿಗಳ ಸದ್ದು, ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನು ಮನೆಯ ಹೊರಗಡೆ ಚಾಚಿ ಅಂಗಳಕ್ಕೆ ಬಂದಾಗ ಅಜ್ಜಿ ಕೂಗಿದರೂ ಕೇಳದೆ ಎದುರಿಗೆ ಬಂದ ಆ ಪುಟ್ಟ ಕರುವನ್ನು ತನ್ನ ಎಳೆಯ ಕೈಗಳಿಂದ ಮುಟ್ಟುವ ಬಯಕೆ, ತನ್ನ ಗೆಳೆಯರೊಡಗೂಡಿ ಆಡಿದ ಗೋಲಿ ಬುಗುರಿ ಲಗೋರಿ ಮರಕೋತಿಯಾಟಗಳು, ಹೊಳೆಗೆ ಹೋಗಿ ಗಾಣ ಹಾಕಿ ಹಿಡಿದ ಮೀನುಗಳು, ಕಾಡಿಗೆ ನುಗ್ಗಿ ಚಾಟಿಬಿಲ್ಲಿನಿಂದ ಹೊಡೆದ ಹಕ್ಕಿ, ಹಕ್ಕಿ ಬಿದ್ದಾಗ ಸಂಭ್ರಮಿಸಿದ ಕ್ಷಣ, ಅಮ್ಮನಿಗೆ ಹೋಗಿ ತೋರಿಸಿದಾಗ ಪಾಪದ ಹಕ್ಕಿಯನ್ನು ಹೊಡೆದದ್ದಕ್ಕೆ ಬೈಸಿಕೊಂಡು ತಾನು ಊಟ ಮಾಡುವುದಿಲ್ಲ ಎಂದು ಸಿಟ್ಟು ಮಾಡಿಕೊಂಡು ಹೋದದ್ದು, ಬೇರೆಯವರ ತೋಟದಲ್ಲಿ ಹಲಸಿನಹಣ್ಣು ಕದಿಯಲು ಹೋಗಿ ಮರದಿಂದಕೆಳಗಿಳಿಸಿ ಇನ್ನೇನು ತಿನ್ನಬೇಕೆನ್ನುವಷ್ಟರಲ್ಲಿ ತೋಟದ ಯಜಮಾನ ಬಂದಿದ್ದು, ಅವರಿಂದ ಸಿಕ್ಕಾಪಟ್ಟೆ ಬೈಸಿಕೊಂಡಿದ್ದು ಆಮೇಲೆಅವರೂ ಒಟ್ಟಿಗೆ ತಿಂದದ್ದು, ಶಾಲೆಗೆ ಹೋಗೋದಕ್ಕೆ ತಪ್ಪಿಸಿಕೊಳ್ಳಬೇಕು ಎಂದುಕೊಂಡು ಅಮ್ಮನಿಗೆ ಹೋಗೋ ದಾರಿಯಲ್ಲಿರೋ ಒಬ್ಬರಮನೆಯಲ್ಲಿ ನಾಯಿ ಇದೆ ಎಂದು ಸುಳ್ಳು ಹೇಳಿದರೂ ಅಮ್ಮ ಕೇಳದೆ ಅವಳೊಟ್ಟಿಗೆ ಕರೆದುಕೊಂಡು ಹೋಗಿ ಅದ್ಯಾವ ನಾಯಿ ತೋರಿಸು ಅಂತಕೇಳಿ ಅಲ್ಲಿಲ್ಲದ್ದು ಗೊತ್ತಾಗಿ ಸುಳ್ಳು ಹೇಳಿದ್ದಕ್ಕೆ ಶಾಲೆಯವರೆಗೆ ಕೋಲಿನಲ್ಲಿ ಹೊಡೆದುಕೊಂಡು ಹೋಗಿದ್ದು, ಅಮ್ಮ ಮನೆಗೆ ಬರುವ ಮೊದಲೇಮನೆಗೆ ಬಂದಿದ್ದು, ಶಾಲೆಯಲ್ಲಿ ಇಂಜೆಕ್ಷನ್ ಕೊಡ್ತಾರೆ ಅಂತ ತಿಳಿದ ತಕ್ಷಣ ಅಲ್ಲಿಂದ ಓಡಿ ಹೋಗಿದ್ದು, ಮಳೆ ಬರುವಾಗ ಕೊಡೆ ಹಾರಿಹೋಗುತ್ತಿದ್ದಕಾರಣ ಅದನ್ನು ಮಡಿಸಿ ಮಳೆಯಲ್ಲೇ ನೆನೆದುಕೊಂಡು ಮನೆಗೆ ಬಂದದ್ದು, ಶಿವರಾತ್ರಿಯ ಪ್ರಸಾದ ತೆಗೆದುಕೊಂಡು ಬರುವಾಗದಾರಿಯಲ್ಲಿ ಮನೆಯ ದನ ಎಲ್ಲೋ ಓಡಿಹೋಗುತ್ತಿದ್ದದ್ದನ್ನು ನೋಡಿ ಪ್ರಸಾದವನ್ನು ಮನೆಯ ಕೆಲಸಕ್ಕ ಬರುವ ಹೆಂಗಸೊಬ್ಬಳಿಗೆ (ದಲಿತ ಮಹಿಳೆ)ಕೊಟ್ಟದ್ದನ್ನು ನೋಡಿದ ದೊಡ್ಡಮ್ಮನಿಂದ ಹಿಗ್ಗಾಮುಗ್ಗಾ ಬೈಗುಳ, ಮಳೆಗಾಲದಲ್ಲಿ ನೇಗಿಲು ಹಿಡಿದುಕೊಂಡು ಬೇಸಾಯ ಮಾಡಲು ಹೋಗಿ ಗದ್ದೆಯಲ್ಲಿ ಬಿದ್ದು ಮೈಯೆಲ್ಲಾ ಗೊಚ್ಚೆ, ಬೇಸಾಯ ಮುಗಿದ ಮೇಲೆ ಅಲ್ಲೇ ಮರದ ಕೆಳಗೆ ಗೋಣಿ ಚೀಲವನ್ನು ಮೈಮೇಲೆ ಹೊದ್ದುಕೊಂಡು ಅವುಚಿ ಕುಳಿತು ತಿಂದ ಬೆಚ್ಚನೆಯ ರೊಟ್ಟಿ, ಆ ಚಳಿಯಲ್ಲಿ ಕುಡಿದ ಬಿಸಿ ಬಿಸಿ ಬೆಲ್ಲದ ಕಾಫಿ, ತನ್ನ ಕಾಯಕ ಮುಗಿಸಿ ಮೇಯಲು ಹೊರಟ ಎತ್ತುಗಳು, ಕಾಫಿ ಕುಡಿದು ದನ ಕಾಯಲು ಹೊರಟ ಇವನು, ದೂರದಲ್ಲಿ ಗೋಲಿ ಆಡುತ್ತಿದ್ದವರನ್ನು ಕಂಡು ತಾನು ಸೇರಿ, ಇತ್ತ ಹೊಟ್ಟೆ ತುಂಬಿದ ಎತ್ತುಗಳು ಕಾಡಿಗೆ ಓಟ, ನೋಡಿದ ಇವನು ಒಂದೇ ಸಮನೆ ಕಾಡಿಗೆ ನುಗ್ಗಿ ವಾಪಸು ಕರೆತಂದ ಎತ್ತುಗಳು, ಇಲ್ಲದಿದ್ದರೆ ನಾಳಿನ ಬೇಸಾಯಕ್ಕೆ ರಜೆ, ಮಳೆಗಾಲ ಮುಗಿದು ಬೇಸಗೆ ಕಾಲಿಡುವ ಹೊತ್ತಿಗೆ ಎಲ್ಲೆಲ್ಲೂ ಭತ್ತದ ತೆನೆಗಳು , ಆಳುಗಳೊಡನೆ ತಾನೂ ಕುಡುಗೋಲು ಹಿಡಿದು ಕೊಯ್ದ ತೆನೆ, ಅಂಗಳಕ್ಕೆ ಹರಡಿದ ಭತ್ತದ ರಾಶಿ, ಒಕ್ಕಲಾಟಕ್ಕೆ ಎತ್ತುಗಳನ್ನು ತಂದು ಭತ್ತದ ರಾಶಿಯ ಮೇಲೆ ಸುತ್ತಿಸಿ ತನ್ನ ಓರಗೆಯವರೊಂದಿಗೆ ತಾನು ಪಲ್ಟಿ ಹೊಡೆದು ಸಂಭ್ರಮಿಸಿದ ಪರಿ, ಬೇಸಗೆ ರಜೆ ಮುಗಿದು ಶಾಲೆಗೆ ಹೋಗುವ ದುಃಖ, ಹೊಸ ತರಗತಿಗೆ ಹೋಗುವ ಸಂಭ್ರಮ, ಶಾಲೆ ಮುಗಿದುನಡೆದುಕೊಂಡು ಹೋಗುತ್ತಿರುವಾಗ ಪೇಟೆಯಿಂದ ಬಂದ ಬಸ್ಸನ್ನೇ ನೋಡುತ್ತಾ ನಿಂತದ್ದು, ತನ್ನ ಅಜ್ಜ ಅದರಿಂದ ಇಳಿದಾಗ ಆದಸಂತೋಷ, ಅಜ್ಜ ತಂದುಕೊಟ್ಟ ವಿವಿಧ ಚಿತ್ರದ ಬಿಸ್ಕತ್ಗಳು, ಅಲ್ಲೇ ಎಲ್ಲರಿಗೂ ಹಂಚಿ ತಾನು ತಿಂದದ್ದು, ಏನೋ ಮಗಾ ಮನೆಗೆ ಹೋಗಲ್ವ ಅಂತ ಪಕ್ಕದವನು ಅಂದಾಗ ಎಚ್ಚರವಾಗಿ ತನ್ನ ಲ್ಯಾಪ್ಟಾಪನ್ನು ಮಡಿಸಿ ಬ್ಯಾಗಿಗೆ ಹಾಕಿ ಕಾರಿನಲ್ಲಿ ಕುಳಿತು ಪ್ರತಿದಿನ ಹೀಗೆ ನಡೆಯುವ ಜೀವನ, ಎಂದೂ ನಿಲ್ಲದ ಟ್ರಾಫಿಕ್ ಎಂಬ ಮಹಾ ಸಾಗರದಲ್ಲಿ ಲೀನವಾದನು.

ಮುಂಗಾರು ಮಳೆಯ ಮಾಂತ್ರಿಕನಿಗೆ

ಮುಂಗಾರು ಮಳೆಯಲ್ಲಿ
ಮಿಂದೆದ್ದ ಮನಸ್ಸು
ಗಾಳಿಯಲ್ಲಿ ಗಾಳಿಪಟದಂತೆ
ಗಿರ್ರೆಂದು
ಮನಸಾರೆ ಮುಗಿಲಿನಲ್ಲಿ
ಮೀಯ್ದು
ಪಂಚರಂಗಿಯಂತೆ ಪೃಥ್ವಿ ಯ
ಪಯಣಿಸುತ್ತ
ಪರಮಾತ್ಮನ ಪಾದದಂಗಳದಲ್ಲಿ
ಪರಿಭ್ರಮಿಸುತ್ತಿಹುದು

ನೆನಪಿನಂಗಳದಲ್ಲಿ ಅಚ್ಚಳಿಯದೆ ನಿಂತಿರುವ ಬಣ್ಣದ ಚಿತ್ತಾರಗಳು

ಆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು
ಅಡುಗೆಮನೆಯಿಂದ ನಡುಮನೆಯವರೆಗೆ
ನಡುಮನೆಯಿಂದ ಚಾವಡಿಯವರೆಗೆ
ಚಾವಡಿಯಿಂದ ಅಂಗಳದವರೆಗೆ
ನಡೆದದ್ದೇ ಹಾದಿ

ಅಮ್ಮ ಅಲ್ಲಿ ಕೇಳಲ್ಲಿ ಶಾಲೆಯ ಘಂಟೆಯ ಸದ್ದು
ಎಂದಂದು ಚೀಲವನ್ನು ಎತ್ತಿಕೊಂಡು ಹೋಗುತ್ತಿದ್ದ
ಆ ಸಂಭ್ರಮದ ಕ್ಷಣಗಳು

ಚಲಿಗಾಲವೋ ಮಳೆಗಾಲವೋ ಬಿರುಬಿಸಿಲೋ
ಯಾವುದನ್ನೂ ಲೆಕ್ಕಿಸದೆ ಕಾಲದ ಹಂಗಿಲ್ಲದೆ
ನಡೆಯುತ್ತಿದ್ದ ಪಾಠಗಳು

ಗೋಲಿ ಬುಗುರಿ ಚಿನ್ನಿದಾಂಡು ಲಗೋರಿ
ಎಷ್ಟು ಆಡಿದರೂ ಮತ್ತೆ ಮತ್ತೆ
ಆಡಬೇಕೆನಿಸುತ್ತಿದ್ದ ಆಟಗಳು

ಚಾಟಿಬಿಲ್ಲು ಹಿಡಿದು ಕಾಡಿಗೆ ನುಗ್ಗಿ
ಗುರಿಗೆ ಬೀಳದಿದ್ದರೂ
ಮರಳಿ ಯತ್ನವ ಮಾಡುತ್ತಿದ್ದ ಕ್ಷಣಗಳು

ನೆನಪಿನಂಗಳದಲ್ಲಿ ಅಚ್ಚಳಿಯದೆ ನಿಂತಿರುವ
ಬಣ್ಣದ ಚಿತ್ತಾರಗಳು

ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೧

ಇಂಜಿನಿಯರಿಂಗ್ ಮುಗಿಸಿಕೊಂಡು ರಾಜ್ಯ ರಸ್ತೆ ಸಾರಿಗೆಯ ಕೆಂಪು ಬಸ್ಸಿನಲ್ಲಿ ಬೆಂಗಳೂರಿಗೆ ಬಂದು ಇಳಿದ ಹುಡುಗ, ಕಣ್ಣುಗಳಲ್ಲಿ ಕನುಸುಗಳ ರಾಶಿ, ಕಷ್ಟಪಟ್ಟು ಓದಿಸಿದ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ, ತಂಗಿಯ ಮದುವೆಯ ಜವಾಬ್ದಾರಿ, ಅದಕ್ಕಿಂತ ಮೊದಲು ತನಗೊಂದು ಸೂರು ಹುಡುಕಿಕೊಳ್ಳುವ, ಆಮೇಲೆ ಬದುಕಿಗೊಂದು ಕೆಲಸ ಪಡೆಯುವ ಸಾಹಸ, ಗೆಳೆಯರ ಜೊತೆಗೂಡಿ ಒಂದು ಬಾಡಿಗೆ ಮನೆ, ನಂತರ ಕೆಲಸ ಹುಡುಕುವ ನಿರಂತರ ಕಾಯಕ, ಬಿ, ಎಂ, ಟಿ, ಸಿಯ ಡೈಲಿ ಪಾಸ್ ತೆಗೆದುಕೊಂಡು ಕಂಡ ಕಂಡ ಕಂಪನಿಗಳಲ್ಲಿ ರೆಸ್ಯುಮ್ಗಳನ್ನು ಸುರಿದು ಸಂಜೆಯ ಹೊತ್ತಿಗೆ ಬಸವಳಿದು ಮನೆಗೆ ಬಂದು ಸೇರಿ, ಅಡಿಗೆ ಮಾಡಿ ತಿಂದು, ಹಾಸಿಗೆಯ ಮೇಲೆ ಬಿದ್ದಾಕ್ಷಣ ನಾಳೆಯೋ ನಾಡಿದ್ದೋ ರೆಸ್ಯುಮ್ಗಳನ್ನು ಕೊಟ್ಟು ಬಂದ ಕಂಪನಿಗಳಿಂದ ಕಾಲ್ ಬರುವುದೋ ಎನ್ನುವ ಕನಸುಗಳು, ಬುಧವಾರದ ಅಸೆಂಟ್ ನೋಡಿ ಶನಿವಾರದ ವಾಕ್ ಇನ್ಗೆ ಸಿದ್ಧತೆ, ಶನಿವಾರ ಅಲ್ಲಿ ಹೋಗಿ ನೋಡಿದರೆ ಜನಸಾಗರ, ಇಷ್ಟು ಜನದಲ್ಲಿ ಕೆಲಸ ಸಿಗುವುದೋ ಇಲ್ಲವೋ ಎನ್ನುವ ಹತಾಶೆಯ ನಡುವೆ ಕಷ್ಟಪಟ್ಟು ನಿಂತು ರಿಟನ್ ಟೆಸ್ಟ್ ಬರೆದು, ಕೊನೆಗೆ ಫಲಿತಾಂಶ ಬಂದ ಮೇಲೆ ಮೊದಲನೇ ಸುತ್ತಿನಲ್ಲೇ ಹೊರಬಿದ್ದು, ತನ್ನ ಗೆಳೆಯರ ಪರಿಸ್ಥಿತಿಯೂ ಹಾಗೆಯೇ ಆಗಿ, ಅಲ್ಲಿಂದ ಮಜೆಸ್ಟಿಕ್ಗೆ ಬಂದು ಕಪಾಲಿಯಲ್ಲೋ ಸಂತೋಷ್ ಥಿಯೇಟರ್ನಲ್ಲೋ ಒಂದು ಸಿನೆಮಾ ನೋಡಿ ಮತ್ತೆ ಮನೆ ಕಡೆಗೆ ಪ್ರಯಾಣ, ಹೀಗೆ ಅಲ್ಲಿ ಇಲ್ಲಿ ಹುಡುಕಿ ಕೊನೆಗೊಂದು ದಿನ ಯಾವುದೋ ಕಂಪನಿಯಲ್ಲಿ ಕೆಲಸ, ತನ್ನ ಗೆಳೆಯರಿಗೂ ಹಾಗೆ ಒಂದೊಂದು ಕಡೆ, ಕೆಲಸ ಸಿಕ್ಕಾಗಲೆಲ್ಲ ಒಬ್ಬೊಬ್ಬರಿಂದ ಪಾರ್ಟಿ, ಈ ನಡುವೆ ಊರಿನಲ್ಲಿ ಕಷ್ಟವಿದ್ದರೂ ತನಗೆ ಬರುತ್ತಿರುವ ಸಂಬಳ ಕಡಿಮೆ ಎಂದುಕೊಂಡು ಸ್ವಲ್ಪವನ್ನೂ ಕಳಿಸದೆ, ವೀಕೆಂಡ್ ಸಿನೆಮಾ, ವಿಂಡೋ ಶಾಪಿಂಗ್, ಬಟ್ಟೆ ಖರೀದಿ, ಬಣ್ಣದ ಲೋಕ, ಅಲ್ಲಲ್ಲಿ ಸುತ್ತಾಟ, ತನಗಾಗಿ ಹೊಸ ಮೊಬೈಲ್, ಲ್ಯಾಪ್ ಟಾಪ್, ತನ್ನ ಆಫೀಸಿನಲ್ಲೇ ತನ್ನೊಂದಿಗೆ ಕೆಲಸ ಮಾಡುತ್ತಿರುವ ಹುಡುಗಿಯೊಂದಿಗೆ ಒಡನಾಟ, ಅವಳ ಜೊತೆ ಸುತ್ತಾಡಲು ಸಾಲದಿಂದ ತೆಗೆದುಕೊಂಡ ಬೈಕ್, ಬಂದ ಸಂಬಳವೆಲ್ಲ ತಮ್ಮಿಬ್ಬರ ಸುತ್ತಾಟಕ್ಕೆ, ತನ್ನ ಮಗ ನೋಡಲು ಬರಲೇ ಇಲ್ಲ ಎಂದು ಅಮ್ಮನ ಚಡಪಡಿಕೆ, ತನ್ನ ಮಗನನ್ನು ಹೋಗಿ ನೋಡಿಕೊಂಡು ಬರಲು ಹೊರಟ ಅಪ್ಪ, ತನ್ನ ಮಗ ಸಾವಿರ ಸಾವಿರ ದುಡಿಯುತ್ತಿದ್ದರೂ ಅದೇ ಕೆಂಪು ಬಸ್ಸಿನಲ್ಲಿ ಬೆಂಗಳೂರಿಗೆ ಪಯಣ, ಸಂಜೆ ತಲುಪಿ ಕಾಯಿನ್ ಬೂತಿಂದ ಕರೆ ಮಾಡಿದರೆ ಮಗನಿಂದ ಬಂದ ಉತ್ತರ ಸ್ವಲ್ಪ ಹೊತ್ತು ಕಾಯಿ ಎಂದು, ಅಲ್ಲಿ ಇವನು ತನ್ನ ಹುಡುಗಿಯೊಂದಿಗೆ ಊರೆಲ್ಲ ಸುತ್ತಾಡಿ ಐಶಾರಾಮಿ ಹೋಟೆಲ್ಲಿನಲ್ಲಿ ಊಟ ಮಾಡಿ ವಾಪಸ್ ಮನೆಗೆ ಬರುವಾಗ ರಾತ್ರಿ, ತನ್ನ ಅಪ್ಪನ ನೆನಪು, ಹೋಗಿ ಕರೆದುಕೊಂಡು ಬಂದು ಅಲ್ಲೇ ಮನೆಯ ಪಕ್ಕದಲ್ಲಿ ತಳ್ಳುವ ಗಾಡಿಯಲ್ಲಿ ಮಾಡಿದ ಊಟವನ್ನು ತಂದು ತಂದೆಗೆ ಕೊಟ್ಟಾದ ಮೇಲೆ ತಂದೆಯ ಹತ್ತಿರ ಸ್ವಲ್ಪ ಯೋಗಕ್ಷೇಮ, ಆಮೇಲೆ ತಾನು ನಿದ್ರಾದೇವಿಗೆ ಶರಣು, ತಂದೆಯ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಮಾತುಗಳೆಲ್ಲವೂ ಕಣ್ಣೀರಿನ ರೂಪದಲ್ಲಿ ಧರೆಗೆ, ಅವನ ಅಮ್ಮನ ಕಾಯಿಲೆ, ತಂಗಿಯ ಕಾಯಿಲೆ, ಬೆಳಗ್ಗೆ ಎದ್ದವನೇ ಆಫೀಸಿಗೆ ರೆಡಿ, ಅಪ್ಪನಿಗೆ ಹತ್ತಿರದಲ್ಲೇ ಇರುವ ಬಸ್ ಸ್ಟಾಪ್ ಹೇಳಿ ಹೊರಟ ಅವನು ಸೀದಾ ಹೋದದ್ದು ಗೆಳತಿಯ ಹತ್ತಿರ, ಕಾಲಚಕ್ರ ಉರುಳುತ್ತಿತ್ತು, ಇವನು ತನ್ನ ಗೆಳತಿಯೊಂದಿಗೆ ಮದುವೆಯಾಗಿಬಿಟ್ಟ, ತನ್ನ ಕುಟುಂಬದವರನ್ನು ಕರೆಯಲೇ ಇಲ್ಲ, ಕಾರಣಗಳು ತುಂಬಾ ಇದ್ದವು, ತನ್ನ ತಂಗಿಯ ಮದುವೆಯ ಜವಾಬ್ದಾರಿ, ಮನೆಯಲ್ಲಿದ್ದ ಬಡತನ, ತಾನು ಮದುವೆಯಾಗಲಿದ್ದ ಹುಡುಗಿಯ ಜಾತಿ, ಆ ಹುಡುಗಿಯ ಮನೆಯಿಂದಲೂ ಯಾರು ಬಂದಿರಲಿಲ್ಲ, ವಿಷಯ ತಿಳಿದ ಅವನ ಅಪ್ಪ ಅಮ್ಮ ಸ್ವಲ್ಪ ದಿನ ಪರಿತಪಿಸಿದರು, ಸ್ವಲ್ಪ ದಿನಗಳ ನಂತರ ಮಗಳ ಮದುವೆ ಮಾಡಿದರು, ಇತ್ತ ಇವನ ಸಂಸಾರ ಮೊದಮೊದಲು ಚೆನ್ನಾಗಿ ನಡೆಯುತ್ತಿತ್ತು, ಒಂದೆರಡು ವರ್ಷ ಅಲ್ಲಿ ಇಲ್ಲಿ ತಿರುಗಾಟ, ಸಿನೆಮಾ, ಪಾರ್ಟಿ, ಕಾರು, ಸ್ವಂತ ಮನೆ, ಹೀಗೆ ಸಾಲವೂ ಏರುತ್ತಲೇ ಹೋಯಿತು, ಅದಾದ ಕೆಲವು ದಿನಗಳಲ್ಲಿಯೇ ಆರ್ಥಿಕ ಹಿಂಜರಿತದಿಂದ ಇಬ್ಬರ ಕೆಲಸಕ್ಕೂ ಕುತ್ತು ಬಂತು, ಇತ್ತ ಸಾಲಗಾರರು ಪೀಡಿಸುತ್ತಿದ್ದರು, ಕೆಲಸ ಹುಡುಕಿ ಹುಡುಕಿ ಸುಸ್ತಾಗಿ, ಬೇರೆ ಏನೂ ಕೆಲಸ ತಿಳಿಯದಿದ್ದ ಇವರು ಇದ್ದ ಮನೆ, ಕಾರು, ಬೈಕ್ ಎಲ್ಲ ಮಾರಿ ಊರಿನ ಕಡೆ ಹೆಜ್ಜೆ ಹಾಕಿದರು, ಅಮ್ಮ ಆಗಲೇ ಈ ಲೋಕವನ್ನು ಬಿಟ್ಟು ಹೋಗಿದ್ದಳು, ಅಪ್ಪ ಇದ್ದ ಜಮೀನಿನಲ್ಲೆ ಗುತ್ತಿಗೆ ಮಾಡಿಸಿ ಜೀವನ ಸಾಗಿಸುತ್ತಿದ್ದ, ಇವರಿಬ್ಬರೂ ಈಗ ಆ ಜಮೀನನ್ನೇ ತಮ್ಮ ಜೀವನೋಪಾಯಕ್ಕಾಗಿ ಅವಲಂಬಿಸಿದ್ದಾರೆ.

ಬರಿಯ ನಿನ್ನ ಚಿತ್ರ

ನಿನ್ನ ನಗುವ ನೋಡಿ
ನಾನಾದೆ ಮೋಡಿ

ನಿನ್ನ ಮೊಗದ ಅಂದ
ತರಿಸಿತು ನನಗಾನಂದ

ನಿನ್ನ ಸ್ನಿಗ್ಧ ಚೆಲುವು
ಮೂಡಿಸಿದೆ ನನ್ನಲ್ಲಿ ಒಲವು

ನಿನ್ನ ಮುಗುಳ್ನಗೆ
ಸದಾ ಇರಲಿ ಹಾಗೆ

ನಾನಿನ್ನೂ ನಿನ್ನ ನೋಡಿಲ್ಲ
ಆದರೆ ಆಕರ್ಷಣೆಗಳಿಗೆ ಬರವಿಲ್ಲ

ಬರಿಯ ನಿನ್ನ ಚಿತ್ರ
ಕೆಡಿಸಿದೆ ನನ್ನ ಚಿತ್ತ

ನಿನ್ನ ಭೇಟಿಯಾಗುವವರೆಗೂ
ಸುರಿಯುತ್ತಿರಲೀ ನೆನಪುಗಳ ರಂಗು