ಇದು ನನ್ನ ಮೊದಲ ಕಥೆ (ಮೊದಲು ಕೆಲವು ಬರೆದಿದ್ದೆ ಆದರೆ ಅವೆಲ್ಲ ಹಾಸ್ಯ ಲೇಖನಗಳಾಗಿದ್ದವು), ತಮ್ಮ ಸಲಹೆ ಮತ್ತು ಅಭಿಪ್ರಾಯಗಳ ನಿರೀಕ್ಷೆಯಲ್ಲಿ.
ಐ ಲವ್ ಯು ನಂದಿನಿ.
ಇದು ಕಥೆಯ ಮಧ್ಯಭಾಗದ ಮುಂಚೆ ಬರೋ ಕೊನೇ ಸೀನ್.
ವೀಕೆಂಡ್, ಶನಿವಾರ ಸಂಜೆ ೫ ಗಂಟೆ, ತನ್ನ ರೂಮ್ಮೇಟ್ ರೂಪಾಳಿಗೆ ತಾನು ಮಲ್ಲೇಶ್ವರಂಗೆ ಹೋಗುವುದಾಗಿ ಹೇಳಿ ಜೀನ್ಸ್ ಟಾಪ್ ಏರಿಸ್ಕೊಂಡು ತನ್ನ ಸ್ಕೂಟಿ ತಗೊಂಡು ವುಮೆನ್ಸ್ ಹಾಸ್ಟೆಲ್ಲಿಂದ ಹೊರಟಳು. ನವರಂಗ್ ಸಿಗ್ನಲ್ ಬಂತು, ಗಾಡಿ ನಿಲ್ಸಿದ್ಲು. ಪಕ್ಕದಲ್ಲಿ ಒಂದು ಆಟೋ ಬಂದು ನಿಲ್ತು, ಅದರೊಳಗಿದ್ದ ವ್ಯಕ್ತಿ 'ಮೇಡಂ, ಈ ಅಡ್ರೆಸ್ ಎಲ್ಲಿ ಬರತ್ತೆ ಸ್ವಲ್ಪ ಹೇಳ್ತೀರಾ?'.
ರೈಟ್ ಟರ್ನ್ ತಗೊಂಡು ನವರಂಗ್ ಥಿಯೇಟರ್ ಸ್ಟ್ರೈಟ್ ಹೋಗಿ ಮುಂದೆ ಒಂದು ಸಿಗ್ನಲ್ ಸಿಗತ್ತೆ, ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ಅಲ್ಲಿ ಯಾರನ್ನಾದ್ರೂ ಕೇಳಿ ಹೇಳ್ತಾರೆ.
ಧನ್ಯವಾದ ಮೇಡಂ.
'ಆಂ' ಎಂದಳು ನಂದಿನಿ, ಬೆಂಗ್ಳೂರಲ್ಲಿ ಥ್ಯಾಂಕ್ ಯು ಅಂತ ಹೇಳಿರೋರನ್ನ ಕೇಳಿದೀನಿ, ಇದೇನಪ್ಪ ಡಿಫ್ರೆಂಟ್ ಅನ್ನೊಷ್ಟೊತ್ತಿಗೆ ಸಿಗ್ನಲ್ ಬಿತ್ತು, ಸ್ಕೂಟಿ ಸ್ಟಾರ್ಟ್ ಮಾಡ್ಕೊಂಡು ಹೊರಟ್ಲು.
ಸಂಪಿಗೆ ರೋಡ್ ಸುತ್ತು ಹಾಕಿಕೊಂಡು ಬಂದು ೮ನೇ ಕ್ರಾಸ್ಗೆ ಎಂಟ್ರಿ ಆಗ್ಬೇಕು...
.....................................
ಊರಿಂದ ಬಂದ ಗೆಳೆಯ ಗೌಡ ಮತ್ತೆ ರೂಮ್ಮೇಟ್ ಸಂದೇಶನ ಜೊತೆ ಮಧ್ಯಾಹ್ನ ನಳಪಾಕಕ್ಕೆ ಊಟಕ್ಕೆ ಹೋಗಿ ಗಡದ್ದಾಗಿ ಊಟ ಮಾಡಿ ರೂಮಿಗೆ ಬಂದು ಹಾಸಿಗೆ ಮೇಲೆ ಬಿದ್ದ ಶ್ಯಾಮ್ ಏಳುವಾಗ ಸಂಜೆ ೪.೩೦ ಆಗಿತ್ತು.
ಎದ್ದು ನೋಡ್ತಾನೆ , ಇಬ್ರೂ ಇರ್ಲಿಲ್ಲ.
ಫ್ರೆಶ್ ಆದ್ಮೇಲೆ ಸಂದೇಶಂಗೆ ಕಾಲ್ ಮಾಡಿ 'ಮಗಾ, ಎಲ್ಲಿ ಹೋಗಿದೀಯೋ ಮಲ್ಲೇಶ್ವರಂ ಕಡೆ ಹೋಗ್ತಿದೀನಿ, ಬರ್ತೀಯಾ?'
ಆ ಕಡೆಯಿಂದ 'ಇಲ್ಲ ಮಗ ಬರಲ್ಲ, ಅಕ್ಕನ ಮನೇಲಿ ಇದ್ದೀನಿ. ನೀನು ಮಲ್ಕೊಂಡಿದ್ಯಲ್ಲ ಹಾಗಾಗಿ ಹೇಳ್ದೆ ಹೋದೆ'
'ಸರಿ ಬಿಡು ನಾನೊಬ್ನೇ ಹೋಗಿ ಬರ್ತೀನಿ' ಅಂದು ಕಾಲ್ ಕಟ್ ಮಾಡಿ ಪಲ್ಸರ್ ಸ್ಟಾರ್ಟ್ ಮಾಡ್ಕೊಂಡು ಹೊರಟ.
ಸಂಪಿಗೆ ರೋಡ್ ಹತ್ರ ಹೋದ, ೮ನೇ ಕ್ರಾಸ್ ಹತ್ತಿರ ಬರ್ತಿದ್ದ ಹಾಗೇ ಜೇಬಲ್ಲಿ ದುಡ್ಡಿಲ್ಲ ಅನ್ನೋದು ಜ್ಞಾಪಕಕ್ಕೆ ಬಂತು. ಏನಪ್ಪಾ ಮಾಡೋದು ಅಂತ ಯೋಚಿಸುತ್ತಿದ್ದವನಿಗೆ ೮ನೇ ಕ್ರಾಸ್ ಪಕ್ಕದಲ್ಲಿ ಎಸ್.ಬಿ.ಐ ಏ.ಟಿ.ಎಂ ಇರೋದು ಜ್ಞಾಪಕಕ್ಕೆ ಬಂತು, ೮ನೇ ಕ್ರಾಸಿಗೆ ಗಾಡಿ ನುಗ್ಸಿದ, ಅರ್ಧ ದಾರಿಗೆ ಬರೋವಷ್ಟರಲ್ಲಿ ಗೊತ್ತಾಯ್ತು ಅದು ಒನ್ ವೇ, ತಾನು ಬರ್ತಿರೋದು ರಾಂಗ್ ಸೈಡ್ನಲ್ಲಿ ಅಂತ.
ಅರ್ಧ ಬಂದಾಗಿದೆ, ಬೇಗ ಹೋಗ್ಬಿಡೋಣ ಅಂತ ಗಾಡಿ ನುಗ್ಗಿಸ್ದ.
………………………………………………………………
ಅದೇ ಸಮಯಕ್ಕೆ ನಂದಿನಿ ಎದರುಗಡೆಯಿಂದ ೮ನೇ ಕ್ರಾಸ್ಗೆ ಬರೋಕೆ ಲೆಫ್ಟ್ ಟರ್ನ್ ತಗೊಳ್ತಿದ್ಲು. ಧಿಡೀರ್ ಬಂದ ಸ್ಕೂಟಿ, ತನ್ನ ವೇಗ ಬೇರೆ. ಗಾಡಿ ಕಂಟ್ರೋಲ್ ಮಾಡೋಕಾಗದೆ ಶ್ಯಾಮ್ ಹೋಗಿ ಸ್ಕೂಟಿಗೆ ಗುದ್ದಿದ. ನಂದಿನಿ ಬಿದ್ಲು.
ಸಾವರಿಸಿಕೊಂಡು ಶ್ಯಾಮ್ ಎದ್ದು ಅವಳನ್ನ ಹಿಡಿದು ಎಬ್ಬಿಸಿದ.
ಸ್ವಲ್ಪ ಕೈ ಗಾಯ ಆಗಿತ್ತು ಅವ್ಳಿಗೆ 'ಏಯ್, ಕಣ್ಣು ಕಾಣಲ್ವ, ಒನ್ ವೇ ಬೇರೆ ಅದ್ರ ಜೊತೆಗೆ ಫಾಸ್ಟಾಗಿ ಬರ್ತಾನೆ. ೮ನೇ ಕ್ರಾಸಲ್ಲಿ ಎಲ್ಲ ನೋಡಲಿ ಅಂತ ಬಿಲ್ಡಪ್ಪ'
ಲಕ್ಷಣವಾಗಿದ್ದ ಅವಳನ್ನೇ ನೋಡುತ್ತಿದ್ದ ಶ್ಯಾಮ್ಗೆ ಅವಳು ಹೇಳಿದ ಮಾತುಗಳು ಕೇಳಿಸಲಿಲ್ಲ.
ಹೆಲೋ ಮಿಸ್ಟರ್, ಕನಸು ಕಾಣ್ತಿದೀರಾ?
'ಸಾರಿ ಮೇಡಂ, ತಪ್ಪಾಯ್ತು'
'ಅದೆಲ್ಲ ಗೊತ್ತಿಲ್ಲ, ಮೊದ್ಲು ನಡೀರಿ ಪೋಲಿಸ್ ಸ್ಟೇಶನ್ಗೆ'.
'ಇಷ್ಟಕ್ಕೆಲ್ಲ ಪೋಲಿಸ್ ಸ್ಟೇಶನ್ಗೆ ಏನಕ್ಕೆ ಮೇಡಂ?'
'ಯಾಕೆ, ಸಾಯ್ಸಾದ್ಮೇಲೆ ಹೋಗಣ ಅಂದ್ಕೊಂಡ್ರ?, ನಡೀರಿ ಸುಮ್ನೆ'.
'ಮೇಡಂ, ಹೊರಗಡೆನೆ ಡೀಲ್ ಮಾಡ್ಕೊಳ್ಳೋಣ' ಈ ಸಲ ಧ್ವನಿ ಸ್ವಲ್ಪ ಸಣ್ಣಗಿತ್ತು.
ಇವಳಿಗೆ ಏನನ್ಸ್ತೋ ಏನೋ 'ಸರಿ' ಅಂದ್ಲು.
'ಪಕ್ಕದಲ್ಲೇ ಇರೋ ಕಾಫಿ ಶಾಪಿಗೆ ಹೋಗೋಣ ಬನ್ನಿ, ನಿಮಗೆ ಬೇರೆ ಪೆಟ್ಟು ಬಿದ್ದಿದೆ, ಸ್ವಲ್ಪ ಸುಧಾರಿಸಿಕೊಂಡ ಹಾಗೆ ಆಗತ್ತೆ'
ದುರುಗುಟ್ಟಿಕೊಂಡು ನೋಡಿದ್ಲು. ಇವಳಿಗೂ ಕೈ ಬೇರೆ ನೋಯ್ತಿತ್ತು. ಆಮೇಲೆ ಅದೇ ಸರಿ ಅನ್ಸಿ 'ನಡೀರಿ' ಅಂದ್ಲು.
ವೇಟರ್ ಬಂದು ಏನು ಬೇಕು ಅಂದ.
ಎರಡು ಕಾಫಿ, ಶ್ಯಾಮ್ ಹೇಳಿದ
ಕಾಫಿ ಆರ್ಡರ್ ಮಾಡಿದ್ಮೇಲೆ ಶ್ಯಾಮ್ ಎದ್ರಿಗೆ ಕೂತು ಕರ್ಚಿಫ್ನಲ್ಲಿ ಕೈ ಒರೆಸುಕೊಳ್ಳುತ್ತಿದ್ದವಳನ್ನ 'ನಿಮ್ಮ ಹೆಸರೇನು?' ಅಂದ.
ನಂದಿನಿ.
ಒಂದೆರಡು ನಿಮಿಷ ಅಲ್ಲಿ ಮೌನ.
ಅಷ್ಟೊತ್ತಿಗೆ ೨ ಕಾಫಿ ಅಂದು ಸರ್ವರ್ ೨ ಲೋಟ ಇಟ್ಟು ಹೋದ.
ನಿಮ್ಮ ಹೆಸರೇನು?
ಶ್ಯಾಮ್ ಅಂತ, ಸಾಫ್ಟ್ವೇರ್ ಇಂಜಿನ್ಯರ್.
ನಾನು ಹೆಸರು ಮಾತ್ರ ಕೇಳಿದ್ದು.
ಮುಂದಿನದು ಕೇಳ್ತೀರಾ ಅಂತ ಮೊದ್ಲೇ ಹೇಳ್ದೆ.
ಸಣ್ಣಗೆ ನಕ್ಕಳು ನಂದಿನಿ.
ನೀವು ಏನು ಮಾಡ್ತಿದೀರ ಅಂತ ಹೇಳ್ಲಿಲ್ಲ.
ನಾನೂ ಸಾಫ್ಟ್ವೇರ್ ಇಂಜಿನ್ಯರ್ರೆ.
ಕಾಫಿ ಕುಡಿದು ಸ್ವಲ್ಪ ಹೊತ್ತಾದ ಮೇಲೆ ವೇಟರ್ ಬಂದು ಬಿಲ್ ಅಂದು ಇಟ್ಟು ಹೋದ.
ಶ್ಯಾಮ್ ಪರ್ಸ್ ತೆಗೆದ, ನೋಡಿದ್ರೆ ಖಾಲಿ.
ನಂದಿನಿ, ನೀವು ತಪ್ಪು ತಿಳಿದುಕೊಳ್ಳಲಿಲ್ಲ ಅಂದ್ರೆ ಒಂದು ಮಾತು.
ಅದೇನು ಹೇಳಿ .
ನಾನು ಒನ್ ವೇನಲ್ಲಿ ಗಾಡಿ ಓಡ್ಸಿದ್ದು ೮ನೇ ಕ್ರಾಸ್ ಹತ್ತಿರ ಇರೋ ಎಸ್.ಬಿ.ಐ ಏ.ಟಿ.ಎಂ ಹತ್ರ ದುಡ್ಡು ತರೋಕೆ ಅಂತ. ಆಮೇಲೆ ಆಕ್ಸಿಡೆಂಟ್, ಹಾಗಾಗಿ ಜೇಬಲ್ಲಿ ದುಡ್ಡು ಇಲ್ಲ.
ಸರಿ ಬಿಡಿ ನಾನೇ ಕೊಡ್ತೀನಿ.
ಜೊತೆಗೆ ನಿಮ್ಮ ಗಾಡಿ ಡ್ಯಾಮೇಜ್ದು ಕೊಡ್ಬೇಕು, ಏ.ಟಿ.ಎಂನಿಂದ ತೆಗೆದುಕೊಡ್ತೀನಿ.
ಏನು ಬೇಡ ಬಿಡಿ, ಸ್ವಲ್ಪ ಸ್ಕ್ರಾಚ್ ಆಗಿದೆ ಅಷ್ಟೆ.
ಇಲ್ಲ ಇಲ್ಲ ಬನ್ನಿ ಅಂತ ಏ.ಟಿ.ಎಂ ಹತ್ರ ಹೋಗಿ ೫೦೦ ರೂ ದುಡ್ಡು ತೆಗೆದುಕೊಟ್ಟ.
ಇಷ್ಟೆಲ್ಲಾ ಆಗೋ ಹೊತ್ತಿಗೆ ಇವಳಿಗೆ ಊರಿಂದ ಅಪ್ಪ ಕಾಲ್ ಮಾಡಿದ್ರು ಆದ್ರೆ ಈ ಗಜಿಬಿಜಿಲಿ ಎತ್ತೋದಕ್ಕೆ ಆಗಲಿಲ್ಲ.
ಸರಿ ನಾನಿನ್ನು ಹೊರಡ್ತೀನಿ ಅಂದು ನಂದಿನಿ ವಾಪಸ್ ಹಾಸ್ಟೆಲ್ ಕಡೆ ಸ್ಕೂಟಿ ತೆಗೆದುಕೊಂಡು ಹೊರಟಳು.
ಹಾಸ್ಟೆಲ್ಲಿಗೆ ಹೋಗಿ ಅಪ್ಪನಿಗೆ ಕಾಲ್ ಮಾಡಿದಾಗ 'ಇವತ್ತು ರಾತ್ರಿ ಊರಿಗೆ ಹೊರಟು ಬಾ, ನಾಳೆ ಒಬ್ಬ ಹುಡುಗ ಮತ್ತೆ ಅವ್ನ ಕುಟುಂಬದವರು ಬರ್ತಿದ್ದಾರೆ' ಅಂದ್ರು.
ಸರಿ ಅಂದು ಊರಿಗೆ ಹೊರಟಳು ಆ ರಾತ್ರಿ.
ಹೋಗಿ ಹುಡುಗನನ್ನು ನೋಡಿದಳು, ಮಾತನಾಡಿದಳು. ಯಾಕೋ ಇಷ್ಟವಾಗಲಿಲ್ಲ, ಅಪ್ಪನಿಗೆ ತನ್ನ ತೀರ್ಮಾನ ಹೇಳಿ ವಾಪಸ್ ಬೆಂಗಳೂರಿಗೆ ಅವತ್ತು ರಾತ್ರಿ ಹೊರಟ್ಲು.
..................................
ಸ್ವಲ್ಪ ದಿನಗಳಾದ್ಮೇಲೆ, ಒಂದಿನ ಆಫೀಸಿಗೆ ಬಸ್ಸಲ್ಲಿ ಹೋಗಬೇಕಾದ್ರೆ ಪಕ್ಕದ ಸೀಟಲ್ಲಿ ಒಬ್ಬ ಬಂದು ಕೂತ.
ಏನ್ರೀ ನಂದಿನಿ ಹೇಗಿದ್ದೀರ?
ಬಸ್ಸಲ್ಲಿ ಯಾರಪ್ಪ ಇದು ಅಂತ ತಿರುಗಿ ನೋಡಿದ್ರೆ ಆಕ್ಸಿಡೆಂಟ್ ಮಾಡಿದ ಆಸಾಮಿ.
ಚೆನ್ನಾಗಿದೀನಿ ಕಣ್ರೀ ಶ್ಯಾಮ್. ಮತ್ತೆ ಒನ್ ವೇಲಿ ಬಂದು ಆಕ್ಸಿಡೆಂಟ್ ಮಾಡ್ಬೇಡ್ರಿ ಅಂತ ನಕ್ಕಳು.
ಅವನೂ ಸಹ,
ನೋಡ್ರೀ ಅವತ್ತು ಆಕ್ಸಿಡೆಂಟ್ ಆಗಿದ್ದಕ್ಕೆ ತಾನೇ ನೀವು ನಂಗೆ ಪರಿಚಯ ಆಗಿದ್ದು.
ಹೌದು ಹಾಗಂತ ಯಾವಾಗ್ಲೂ ಹಾಗೆ ಹೋಗ್ಬೇಡಿ, ನನ್ನಂತ ಒಳ್ಳೆಯವ್ರೇ ಯಾವಾಗ್ಲೂ ಸಿಗಲ್ಲ.
ಇಲ್ಲ ಬಿಡಿ ಇನ್ನು ಹೋಗಲ್ಲ.
ನಾನು ಯಾವಾಗ್ಲೂ ಇದೆ ಬಸ್ಸಲ್ಲಿ ಹೋಗೋದು ನಿಮ್ಮನ್ನ ಇದೆ ಮೊದ್ಲು ನೋಡ್ತಿರೋದು ಇಲ್ಲಿ.
ನಮ್ಮ ಆಫೀಸ್ ಇಲ್ಲಿಗೆ ಶಿಫ್ಟ್ ಆಯ್ತು, ಹಾಗಾಗಿ ಇನ್ಮೇಲೆ ಈ ಬಸ್ಸೇ, ನೀವು ಬೇರೆ ಇದೀರಾ, ಬಸ್ಸಲ್ಲಿ ಒಳ್ಳೆ ಕಂಪನಿ ಬಿಡಿ.
ದಿನಾ ಬಸ್ಸಿನಲ್ಲಿ ಭೇಟಿಯಾಗುತ್ತಿದ್ದರು, ಮೊಬೈಲ್ ನಂಬರ್ ಎಕ್ಸ್ಚೆಂಜ್ ಆಯ್ತು.
ಅಂದು ಶುಕ್ರವಾರ.
ಹೀಗೆ ಮಾತಾಡ್ತಾ ಶ್ಯಾಮ್ 'ನಂದಿನಿ, ವೀಕೆಂಡ್ ಏನು ಪ್ಲಾನ್'
ಏನಿಲ್ಲ.
ನಾಳೆ ಮಲ್ಲೇಶ್ವರಂ ಐನಾಕ್ಸಲ್ಲಿ ಯಾವ್ದಾದ್ರೂ ಫಿಲಂ ನೋಡೋಣ?
ಸಂಜೆ ನನ್ನ ಫ್ರೆಂಡ್ ಕೇಳ್ತೀನಿ, ಆಮೇಲೆ ಕಾಲ್ ಮಾಡ್ತೀನಿ.
ಅವ್ರು ಬರ್ಲೆಬೇಕಾ?
ಅವ್ಳು ಎಲ್ಲಿಗಾದ್ರೂ ಬರೋದೆ ಕಡಿಮೆ. ಅಕಸ್ಮಾತ್ ಬರಲ್ಲ ಅಂದ್ರು ನಾನು ಬಹುಷಃ ಬರ್ತೀನಿ.
ಆಯ್ತು ನಾಳೆ ನಿಮ್ಮ ಹಾಸ್ಟೆಲ್ ಹತ್ರ ಬಂದು ನಿಮ್ಮನ್ನ ಪಿಕ್ ಮಾಡ್ತೀನಿ.
ಅದೇನು ಬೇಡ ನಾನೇ ಮಂತ್ರಿ ಮಾಲ್ ಹತ್ರ ಬರ್ತೀನಿ, ಅದ್ಕೂ ಮುಂಚೆ ಯಾವ್ದಕ್ಕೂ ಒಂದ್ಸಲ ಕಾಲ್ ಮಾಡ್ತೀನಿ.
ಸರಿ ಹಾಗೆ ಆಗ್ಲಿ ಅಂದ ಶ್ಯಾಮ್.
ಶನಿವಾರ ನಂದಿನಿಗೆ ಏನೂ ಕೆಲಸ ಇಲ್ದಿದ್ರಿಂದ ಫಿಲಂ ನೋಡೋದಕ್ಕೆ ಹೋದ್ಲು.
ಶ್ಯಾಮ್ ಜೊತೆ ಸ್ವಲ್ಪ ಮಂತ್ರಿ ಮಾಲ್ನಲ್ಲಿ ತಿರುಗಾಡಿ ಒಟ್ಟಿಗೆ ಫಿಲಂ ನೋಡಿದ್ರು.
ಹೀಗೆ ಕೆಲವು ವೀಕೆಂಡ್ ಸಿನೆಮಾ, ಮಾಲ್, ಹೋಟೆಲ್ ಅಂತ ಸಾಗಿತು
ಒಂದು ವೀಕೆಂಡ್ ಶ್ಯಾಮ್ ಸ್ಯಾಂಕಿ ಟ್ಯಾಂಕ್ಗೆ ಹೋಗೋಣ ಅಂದ.
ಸರಿ ಅಂದಿದ್ಲು ನಂದಿನಿ.
ಅವತ್ತು ಭಾನುವಾರ ಇಬ್ಬರೂ ಸ್ಯಾಂಕಿ ಟ್ಯಾಂಕ್ ಒಂದು ರೌಂಡ್ ಹೊಡೆದು ಅಲ್ಲೇ ಒಂದು ಕಡೆ ಕೂತ್ಕೊಂಡರು.
ಸ್ವಲ್ಪ ಹೊತ್ತು ಹಾಗೆ ಮೌನವಾಗಿದ್ದರು.
ಮೌನ ಮುರಿದ ಶ್ಯಾಮ್ 'ನಂದಿನಿ, ನಿನ್ನ್ಹತ್ರ ಒಂದು ವಿಷ್ಯ ಹೇಳ್ಬೇಕಿತ್ತು'
ಹೇಳೋ....
ಅದೂ ಅದೂ
ಅದೇನು ಹಾಗೆ ತಡವರಿಸ್ತಿದೀಯ, ನೀಟಾಗಿ ಹೇಳು.
'ಐ ಲವ್ ಯು ನಂದಿನಿ'
ಅವನ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಸ್ಯಾಂಕಿ ಟ್ಯಾಂಕನ್ನು ವೀಕ್ಷಿಸುತ್ತಿದ್ದ ಅವಳು ಸಡನ್ನಾಗಿ ಇವನತ್ತ ತಿರುಗಿದಳು.
..............................
ಆಕ್ಸಿಡೆಂಟ್ ಆಗಿ ೨ ದಿನ ಆಗಿತ್ತು. ಅಂದು ಸೋಮವಾರ ಕೆಲಸ ಮುಗಿಸಿ ಮೋದಿ ಆಸ್ಪತ್ರೆ ಹತ್ತಿರ ಬಸ್ಸಿನಿಂದ ಇಳಿದಳು.
ಮಾಮೂಲಿಯಂತೆ ಕದಂಬ ಹೋಟೆಲ್ಲಿಗೆ ಹೋಗಿ ಕಾಫಿ ಕುಡಿಯುತ್ತಾ ಕೂತಳು. ಹಾಗೆ ಸುಮ್ಮನೆ ಕಣ್ಣು ಹಾಯಿಸುತ್ತಿದ್ದಾಗ ಪಕ್ಕದ ಬೆಂಚಿನಲ್ಲಿ ಕುಳಿತ ವ್ಯಕ್ತಿಯನ್ನೊಮ್ಮೆ ನೋಡಿದಳು. ಎಲ್ಲೋ ನೋಡಿದ ನೆನಪು, ಹಾ, ಮೊನ್ನೆ ಅಡ್ರಸ್ ಕೇಳಿದ ಹುಡುಗ.
ಅಲ್ಲೇ ಹೋಗಿ 'ನೆನ್ನೆ ಅಡ್ರಸ್ ಕೇಳಿದ್ರಲ್ಲ, ಸಿಕ್ತೇನ್ರಿ?
ಓ ನೀವಾ ಮೇಡಂ ಬನ್ನಿ ಕೂತ್ಕೊಳ್ಳಿ.
ಹೂ ಸಿಕ್ತು ಕಣ್ರೀ.
ನಾನು ಸಾಗರ್, ನಿಮ್ಮ್ಹೆಸ್ರು?
ನಂದಿನಿ.
ಕಾಫಿ ಕೊಡ್ಸೋಣ ಅಂದ್ರೆ ಆಗ್ಲೇ ಕುಡೀತಿದೀರ ಎಂದ ಸಾಗರ್.
ಓ ಪರವಾಗಿಲ್ಲ ಬಿಡಿ,
ನಾನು ಸಂಜೆ ಯಾವಾಗಲೂ ಕೆಲಸ ಮುಗಿಸಿಬಂದ್ಮೇಲೆ ಇಲ್ಲಿಗೆ ಕಾಫಿ ಕುಡಿಯೋಕೆ ಬರೋದು, ನೀವು ಇದೆ ಟೈಮಿಗೆ ಬಂದ್ರೆ ನಾಳೆ ಕೊಡಿಸ್ಬಹುದು.
ನಾನು ಸಂಜೆ ಇದೇ ಟೈಮಿಗೆ ಬರ್ತೀನಿ, ಆಸ್ಪತ್ರಯಿಂದ ಹೊರಗಡೆ ಬರೋದೆ ಇಷ್ಟೊತ್ತಿಗೆ.
ಆದ್ರೆ ನೆನ್ನೆ ಮೊನ್ನೆನೂ ಬಂದಿದ್ದೆ, ನೀವು ಕಾಣಲಿಲ್ಲ.
ಮೊನ್ನೆ ಸ್ವಲ್ಪ ಸಣ್ಣ ಆಕ್ಸಿಡೆಂಟ್ ಆಗಿತ್ತು ಹಾಗಾಗಿ ಬರ್ಲಿಲ್ಲ.
ಎಲ್ಲಿ, ಏನಾಯ್ತು?
ಏನಿಲ್ಲ, ಮೊನ್ನೆ, ಅದೇ ನೀವು ಅಡ್ರಸ್ ಕೇಳಿದ ದಿನ, ಮಲ್ಲೇಶ್ವರಂ ಹತ್ರ ಹೋಗೋವಾಗ ಯಾರೋ ಒಬ್ಬ ರಾಂಗ್ ಸೈಡಲ್ಲಿ ಬಂದು ಗುದ್ದಿದ, ಸ್ವಲ್ಪ ಕೈಗೆ ಪೆಟ್ಟಾಗಿತ್ತು ಈಗ ಪರ್ವಾಗಿಲ್ಲ.
ಅದಿರ್ಲಿ, ಆಸ್ಪತ್ರೆ ಅಂದ್ರಲ್ಲ, ಹುಷಾರಿಲ್ವ ನಿಮ್ಗೆ.
ಇಲ್ಲ ನಾನು ಚೆನ್ನಾಗಿದೀನಿ, ನಮ್ಮಮ್ಮನ್ನ ಆಸ್ಪತ್ರೆಗೆ ಅಡ್ಮಿಟ್ ಮಾಡಿದೀನಿ, ಕಣ್ಣು ಆಪರೇಷನ್ ಇದೆ ಹಾಗಾಗಿ.
ಮತ್ತೆ ಯಾವಾಗ ಆಪರೇಷನ್?
ಇನ್ನೊಂದೆರಡು ದಿನದಲ್ಲಿ ಅಂದಿದ್ದಾರೆ, ಅದಾದ್ಮೇಲೆ ೧೫-೨೦ ದಿನ ಇರ್ಬೇಕಂತೆ.
ಮತ್ತೆ ಅವ್ರಿಗೆ ತಿಂಡಿ ಊಟ ಎಲ್ಲ ಹೇಗೆ?
ಎಲ್ಲ ಆಸ್ಪತ್ರೆಯಲ್ಲೇ ಕೊಡ್ತಾರೆ. ನಾನು ಹೀಗೆ ಹೋಟೆಲ್ನಲ್ಲಿ.
ಓ ಕೆ. ಮತ್ತೆ ನೀವೇನು ಮಾಡ್ಕೊಂಡಿರೋದು.
ನಾನು ಊರಲ್ಲಿ ತೋಟ ಗದ್ದೆ ನೋಡ್ಕೊಂಡು ಇದ್ದೀನಿ.
ನೀವು?
ನಾನು ಸಾಫ್ಟ್ವೇರ್ ಇಂಜಿನ್ಯರ್. ಇಲ್ಲೇ ವುಮೆನ್ಸ್ ಹಾಸ್ಟೆಲ್ಲಲ್ಲಿ ಇದ್ದೀನಿ.
ನಿಮ್ಮ ಕೆಲ್ಸನೇ ವಿಚಿತ್ರ ಅಲ್ವೇನ್ರಿ, ಯಾವಾಗ್ಲೂ ಕಂಪ್ಯೂಟರ್ನಲ್ಲೇ ಮುಳ್ಗಿರ್ತೀರ, ಹೊರಗಡೆ ಏನು ಆಗಿರತ್ತೆ ಅಂತ ಗೊತ್ತಾಗಲ್ಲ. ನಮ್ಮ ಕೆಲಸಕ್ಕೂ ನಿಮ್ಮ ಕೆಲಸಕ್ಕೂ ಭಾರೀ ಅಜಗಜಾಂತರ.
ನಿಜ ಕಣ್ರೀ, ನಾನೂ ಕೆಲಸ ಸಿಗೊಕಿಂತ ಮೊದ್ಲು ಆರಮಾಗಿದ್ದೆ ಅನ್ಸ್ತಿತ್ತು, ಸೇರಾದ್ಮೇಲೆ ನೀವು ಹೇಳಿದ ಹಾಗೆ ಅದರಲ್ಲೇ ಮುಳುಗಿಹೋಗಿದೀನಿ.
ಸರಿ ಸಾಗರ್ ನಾನಿನ್ನು ಬರ್ತೀನಿ, ಸಿಗುವ ನಾಳೆ.
ಆಯ್ತು ಹೋಗ್ಬನ್ನಿ.
ಒಂದೆರಡು ದಿನ ಹೀಗೆ ಭೇಟಿ ಆದ್ರು.
ಒಂದಿನ ಇಬ್ರೂ (ಸಾಗರ್ ಮತ್ತೆ ನಂದಿನಿ) ಭೇಟಿಯಾದಾಗ ಆಪರೇಷನ್ ಸಕ್ಸಸ್ ಆಗಿದ್ದು ಹೇಳ್ದ. ಇನ್ನೊಂದು ೨೦ ದಿನ ಆದ್ಮೇಲೆ ಡಿಸ್ಚಾರ್ಜ್ ಅಂತೆ.
ತುಂಬಾ ಖುಷಿಯಾಯ್ತು ಕೇಳಿ ಅಂದ್ಲು ನಂದಿನಿ.
ಕಾಫಿ ಕುಡಿತೀರಲ್ಲ?
ಅಫ್ಕೋರ್ಸ್ ಅದ್ಕೆ ಬಂದಿರೋದಿಲ್ಲಿಗೆ.
ಸರಿ ಹಾಗಿದ್ರೆ ಅಂದು ಸಾಗರ್ ವೇಟರ್ ಹತ್ತಿರ ಬಂದಾಗ ಎರಡು ಕಾಫಿ ಆರ್ಡರ್ ಮಾಡಿದ.
ಸಾಗರ್ ನಂದಿನ ಕಡೆ ತಿರುಗಿ, ಆಮೇಲೆ ನಂದಿನಿಯವ್ರೆ ಮಲ್ಲೇಶ್ವರಂ ಸೇವಾ ಸದನದಲ್ಲಿ ಭರತನಾಟ್ಯ ಇದೆ ಅಂತ ಪೇಪರ್ನಲ್ಲಿ ನೋಡಿದೆ, ನಿಮಗೆನಾದ್ರೂ ಇಂಟರೆಸ್ಟ್ ಇದ್ದು ನೀವು ನಾಳೆ ಸಂಜೆ ಫ್ರೀ ಇದ್ರೆ ಬನ್ನಿ ಹೋಗೋಣ, ನಾನಂತೂ ಹೋಗ್ತೀನಿ.
ಖಂಡಿತ ಬರ್ತೀನಿ ಸಾಗರ್, ನಾನು ಈ ತರದ ಯಾವದೇ ಕಾರ್ಯಕ್ರಮಕ್ಕೆ ಹೋಗಿಲ್ಲ, ನಾಳೆ ಬಂದೆ ಬರ್ತೀನಿ ಅಂದ್ಲು.
ಯಾವ್ದಕ್ಕೂ ನಿಮ್ಮ ನಂಬರ್ ಕೊಡಿ ಅಂತ ನಂದಿನಿ ಸಾಗರ್ ನಂಬರ್ ತೆಗೆದುಕೊಂಡಿದ್ದಳು.
ಸರಿ ಹಾಗಿದ್ರೆ ಹೋಟೆಲ್ ಹತ್ರಾನೆ ಕಾಯ್ತಿರ್ತೀನಿ ನಿಮಗೆ.
ಆಯ್ತು ಹಾಗಿದ್ರೆ ನಾಳೆ ಸಿಗೋಣ ಎಂದ ನಂದಿನಿ ಹಾಸ್ಟೆಲ್ ಕಡೆ ಹೊರಟ್ಲು.
ಮಾರನೇ ದಿನ ಸಂಜೆ ಸೇವಾ ಸದನಕ್ಕೆ ಭರತನಾಟ್ಯ ನೋಡೋದಕ್ಕೆ ಇಬ್ಬರೂ ಹೋದ್ರು. ಕಾರ್ಯಕ್ರಮ ಮುಗಿದಾಗ ನಂದಿನಿಗೆ ತಾನು ಬೆಂಗಳೂರಿನಲ್ಲಿದ್ದು ಇವೆಲ್ಲವನ್ನೂ ಮಿಸ್ ಮಾಡ್ಕೊತಿದೀನಲ್ಲ ಅಂತ ಬೇಜಾರಾಯ್ತು ಜೊತೆಗೆ ಸಾಗರ್ಗೆ ಥ್ಯಾಂಕ್ಸ್ ಹೇಳಿದ್ಲು.
ಹೀಗೆ ಸಾಗರ್ ತಾನಿದ್ದ ಸ್ವಲ್ಪ ದಿನಗಳಲ್ಲಿಯೇ ಸಂಗೀತ, ನಾಟಕ, ನೃತ್ಯ ಅಂತ ನಂದಿನಿಯನ್ನು ಕರೆದುಕೊಂಡು ಹೋದ.
ಕೊನೆಗೆ ಒಂದಿನ ಸಾಗರ್ ಹೊರಡುವ ದಿನ ಬಂತು, ನಂದಿನಿ ಬೇಜಾರು ಆಗಿದ್ಲು.
ಬೆಂಗಳೂರಿಗೆ ಮತ್ತೆ ಯಾವಾಗಲಾದರೂ ಬಾ ಎಂದು ಅವನನ್ನು ಬೀಳ್ಕೊಟ್ಟಳು
...........................
ಸ್ವಲ್ಪ ತಿಂಗಳುಗಳಾದ ಮೇಲೆ ಶ್ಯಾಮ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾಗ ಅವನ ಮೊಬೈಲಿಗೆ ಒಂದು ಕರೆ ಬಂತು. ಗೌಡನ ಕಾಲ್.
'ಏನು ಮಗಾ, ಆರಮಾಗಿದೀಯ?, ಕೆಲಸ ಎಲ್ಲಾ ಹೆಂಗಿದೆ? ಆಕಡೆಯಿಂದ ಗೌಡನ ಪ್ರಶ್ನೆ.
ಚೆನ್ನಾಗಿದೀನಿ ಗೌಡ, ಕೆಲಸ ಎಲ್ಲ ಆರಾಮಾಗಿದೆ, ಇದೇನು ಧಿಡೀರ್ ಅಂತ ಕಾಲ್ ಮಾಡಿದೀಯ?
ಹ್ಞೂ ಮಗಾ, ಮುಂದಿನ ಭಾನುವಾರ ನನ್ನ ಮದುವೆ ಖಂಡಿತ ಬರ್ಬೇಕು, ಕಾಗದ ನಾಳೆ ಕಳ್ಸ್ತೀನಿ,ನಮ್ಮೂರಲ್ಲಿ ಪೋಸ್ಟ್ಗಳ ಕಥೆ ನಿಂಗೆ ಗೊತ್ತಲ್ಲ ಅದ್ಕೆ ಯಾವ್ದಕ್ಕೂ ಅಡ್ರಸ್ ಒಂದ್ಸಲ ಬರ್ಕೋ ಮಗಾ.
ಸರಿ ಹೇಳು ಗೌಡ ಎಂದು ಅಡ್ರಸ್ ಬರ್ಕೊಂಡು, ಮದ್ವೆಗೆ ಬರ್ಲೆಬೇಕಲ್ಲಪ್ಪ ಅಂದ.
ಅದೇ ಮತ್ತೆ ಎಂದು ಹೇಳಿ ಗೌಡ ಫೋನ್ ಇಟ್ಟ.
ಭಾನುವಾರ ಬೆಳ್ಗೆ ಬೇಗ ಹೊರಟ ಶ್ಯಾಮ್, ಗೌಡ ಮದುವೆ ಆಗ್ತಿರೋ ಕಲ್ಯಾಣ ಮಂಟಪಕ್ಕೆ ಹೋದ.
ಹುಡುಗ ಹುಡುಗಿ ಹೆಸರು ನೋಡಿದ ಶ್ಯಾಮ್ಗೆ ಯಾವುದೇ ಅನುಮಾನವೂ ಬರಲಿಲ್ಲ, ಆದರೆ ಮುಹೂರ್ತ ಆಗ್ತಿರೋ ಮದುವೆ ಮಂಟಪದ ಹತ್ತಿರ ಹೋಗಿ ನೋಡ್ತಾನೆ ಈಕಡೆ ಗೌಡ (ಸಾಗರ್ ಗೌಡ) ಆಕಡೆ ನಂದಿನಿ.
(ನಂದಿನಿಗೆ ಸಾಗರ್ ತುಂಬಾ ಇಷ್ಟವಾಗಿದ್ದ, ಅವಳೇ ಅವನಿಗೆ ಒಂದಿನ ಕರೆ ಮಾಡಿ ತನ್ನ ಪ್ರೇಮವನ್ನು ತಿಳಿಸಿದ್ದಳು, ಅವನೂ ಒಪ್ಪಿದ. ಶ್ಯಾಮ್ನನ್ನು ಸ್ನೇಹಿತನನ್ನಾಗಿ ಸ್ವೀಕರಿಸಿದ್ದಳು, ಹಾಗೆಯೇ ಅವನ ಪ್ರೇಮವನ್ನು ನಯವಾಗಿ ತಿರಸ್ಕರಿಸಿದ್ದಳು)
No comments:
Post a Comment