೨೦೦೬ನೇ ಇಸವಿ, ಅರಮನೆ ಮೈದಾನದಲ್ಲಿ ಪುಸ್ತಕ ಪ್ರದರ್ಶನ ಇತ್ತು. ನೋಡೋಣ ಅಂತ ನಾನು, ಉಲ್ಲ, ಧೋಪ, ಬಾಬು ಹೋಗಿದ್ವಿ. ಹಾಗೆ ಎಲ್ಲ ನೋಡ್ಕೊಂಡು ಹೋಗ್ತಿದ್ವಿ, ನನಗೆ ಅಲ್ಲಿವರೆಗೂ ಯಾವುದೇ ಕಾದಂಬರಿ ಓದಿದ ಅನುಭವ ಇರ್ಲಿಲ್ಲ, ಹಾಗೆ ಪುಸ್ತಕದ ಮಳಿಗೆಯಲ್ಲಿ ಹಾದುಹೋಗುವಾಗ ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ ಕಣ್ಣಿಗೆ ಬಿತ್ತು. ಬೇರೆ ಲೇಖಕರದ್ದೂ ಇತ್ತು ಆದರೆ ನಮಗೆ ಚಿರಪರಿಚಿತವಾದ ಹೆಸರು ಕುವೆಂಪು.
ನೋಡಿದ ಕೂಡಲೇ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನ ಕೊಂಡುಕೊಳ್ಳುವ ಮನಸ್ಸಾಯಿತು. ಯಾಕೆ?. ಹೆಸರಿನ ಮಹತ್ವವಿರಬೇಕು. ಮಲೆ ಹೆಸರಿಂದು, ಆಮೇಲೆ ಮದುಮಗಳನ್ನ ನೋಡಿ ಕೊಂಡುಕೊಂಡಿದ್ದು ಅನ್ನಬೇಡಿ :).
ನನ್ನೂರು ಮಲೆನಾಡು, ಸಹಜವಾಗಿ ಕುತೂಹಲ ಏನು ಬರೆದಿರಬಹುದು ಅಂತ. ಅಂತೂ ಕೊಂಡುಕೊಂಡು ಬಂದೆ.
ಒಂದು ವೀಕೆಂಡ್ ಓದೋಣ ಅಂತ ತೆಗದ್ರೆ ೭೧೨ ಪುಟಗಳು!!!!!!!. ಕಾದಂಬರಿಯನ್ನ ಓದಲಿಕ್ಕೆ ಶುರುಮಾಡಿರದ ನಾನು ಮೊದಲ ಕಾದಂಬರಿಯ ಅಷ್ಟು ಪುಟಗಳನ್ನ ನೋಡಿ ಸುಸ್ತಾಗಿ ಹೋಗಿದ್ದೆ. ೩೦-೪೦ ಪುಟಗಳನ್ನ ಓದೋಹೊತ್ತಿಗೆ ಸುಸ್ತಾಗಿ ಹೋಗಿದ್ದೆ, ಹಲವು ಪಾತ್ರಗಳು, ಅಬ್ಬ ಆ ಕನ್ನಡ, ಅವುಗಳನ್ನು ಉಚ್ಚಾರಣೆ ಮಾಡುವುದೇ ಭಾರೀ ಕಷ್ಟ. ಇದನ್ನ ನನ್ನ ಕೈಲಿ ಓದುವದಕ್ಕೆ ಆಗುವುದಿಲ್ಲವೆಂದು ಊರಿಗೆ ಹೋಗಿ ಇಟ್ಟಿದ್ದೆ.
ಆಮೇಲೂ ಕೂಡ ಆಗಾಗ ಊರಿಗೆ ಹೋದಾಗ ೫೦-೫೦ ಪುಟಗಳನ್ನ ಓದಿ ಮತ್ತೆ ಇದೆ ಕಥೆ ಅಂದ್ಕೊಂಡು ೫೦-೬೦ ನೆಯ ವಯಸ್ಸಿನಲ್ಲಿ ಓದಿದರಾಯಿತು ಎಂದುಕೊಂಡೆ :).
ಅದಾದ ಮೇಲೆ ತೇಜಸ್ವಿ, ಭೈರಪ್ಪ, ಕಾರಂತ, ಲಂಕೇಶ್ ಇವರ ಕಾದಂಬರಿಗಳನ್ನ ಓದುತ್ತಿದ್ದೆ. ಈ ನಡುವೆ ತುಂಬಾ ಕಾದಂಬರಿಗಳನ್ನ ಓದಿದ ನಾನು ಈ ಸಲ ದೀಪಾವಳಿಗೆ ೯ ದಿನ ರಜೆ ಇದ್ದುದ್ದರಿಂದ ಏನಾದರಾಗಲಿ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದೇಬಿಡುವ ಎಂದು ತೀರ್ಮಾನಿಸಿ ಊರಲ್ಲಿ ಪುಸ್ತಕ ಹಿಡಿದು ಕುಳಿತೆ. ಕಾದಂಬರಿ ಓದಿಸಿಕೊಂಡು ಹೋಯ್ತು. ಅವರು ಉಪಯೋಗಿಸಿರುವ ಕನ್ನಡ ಪದಗಳು, ವಾಕ್ಯಗಳ ರಚನೆ ಅಬ್ಬಬ್ಬ ಅದನ್ನ ಮೀರಿಸುವುದಕ್ಕೆ ಇನ್ನೊಬ್ಬ ಕುವೆಂಪು ಹುಟ್ಟಿ ಬರಬೇಕೇನೋ, ಬಂದರೂ ಕನ್ನಡ ಅನ್ನುವುದು ಕಂಗ್ಲೀಶಾಗಿರುವುದರಿಂದ ಅದು ಅಸಾಧ್ಯ. ನೀವು ಮಲೆನಾಡಿಗರಾಗಿದ್ದರೆ ನಿಮಗೆ ಕಾದಂಬರಿ ಆಪ್ತವಾಗುತ್ತ ಹೋಗುತ್ತದೆ, ಅದರಲ್ಲೂ ನೀವೇನಾದರೂ ಹಳ್ಳಿಯಲ್ಲಿದ್ದು, ತೋಟ, ಗದ್ದೆಯಿದ್ದು ಕೆಲಸ ಮಾಡಿಸಿ ಅನುಭವವಿದ್ದಲ್ಲಿ ನೀವು ಕಾದಂಬರಿಯ ಒಂದು ಅಂಗವಾಗಿದ್ದೀರೆನೋ ಎಂದೆನಿಸಬಹುದು :)
ಎಲ್ಲ ಜಾತಿಯವರೂ ಬಂದು ಹೋಗುತ್ತಾರೆ, ಗೌಡ, ಹೆಗ್ಗಡೆ, ಬ್ರಾಮ್ಹಣ, ದಲಿತ, ಮುಸ್ಲಿಂ.
ಪಾತ್ರದಲ್ಲಿ ಮುಖ್ಯವಾಗಿ ಸೆಳೆಯುವುದೆಂದರೆ ಗುತ್ತಿ ಮತ್ತು ಅವನ ನಾಯಿ. ಗುತ್ತಿಯ ಸಾಹಸಗಳು, ಒಡೆಯನ ಸಾಹಸಕ್ಕೆ ನೆರವಾಗುವ ಅವನ ನಾಯಿ ಹುಲಿಯ, ರೋಚಕ ಅನುಭವಗಳನ್ನು ನೀಡುತ್ತದೆ.
ಎಲ್ಲ ತರಹದ ಮನುಷ್ಯನ ಸ್ವಭಾವಗಳು ವಿಭಿನ್ನ ಪಾತ್ರಗಳಲ್ಲಿ ಬಂದು ಹೋಗುತ್ತವೆ.
ಮಲೆನಾಡಿನ ಚಿತ್ರಣ. ದಲಿತರ ಕೇರಿಗಳಲ್ಲಿ ನಡೆಯುವ ಘಟನೆಗಳು, ಮುಕುಂದಯ್ಯನ ಮೃದು ಸ್ವಭಾವ, ಅವನ ಪ್ರೀತಿ, ತಿಮ್ಮಪ್ಪ ಹೆಗ್ಗಡೆಯ ಧೂರ್ತ ವ್ಯಕ್ತಿತ್ವ, ತನ್ನಪ್ಪನನ್ನು ಕಳೆದುಕೊಂಡು ತನ್ನಮ್ಮನ ರೋಧನೆಯನ್ನು ಸಹಿಸಲಾರದ ಹುಡುಗ ಧರ್ಮುವಿನ ತೊಳಲಾಟ. ಹೇಗಾದರೂ ಚಿನ್ನಮ್ಮನನ್ನ ಪಡೆಯಬೇಕೆಂಬ ಭರಮೈ ಹೆಗ್ಗಡೆಯ ಹಂಬಲ. ಯುವ ದಂಪತಿಗಳಾದ ಐತ ಪೀಂಚಲು ಇವರ ಮುಗ್ದ ಸ್ವಭಾವಗಳು. ನಾಗತ್ತೆಯ ಸಂಚುಗಳನ್ನರಿಯದ ನಾಗಕ್ಕ, ಹೂವಳ್ಳಿ ವೆಂಕಣ್ಣನ ಪ್ರತಾಪಗಳು....
ಯಾವ ಅಧ್ಯಾಯವೂ ಎಲ್ಲೂ ಬೇಸರ ಬರಿಸದೆ ಮುಂದೆ ಏನಾಗಬಹುದು ಎಂದು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ನನ್ನೂರಿನಲ್ಲಿ ಈ ಕಾದಂಬರಿಯನ್ನ ಓದುತ್ತಿದ್ದರೆ ಅಲ್ಲೇ ಎಲ್ಲೋ ಇವುಗಳು ನಡೆಯುತ್ತಿದೆಯೇನೋ ಎಂದೆನಿಸುತ್ತಿತ್ತು. ೧ ವಾರದಲ್ಲಿ ೫೦೦ ಪುಟಗಳನ್ನು ಮುಗಿಸಿ ಆಗಿದೆ ಇನ್ನೂ ೨೧೨ ಪುಟಗಳು ಬಾಕಿ ಇವೆ. ಬಹುಷ ಮುಂದಿನ ಪೀಳಿಗೆಯವರಿಗೆ ಇದನ್ನು ಓದಲು ಕಷ್ಟವಾಗಬಹುದೇನೋ (ಹಳೆಗನ್ನಡ, ಹೊಸಗನ್ನಡ, ಕ್ಲಿಷ್ಟಕರವಾದ ಪದಗಳು), ನಮ್ಮ ಪೀಳಿಗೆಯವರು ಓದಬಹುದು, ಓದದಿದ್ದವರು ಖಂಡಿತ ಓದಲೇಬೇಕಾದಂತಹ ಕಾದಂಬರಿ.
ಇಲ್ಲಿಯವರೆಗೆ ನನ್ನ ಮೆಚ್ಚಿನ ಕಾದಂಬರಿ ಕರ್ವಾಲೋ ಆಗಿತ್ತು ಈಗ ಮಲೆಗಳಲ್ಲಿ ಮದುಮಗಳು. ಮಗನ ಸ್ಥಾನವನ್ನು ಅಪ್ಪ ಆಕ್ರಮಿಸಿಕೊಂಡಿದ್ದಾರೆ :)
ನೀವು ಹೇಳಿದ್ದು ಎಲ್ಲವೂ ನಿಜ. ನಾನು ಈಗ ಅರ್ಧದಷ್ಟು ಓದಿದ್ದೇನೆ. ಹಲವು ಪಾತ್ರಗಳು, ಹಲವು ಭಾವನೆಗಳು, ವಿಭಿನ್ನ ಸನ್ನಿವೇಶಗಳು.... ಒಟ್ಟಾರೆ ಇದು ಒಂದು ಅದ್ಭುತ ಕೃತಿ.
ReplyDeleteತಾವು ಮೂಕಜ್ಜಿಯ ಕನಸುಗಳು ಓದಿದ್ದೀರಿ ಎಂದುಕೊಂಡಿದ್ದೇನೆ, ಒಂದು ವೇಳೆ ಇಲ್ಲವೆಂದಾದರೆ, ಅದನ್ನೂ ಓದಿ, ನಿಮಗೆ ಇಷ್ಟವಾಗುತ್ತದೆ.