ಸಿ
ಇ ಟಿ ಸೆಲ್ ನಿಂದ ಹೊರಗೆ ಬಂದು, ಕಾಲೇಜಿನ ಒಳ ಸೇರಿದರೆ ಹೊರಗೆ ಬರಲು ಬರೋಬ್ಬರಿ 4
ವರ್ಷ. ಹೆಚ್ಚು ಕಡಿಮೆಯಾದರೆ ಒಂದೆರಡು ವರ್ಷ ಜಾಸ್ತಿ ! ಅದೆಷ್ಟೇ ಚೆನ್ನಾಗಿದ್ದರೂ
ಹಾಸ್ಟೆಲ್ ಊಟ ಚೆನ್ನಾಗಿಲ್ಲವೆಂದು (ಅಲ್ಲಿಯವರೆಗೂ ಅಮ್ಮ ರುಚಿ ರುಚಿಯಾಗಿ ಮಾಡಿ
ಬಡಿಸಿದ್ದನ್ನ ತಿಂದ ದೇಹಕ್ಕೆ ಹೊರಗಿನ ಊಟಕ್ಕೆ ಹೊಂದಿಕೊಳ್ಳಲು ತುಸು ಸಮಯ ಬೇಕಲ್ಲ)
ಬಯ್ಯುತ್ತಾ, ಮತ್ತೆರಡು ಚಪಾತಿಗಳನ್ನ ಜಾಸ್ತಿ ಹಾಕಿಸಿಕೊಂಡು ತಿಂದರೆ ಸಮಾಧಾನ.
ಒಂದು
ವೇಳೆ ಹಾಸ್ಟೆಲ್ ಊಟ ಬೋರ್ ಅನಿಸಿದರೆ ಕಾಲೇಜ್ ಕ್ಯಾಂಪಸ್ ಆಚೆಗಿರುವ ಚಂದ್ರಣ್ಣನ
ಡಾಬಾದಲ್ಲಿ ಫ್ರೆಂಡ್ಸ್ ಜೊತೆ ಸೇರಿ ಹಾಫ್ ಎಗ್ ಫ್ರೈಡ್ ರೈಸ್, ಬ್ರೆಡ್ ಆಮ್ಲೆಟ್
ಹೊಟ್ಟೆ ಒಳಗೆ ಹೋದರೆ ಮೃಷ್ಟಾನ್ನ ತಿಂದ ಖುಷಿ.
ಮೊದಲೆರಡು
Cycle (Atlas ಅಥವಾ Ranger ಸೈಕಲ್ ಅಲ್ಲ. Physics & Chemistry)
ಮುತುವರ್ಜಿಯಿಂದ ಓದಿದವನಿಗೆ (ಓಡಿಸಿದವನಿಗೆ) ಮುಂದೆ ಅದನ್ನೇ ಮೈಂಟೇನ್ ಮಾಡಿಕೊಂಡು
ಹೋಗಲಾಗುವುದಿಲ್ಲ. ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಅನ್ನೋ ಹಾಗೆ, ಇಲ್ಲಿ ಸಹವಾಸ
ದೋಷದಿಂದ ಬಹುತೇಕ ಮಂದಿ ಕೆಡದಿದ್ದರೂ ಸ್ವಲ್ಪ ಮಟ್ಟಿಗೆ ಎಕ್ಕುಟ್ಟಿ ಹೋಗಿರುತ್ತಾರೆ.
ಯಾಕೋ
ಮಗಾ, ಇಂಟರ್ನಲ್ಸ್ ಬರೆಯಲ್ವೇನೋ? ಅಂತ ಫ್ರೆಂಡ್ ಕೇಳಿದ್ರೆ 'ಎಂಥ ಓದಿಲ್ಲ, ಇನ್ನೆಂಥ
ಬರೆಯೋದು?, ಉಳಿದ ೨ ಇಂಟರ್ನಲ್ನಲ್ಲಿ ಆವ್ರೇಜ್ ತೆಗ್ದ್ರಾಯ್ತು ಬಿಡು ಮಗಾ'. ಕೇಳಿದ
ಫ಼್ರೆಂಡಿಗೂ ಏನೋ ತಳಮಳ. 'ಸರಿ ಬಿಡೋ, ಹಾಗಿದ್ರೆ ನಾನೂ ಬರೆಯೋಲ್ಲ. Next time
ಬರ್ದ್ರಾಯ್ತು' ಅಂತ ಅಂದು ಇಬ್ರೂ ಸಿಟಿಗೆ ಹೋಗಿ Theater ಕಡೆಗೆ ಹೆಜ್ಜೆ ಹಾಕಿ Cinema
ನೋಡಿ ಸಂಜೆ ಹಾಸ್ಟೆಲ್ಗೆ ಬಂದ್ರೆ, ಇಂಟರ್ನಲ್ ಬರೆದು ೧೫ ಮಾರ್ಕ್ಸ್ ಬರದೆ ತಲೆ
ಕೆಡಿಸಿಕೊಂಡವರನ್ನ ನೋಡಿ 'ನಮ್ಮಂಗೆ ಮಾಡಿದ್ರೆ ಈ ಸ್ತಿತಿ ಬರ್ತಿತ್ತಾ?' , ಬರೆದವನಿಗೆ
ಎಲ್ಲಿಲ್ಲದ ಉರಿ.
ಸಂಕ್ರಾಂತಿಗೋ,
ಗೌರಿ ಗಣೇಶ ಹಬ್ಬಕ್ಕೋ, ದೀಪಾವಳಿಗೋ, ಹೀಗೆ ಯಾವುದಾದರೂ ರಜೆ ಸಿಕ್ಕಾಗ ಅದೂ ಪುಣ್ಯಕ್ಕೆ
ಇಂಟರ್ನಲ್ಸ್ ಇಲ್ದೇ ಇದ್ದಾಗ ಊರಿಗೆ ಯಾರಾದ್ರೂ ಹೋಗಿ ವಾಪಸ್ ಬಂದ್ರೆ ಅವನ ರೂಮಿಗೆ
ನಾಯಿಗಳಂತೆ ನುಗ್ಗಿ ಇದ್ದ ಬದ್ದ ತಿಂಡಿಯನ್ನೆಲ್ಲಾ ತಿಂದು ಖಾಲಿ ಮಾಡಿ, ಸ್ವಲ್ಪ
ಹೊತ್ತಿನ ತರುವಾಯ ಏನೂ ತಂದೇ ಇಲ್ಲವೇನೋ ಎನ್ನುವ ಸ್ತಿತಿ. ಪಾಪ ಊರಿಂದ ಬಂದವನು ಒಂದು
ವಾರವಾದರೂ ಅಮ್ಮ ಮಾಡಿಕೊಟ್ಟ ಕುರುಕಲು ತಿನ್ನುವ ಆಸೆಯಿಟ್ಟುಕೊಂಡವನಿಗೆ ಖಾಲಿ ಬ್ಯಾಗ್,
ಖಾಲಿ ಪ್ಲಾಸ್ಟಿಕ್ಕೇ ಗತಿ.
ಅಕಸ್ಮಾತ್
2ನೇ ಇಂಟರ್ನಲ್ನಲ್ಲಿ (ಅದು ಅವರಿಗೆ ಮೊದಲ ಇಂಟರ್ನಲ್) 15 ಬರ್ಲಿಲ್ಲ ಅಂದ್ರೆ,
ಕೊನೆಯದರಲ್ಲಿ ಕಾಪಿ ಹೊಡೆದಾದ್ರೂ ಆವರೇಜ್ ತೆಗೆಯೋ ಅದಮ್ಯ ಉತ್ಸಾಹ (ಆಹಾ, ಅದಮ್ಯ
ಉತ್ಸಾಹ?!, ಮಣ್ಣು, ಅನಿವಾರ್ಯ. ಇಲ್ಲದಿದ್ದರೆ ಸರ್/ಮೇಡಂ ಕೈಯೇ ಕಾಲಾಗುವ ಪರಿಸ್ತಿತಿ).
ಪ್ರತಿ
ತಿಂಗಳೂ ಮೆಸ್ ಬಿಲ್ ನೋಡಿ 'ಅಯ್ಯೋ ಅಯ್ಯೋ ಇಷ್ಟು ಬಂದಿದೆಯಾ' ಅಂತ ಬೈಕೊಂಡು (ಊಟ
ಚೆನ್ನಾಗಿಲ್ಲ ಅಂತ ಸರ್ಯಾಗಿ ತಿಂದು. ತಿಂದಿರೋ ರೇಂಜಿಗೆ ಅದರ ಡಬಲ್ ಬರ್ಬೇಕಿತ್ತು!)
ಹಾಸ್ಟೆಲ್ ಗಬ್ಬೆಬ್ಬಿಸಿ, ಹೇಗೋ ಆವ್ರೇಜ್ ತಗೊಂಡು ೩ ತಿಂಗ್ಳು ಹೆಂಗ್ಹೆಂಗೋ ಕಾಲ
ತಳ್ಳಿ, ರೂಮಿನಲ್ಲಿ ಅವಾಗಾವಾಗ ಕಾಣಿಸಿ ಕೊಳ್ಳುತ್ತಿದ್ದ ಪುಣ್ಯಾತ್ಮರು, ಎಕ್ಸಾಮ್
ಹಿಂದಿನ ದಿನ ಒಳ್ಳೆ Fevicol ಅಂಟಿಸಿಕೊಂಡಿದ್ದಾರೇನೋ ಅನ್ನುವ ಅನುಮಾನ, ರೂಮಿನಿಂದ
ಹೊರಬರದದ್ದನ್ನ ನೋಡಿ.
ಎಕ್ಸಾಮ್
ಟೈಮಲ್ಲಿ ಹಾಸ್ಟೆಲಲ್ಲಿ ಒಂದು ರೀತಿಯ ಸ್ಮಶಾನ ಮೌನ. ಅಪ್ಪಿ ತಪ್ಪಿ ಯಾರಾದ್ರೂ ಬಂದು
ಹೊರಗೆ ಹೋಗುವ ಬಾ ಎಂದು ಕರೆದರೆ 'ಇಲ್ಲ ಮಗಾ, ಏನೂ ಓದಿಲ್ಲ' ಅನ್ನುವ ಸಿದ್ಧ ಉತ್ತರ.
ಬಾಕಿ ಸಮಯದಲ್ಲಿ ೧೦ ಗಂಟೆಗೆ ಮಲಗುತ್ತಿದ್ದ ಟ್ಯೂಬ್ಲೈಟ್ಗೆ ಎಕ್ಸಾಮ್ ಸಮಯದಲ್ಲಿ
ನಿದ್ರೆಯಿಂದ ಮುಕ್ತಿ (ಅದಕ್ಕೆ ಇತ್ತ ರೂಮಿನ ಯಜಮಾನನ ಮೇಲೂ, KEBಗೂ ಶಾಪ ಹಾಕುವ ಕೆಲಸ
!).
ಪಕ್ಕದಲ್ಲಿರುವ
ಚಂದ್ರಣ್ಣನ ಡಾಬಾಗಂತೂ ಭಾರೀ ಡಿಮ್ಯಾಂಡ್. ರಾತ್ರಿ ನಿದ್ದೆ ಬರ್ಬಾರ್ದು ಅಂತ ಪ್ರತಿ
ಒಂದೊಂದು ಗಂಟೆಗೆ ಅವನ ಡಾಬಾಕೆ ಎಂಟ್ರಿ. ಒಟ್ನಲ್ಲಿ Tea planters, ಕಾಲೇಜ್
ಸ್ಟೂಡೆಂಟ್ಸ್ಗೆಒಂದು Thanks ಹೇಳ್ಲೇಬೇಕು. ಜೊತೆಗೆ ಚಂದ್ರಣ್ಣಗೂ ಲಾಟರಿ ( ಹಾಕಿದ ಟೀ
ಪುಡಿಯನ್ನ ಮತ್ತೆ ಮತ್ತೆ ಹಾಕಿ ಲಾಭ ಮಾಡ್ಕೊಳ್ಳೋಲ್ವೇ!).
ಅಂತೂ
ಹೇಗೋ ಕಷ್ಟಪಟ್ಟು ಇಂಜಿನಿಯರಿಂಗ್ ಮುಗ್ಸಾಯ್ತು. ಅಲ್ಲಲ್ಲೇ ಮೂಲೆಯಲ್ಲಿ
ಸಿಕ್ಕಿಕೊಂಡಿದ್ದ ಬ್ಯಾಕ್ಗಳನ್ನೂ (Back) ಹೇಗೋ Clear ಮಾಡಾಯ್ತು. ಮುಂದೇನಪ್ಪ?
(ಇನ್ನೇನು, ಎಲ್ಲಾ ಗಂಟು ಮೂಟೆ ಕಟ್ಕೊಂಡು ರೈಟ್ ಹೇಳೋದು!). ಎಲ್ಲರೂ ಸಾಮಾನನ್ನ ಪ್ಯಾಕ್
ಮಾಡಿ, ಬೆಂಗಳೂರಲ್ಲಿ ಸಿಗೋಣ ಮಗಾ (Campus selection ಎಲ್ಲಿಂದ ಆಗ್ಬೇಕು ಕಂಪನಿಗಳು
ಕಾಲೇಜಿಗೆ ಬರದೆ ಇದ್ರೆ? ದೂರದೂರಿನಲ್ಲಿರುವ ಕಾಲೇಜಿಗೆ ಕಂಪನಿಗಳು ಬರುವುದು ದೂರದ
ಮಾತೇ!) ಅಂತ ಹೇಳಿ ಊರಿಗೆ ಹೋಗಿ ಸ್ವಲ್ಪ ದಿನ ಅಲ್ಲೇ settle.
ಊರಲ್ಲಿ
ಒಂದು 15 ದಿನ ಇದ್ದು ಅಪ್ಪನ ಬಳಿ ಸ್ವಲ್ಪ ಜಾಸ್ತಿ ದುಡ್ಡನ್ನು(Friends ಜೊತೆ
ಇರೋದಕ್ಕೆ ಒಂದು ವ್ಯವಸ್ಥೆ ಮಾಡ್ಬೇಕು, ಕೆಲಸ ಹುಡುಕ್ಬೇಕು, ಅದೂ ಇದೂ ಅಂತ ಏನೇನೋ
ಹೇಳಿದ್ರೆ, ಅವ್ರು ಪಾಪ ಮಗ ಇಷ್ಟೆಲ್ಲಾ ಓದಿದ್ದಾನೆ, ಬೆಂಗಳೂರಲ್ಲಿ ಬಾಡಿಗೆ ಮನೆ
ಮಾಡ್ಬೇಕು, ಕೆಲಸ ಹುಡ್ಕೋದಕ್ಕೆ, ಅಂತ ಕೇಳಿದ್ದಕ್ಕಿಂತ ಸ್ವಲ್ಪ ಜಾಸ್ತಿ ಕೊಟ್ಟು)
ಕಿತ್ಕೊಂಡು, ಅಮ್ಮ ಮಾಡಿಕೊಟ್ಟ ತಿಂಡಿಯನ್ನ ಬ್ಯಾಗಲ್ಲಿ ಹಾಕಿಕೊಂಡು ಬೆಂಗಳೂರೆಂಬ
ಮಹಾಸಾಗರದ ಕಡೆಗೆ ಪಯಣ ಸಾಗುತ್ತದೆ.
ಊರಿಂದ
ಪೇಟೆಗೆ ಲೋಕಲ್ ಬಸ್ಸಲ್ಲಿ ಬಂದು, ಕರ್ನಾಟಕ ರಾಜ್ಯ ರಸ್ತೆಯ ಕೆಂಪು ಬಸ್ ಹತ್ತಿ (ಇನ್ನ
ಕೆಲವರು, ಇಂಟರ್ಸಿಟಿ ಟ್ರೈನಲ್ಲೋ, ಪ್ಯಾಸೆಂಜರ್ ಟ್ರೈನಲ್ಲೋ, ರಾಣಿ ಚೆನ್ನಮ್ಮ
Expressನಲ್ಲೋ) ನವರಂಗಲ್ಲೋ (ಇಳಿದ ತಕ್ಷಣ ಕಾಣುವುದೇ Theater, ಬಹುತೇಕ ನಮ್
ಹುಡುಗ್ರೆಲ್ಲಾ ಅದೇ ಏರಿಯಾದಲ್ಲೇ ಸೆಟ್ಲ್ ಆಗೋದ್ರಿಂದ ಅದೇ ಅವ್ರಿಗೆ ವಾರದ ಸಿನೆಮಾ
ಅಡ್ಡಾ) , ಮೆಜೆಸ್ಟಿಕ್ ಬಸ್ಟ್ಯಾಂಡ್ನಲ್ಲೋ ಇಳಿದು ಪಿಳಿಪಿಳಿ ಕಣ್ಣು ಬಿಡುವ ಸಮಯ. ಒಂದು
ಕ್ಷಣಕ್ಕೆ ದೇವ್ರೇ ಎಲ್ಲಿಗೆ ಬಂದ್ನಪ್ಪಾ ಎಂಬ ಗಾಬರಿ. ಪುಣ್ಯಕ್ಕೆ ಕಣ್ಣಿಗೆ
ಪಕ್ಕದಲ್ಲೇ ತಗಲಿಹಾಕಿಕೊಂಡಿರುವ ಕಾಯಿನ್ ಬೂತ್ ಕಾಣಿಸುತ್ತದೆ.
ಒಂದು
ರೂಪಾಯಿ ಕಾಯಿನ್ ಹಾಕಿ ದೊಡ್ದಪ್ಪಂಗೋ, ದೊಡ್ಡಮ್ಮಗೋ, ಅಕ್ಕಳಿಗೋ (ಅಕಸ್ಮಾತ್ ಯಾರಾದ್ರೂ
ಮೊದ್ಲೇ ಬೆಂಗ್ಳೂರಲ್ಲಿ ಸೆಟ್ಲ್ ಆಗಿದ್ರೆ) ಫೋನ್ ಮಾಡಿ ಹೇಗೆ ಬರ್ಬೇಕು ಅಂತ
ಕೇಳ್ಕಂಡು, ಅವ್ರು ಹೇಳಿದ BMTC bus ಹತ್ಕಂಡು ಅವರಿರುವ ಏರಿಯಾದಲ್ಲಿ ಇಳಿದು ಅಲ್ಲಿಂದ
ಮತ್ತೆ 1 ರೂಪಾಯಿಯನ್ನ ಕಾಯಿನ್ ಬೂತ್ ಹುಂಡಿಗೆ ಹಾಕಿ ತಾನು ತಲುಪಿರುವುದು ಹೇಳಿದರೆ
ಸ್ವಲ್ಪ ಹೊತ್ತಿನ ನಂತರ ಅವರು ಬಂದು ಮನೆಗೆ ಕರ್ಕೊಂಡು ಹೋದ್ರೆ ಸಮುದ್ರದಿಂದ ಎತ್ತಿ
ದಡಕ್ಕೆ ಹಾಕಿದಂತೆ.
ಒಂದು
ಕಡೆ ಕೆಲಸ ಹುಡುಕ್ಬೇಕು, ಅದಕ್ಕೂ ಮೊದಲು ನೆಟ್ಟಗೆ ಸೆಟ್ಲ್ ಆಗ್ಬೇಕು. ಏನಪ್ಪಾ
ಮಾಡೋದು?. ಹಾಸ್ಟೆಲ್ಲಿಂದ ಊರಿಗೆ ಬರೋ ಕೊನೆ ದಿನ 3-4 friends ಸೇರಿ ಬೆಂಗ್ಳೂರಲ್ಲಿ
ಹಾಸ್ಟೆಲ್ಲೋ, ಮನೆನೋ ಮಾಡೋದು ಅಂತ ಮಾತಾಡ್ಕೊಂಡು, ಬೆಂಗ್ಳೂರಿನ contact number
share ಮಾಡ್ಕೊಂಡು, ಬೆಂಗ್ಳೂರಿಗೆ ಎಲ್ಲಾ ತಲುಪಿ ಆದ್ಮೇಲೆ ಒಂದ್ಕಡೆ ಸಿಗೋಣ ಅಂದವರು,
ಒಂದು ಸಂಜೆ ನವರಂಗ್ ಬಳಿ ಭೇಟಿ ಆಗಿ ಮುಂದಿನ ಯೋಜನೆ ಬಗ್ಗೆ ಮಾತುಕತೆ ಸಾಗುತ್ತದೆ.
ಒಬ್ಬ
ಹಾಸ್ಟೆಲ್ ಹುಡ್ಕೋಣ ಅಂದ್ರೆ ಇನ್ನೊಬ್ಬ ಮನೆ ಮಾಡೋಣ ಅಂತಾನೆ. ಮನೆ ಅಂದ್ರೆ ಸುಮ್ನೆ
ರಗಳೆ, ಹಾಸ್ಟೆಲ್ ಬೆಸ್ಟ್ (ಹಿಂದಿನ ಅನುಭವ, ಆದರೆ ಬೆಂಗ್ಳೂರಲ್ಲಿ ಅದಕ್ಕಿಂತ ಒಳ್ಳೆ
ಹಾಸ್ಟೆಲ್, ಅದಕ್ಕಿಂತ ಒಳ್ಳೆ ಊಟ ಎಲ್ಲಿ ಸಿಗ್ಬೇಕು ಹೇಳಿ) ಅಂದ್ಕೊಂಡು ಹುಡುಕುವ
ಕಾರ್ಯಕ್ಕೆ ಗ್ಯಾಂಗ್ ಕೈ ಹಾಕುತ್ತೆ. ಒಂದೆರಡು ದಿನ ಹುಡುಕಿ ಹುಡುಕಿ ಸುಸ್ತಾಗಿ,
ಹಾಸ್ಟೆಲ್ಲಿಗಿಂತ ಮನೆ ಮಾಡೋದೇ ವಾಸಿ ಅನ್ನುವ ತೀರ್ಮಾನಕ್ಕೆ ಬರುತ್ತಾರೆ. ಕಾರಣ,
ಹಾಸ್ಟೆಲ್ ಫೀ (ಇನ್ನೂ ಕೆಲ್ಸನೇ ಸಿಕ್ಕಿಲ್ಲ, ಅಷ್ಟೊಂದು ದುಡ್ಡೆಲ್ಲಿಂದ ತರೋದು ಅನ್ನೋ
ಅಭಿಪ್ರಾಯ ಎಲ್ಲರದ್ದೂ, ಆದ್ದರಿಂದ ಹಾಸ್ಟೆಲ್ ಸೇರೋ ಪ್ಲಾನ್ ಡ್ರಾಪ್).
ಸರಿ
ಇನ್ನೇನ್ಮಾಡೋಕಾಗತ್ತೆ ಒಂದು ಮನೆ ಮಾಡಿದ್ರಾಯ್ತು ಅಂತ ಎಲ್ಲ ನಿರ್ಧರಿಸಿ, 4 ಜನಕ್ಕೆ
Single bedroom house ಸಾಲಲ್ಲ, Double bedroom house ಮಾಡೋಣ ಅಂತ ಅಂದ್ಕೊಂಡು
ಮನೆ ಹುಡುಕ್ಲಿಕ್ಕೆ ರೆಡಿಯಾಗ್ತಾರೆ. ಹೀಗೆ ಸುತ್ತಿದ್ರೆ ಮನೆ ಸಿಗೋದಿಲ್ಲವೆಂದು,
ಸುಮ್ನೆ broker ಹತ್ರ ಹೋಗಿ ಎಂದು ಯಾರೋ ಹೇಳಿದ್ದನ್ನ ಕೇಳಿ ಅದೇ ಸರಿ ಅಂತ ಅವರ ಬಳಿ
ಹೋದ್ರೆ, ಆತ ಒಂದು ತಿಂಗ್ಳು ಬಾಡಿಗೆ ದುಡ್ಡು ತನ್ನ ಚಾರ್ಜ್ ಅಂದಾಗ ಎಲ್ರಿಗೂ ಗಾಬರಿ.
ಇದೊಳ್ಳೆ ಫಜೀತಿ ಆಯ್ತಲ್ಲಪ್ಪ ಅಂದ್ಕೊಂಡು ಬ್ರೋಕರಿಗೆ ಬೇಡ ನಾವೇ ಹುಡ್ಕೋತಿವಿ ಬಿಡಿ
ಅಂದು ವಾಪಸ್ ತಮ್ಮ ಅಡ್ಡಾ (Navarang) ಬಳಿ ಬಂದು ಟೇ ಕುಡೀತಾ ಒಬ್ರ ಮುಖ ಒಬ್ರು
ನೋಡ್ತಾ, ಟೀ ಕುಡಿದ್ಮೇಲೆ ನಾಳೆ ಸಿಗೋಣ, ಆಗ ಯೋಚನೆ ಮಾಡೋಣ.
ಮಗಾ
Ad Mag, Free Ads Magazineನಲ್ಲಿ Ads ಇರ್ತಾವಂತೆ ಮನೆ ಬಾಡಿಗೆ ಇರೋದು. ತಂದು
ಹುಡ್ಕೋಣ ಅಂದು ಅದನ್ನ ಕೊಂಡು, ಹುಡುಕ್ತಾ ಹೋದ್ರೆ ಡಬಲ್ ಬೆಡ್ರೂಮ್ ಮನೆ ರೇಟ್ ಜಾಸ್ತಿ
ಹಾಗಾಗಿ ಸಿಂಗಲ್ ಬೆಡ್ರೂಮ್ ಬೆಸ್ಟ್ ಅಂತ decide ಮಾಡಿ, tick ಮಾಡಿರೋ ಮನೆ ನೋಡೋಕೆ
ಹೋದ್ರೆ ಒಂದೂ ಹಿಡಿಸ್ಲಿಲ್ಲ. ಮುಂದೇನಪ್ಪ? ಬ್ರೋಕರ್ರೇ ದೇವ್ರು !
ಅಂತೂ
ಹೇಗೋ ಸಿಂಗಲ್ ಬೆಡ್ರೂಮ್ ಹುಡ್ಕಿದ್ದಾಯ್ತು (ಬ್ರೋಕರ್ರಿಗೆ ನೋಡಿ ಸಾರ್, ಸ್ಟೂಡೆಂಟ್ಸ್
ನಾವು, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಅಂತ ಎಷ್ಟೋ ಅಡ್ಜಸ್ಟ್ ಮಾಡ್ಸಿ, ಸ್ವಲ್ಪ
ಉಳ್ಸಿ). ಊರಲ್ಲಿ, ಹಾಸ್ಟೆಲ್ಲಿನ ವಿಶಾಲ ರೂಮಲ್ಲಿ ಇದ್ದವರಿಗೆ ಸಿಂಗಲ್ ಬೆಡ್ರೂಮ್
ತುಂಬಾ ಸಣ್ಣದೇ ಆದ್ರೆ ಏನೂ ಮಾಡೋ ಹಾಗಿಲ್ಲ, ಅನಿವಾರ್ಯ, adjust ಮಾಡ್ಕೊಂಡು
ಹೋಗ್ಬೇಕು. hall ಸ್ವಲ್ಪ ವಿಶಾಲವಾಗಿ ಇರೋದ್ರಿಂದ ಎಲ್ರೂ ಹಾಲಲ್ಲೇ ನಿದ್ರೆ!, ಒಂದು
ಬೆಡ್ರೂಮ್ luggage room ಆಗಿ convert ಆಗಿತ್ತು.
ಮಲಗಿ
ಸ್ವಲ್ಪ ಹೊತ್ತು ಆಗಿರಲ್ಲ ಅಷ್ಟೊತ್ತಿಗೆ ಪಕ್ಕದಿಂದ ಗೊರಕೆ ಸದ್ದು, ಅವ್ನಿಗೆ ತಿವಿದೋ,
ಅಲ್ಲಾಡ್ಸೋ, ಲೇಯ್ ಅಂತ ಜೋರು ಮಾಡಿದ್ರೆ ಗೊರಕೆ stop. ಎಲ್ಲಿಯ stop ?! ಮತ್ತೆ 10
ನಿಮ್ಶಕ್ಕೆ ಶುರು. ಹೋಗ್ತಾ ಹೋಗ್ತಾ ಅನಿವಾರ್ಯವಾಗಿ ಅಡ್ಜಸ್ಟ್ ಆಗ್ಲೇಬೇಕು.
ಬೆಳಗ್ಗೆ
ಬೇಗ ಎದ್ದೋನೇ ಜಾಣ, ಇಲ್ಲಾಂದ್ರೆ ಬಾತ್ರೂಮಿಗೆ ಕ್ಯೂ (ಇದನ್ನ ಜಾಸ್ತಿ ಬಿಡಿಸಿ
ಹೇಳ್ಬೇಕಾಗಿಲ್ಲ ಅಂದ್ಕೋತೀನಿ !). ಒಳಗೆ ಹೋದವನು ಎಲ್ಲಾದ್ರೂ ಬೇಗ ಬರದೇ ಇದ್ರೆ?!
ಹೋಗ್ಲಿ ಬಿಡಿ ಆ ಕಷ್ಟ ಒಳಗೆ ಹೋದೋನಿಗೆ, ಹೊರಗೆ ಕಾಯ್ತಾ ಇರೋನಿಗೆ ಇರ್ಲಿ!
Single bedrromಗೆ ಎರಡು ಟಾಯ್ಲೆಟ್ ಇರ್ಬೇಕು, ಇಲ್ಲಾಂದ್ರೆ ಹುಡುಗ್ರ ಕಷ್ಟ ಯಾರಿಗೆ ಹೇಳೋದು !
ಮನೆ
ಮಾಡಿದ್ದಾಯ್ತು. ನೆಕ್ಸ್ಟ್? ಕೆಲಸ. ಮಹಾಸಾಗರದಲ್ಲೊಂದು ಕೆಲಸ ಹುಡುಕ್ಬೇಕು! Resume
printout ತಗೊಂಡು, ೮-೧೦ copy xerox ಮಾಡ್ಕೊಂಡು, ಪಕ್ಕದ ದರ್ಶಿನಿಯಲ್ಲಿ ತಿಂಡಿ
ತಿಂದ್ಕೊಂಡು, BMTC bus ಹತ್ತಿ daily pass ತಗೊಂಡು ಬಿಟ್ರೆ ಅವತ್ತಿನ ಅರ್ಧ ಕೆಲಸ
ಆದಂತೆ. ಒಂದು ದಿವಸ ಕೋರಮಂಗಲದಲ್ಲಿರೋ ಎಲ್ಲಾ ಕಂಪನಿಗಳ ಬಳಿ ಹೋಗಿ Resume drop ಮಾಡಿ
ಬಂದ್ರೆ, next day ಮಾರತ್ ಹಳ್ಳಿ, ಇನ್ನೊಂದಿನ ವೈಟ್ ಫೀಲ್ಡ್. ಎಲ್ಲಾ ಕಡೆ drop ಮಾಡಿ
ಬಂದಾಯ್ತು.
ಯಾರಿಗೂ
call ಬರಲೇ ಇಲ್ಲ. ಏನಪ್ಪಾ ಮಾಡೋದು? ಸಿಕ್ಕ ಸಿಕ್ಕ ಕನ್ಸಲ್ಟೆನ್ಸಿಗಳಿಗೆ,
ಕಂಪನಿಗಳಿಗೆ ಮೈಲ್ ಮಾಡೋದು ಕಣ್ರೋ, ಎಲ್ಲಾದ್ರೂ ಲಾಟ್ರಿ ಹೊಡೀಬಹುದು ಅಂತ ಅದನ್ನೂ
ಮಾಡಿದ್ದಾಯ್ತು. ಆದ್ರೂ ಇಲ್ಲ. ಛೆ, ಬಂದು ೨ ತಿಂಗ್ಲಾಯ್ತು, ಒಂದು interview ಸಹ
attend ಆಗಿಲ್ಲ್ವಲ್ಲಪ್ಪ ಅಂತ ಯೋಚ್ನೆ. ಓದು ಮುಗಿದು, ಇಲ್ಲಿ ಬಂದು ಮನೆ ಮಾಡೋವರೆಗೂ
ಅಪ್ಪನ ಕೈಲಿ ದುಡ್ಡು ಇಸ್ಕೊಂಡಾಯ್ತು, ಇನ್ನೂ ಇಸ್ಕೋಳ್ಳೋದು ಅಂದ್ರೆ?. ಎಲ್ರದ್ದೂ ಇದೇ
ಕಥೆ.
ಒಬ್ರಿಗೆ
Education loan ತೀರಿಸೋ ಚಿಂತೆ, ಇನ್ನೊಬ್ಬಂಗೆ ಅಕ್ಕನ ಮದ್ವೆ ಮಾಡೋ ಚಿಂತೆ,
ಮತ್ತೊಬ್ಬಂಗೆ ಮನೆ ಸಾಲ ತೀರಿಸೋ ಚಿಂತೆ. ಹೀಗೆ ಸಮಸ್ಯೆಗಳ ಸಾಲು. ಎಲ್ರಿಗೂ ಕೆಲ್ಸ
ಸಿಗ್ಬೇಕು.
ಒಬ್ನಿಗೆ
ಹೇಗೋ, ಯಾರ್ದೋ ರೆಫರೆನ್ಸಿಂದ ಒಂದು ಕಂಪನಿ interview ಸಿಕ್ತು. clear ಆಯ್ತು, ಕೆಲಸ
ಸಿಕ್ತು, ಇನ್ನೊಬ್ಬಂಗೆ ಕನ್ಸಲ್ಟೆನ್ಸಿ ಮುಖಾಂತರ ಕೆಲಸ ಆಯ್ತು. ಹೀಗೆ ಒಬ್ಬೊಬ್ರಿಗೆ
ಕೆಲ್ಸ ಸಿಗ್ತಾ ಹೋಯ್ತು. ಕೆಲಸ ಸಿಕ್ಕ ವಿಷಯ ಕೇಳಿ ಊರಲ್ಲಿರೋ ಅಪ್ಪ ಅಮ್ಮನಿಗೆ
ನಿಟ್ಟುಸಿರು.
ಒಂದು
ತಿಂಗ್ಳಾಯ್ತು, ಸಂಬಳ ಬಂತು. ಮೊದಲ ಸಂಬಳ. ಮನೆಗೆ ಕಳ್ಸ್ತೀನಿ ಅಂದ್ರೆ, ಬೇಡ ಮಗಾ ನೀನೇ
ಇಟ್ಕೋ ಖರ್ಚಿಗೆ ಬೇಕಾಗತ್ತೆ ಅಂತ ಅಪ್ಪ. ಮೊದಲ ಸಂಬಳ!! Mobile ತಗೋಬೇಕು, Friendsಗೆ
party ಕೊಡುಸ್ಬೇಕು, ಹೊಸ bike ತಗೋಬೇಕು, ಹೊಸ ಬಟ್ಟೆ ತಗೋಬೇಕು ! ಆದ್ರೆ ಬರೋ ಸಣ್ಣ
ಸಂಬಳದಲ್ಲಿ ಆಗೋದೊಂದೇ, ಮೊಬೈಲ್ ತಗೊಳ್ಳೋದು. ಫ್ರೆಂಡ್ಸ್ ಪಾರ್ಟಿ ಕೇಳಿದ್ರೆ?
ನನ್ಮಕ್ಲಾ, ನೀವು ಕೆಲ್ಸ ಸಿಕ್ಕ ತಕ್ಷಣ ಪಾರ್ಟಿ ಕೊಟ್ರೇನ್ರೋ? ತಡ್ಕಳಿ, ಮುಂದಿನ
ತಿಂಗ್ಳು ಕೊಡ್ಸ್ತೀನಿ!
ಎಲ್ಲರಿಗೂ
ಒಳ್ಳೆ ಸಂಪಾದನೆ, ಈಗ ಸಿಂಗಲ್ ಬೆಡ್ರೂಮ್ ಇನ್ನೂ ಚಿಕ್ಕದೆನಿಸುತ್ತಿತ್ತು. ಬರೀ ಗ್ಯಾಸ್
ಇದ್ದ ಮನೆಗೆ, Fridge, TV, Washing machine ಬಂತು. ಮನೆ ಸಾಲ್ತಿಲ್ಲ, ಚೇಂಜ್
ಮಾಡ್ಬೇಕು. ಡಬಲ್ ಬೆಡ್ರೂಮ್ ಮನೆಗೆ ಶಿಫ್ಟ್ ಆಯ್ತು ಗ್ಯಾಂಗ್. ಕೆಲ್ಸ ಸಿಗೋ ಮುಂಚೆ
ಎಲ್ರೂ ಒಟ್ಟಿಗೆ ತಿಂಡಿ, ಊಟ ಮಾಡ್ತಿದ್ರು. ಈಗ ಒಟ್ಟಿಗೆ ತಿಂದದ್ದೇ ಕಡಿಮೆ.
ವೀಕೆಂಡ್ನಲ್ಲಿ ಎಲ್ರೂ hotel ಹೋಗಿ, ಹರಟೆ ಹೊಡೆದು, ತಿಂದು ಬಂದದ್ದೇ ಸಮಾಧಾನ.
ತಿಂಗಳುಗಳು
ಉರುಳ್ತಾ ಹೋಯ್ತು, ಆಫೀಸ್, ಮನೆ ಇಷ್ಟೇ! ಛೆ. ನಡೀರ್ರೋ, ಎಲ್ಲಾದ್ರೂ trip ಹೋಗೋಣ ಈ
weekend? ಎಲ್ರಿಗೂ ಅದೇ ಬೇಕಾಗಿತ್ತು. ಟ್ರೆಕಿಂಗ್ ಹೋಗೋಣ, ಚೆನ್ನಾಗಿರತ್ತೆ.
ಶುರುವಾಯ್ತು ಟ್ರೆಕಿಂಗ್. ಒಬ್ಬ ಫ್ರೆಂಡ್ ತಂದ camera, ಟೆಂಟ್ ಎಲ್ಲಾ
ವ್ಯವಸ್ಥೆಯಾಯ್ತು. ಟ್ರೆಕಿಂಗ್ ಹೋಗ್ಬಂದಾಯ್ತು. Photos ನೋಡಿ ಎಲ್ರೂ ಫಿದಾ. ಎಲ್ಲರ
ಮನ್ಸಲ್ಲೂ ಒಳ್ಳೆ ಕ್ಯಾಮೆರಾ ತಗೋಬೇಕು ಅನ್ನೋ ಬಯಕೆ. ನೆಟ್ಟಲ್ಲಿ ನೋಡಿ, ಅಮೆರಿಕಾಗೆ
ಹೋದ ಒಬ್ಬ ಫ್ರೆಂಡಿಗೆ christmas ಟೈಮಲ್ಲಿ ಆಫ಼ರ್ ನೋಡಿ ತರ್ಸಿದ್ದಾಯ್ತು.
ಶುರುವಾಯ್ತು
ನೋಡಿ, ಟ್ರೆಕಿಂಗ್ ಮೇಲೆ ಟ್ರೆಕಿಂಗ್. ತಿಂಗಳಿಗೊಂದೊಂದು. ಈ ತಿಂಗ್ಳು ಯಾವ ಸ್ಪಾಟ್,
ಮುಂದಿನ ತಿಂಗ್ಳು ಯಾವ್ದು? ಎಷ್ಟು ಜನ ಬರ್ತಾರೆ? ಎಲ್ಲಿ permission ತಗೋಬೇಕು,
ಯಾರ್ಯಾರು snacks ತರ್ತಾರೆ? ಏನ್ರಲ್ಲಿ ಹೋಗೋದು? ಎಲ್ಲಿ ಉಳಿಯೋದು?. trip, party,
film. ಊರಿಗೆ ಆಗಾಗ ಹೋಗಿಬರೋದು.
ಎಲ್ಲಾ
ಫ್ರೆಂಡ್ಸ್ ಬೈಕ್ ತಗೊಂಡಾಯ್ತು. ವೀಕೆಂಡ್ ಬಂದ್ರೆ ನಡೀರೋ ಹೋಗೋಣ ಅಂತ ಹೊರಟಾಯ್ತು.
ಕೆಲವೊಮ್ಮೆ short trip ಇನ್ನ ಕೆಲವೊಮ್ಮೆ long trip. ಹೀಗೆ ಕಾಲ ಸಾಗ್ತಾ ಇತ್ತು.
ಈ
ನಡುವೆ ಒಂದಷ್ಟು ಫ್ರೆಂಡ್ಸ್ ಹೊರಗೆ (ಅಮೇರಿಕ, ಇಂಗ್ಲೆಂಡ್) ಹೋಗಿ ಅಲ್ಲೇ ಸೆಟ್ಲ್
ಆದ್ರು. Time ಓಡ್ತಾ ಇತ್ತು. ಒಬ್ಬೊಬ್ರದ್ದು ಮದುವೆ ಆಗ್ತಾ ಬಂತು, ಕೆಲವರದ್ದು Love
marriage (ಸ್ವಲ್ಪ easy, ಮನೆಯವರ ವಿರೋಧ ಇಲ್ದಿದ್ರೆ!), ಇನ್ನ ಕೆಲವರದ್ದು arranged
marriage (ಆ ಜಾತಕ, ಈ ಜಾತಕ, ಅದು match ಆಗ್ತಿಲ್ಲ, ಇದು match ಆಗ್ತಿಲ್ಲ, ಹುಡುಗ
ಇಷ್ಟ ಇಲ್ಲ, ಹುಡುಗಿ ಇಷ್ಟ ಇಲ್ಲ, ಕೊನೆಗೊಮ್ಮೆ ಎಲ್ಲಾ match ಆಗಿ settle).
4 ಜನ ಇದ್ದ ಡಬಲ್ ಬೆಡ್ರೂಮ್ ಮನೆ ಈಗ ಖಾಲಿ ಖಾಲಿ. ಹೊಸ ಹುಡುಗರು ಬರುವ ತನಕ !