Thursday, November 14, 2013

ಗದ್ದೆಯಲ್ಲೊಂದು ಗ್ರೂಪ್ ಫೋಟೋ !


ಊರಿಗೆ ಹೋದಾಗ ಕ್ಯಾಮೆರಾ ತೆಗೆದುಕೊಂಡು ಒಂದೆರಡು ಬಾರಿ ಗದ್ದೆಯ ಕಡೆ ಹೋದದ್ದನ್ನು ಮೋಹನ ಗಮನಿಸಿದ್ದ. ನಾನು ಕ್ಯಾಮೆರಾವನ್ನು ಕುತ್ತಿಗೆಗೆ ನೇತಾಕಿಕೊಂಡು ಹೋಗುತ್ತಿದ್ದುದ್ದನ್ನು ಅವರ ಗುಂಪಿನವರಿಗೂ ತೋರಿಸಿದ್ದ. ಯಾವುದೋ ಲೋಕದಿಂದ ಬಂದವನ ಹಾಗೆ ಅವರು ನನ್ನನ್ನು ಗಮನಿಸುತ್ತಿದ್ದರು (ಮದುವೆ ಮನೆಯಲ್ಲಿ ಮಾತ್ರ ಕ್ಯಾಮೆರಾ ನೋಡುತ್ತಿದ್ದವರಿಗೆ ನನ್ನ ಈ ಅವಸ್ಥೆ ನಗು ತರಿಸಿರಬಹುದು).

ಒಂದು ದಿನ ನಡುಮನೆಯಲ್ಲಿ ನಾನು ಪೇಪರ್ ಓದುತ್ತಾ ಕುಳಿತಿದ್ದಾಗ ಮೋಹನ ಬಂದು ಅಮ್ಮನ ಬಳಿ 'ಅಮ್ಮೋರೇ, ಸಣ್ಣ ಗೌಡ್ರಿಗೆ ಹೇಳಿ ನಮ್ದೆಲ್ಲರ್ದೂ ಒಂದು ಫೋಟೋ ತೆಗೀಲಿಕ್ಕೆ ಹೇಳಿ' ಅಂತಿದ್ದ. 'ಇನ್ನೂ ಇಲ್ಲೇ ದನ ಕಾಯ್ತಿದಿರೇನ್ರೋ, ಗದ್ದೆ ಕುಯ್ಯೋದಕ್ಕೆ ಹೋಗ್ರೋ' ಎಂದು ಅಮ್ಮ ಆತನ ಮಾತನ್ನ ಕಿವಿಗೆ ಹಾಕಿಕೊಳ್ಳದೆ ಗದರಿಸುತ್ತಿದ್ದರು. 'ಅಯ್ಯೋ ಅಮ್ಮೋರೇ ಅಲ್ಲೇ ಇರ್ತೀವಿ, ಗೌಡ್ರಿಗೆ ಗದ್ದೆಗೆ ಬರೋವಾಗ ಕ್ಯಾಮೆರಾ ತಕ್ಕಂಬರಕೆ ಹೇಳಿ' ಅಂದ. 'ನಿಮ್ದೊಳ್ಳೆ ಕಥೆ ಕಣ್ರಾ ಮಾರಾಯ, ಸರಿ ಬೇಗ ಹೊರಡಿ, ಅವ್ನಿಗೆ ಹೇಳ್ತೀನಿ' ಎಂದು ಅಮ್ಮ ಅವನನ್ನ ಕಳಿಸಿದ್ಲು. ಅವನು 'ಮರೀಬ್ಯಾಡ್ರೀ ಅಮ್ಮೋರೇ' ಅಂತ ಕೂಗಿಕೊಂಡೇ ಹೋಗ್ತಿದ್ದ.

ನಾನು ತಿಂಡಿ ತಿಂದು ಕ್ಯಾಮೆರಾ ಕುತ್ತಿಗೆಗೇರಿಸಿಕೊಂಡು ಗದ್ದೆಯ ಕಡೆ ಹೊರಟೆ. ದೂರದಿಂದ ನಾನು ಬರುವುದನ್ನು ಗಮನಿಸಿದ ಮೋಹನ ಅಲ್ಲಿಂದಲೇ 'ಸಣ್ಗೌಡ್ರು ಕ್ಯಾಮೆರಾ ತಗೊಂಡು ಬರ್ತಿದ್ದಾರೆ' ಅಂತ ಕೂಗಿ ಹೇಳ್ತಿದ್ದಿದ್ದು ಕೇಳಿಸ್ತಿತ್ತು. ಹತ್ತಿರ ಹೋದಾಗ ಎಲ್ಲಾ ನನ್ನನ್ನ ನೋಡಿ ಹಲ್ಕಿರಿಯುತ್ತಿದ್ದರು. ನನಗೆ ಅವರೆಲ್ಲರನ್ನು ನೋಡಿ ಗಾಬರಿಯಾಯ್ತು, ಎಲ್ಲರೂ ಹೊಸ ಬಟ್ಟೆ ಹಾಕಿಕೊಂಡು ಬಂದಿದ್ರು (ಬಹುಶಃ ಹೊಸ ಬಟ್ಟೆ ಹಾಕ್ಕೊಂಡು ಗದ್ದೆ ಕೊಯ್ಲು ಮಾಡಿದ್ದವ್ರಲ್ಲಿ ಇವ್ರೇ ಮೊದ್ಲು ಅನ್ಸತ್ತೆ).

ನನಗೆ ನಗು ತಡೆಯಲಾಗಲಿಲ್ಲ 'ಅಲ್ವೋ ಮೋಹನ, ಮದ್ವೆಗೆ ಹೋಗ್ಬೇಕಾದವರು ತಪ್ಪಿ ಗದ್ದೆ ಕೊಯ್ಲಿಕ್ಕೆ ಬಂದಿರೋ ಹಾಗೆ ಇದೆಯಲ್ಲೋ?'. ಆತ 'ಗೌಡ್ರೇ ಈ ಗೆಟಪ್ ಫ಼ೋಟೋಕೆ' ಅಂದ. 'ಹಾಗಿದ್ದವ್ರು ಅಲ್ಲೇ ಮನೆ ಹತ್ರಾನೇ ತೆಗೆಸ್ಕೋಬಹುದಿತ್ತಲ್ಲೋ, ಇಲ್ಲಿ ಬಂದು ಹೊಸ ಬಟ್ಟೆ ಎಲ್ಲಾ ಗಲೀಜ್ ಮಡ್ಕೋಳ್ಳೊ ಸ್ತಿತಿ ಯಾಕೆ?' ಮೋಹನ ಅದಕ್ಕೆ 'ನಮ್ಮೂರಲ್ಲಿ ಎಲ್ರಿಗೂ ತೋರಿಸ್ಬೇಕಲ್ಲ ಗೌಡ್ರೇ, ನಮ್ಮ ಗೌಡ್ರ ಗದ್ದೆಲಿ ನಾವು ಕೆಲ್ಸ ಮಾಡ್ತಿರೋದನ್ನ' ಅಂದ.

ಸರಿ ಸರಿ ಎಲ್ಲಾ ಚೆನ್ನಾಗಿ ನಿಂತ್ಕಳಿ ಅಂದೆ. ಎಲ್ರೂ ಕೈಲಿ ಕುಡುಗೋಲು ಹಿಡ್ಕೊಂಡು ಕ್ಯಾಮೆರಾಗೆ ಪೋಸ್ ಕೊಡೋಕೆ ನಿಂತ್ರು, ಯಾರಾದ್ರೂ ದೂರದಿಂದ ಈ ದೃಶ್ಯ ನೋಡಿದ್ರೆ ಕುಡುಗೋಲು ಹಿಡ್ಕೊಂಡು ಸಾಯ್ಸೋಕೆ ಬರ್ತಿರ್ಬೇಕೇನೋ ಅನ್ನೋ ಹಾಗಿತ್ತು. ಹಿಂಗ್ಯಾರಾದ್ರೂ ಪೋಸ್ ಕೊಡ್ತಾರೇನ್ರೋ ಅಂದದ್ದಕ್ಕೆ, ಹಿಂಗೇ ಹೊಡೀರಿ ಗೌಡ್ರೆ ಅಂದ್ರು. ಸರಿ ಕಣ್ರಪ್ಪ ನಿಮ್ಮಿಷ್ಟ ಅಂದು ನಾನು ಕ್ಯಾಮೆರಾ ಆನ್ ಮಾಡಿ ಎಲ್ಲರನ್ನೂ ಸ್ವಲ್ಪ ನಗಾಡ್ರಪ್ಪ ಎಂದೆ, ಅವರ ನಗುಗಿಂತ ನನಗೇ ನಗು ಜಾಸ್ತಿ ಬರ್ತಿತ್ತು ಆದರೂ ತಡೆದುಕೊಂಡು ಕ್ಯಾಮೆರಾ ಕ್ಲಿಕ್ ಮಾಡಿದೆ.

ಆಯ್ತು ಕಣ್ರಪ್ಪಾ ಅಂದೆ, ಕ್ಷಣಾರ್ಧದಲ್ಲಿ ಎಲ್ರೂ ನನ್ನನ್ನ ಸುತ್ತುವರಿದಿದ್ದರು, ಫೋಟೋ ಹೇಗೆ ಬಂದಿದೆ ಎಂದು ನೋಡುವ ಕುತೂಹಲಕ್ಕೆ.ನಾನು ಪ್ಲೇ ಬಟನ್ ಒತ್ತಿದೆ ಆದರೆ ಫೋಟೋ ಕಾಣಿಸಲಿಲ್ಲ. ಆಗ ಗೊತ್ತಾಯ್ತು ಮೆಮೊರಿ ಕಾರ್ಡ್ ಮನೆಯಲ್ಲೇ ಬಿಟ್ಟು ಬಂದಿದ್ದೇನೆಂದು. ಅವರಿಗೆ ವಿಷಯ ಹೇಳಿ ಮೋಹನನನ್ನ ಮನೆಗೋಡಿಸಿದೆ, ಅಮ್ಮನಿಗೆ ಹೇಳಿ ತೆಗೆದುಕೊಂಡು ಬಾ ಎಂದು.

ಮೋಹನ ಒಂದೇ ಉಸುರಿಗೆ ಓಡಿದ್ದ, ತಿರುಗಿ ಬರುವಷ್ಟರಲ್ಲಿ ಹೊಸ ಬಟ್ಟೆಗೆ ಕೆಸರೆಲ್ಲಾ ಮೆತ್ತಿಕೊಂಡಿತ್ತು, ಈಗ ಅವನಿಗೆ ಅದ್ಯಾವುದರ ಬಗ್ಗೆ ಪರಿವೇ ಇರಲಿಲ್ಲ. ಬಟ್ಟೆ ಹಿಂಗಾಗಿದ್ಯಲ್ಲೋ ಎಂದಾಗ, ಹೆಂಗಾದ್ರೂ ಇರ್ಲಿ ಗೌಡ್ರೆ, ಒಂದು ಸಕತ್ತಾಗಿರೋ ಫೋಟೋ ತೆಗೀರಿ ಎಂದು ಎಲ್ಲರೊಳಗೊಂದಾಗಿ ಫೋಟೋಗೆ ಹಲ್ಕಿರಿದು ನಿಂತ.

No comments:

Post a Comment