ಆ ಪಟ್ಟಣದಿಂದ ಸುಮಾರು ೭೦ ಮೈಲು ದೂರದಲ್ಲಿದೆ ಆ ಹಳ್ಳಿ. ಕೃಷಿ ಆಧಾರಿತ ಪ್ರದೇಶ. ಆ ಹಳ್ಳಿ ಮತ್ತು ಸುತ್ತಮುತ್ತಲ ಹಳ್ಳಿ ಹಸಿರಿನಿಂದ ತುಂಬಿತ್ತು. ಅಲ್ಲಾಗುವ ಮಳೆಯ ನೀರೇ ಆ ಪಟ್ಟಣಕ್ಕೆ ಆಧಾರ. ಆ ಹಳ್ಳಿಯಲ್ಲೊಂದು ಪುಟ್ಟ ಸಂಸಾರ, ಅಪ್ಪ, ಅಮ್ಮ, ಮಗ. ತಕ್ಕಮಟ್ಟಿಗೆ ಸ್ಥಿತಿವಂತರಾಗಿದ್ದರು. ಮಗ ಪಟ್ಟಣದಲ್ಲಿ ಓದಲಿ ಎಂದು ಅಪ್ಪ ಅವನಿಗೆ ಅಲ್ಲೊಂದು ವ್ಯವಸ್ಥೆ ಮಾಡಿದ. ಅವನು ಚೆನ್ನಾಗಿ ಓದಿದ, ತಾನು ತುಂಬಾ ಪ್ರಸಿದ್ಧಿಯಾಗಬೇಕೆಂಬುದು ಅವನ ಮಹತ್ವಾಕಾಂಕ್ಷೆಯಾಗಿತ್ತು. ಅದರಂತೆ ಓದು ಮುಗಿದ ನಂತರ ಕೆಲಸಕ್ಕೆ ಸೇರುವ ಬದಲು ಬ್ಯುಸಿನೆಸ್ ಮಾಡಬೇಕೆಂದು ನಿರ್ಧರಿಸಿದ.
ಅಪ್ಪ ಎಷ್ಟು ಹೇಳಿದರೂ ಕೇಳದೆ, ತನ್ನ ತೋಟದಲ್ಲಿದ್ದ ಮರಗಳನ್ನು ಕಡಿದು ಟಿಂಬರ್ ಬ್ಯುಸಿನೆಸ್ ಶುರು ಮಾಡಲಾರಂಭಿಸಿದ. ಅದೇ ಮರಗಳನ್ನ ಉಪಯೋಗಿಸಿ ಪಟ್ಟಣದಲ್ಲಿ ತನಗೊಂದು ಮನೆಯನ್ನೂ ಕಟ್ಟಿಸಿ ಅಲ್ಲಿ ವಾಸಿಸಲಾರಂಭಿಸಿದ . ಅಪ್ಪ ಅಮ್ಮ ಪಟ್ಟಣಕ್ಕೆ ಬರದೆ ಊರಲ್ಲೇ ಉಳಿದರು. ಊರಲ್ಲಿ ಎಲ್ಲರಿಗೂ ಒಳ್ಳೆಯ ಬೆಲೆಯನ್ನು ಕೊಟ್ಟು ಅವರ ತೋಟಗಳಿಂದ ಮರಗಳನ್ನು ಖರೀದಿಸಿದ. ಪರಿಣಾಮ, ಸುತ್ತ ಹಸಿರಿಂದ ನಳನಳಿಸುತ್ತಿದ್ದ ಊರು ಮರಗಳಿಲ್ಲದೆ ಬೆಂಗಾಡಾದಂತಾಗಿತ್ತು. ಇವನು ನೋಡನೋಡುತ್ತಿದ್ದಂತೆ ಶ್ರೀಮಂತನಾಗಿ ಹೋದ. ಕಾಲ ಸರಿಯುತ್ತಾ ಹೋಯಿತು. ಸುತ್ತಮುತ್ತಲ ಹಳ್ಳಿಯ ಯುವಕರಿಗೆ ಇವನು ಸ್ಪೂರ್ತಿಯಾದ, ಅವರಲ್ಲಿ ಹಲವರು ಟಿಂಬರ್ ಬ್ಯುಸಿನೆಸ್ಗೆ ಇಳಿದರು. ಕಾಲಕ್ರಮೇಣ ಎಲ್ಲಾ ಹಳ್ಳಿಗಳು ಇವರ ಆಕ್ರಮಣಕ್ಕೆ ತುತ್ತಾಗಿ ಬರಡಾಗಿ ಹೋಗಿದ್ದವು. ಮಳೆಯ ಪ್ರಮಾಣ ತೀರಾ ಕಡಿಮೆಯಾಗಿ ಪಟ್ಟಣದಲ್ಲಿ ಜನರು ನೀರಿಗಾಗಿ ಒದ್ದಾಡುತ್ತಿದ್ದರು. ದಿನಕ್ಕೊಮ್ಮೆ ಬರುತ್ತಿದ್ದ ನೀರು ವಾರಕ್ಕೊಮ್ಮೆ ಬರುವ ಹಾಗಾಯ್ತು. ಆ ದಿನ ಮಧ್ಯಾಹ್ನದ ಸಮಯ, ಎಂದಿನಂತೆ ಇವನು ತನ್ನ ಕೆಲಸ ಮುಗಿಸಿ ಮನೆಗೆ ಬಂದು ಚಾವಡಿಯಲ್ಲಿ ಕುಳಿತು ತನ್ನ ಪತ್ನಿಗೆ ನೀರನ್ನು ತರಲು ಹೇಳಿ ಹಾಗೆ ದಿವಾನ್ ಮೇಲೆ ಮಲಗಿದ್ದ. ನೀರಿಗೆ ಬರವಿದ್ದ ಕಾರಣ ಪತ್ನಿ ಅರ್ಧ ಲೋಟ ನೀರು ತಂದುಕೊಟ್ಟಳು. ಇದೇನು ಅರ್ಧ ಲೋಟ ತಂದಿದ್ದೀಯ ಎಂದು ಅವಳಿಗೆ ಬೈದು ಲೋಟವನ್ನ ಮೇಲಕ್ಕೆತ್ತಿ ಕುಡಿಯಲಾರಂಭಿಸಿದ, ಕಾಲು ಭಾಗ ನೀರು ಅವನ ದೇಹ ಸೇರಿತ್ತು ಅಷ್ಟರಲ್ಲಿ ಮನೆಯ ಪಕಾಸು ಮುರಿದು ಇವನ ಮೇಲೆ ಬಿತ್ತು. ಅವನ ಪ್ರಾಣಪಕ್ಷಿ ಹಾರಿಹೋಗಿತ್ತು. ನೀರು ಹಾಗೂ ಮರ ಸದ್ದಿಲ್ಲದೇ ಸೇಡನ್ನು ತೀರಿಸಿಕೊಂಡಿದ್ದವು.
No comments:
Post a Comment