Monday, October 24, 2011

ಬೆಳಗಬೇಕಾದ ಮನಸ್ಸುಗಳೇ ಕೊಳೆತುಹೋದರೇ??

ಮೊನ್ನೆ ಟಿ.ವಿ ನೋಡ್ತಿದ್ದಾಗ ಒಂದು ಸುದ್ದಿ ಬಂತು ಅದನ್ನ ನೋಡಿದಾಗ ಒಂದು ವಿಷಯ ಹೇಳುವ ಮನಸ್ಸಾಯಿತು (ಬಹುಶ ಇದು ತುಂಬಾ ಜನರ ಜೀವನದಲ್ಲಿ ನಡೆದ ಘಟನೆಗಳೂ ಆಗಿರಬಹುದು), ಟಿ. ವಿಯಲ್ಲಿ ಬಂದ ಸುದ್ದಿ ಈ ಕಥೆಯಾದ ಮೇಲೆ.

..............
ಸುಷ್ಮಾ, ಒಂದು ಒಳ್ಳೆಯ ಕುಟುಂಬದ ಹುಡುಗಿ. ಅಪ್ಪ ಸರ್ಕಾರಿ ನೌಕರ, ಅಮ್ಮ ಗೃಹಿಣಿ. ಒಬ್ಬಳೇ ಮಗಳಾದ್ದರಿಂದ ಪೋಷಕರು ಅವಳನ್ನು ತುಂಬಾ ಪ್ರೀತಿಯಿಂದ ಚೆನ್ನಾಗಿ ಸಾಕಿದ್ದರು. ನೋಡುವುದಕ್ಕೆ ಲಕ್ಷಣವಾಗಿದ್ದಳು, ಸುಷ್ಮಾ ಓದಿನಲ್ಲಿ ಚೂಟಿ ಇದ್ದಳು, ಹೈಸ್ಕೂಲ್ ಮುಗಿಸಿ ಆ ಊರಿನ ಒಂದು ಒಳ್ಳೆಯ ಕಾಲೇಜಿಗೆ ಸೇರಿದ್ದಳು. ಕಾಲೇಜಿನಲ್ಲೂ ಓದಿನಲ್ಲಿ ಮುಂದಿದ್ದಳು.

ರಮೇಶ್, ಶ್ರೀಮಂತ ಮನೆತನದ ಹುಡುಗ, ಸುಸಂಸ್ಕೃತ ಕುಟುಂಬ. ಅಪ್ಪ ಬ್ಯುಸಿನೆಸ್ಸ್ಮೆನ್, ಅಮ್ಮ ಗೃಹಿಣಿ, ರಮೇಶನಿಗೊಬ್ಬಳು ತಂಗಿ. ರಮೇಶನು ಅತಿ ಬುದ್ದಿವಂತನಲ್ಲದಿದ್ದರೂ ಫಸ್ಟ್ ಕ್ಲಾಸ್ನಲ್ಲಿ ಎಲ್ಲ ಕ್ಲಾಸಲ್ಲೂ ಪಾಸಾಗುತ್ತಿದ್ದನು. ರಮೇಶನದು ಕಟ್ಟುಮಸ್ತಾದ ದೇಹ ಜೊತೆಗೆ ನೋಡಲೂ ಚೆಂದವಾಗಿದ್ದನು. ಅವನೂ ಕೂಡ ಸುಷ್ಮಾ ಸೇರಿದ ಕಾಲೇಜಿಗೆ ಸೇರಿದ್ದನು.

ಇಬ್ಬರೂ ಒಂದೇ ಬ್ಯಾಚಿನಲ್ಲಿದ್ದರು. ಕ್ಲಾಸಲ್ಲಿ ಲೆಕ್ಚರರ್ ಕೇಳುತ್ತಿದ್ದ ಪ್ರಶ್ನೆಗಳಿಗೆ ಹಲವೊಮ್ಮೆ ಇವಳೇ ಎದ್ದುನಿಂತು ಉತ್ತರಿಸುತ್ತಿದ್ದುದರಿಂದ ಇವನಿಗೂ ಅವಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ. ಒಂದು ದಿನ ಟೆಸ್ಟ್ ನೆಪದಲ್ಲಿ ಅವಳನ್ನು ಮಾತಾನಾಡಿಸಬೇಕು ಎಂದು ನಿರ್ಧಾರ ಮಾಡಿ ಕಾಲೇಜ್ ಬಿಟ್ಟ ತಕ್ಷಣ ಅವಳಿಗೆ ಗೊತ್ತಾಗದಂತೆ ಅವಳನ್ನು ಹಿಂಬಾಲಿಸಿದನು. ಅವಳ ಗೆಳತಿಯರೆಲ್ಲ ಬೇರೆಯಾಗಿ ಇವಳು ಒಂಟಿಯಾದ ತಕ್ಷಣ ಅವಳ ಹತ್ತಿರ ಹೋಗಿ ಯಾವುದೋ ನೋಟ್ಸ್ ಕೇಳುವ ನೆಪದಲ್ಲಿ ಮಾತನಾಡಿಸಿದನು.

ಹೀಗೆ ಶುರುವಾದ ಭೇಟಿ ಇಬ್ಬರೂ ಇಷ್ಟಪಡುವ ಹಂತದವರೆಗೆ ಹೋಯ್ತು. ಇಬ್ಬರೂ ಬುದ್ಧಿವಂತರಾದ್ದರಿಂದ ಮದುವೆಯ ಪ್ರಸ್ತಾಪವನ್ನು ಮನೆಯವರಿಗೆ ತಿಳಿಸಬೇಕು ಆದರೆ ಅದಕ್ಕೂ ಮುನ್ನ ಇಬ್ಬರ ಡಿಗ್ರಿ ಮುಗಿಯಲಿ ಎಂದು ನಿರ್ಧರಿಸಿದರು. ಡಿಗ್ರಿಯೂ ಆಯಿತು, ಇಬ್ಬರೂ ಮನೆಯಲ್ಲಿ ಕೇಳುವ ಆ ದಿನವೂ ಬಂತು. ಇಬ್ಬರ ಮನೆಯಲ್ಲೂ ಬಂದ ಒಂದೇ ಉತ್ತರ ಅಂದರೆ ಬೇರೆ ಜಾತಿಯೆಂದು.

ಇಬ್ಬರಿಗೂ ಒಬ್ಬರನ್ನೊಬ್ಬರನ್ನು ಬಿಡುವ ಮನಸ್ಸಿಲ್ಲ ಜೊತೆಗೆ ಮನೆಯವರನ್ನೂ ನೋಯಿಸುವ ಮನಸ್ಸಿರಲಿಲ್ಲ. ಮರಳಿ ಯತ್ನವ ಮಾಡು ಅನ್ನುವಂತೆ ಅವರಿಬ್ಬರೂ ಮತ್ತೆ ಮತ್ತೆ ಈ ವಿಷಯದ ಬಗ್ಗೆ ಮನೆಯಲ್ಲಿ ಪ್ರಸ್ತಾಪವನ್ನೆತ್ತುತಿದ್ದರು. ಯಾವಾಗಲೂ ಸಿಗುತ್ತಿದ್ದುದು ಒಂದೇ ಉತ್ತರ, ಈ ನಡುವೆ ಸುಷ್ಮಾಳ ಮನೆಯಲ್ಲಿ ಬೇರೊಬ್ಬ ಹುಡುಗನನ್ನು ಹುಡುಕಲು ಶುರುಮಾಡಿದರು, ತಿಳಿದ ಸುಷ್ಮಾ ಇದನ್ನ ರಮೇಶನಿಗೆ ತಿಳಿಸಿದಾಗ ಅವನಿಗೂ ಗಾಬರಿಯಾಯಿತು. ವಿಧಿಯಿಲ್ಲದೆ ಮನಸ್ಸಿಲ್ಲದ ಮನಸ್ಸಿನಿಂದ ಓಡಿಹೋಗುವ ನಿರ್ಧಾರ ಮಾಡಿದರು.

ಬೇರೊಂದು ಊರಲ್ಲಿ ಸಂಸಾರ ಶುರುಮಾಡಿದ ಇಬ್ಬರೂ ಒಂದೊಂದು ಕೆಲಸವನ್ನು ಹುಡುಕಿಕೊಂಡರು. ಈ ನಡುವೆ ವಿಷಯ ತಿಳಿದ ಸುಷ್ಮಾಳ ಅಪ್ಪ ಅಮ್ಮನಿಗೆ ಬೇಸರವಾದರೂ ಅದನ್ನು ತೋರ್ಪಡಿಸದೆ ಆದದ್ದಾಯ್ತು ಎಂದು ಮಗಳು ಮತ್ತು ಅಳಿಯನನ್ನು ಒಮ್ಮೆ ಹೋಗಿ ನೋಡಿಕೊಂಡು ಬಂದಿದ್ದರು. ಆದರೆ ರಮೇಶನ ಮನೆಯಲ್ಲಿನ ಚಿತ್ರಣ ಬೇರೆಯ ತೆರನಿತ್ತು. ವಾಸ್ತವದಲ್ಲಿ ರಮೇಶನ ಅಪ್ಪ ಒಳ್ಳೆಯವರಿದ್ದರೂ ಮಗ ಹೀಗೆ ಮಾಡಿದ ಎಂದು ಕೋಪಗೊಂಡಿದ್ದರು. ಇವನೇನೋ ಮದುವೆಯಾಗಿ ಹೋದ ಆದರೆ ಮಗಳಿಗೆ ಗಂಡು ಕೊಡುವವರು ಯಾರು ಎಂದು ಮನಸ್ಸಿನಲ್ಲಿಯೇ ಕೊರೆಯುತ್ತಿತ್ತು, ಆ ಕೋಪವೇ ಒಂದೆರಡು ಸಲ ಸುಷ್ಮಾ, ರಮೇಶನ ಮೇಲೆ ಹಲ್ಲೆಯ ರೀತಿಯಲ್ಲಿ ವ್ಯಕ್ತವಾಗಿತ್ತು. ಅದ್ಹೇಗೋ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದರು.

ಇಲ್ಲಿದ್ದರೆ ಅಪಾಯವೆಂದರಿತು ಬೆಂಗಳೂರಿಗೆ ಬಂದರು. ಕಾಲ ಸರಿಯಿತು, ದಂಪತಿಗಳಿಬ್ಬರೂ ಅನ್ಯೋನ್ಯವಾಗಿ ಸಂಸಾರ ಸಾಗಿಸಿಕೊಂಡು ಹೋಗುತ್ತಿದ್ದರು, ಆದ್ರೆ ಒಂದು ಕೊರಗು ಇಬ್ಬರಲ್ಲೂ ಕಾಡುತ್ತಿತ್ತು ಅದೇನೆಂದರೆ ಮಕ್ಕಳಾಗಲಿಲ್ಲವೆಂದು. ಆಸ್ಪತ್ರೆ, ದೇವಸ್ಥಾನ ಹೀಗೆ ಎಲ್ಲಾ ರೀತಿಯ ಪ್ರಯತ್ನಗಳೂ ಆದವು ಆದರೆ ಏನೊಂದೂ ಪ್ರಯೋಜನವಾಗಲಿಲ್ಲ. ಒಂದು ದಿನ ಸುಷ್ಮಾ ರಮೇಶನಲ್ಲಿ ನಾವೊಂದು ಮಗುವನ್ನು ದತ್ತು ತೆಗೆದುಕೊಂಡರೆ ಹೇಗೆ ಎಂದಳು, ರಮೇಶನಿಗೂ ಅದು ಸರಿಯೆಂದೆನಿಸಿ ಒಂದು ಆಶ್ರಮಕ್ಕೆ ಹೋಗಿ ಒಂದು ಮಗುವನ್ನು ದತ್ತು ತೆಗೆದುಕೊಂಡರು.

..................

ಈಗ ಟಿ. ವಿಯಲ್ಲಿ ಬಂದ ಸುದ್ದಿಯತ್ತ ಗಮನಹರಿಸೋಣ.

ಹೀಗೆ ಚಾನೆಲ್ ಚೇಂಜ್ ಮಾಡ್ತಿದ್ದೆ, ಒಂದು ಚಾನೆಲ್ನಲ್ಲಿ ಯಾವುದೋ ಒಂದು ಹಸುಳೆಯ ತಲೆ ಮತ್ತು ಕೈಯನ್ನು ನಾಯಿಗಳು ತಿಂದಿದ್ದರ ಸುದ್ದಿ ಬರುತ್ತಿತ್ತು, ಜೊತೆಗೆ ಆ ದಿನ ಬೆಳಗ್ಗೆ ಯಾರೋ ಅಲ್ಲಿ ಹಸುಳೆಯನ್ನು ಹಾಕಿಹೋಗಿದ್ದಾರೆ ಎಂಬ ಸುದ್ದಿ ಬರುತ್ತಿತ್ತು. ಹದಿಹರೆಯದ ಆಕರ್ಷಣೆಗಳನ್ನು ತಡೆಯಲಾರದೆ ಬರೀ ನೋಟವೇ ಪ್ರೇಮವೆಂದು ಭಾವಿಸಿ ಮನಸ್ಸಿನ್ನೂ ಪಕ್ವವಾಗಿರದ ಸಮಯದಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಣಯಿಸಲಾಗದೆ, ಜೀವನಸಂಗಾತಿಯೆಂಬ ಪದಕೆ ಅರ್ಥವೇ ತಿಳಿಯದ ವಯಸ್ಸಿನಲ್ಲಿ ಮೈಮರೆತು ಮಾಡಿದ ತಪ್ಪಿಗೆ ಪಾಪದ ಕೂಸು ಜಗತ್ತನ್ನೇ ನೋಡಲಾಗದೆ ಅತ್ಯಂತ ದಾರುಣವಾಗಿ ಕೊಲೆಗೀಡಾಗಿತ್ತು.

ಬೇಕೇ ಇಂಥಾ ಆಕರ್ಷಣೆ????

ಎರಡು ಪ್ರಸಂಗಗಳೂ ಪ್ರೇಮಕ್ಕೆ ಸಂಬಂಧಿಸಿದ್ದೇ, ಆದರೆ ಫಲಿತಾಂಶ ಬೇರೆ ಬೇರೆ .


ಚಿತ್ರಕೃಪೆ: ಅಂತರ್ಜಾಲ.

Monday, October 3, 2011

ಕರಿಮಲೆಯ ಕಗ್ಗತ್ತಲಿನಲಿ

ಕರಿಮಲೆಯ ಕಗ್ಗತ್ತಲಿನಲಿ

ರಾಮಾಪುರ, ಮಲೆನಾಡಿನ ಒಂದು ಹಳ್ಳಿ, ಸುಮಾರು ೨೫ ಒಕ್ಕಲುಗಳು ವಾಸವಾಗಿದ್ದವು, ಜೊತೆಗೆ ಒಂದು ಬ್ರಾಹ್ಮಣ ಕುಟುಂಬ ಮತ್ತೆ ದಲಿತರ ಕಾಲೋನಿ. ಭೀಮೇಗೌಡರೇ ಊರಿನ ಪಟೇಲರಾಗಿದ್ದರು, ಅವರ ಅಪ್ಪ ಅಜ್ಜ ಮುತ್ತಜ್ಜನ ಕಾಲದಿಂದಲೂ ಇವರ ಮನೆಯವರೇ ಅದಕ್ಕೆ ವಾರಸುದಾರರಾಗಿದ್ದರು, ವಾಡಿಕೆಯಂತೆ ಅದು ಭೀಮೇಗೌಡರಿಗೆ ಒಲಿದಿತ್ತು. ಅವರ ವ್ಯಕ್ತಿತ್ವ ಜೊತೆಗೆ ಶ್ರೀಮಂತಿಕೆಯೂ ಅದು ಸೂಕ್ತವಾಗಿತ್ತು. ರಾಮಾಪುರದ ಪಶ್ಚಿಮಕ್ಕೆ ಇತ್ತು ಕರಿಮಲೆ. ಊರಿನ ಮೇಲ್ಬದಿಯಲ್ಲಿ ಮನೆಗಳಿದ್ದರೆ ಕೆಳಗೆ ಗದ್ದೆಗಳು, ಹಾಗೆ ಇಳಿಜಾರಿನಲ್ಲಿ ಗದ್ದೆಯ ಸಾಲುಗಳು ಕೊನೆಯಾಗುತ್ತಿದ್ದಂತೆ ಹೊಳೆ, ಹೊಳೆಯಾಚೆ ಇದ್ದದ್ದೇ ಕರಿಮಲೆ. ಹೊಸಬರೇನಾದರೂ ಬಂದು ಕರಿಮಲೆ ಒಳಗೆ ಪ್ರವೇಶಿಸಿದರೆ ಇದನ್ಯಾರಪ್ಪ ಕರಿಮಲೆ ಅಂತ ಕರೀತಾರೆ ಅನ್ನಬಹುದು ಯಾಕೆಂದರೆ ಕಾಡು ಶುರುವಾಗುವಾಗ ಸಿಗುವ ಸಣ್ಣ ಸಣ್ಣ ಗಿಡ ಮರಗಳು ಅದರಾಚೆಗೂ ಅಂದರೆ ಒಂದು ೩೦ ಎಕರೆಯಷ್ಟರ ಮಟ್ಟಿಗೆ ಹಾಗೇ ಇತ್ತು ಅದರ ಮುಂದೆ ಹೋದರೆ ಕರಿಮಲೆಯ ಹೆಸರಿಗೆ ತಕ್ಕಂತಿತ್ತು. ಬೃಹತ್ ಗಾತ್ರದ ಮರಗಳು, ಒಂದಕ್ಕೊಂದು ಬೆಸೆದುಕೊಂಡಿದ್ದವು ಜೊತೆಗೆ ಅದಕ್ಕೆ ಹಬ್ಬಿಕೊಂಡ ಬಳ್ಳಿಗಳೂ. ಕಾಡುಪ್ರಾಣಿಗಳು, ವಿಷಜಂತುಗಳು, ಚಿತ್ರವಿಚಿತ್ರ ಹಾವುಗಳು ಅಲ್ಲಿ ಹೇರಳವಾಗಿದ್ದವು. ರಾಮಾಪುರದವರ್ಯಾರೂ ಅತ್ತಕಡೆ ಹೋಗುತ್ತಿರಲಿಲ್ಲ. ಅವರ ಮನೆಯ ಎತ್ತುಗಳು ಕರಿಮಲೆಗೆ ಹೋಗಿ ವಾಪಸ್ ಬರುತ್ತಿರಲಿಲ್ಲ, ಹಿಂದೊಮ್ಮೆ ತನ್ನ ಎತ್ತನ್ನು ಹುಡುಕಿಕೊಂಡು ಹೋದ ರಾಜೇಗೌಡನ ಆಳು ನಿಂಗ ವಾಪಸ್ ಬಂದಿರಲಿಲ್ಲ, ಹಾಗಾಗಿ ಆ ಊರಿನವರು ಅತ್ತ ಕಡೆ ಹೋಗುತ್ತಿರಲಿಲ್ಲ, ಜೊತೆಗೆ ಆಗಾಗ ಕೇಳಿಸುತ್ತಿದ್ದ ಹುಲಿಯ ಘರ್ಜನೆ ಕೂಡ ಅವರನ್ನು ಅತ್ತ ಕಡೆ ಹೋಗದಂತೆ ತಡೆಹಿಡಿದಿತ್ತು.

ಬಸವ, ತನ್ನ ಮೈಯನ್ನು ಗೋಡೆಗೆ ಉಜ್ಜಿ ಉಜ್ಜಿ ತನ್ನ ಕೆರೆತವನ್ನು ಶಮನ ಮಾಡಿಕೊಳ್ಳಲು ಪ್ರಯತ್ನಿಸುತ್ತಿತ್ತು. ಹಾಗೆ ಕೆರೆದುಕೊಳ್ಳುತ್ತಾ ತನ್ನ ಪಕ್ಕದಲ್ಲಿದ್ದ ತಂಗಿಯನ್ನು ನೋಡಿತು. ಸೀತೆ, ತನ್ನ ಪಕ್ಕದಲ್ಲಿ ಹಾಕಿದ್ದ ಹುಲ್ಲನ್ನು ಮೆಲ್ಲುತ್ತಿತ್ತು. ತನ್ನ ಹಿಂದೆ ಇದ್ದದ್ದು ಕರಿಯ, ಅದನ್ನು ಯಜಮಾನರು ಈ ಹಿಂದೆ ಅಂದರೆ ೩ ವರ್ಷಗಳ ಹಿಂದೆ ಪಕ್ಕದೂರಿನಿಂದ ಕೊಂಡುಕೊಂಡು ಬಂದಿದ್ದರು. ಕರಿಯ ಹೆಸರಿಗೆ ಕಪ್ಪಗಿದ್ದರೂ ಸಾಧು ಸ್ವಭಾವದ ಪ್ರಾಣಿ. ಒಟ್ಟಿನಲ್ಲಿ ಆ ಹಟ್ಟಿಯಲ್ಲಿ ಈ ಮೂವರದೇ ಸಾಮ್ರಾಜ್ಯ.

ತನ್ನ ಜನ್ಮದಿಂದಲೂ ಬಸವ ಭೀಮೇಗೌಡರ ಮನೆಯಲ್ಲೇ ಇತ್ತು, ಗೌಡರ ಮನೆಗೆ ಅದು ಅವರ ಮನೆಯ ಆಳಿಗಿಂತಲೂ ಹೆಚ್ಚಾಗಿ ಕೆಲಸ ಮಾಡುತ್ತಿತ್ತು. ಮಳೆಗಾಲದ ಬೆಳೆಗಾಗಿ ಹೊಲ ಉಳುವುದಕ್ಕಾಗಿ ನೇಗಿಲಿಗೆ ಹೆಗಲಾಗುತ್ತಿತ್ತು, ಅಲ್ಲದೆ ಬೇಸಗೆ ಕಾಲದಲ್ಲೂ ಮತ್ತೊಂದು ಬೆಳೆ ಬೆಳೆಯುತ್ತಿದ್ದುದರಿಂದ ಆಗಲೂ ಅದು ತನ್ನ ಕರ್ತವ್ಯ ಮಾಡುತ್ತಿತ್ತು.

ಬಸವ ಹೆಸರಿಗೆ ತಕ್ಕ ಹಾಗೆ ಊರ ಬಸವನಂತಿದ್ದ. ಅಂದರೆ ಕಂಡ ಕಂಡಲ್ಲಿ ತಿರುಗಾಡುವುದೆಂದರೆ ಅದಕ್ಕೆ ಪಂಚಪ್ರಾಣ, ಹಾಗೇ ಬಲಿಷ್ಟವಾಗಿಯೂ ಆಗಿತ್ತು, ಕಾರಣ, ಮನಯಲ್ಲಿ ಚೆನ್ನಾಗಿಯೇ ಸಿಕ್ಕುತ್ತಿದ್ದ ಮುಸುರೆ ಅಥವಾ ಹಿಂಡಿ ಅಲ್ಲ, ಸಮಯ ಸಿಕ್ಕಾಗ ಅಂದರೆ ಮೇಯಲು ಹೋದಾಗ, ಕಾಯುತ್ತಿದ್ದ ಸೋಮ ಸ್ವಲ್ಪ ಕಾಣಿಸದಿದ್ದರೂ ಅಥವಾ ಮೇಯುವಂತೆ ನಟಿಸಿ ಮುಂದೆ ಮುಂದೆ ಹೋಗುತ್ತಾ ಹತ್ತಿರವಿದ್ದ ಕಾಡಿಗೆ ನುಗ್ಗುತ್ತಿತ್ತು. ಹಾಗೆ ಹೋದ ಬಸವ ತಿರುಗಿ ಬರುತ್ತಿದ್ದದ್ದು ಏನಿಲ್ಲವೆಂದರೂ ಒಂದು ವಾರದ ತರುವಾಯ. ಊರಿನವರು ಅದೇನಾದರೂ ಎದುರಿಗೆ ಬಂದರೆ ಅದು ಹೋಗುವವರೆಗೆ ನಿಂತಲ್ಲಿಯೇ ಇರುತ್ತಿದ್ದರು, ಯಾರಿಗೂ ಅದು ತೊಂದರೆ ಮಾಡದಿದ್ದರೂ ಅದರ ಆಕಾರಕ್ಕೆ ಮತ್ತು ಅದರ ನೆಟ್ಟನೆ ಕೋಡುಗಳಿಗೆ ಬೆದರುತ್ತಿದ್ದರು!!!!

ಅದು ಕಾಡಿಗೆ ಹೋಯಿತು ಎಂದರೆ ಸೋಮನಿಗೆ ಕೆಟ್ಟ ಕಾಲ ಬಂದಿದೆಯೆಂದೇ ಅರ್ಥ, ಯಾಕೆಂದರೆ ಗೌಡರು ಅವನನ್ನು ಸುಮ್ಮನೆ ಬಿಡುತ್ತಿರಲಿಲ್ಲ, ಮುಖ ಮೂತಿ ಬೆವರಿಳಿಯುವಂತೆ ಬೈಗುಳಗಳು ಗೌಡರ ಬಾಯಿಯಿಂದ ಸರಾಗವಾಗಿ ಅಷ್ಟೇ ಕೊಪೋದ್ರಿಕ್ತವಾಗಿ ಬರುತ್ತಿದ್ದವು, ಒಮ್ಮೊಮ್ಮೆ ಹೊಡೆತಗಳೂ ಬೀಳುತ್ತಿದ್ದವು. ಹೊಡೆತ ಬೀಳುತ್ತಿದ್ದ ಸಮಯವೆಂದರೆ ಬೇಸಾಯದ ಕಾಲದಲ್ಲಿ. ಇದ್ದ ಎರಡು ಎತ್ತುಗಳಲ್ಲಿ ಒಂದು ಹೋದರೆ ಬೇಸಾಯ ಮಾಡುವುದಕ್ಕೆ ಬೇರೆಯವರ ಮನೆಯವರ ಎತ್ತುಗಳನ್ನು ಆಶ್ರಯಿಸಬೇಕಲ್ಲ ಎನ್ನುವುದು ಗೌಡರ ಕೋಪಕ್ಕೆ, ಹೊಡೆತಕ್ಕೆ ಕಾರಣವಾಗುತ್ತಿತ್ತು. ಸೋಮನಿಗೆ ಈ ಎಲ್ಲಾ ವಿಷಯಗಳು ತಿಳಿದಿದ್ದ ಕಾರಣ ಅವನೂ ತನ್ನ್ನ ರಕ್ಷಣೆಗೆ ತುಂಬಾ ಪ್ರಯತ್ನಪಡುತ್ತಿದ್ದನು. ಅಂದರೆ, ಬಸವನನ್ನು ತನ್ನ ಹದ್ದು ಕಣ್ಣಿಂದ ಕಾಯುತ್ತಿದ್ದನು.

ಆದರೂ ಕೆಲವೊಂದು ಕ್ಷಣದಲ್ಲಿ ನಡೆಯುತ್ತಿದ್ದ ಘಟನೆಗಳಲ್ಲಿ ಅಂದರೆ ಯಾರಾದರೂ ಗೌಡರು ಅಲ್ಲಿ ಬಂದರೆ ತಮ್ಮ ಗದ್ದೆಗೆ ಸ್ವಲ್ಪ ನೀರನ್ನು ಕಟ್ಟಲು ಹೇಳಿದಾಗ ಅಥವಾ ತನ್ನ ಕಾಲೋನಿಯವರು ತಾನಿರುವಲ್ಲಿ ಬಂದಾಗ ಅವರೊಡನೆ ಹರಟೆ ಹೊಡೆಯುತ್ತಿದ್ದಾಗ ಹೀಗೆ ಹಲವು ಕಾರಣಗಳಿದ್ದಾಗ ಬಸವ ಮಿಂಚಿನಂತೆ ಕಾಡೊಳಗೆ ನುಗ್ಗುತ್ತಿತ್ತು. ಸೋಮನ ಪಕ್ಕದಲ್ಲಿದ್ದವರು 'ಸೋಮ ಹೋಯ್ತಲ್ಲೋ ಬಸವ' ಅಂದಾಗಲೇ ಅವನಿಗೆ ಪ್ರಜ್ಞೆ ಬಂದಂತಾಗಿ ಕಾಡೊಳಗೆ ನುಗ್ಗುತ್ತಿದ್ದನು, ಬಸವನಿಂದಾಗಿ ಸೋಮನಿಗೂ ಆ ಕಾಡು ಸ್ವಲ್ಪಮಟ್ಟಿಗೆ ಚಿರಪರಿಚಿತವಾಗಿತ್ತು ಅಂದರೆ ಬೆಟ್ಟದ ಬುಡದವರೆಗೆ, ಆದರೂ ಅವನಿಗೆ ಬಸವನನ್ನು ಹುಡುಕಿ ತರಲು ಆಗುತ್ತಿರಲಿಲ್ಲ ಕಾರಣ ಬಸವ ಕರಿಮಲೆಗೆ ಹೋಗುತಿದ್ದುದರಿಂದ. ಸೋಮ ಗೌಡರ ಕೋಪವನ್ನ ನೆನಸಿಕೊಂಡು ಅಲ್ಲಿಗೂ ನುಗ್ಗುತ್ತಿದ್ದನೇನೋ ಆದರೆ ಅಲ್ಲಿ ಹುಲಿಯಿದೆಯೆಂದು ಯಾರೋ ಹೆದರಿಸಿದ್ದರಿಂದ ಅವನು ಅತ್ತ ಕಡೆ ತಲೆ ಹಾಕುತ್ತಿರಲಿಲ್ಲ. ಬಸವ ಹಲವು ಬಾರಿ ಕರಿಮಲೆಗೆ ಹೋಗುತ್ತಿದ್ದರೂ ವಾಪಸ್ ಬರುತ್ತಿದ್ದದ್ದು ಎಲ್ಲರಿಗೂ ಸೋಜಿಗವಾಗಿತ್ತು, ಗೌಡರೂ ಸಹ ಅದು ಹಿಂದಿರುಗ್ಗುತ್ತಿದ್ದುದರಿಂದ ಆ ವಿಷಯದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿರಲಿಲ್ಲ.

ಮೊದಮೊದಲು ಬಸವ ಕರಿಮಲೆಗೆ ಹೋದಾಗ ಆರಾಮಾಗಿ ಅಲ್ಲೇ ತಿಂದು ಇದ್ದು ಸಾಕೆನಿಸಿದಾಗ ತನ್ನ ಹಟ್ಟಿಗೆ ಹೆಜ್ಜೆಹಾಕುತ್ತಿತ್ತು. ಒಮ್ಮೆ ಹೀಗೆ ಕಾಡಲ್ಲಿ ಯಾವುದೇ ಅಂಜಿಕೆಯಿಲ್ಲದೆ ರಾಜಾರೋಷವಾಗಿ ಮೇಯುತ್ತಿತ್ತು, ಸ್ವಲ್ಪ ಸಮಯದ ಬಳಿಕ ತಾನು ನಿಂತಿದ್ದ ಮರದ ಮುಂದೆ ಸದ್ದಾಗಿ ಏನೋ ಅನಾಹುತವಾಗುವುದರ ಮುನ್ಸೂಚನೆಯನ್ನು ಗ್ರಹಿಸಿ ಮೇಯುವುದನ್ನು ನಿಲ್ಲಿಸಿ ಸುತ್ತಲೂ ನೋಡತೊಡಗಿತು. ಸದ್ದು ನಿಂತಿತು, ಆದರೂ ಬಸವ ಅಲ್ಲೇ ತನ್ನ ಕಣ್ಣನ್ನು ನೆಟ್ಟಿತ್ತು. ಸ್ವಲ್ಪ ಮೇಯುವುದು ಮತ್ತೆ ನೋಡುವುದು ಹಾಗೇ ಮಾಡುತ್ತಿತ್ತು, ಒಡನೆಯೇ ಹುಲಿಯೊಂದು ಇದರ ಮೈಮೇಲೆ ಹಾರಿತು, ಅನಿರೀಕ್ಷಿತವಾಗಿ ಬಂದ ಶತ್ರುವಿಗೆ ಸಿದ್ಧವಾಗಿಯೇ ಇದ್ದ ಬಸವ ಆಚೆ ಸರಿದು ಹೂಂಕರಿಸುತ್ತ ತನ್ನ ಕೋಡನ್ನು ಮುಂದೆ ಚಾಚಿತು, ಹುಲಿಯೇನೋ ಹಾರಿತು ಆದರೆ ಬಸವನ ದೂರಾಲೋಚನೆ ಅದಕ್ಕೆ ತಿಳಿದಿರಲಿಲ್ಲ, ಬಸವ ಅದರ ಎದೆಯ ಭಾಗಕ್ಕೆ ತನ್ನ ಕೋಡುಗಳನ್ನು ಚುಚ್ಚಿತ್ತು. ಎದೆಯ ಮಾಂಸ ಸ್ವಲ್ಪ ಹರಿದು ಹುಲಿ ನೋವಿನಿಂದ ನರಳಿ ಶಕ್ತಿಯೆಲ್ಲಾ ಉಡುಗಿದ ಪರಿಣಾಮ ಬಸವನ ಮೇಲೆ ಮತ್ತೊಮ್ಮೆ ಆಕ್ರಮಣ ಮಾಡಲಾರದೆ ಕಾಡಿನಲ್ಲಿ ಮರೆಯಾಯಿತು. ಬಸವ ಬದುಕಿದೆ!! ಎಂದು ಹಟ್ಟಿಯ ಕಡೆ ಹೊರಟಿತು.

ಬೇಸಗೆಯೆಲ್ಲ ಕಳೆದು ಮೋಡಗಳು ಮಲೆನಾಡಿನ ಕಡೆ ಬರತೊಡಗಿದ್ದವು, ಗೌಡರು ಮಳೆ ಬರುವ ಮುನ್ಸೂಚನೆಯನ್ನರಿತು ಬಸವನನ್ನು ಎಲ್ಲೂ ಹೊರಗೆ ಬಿಡದೆ ಒಂದು ವಾರದ ಮೊದಲೇ ಹಟ್ಟಿಯಲ್ಲಿ ಕಟ್ಟಿಹಾಕಿದ್ದರು, ಮನೆಯ ಮುಸುರೆ, ಕಣದಲ್ಲಿದ್ದ ಬಿಳಿಯ ಹುಲ್ಲೇ ಅದಕ್ಕೆ ಆಹಾರ.

ಹಿಂದಿನ ದಿನ ಗೌಡ್ರು ಹೋಗಿ ಚಂದ್ರನ ಬಿಡಾರದತ್ತ ಬರುತ್ತಿದ್ದಂತೆ ದೂರದಿಂದ ಗೌಡ್ರು ಬರುವುದನ್ನೇ ಗಮನಿಸಿದ ಚಂದ್ರ ಹಿತ್ತಲಲ್ಲಿಮುಖ ತೊಳೆದುಕೊಳ್ಳುತ್ತಿದ್ದವನು ಚಂಬನ್ನು ಅಲ್ಲೇ ಎಸೆದು ಸಿದ್ಧನ ಬಿಡಾರದತ್ತ ಓಡಿಹೋಗಿ ತನ್ನ ಬಿಡಾರದತ್ತ ಬಂದ ಗೌಡರನ್ನು ಗಮನಿಸುತ್ತಿದ್ದನು!!

ಗೌಡ್ರು ತಮ್ಮ ಎಂದಿನ ಶೈಲಿಯಲ್ಲಿಯೇ ಒಂದು ಕೈನಲ್ಲಿ ಕೊಡೆ ಇನ್ನೊಂದರಲ್ಲಿ ಸೀಗೆಕತ್ತಿಯನ್ನು ಹಿಡಿದುಕೊಂಡು ಕಾಲೋನಿಯತ್ತ ಹೆಜ್ಜೆ ಹಾಕಿದ್ದರು, ಟೈಗರ್ (ಅವರ ನಾಯಿ, ಕಂತ್ರಿನಾಯಿಯಾಗಿದ್ದರೂ ಹೆಸರಿಗೆ ತಕ್ಕ ಹಾಗೆ ದಪ್ಪನಾಗಿ ದಷ್ಟಪುಟ್ಟವಾಗಿತ್ತು) ಸಹ ಅವರ ಹಿಂದೆಯೇ ಬರುತ್ತಿತ್ತು. ಕಾಲೋನಿಯಲ್ಲಿದ್ದ ನಾಯಿಗಳೆಲ್ಲ ಆಜಾನುಬಾಹು ಗೌಡರನ್ನು ನೋಡಿ ಒಂದೇ ಸಮನೆ ದೂರದಿಂದಲೇ ಬೊಗಳಲಾರಂಭಿಸಿದವು, ಯಾವಾಗ ಟೈಗರ್ ಮುಖ ಕಂಡಿತೋ ಆಗ ಬೊಗಳುತ್ತಿದ್ದ ನಾಯಿಗಳೆಲ್ಲಾ ಬಾಲ ಮುದುರಿಕೊಂಡು ಸುಮ್ಮನಾದವು, ಗೌಡ್ರು ಟೈಗರ್ ನೋಡಿ ಮುಗುಳ್ನಗೆ ನಕ್ಕು ಮುಂದೆ ಹೊರಟರು, ಟೈಗರ್ ಸಹ ಏನೋ ಸಾಧನೆ ಮಾಡಿದೆ ಎಂದು ತನ್ನ ಬಾಲವನ್ನು ಎತ್ತಿಕೊಂಡು ಗೌಡರನ್ನ ಹಿಂಬಾಲಿಸಿತು.

ಚಂದ್ರ ಚಂದ್ರ ಎಲ್ಲಿ ಸತ್ತು ಹೋದ್ಯೋ, ಒಂದು ತಿಂಗ್ಲಾಯ್ತಲ್ಲೋ ನಿನ್ನ ಮಖ ಕಾಣದೆ, ಸಾಲ ಬೇಕು ಅಂದಾಗ ದಮ್ಮಯ್ಯ ಅಂತ ಬರ್ತೀರಾ, ನಮಗೆ ಬೇಕಾದಾಗ ಎಲ್ಲಿ ಸಾಯ್ತೀರೋ.....ಇನ್ನೂ ಏನೋ ಹೇಳೋದ್ರಲ್ಲಿದ್ರು ಗೌಡ್ರು ಅಷ್ಟೊತ್ತಿಗೆ ಮಂಜಿ ಬಿಡಾರದಿಂದ ಹೊರಗೆ ಬಂದಳು.

ಎಲ್ಲಿ ಸತ್ನೇ ಅವ್ನು, ಸಾಲ ನಮ್ಹತ್ರ ಮಾಡೋದು ಕೆಲ್ಸಕ್ಕೆ ಬೇರೆಯವರ ಮನೆಗೆ ಹೋಗೋದಾ?? ಬಡ್ಡಿಮಗ ಮನೆಗೆ ಬರೋಕ್ಹೇಳು ಅವನಿಗೆ ಬಡ್ಡಿ ಸಮೇತ ಅಸಲು ಕಕ್ಲಿಕ್ಕೆ ಹೇಳ್ತೀನಿ!! ಆಮೇಲೆ ಯಾವನ್ಮನೆಗಾದ್ರೂ ಹೋಗಿ ಸಾಯ್ಲಿ. ನಿಂಗೇನು ಹೊತ್ತು ಬಂದಿರೋದು?? ಗಂಡ ಹೆಂಡ್ತಿ ಬೇರೆರ್ಮನೆ ಕೆಲ್ಸಕ್ಕೆ ಹೋಗಿ, ನಾನು ನನ್ನ ಗದ್ದೆ ತೋಟನೆಲ್ಲ ಹಾಳು ಬಿಟ್ಕೊಂಡು ಸಾಯ್ತೀನಿ, ಈ ಸಂಪತ್ತಿಗೆ ಸಾಲ ಕೊಡ್ಬೇಕು ನಿಮ್ಗೆ.

ಮಂಜಿ ಗೌಡರನ್ನ ನೋಡೇ ಅರ್ಧ ಬೆವ್ತಿದ್ಲು ಅವ್ರ ಮಾತು ಕೇಳಿದ್ದ ಹಾಗೆ 'ಇಲ್ಲ ಗೌಡ್ರೆ ಹಂಗೆಲ್ಲ ಮಾಡ್ಬೇಡಿ, ಒಂದೆರಡು ದಿನ ಹೊಳ ಹೊಡೆಯೋದಿದೆ ಬನ್ನಿ ಅಂತ ರಾಯಪ್ಪಗೌಡ್ರು ಹೇಳಿದ್ರು ಹಂಗಾಗಿ ಅಲ್ಲಿಗೆ ಹೋಗಿದ್ವಿ, ನಾಳೆಯಿಂದ ಬಂದೆ ಬರ್ತೀವಿ'.

ಆ ರಾಯಪ್ಪಂಗೆ ಹೇಳ್ತೀನಿ ನನ್ನ ಸಾಲ ನೀನು ಕೊಡು ಇವರನ್ನ ಬೇಕಾದ್ರೆ ನೀನೇ ಇಟ್ಕೋ ಅಂಥಾ (ಗೌಡ್ರು ಸುಮ್ನೆ ಹಾಗೆ ಹೇಳಿದ್ರು) ಅಂದಾಗ ಮಂಜಿ ಇನ್ಮುಂದೆ ಎಲ್ಲೂ ಹೋಗಲ್ಲ ಗೌಡ್ರೆ ನಾಳೆಯಿಂದ ಬರ್ತೀವಿ ಅಂದಾಗ ಗೌಡ್ರು ನಿಮ್ದ್ಯಾವಗ್ಲೂ ಇದೆ ಕಥೆ, ಆ ಬಡ್ಡಿಮಗಂಗೆ ನಾಳೆ ಬಂದು ಬೇಸಾಯಕ್ಕೆ ಎತ್ತು ಕಟ್ಹೋಕೇಳು ಬರ್ಲಿಲ್ಲ ಅಂದ್ರೆ ಚಮ್ಡಾ ಸುಲೀತಿನಿ ಅನ್ನು ಅಂದು ಅಲ್ಲಿಂದ ಹೊರಟ್ರು.

ಮಳೆ ಒಂದೇ ಸಮನೆ ಸುರಿಯುತ್ತಿತ್ತು, ಎಲ್ಲರ ಮನೆಯಲ್ಲಿಯೂ ಗದ್ದೆಯ ಕೆಲಸ ಜೋರಾಗಿ ನಡೆಯುತ್ತಿತ್ತು. ಚಂದ್ರ ಬಸವ ಮತ್ತು ಕರಿಯನ ಸಮೇತ ಬೇಸಾಯ ಮಾಡುತ್ತಿದ್ದನು, ಸೋಮನೂ ಬೇಸಾಯ ಮುಗಿದಾಕ್ಷಣ ಅವುಗಳನ್ನು ಕಾಯುವ ಕೆಲಸವನ್ನು ನೀಟಾಗಿ ಮಾಡುತ್ತಿದ್ದನು, ಎಲ್ಲಕ್ಕಿಂತ ಮಿಗಿಲಾಗಿ ಬಸವನನ್ನು ತನ್ನ ಹದ್ದಿನ ಕಣ್ಣಿಂದ ಕಾಯುತ್ತಿದ್ದನು, ಬಸವನೂ ಓಡಿಹೋಗುವ ಪ್ರಯತ್ನ ಮಾಡುತ್ತಿರಲಿಲ್ಲ ಯಾಕೆಂದರೆ ಹೊಳೆಯು ತುಂಬಿ ಹರಿಯುತ್ತಿದ್ದುದರಿಂದ. ಮರ(ಕರಗು - ನಾಟಿಗಿಂತ ಮೊದಲು ಮಾಡುವ ಬೇಸಾಯ) ಹೊಡೆಯುವುದಕ್ಕೆ ಇನ್ನೊಂದು ವಾರ ಸಮಯವಿತ್ತು. ಗೌಡ್ರೆ ಈ ಮಳೆಲಿ ಇನ್ನೇನು ಹೊರ್ಗಡೆ ಮೇಯ್ಸೋದು ಇಲ್ಲೇ ಹಟ್ಟಿಲಿ ಇರ್ಲಿ ಅಕಸ್ಮಾತ್ ಬಸವ ತಪ್ಪಿಸಿಕೊಂಡ್ರೆ ಮರ ಹೊಡೆಯೋಕೆ ಸಿಗಲ್ಲ ಆಮೇಲೆ ಹುಡ್ಕೋದು ಕಷ್ಟ ಆಗತ್ತೆ ಎಂದು ಸೋಮ ಅಂದಾಗ ಆಯ್ತು ಹಾಗೆ ಮಾಡು ಆದ್ರೆ ಹುಲ್ಲು ಮುಸ್ರೆ ಚೆನ್ನಾಗಿ ಹಾಕು ಅಂದಿದ್ರು.

ಒಂದು ವಾರ ಆಯ್ತು, ಜೋರಾಗಿ ಬರುತ್ತಿದ್ದ ಮಳೆ ನಿಧಾನಕ್ಕೆ ಜಿಟಿಜಿಟಿಯಾಗಿ ಬರತೊಡಗಿತ್ತು. ಚಂದ್ರ ಬಂದು ಬಸವ,ಕರಿಯನನ್ನು ಕರೆದುಕೊಂಡು ಮರದ ಸಮೇತ ಹೊರಟನು, ಗೌಡ್ರು ಹೊಳೆ ಸಾಲಿನ ಗದ್ದೆ ಮೊದಲು ಮುಗೀಲಿ ಅಂದಿದ್ರಿಂದ ಅಲ್ಲಿಂದಲೇ ಶುರು ಮಾಡಿದ್ದನು. ಮಧ್ಯಾನ್ಹದ ಹೊತ್ತಿಗೆ ಹೊಳೆಯ ಎರಡು ಗದ್ದೆಗಳು ಮುಗಿದಿತ್ತು. ಚಂದ್ರ ತನ್ನ ಕೆಲಸ ಮುಗಿಸಿ ಎತ್ತುಗಳನ್ನು ಮೇಯಲು ಬಿಟ್ಟನು, ಹೆಣ್ಣಾಳುಗಳು ನಾಟಿ ಶುರುಮಾಡಿದ್ದರು. ಸೋಮ ಎತ್ತುಗಳನ್ನು ಹೊಳೆಯ ದಡದಲ್ಲಿ ಮೇಯಿಸುತ್ತಾ ನಾಟಿ ಮಾಡುತ್ತಿದ್ದವರ ಜೊತೆ ಮಾತನಾಡುತ್ತಾ ಕುಳಿತಿದ್ದನು. ಬಸವ ಕಾಡಿಗೆ ಹೋಗುವುದಿಲ್ಲ ಅಂದುಕೊಂಡು ಅವನು ಹೆಣ್ಣಾಳುಗಳ ಜತೆ ಹರಟುತ್ತಿದ್ದನು. ಚಂದ್ರ ಗದ್ದೆಯಲ್ಲಿದ್ದ ನೀರು ಬಸಿದುಹೋಗಲೆಂದು ಹಾರೆಯಿಂದ ಚರಂಡಿಯ ಮಣ್ಣನ್ನು ತೆಗೆಯುತ್ತಿದ್ದನು.

ಸೋಮ ಹೋಯ್ತಲ್ಲೋ ಬಸವಾ ಅಂತ ಚಂದ್ರ ಅಂದಾಗ್ಲೇ ಸೋಮ ಅತ್ತ ಕಡೆ ನೋಡಿದಾಗ ಬಸವ ಆಗಲೇ ಹೊಳೆಯನ್ನು (ಸ್ವಲ್ಪ ದಿನದಿಂದ ಮಳೆ ಕಡಿಮೆಯಾದ ಕಾರಣ ಹೊಳೆಯ ಅಬ್ಬರ ಇಳಿದಿತ್ತು) ದಾಟಿ ಕರಿಮಲೆಯ ಕಡೆ ಹೆಜ್ಜೆ ಹಾಕುತ್ತಿತ್ತು. ಸೋಮ ಗಾಬರಿಯಾಗಿ ಚಂದ್ರನ್ನ ಏನ್ಮಾಡೋದೋ ಈಗ ಅಂದಾಗ ನಿನ್ನ ಕಥೆ ಮುಗೀತು ಇವತ್ತು ಬಿಡು ಅಂದ!!!!!. ಸೋಮ, ಚಂದ್ರ ಹೆಣ್ಣಾಳುಗಳೆಲ್ಲಾ ಹೊಳೆಯ ಈ ಬದಿ ನಿಂತು ಆ ಕಡೆ ನೋಡುತ್ತಿದ್ದರು. ಚಂದ್ರಣ್ಣ ಕಾಡೊಳಗೆ ಹೋಗಣ ಬಾರೋ ಅಂತಿದ್ದ ಸೋಮ.

ತುಂಬಾ ದಿನ ಹಟ್ಟಿಯಲ್ಲಿದ್ದುದರಿಂದ ಬೇಸತ್ತ ಬಸವ ಮರ ಹೊಡೆದ ಮೊದಲ ದಿನ ಬೇಸಾಯ ಬಿಟ್ಟ ಮೇಲೆ ಮೇಯುತ್ತಿತ್ತು, ಅವಕಾಶ ಸಿಕ್ಕಿದ ತಕ್ಷಣ ಹೊಳೆ ದಾಟಿ ಕರಿಮಲೆಯ ಕಡೆ ಹೆಜ್ಜೆ ಹಾಕಿತ್ತು.

ಇವರ ಗದ್ದಲ ಕೇಳಿ ತಮ್ಮ ಪಾಲಿನ ಗದ್ದೆಗಳಲ್ಲಾಗಿದ್ದ ಕೆಲಸಗಳನ್ನ ನೋಡುತ್ತಾ ಹೊಳೆಕಡೆಗೆ ಬರುತ್ತಿದ್ದ ಗೌಡ್ರು ಒಂದೇ ಸಮನೆ ಓಡಿಬಂದರು. ಏನ್ರೋ ಏನಾಯ್ತ್ರೋ ಅಂದಾಗ ಮೊದಲೇ ಗಾಬರಿಯಾಗಿದ್ದ ಚಂದ್ರ ಗೌಡ್ರಿಗೆ ಕಾಣದಂತೆ ಹಿಂದೆ ಸರಿದನು. ಚಂದ್ರ ನಡುಗುತ್ತಲೇ, ಗೌಡ್ರೇ ಬಸವ ಕಾಡು ಹತ್ತಿತು. ಗೌಡ್ರು ಕೆಂಡಾಮಂಡಲವಾದರು. ಎಲ್ಲ್ಹೋದ ಅವ್ನು ಅಂತ ಕೈಲಿದ್ದ ಸೀಗೆಕತ್ತಿ ಎತ್ತಿದ್ರು. ಸೋಮ ನಡುಗುತ್ತಲೇ ಮುಂದೆ ಬಂದ :(. ಹೊಟ್ಟೆಗೆ ಏನು ತಿನ್ತೀಯೋ, ದನ ಕಾಯೋಕು ಲಾಯಕ್ಕಿಲ್ವಲ್ಲೋ ನೀನು ಥೂ ನಿನ್ ಜನ್ಮಕ್ಕೊಂದಿಷ್ಟು. ಇನ್ನೊಂದೆರಡು ದಿನ ಆಗಿದ್ರೆ ಬೇಸಾಯನೇ ಮುಗೀತಿತ್ತಲ್ಲೋ. ಚಂದ್ರ ನಡೀ ಹೋಗಿ ಹೆಂಗಾದ್ರೂ ಹುಡ್ಕೊಂಡು ಬರೋಣ ಅಂದ್ರು. ಗೌಡ್ರೆ ಕೋವಿ ಅಂತ ಚಂದ್ರ ಅಂದಾಗ ಈಗ ಮನೆಗೆ ಹೋಗಿ ತರೋಹೊತ್ತಿಗೆ ಬಸವ ಕರಿಮಲೆ ತುದೀಲಿ ಇರ್ತಾನೆ ಬೇಡ ನಡಿ ಅಂತ ಕಾಡೊಳಗೆ ನುಗ್ಗಿದ್ರು, ಚಂದ್ರ ಮತ್ತೆ ಸೋಮ ಅವರ ಹಿಂದೆ ಜೊತೆಗೆ ಟೈಗರ್ ಅವರನ್ನ ಹಿಂಬಾಲಿಸಿದ್ರು.

ಹೊಳೆ ದಾಟಿ ಕಾಡೊಳಗೆ ಬಂದವರು ಸುಮಾರು ಹೊತ್ತು ಹುಡುಕಿದರೂ ಬಸವನ ಸುಳಿವೇ ಕಾಣಲಿಲ್ಲ, ಅವರಾಗಲೇ ಸಣ್ಣ ಕಾಡನ್ನು ದಾಟಿ ಕರಿಮಲೆಯ ಹತ್ತಿರ ಬಂದಾಗಿತ್ತು. ಚಂದ್ರನೂ ಗೌಡರ ಹಾಗೆ ಗಟ್ಟಿ ಎದೆಯವನೇ, ಆದರೆ ಸೋಮನಿಗೆ ಅಷ್ಟು ಧೈರ್ಯವಿರಲಿಲ್ಲ. ಅವನು ಚಂದ್ರನ ಕಿವಿಯಲ್ಲಿ ಚಂದ್ರಣ್ಣ ಕರಿಮಲೆಗೆ ಬಂದ್ವಿ ಯಾಕೋ ತಿರ್ಗಿಹೊಗೋದು ಒಳ್ಳೇದಲ್ವ ಅಂದ ಆದ್ರೆ ಚಂದ್ರ ಅವ್ನ ಮಾತನ್ನ ಕಿವಿಗೆ ಹಾಕಿಕೊಳ್ಳಲಿಲ್ಲ. ಸಂಜೆಯಾಗತೊಡಗಿತ್ತು, ಮೊದಮೊದಲು ಸೂರ್ಯನ ಕಿರಣಗಳು ಅಲ್ಲಲ್ಲಿ ಬೀಳುತ್ತಿದ್ದವು ಮುಂದೆ ಮುಂದೆ ಹೋದಂತೆ ಬರೀ ಬೆಳಕಿತ್ತು. ಕರಿಮಲೆಯೊಳಗೆ ಕತ್ತಲು ನಿಧಾನಕ್ಕೆ ಹೆಜ್ಜೆಯಿಡುತ್ತಿತ್ತು.

ಗೌಡ್ರೆ ಇಲ್ಲಿ ನೋಡಿ ಯಾವ್ದೋ ಹೆಜ್ಜೆಗಳು ಕಾಣಿಸ್ತಿವೆ ಅಂದ ಸೋಮ, ಟೈಗರ್ ಸೋಮನ ಹಿಂದೆ ನಿಂತಿತ್ತು. ಗೌಡ್ರು ಚಂದ್ರ ಅವನಿದ್ದಲ್ಲಿಗೆ ಹಿಂದುರುಗಿ ಬಂದ್ರು. ಚಂದ್ರ ಅದ್ನ ನೋಡಿ ಸ್ವಲ್ಪ ಗಾಬರಿಯಾಗಿ ಗೌಡ್ರೆ ಇದ್ಯಾಕೋ ಹುಲಿ ಹೆಜ್ಜೆ ಹಾಗೆ ಕಾಣ್ಸತ್ತೆ ಅಲ್ಲದೆ ಎತ್ತಿನ ಹೆಜ್ಜೇನೂ ಇವೆ ನೋಡಿ ಅಂತ ತೋರ್ಸಿದ. ಗೌಡ್ರು ಸಹ ಸ್ವಲ್ಪ ಗಾಬರಿಯಾದ್ರೂ ಅದನ್ನ ತೋರಿಸದೆ ಈಗೆನ್ಮಾಡೋದು ಅಂದ್ರು. ಸೋಮ ಆ ವಿಷಯ ಕೇಳೇ ನಡುಗುತ್ತಿದ್ದ. ಗೌಡ್ರೆ ಇಲ್ಲೇ ಎಲ್ಲೋ ಸ್ವಲ್ಪ ದೂರದಲ್ಲೇ ಬಸವ ಇರ್ಬೇಕು ಆದ್ರೆ ಹುಲಿ ಬೇರೆ ಇದೆ ನಾವು ವಾಪಸ್ ಹೋಗೋದು ಒಳ್ಳೆದೇನೋ ಅಂತ ಅನುಮಾನದಲ್ಲಿ ಚಂದ್ರ ಹೇಳ್ದ. ಹಂಗೇನೂ ಆಗಿರಲ್ಲ ಬಾ ಅಂತ ಅಂದು ಗೌಡ್ರು ಮುಂದೆ ನಡೆದ್ರು (ವಾಸ್ತವದಲ್ಲಿ ಗೌಡ್ರಿಗೂ ಸ್ವಲ್ಪ ಹೆದರಿಕೆ ಆಗಿತ್ತು, ಚಂದ್ರ ಹೇಳ್ದಾಗ ಕೋವಿ ತರ್ಬೇಕಿತ್ತು :( ಆದದ್ದಾಗಲಿ ಅಂದು ಮುಂದುವರಿದ್ರು).

ಕರಿಮಲೆಯಲ್ಲಿ ಹೆಜ್ಜೆಹಾಕುತ್ತಿದ್ದ ಬಸವನಿಗೆ ಹಿಂದಿನಿದ ಬಂದ ಶಬ್ದ ಗ್ರಹಿಸಿ ಏನೋ ಅಪಾಯದ ಅರಿವಾಗಿ ತಿರುಗಿ ಅಲ್ಲಿಯೇ ನಿಂತುಬಿಟ್ಟಿತು. ಸ್ವಲ್ಪ ದೂರದಲ್ಲಿ ಗೌಡ್ರು, ಚಂದ್ರನ ಮಾತುಗಳು ಕೇಳಿಸತೊಡಗಿದವು.

(ಗೌಡ್ರು)
ಹೆಜ್ಜೆಯ ಜಾಡು ಹಿಡಿದು ನಡೆದು ಸ್ವಲ್ಪ ಹೊತ್ತಾಗಿರಬಹುದು, ಸೋಮನ ಹಿಂದೆ ಬರುತ್ತಿದ್ದ ಟೈಗರ್ ಯಾಕೋ ಅಲ್ಲೇ ನಿಂತಿತು, ಸೋಮ ಕರೆದ ಅದು ಬರಲಿಲ್ಲ, ಚಂದ್ರ, ಗೌಡ್ರು ಕರೆದ್ರು ಆದ್ರೂ ಬರ್ಲಿಲ್ಲ. ಸೋಮ ಹೋಗಿ ಮುಂದಕ್ಕೆ ಜಗ್ಗಿದ ಆದರೂ ಕದಲಲಿಲ್ಲ. ಗೌಡ್ರು ಮತ್ತು ಚಂದ್ರನಿಗೆ ಬಹುಶ ಹುಲಿಯೋ ಅಥವಾ ಯಾವುದೋ ಬಲಿಷ್ಠ ಪ್ರಾಣಿ ಇರ್ಬೇಕು ಅಂದ್ಕೊಂಡು ಇಬ್ರೂ ಪರಸ್ಪರ ಮುಖ ನೋಡ್ಕೊಂಡ್ರು. ಇಲ್ಲಿಂದ ಸ್ವಲ್ಪಹೊತ್ತು ಅಲ್ಲಾಡೋದು ಬೇಡ ಅಂತ ನಿಧಾನವಾಗಿ ಮಾತಾಡ್ಕೊಂಡ್ರು, ಸೋಮನಿಗೆ ಕೈಸನ್ನೆಯಲ್ಲೇ ಸುಮ್ನಿರೋದಕ್ಕೆ ಹೇಳಿದ್ರು.ಗೌಡ್ರು ತಮ್ಮ ಕೈಲಿದ್ದ ಸೀಗೆಕತ್ತಿ ಸಿದ್ಧವಾಗೇ ಹಿಡಿದುಕೊಂಡಿದ್ರು. ಹಾಗೆ ಸ್ವಲ್ಪಸಮಯ ಎಲ್ಲವೂ ನಿಶ್ಯಬ್ಧವಾದಂತಿತ್ತು. ಚಂದ್ರ ಸುತ್ತ ಕಣ್ಣು ಹಾಯಿಸಿದ, ಏನೊಂದೂ ಕಾಣಿಸುತ್ತಿಲ್ಲ ಬರೀ ಮರಗಳ ಸಾಲೇ, ಮರಗಳ ಸಂಧಿಯಿಂದ ಏನಾದರೂ ಕಾಣಬಹುದೇನೋ ಎಂದು ಎಲ್ಲರೂ ನೋಡಿದ್ರು, ಇಲ್ಲ ಕತ್ತಲಾಗುತ್ತಿದ್ದುದರಿಂದ ಏನೂ ಕಾಣಿಸುತ್ತಿರಲಿಲ್ಲ. ಚಂದ್ರ ಸೋಮನನ್ನು ಅಲ್ಲೇ ನಿಲ್ಲುವಂತೆ ಹೇಳಿ ಗೌಡ್ರು ಟೈಗರ್ ಹತ್ರ ಬಂದು ಅದು ನೋಡುತ್ತಿದ್ದ ಹಾದಿಯಲ್ಲೇ ಸ್ವಲ್ಪ ಮುಂದುವರೆದ್ರು, ಒಂದು ಹತ್ತು ಹೆಜ್ಜೆ ಹಾಕಿರ್ಬೇಕು ಅಷ್ಟೊತ್ತಿಗೆ ಅಲ್ಲೇ ಹೊಂಚ್ಹಾಕುತ್ತಿದ್ದ ಹುಲಿ ಒಮ್ಮೆಲೇ ಇವರ ಮೇಲೆ ಹಾರಿತು !!????.

(ಹುಲಿ)
ಬಸವನಿಂದ ಪೆಟ್ಟು ತಿಂದಿದ್ದ ಹುಲಿ ಮತ್ತೊಮ್ಮೆ ಬಸವ ಸಿಕ್ಕರೆ ಹೇಗಾದರೂ ಮಾಡಿ ಅದನ್ನು ಕೊಂದೇ ತೀರಬೇಕು ಜೊತೆಗೆ ದಷ್ಟಪುಷ್ಟವಾಗಿದ್ದ ಅದರಿಂದ ಒಳ್ಳೆಯ ಮಾಂಸ ಸಿಗುತ್ತದೆಂದು ತುಂಬಾ ದಿನದಿಂದಲೂ ಹೊಂಚಿಹಾಕಿತ್ತು. ಆಹಾರಕ್ಕಾಗಿ ಕಾಡೆಲ್ಲಾ ಅಲೆಯುತ್ತಿದ್ದ ಅದಕ್ಕೆ ಅಂದು ಕರಿಮಲೆಯತ್ತ ದೂರದಿಂದ ಬರುತ್ತಿದ್ದ ಬಸವ ಕಾಣಿಸಿದ, ಹೋಗಿ ಅದರ ಮೇಲೆ ಆಕ್ರಮಣ ಮಾಡಬೇಕು ಎಂದು ಮೆಲ್ಲಗೆ ಹೆಜ್ಜೆಯಿಡುತ್ತಿತ್ತು ಅಷ್ಟೊತ್ತಿಗೆ ಮನುಷ್ಯರ ಮಾತುಗಳನ್ನು ಕೇಳಿ ಅಲ್ಲೇ ಪೊದೆಯ ಹಿಂದೆ ಅಡಗಿ ನಿಂತಿತ್ತು.

(ಬಸವ)
ಗೌಡ್ರು ಚಕ್ಕನೆ ಬಂದ ಆಘಾತಕ್ಕೆ ಏನು ಮಾಡಬೇಕೆಂದು ತೋಚದೆ ಹಾಗೇ ನಿಂತುಬಿಟ್ಟರು. ಹುಲಿ ಇವರ ಮೈಮೇಲೆ ಇನ್ನೇನು ಬೀಳಬೇಕು ಅಷ್ಟರಲ್ಲಿ ಬಸವ ನುಗ್ಗಿಬಂದು ತನ್ನ ಚೂಪಾದ ಕೋಡುಗಳನ್ನು ಹುಲಿಯ ಕಡೆಗೆ ಚಾಚಿತು, ಹುಲಿಯ ಹೊಟ್ಟೆಯೊಳಗೆ ಕೋಡು ಹೋಯಿತು ಆದರೆ ಅಷ್ಟರಲ್ಲಾಗಲೇ ಹುಲಿ ತನ್ನ ತೆರೆದ ಬಾಯಿಯನ್ನು ಬಸವನ ಕುತ್ತಿಗೆಗೆ ಹಾಕಿಯಾಗಿತ್ತು.

ಹುಲಿಯ ಪ್ರಾಣ ಹೋಗಿತ್ತು. ಬಸವ ತನ್ನೊಡೆಯನ ಋಣವನ್ನು ಬಡ್ಡಿ ಸಮೇತ ತೀರಿಸಿ ಕರಿಮಲೆಯಲ್ಲಿ ಶಾಂತವಾಗಿ ನಿದ್ರಿಸಿತ್ತು.

ಬೆಂಗಳೂರಲ್ಲೊಂದಿನ - ಮುಕ್ತಾಯ

ಸಂಜೆ ೫ ಗಂಟೆ ಆಗ್ತಾ ಬಂತು.
ಈರಣ್ಣ ಹತ್ರ ಬಂದು ಅದೂ ಇದೂ ಮಾತಾಡ್ತಾ ಕೂತ್ರು.
'ಈರಣ್ಣ ಇವತ್ತು ಶುಕ್ರವಾರ, ಸ್ವಲ್ಪ ಜ್ಯೂಸ್ ಬೇಗ ತರ್ಸಿದ್ರೆ ಕುಡ್ಕೊಂಡು ಬೇಗ ಹೊರಡ್ತಿದ್ವಿ'.
'ನಾನು ಅದೇ ಯೋಚನೆ ಮಾಡ್ತಿದ್ದೆ ಕಣ್ರೀ, ನೀವೆಲ್ಲ ಬೇಗ ಹೊರಡ್ತೀರೆನೋ ಅಂತ, ನನಗೆ ಜ್ಯೂಸ್ ತರೋ ಕೆಲಸ ಇರ್ತಿರ್ಲಿಲ್ಲ, ಆದ್ರೆ ಯಾರೂ ಹೊರಡಂಗಿಲ್ಲ ನೋಡ್ರೀ, ನಂಗೂ ಸ್ವಲ್ಪ ಕಾಸು ಮಿಕ್ತಿತ್ತು!!!!'
'ಸರಿಹೋಯ್ತು ಬಿಡಿ, ಈಗ ಬೇಗ ಆರ್ಡರ್ ಮಾಡಿ, ಕುಡಿದು ಹೊರಡ್ತೀವಿ'
ಜ್ಯೂಸ್ ಕುಡಿದು ಸೌಜಂಗೆ ಬಾಯ್ ಹೇಳಿ ಮನೆ ಕಡೆ ಹೊರ್ಟೆ.

ಬಸ್ ಸ್ಟಾಪಲ್ಲಿ ವಯಸ್ಸಾದವರೊಬ್ರು ಸಿಕ್ಕಿದ್ರು, ಮೆಜೆಸ್ಟಿಕ್ಗೆ ಹೋಗೋ ಬಸ್ ಇಲ್ಲೇ ಬರತ್ತೇನಪ್ಪ?
ಹೌದು ಇಲ್ಲೇ ಬರತ್ತೆ ಕಣ್ರೀ.
ಒಂದು ೫ ನಿಮ್ಷ ಆಗಿರ್ಬೇಕು,ಮೆಜೆಸ್ಟಿಕ್ಗೆ ಖಾಲಿ ಬಸ್ ಸಿಕ್ತು.
ಅವ್ರೂ ಹತ್ತಿದ್ರು.
ಕಂಡಕ್ಟರ್ ಟಿಕೆಟ್ ಕೊಡ್ತಾ ಬಂದ್ರು, ಸೀನಿಯರ್ ಸಿಟಿಜನ್ ಸೀಟಲ್ಲಿ ಕೂತಿದ್ದ ವಯಸ್ಸಾದ ವ್ಯಕ್ತಿಗೆ ಟಿಕೆಟ್ ಅಂದ್ರು.
ಅವ್ರು ಮೆಜೆಸ್ಟಿಕ್ ಅಂದ್ರು, ಕಂಡಕ್ಟರ್ ಟಿಕೆಟ್ ಹರಿದುಕೊಟ್ಟ. ಆಮೇಲೆ ಅವ್ರಿದ್ದವ್ರು ಸೀನಿಯರ್ ಸಿಟಿಜನ್ ಅಂದ್ರು.
ಕಂಡಕ್ಟರ್ ಹಾಗೆ ಗುರಾಯ್ಸ್ತಿದ್ದ.
ಈ ಸಲ ನಾನು ಏನೂ ಮಾತಾಡ್ಬಾರ್ದು ಅಂತ ಸುಮ್ನೆ ಕೂತೆ.

ಮೆಜೆಸ್ಟಿಕ್ ತಲುಪಿ ಅಲ್ಲಿಂದ ನವರಂಗ್ ಬಸ್ ಹತ್ತಿ ಅಕ್ಕನ ಮನೆಗೆ ಹೋದೆ.

ಅಕ್ಕ 'ಏನೋ ಶುಕ್ರವಾರ ಭಾರೀ ಬೇಗ ಬಂದಿದೀಯಾ?'
'ಸುಮ್ನಿರಮ್ಮ ಮೊದ್ಲೇ ಕೆಲಸ ಮಾಡಿ ಮಾಡಿ ಸಾಕಾಗಿದೆ, ನೀನು ಬೇರೆ ಉರಿಯೋ ಬೆಂಕಿಗೆ ತುಪ್ಪ ಸುರಿತೀಯ'
ಅವ್ಳು ನಗಾಡಿ ಸುಮ್ನಾದ್ಲು.
ಆದ್ರೆ ಅಲ್ಲೇ ಆಟ ಆಡ್ತಿದ್ದ ಅಕ್ಕನ ಮಗ 'ಮಾಮ, ಎಲ್ಲಿಂದ ಬಂದೆ?'
'ಊರಿಂದ'
'ಏರೋಪ್ಲೇನಲ್ಲಿ ಬಂದ್ಯಾ?'
'ಹ್ಞೂ ಅದ್ರಲ್ಲೇ ಹೊರ್ಟಿದ್ದೆ ಆದ್ರೆ ದಾರೀಲಿ ಟೈರ್ ಪಂಚರ್ ಆಯ್ತು, ಗಾಡಿ ಎತ್ತಲ್ಲಿ ಬಂದೆ'
ಅಡಿಗೆ ಮನೆಲಿದ್ದ ಅಕ್ಕ 'ಏ ತಲೆಹರಟೆ, ಪಾಪ ಹುಡ್ಗ ಏನೋ ಕೇಳ್ತಾನೆ ಸರ್ಯಾಗಿ ಹೇಳೋದ್ರ ಬದ್ಲು ಏನೇನೊ ಹೇಳ್ತೀಯಲ್ಲೋ'
ಪಾಪ ಹುಡ್ಗ!!!! (ಇವತ್ತಿನ ಕಾಲದ ಮಕ್ಳಿಗೆ ಪಾಪನಾ!!!!???)
'ಹೌದಮ್ಮ, ಅವ್ನು ಕೇಳೋ ಚೆಂದ ಹಂಗಿದೆ. ನಮ್ಮೂರು ಇನ್ನ ಗೌರ್ಮೆಂಟ್ ಬಸ್ಸೇ ನೋಡಿಲ್ಲ ಆಗ್ಲೇ ನಿನ್ಮಗ ಏರೋಪ್ಲೇನ್ ಹಾರಿಸ್ತಿದ್ದಾನೆ. ಇವ್ನಿಗೆ ಬಾತ್ರ್ರೂಮಿಂದ ಬಂದ್ರೂ ಏರೋಪ್ಲೇನಲ್ಲಿ ಲ್ಯಾನ್ಡಾದೆ ಅಂದ್ರೆ ಖುಷಿಯಾಗ್ತಾನೆ ನೋಡು'
'ಏನೋ ಬಿಡು, ಇಬ್ರೂ ಅಂಥವ್ರೆ ಸರ್ಯಾಗಿದೀರಾ'.

ಸ್ವಲ್ಪ ಹೊತ್ತಾದ್ಮೇಲೆ ಅಕ್ಕಂಗೆ 'ಅಕ್ಕನ (ದೊಡ್ಡಮ್ಮನ ಮಗಳು) ಮನೆಗೆ ಹೋಗಿ ಬರ್ತೀನಿ ತುಂಬಾ ದಿನ ಆಯ್ತು. ಊಟಕ್ಕೆ ಇಲ್ಲಿಗೆ ಬರ್ತೀನಿ'
'ಊರೆಲ್ಲಾ ಹಾಳು ಮಾಡಿದ್ದು ಸಾಕಾಗ್ಲಿಲ್ಲ ಅನ್ಸತ್ತೆ ಇನ್ನು ಅದೊಂದು ಮನೆ ಬಾಕಿ ಇತ್ತು, ಸರಿ ಹೋಗಿ ಬಾ. ಮಕ್ಳು ಓದ್ತಿರ್ತವೆ ಡಿಸ್ಟರ್ಬ್ ಮಾಡ್ಬೇಡ'.
'ನೀನು ಯಾವತ್ತಾದ್ರೂ ನನ್ನ ಬಗ್ಗೆ ಒಳ್ಳೆ ಮಾತು ಹೇಳಿದೀಯಾ?, ಡಿಸ್ಟರ್ಬ್ ಮಾಡೋಕೆ ಹೋಗದು ಏನೀಗ'
'ಹೋಗಿ ಸಾಯಿ' ಅಂದು ಅಡಿಗೆ ಮನೆ ಒಳಗೆ ಹೋದ್ಲು.
'ಬರ್ತೀನಿ ಕಣೋ, ಬರ್ತೀಯಾ ನಂಜೊತೆ ಏರೋಪ್ಲೇನಲ್ಲಿ ಹೋಗಣ?'
ಏಯ್, ಸುಮ್ನೆ ಹೋಗ್ತೀಯೋ ಒದೆ ಬೇಕಾ ಅಂತ ಆವಾಜ್ಹ್ ಅಡಿಗೆ ಮನೆಯಿಂದ ಬಂತು.

ಅಕ್ಕನ ಮನೆ ತಲ್ಪಿದ ತಕ್ಷಣ ನನ್ನನ್ನ ಅಕ್ಕ ನೋಡಿ 'ಏನೋ ಮಾರಾಯ,ಆಸಾಮಿ ತುಂಬಾ ದಿನದಿಂದ ಪತ್ತೇನೆ ಇಲ್ಲ'.
'ಅಯ್ಯೋ, ತುಂಬಾ ಕೆಲಸ ಅಕ್ಕ ಹಾಗಾಗಿ ಬರೋಕಾಗ್ಲಿಲ್ಲ'
‘ಸರಿ ಕೂತ್ಕೋ, ಇವೆರಡು ಇಲ್ಲೇ ಎಲ್ಲೋ ಇರ್ಬೇಕು ಬರ್ತಾವೆ ತಡಿ’ ಅಂದು ಅಡಿಗೆ ಮನೆ ಕಡೆ ಹೋದ್ರು.
ಅವ್ರು ಹೇಳೋಕಿಂತ ಮೊದ್ಲೇ ದೊಡ್ಡವಳು (ವರ್ಷ) ಬಂದು 'ಏನ್ರೀ ತುಂಬಾ ದಿನ ಆಯ್ತು, ಅಷ್ಟು ಬ್ಯುಸಿನಾ?'
'ಹೂನಮ್ಮ ಕೆಲಸ ಜಾಸ್ತಿ'
'ನಂದಿರ್ಲಿ ಅದು ಯಾವಾಗ್ಲೂ ಇದ್ದದ್ದೇ, ಇಂಜಿನಿಯರಿಂಗ್ ಮುಗೀತಾ ಬಂತು, ಕ್ಯಾಂಪಸ್ ಸೆಲೆಕ್ಷನ್ ಆದ್ರೆ ನಮ್ಮಂಗೆ ಸಾಯ್ಬೇಕು, ನೋಡು ನಾನು ನಿಂಗೆ ಪಿ ಯು ಸಿ ಟೈಮಲ್ಲೇ ಹೇಳ್ದೆ, ಜಾಸ್ತಿ ಓದ್ಬೇಡ, ಸ್ವಲ್ಪ ಓದಿ ಯಾವ್ದೋ ಡಿಗ್ರಿ ಮಾಡಿ ಆದ್ಮೇಲೆ ಮನೆನಲ್ಲಿ ಯಾವ್ದಾದ್ರೂ ಹುಡ್ಗನ್ನ ಹುಡ್ಕಿ ಗಂಟು ಹಾಕ್ತಿದ್ರು ಆಮೇಲೆ ಆರಾಮಾಗಿ ಇರ್ಬಹುದಿತ್ತು,ಈಗ ನೋಡು' (ಅಂತ, ದೊಡ್ಡೋರ ಮಾತು ಎಲ್ಲಿ ಕೇಳ್ತೀಯಾ!!??)
'ರೀ ನಾಲ್ಕು ಉದ್ಧಾರ ಆಗಂಥ ಮಾತು ಹೇಳಿ ಅಂದ್ರೆ ಇಂಥವೇ ಪ್ಲಾನ್ ಹೇಳ್ರಿ'
'ಅದೇ ಮತ್ತೆ ಹೇಳಿದ್ದುನಿನ್ನ ಒಳ್ಳೇದಕ್ಕೆ ಹೇಳ್ದೆ, ಏನಾದ್ರೂ ಮಾಡ್ಕೋ. ಅವ್ಳೆಲ್ಲಿ (ವರ್ಷಳ ತಂಗಿ ಮೇಘ - ಫ್ಯೂಚರ್ ಡಾಕ್ಟ್ರು) ? ಇಡೀ ಏರಿಯಾದರ್ದು ಬ್ಲಡ್ ಚೆಕ್ ಮಾಡೋಕೆ ಹೋದ್ಲಾ?'.
(ದೊಡ್ಡವಳು ವರ್ಷ, ಸಣ್ಣವಳು ಮೇಘ. ಅದ್ಹೇನು ಲೆಕ್ಕ ಹಾಕಿ ಹೆಸರು ಇಟ್ರೋ ನಮ್ಮಕ್ಕ ಭಾವ. ಮೋಡ ಆದ್ಮೇಲೆ ಮಳೆ ಬರತ್ತೆ ಇಲ್ನೋಡಿದ್ರೆ ಉಲ್ಟಾ ಆಗಿದೆ, ಆದ್ರೆ ಹೆಸರು ಇಬ್ರಿಗೂ ಸರ್ಯಾಗಿದೆ, ವರ್ಷ ಸೈಲೆಂಟ್ ಆದ್ರೆ ಮೇಘ ಗುಡಿಗೂ ಸಿಡಿಲು ಬರಿಸೋ ಮೋಡ).
'ಇಲ್ರೀ ಮೇಲೆ ರೂಮಲ್ಲಿ ಇದ್ದಾಳೆ, ಬರ್ತಾಳೆ ತಡೀರಿ'
'ಇವ್ಳು ಈಗ್ಲೇ ನಮ್ಮ ರಕ್ತ ಹೀಗೆ ಹೀರಿದ್ರೆ ಇನ್ನು ಡಾಕ್ಟರ್ ಆದ್ಮೇಲೆ ನಮ್ಮ ಮೈಯಲ್ಲಿ ಒಂದು ಹನಿ ರಕ್ತನೂ ಬಿಡಲ್ವೇನೋ'

'ಏಯ್, ಏನೋ ಅದು ನನ್ನ ಮೇಲೆ ಕಂಪ್ಲೆಂಟ್'. ಅವ್ಳು ಬರೋವಾಗ ನನ್ನ ಮಾತು ಅವಳ ಕಿವಿಗೆ ಬಿದ್ದಾಗ ಅವಳಿಂದ ಬಂದ ಉತ್ತರ.
'ನೋಡು ನಿಜ ಹೇಳಿದ್ರೆ ಹೀಗೆ ಎಗ್ರಾಡ್ತೀರಾ, ಎಲ್ರೂ ಫ್ಯಾಮಿಲಿನಲ್ಲಿ ಒಬ್ರು ಡಾಕ್ಟ್ರು ಇದ್ರೆ ಒಳ್ಳೇದಪ್ಪ ಅಂದ್ಕೋತಾರೆ, ನೀವು ನೋಡಿದ್ರೆ ಶುರುವಲ್ಲೇ ನಾವು ಪೇಷೆಂಟ್ ಅಲ್ದಿದ್ರೂ ನಮ್ಮ ಪ್ರಾಣ ತಿಂತೀರಾ'
'ಏಯ್, ಏನೋ ಟೆಸ್ಟ್ ಮಾಡಣ ಅಂತ ಸ್ವಲ್ಪ ರಕ್ತ ಕೇಳಿದ್ರೆ ಸಾವಿರ ಮಾತಾಡ್ತೀಯಾ'
'ಇನ್ನೇನ್ಮತ್ತೆ ಸೂಜಿ ತಗೊಂಡು ಚುಚ್ಚಿ ಚುಚ್ಚಿ ಇಟ್ರೆ ನಮ್ಮ ಕಥೆ ಏನಾಗಬೇಡ'.
'ಕಷ್ಟ ಆಗತ್ತೆ ಸ್ವಲ್ಪ ಹೆಲ್ಪ್ ಮಾಡ್ಬೇಕಪ್ಪಾ'.
'ಸರಿ ಬಿಡು, ಮತ್ತೆ ಡಾಕ್ಟ್ರು ಆದ್ಮೇಲೆ ಇಲ್ಲೇ ಇರ್ತೀಯ ಅಥ್ವಾ ಹೊರ್ಗ್ಹೋಗಿ ಬಿಳಿ ಜಿರಳೆ ಪೇಷೆಂಟ್ಗಳ ಸೇವೆ ಮಾಡ್ತೀಯಾ?'
'ನಿಂದು ಯಾಕೋ ಜಾಸ್ತಿಯಾಯ್ತು ಕಣೋ'
'ರೆಸ್ಪೆಕ್ಟ್ ರೆಸ್ಪೆಕ್ಟ್ ಇರ್ಲಿ'

ಅಷ್ಟೊತ್ತಿಗೆ ಅಕ್ಕ ಜ್ಯೂಸ್ ತಗೊಂಡು ಬಂದ್ರು 'ನೋಡಕ್ಕ, ನಿಮ್ಮಿಬ್ರು ಮಕ್ಳಿಗೆ ಒಳ್ಳೆ ಬುದ್ಧಿ ಹೇಳಿದ್ರೆ ನನ್ನ ಮಾತೇ ಕೇಳಂಗಿಲ್ಲ'
'ಅವುಕ್ಕೆಲ್ಲಿ ಅರ್ಥ ಆಗತ್ತೆ ಹೋಗ್ಲಿ ಬಿಡು, ಒಳ್ಳೆ ಮಾತು ಕೇಳಿದ್ರೆ ತಲೆಗೆ ಹಾಕಬೇಕು'
'ಅದೇ ಮತ್ತೆ, ಸರಿ ನಾನಿನ್ನು ಬರ್ತೀನಿ'
'ಯಾಕೋ ಊಟ ಮಾಡ್ಕೊಂಡು ಹೋಗೋ'
'ಇಲ್ಲ ಇನ್ನೊಮ್ಮೆ ಆರಾಮಾಗಿ ಬರ್ತೀನಿ. ಬರ್ತೀನ್ರಮ್ಮ'
'ಕಳ್ಚ್ಕೋ'
ಮೋಡ ಮತ್ತೆ ಮಳೆ ಒಟ್ಟಿಗೆ ಘರ್ಜಿಸಿದ್ವು!!

ಬೆಂಗಳೂರಲ್ಲೊಂದಿನ - ೩

ಮತ್ತೆ ಸಿಸ್ಟಂಗೆ ಲಾಗಿನ್ ಆಗಿ ಕೂತ್ವಿ.

ಕೆಲ್ಸ ನಡೀತಿತ್ತು, ಒಂದು ಮೈಲ್ ಪಾಪ್ ಅಪ್ ಆಯ್ತು. ಓಪನ್ ಮಾಡಿದ್ರೆ, ವೆಂಕಂದು. ಡರ್ಟಿ ಪಿಕ್ಚರ್ ಅಂತ ವಿದ್ಯಾ ಬಾಲನಳ ಒಂದು ಫೋಟೋ ಕಳ್ಸಿದ.
ಕೆಲಸದಲ್ಲಿ ಬ್ಯುಸಿಯಾಗಿದ್ದ ಸೌಜಂಗೆ, ನೋಡಿದ್ಯ ವೆಂಕ ಕಳ್ಸಿದ್ದು ಅಂದೆ.
ಇಲ್ಲ ನೋಡ್ತೀನಿ ತಡಿ ಅಂದವನು ನೋಡಿದ್ಮೇಲೆ.
ತಡಿ, ಇದಕ್ಕೆ ರಿಪ್ಲೈ ಮಾಡ್ತೀನಿ.
೧ ನಿಮ್ಷ ಆದ್ಮೇಲೆ ಸೌಜನ ಮೈಲ್ ಬಂತು.
'ಲೇ, ಮನೇಲಿ ಹೆಂಡ್ತಿ ಬಿಟ್ಕಂಡು ಆಫೀಸಲ್ಲಿ ಇವೇ ಮಾಡ್ತೀಯಾ’ ಅಂತಿತ್ತು.
ನಾನೂ ಅದಕ್ಕೆ ರಿಪ್ಲೈ ಮಾಡಿದೆ 'ಡರ್ಟಿ ಮೈಂಡ್ ನಿಂದು'.
ವೆಂಕನ ರಿಪ್ಲೆಗೆ ಕಾದ್ವಿ,೧೦ ನಿಮ್ಷ ಆದ್ಮೇಲೆ ಬಂತು.
ಸರಿ ಕಣ್ರಪ್ಪ, ನಿಮ್ಗೆ ಕಳ್ಸಿದ್ದೆ ತಪ್ಪಾಯ್ತು ಇನ್ಮುಂದೆ ಆ ತಪ್ಪು ಮಾಡಲ್ಲ.

.....

ಊಟ ಮಾಡಣ್ವೇನಪ್ಪ.
ಹೂಂ ನಡಿ.
ನನ್ನ ಲಂಚ್ ಬಾಕ್ಸ್ ತೆಗ್ದೆ.
ಸೌಜ, 'ಏನಪ್ಪಾ ಚಿತ್ರಾನ್ನನ?'
ಬ್ಯಾಚಲರ್ಸ್ ಕಣಪ್ಪ, ಒಂದಿನ ಚಿತ್ರಾನ್ನ, ಒಂದಿನ ಪುಳಿಯೊಗರೆ, ಎಗ್ ರೈಸ್ ಇನ್ನೇನ್ಮಾಡಕಾಗತ್ತೆ?
ರೈಸ್ ಐಟಂ ಬಿಟ್ಟು ಅಲ್ಲಾಡಲ್ಲ ಅನ್ನು.
ಮದ್ವೇಯಾಗೊವರ್ಗೂ ಇದೆ ಕಥೆ, ಅದಿರ್ಲಿ ನಿನ್ನ ಬರೀ ತರಕಾರಿ ಊಟಕ್ಕೆ ಯಾವಾಗ ಕೊನೆ.
ಇನ್ನೊಂದು ವಾರ, ಆಮೇಲೆ ಭರ್ಜರಿ ಭೋಜನ.
೧೫ ದಿನದಲ್ಲಿ ಎಷ್ಟು ತೆಳ್ಳಗಾಗ್ತೀಯೋ, ಅಮ್ಮಮ್ಮ ಅಂದ್ರೆ ೨ ಕಿಲೋ ಡೌನ್ ಆಗ್ಬಹುದು, ಆಮೇಲೆ ಭರ್ಜರಿ ಭೋಜನ ಬೇರೆ ಅಂತೀಯ.ಅದ್ರ ಜೊತೆಗೆ ನಾಲ್ಗೆ ಚಪಲ ಅಂತ ಶೇಂಗಾ, ಚಿಪ್ಸ್ ತಂದು ತಿಂತೀಯಾ.
ಏನೋ ಮಾಡೋದಪ್ಪ.ಹೊಟ್ಟೆಪಾಡು!
ಏನೇ ಆದ್ರೂ ನೀನು ರಶ್ಮಿ ಜೊತೆ ಕಾಮ್ಪಿಟ್ (ಅವ್ನ ಧರ್ಮಪತ್ನಿ , ಸ್ವಲ್ಪ ತೆಳ್ಳಗಿದ್ದಾಳೆ) ಮಾಡೋಕಾಗಲ್ಲ.
ಹ್ಹೆ ಹ್ಹೆ ಅದೆಲ್ಲಿ ಸಾಧ್ಯ.
ಅದೇ ಮತ್ತೆ, ದೊಡ್ಡಣ್ಣ ಕಾಶೀನಾಥ್ ಆಗೋಕಾಗತ್ತಾ? (ಇವ್ನೇನು ಅಷ್ಟೊಂದು ದಪ್ಪ ಇಲ್ಲ ಆದ್ರೂ ಕಾಲೆಳೆಯೋದಕ್ಕೆ ಕಾಸು ಕೊಡ್ಬೇಕಾ!!!).
ಹೌದಪ್ಪಾ, ಹೇಳು ಹೇಳು.

...........

ಊಟ ಮಾಡಿ ಮತ್ತೆ ನನ್ನ ಡೆಸ್ಕ್ಗೆ ಬಂದು ಕೂತೆ.
ಆನ್ಲೈನ್ ಬಂದ ತಕ್ಷಣ, ಪೋಕಿ ಪಿಂಗ್ ಮಾಡಿದ.
ಏನು ಚಿಕ್ಕು, ಆರಾಮ?
ಹ್ಞೂ ಪೋಕಿ.
ನೀನು?
ನಾನು, ಸೂಪರ್ ಆರಾಮು.
ಕೆಲ್ಸ ಹೇಗೆ?
ಹಾಗೆ ನಡೀತಿದೆ.
ನಿಂದು?
ಇಷ್ಟು ದಿನ ಬೆಂಕಿ ಬಿದ್ದಿತ್ತು, ಈಗ ಸ್ವಲ್ಪ ಆರಾಮು.
ಓ ಕೆ, ಮತ್ತೆ ಮದ್ವೆ ವಿಷ್ಯ ಎಲ್ಲಿಗೆ ಬಂತು.
:) ಯಾಕೆ ಬಿಡು ಅದ್ರ ಬಗ್ಗೆ ಮಾತು, ಮನೇನಲ್ಲಿ ಆ ಮ್ಯಾಟರ್ರೆ ಎತ್ತಲ್ಲ.
ಸೊ ಸ್ಯಾಡ್.
ನಿಂದೇನು ಕಥೆ?
ಹಂಟಿಂಗ್ ನಡೀತಿದೆ ಮಗ.
ನಡೀಲಿ ನಡೀಲಿ.
ಹೀಗೆ ಅದೂ ಇದೂ ಮಾತಾಯ್ತು.

.......

ಕಾಫೀ ಬ್ರೇಕಲ್ಲಿ ತಡಿ ಉಲ್ಲಂಗೆ ಕಾಲು ಎಳೆಯೋಣ ಅಂದು ಕಾಲ್ ಮಾಡಿದ ಸೌಜ, ಸ್ಪೀಕರ್ ಆನ್ ಮಾಡಿದ್ದ.
ಏನೋ ಉಲ್ಲ, ಇಬ್ರೂ ಒಟ್ಟಿಗೆ ಕೂಗಿದ್ವಿ, ಆರಾಮೇನೋ?
ಹೌದಪ್ಪಾ, ಅದೇನು ಇಷ್ಟು ದಿನ ಆದ್ಮೇಲೆ ಅದೂ ಈ ಹೊತ್ತಲ್ಲಿ ನನ್ನ ಜ್ಞಾಪಕ ಬಂತು?
ಫ್ರೆಂಡ್ ಕಣಪ್ಪ ನೆನಪಿಸಿಕೊಳ್ತಿರ್ಬೇಕು.
ಇವಕ್ಕೇನು ಕಮ್ಮಿ ಇಲ್ಲ.
ಅದೆಲ್ಲ ಇರ್ಲಿ, ಸ್ವಲ್ಪ ಜ್ವರ ಬಂದಂಗೆ ಕಾಣ್ತಿದೆ ನಿನ್ನ ಧರ್ಮಪತ್ನಿಯವ್ರ ಹತ್ರ ಯಾವ ಟ್ಯಾಬ್ಲೆಟ್ ತಗೋಬೇಕು ಅಂತ ಕೇಳಿ ಹೇಳೋ.
ಮತ್ತೆ ಏನೋ ದೊಡ್ಡದಾಗಿ ಹೇಳ್ದೆ ನಾನು ನೆನಪಿಗೆ ಬಂದೆ ಅಂತ.
ಹಾಗೆ ಕಣಮ್ಮಾ, ಫ್ರೆಂಡ್ಸಲ್ವ ಸ್ವಲ್ಪ ಅಡ್ಜಸ್ಟ್ ಮಾಡ್ಕೋ , ಕಾಯಿಲೆ ಬಂತು ನೋಡು, ಹಾಗೆ ನೀನು ನೆನಪಿಗೆ ಬಂದೆ.
ನೀವೇ ಟ್ಯಾಬ್ಲೆಟ್ ಡೆವಲಪ್ ಮಾಡ್ತಿದೀರಲ್ಲ ಅದರಲ್ಲೇ ಒಂದು ನುಂಗು.
ಕಥೆ ಎಲ್ಲ ಬೇಡ, ಕೇಳಿ ಹೇಳು, ಅಲ್ವೋ ಕಂಪೌನ್ಡರ್ ಆಗಿ ನಿನ್ನ ಕೆಲಸ ನೀಟಾಗಿ ಮಾಡೋಕೆ ಬರಲ್ವಲ್ಲೋ.
ನನ್ಮಕ್ಳ, ಜಾಸ್ತಿ ಆಯ್ತು.
ಅರೆ ನಾವೇನು ತಪ್ಪು ಹೇಳಿದ್ವಿ, ಉಲ್ಲ ಒಂದು ಒಳ್ಳೆ ಐಡಿಯಾ ಕೊಡ್ತೀವಿ ನೋಡು.
ಏನು?
ಕೆಲಸ ಬಿಟ್ಬಿಡು.
ಆಮೇಲೆ?
ನಾವೆಲ್ಲಾ ಸೇರಿ ಒಂದು ಫೋನ್ ತೆಗ್ಸಿಕೊಡ್ತೀವಿ, ಹೆಂಗಿದ್ರೂ ನಿನ್ನ ಧರ್ಮಪತ್ನಿ, ನಿಮ್ಮಣ್ಣ, ಅತ್ತಿಗೆ ಎಲ್ರೂ ಡಾಕ್ಟ್ರೆ, ನೀನೊಬ್ಬ ಆಡ್ ಮ್ಯಾನ್ ಔಟ್. ನಮ್ಗಳಿಗೆ ಹುಶಾರಾಗಿಲ್ದೆ ಇದ್ದಾಗ ನಿಂಗೆ ಕಾಲ್ ಮಾಡ್ತೀವಿ, ನಿಂಗೆ ನಮ್ಮ ಕಾಯಿಲೆನ ಯಾರು ಕ್ಯೂರ್ ಮಾಡ್ತಾರೆ ಅಂತ ಗೊತ್ತಿರುತ್ತಲ್ಲ ಅವ್ರಿಗೆ ಕನೆಕ್ಟ್ ಮಾಡು, ನಾವು ಪ್ರಿಸ್ಕ್ರಿಪ್ಶನ್ ಕೇಳ್ತೀವಿ.
ಫ್ರೆಂಡ್ಸ್ ಆಗಿ ಇಂಥ ಮನೆಹಾಳು ಐಡಿಯಾನೆ ಕೊಡ್ರೋ.
ಅಲ್ವೇ ಮತ್ತೆ, ಫ್ರೆಂಡ್ಸ್ ಇರೋದ್ಯಾಕೆ ಹೇಳು?!!
ಹೀಗೆ ಸ್ವಲ್ಪ ಹೊತ್ತು ಕಾಲೆಳದು ಕಾಲ್ ಕಟ್ ಮಾಡಿದ್ವಿ.