Monday, October 24, 2011

ಬೆಳಗಬೇಕಾದ ಮನಸ್ಸುಗಳೇ ಕೊಳೆತುಹೋದರೇ??

ಮೊನ್ನೆ ಟಿ.ವಿ ನೋಡ್ತಿದ್ದಾಗ ಒಂದು ಸುದ್ದಿ ಬಂತು ಅದನ್ನ ನೋಡಿದಾಗ ಒಂದು ವಿಷಯ ಹೇಳುವ ಮನಸ್ಸಾಯಿತು (ಬಹುಶ ಇದು ತುಂಬಾ ಜನರ ಜೀವನದಲ್ಲಿ ನಡೆದ ಘಟನೆಗಳೂ ಆಗಿರಬಹುದು), ಟಿ. ವಿಯಲ್ಲಿ ಬಂದ ಸುದ್ದಿ ಈ ಕಥೆಯಾದ ಮೇಲೆ.

..............
ಸುಷ್ಮಾ, ಒಂದು ಒಳ್ಳೆಯ ಕುಟುಂಬದ ಹುಡುಗಿ. ಅಪ್ಪ ಸರ್ಕಾರಿ ನೌಕರ, ಅಮ್ಮ ಗೃಹಿಣಿ. ಒಬ್ಬಳೇ ಮಗಳಾದ್ದರಿಂದ ಪೋಷಕರು ಅವಳನ್ನು ತುಂಬಾ ಪ್ರೀತಿಯಿಂದ ಚೆನ್ನಾಗಿ ಸಾಕಿದ್ದರು. ನೋಡುವುದಕ್ಕೆ ಲಕ್ಷಣವಾಗಿದ್ದಳು, ಸುಷ್ಮಾ ಓದಿನಲ್ಲಿ ಚೂಟಿ ಇದ್ದಳು, ಹೈಸ್ಕೂಲ್ ಮುಗಿಸಿ ಆ ಊರಿನ ಒಂದು ಒಳ್ಳೆಯ ಕಾಲೇಜಿಗೆ ಸೇರಿದ್ದಳು. ಕಾಲೇಜಿನಲ್ಲೂ ಓದಿನಲ್ಲಿ ಮುಂದಿದ್ದಳು.

ರಮೇಶ್, ಶ್ರೀಮಂತ ಮನೆತನದ ಹುಡುಗ, ಸುಸಂಸ್ಕೃತ ಕುಟುಂಬ. ಅಪ್ಪ ಬ್ಯುಸಿನೆಸ್ಸ್ಮೆನ್, ಅಮ್ಮ ಗೃಹಿಣಿ, ರಮೇಶನಿಗೊಬ್ಬಳು ತಂಗಿ. ರಮೇಶನು ಅತಿ ಬುದ್ದಿವಂತನಲ್ಲದಿದ್ದರೂ ಫಸ್ಟ್ ಕ್ಲಾಸ್ನಲ್ಲಿ ಎಲ್ಲ ಕ್ಲಾಸಲ್ಲೂ ಪಾಸಾಗುತ್ತಿದ್ದನು. ರಮೇಶನದು ಕಟ್ಟುಮಸ್ತಾದ ದೇಹ ಜೊತೆಗೆ ನೋಡಲೂ ಚೆಂದವಾಗಿದ್ದನು. ಅವನೂ ಕೂಡ ಸುಷ್ಮಾ ಸೇರಿದ ಕಾಲೇಜಿಗೆ ಸೇರಿದ್ದನು.

ಇಬ್ಬರೂ ಒಂದೇ ಬ್ಯಾಚಿನಲ್ಲಿದ್ದರು. ಕ್ಲಾಸಲ್ಲಿ ಲೆಕ್ಚರರ್ ಕೇಳುತ್ತಿದ್ದ ಪ್ರಶ್ನೆಗಳಿಗೆ ಹಲವೊಮ್ಮೆ ಇವಳೇ ಎದ್ದುನಿಂತು ಉತ್ತರಿಸುತ್ತಿದ್ದುದರಿಂದ ಇವನಿಗೂ ಅವಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ. ಒಂದು ದಿನ ಟೆಸ್ಟ್ ನೆಪದಲ್ಲಿ ಅವಳನ್ನು ಮಾತಾನಾಡಿಸಬೇಕು ಎಂದು ನಿರ್ಧಾರ ಮಾಡಿ ಕಾಲೇಜ್ ಬಿಟ್ಟ ತಕ್ಷಣ ಅವಳಿಗೆ ಗೊತ್ತಾಗದಂತೆ ಅವಳನ್ನು ಹಿಂಬಾಲಿಸಿದನು. ಅವಳ ಗೆಳತಿಯರೆಲ್ಲ ಬೇರೆಯಾಗಿ ಇವಳು ಒಂಟಿಯಾದ ತಕ್ಷಣ ಅವಳ ಹತ್ತಿರ ಹೋಗಿ ಯಾವುದೋ ನೋಟ್ಸ್ ಕೇಳುವ ನೆಪದಲ್ಲಿ ಮಾತನಾಡಿಸಿದನು.

ಹೀಗೆ ಶುರುವಾದ ಭೇಟಿ ಇಬ್ಬರೂ ಇಷ್ಟಪಡುವ ಹಂತದವರೆಗೆ ಹೋಯ್ತು. ಇಬ್ಬರೂ ಬುದ್ಧಿವಂತರಾದ್ದರಿಂದ ಮದುವೆಯ ಪ್ರಸ್ತಾಪವನ್ನು ಮನೆಯವರಿಗೆ ತಿಳಿಸಬೇಕು ಆದರೆ ಅದಕ್ಕೂ ಮುನ್ನ ಇಬ್ಬರ ಡಿಗ್ರಿ ಮುಗಿಯಲಿ ಎಂದು ನಿರ್ಧರಿಸಿದರು. ಡಿಗ್ರಿಯೂ ಆಯಿತು, ಇಬ್ಬರೂ ಮನೆಯಲ್ಲಿ ಕೇಳುವ ಆ ದಿನವೂ ಬಂತು. ಇಬ್ಬರ ಮನೆಯಲ್ಲೂ ಬಂದ ಒಂದೇ ಉತ್ತರ ಅಂದರೆ ಬೇರೆ ಜಾತಿಯೆಂದು.

ಇಬ್ಬರಿಗೂ ಒಬ್ಬರನ್ನೊಬ್ಬರನ್ನು ಬಿಡುವ ಮನಸ್ಸಿಲ್ಲ ಜೊತೆಗೆ ಮನೆಯವರನ್ನೂ ನೋಯಿಸುವ ಮನಸ್ಸಿರಲಿಲ್ಲ. ಮರಳಿ ಯತ್ನವ ಮಾಡು ಅನ್ನುವಂತೆ ಅವರಿಬ್ಬರೂ ಮತ್ತೆ ಮತ್ತೆ ಈ ವಿಷಯದ ಬಗ್ಗೆ ಮನೆಯಲ್ಲಿ ಪ್ರಸ್ತಾಪವನ್ನೆತ್ತುತಿದ್ದರು. ಯಾವಾಗಲೂ ಸಿಗುತ್ತಿದ್ದುದು ಒಂದೇ ಉತ್ತರ, ಈ ನಡುವೆ ಸುಷ್ಮಾಳ ಮನೆಯಲ್ಲಿ ಬೇರೊಬ್ಬ ಹುಡುಗನನ್ನು ಹುಡುಕಲು ಶುರುಮಾಡಿದರು, ತಿಳಿದ ಸುಷ್ಮಾ ಇದನ್ನ ರಮೇಶನಿಗೆ ತಿಳಿಸಿದಾಗ ಅವನಿಗೂ ಗಾಬರಿಯಾಯಿತು. ವಿಧಿಯಿಲ್ಲದೆ ಮನಸ್ಸಿಲ್ಲದ ಮನಸ್ಸಿನಿಂದ ಓಡಿಹೋಗುವ ನಿರ್ಧಾರ ಮಾಡಿದರು.

ಬೇರೊಂದು ಊರಲ್ಲಿ ಸಂಸಾರ ಶುರುಮಾಡಿದ ಇಬ್ಬರೂ ಒಂದೊಂದು ಕೆಲಸವನ್ನು ಹುಡುಕಿಕೊಂಡರು. ಈ ನಡುವೆ ವಿಷಯ ತಿಳಿದ ಸುಷ್ಮಾಳ ಅಪ್ಪ ಅಮ್ಮನಿಗೆ ಬೇಸರವಾದರೂ ಅದನ್ನು ತೋರ್ಪಡಿಸದೆ ಆದದ್ದಾಯ್ತು ಎಂದು ಮಗಳು ಮತ್ತು ಅಳಿಯನನ್ನು ಒಮ್ಮೆ ಹೋಗಿ ನೋಡಿಕೊಂಡು ಬಂದಿದ್ದರು. ಆದರೆ ರಮೇಶನ ಮನೆಯಲ್ಲಿನ ಚಿತ್ರಣ ಬೇರೆಯ ತೆರನಿತ್ತು. ವಾಸ್ತವದಲ್ಲಿ ರಮೇಶನ ಅಪ್ಪ ಒಳ್ಳೆಯವರಿದ್ದರೂ ಮಗ ಹೀಗೆ ಮಾಡಿದ ಎಂದು ಕೋಪಗೊಂಡಿದ್ದರು. ಇವನೇನೋ ಮದುವೆಯಾಗಿ ಹೋದ ಆದರೆ ಮಗಳಿಗೆ ಗಂಡು ಕೊಡುವವರು ಯಾರು ಎಂದು ಮನಸ್ಸಿನಲ್ಲಿಯೇ ಕೊರೆಯುತ್ತಿತ್ತು, ಆ ಕೋಪವೇ ಒಂದೆರಡು ಸಲ ಸುಷ್ಮಾ, ರಮೇಶನ ಮೇಲೆ ಹಲ್ಲೆಯ ರೀತಿಯಲ್ಲಿ ವ್ಯಕ್ತವಾಗಿತ್ತು. ಅದ್ಹೇಗೋ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದರು.

ಇಲ್ಲಿದ್ದರೆ ಅಪಾಯವೆಂದರಿತು ಬೆಂಗಳೂರಿಗೆ ಬಂದರು. ಕಾಲ ಸರಿಯಿತು, ದಂಪತಿಗಳಿಬ್ಬರೂ ಅನ್ಯೋನ್ಯವಾಗಿ ಸಂಸಾರ ಸಾಗಿಸಿಕೊಂಡು ಹೋಗುತ್ತಿದ್ದರು, ಆದ್ರೆ ಒಂದು ಕೊರಗು ಇಬ್ಬರಲ್ಲೂ ಕಾಡುತ್ತಿತ್ತು ಅದೇನೆಂದರೆ ಮಕ್ಕಳಾಗಲಿಲ್ಲವೆಂದು. ಆಸ್ಪತ್ರೆ, ದೇವಸ್ಥಾನ ಹೀಗೆ ಎಲ್ಲಾ ರೀತಿಯ ಪ್ರಯತ್ನಗಳೂ ಆದವು ಆದರೆ ಏನೊಂದೂ ಪ್ರಯೋಜನವಾಗಲಿಲ್ಲ. ಒಂದು ದಿನ ಸುಷ್ಮಾ ರಮೇಶನಲ್ಲಿ ನಾವೊಂದು ಮಗುವನ್ನು ದತ್ತು ತೆಗೆದುಕೊಂಡರೆ ಹೇಗೆ ಎಂದಳು, ರಮೇಶನಿಗೂ ಅದು ಸರಿಯೆಂದೆನಿಸಿ ಒಂದು ಆಶ್ರಮಕ್ಕೆ ಹೋಗಿ ಒಂದು ಮಗುವನ್ನು ದತ್ತು ತೆಗೆದುಕೊಂಡರು.

..................

ಈಗ ಟಿ. ವಿಯಲ್ಲಿ ಬಂದ ಸುದ್ದಿಯತ್ತ ಗಮನಹರಿಸೋಣ.

ಹೀಗೆ ಚಾನೆಲ್ ಚೇಂಜ್ ಮಾಡ್ತಿದ್ದೆ, ಒಂದು ಚಾನೆಲ್ನಲ್ಲಿ ಯಾವುದೋ ಒಂದು ಹಸುಳೆಯ ತಲೆ ಮತ್ತು ಕೈಯನ್ನು ನಾಯಿಗಳು ತಿಂದಿದ್ದರ ಸುದ್ದಿ ಬರುತ್ತಿತ್ತು, ಜೊತೆಗೆ ಆ ದಿನ ಬೆಳಗ್ಗೆ ಯಾರೋ ಅಲ್ಲಿ ಹಸುಳೆಯನ್ನು ಹಾಕಿಹೋಗಿದ್ದಾರೆ ಎಂಬ ಸುದ್ದಿ ಬರುತ್ತಿತ್ತು. ಹದಿಹರೆಯದ ಆಕರ್ಷಣೆಗಳನ್ನು ತಡೆಯಲಾರದೆ ಬರೀ ನೋಟವೇ ಪ್ರೇಮವೆಂದು ಭಾವಿಸಿ ಮನಸ್ಸಿನ್ನೂ ಪಕ್ವವಾಗಿರದ ಸಮಯದಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಣಯಿಸಲಾಗದೆ, ಜೀವನಸಂಗಾತಿಯೆಂಬ ಪದಕೆ ಅರ್ಥವೇ ತಿಳಿಯದ ವಯಸ್ಸಿನಲ್ಲಿ ಮೈಮರೆತು ಮಾಡಿದ ತಪ್ಪಿಗೆ ಪಾಪದ ಕೂಸು ಜಗತ್ತನ್ನೇ ನೋಡಲಾಗದೆ ಅತ್ಯಂತ ದಾರುಣವಾಗಿ ಕೊಲೆಗೀಡಾಗಿತ್ತು.

ಬೇಕೇ ಇಂಥಾ ಆಕರ್ಷಣೆ????

ಎರಡು ಪ್ರಸಂಗಗಳೂ ಪ್ರೇಮಕ್ಕೆ ಸಂಬಂಧಿಸಿದ್ದೇ, ಆದರೆ ಫಲಿತಾಂಶ ಬೇರೆ ಬೇರೆ .


ಚಿತ್ರಕೃಪೆ: ಅಂತರ್ಜಾಲ.

No comments:

Post a Comment