Monday, October 3, 2011

ಕರಿಮಲೆಯ ಕಗ್ಗತ್ತಲಿನಲಿ

ಕರಿಮಲೆಯ ಕಗ್ಗತ್ತಲಿನಲಿ

ರಾಮಾಪುರ, ಮಲೆನಾಡಿನ ಒಂದು ಹಳ್ಳಿ, ಸುಮಾರು ೨೫ ಒಕ್ಕಲುಗಳು ವಾಸವಾಗಿದ್ದವು, ಜೊತೆಗೆ ಒಂದು ಬ್ರಾಹ್ಮಣ ಕುಟುಂಬ ಮತ್ತೆ ದಲಿತರ ಕಾಲೋನಿ. ಭೀಮೇಗೌಡರೇ ಊರಿನ ಪಟೇಲರಾಗಿದ್ದರು, ಅವರ ಅಪ್ಪ ಅಜ್ಜ ಮುತ್ತಜ್ಜನ ಕಾಲದಿಂದಲೂ ಇವರ ಮನೆಯವರೇ ಅದಕ್ಕೆ ವಾರಸುದಾರರಾಗಿದ್ದರು, ವಾಡಿಕೆಯಂತೆ ಅದು ಭೀಮೇಗೌಡರಿಗೆ ಒಲಿದಿತ್ತು. ಅವರ ವ್ಯಕ್ತಿತ್ವ ಜೊತೆಗೆ ಶ್ರೀಮಂತಿಕೆಯೂ ಅದು ಸೂಕ್ತವಾಗಿತ್ತು. ರಾಮಾಪುರದ ಪಶ್ಚಿಮಕ್ಕೆ ಇತ್ತು ಕರಿಮಲೆ. ಊರಿನ ಮೇಲ್ಬದಿಯಲ್ಲಿ ಮನೆಗಳಿದ್ದರೆ ಕೆಳಗೆ ಗದ್ದೆಗಳು, ಹಾಗೆ ಇಳಿಜಾರಿನಲ್ಲಿ ಗದ್ದೆಯ ಸಾಲುಗಳು ಕೊನೆಯಾಗುತ್ತಿದ್ದಂತೆ ಹೊಳೆ, ಹೊಳೆಯಾಚೆ ಇದ್ದದ್ದೇ ಕರಿಮಲೆ. ಹೊಸಬರೇನಾದರೂ ಬಂದು ಕರಿಮಲೆ ಒಳಗೆ ಪ್ರವೇಶಿಸಿದರೆ ಇದನ್ಯಾರಪ್ಪ ಕರಿಮಲೆ ಅಂತ ಕರೀತಾರೆ ಅನ್ನಬಹುದು ಯಾಕೆಂದರೆ ಕಾಡು ಶುರುವಾಗುವಾಗ ಸಿಗುವ ಸಣ್ಣ ಸಣ್ಣ ಗಿಡ ಮರಗಳು ಅದರಾಚೆಗೂ ಅಂದರೆ ಒಂದು ೩೦ ಎಕರೆಯಷ್ಟರ ಮಟ್ಟಿಗೆ ಹಾಗೇ ಇತ್ತು ಅದರ ಮುಂದೆ ಹೋದರೆ ಕರಿಮಲೆಯ ಹೆಸರಿಗೆ ತಕ್ಕಂತಿತ್ತು. ಬೃಹತ್ ಗಾತ್ರದ ಮರಗಳು, ಒಂದಕ್ಕೊಂದು ಬೆಸೆದುಕೊಂಡಿದ್ದವು ಜೊತೆಗೆ ಅದಕ್ಕೆ ಹಬ್ಬಿಕೊಂಡ ಬಳ್ಳಿಗಳೂ. ಕಾಡುಪ್ರಾಣಿಗಳು, ವಿಷಜಂತುಗಳು, ಚಿತ್ರವಿಚಿತ್ರ ಹಾವುಗಳು ಅಲ್ಲಿ ಹೇರಳವಾಗಿದ್ದವು. ರಾಮಾಪುರದವರ್ಯಾರೂ ಅತ್ತಕಡೆ ಹೋಗುತ್ತಿರಲಿಲ್ಲ. ಅವರ ಮನೆಯ ಎತ್ತುಗಳು ಕರಿಮಲೆಗೆ ಹೋಗಿ ವಾಪಸ್ ಬರುತ್ತಿರಲಿಲ್ಲ, ಹಿಂದೊಮ್ಮೆ ತನ್ನ ಎತ್ತನ್ನು ಹುಡುಕಿಕೊಂಡು ಹೋದ ರಾಜೇಗೌಡನ ಆಳು ನಿಂಗ ವಾಪಸ್ ಬಂದಿರಲಿಲ್ಲ, ಹಾಗಾಗಿ ಆ ಊರಿನವರು ಅತ್ತ ಕಡೆ ಹೋಗುತ್ತಿರಲಿಲ್ಲ, ಜೊತೆಗೆ ಆಗಾಗ ಕೇಳಿಸುತ್ತಿದ್ದ ಹುಲಿಯ ಘರ್ಜನೆ ಕೂಡ ಅವರನ್ನು ಅತ್ತ ಕಡೆ ಹೋಗದಂತೆ ತಡೆಹಿಡಿದಿತ್ತು.

ಬಸವ, ತನ್ನ ಮೈಯನ್ನು ಗೋಡೆಗೆ ಉಜ್ಜಿ ಉಜ್ಜಿ ತನ್ನ ಕೆರೆತವನ್ನು ಶಮನ ಮಾಡಿಕೊಳ್ಳಲು ಪ್ರಯತ್ನಿಸುತ್ತಿತ್ತು. ಹಾಗೆ ಕೆರೆದುಕೊಳ್ಳುತ್ತಾ ತನ್ನ ಪಕ್ಕದಲ್ಲಿದ್ದ ತಂಗಿಯನ್ನು ನೋಡಿತು. ಸೀತೆ, ತನ್ನ ಪಕ್ಕದಲ್ಲಿ ಹಾಕಿದ್ದ ಹುಲ್ಲನ್ನು ಮೆಲ್ಲುತ್ತಿತ್ತು. ತನ್ನ ಹಿಂದೆ ಇದ್ದದ್ದು ಕರಿಯ, ಅದನ್ನು ಯಜಮಾನರು ಈ ಹಿಂದೆ ಅಂದರೆ ೩ ವರ್ಷಗಳ ಹಿಂದೆ ಪಕ್ಕದೂರಿನಿಂದ ಕೊಂಡುಕೊಂಡು ಬಂದಿದ್ದರು. ಕರಿಯ ಹೆಸರಿಗೆ ಕಪ್ಪಗಿದ್ದರೂ ಸಾಧು ಸ್ವಭಾವದ ಪ್ರಾಣಿ. ಒಟ್ಟಿನಲ್ಲಿ ಆ ಹಟ್ಟಿಯಲ್ಲಿ ಈ ಮೂವರದೇ ಸಾಮ್ರಾಜ್ಯ.

ತನ್ನ ಜನ್ಮದಿಂದಲೂ ಬಸವ ಭೀಮೇಗೌಡರ ಮನೆಯಲ್ಲೇ ಇತ್ತು, ಗೌಡರ ಮನೆಗೆ ಅದು ಅವರ ಮನೆಯ ಆಳಿಗಿಂತಲೂ ಹೆಚ್ಚಾಗಿ ಕೆಲಸ ಮಾಡುತ್ತಿತ್ತು. ಮಳೆಗಾಲದ ಬೆಳೆಗಾಗಿ ಹೊಲ ಉಳುವುದಕ್ಕಾಗಿ ನೇಗಿಲಿಗೆ ಹೆಗಲಾಗುತ್ತಿತ್ತು, ಅಲ್ಲದೆ ಬೇಸಗೆ ಕಾಲದಲ್ಲೂ ಮತ್ತೊಂದು ಬೆಳೆ ಬೆಳೆಯುತ್ತಿದ್ದುದರಿಂದ ಆಗಲೂ ಅದು ತನ್ನ ಕರ್ತವ್ಯ ಮಾಡುತ್ತಿತ್ತು.

ಬಸವ ಹೆಸರಿಗೆ ತಕ್ಕ ಹಾಗೆ ಊರ ಬಸವನಂತಿದ್ದ. ಅಂದರೆ ಕಂಡ ಕಂಡಲ್ಲಿ ತಿರುಗಾಡುವುದೆಂದರೆ ಅದಕ್ಕೆ ಪಂಚಪ್ರಾಣ, ಹಾಗೇ ಬಲಿಷ್ಟವಾಗಿಯೂ ಆಗಿತ್ತು, ಕಾರಣ, ಮನಯಲ್ಲಿ ಚೆನ್ನಾಗಿಯೇ ಸಿಕ್ಕುತ್ತಿದ್ದ ಮುಸುರೆ ಅಥವಾ ಹಿಂಡಿ ಅಲ್ಲ, ಸಮಯ ಸಿಕ್ಕಾಗ ಅಂದರೆ ಮೇಯಲು ಹೋದಾಗ, ಕಾಯುತ್ತಿದ್ದ ಸೋಮ ಸ್ವಲ್ಪ ಕಾಣಿಸದಿದ್ದರೂ ಅಥವಾ ಮೇಯುವಂತೆ ನಟಿಸಿ ಮುಂದೆ ಮುಂದೆ ಹೋಗುತ್ತಾ ಹತ್ತಿರವಿದ್ದ ಕಾಡಿಗೆ ನುಗ್ಗುತ್ತಿತ್ತು. ಹಾಗೆ ಹೋದ ಬಸವ ತಿರುಗಿ ಬರುತ್ತಿದ್ದದ್ದು ಏನಿಲ್ಲವೆಂದರೂ ಒಂದು ವಾರದ ತರುವಾಯ. ಊರಿನವರು ಅದೇನಾದರೂ ಎದುರಿಗೆ ಬಂದರೆ ಅದು ಹೋಗುವವರೆಗೆ ನಿಂತಲ್ಲಿಯೇ ಇರುತ್ತಿದ್ದರು, ಯಾರಿಗೂ ಅದು ತೊಂದರೆ ಮಾಡದಿದ್ದರೂ ಅದರ ಆಕಾರಕ್ಕೆ ಮತ್ತು ಅದರ ನೆಟ್ಟನೆ ಕೋಡುಗಳಿಗೆ ಬೆದರುತ್ತಿದ್ದರು!!!!

ಅದು ಕಾಡಿಗೆ ಹೋಯಿತು ಎಂದರೆ ಸೋಮನಿಗೆ ಕೆಟ್ಟ ಕಾಲ ಬಂದಿದೆಯೆಂದೇ ಅರ್ಥ, ಯಾಕೆಂದರೆ ಗೌಡರು ಅವನನ್ನು ಸುಮ್ಮನೆ ಬಿಡುತ್ತಿರಲಿಲ್ಲ, ಮುಖ ಮೂತಿ ಬೆವರಿಳಿಯುವಂತೆ ಬೈಗುಳಗಳು ಗೌಡರ ಬಾಯಿಯಿಂದ ಸರಾಗವಾಗಿ ಅಷ್ಟೇ ಕೊಪೋದ್ರಿಕ್ತವಾಗಿ ಬರುತ್ತಿದ್ದವು, ಒಮ್ಮೊಮ್ಮೆ ಹೊಡೆತಗಳೂ ಬೀಳುತ್ತಿದ್ದವು. ಹೊಡೆತ ಬೀಳುತ್ತಿದ್ದ ಸಮಯವೆಂದರೆ ಬೇಸಾಯದ ಕಾಲದಲ್ಲಿ. ಇದ್ದ ಎರಡು ಎತ್ತುಗಳಲ್ಲಿ ಒಂದು ಹೋದರೆ ಬೇಸಾಯ ಮಾಡುವುದಕ್ಕೆ ಬೇರೆಯವರ ಮನೆಯವರ ಎತ್ತುಗಳನ್ನು ಆಶ್ರಯಿಸಬೇಕಲ್ಲ ಎನ್ನುವುದು ಗೌಡರ ಕೋಪಕ್ಕೆ, ಹೊಡೆತಕ್ಕೆ ಕಾರಣವಾಗುತ್ತಿತ್ತು. ಸೋಮನಿಗೆ ಈ ಎಲ್ಲಾ ವಿಷಯಗಳು ತಿಳಿದಿದ್ದ ಕಾರಣ ಅವನೂ ತನ್ನ್ನ ರಕ್ಷಣೆಗೆ ತುಂಬಾ ಪ್ರಯತ್ನಪಡುತ್ತಿದ್ದನು. ಅಂದರೆ, ಬಸವನನ್ನು ತನ್ನ ಹದ್ದು ಕಣ್ಣಿಂದ ಕಾಯುತ್ತಿದ್ದನು.

ಆದರೂ ಕೆಲವೊಂದು ಕ್ಷಣದಲ್ಲಿ ನಡೆಯುತ್ತಿದ್ದ ಘಟನೆಗಳಲ್ಲಿ ಅಂದರೆ ಯಾರಾದರೂ ಗೌಡರು ಅಲ್ಲಿ ಬಂದರೆ ತಮ್ಮ ಗದ್ದೆಗೆ ಸ್ವಲ್ಪ ನೀರನ್ನು ಕಟ್ಟಲು ಹೇಳಿದಾಗ ಅಥವಾ ತನ್ನ ಕಾಲೋನಿಯವರು ತಾನಿರುವಲ್ಲಿ ಬಂದಾಗ ಅವರೊಡನೆ ಹರಟೆ ಹೊಡೆಯುತ್ತಿದ್ದಾಗ ಹೀಗೆ ಹಲವು ಕಾರಣಗಳಿದ್ದಾಗ ಬಸವ ಮಿಂಚಿನಂತೆ ಕಾಡೊಳಗೆ ನುಗ್ಗುತ್ತಿತ್ತು. ಸೋಮನ ಪಕ್ಕದಲ್ಲಿದ್ದವರು 'ಸೋಮ ಹೋಯ್ತಲ್ಲೋ ಬಸವ' ಅಂದಾಗಲೇ ಅವನಿಗೆ ಪ್ರಜ್ಞೆ ಬಂದಂತಾಗಿ ಕಾಡೊಳಗೆ ನುಗ್ಗುತ್ತಿದ್ದನು, ಬಸವನಿಂದಾಗಿ ಸೋಮನಿಗೂ ಆ ಕಾಡು ಸ್ವಲ್ಪಮಟ್ಟಿಗೆ ಚಿರಪರಿಚಿತವಾಗಿತ್ತು ಅಂದರೆ ಬೆಟ್ಟದ ಬುಡದವರೆಗೆ, ಆದರೂ ಅವನಿಗೆ ಬಸವನನ್ನು ಹುಡುಕಿ ತರಲು ಆಗುತ್ತಿರಲಿಲ್ಲ ಕಾರಣ ಬಸವ ಕರಿಮಲೆಗೆ ಹೋಗುತಿದ್ದುದರಿಂದ. ಸೋಮ ಗೌಡರ ಕೋಪವನ್ನ ನೆನಸಿಕೊಂಡು ಅಲ್ಲಿಗೂ ನುಗ್ಗುತ್ತಿದ್ದನೇನೋ ಆದರೆ ಅಲ್ಲಿ ಹುಲಿಯಿದೆಯೆಂದು ಯಾರೋ ಹೆದರಿಸಿದ್ದರಿಂದ ಅವನು ಅತ್ತ ಕಡೆ ತಲೆ ಹಾಕುತ್ತಿರಲಿಲ್ಲ. ಬಸವ ಹಲವು ಬಾರಿ ಕರಿಮಲೆಗೆ ಹೋಗುತ್ತಿದ್ದರೂ ವಾಪಸ್ ಬರುತ್ತಿದ್ದದ್ದು ಎಲ್ಲರಿಗೂ ಸೋಜಿಗವಾಗಿತ್ತು, ಗೌಡರೂ ಸಹ ಅದು ಹಿಂದಿರುಗ್ಗುತ್ತಿದ್ದುದರಿಂದ ಆ ವಿಷಯದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿರಲಿಲ್ಲ.

ಮೊದಮೊದಲು ಬಸವ ಕರಿಮಲೆಗೆ ಹೋದಾಗ ಆರಾಮಾಗಿ ಅಲ್ಲೇ ತಿಂದು ಇದ್ದು ಸಾಕೆನಿಸಿದಾಗ ತನ್ನ ಹಟ್ಟಿಗೆ ಹೆಜ್ಜೆಹಾಕುತ್ತಿತ್ತು. ಒಮ್ಮೆ ಹೀಗೆ ಕಾಡಲ್ಲಿ ಯಾವುದೇ ಅಂಜಿಕೆಯಿಲ್ಲದೆ ರಾಜಾರೋಷವಾಗಿ ಮೇಯುತ್ತಿತ್ತು, ಸ್ವಲ್ಪ ಸಮಯದ ಬಳಿಕ ತಾನು ನಿಂತಿದ್ದ ಮರದ ಮುಂದೆ ಸದ್ದಾಗಿ ಏನೋ ಅನಾಹುತವಾಗುವುದರ ಮುನ್ಸೂಚನೆಯನ್ನು ಗ್ರಹಿಸಿ ಮೇಯುವುದನ್ನು ನಿಲ್ಲಿಸಿ ಸುತ್ತಲೂ ನೋಡತೊಡಗಿತು. ಸದ್ದು ನಿಂತಿತು, ಆದರೂ ಬಸವ ಅಲ್ಲೇ ತನ್ನ ಕಣ್ಣನ್ನು ನೆಟ್ಟಿತ್ತು. ಸ್ವಲ್ಪ ಮೇಯುವುದು ಮತ್ತೆ ನೋಡುವುದು ಹಾಗೇ ಮಾಡುತ್ತಿತ್ತು, ಒಡನೆಯೇ ಹುಲಿಯೊಂದು ಇದರ ಮೈಮೇಲೆ ಹಾರಿತು, ಅನಿರೀಕ್ಷಿತವಾಗಿ ಬಂದ ಶತ್ರುವಿಗೆ ಸಿದ್ಧವಾಗಿಯೇ ಇದ್ದ ಬಸವ ಆಚೆ ಸರಿದು ಹೂಂಕರಿಸುತ್ತ ತನ್ನ ಕೋಡನ್ನು ಮುಂದೆ ಚಾಚಿತು, ಹುಲಿಯೇನೋ ಹಾರಿತು ಆದರೆ ಬಸವನ ದೂರಾಲೋಚನೆ ಅದಕ್ಕೆ ತಿಳಿದಿರಲಿಲ್ಲ, ಬಸವ ಅದರ ಎದೆಯ ಭಾಗಕ್ಕೆ ತನ್ನ ಕೋಡುಗಳನ್ನು ಚುಚ್ಚಿತ್ತು. ಎದೆಯ ಮಾಂಸ ಸ್ವಲ್ಪ ಹರಿದು ಹುಲಿ ನೋವಿನಿಂದ ನರಳಿ ಶಕ್ತಿಯೆಲ್ಲಾ ಉಡುಗಿದ ಪರಿಣಾಮ ಬಸವನ ಮೇಲೆ ಮತ್ತೊಮ್ಮೆ ಆಕ್ರಮಣ ಮಾಡಲಾರದೆ ಕಾಡಿನಲ್ಲಿ ಮರೆಯಾಯಿತು. ಬಸವ ಬದುಕಿದೆ!! ಎಂದು ಹಟ್ಟಿಯ ಕಡೆ ಹೊರಟಿತು.

ಬೇಸಗೆಯೆಲ್ಲ ಕಳೆದು ಮೋಡಗಳು ಮಲೆನಾಡಿನ ಕಡೆ ಬರತೊಡಗಿದ್ದವು, ಗೌಡರು ಮಳೆ ಬರುವ ಮುನ್ಸೂಚನೆಯನ್ನರಿತು ಬಸವನನ್ನು ಎಲ್ಲೂ ಹೊರಗೆ ಬಿಡದೆ ಒಂದು ವಾರದ ಮೊದಲೇ ಹಟ್ಟಿಯಲ್ಲಿ ಕಟ್ಟಿಹಾಕಿದ್ದರು, ಮನೆಯ ಮುಸುರೆ, ಕಣದಲ್ಲಿದ್ದ ಬಿಳಿಯ ಹುಲ್ಲೇ ಅದಕ್ಕೆ ಆಹಾರ.

ಹಿಂದಿನ ದಿನ ಗೌಡ್ರು ಹೋಗಿ ಚಂದ್ರನ ಬಿಡಾರದತ್ತ ಬರುತ್ತಿದ್ದಂತೆ ದೂರದಿಂದ ಗೌಡ್ರು ಬರುವುದನ್ನೇ ಗಮನಿಸಿದ ಚಂದ್ರ ಹಿತ್ತಲಲ್ಲಿಮುಖ ತೊಳೆದುಕೊಳ್ಳುತ್ತಿದ್ದವನು ಚಂಬನ್ನು ಅಲ್ಲೇ ಎಸೆದು ಸಿದ್ಧನ ಬಿಡಾರದತ್ತ ಓಡಿಹೋಗಿ ತನ್ನ ಬಿಡಾರದತ್ತ ಬಂದ ಗೌಡರನ್ನು ಗಮನಿಸುತ್ತಿದ್ದನು!!

ಗೌಡ್ರು ತಮ್ಮ ಎಂದಿನ ಶೈಲಿಯಲ್ಲಿಯೇ ಒಂದು ಕೈನಲ್ಲಿ ಕೊಡೆ ಇನ್ನೊಂದರಲ್ಲಿ ಸೀಗೆಕತ್ತಿಯನ್ನು ಹಿಡಿದುಕೊಂಡು ಕಾಲೋನಿಯತ್ತ ಹೆಜ್ಜೆ ಹಾಕಿದ್ದರು, ಟೈಗರ್ (ಅವರ ನಾಯಿ, ಕಂತ್ರಿನಾಯಿಯಾಗಿದ್ದರೂ ಹೆಸರಿಗೆ ತಕ್ಕ ಹಾಗೆ ದಪ್ಪನಾಗಿ ದಷ್ಟಪುಟ್ಟವಾಗಿತ್ತು) ಸಹ ಅವರ ಹಿಂದೆಯೇ ಬರುತ್ತಿತ್ತು. ಕಾಲೋನಿಯಲ್ಲಿದ್ದ ನಾಯಿಗಳೆಲ್ಲ ಆಜಾನುಬಾಹು ಗೌಡರನ್ನು ನೋಡಿ ಒಂದೇ ಸಮನೆ ದೂರದಿಂದಲೇ ಬೊಗಳಲಾರಂಭಿಸಿದವು, ಯಾವಾಗ ಟೈಗರ್ ಮುಖ ಕಂಡಿತೋ ಆಗ ಬೊಗಳುತ್ತಿದ್ದ ನಾಯಿಗಳೆಲ್ಲಾ ಬಾಲ ಮುದುರಿಕೊಂಡು ಸುಮ್ಮನಾದವು, ಗೌಡ್ರು ಟೈಗರ್ ನೋಡಿ ಮುಗುಳ್ನಗೆ ನಕ್ಕು ಮುಂದೆ ಹೊರಟರು, ಟೈಗರ್ ಸಹ ಏನೋ ಸಾಧನೆ ಮಾಡಿದೆ ಎಂದು ತನ್ನ ಬಾಲವನ್ನು ಎತ್ತಿಕೊಂಡು ಗೌಡರನ್ನ ಹಿಂಬಾಲಿಸಿತು.

ಚಂದ್ರ ಚಂದ್ರ ಎಲ್ಲಿ ಸತ್ತು ಹೋದ್ಯೋ, ಒಂದು ತಿಂಗ್ಲಾಯ್ತಲ್ಲೋ ನಿನ್ನ ಮಖ ಕಾಣದೆ, ಸಾಲ ಬೇಕು ಅಂದಾಗ ದಮ್ಮಯ್ಯ ಅಂತ ಬರ್ತೀರಾ, ನಮಗೆ ಬೇಕಾದಾಗ ಎಲ್ಲಿ ಸಾಯ್ತೀರೋ.....ಇನ್ನೂ ಏನೋ ಹೇಳೋದ್ರಲ್ಲಿದ್ರು ಗೌಡ್ರು ಅಷ್ಟೊತ್ತಿಗೆ ಮಂಜಿ ಬಿಡಾರದಿಂದ ಹೊರಗೆ ಬಂದಳು.

ಎಲ್ಲಿ ಸತ್ನೇ ಅವ್ನು, ಸಾಲ ನಮ್ಹತ್ರ ಮಾಡೋದು ಕೆಲ್ಸಕ್ಕೆ ಬೇರೆಯವರ ಮನೆಗೆ ಹೋಗೋದಾ?? ಬಡ್ಡಿಮಗ ಮನೆಗೆ ಬರೋಕ್ಹೇಳು ಅವನಿಗೆ ಬಡ್ಡಿ ಸಮೇತ ಅಸಲು ಕಕ್ಲಿಕ್ಕೆ ಹೇಳ್ತೀನಿ!! ಆಮೇಲೆ ಯಾವನ್ಮನೆಗಾದ್ರೂ ಹೋಗಿ ಸಾಯ್ಲಿ. ನಿಂಗೇನು ಹೊತ್ತು ಬಂದಿರೋದು?? ಗಂಡ ಹೆಂಡ್ತಿ ಬೇರೆರ್ಮನೆ ಕೆಲ್ಸಕ್ಕೆ ಹೋಗಿ, ನಾನು ನನ್ನ ಗದ್ದೆ ತೋಟನೆಲ್ಲ ಹಾಳು ಬಿಟ್ಕೊಂಡು ಸಾಯ್ತೀನಿ, ಈ ಸಂಪತ್ತಿಗೆ ಸಾಲ ಕೊಡ್ಬೇಕು ನಿಮ್ಗೆ.

ಮಂಜಿ ಗೌಡರನ್ನ ನೋಡೇ ಅರ್ಧ ಬೆವ್ತಿದ್ಲು ಅವ್ರ ಮಾತು ಕೇಳಿದ್ದ ಹಾಗೆ 'ಇಲ್ಲ ಗೌಡ್ರೆ ಹಂಗೆಲ್ಲ ಮಾಡ್ಬೇಡಿ, ಒಂದೆರಡು ದಿನ ಹೊಳ ಹೊಡೆಯೋದಿದೆ ಬನ್ನಿ ಅಂತ ರಾಯಪ್ಪಗೌಡ್ರು ಹೇಳಿದ್ರು ಹಂಗಾಗಿ ಅಲ್ಲಿಗೆ ಹೋಗಿದ್ವಿ, ನಾಳೆಯಿಂದ ಬಂದೆ ಬರ್ತೀವಿ'.

ಆ ರಾಯಪ್ಪಂಗೆ ಹೇಳ್ತೀನಿ ನನ್ನ ಸಾಲ ನೀನು ಕೊಡು ಇವರನ್ನ ಬೇಕಾದ್ರೆ ನೀನೇ ಇಟ್ಕೋ ಅಂಥಾ (ಗೌಡ್ರು ಸುಮ್ನೆ ಹಾಗೆ ಹೇಳಿದ್ರು) ಅಂದಾಗ ಮಂಜಿ ಇನ್ಮುಂದೆ ಎಲ್ಲೂ ಹೋಗಲ್ಲ ಗೌಡ್ರೆ ನಾಳೆಯಿಂದ ಬರ್ತೀವಿ ಅಂದಾಗ ಗೌಡ್ರು ನಿಮ್ದ್ಯಾವಗ್ಲೂ ಇದೆ ಕಥೆ, ಆ ಬಡ್ಡಿಮಗಂಗೆ ನಾಳೆ ಬಂದು ಬೇಸಾಯಕ್ಕೆ ಎತ್ತು ಕಟ್ಹೋಕೇಳು ಬರ್ಲಿಲ್ಲ ಅಂದ್ರೆ ಚಮ್ಡಾ ಸುಲೀತಿನಿ ಅನ್ನು ಅಂದು ಅಲ್ಲಿಂದ ಹೊರಟ್ರು.

ಮಳೆ ಒಂದೇ ಸಮನೆ ಸುರಿಯುತ್ತಿತ್ತು, ಎಲ್ಲರ ಮನೆಯಲ್ಲಿಯೂ ಗದ್ದೆಯ ಕೆಲಸ ಜೋರಾಗಿ ನಡೆಯುತ್ತಿತ್ತು. ಚಂದ್ರ ಬಸವ ಮತ್ತು ಕರಿಯನ ಸಮೇತ ಬೇಸಾಯ ಮಾಡುತ್ತಿದ್ದನು, ಸೋಮನೂ ಬೇಸಾಯ ಮುಗಿದಾಕ್ಷಣ ಅವುಗಳನ್ನು ಕಾಯುವ ಕೆಲಸವನ್ನು ನೀಟಾಗಿ ಮಾಡುತ್ತಿದ್ದನು, ಎಲ್ಲಕ್ಕಿಂತ ಮಿಗಿಲಾಗಿ ಬಸವನನ್ನು ತನ್ನ ಹದ್ದಿನ ಕಣ್ಣಿಂದ ಕಾಯುತ್ತಿದ್ದನು, ಬಸವನೂ ಓಡಿಹೋಗುವ ಪ್ರಯತ್ನ ಮಾಡುತ್ತಿರಲಿಲ್ಲ ಯಾಕೆಂದರೆ ಹೊಳೆಯು ತುಂಬಿ ಹರಿಯುತ್ತಿದ್ದುದರಿಂದ. ಮರ(ಕರಗು - ನಾಟಿಗಿಂತ ಮೊದಲು ಮಾಡುವ ಬೇಸಾಯ) ಹೊಡೆಯುವುದಕ್ಕೆ ಇನ್ನೊಂದು ವಾರ ಸಮಯವಿತ್ತು. ಗೌಡ್ರೆ ಈ ಮಳೆಲಿ ಇನ್ನೇನು ಹೊರ್ಗಡೆ ಮೇಯ್ಸೋದು ಇಲ್ಲೇ ಹಟ್ಟಿಲಿ ಇರ್ಲಿ ಅಕಸ್ಮಾತ್ ಬಸವ ತಪ್ಪಿಸಿಕೊಂಡ್ರೆ ಮರ ಹೊಡೆಯೋಕೆ ಸಿಗಲ್ಲ ಆಮೇಲೆ ಹುಡ್ಕೋದು ಕಷ್ಟ ಆಗತ್ತೆ ಎಂದು ಸೋಮ ಅಂದಾಗ ಆಯ್ತು ಹಾಗೆ ಮಾಡು ಆದ್ರೆ ಹುಲ್ಲು ಮುಸ್ರೆ ಚೆನ್ನಾಗಿ ಹಾಕು ಅಂದಿದ್ರು.

ಒಂದು ವಾರ ಆಯ್ತು, ಜೋರಾಗಿ ಬರುತ್ತಿದ್ದ ಮಳೆ ನಿಧಾನಕ್ಕೆ ಜಿಟಿಜಿಟಿಯಾಗಿ ಬರತೊಡಗಿತ್ತು. ಚಂದ್ರ ಬಂದು ಬಸವ,ಕರಿಯನನ್ನು ಕರೆದುಕೊಂಡು ಮರದ ಸಮೇತ ಹೊರಟನು, ಗೌಡ್ರು ಹೊಳೆ ಸಾಲಿನ ಗದ್ದೆ ಮೊದಲು ಮುಗೀಲಿ ಅಂದಿದ್ರಿಂದ ಅಲ್ಲಿಂದಲೇ ಶುರು ಮಾಡಿದ್ದನು. ಮಧ್ಯಾನ್ಹದ ಹೊತ್ತಿಗೆ ಹೊಳೆಯ ಎರಡು ಗದ್ದೆಗಳು ಮುಗಿದಿತ್ತು. ಚಂದ್ರ ತನ್ನ ಕೆಲಸ ಮುಗಿಸಿ ಎತ್ತುಗಳನ್ನು ಮೇಯಲು ಬಿಟ್ಟನು, ಹೆಣ್ಣಾಳುಗಳು ನಾಟಿ ಶುರುಮಾಡಿದ್ದರು. ಸೋಮ ಎತ್ತುಗಳನ್ನು ಹೊಳೆಯ ದಡದಲ್ಲಿ ಮೇಯಿಸುತ್ತಾ ನಾಟಿ ಮಾಡುತ್ತಿದ್ದವರ ಜೊತೆ ಮಾತನಾಡುತ್ತಾ ಕುಳಿತಿದ್ದನು. ಬಸವ ಕಾಡಿಗೆ ಹೋಗುವುದಿಲ್ಲ ಅಂದುಕೊಂಡು ಅವನು ಹೆಣ್ಣಾಳುಗಳ ಜತೆ ಹರಟುತ್ತಿದ್ದನು. ಚಂದ್ರ ಗದ್ದೆಯಲ್ಲಿದ್ದ ನೀರು ಬಸಿದುಹೋಗಲೆಂದು ಹಾರೆಯಿಂದ ಚರಂಡಿಯ ಮಣ್ಣನ್ನು ತೆಗೆಯುತ್ತಿದ್ದನು.

ಸೋಮ ಹೋಯ್ತಲ್ಲೋ ಬಸವಾ ಅಂತ ಚಂದ್ರ ಅಂದಾಗ್ಲೇ ಸೋಮ ಅತ್ತ ಕಡೆ ನೋಡಿದಾಗ ಬಸವ ಆಗಲೇ ಹೊಳೆಯನ್ನು (ಸ್ವಲ್ಪ ದಿನದಿಂದ ಮಳೆ ಕಡಿಮೆಯಾದ ಕಾರಣ ಹೊಳೆಯ ಅಬ್ಬರ ಇಳಿದಿತ್ತು) ದಾಟಿ ಕರಿಮಲೆಯ ಕಡೆ ಹೆಜ್ಜೆ ಹಾಕುತ್ತಿತ್ತು. ಸೋಮ ಗಾಬರಿಯಾಗಿ ಚಂದ್ರನ್ನ ಏನ್ಮಾಡೋದೋ ಈಗ ಅಂದಾಗ ನಿನ್ನ ಕಥೆ ಮುಗೀತು ಇವತ್ತು ಬಿಡು ಅಂದ!!!!!. ಸೋಮ, ಚಂದ್ರ ಹೆಣ್ಣಾಳುಗಳೆಲ್ಲಾ ಹೊಳೆಯ ಈ ಬದಿ ನಿಂತು ಆ ಕಡೆ ನೋಡುತ್ತಿದ್ದರು. ಚಂದ್ರಣ್ಣ ಕಾಡೊಳಗೆ ಹೋಗಣ ಬಾರೋ ಅಂತಿದ್ದ ಸೋಮ.

ತುಂಬಾ ದಿನ ಹಟ್ಟಿಯಲ್ಲಿದ್ದುದರಿಂದ ಬೇಸತ್ತ ಬಸವ ಮರ ಹೊಡೆದ ಮೊದಲ ದಿನ ಬೇಸಾಯ ಬಿಟ್ಟ ಮೇಲೆ ಮೇಯುತ್ತಿತ್ತು, ಅವಕಾಶ ಸಿಕ್ಕಿದ ತಕ್ಷಣ ಹೊಳೆ ದಾಟಿ ಕರಿಮಲೆಯ ಕಡೆ ಹೆಜ್ಜೆ ಹಾಕಿತ್ತು.

ಇವರ ಗದ್ದಲ ಕೇಳಿ ತಮ್ಮ ಪಾಲಿನ ಗದ್ದೆಗಳಲ್ಲಾಗಿದ್ದ ಕೆಲಸಗಳನ್ನ ನೋಡುತ್ತಾ ಹೊಳೆಕಡೆಗೆ ಬರುತ್ತಿದ್ದ ಗೌಡ್ರು ಒಂದೇ ಸಮನೆ ಓಡಿಬಂದರು. ಏನ್ರೋ ಏನಾಯ್ತ್ರೋ ಅಂದಾಗ ಮೊದಲೇ ಗಾಬರಿಯಾಗಿದ್ದ ಚಂದ್ರ ಗೌಡ್ರಿಗೆ ಕಾಣದಂತೆ ಹಿಂದೆ ಸರಿದನು. ಚಂದ್ರ ನಡುಗುತ್ತಲೇ, ಗೌಡ್ರೇ ಬಸವ ಕಾಡು ಹತ್ತಿತು. ಗೌಡ್ರು ಕೆಂಡಾಮಂಡಲವಾದರು. ಎಲ್ಲ್ಹೋದ ಅವ್ನು ಅಂತ ಕೈಲಿದ್ದ ಸೀಗೆಕತ್ತಿ ಎತ್ತಿದ್ರು. ಸೋಮ ನಡುಗುತ್ತಲೇ ಮುಂದೆ ಬಂದ :(. ಹೊಟ್ಟೆಗೆ ಏನು ತಿನ್ತೀಯೋ, ದನ ಕಾಯೋಕು ಲಾಯಕ್ಕಿಲ್ವಲ್ಲೋ ನೀನು ಥೂ ನಿನ್ ಜನ್ಮಕ್ಕೊಂದಿಷ್ಟು. ಇನ್ನೊಂದೆರಡು ದಿನ ಆಗಿದ್ರೆ ಬೇಸಾಯನೇ ಮುಗೀತಿತ್ತಲ್ಲೋ. ಚಂದ್ರ ನಡೀ ಹೋಗಿ ಹೆಂಗಾದ್ರೂ ಹುಡ್ಕೊಂಡು ಬರೋಣ ಅಂದ್ರು. ಗೌಡ್ರೆ ಕೋವಿ ಅಂತ ಚಂದ್ರ ಅಂದಾಗ ಈಗ ಮನೆಗೆ ಹೋಗಿ ತರೋಹೊತ್ತಿಗೆ ಬಸವ ಕರಿಮಲೆ ತುದೀಲಿ ಇರ್ತಾನೆ ಬೇಡ ನಡಿ ಅಂತ ಕಾಡೊಳಗೆ ನುಗ್ಗಿದ್ರು, ಚಂದ್ರ ಮತ್ತೆ ಸೋಮ ಅವರ ಹಿಂದೆ ಜೊತೆಗೆ ಟೈಗರ್ ಅವರನ್ನ ಹಿಂಬಾಲಿಸಿದ್ರು.

ಹೊಳೆ ದಾಟಿ ಕಾಡೊಳಗೆ ಬಂದವರು ಸುಮಾರು ಹೊತ್ತು ಹುಡುಕಿದರೂ ಬಸವನ ಸುಳಿವೇ ಕಾಣಲಿಲ್ಲ, ಅವರಾಗಲೇ ಸಣ್ಣ ಕಾಡನ್ನು ದಾಟಿ ಕರಿಮಲೆಯ ಹತ್ತಿರ ಬಂದಾಗಿತ್ತು. ಚಂದ್ರನೂ ಗೌಡರ ಹಾಗೆ ಗಟ್ಟಿ ಎದೆಯವನೇ, ಆದರೆ ಸೋಮನಿಗೆ ಅಷ್ಟು ಧೈರ್ಯವಿರಲಿಲ್ಲ. ಅವನು ಚಂದ್ರನ ಕಿವಿಯಲ್ಲಿ ಚಂದ್ರಣ್ಣ ಕರಿಮಲೆಗೆ ಬಂದ್ವಿ ಯಾಕೋ ತಿರ್ಗಿಹೊಗೋದು ಒಳ್ಳೇದಲ್ವ ಅಂದ ಆದ್ರೆ ಚಂದ್ರ ಅವ್ನ ಮಾತನ್ನ ಕಿವಿಗೆ ಹಾಕಿಕೊಳ್ಳಲಿಲ್ಲ. ಸಂಜೆಯಾಗತೊಡಗಿತ್ತು, ಮೊದಮೊದಲು ಸೂರ್ಯನ ಕಿರಣಗಳು ಅಲ್ಲಲ್ಲಿ ಬೀಳುತ್ತಿದ್ದವು ಮುಂದೆ ಮುಂದೆ ಹೋದಂತೆ ಬರೀ ಬೆಳಕಿತ್ತು. ಕರಿಮಲೆಯೊಳಗೆ ಕತ್ತಲು ನಿಧಾನಕ್ಕೆ ಹೆಜ್ಜೆಯಿಡುತ್ತಿತ್ತು.

ಗೌಡ್ರೆ ಇಲ್ಲಿ ನೋಡಿ ಯಾವ್ದೋ ಹೆಜ್ಜೆಗಳು ಕಾಣಿಸ್ತಿವೆ ಅಂದ ಸೋಮ, ಟೈಗರ್ ಸೋಮನ ಹಿಂದೆ ನಿಂತಿತ್ತು. ಗೌಡ್ರು ಚಂದ್ರ ಅವನಿದ್ದಲ್ಲಿಗೆ ಹಿಂದುರುಗಿ ಬಂದ್ರು. ಚಂದ್ರ ಅದ್ನ ನೋಡಿ ಸ್ವಲ್ಪ ಗಾಬರಿಯಾಗಿ ಗೌಡ್ರೆ ಇದ್ಯಾಕೋ ಹುಲಿ ಹೆಜ್ಜೆ ಹಾಗೆ ಕಾಣ್ಸತ್ತೆ ಅಲ್ಲದೆ ಎತ್ತಿನ ಹೆಜ್ಜೇನೂ ಇವೆ ನೋಡಿ ಅಂತ ತೋರ್ಸಿದ. ಗೌಡ್ರು ಸಹ ಸ್ವಲ್ಪ ಗಾಬರಿಯಾದ್ರೂ ಅದನ್ನ ತೋರಿಸದೆ ಈಗೆನ್ಮಾಡೋದು ಅಂದ್ರು. ಸೋಮ ಆ ವಿಷಯ ಕೇಳೇ ನಡುಗುತ್ತಿದ್ದ. ಗೌಡ್ರೆ ಇಲ್ಲೇ ಎಲ್ಲೋ ಸ್ವಲ್ಪ ದೂರದಲ್ಲೇ ಬಸವ ಇರ್ಬೇಕು ಆದ್ರೆ ಹುಲಿ ಬೇರೆ ಇದೆ ನಾವು ವಾಪಸ್ ಹೋಗೋದು ಒಳ್ಳೆದೇನೋ ಅಂತ ಅನುಮಾನದಲ್ಲಿ ಚಂದ್ರ ಹೇಳ್ದ. ಹಂಗೇನೂ ಆಗಿರಲ್ಲ ಬಾ ಅಂತ ಅಂದು ಗೌಡ್ರು ಮುಂದೆ ನಡೆದ್ರು (ವಾಸ್ತವದಲ್ಲಿ ಗೌಡ್ರಿಗೂ ಸ್ವಲ್ಪ ಹೆದರಿಕೆ ಆಗಿತ್ತು, ಚಂದ್ರ ಹೇಳ್ದಾಗ ಕೋವಿ ತರ್ಬೇಕಿತ್ತು :( ಆದದ್ದಾಗಲಿ ಅಂದು ಮುಂದುವರಿದ್ರು).

ಕರಿಮಲೆಯಲ್ಲಿ ಹೆಜ್ಜೆಹಾಕುತ್ತಿದ್ದ ಬಸವನಿಗೆ ಹಿಂದಿನಿದ ಬಂದ ಶಬ್ದ ಗ್ರಹಿಸಿ ಏನೋ ಅಪಾಯದ ಅರಿವಾಗಿ ತಿರುಗಿ ಅಲ್ಲಿಯೇ ನಿಂತುಬಿಟ್ಟಿತು. ಸ್ವಲ್ಪ ದೂರದಲ್ಲಿ ಗೌಡ್ರು, ಚಂದ್ರನ ಮಾತುಗಳು ಕೇಳಿಸತೊಡಗಿದವು.

(ಗೌಡ್ರು)
ಹೆಜ್ಜೆಯ ಜಾಡು ಹಿಡಿದು ನಡೆದು ಸ್ವಲ್ಪ ಹೊತ್ತಾಗಿರಬಹುದು, ಸೋಮನ ಹಿಂದೆ ಬರುತ್ತಿದ್ದ ಟೈಗರ್ ಯಾಕೋ ಅಲ್ಲೇ ನಿಂತಿತು, ಸೋಮ ಕರೆದ ಅದು ಬರಲಿಲ್ಲ, ಚಂದ್ರ, ಗೌಡ್ರು ಕರೆದ್ರು ಆದ್ರೂ ಬರ್ಲಿಲ್ಲ. ಸೋಮ ಹೋಗಿ ಮುಂದಕ್ಕೆ ಜಗ್ಗಿದ ಆದರೂ ಕದಲಲಿಲ್ಲ. ಗೌಡ್ರು ಮತ್ತು ಚಂದ್ರನಿಗೆ ಬಹುಶ ಹುಲಿಯೋ ಅಥವಾ ಯಾವುದೋ ಬಲಿಷ್ಠ ಪ್ರಾಣಿ ಇರ್ಬೇಕು ಅಂದ್ಕೊಂಡು ಇಬ್ರೂ ಪರಸ್ಪರ ಮುಖ ನೋಡ್ಕೊಂಡ್ರು. ಇಲ್ಲಿಂದ ಸ್ವಲ್ಪಹೊತ್ತು ಅಲ್ಲಾಡೋದು ಬೇಡ ಅಂತ ನಿಧಾನವಾಗಿ ಮಾತಾಡ್ಕೊಂಡ್ರು, ಸೋಮನಿಗೆ ಕೈಸನ್ನೆಯಲ್ಲೇ ಸುಮ್ನಿರೋದಕ್ಕೆ ಹೇಳಿದ್ರು.ಗೌಡ್ರು ತಮ್ಮ ಕೈಲಿದ್ದ ಸೀಗೆಕತ್ತಿ ಸಿದ್ಧವಾಗೇ ಹಿಡಿದುಕೊಂಡಿದ್ರು. ಹಾಗೆ ಸ್ವಲ್ಪಸಮಯ ಎಲ್ಲವೂ ನಿಶ್ಯಬ್ಧವಾದಂತಿತ್ತು. ಚಂದ್ರ ಸುತ್ತ ಕಣ್ಣು ಹಾಯಿಸಿದ, ಏನೊಂದೂ ಕಾಣಿಸುತ್ತಿಲ್ಲ ಬರೀ ಮರಗಳ ಸಾಲೇ, ಮರಗಳ ಸಂಧಿಯಿಂದ ಏನಾದರೂ ಕಾಣಬಹುದೇನೋ ಎಂದು ಎಲ್ಲರೂ ನೋಡಿದ್ರು, ಇಲ್ಲ ಕತ್ತಲಾಗುತ್ತಿದ್ದುದರಿಂದ ಏನೂ ಕಾಣಿಸುತ್ತಿರಲಿಲ್ಲ. ಚಂದ್ರ ಸೋಮನನ್ನು ಅಲ್ಲೇ ನಿಲ್ಲುವಂತೆ ಹೇಳಿ ಗೌಡ್ರು ಟೈಗರ್ ಹತ್ರ ಬಂದು ಅದು ನೋಡುತ್ತಿದ್ದ ಹಾದಿಯಲ್ಲೇ ಸ್ವಲ್ಪ ಮುಂದುವರೆದ್ರು, ಒಂದು ಹತ್ತು ಹೆಜ್ಜೆ ಹಾಕಿರ್ಬೇಕು ಅಷ್ಟೊತ್ತಿಗೆ ಅಲ್ಲೇ ಹೊಂಚ್ಹಾಕುತ್ತಿದ್ದ ಹುಲಿ ಒಮ್ಮೆಲೇ ಇವರ ಮೇಲೆ ಹಾರಿತು !!????.

(ಹುಲಿ)
ಬಸವನಿಂದ ಪೆಟ್ಟು ತಿಂದಿದ್ದ ಹುಲಿ ಮತ್ತೊಮ್ಮೆ ಬಸವ ಸಿಕ್ಕರೆ ಹೇಗಾದರೂ ಮಾಡಿ ಅದನ್ನು ಕೊಂದೇ ತೀರಬೇಕು ಜೊತೆಗೆ ದಷ್ಟಪುಷ್ಟವಾಗಿದ್ದ ಅದರಿಂದ ಒಳ್ಳೆಯ ಮಾಂಸ ಸಿಗುತ್ತದೆಂದು ತುಂಬಾ ದಿನದಿಂದಲೂ ಹೊಂಚಿಹಾಕಿತ್ತು. ಆಹಾರಕ್ಕಾಗಿ ಕಾಡೆಲ್ಲಾ ಅಲೆಯುತ್ತಿದ್ದ ಅದಕ್ಕೆ ಅಂದು ಕರಿಮಲೆಯತ್ತ ದೂರದಿಂದ ಬರುತ್ತಿದ್ದ ಬಸವ ಕಾಣಿಸಿದ, ಹೋಗಿ ಅದರ ಮೇಲೆ ಆಕ್ರಮಣ ಮಾಡಬೇಕು ಎಂದು ಮೆಲ್ಲಗೆ ಹೆಜ್ಜೆಯಿಡುತ್ತಿತ್ತು ಅಷ್ಟೊತ್ತಿಗೆ ಮನುಷ್ಯರ ಮಾತುಗಳನ್ನು ಕೇಳಿ ಅಲ್ಲೇ ಪೊದೆಯ ಹಿಂದೆ ಅಡಗಿ ನಿಂತಿತ್ತು.

(ಬಸವ)
ಗೌಡ್ರು ಚಕ್ಕನೆ ಬಂದ ಆಘಾತಕ್ಕೆ ಏನು ಮಾಡಬೇಕೆಂದು ತೋಚದೆ ಹಾಗೇ ನಿಂತುಬಿಟ್ಟರು. ಹುಲಿ ಇವರ ಮೈಮೇಲೆ ಇನ್ನೇನು ಬೀಳಬೇಕು ಅಷ್ಟರಲ್ಲಿ ಬಸವ ನುಗ್ಗಿಬಂದು ತನ್ನ ಚೂಪಾದ ಕೋಡುಗಳನ್ನು ಹುಲಿಯ ಕಡೆಗೆ ಚಾಚಿತು, ಹುಲಿಯ ಹೊಟ್ಟೆಯೊಳಗೆ ಕೋಡು ಹೋಯಿತು ಆದರೆ ಅಷ್ಟರಲ್ಲಾಗಲೇ ಹುಲಿ ತನ್ನ ತೆರೆದ ಬಾಯಿಯನ್ನು ಬಸವನ ಕುತ್ತಿಗೆಗೆ ಹಾಕಿಯಾಗಿತ್ತು.

ಹುಲಿಯ ಪ್ರಾಣ ಹೋಗಿತ್ತು. ಬಸವ ತನ್ನೊಡೆಯನ ಋಣವನ್ನು ಬಡ್ಡಿ ಸಮೇತ ತೀರಿಸಿ ಕರಿಮಲೆಯಲ್ಲಿ ಶಾಂತವಾಗಿ ನಿದ್ರಿಸಿತ್ತು.

No comments:

Post a Comment