Monday, October 3, 2011

ಬೆಂಗಳೂರಲ್ಲೊಂದಿನ - ಮುಕ್ತಾಯ

ಸಂಜೆ ೫ ಗಂಟೆ ಆಗ್ತಾ ಬಂತು.
ಈರಣ್ಣ ಹತ್ರ ಬಂದು ಅದೂ ಇದೂ ಮಾತಾಡ್ತಾ ಕೂತ್ರು.
'ಈರಣ್ಣ ಇವತ್ತು ಶುಕ್ರವಾರ, ಸ್ವಲ್ಪ ಜ್ಯೂಸ್ ಬೇಗ ತರ್ಸಿದ್ರೆ ಕುಡ್ಕೊಂಡು ಬೇಗ ಹೊರಡ್ತಿದ್ವಿ'.
'ನಾನು ಅದೇ ಯೋಚನೆ ಮಾಡ್ತಿದ್ದೆ ಕಣ್ರೀ, ನೀವೆಲ್ಲ ಬೇಗ ಹೊರಡ್ತೀರೆನೋ ಅಂತ, ನನಗೆ ಜ್ಯೂಸ್ ತರೋ ಕೆಲಸ ಇರ್ತಿರ್ಲಿಲ್ಲ, ಆದ್ರೆ ಯಾರೂ ಹೊರಡಂಗಿಲ್ಲ ನೋಡ್ರೀ, ನಂಗೂ ಸ್ವಲ್ಪ ಕಾಸು ಮಿಕ್ತಿತ್ತು!!!!'
'ಸರಿಹೋಯ್ತು ಬಿಡಿ, ಈಗ ಬೇಗ ಆರ್ಡರ್ ಮಾಡಿ, ಕುಡಿದು ಹೊರಡ್ತೀವಿ'
ಜ್ಯೂಸ್ ಕುಡಿದು ಸೌಜಂಗೆ ಬಾಯ್ ಹೇಳಿ ಮನೆ ಕಡೆ ಹೊರ್ಟೆ.

ಬಸ್ ಸ್ಟಾಪಲ್ಲಿ ವಯಸ್ಸಾದವರೊಬ್ರು ಸಿಕ್ಕಿದ್ರು, ಮೆಜೆಸ್ಟಿಕ್ಗೆ ಹೋಗೋ ಬಸ್ ಇಲ್ಲೇ ಬರತ್ತೇನಪ್ಪ?
ಹೌದು ಇಲ್ಲೇ ಬರತ್ತೆ ಕಣ್ರೀ.
ಒಂದು ೫ ನಿಮ್ಷ ಆಗಿರ್ಬೇಕು,ಮೆಜೆಸ್ಟಿಕ್ಗೆ ಖಾಲಿ ಬಸ್ ಸಿಕ್ತು.
ಅವ್ರೂ ಹತ್ತಿದ್ರು.
ಕಂಡಕ್ಟರ್ ಟಿಕೆಟ್ ಕೊಡ್ತಾ ಬಂದ್ರು, ಸೀನಿಯರ್ ಸಿಟಿಜನ್ ಸೀಟಲ್ಲಿ ಕೂತಿದ್ದ ವಯಸ್ಸಾದ ವ್ಯಕ್ತಿಗೆ ಟಿಕೆಟ್ ಅಂದ್ರು.
ಅವ್ರು ಮೆಜೆಸ್ಟಿಕ್ ಅಂದ್ರು, ಕಂಡಕ್ಟರ್ ಟಿಕೆಟ್ ಹರಿದುಕೊಟ್ಟ. ಆಮೇಲೆ ಅವ್ರಿದ್ದವ್ರು ಸೀನಿಯರ್ ಸಿಟಿಜನ್ ಅಂದ್ರು.
ಕಂಡಕ್ಟರ್ ಹಾಗೆ ಗುರಾಯ್ಸ್ತಿದ್ದ.
ಈ ಸಲ ನಾನು ಏನೂ ಮಾತಾಡ್ಬಾರ್ದು ಅಂತ ಸುಮ್ನೆ ಕೂತೆ.

ಮೆಜೆಸ್ಟಿಕ್ ತಲುಪಿ ಅಲ್ಲಿಂದ ನವರಂಗ್ ಬಸ್ ಹತ್ತಿ ಅಕ್ಕನ ಮನೆಗೆ ಹೋದೆ.

ಅಕ್ಕ 'ಏನೋ ಶುಕ್ರವಾರ ಭಾರೀ ಬೇಗ ಬಂದಿದೀಯಾ?'
'ಸುಮ್ನಿರಮ್ಮ ಮೊದ್ಲೇ ಕೆಲಸ ಮಾಡಿ ಮಾಡಿ ಸಾಕಾಗಿದೆ, ನೀನು ಬೇರೆ ಉರಿಯೋ ಬೆಂಕಿಗೆ ತುಪ್ಪ ಸುರಿತೀಯ'
ಅವ್ಳು ನಗಾಡಿ ಸುಮ್ನಾದ್ಲು.
ಆದ್ರೆ ಅಲ್ಲೇ ಆಟ ಆಡ್ತಿದ್ದ ಅಕ್ಕನ ಮಗ 'ಮಾಮ, ಎಲ್ಲಿಂದ ಬಂದೆ?'
'ಊರಿಂದ'
'ಏರೋಪ್ಲೇನಲ್ಲಿ ಬಂದ್ಯಾ?'
'ಹ್ಞೂ ಅದ್ರಲ್ಲೇ ಹೊರ್ಟಿದ್ದೆ ಆದ್ರೆ ದಾರೀಲಿ ಟೈರ್ ಪಂಚರ್ ಆಯ್ತು, ಗಾಡಿ ಎತ್ತಲ್ಲಿ ಬಂದೆ'
ಅಡಿಗೆ ಮನೆಲಿದ್ದ ಅಕ್ಕ 'ಏ ತಲೆಹರಟೆ, ಪಾಪ ಹುಡ್ಗ ಏನೋ ಕೇಳ್ತಾನೆ ಸರ್ಯಾಗಿ ಹೇಳೋದ್ರ ಬದ್ಲು ಏನೇನೊ ಹೇಳ್ತೀಯಲ್ಲೋ'
ಪಾಪ ಹುಡ್ಗ!!!! (ಇವತ್ತಿನ ಕಾಲದ ಮಕ್ಳಿಗೆ ಪಾಪನಾ!!!!???)
'ಹೌದಮ್ಮ, ಅವ್ನು ಕೇಳೋ ಚೆಂದ ಹಂಗಿದೆ. ನಮ್ಮೂರು ಇನ್ನ ಗೌರ್ಮೆಂಟ್ ಬಸ್ಸೇ ನೋಡಿಲ್ಲ ಆಗ್ಲೇ ನಿನ್ಮಗ ಏರೋಪ್ಲೇನ್ ಹಾರಿಸ್ತಿದ್ದಾನೆ. ಇವ್ನಿಗೆ ಬಾತ್ರ್ರೂಮಿಂದ ಬಂದ್ರೂ ಏರೋಪ್ಲೇನಲ್ಲಿ ಲ್ಯಾನ್ಡಾದೆ ಅಂದ್ರೆ ಖುಷಿಯಾಗ್ತಾನೆ ನೋಡು'
'ಏನೋ ಬಿಡು, ಇಬ್ರೂ ಅಂಥವ್ರೆ ಸರ್ಯಾಗಿದೀರಾ'.

ಸ್ವಲ್ಪ ಹೊತ್ತಾದ್ಮೇಲೆ ಅಕ್ಕಂಗೆ 'ಅಕ್ಕನ (ದೊಡ್ಡಮ್ಮನ ಮಗಳು) ಮನೆಗೆ ಹೋಗಿ ಬರ್ತೀನಿ ತುಂಬಾ ದಿನ ಆಯ್ತು. ಊಟಕ್ಕೆ ಇಲ್ಲಿಗೆ ಬರ್ತೀನಿ'
'ಊರೆಲ್ಲಾ ಹಾಳು ಮಾಡಿದ್ದು ಸಾಕಾಗ್ಲಿಲ್ಲ ಅನ್ಸತ್ತೆ ಇನ್ನು ಅದೊಂದು ಮನೆ ಬಾಕಿ ಇತ್ತು, ಸರಿ ಹೋಗಿ ಬಾ. ಮಕ್ಳು ಓದ್ತಿರ್ತವೆ ಡಿಸ್ಟರ್ಬ್ ಮಾಡ್ಬೇಡ'.
'ನೀನು ಯಾವತ್ತಾದ್ರೂ ನನ್ನ ಬಗ್ಗೆ ಒಳ್ಳೆ ಮಾತು ಹೇಳಿದೀಯಾ?, ಡಿಸ್ಟರ್ಬ್ ಮಾಡೋಕೆ ಹೋಗದು ಏನೀಗ'
'ಹೋಗಿ ಸಾಯಿ' ಅಂದು ಅಡಿಗೆ ಮನೆ ಒಳಗೆ ಹೋದ್ಲು.
'ಬರ್ತೀನಿ ಕಣೋ, ಬರ್ತೀಯಾ ನಂಜೊತೆ ಏರೋಪ್ಲೇನಲ್ಲಿ ಹೋಗಣ?'
ಏಯ್, ಸುಮ್ನೆ ಹೋಗ್ತೀಯೋ ಒದೆ ಬೇಕಾ ಅಂತ ಆವಾಜ್ಹ್ ಅಡಿಗೆ ಮನೆಯಿಂದ ಬಂತು.

ಅಕ್ಕನ ಮನೆ ತಲ್ಪಿದ ತಕ್ಷಣ ನನ್ನನ್ನ ಅಕ್ಕ ನೋಡಿ 'ಏನೋ ಮಾರಾಯ,ಆಸಾಮಿ ತುಂಬಾ ದಿನದಿಂದ ಪತ್ತೇನೆ ಇಲ್ಲ'.
'ಅಯ್ಯೋ, ತುಂಬಾ ಕೆಲಸ ಅಕ್ಕ ಹಾಗಾಗಿ ಬರೋಕಾಗ್ಲಿಲ್ಲ'
‘ಸರಿ ಕೂತ್ಕೋ, ಇವೆರಡು ಇಲ್ಲೇ ಎಲ್ಲೋ ಇರ್ಬೇಕು ಬರ್ತಾವೆ ತಡಿ’ ಅಂದು ಅಡಿಗೆ ಮನೆ ಕಡೆ ಹೋದ್ರು.
ಅವ್ರು ಹೇಳೋಕಿಂತ ಮೊದ್ಲೇ ದೊಡ್ಡವಳು (ವರ್ಷ) ಬಂದು 'ಏನ್ರೀ ತುಂಬಾ ದಿನ ಆಯ್ತು, ಅಷ್ಟು ಬ್ಯುಸಿನಾ?'
'ಹೂನಮ್ಮ ಕೆಲಸ ಜಾಸ್ತಿ'
'ನಂದಿರ್ಲಿ ಅದು ಯಾವಾಗ್ಲೂ ಇದ್ದದ್ದೇ, ಇಂಜಿನಿಯರಿಂಗ್ ಮುಗೀತಾ ಬಂತು, ಕ್ಯಾಂಪಸ್ ಸೆಲೆಕ್ಷನ್ ಆದ್ರೆ ನಮ್ಮಂಗೆ ಸಾಯ್ಬೇಕು, ನೋಡು ನಾನು ನಿಂಗೆ ಪಿ ಯು ಸಿ ಟೈಮಲ್ಲೇ ಹೇಳ್ದೆ, ಜಾಸ್ತಿ ಓದ್ಬೇಡ, ಸ್ವಲ್ಪ ಓದಿ ಯಾವ್ದೋ ಡಿಗ್ರಿ ಮಾಡಿ ಆದ್ಮೇಲೆ ಮನೆನಲ್ಲಿ ಯಾವ್ದಾದ್ರೂ ಹುಡ್ಗನ್ನ ಹುಡ್ಕಿ ಗಂಟು ಹಾಕ್ತಿದ್ರು ಆಮೇಲೆ ಆರಾಮಾಗಿ ಇರ್ಬಹುದಿತ್ತು,ಈಗ ನೋಡು' (ಅಂತ, ದೊಡ್ಡೋರ ಮಾತು ಎಲ್ಲಿ ಕೇಳ್ತೀಯಾ!!??)
'ರೀ ನಾಲ್ಕು ಉದ್ಧಾರ ಆಗಂಥ ಮಾತು ಹೇಳಿ ಅಂದ್ರೆ ಇಂಥವೇ ಪ್ಲಾನ್ ಹೇಳ್ರಿ'
'ಅದೇ ಮತ್ತೆ ಹೇಳಿದ್ದುನಿನ್ನ ಒಳ್ಳೇದಕ್ಕೆ ಹೇಳ್ದೆ, ಏನಾದ್ರೂ ಮಾಡ್ಕೋ. ಅವ್ಳೆಲ್ಲಿ (ವರ್ಷಳ ತಂಗಿ ಮೇಘ - ಫ್ಯೂಚರ್ ಡಾಕ್ಟ್ರು) ? ಇಡೀ ಏರಿಯಾದರ್ದು ಬ್ಲಡ್ ಚೆಕ್ ಮಾಡೋಕೆ ಹೋದ್ಲಾ?'.
(ದೊಡ್ಡವಳು ವರ್ಷ, ಸಣ್ಣವಳು ಮೇಘ. ಅದ್ಹೇನು ಲೆಕ್ಕ ಹಾಕಿ ಹೆಸರು ಇಟ್ರೋ ನಮ್ಮಕ್ಕ ಭಾವ. ಮೋಡ ಆದ್ಮೇಲೆ ಮಳೆ ಬರತ್ತೆ ಇಲ್ನೋಡಿದ್ರೆ ಉಲ್ಟಾ ಆಗಿದೆ, ಆದ್ರೆ ಹೆಸರು ಇಬ್ರಿಗೂ ಸರ್ಯಾಗಿದೆ, ವರ್ಷ ಸೈಲೆಂಟ್ ಆದ್ರೆ ಮೇಘ ಗುಡಿಗೂ ಸಿಡಿಲು ಬರಿಸೋ ಮೋಡ).
'ಇಲ್ರೀ ಮೇಲೆ ರೂಮಲ್ಲಿ ಇದ್ದಾಳೆ, ಬರ್ತಾಳೆ ತಡೀರಿ'
'ಇವ್ಳು ಈಗ್ಲೇ ನಮ್ಮ ರಕ್ತ ಹೀಗೆ ಹೀರಿದ್ರೆ ಇನ್ನು ಡಾಕ್ಟರ್ ಆದ್ಮೇಲೆ ನಮ್ಮ ಮೈಯಲ್ಲಿ ಒಂದು ಹನಿ ರಕ್ತನೂ ಬಿಡಲ್ವೇನೋ'

'ಏಯ್, ಏನೋ ಅದು ನನ್ನ ಮೇಲೆ ಕಂಪ್ಲೆಂಟ್'. ಅವ್ಳು ಬರೋವಾಗ ನನ್ನ ಮಾತು ಅವಳ ಕಿವಿಗೆ ಬಿದ್ದಾಗ ಅವಳಿಂದ ಬಂದ ಉತ್ತರ.
'ನೋಡು ನಿಜ ಹೇಳಿದ್ರೆ ಹೀಗೆ ಎಗ್ರಾಡ್ತೀರಾ, ಎಲ್ರೂ ಫ್ಯಾಮಿಲಿನಲ್ಲಿ ಒಬ್ರು ಡಾಕ್ಟ್ರು ಇದ್ರೆ ಒಳ್ಳೇದಪ್ಪ ಅಂದ್ಕೋತಾರೆ, ನೀವು ನೋಡಿದ್ರೆ ಶುರುವಲ್ಲೇ ನಾವು ಪೇಷೆಂಟ್ ಅಲ್ದಿದ್ರೂ ನಮ್ಮ ಪ್ರಾಣ ತಿಂತೀರಾ'
'ಏಯ್, ಏನೋ ಟೆಸ್ಟ್ ಮಾಡಣ ಅಂತ ಸ್ವಲ್ಪ ರಕ್ತ ಕೇಳಿದ್ರೆ ಸಾವಿರ ಮಾತಾಡ್ತೀಯಾ'
'ಇನ್ನೇನ್ಮತ್ತೆ ಸೂಜಿ ತಗೊಂಡು ಚುಚ್ಚಿ ಚುಚ್ಚಿ ಇಟ್ರೆ ನಮ್ಮ ಕಥೆ ಏನಾಗಬೇಡ'.
'ಕಷ್ಟ ಆಗತ್ತೆ ಸ್ವಲ್ಪ ಹೆಲ್ಪ್ ಮಾಡ್ಬೇಕಪ್ಪಾ'.
'ಸರಿ ಬಿಡು, ಮತ್ತೆ ಡಾಕ್ಟ್ರು ಆದ್ಮೇಲೆ ಇಲ್ಲೇ ಇರ್ತೀಯ ಅಥ್ವಾ ಹೊರ್ಗ್ಹೋಗಿ ಬಿಳಿ ಜಿರಳೆ ಪೇಷೆಂಟ್ಗಳ ಸೇವೆ ಮಾಡ್ತೀಯಾ?'
'ನಿಂದು ಯಾಕೋ ಜಾಸ್ತಿಯಾಯ್ತು ಕಣೋ'
'ರೆಸ್ಪೆಕ್ಟ್ ರೆಸ್ಪೆಕ್ಟ್ ಇರ್ಲಿ'

ಅಷ್ಟೊತ್ತಿಗೆ ಅಕ್ಕ ಜ್ಯೂಸ್ ತಗೊಂಡು ಬಂದ್ರು 'ನೋಡಕ್ಕ, ನಿಮ್ಮಿಬ್ರು ಮಕ್ಳಿಗೆ ಒಳ್ಳೆ ಬುದ್ಧಿ ಹೇಳಿದ್ರೆ ನನ್ನ ಮಾತೇ ಕೇಳಂಗಿಲ್ಲ'
'ಅವುಕ್ಕೆಲ್ಲಿ ಅರ್ಥ ಆಗತ್ತೆ ಹೋಗ್ಲಿ ಬಿಡು, ಒಳ್ಳೆ ಮಾತು ಕೇಳಿದ್ರೆ ತಲೆಗೆ ಹಾಕಬೇಕು'
'ಅದೇ ಮತ್ತೆ, ಸರಿ ನಾನಿನ್ನು ಬರ್ತೀನಿ'
'ಯಾಕೋ ಊಟ ಮಾಡ್ಕೊಂಡು ಹೋಗೋ'
'ಇಲ್ಲ ಇನ್ನೊಮ್ಮೆ ಆರಾಮಾಗಿ ಬರ್ತೀನಿ. ಬರ್ತೀನ್ರಮ್ಮ'
'ಕಳ್ಚ್ಕೋ'
ಮೋಡ ಮತ್ತೆ ಮಳೆ ಒಟ್ಟಿಗೆ ಘರ್ಜಿಸಿದ್ವು!!

No comments:

Post a Comment