ಇಲ್ಲ ಅಮ್ಮ ನಾನು ಬರಲ್ಲ, ಬೆಂಗಳೂರಿಂದ ಬಂದು ಒಂದೆರಡು ದಿನ ಆರಾಮಾಗಿ ಇರಣ ಅಂದ್ರೆ ನೀನೊಳ್ಳೆ ಯಾವಾಗ್ಲೂ ಮದ್ವೆ, ಸಾವು, ತಿಥಿ ಅಂತ ಕರೀತಿಯಲ್ಲ.
ಹೂಂ ಕಣಪ್ಪ ಬರ್ಲೇಬೇಕು ಅವ್ರು ನಿಂದಕ್ಕೆ ಬರೋದು ಬೇಡ್ವ?
'ಏನಕ್ಕೆ, ತಿಥಿಗಾ?'
ನಿಂದೆಲ್ಲಿ ತಿಥಿ ಆಗತ್ತೆ ಯಾರದಾದ್ರೂ ತಿಥಿ ಮಾಡ್ತೀಯ, ಕಥೆ ಎಲ್ಲ ಬೇಡ ಈಗ ಸುಮ್ನೆ ಹೊರಡು.
ನಂಗಾಗಲ್ಲ.
ಹಾಗಿದ್ರೆ ಅಡಿಗೆ ನೀನೆ ಮಾಡಿ ಊಟ ಮಾಡಿ ಅಜ್ಜಿಗೆ ಬಡಿಸಿ ಇಲ್ಲೇ ಇರು.
ಯಾಕೋ ಎಡವಟ್ಟಾಗ್ತಿದೆ ಅನ್ನಿಸ್ತು. ಬರ್ತೀನಿ ಅಂತ ಹೊರಟೆ.
ಕಲ್ಯಾಣ ಮಂಟಪದ ಹತ್ತಿರ ಹೋದ್ರೆ, ಇಂಥ ಕುಟುಂಬದವರಿಂದ ಸ್ವಾಗತ ಅನ್ನೋ ಬೋರ್ಡ್ ಇಲ್ಲ :(
ಏನಮ್ಮ ಇದು ಅಂದೆ.
ನಿಂಗೇನಕ್ಕೆ ಅದು, ಮದ್ವೆಗೆ ಬರ್ತಿದೀಯ. ತೆಪ್ಪಗೆ ಕೂತು ವಿಶ್ ಮಾಡಿ ಊಟ ಮಾಡಿ ಹೊರಡು.
ಯಾಕೋ ಏನೋ ಸರಿ ಇಲ್ಲ ಅಂದ್ಕಂಡು ಕಲ್ಯಾಣ ಮಂಟಪದ ಒಳಗೆ ಹೆಜ್ಜೆ ಹಾಕಿದೆ.
ನೋಡಿದ ತಕ್ಷಣ ಶಾಕ್ ಹೊಡೆದ ಹಾಗಾಯ್ತು. ಎಲ್ಲೆಲ್ಲೂ ಜನ, ೧ ಮದ್ವೆ ಅಂದ್ಕೊಂಡು ಹೋದ್ರೆ ೧೦ ಮದ್ವೆ. ಸಾಮೂಹಿಕ ಮದುವೆ :(. ಊಟ ಸಿಗತ್ತೋ ಇಲ್ವೋ ಅನ್ನೋ ಚಿಂತೆ ಬೇರೆ.
ಭಯಂಕರ ಸಿಟ್ಟು ಬಂತು. ನಮ್ಮಮ್ಮಂಗೆ ಕ್ಲಾಸ್ ತಗೋಬೇಕು ಅಂತ ಪಕ್ಕದಲ್ಲಿ ತಿರುಗಿದ್ರೆ ಅಮ್ಮ ಇಲ್ಲ.
ಇನ್ನು ಮುಗಿತು, ನನ್ನ ಜೊತೆ ಯಾರೂ ಇಲ್ಲ, ನಮ್ಮಮ್ಮ ಇನ್ನು ನನ್ನ ಕೈಗೆ ಸಿಗೋದು ಸಂಜೆನೇ. ನಾನು ಬಂದಿರೋ ಮದ್ವೆ ಯಾವ ಮಂಟಪದಲ್ಲಿದೆ ಅಂತ ಗೊತ್ತಿಲ್ಲ. ವಿಧಿಯಿಲ್ಲದೇ ಖಾಲಿ ಇರುವ ಛೇರ್ ಹುಡುಕಲು ಹೊರಟೆ.
೧೦ ನಿಮಿಷದ ಒದ್ದಾಟದ ಬಳಿಕ ಒಂದು ಛೇರ್ ಸಿಕ್ತು. ೫ ಮಂಟಪ ಒಂದು ದಿಕ್ಕು, ಉಳಿದ ಐದು ಮತ್ತೊಂದು ದಿಕ್ಕು. ನಾನು ಯಾವ ಮದ್ವೆಗೆ ಮುಖ ಮಾಡಿ ಕೂತಿದ್ನೋ??
ಯಾರಾದ್ರೂ ಪರಿಚಯದವರು ಇದ್ದಾರ ಅಂತ ಸುತ್ತಲೂ ಕಣ್ಣಾಡಿಸಿದೆ, ಉಹೂಂ ಯಾರೂ ಕಾಣ್ಲಿಲ್ಲ. ಏನಪ್ಪಾ ಮಾಡೋದು ಅಂತ ಅಂದ್ಕೊಂಡು ಎದ್ರುಗಡೆ ನಡೀತಿದ್ದ ಮದ್ವೆ ನೋಡ್ತಾ ಕೂತೆ.
ಒಂದು ಮಂಟಪ ಕಾಲಿ, ಇನ್ನೊಂದ್ರಲ್ಲಿ ಆಗ್ಲೇ ಮಹೂರ್ತ ಮುಗಿದಿದೆ, ಹೆಣ್ಣು ಗಂಡು ಎದ್ದೇಳ್ತಿದ್ದಾರೆ. ಮತ್ತೊಂದ್ರಲ್ಲಿ ಸೂರ್ಯನಮಸ್ಕಾರ ಮಾಡಿಸಲಿಕ್ಕೆ ನವಜೋಡಿನ ಕರ್ಕೊಂಡು ಹೋಗ್ತಿದ್ದಾರೆ. ಮಗದೊಂದ್ರಲ್ಲಿ ಗಂಡು, ಹೆಣ್ಣಿಗೆ ಕಾಯ್ತಾ ಕೂತಿದ್ದಾನೆ, ಆ ಕಡೆಯಿಂದ ಹುಡುಗಿಯ ಸೋದರಮಾವ ಹೆಣ್ಣನ್ನ ಕರ್ಕೊಂಡು ಬರ್ತಿದ್ದಾನೆ.
ಅಷ್ಟೊತ್ತಿಗೆ ನನ್ನ ಭುಜನ ಹಿಂದ್ಗಡೆಯಿಂದ ಯಾರೋ ಅಲ್ಲಾಡಿಸಿದ ಹಾಗಾಯಿತು. ತಿರುಗಿ ನೋಡಿದ್ರೆ ನಮ್ಮ ಸಂಬಂಧಿಕರೊಬ್ರು 'ಏನು ಚೇತನ್, ಆರಾಮ?' ಅಂದ್ರು.
ಎಲ್ಲ ಕುಶಲೋಪರಿ ಆದ್ಮೇಲೆ ಅವ್ರು 'ಯಾವ ಮದ್ವೆಗೆ ಬಂದಿರೋದು?'.
ಬೆಳ್ಗೆ ಬರೋವಾಗ ಮದ್ವೆ ಕಾಗದ ನೋಡ್ಕೊಂಡು ಬಂದಿದ್ರಿಂದ ಇಂಥೋರ ಮದ್ವೆ ಅಂದೆ.
ಓ ನಾನೂ ಅದ್ಕೆ ಬಂದಿರೋದು, ಯಾವ ಮಂಟಪದಲ್ಲಿ ಇದೆ?
ಯಾವ ಪ್ರಶ್ನೆ ನನ್ನನ್ನ ಅವ್ರು ಕೇಳ್ಬಾರದಿತ್ತೋ ಅದನ್ನೇ ನನಗೆ ಕೇಳಿದ್ರು. ಈಗ ನನಗೆ ಧರ್ಮಸಂಕಟ. ಗೊತ್ತಿಲ್ಲ ಅಂದ್ರೆ ಮರ್ಯಾದೆ ಪ್ರಶ್ನೆ.
ಹಾಗೆ ಎಲ್ಲ ಮಂಟಪದ ಕಡೆ ಕಣ್ಣು ಹಾಯಿಸಿದೆ. ಒಂದು ಮಂಟಪದ ಹತ್ರ ನಮ್ಮ ಇನ್ನೊಬ್ರು ಸಂಬಂಧಿಕರೊಬ್ರು ಕಾಣ್ಸಿದ್ರು, ಅಬ್ಬ ಅಂತೂ ಬಚಾವ್ ಅಂತ್ಹೇಳಿ, ಅವರನ್ನ ತೋರಿಸಿ ಅದೇ ನೋಡಿ ಅಂದೆ.
ಇಷ್ಟೊಂದು ಮದ್ವೇನಲ್ಲಿ ಯಾವ್ದು ಅಂತ ಹುಡ್ಕದು ಬಾರೀ ಕಷ್ಟ, ನೀವು ಸಿಕ್ಕಿದ್ದು ಒಳ್ಳೆದಾಯ್ತು, ಮುಯ್ಯಿ ಕೊಟ್ಟು ಬರ್ತೀನಿ ತುಂಬಾ ಥ್ಯಾಕ್ಸ್ ಅಂದು ಹೊರಟ್ರು.
ಅಬ್ಬ ಅಂತೂ ಒಂದು ಸಮಸ್ಯೆ ಮುಗಿತು ಅಂತ ಕೂತ್ಕೊಂಡೆ.
ಸ್ವಲ್ಪ ಹೊತ್ತಾದ್ಮೇಲೆ ಒಂದು ಮಂಟಪದ ಹತ್ರ ಅದೇನೋ ಗಲಾಟೆ ನಡೀತಿತ್ತು. ಅದೇನು ನೋಡಣ ಅಂತ ಕಷ್ಟಪಟ್ಟು ಮಂಟಪದ ಕಡೆ ಹೋದೆ. ಮದ್ವೆ ಗಂಡು ಕ್ಯಾಮೆರಾದವ್ನನ್ನ ಹಿಡ್ಕಂಡು ತದುಕ್ತಿದ್ದ.
ವಿಷಯ ಏನಂದ್ರೆ ಕ್ಯಾಮೆರಾದವ್ನು ಇವರ ಮದ್ವೆ ಫೋಟೋ ತೆಗೆಯೋದ್ರ ಬದ್ಲು ಪಕ್ಕದಲ್ಲಿ ನಡೀತಿದ್ದ ಮದ್ವೆ ಫೋಟೋ ತೆಗೀತಿದ್ನಂತೆ. 'ಮಗನೆ ಕಾಸು ಕೊಟ್ಟಿರೋನು ನಾನು, ಅವ್ನ್ದ್ಯಾವಂದೋ ಫೋಟೋ ತೆಗಿತಿದೀಯಲ್ಲೋ' ಅಂತ ಗಂಡು ಅಂದಿದಕ್ಕೆ 'ಸಾರ್ ಅವ್ನು ನನ್ನ ದೋಸ್ತ್, ಪಾಪ ಅವ್ನು ಕ್ಯಾಮೆರಾದರ್ನ ಕರ್ಸಿಲ್ಲ ಅದ್ಕೆ ನಂಗೆ ಹೇಳ್ದಾ' ಅಂತ ಕ್ಯಾಮೆರಾದವ್ನು ಹೇಳ್ತಿದ್ದ.
ಪಕ್ಕದಲ್ಲಿರೋರು ಜಗ್ಳ ಬಿಡ್ಸೋಕೆ ಭಾರೀ ಪ್ರಯತ್ನ ಮಾಡ್ತಿದ್ರು, ಮದ್ವೆ ಗಂಡು ತುಂಬಾ ಬಲಶಾಲಿ ಇದ್ದಿದ್ರಿಂದ ಇವರ ಕೈಲಿ ಆಗ್ತಿರ್ಲಿಲ್ಲ, ಅಂತೂ ಹೆಂಗೋ ತುಂಬಾ ಜನ ಸೇರಿ ಜಗ್ಳ ನಿಲ್ಸಿದ್ರು. ಮತ್ತೆ ಮಾಮೂಲಿನಂತೆ ಮದ್ವೆ ಕಾರ್ಯಕ್ರಮ ನಡೀತು.
ಈ ಕಥೆ ಮುಗಿಯೋದ್ರೊಳಗೆ ಇನ್ನೊಂದು ಮಂಟಪದಲ್ಲಿ ಏನೋ ಗಲಾಟೆ ಶುರುವಾಯ್ತು. ನಂಗೆ ಮಾಡೋಕೆ ಬೇರೆ ಕೆಲಸ ಇರ್ಲಿಲ್ವಲ್ಲ ಅದೇನು ನೋಡಣ ಅಂತ ಅಲ್ಲಿಗೆ ಹೋದೆ. ಹುಡುಗಿ ಅಪ್ಪ ಪೂಜಾರಿ ಎಲ್ಲಿ ಅಂತ ಕೂಗ್ತಿದ್ರು. ಸ್ವಲ್ಪ ಹೊತ್ತಾದ್ಮೇಲೆ ಪೂಜಾರಿ ಬಂದ್ರು.
ಪಾಪ ಆ ವಯ್ಯಂಗೆ ಅರ್ಜೆಂಟಾಗಿತ್ತು, ಹೋಗಿ ವಾಪಸ್ ಬರೋದ್ರೊಳಗೆ ಮಿಕ್ಕಿದ ಜೋಡಿಗಳು ಅವ್ರ್ಗಳ ಮಂಟಪದಲ್ಲಿ ಕೂತಿದ್ರು, ಇವ್ರಿಗೆ ಕನ್ಫ್ಯೂಶನ್ ಆಗಿ ಯಾವ್ದಕ್ಕೋ ಅದೇ ಮದ್ವೆ ಅಂತ ಹೋಗಿ ಕೂತಿದ್ದಾರೆ, ಅದನ್ನ ನೋಡಿದ ಒಬ್ರು ಈ ಮದ್ವೆ ಹುಡುಗಿ ಅಪ್ಪಂಗೆ ಹೇಳಿದ್ದಾರೆ, ಪೂಜಾರಿ ಬಂದಾದ್ಮೇಲೆ ಮುಹೂರ್ತದ ಟೈಮ್ ಮುಗೀತಿದೆ ನೀವು ನೋಡಿದ್ರೆ ಅಂತ ಏನೇನೋ ಕ್ಯಾಕರಿಸಿ ಉಗೀತಿದ್ರು ಆಮೇಲೆ ಎಲ್ಲ ಸಮಾಧಾನ ಮಾಡಿ ಕೂರ್ಸಿದ್ರು, ಮದ್ವೆ ಮುಂದುವರೆಯಿತು.
ಸ್ವಲ್ಪ ಹೊತ್ತಾದ್ಮೇಲೆ ಯಾರೋ ಊಟ ಅಂದ್ರು ನೋಡಿ, ಬೆಂಗಳೂರಿನಲ್ಲಿರೋ ಬೀದಿ ನಾಯಿಗಳೆಲ್ಲ ಸಣ್ಣ ಪಾಪುನ ಅಟ್ಟಿಸಿಕೊಂಡು ಹೋಗಿ ಕಿತ್ತು ತಿನ್ನೋ ಹಾಗೆ, ಸಿಗ್ನಲ್ ಸಿಕ್ಕ ಕೂಡಲೇ ಎಲ್ಲ ಗಾಡಿಗಳು ಕಿತ್ಕೊಂಡು ನುಗ್ಗೋ ಹಾಗೆ, ಖಾಲಿ ಬಿ,ಎಂ,ಟಿ, ಸಿ ಬಸ್ಸಿಗೆ ಜನ ತೂರಿ ಕೊಳ್ಳೋ ಹಾಗೆ, ಜನಗಳೆಲ್ಲ ಊಟದ ಹಾಲಿಗೆ ನುಗ್ತಿದ್ರು ಊಟ ಸೆಳೆಯೋಕೆ. ನಾನು ಇನ್ನು ಕೂತರೆ ಸಂಕಷ್ಟಿನೇ ಅಂದ್ಕೊಂಡು ನುಗ್ಗಿದೆ, ಹಾಸ್ಟೆಲ್ನಲ್ಲಿದ್ದ ಅನುಭವ ಆಗ ನೆರವಿಗೆ ಬಂತು ಅಂತೂ ಒಂದು ಸೀಟ್ ಸಿಕ್ತು.
ನನ್ನ ಸೀಟ್ ಹಿಂದೆ ತಿರುಗಿ ನೋಡಿದ್ರೆ ಮುಂದಿನ ಹಂತಿನ ಊಟಕ್ಕೆ ಆಗ್ಲೇ ಬಂದು ನಿಂತಿದ್ರು. ಯಾಕಪ್ಪ ಬೇಕು ಈ ಕರ್ಮ, ಸುಮ್ನೆ ಊರಲ್ಲಿದ್ದಿದ್ದರೆ ನೆಮ್ಮದಿಯಿಂದ ಊಟ ಮಾಡ್ಬಹುದಿತ್ತು ಅಂತ ವಿಧಿ ಇಲ್ಲದೆ ಬಾಳೆ ಎಲೆಗೆ ಕೈ ಹಾಕಿದೆ, ಹಾಗೆ ತಿನ್ನೋವಾಗ ಪಕ್ಕದವನನ್ನ ನೋಡಿದೆ, ಆಸಾಮಿ ಗಬ ಗಬ ಅಂತ ತಿನ್ತವ್ನೆ.
ಇದ್ಯಾಕ್ರೀ ಹಿಂಗೆ ತಿನ್ತಿದೀರಾ? ಊರಿಗೆ ಹೋಗೋಕೆ ಬಸ್ ಸಿಗಲ್ವ?.
ಇಲ್ರೀ, ಇನ್ನ ೨ ಮದ್ವೆ ಊಟ ಮಾಡ್ಬೇಕು.
ಆಂ!!!!!!!!!
ಈಗಾಗ್ಲೇ ತುಂಬಾ ಐಟಂ ಬಂದು ಹೋಗಿದೆ, ಆಸಾಮಿ ಕಿತ್ಕಂಡು (ಸಕತ್ತಾಗಿ) ತಿಂತಿದ್ದ, ಇನ್ನ ೨ ಮದ್ವೆ ಅನ್ತಾನಲಪ್ಪ, ಅದೇನು ಸರ್ಯಾಗಿ ವಿಚಾರ್ಸಣ ಅಂದ್ಕಂಡು....
ಇನ್ಯಾವ ಕಡೆ ಹೋಗ್ಬೇಕ್ರೀ?
ಎಲ್ಲೂ ಇಲ್ರೀ, ಇದೇ ಕಲ್ಯಾಣ ಮಂಟಪದಲ್ಲೇ, ನಮ್ಗೆ ಪರಿಚಯ ಇರೋರ ೩ ಮದ್ವೆ ಇದೆ ಅದ್ಕೆ.
ಅಲ್ರೀ ೧ ಮಂಟಪಕ್ಕೆ ಬಂದಿದೀರಾ ಅಂದ್ರೆ ೧ ಸಲ ಊಟ ಮಾಡಿದ್ರೆ ಆಯ್ತಪ್ಪ.
ಹಂಗೆ ಹೆಂಗಾಗತ್ತೆ, ಅವರೆಲ್ಲರೂ ನಮ್ಮನೆ ಮದ್ವೆಗೆ ಬಂದಿಲ್ವಾ, ಜೊತೆಗೆ ಎಲ್ರೂ ಸಿಕ್ಕಿ ಊಟ ಮಾಡ್ಕೊಂಡು ಹೋಗಿ ಅಂದಿದ್ದಾರೆ, ಮಾಡ್ಲಿಲ್ಲ ಅಂದ್ರೆ ಅವ್ರಿಗೆ ಬೇಜಾರಾಗತ್ತಲ್ವ?
ನನಗಿನ್ನೇನೂ ಹೇಳಲು ತೋಚದೆ ಹೌದು ಹೌದು ಅಂತ ತಲೆ ಅಲ್ಲಾಡಿಸಿ ಊಟ ಮುಗಿಸಿ ಎದ್ದೆ.
ಮಂಟಪದ ಹತ್ತಿರ ಹೋಗಿ ಕೂತೆ, ಅರ್ಧ ಗಂಟೆ ಆದ್ಮೇಲೆ ನಮ್ಮಮ್ಮ ಮೊದ್ಲು ಸಿಕ್ಕಿದ ಸಂಬಂಧಿಕರ ಜೊತೆ ಬಂದ್ರು. ಅವ್ರ್ಯಾಕೋ ನನ್ನನ್ನ ಗುರಾಯ್ಸಿದ ಹಾಗೆ ಕಾಣ್ಸ್ತಿತ್ತು.
ಹೊರಡಣ್ವ ಅಮ್ಮ?
ಹೂಂ ಹೊರಡಣ, ಅದಿರ್ಲಿ, ಅಲ್ಲ ಕಣೋ ಇವ್ರೇನೋ ಯಾವ ಮದ್ವೆ ತೋರ್ಸು ಅಂತ ಕೇಳಿದ್ರೆ ಬೇರೆ ಯಾವ್ದೋ ತೋರ್ಸಿದ್ಯಂತಲ್ಲೋ, ಪಾಪ ಅಲ್ಲೂ ಮುಯ್ಯಿ ಕೊಟ್ಟು ಬಂದ್ರು ಆಮೇಲೆ ನಾನು ಹೇಳಿದ್ಮೇಲೆ ಮತ್ತೆ ಕೊಟ್ಟು ಬಂದಿದ್ದಾರೆ.
ನೋಡಮ್ಮ, ಮದ್ವೆಗೆ ಬರಲ್ಲ ಅಂದೆ ಆದ್ರೂ ನೀನೇ ಬಲವಂತ ಮಾಡಿ ಕರ್ಕೊಂಡು ಬಂದೆ, ಈಗ ನೋಡು ಹಿಂಗೆ.
ಹೋಗ್ಲಿ ಬಿಡು ಈಗೆಲ್ಲ ಸರಿ ಆಯ್ತಲ್ಲ, ಮುಂದೆ ಯಾವ್ದೇ ಸಾಮೂಹಿಕ ಮದ್ವೆ ಇದ್ರೂ ನಿನ್ನನ್ನ ಕರೆಯಲ್ಲ.
ಹಂಗೆ ಬಾ ದಾರಿಗೆ ಮತ್ತೆ ಅಂದು ಊರಿನ ಕಡೆ ಹೋಗುವ ಬಸ್ಸಿನ ಹಾದಿ ಹಿಡಿದೆವು