ಪ್ಯಾಟೆಗೆ ಹೋಗಿದ್ದ ಗೌಡ್ರು ಬಸ್ಸಿಂದಿಳಿದು ಮನೆ ಕಡೆಗೆ ಹೆಜ್ಜೆ ಹಾಕ್ತಿದ್ರು. ಹಿಂದ್ಗಡೆಯಿಂದ ಸ್ಪೀಡಾಗಿ ಬಂದ ಸ್ಕಾರ್ಪಿಯೋ ಸಡನ್ ಆಗಿ ನಿಲ್ತು.
ಸ್ಕಾರ್ಪಿಯೋದಿಂದ ಇಳಿದ ರಂಗಣ್ಣನ ನೋಡಿ ಗೌಡ್ರು 'ಏನ್ಲಾ ರಂಗಣ್ಣ ಯಾರ್ದಲ ಗಾಡಿ?'
ನಂದೇ ಗೌಡ್ರೆ, ಇವತ್ತು ಹೊಸದು ತಂದೆ, ಹೆಂಗಿದೆ ಗೌಡ್ರೆ?
ಸಕತ್ತಾಗಿದೆ ಕಣ್ಲ. ಅದೆಲ್ಲಿಂದ ಇಷ್ಟು ಕಾಸು ಬಂತ್ಲಾ?
ಅದೇ ಗೌಡ್ರೆ, ರೆಸಾರ್ಟ್ನಿಂದ ದುಡಿದಿದ್ದು.
ಆಗ್ಬಹುದು ಬುಡ್ಲ, ಬಲ್ಬೇಗ ಅವ್ರಿವ್ರನ್ನ ಏಮಾರ್ಸಿ ಎಲ್ಲ ಮಾಡ್ಕಂಬಿಟ್ಟೆ.
ದೊಡ್ಡ ಮೀನು ಬದ್ಕ್ಬೇಕಂದ್ರೆ ಸಣ್ಣ ಮೀನು ಸಾಯ್ಲೆಬೇಕಲ್ವ ಗೌಡ್ರೆ? ಅದಿರ್ಲಿ, ಸೋಮನಹಳ್ಳಿ ಹತ್ರ ಒಂದು ೨೦೦ ಎಕ್ರೆ ಜಾಗ ಕೊಂಡ್ಕಂಡೆ ಗೌಡ್ರೆ.
ಎಂಥಕ್ಲ ಅಷ್ಟೊಂದು?? ಇಲ್ಲಿಂದ ಅಲ್ಲಿ ಹೋಗಿ ಜಮೀನು ಹೆಂಗೆ ನೋಡ್ಕೋತೀಯಾ? ತೋಟದಲ್ಲಿ ಕೆಲಸ ಮಾಡಿಸ್ಲಿಕ್ಕೆ ಜನ ಹೆಂಗೆ ಹೊಂದುಸ್ತೀಯ?
ತೋಟ ಗೀಟ ಏನು ಇಲ್ಲ ಗೌಡ್ರೆ, ಸರ್ಕಾರದವ್ರು ಗಣಿಗೆ ಅನುಮತಿ ಕೊಟ್ಟಿಲ್ವ, ನಾನೂ ಗಣಿ ವ್ಯವಹಾರ ಮಾಡುವ ಅಂತ.
ಸರಿಹೋಯ್ತು ಬುಡ್ಲ, ಅಲ್ಲ ಕಣ್ಲ ಅನ್ನ ಹಾಕೋ ಜಮೀನನ್ನೇ ಕನ್ನ ಮಾಡೋಕೆ ಹೊಂಟೀಯಲ್ಲೋ, ನಾಳೆ ನಿನ್ನ ಮಕ್ಳಿಗೆ ಅನ್ನಕ್ಕೆ ಬರ ಬಂದ್ರೆ ಅದಿರು ತಿನ್ಸ್ತೀಯೇನ್ಲಾ, ಮನ್ಸಂಗೆ ಆಸೆ ಇರ್ಬೇಕು ಕಣ್ಲಾ, ದುರಾಸೆ ಇರ್ಬಾರ್ದು.
ಅಯ್ಯೋ ಬಿಡಿ ಗೌಡ್ರೆ, ನಂದಕ್ಕೆ ಹಿಂಗಂತೀರಾ ಬಳ್ಳಾರಿ ಕಡೆ ಹೋಗಿ ನೋಡಿ ಒಂದ್ಸಲ.
ನಿಂದ್ಯಾಕ್ಲ ಬಿಡ್ಬೇಕು, ಇವಾಗ ೨೦೦ ಎಕ್ರೆ ತಗೊಂಡೋನು ನಾಳೆ ೨೦೦೦ ಎಕ್ರೆ ತಗೋತೀಯಾ. ಆಮೇಲೆ ನಾವೆಲ್ಲಾ ಎಲ್ಲಿ ಹೋಗ್ಬೇಕು.
ಏನಂದೆ ಬಳ್ಳಾರಿ ಅಂದ್ಯಲ್ಲ ಅಲ್ಲಿ ವಿಸ್ಯ ಏನು ಅಂತ ಹೇಳದು. ಅಲ್ಲಿ ಗಣಿ ನಡೆಸೋವ್ರೆಲ್ಲ 'ಭೂಮಿತಾಯಿಗೆ ಭೂಮಿ ಅಂದ್ರೆ ಏನು' ಅನ್ನೋ ಪರಿಸ್ಥಿತಿನ ಸೃಷ್ಟಿ ಮಾಡಿದ್ದಾರೆ.
ನೋಡಿದ್ರಾ ಗೌಡ್ರೆ, ನಾವು ಸ್ವಲ್ಪ ಮಾಡ್ತೀವಿ ಅಂದಿದ್ದಕ್ಕೆ ನೀವು ಹಂಗೆ ಎಗ್ರಾಡ್ತಿದ್ರಿ.
ಅದೇ ಕಣ್ಲಾ ನಾನು ಹೇಳ್ತಿರೋದು, ನದಿ ಹೋಗಿ ಹೆಂಗೆ ಸಮುದ್ರ ಸೇರುತ್ತೋ ಹಾಗೆ ನೀನು ದೊಡ್ಡದಾಗಿ ನಡೆಸೋರನ್ನ ಸೇರ್ಕೊಂಡು ದಂಧೆ ನಡುಸ್ತೀಯ ಅಂತ. ನಿಮ್ಗೆಲ್ಲ ಯಾವನು ಬುದ್ಧಿ ಹೇಳೋಕಾಗತ್ತೆ, ಕೆಟ್ಮೇಲೆ ಬುದ್ಧಿ ಬರೋದು, ನಾನಿನ್ನು ಬರ್ತೀನಿ ಕಣ್ಲ. ಅದೇನೇನು ಮಾಡ್ತೀರಾ ನೋಡ್ತೀನಿ ಅಂತ ಗೌಡ್ರು ಮನೆ ಕಡೆ ಹೆಜ್ಜೆ ಹಾಕಿದ್ರು.
No comments:
Post a Comment