Friday, April 30, 2010
ಸೈಕಲ್ಲೂ ಗ್ಲೋಬಲ್ ವಾರ್ಮಿಂಗೂ
ಸ್ವಲ್ಪ ದಿನದ ಹಿಂದೆ ಶೇವಿಂಗ್ ಪುರಾಣ ಬರೆದು ನನ್ನ ಗೆಳೆಯರಿಗೆ ಲಿಂಕ್ ಕಳ್ಸಿದ್ದೆ, ಕಥೆ ಓದಿದ ಸೌಜ 'ನಾನು ಚಾಕಲೇಟ್ ವೆಂಕನ ಹತ್ರನೇ ಕೊಟ್ಟಿದ್ದೆ, ಬಹುಷ ಧೋಪ ಹಾಗೆ ಮಾಡಿರಬೇಕು' ಅಂತ ರಿಪ್ಲೇ ಮಾಡಿದ.
ಲೋ, ಅದು ಕಥೆ ಕಣೋ ಅಂದಾಗ ಸುಮ್ನಾದ.
ಅದಾಗಿ ಸ್ವಲ್ಪ ದಿನಾ ಆದ್ಮೇಲೆ ಅಂದ್ರೆ ಮೊನ್ನೆ ಭಾನುವಾರ ಫೋನ್ ಮಾಡಿದೆ. 'ಇಲ್ಲೇ ಎಲ್ಲೋ ಬಂದಿದ್ದಂತೆ ಕರೆದಿದ್ರೆ ನಾನೂ ಬರ್ತಿದ್ದೆ'
ಇಲ್ವೋ, ಕಮರ್ಷಿಯಲ್ಗೆ ಹೋಗಿದ್ವಿ ಹಂಗೆ ಕುಳ್ಡನ್ನ ಬಿಟ್ಟು ಹೊರಟೆ
ಸರಿ, ಮತ್ತೇನು ವಿಶೇಷ
ಏನಿಲ್ಲ, ಸೈಕಲ್ ತಗೋಬೇಕು ಅಂತ ನಾನು ಕುಳ್ಡ ನೋಡಿದ್ವಿ
ತಗೊಂಡ್ರಾ?
ಇಲ್ಲ, ಅವ್ನೇನೋ ರಿವ್ಯೂ ನೋಡಿ ಆಮೇಲೆ ತಗೊಳ್ಳೋಣ ಅಂದ.
ನಾನು ಸೈಕಲ್ಗೆ ಯಾಕಪ್ಪ ರಿವ್ಯೂ
ತಡಿಯಪ್ಪ ಸ್ವಲ್ಪ, ನೋಡಿ ನಾಳೆ ತಗೊಳ್ಳೋಣ ಕುಳ್ಡ ಅಂದ್ನಂತೆ.
ಆಯ್ತಪ್ಪ ಅಂದು ಹಂಗೆ ಬಂದೆ ನೋಡು
ಮನೇಲಿ ನೆಟ್ ಇದ್ರೆ ಏನಕ್ಕೆ ಬೇಕಾದ್ರೂ ರಿವ್ಯೂ ನೋಡ್ತಾರೆ ನೋಡು
ಅದೆಲ್ಲ ಇರ್ಲಿ, ಏನು ಕಮರ್ಷಿಯಲ್ಗೆ??
ಸೈಕಲ್ ತಗೊಳ್ಳೋಣ ಅಂತ
ಸೈಕಲ್ಲಾ????
ಲೇ, ಬೈಕಿದೆ, ಕಾರಿದೆ, ಇದೇನೋ ಹೊಸ ವಿಚಾರ
ಹಂಗೆ ಕಣೋ, ಎಲ್ರೂ ಅದೇನೋ ಗ್ಲೋಬಲ್ ವಾರ್ಮಿಂಗ್, ಗೋ ಗ್ರೀನ್, ಸೇವ್ ಅರ್ಥ್ ಅಂತಾರಲ್ಲ ಅದ್ಕೆ ನಮ್ಕಡೆಯಿಂದ ಸ್ವಲ್ಪ ಕಾಣಿಕೆ ಇರ್ಲಿ ಅಂತ
ಯಾವ್ತರನಪ್ಪ?
ಆಫೀಸಿಗೆ ಸೈಕಲ್ನಲ್ಲಿ ಹೋಗೋಣ ಅಂತ
ಚೆನ್ನಾಗಿದೆ ಬಿಡು, ಕಾರ್ ಬೈಕ್ ಬಿಟ್ಟು ಸೈಕಲ್ ಸವಾರಿ. ಆದ್ರೂ ಆಫೀಸಿಗೆ ಹೋದ್ರೆ ಬೆವ್ತು ಹೋಗಿರ್ತೀಯಲ್ಲೋ
ಪರ್ಫ್ಯೂಮ್ಗಳು ಇರೋದ್ಯಾಕೆ ಹೇಳು, ಇದಕ್ಕೆ
ಲೇ, ನೀನು ಹಾಕೊಂಡು ಹೋದ್ರೂ ಅಲ್ಲಿಗೆ ಹೋಗೋಹೊತ್ತಿಗೆ ಏನು ಇರಲ್ಲ
ಬ್ಯಾಗಲ್ಲಿ ಪರ್ಫ್ಯೂಮ್ ಬಾಟಲಿ ಇಟ್ಕೊಂಡು ಹೋಗೋದು, ಆಮೇಲೆ ಮತ್ತೆ ಅಲ್ಲೊಂದು ಸಲ ಹಾಕೊಳ್ಳೋದು
ಆಹಾ, ಏನು ಐಡಿಯಾನಪ್ಪ ನಿಂದು?
ಹೆಂಗೆ ನಾವು !!!
ಅಕಸ್ಮಾತ್ ನಿನ್ನ ವಾಸನೆಗೆ ನಿನ್ನ ಕಲೀಗ್ಸೆಲ್ಲ ಮೂರ್ಚೆ ಹೋದ್ರೆ??
ಹೋದ್ರೆ ಹೋಗ್ತಾರೆ ಬಿಡೋ, ನಾನೇನ್ಮಾಡಕಾಗತ್ತೆ ಅದು ಅವರ ಕರ್ಮ
ನಿನ್ನಿಂದ ಕಂಪನಿ ಪ್ರೊಡಕ್ಟಿವಿಟಿ ಕಡಿಮೆಯಾಗ್ತಿದೆ ಅಂತ ದೂರು ಬಂದ್ರೆ??
ಏನು ಫ್ರೆಂಡ್ಸಪ್ಪ ನೀವು, ಏನಾದ್ರೂ ಒಳ್ಳೇದು ಮಾಡ್ತೀವಿ ಅಂತ ಸಪೋರ್ಟ್ ಮಾಡ್ತೀರಾ ಅಂದ್ರೆ ಮಧ್ಯದಲ್ಲಿ ಕಾಲು ಹಾಕ್ತೀರಲ್ಲ
ಏನೋ ನಿನ್ನ ಅನುಕೂಲಕ್ಕೆ ಹೇಳ್ದೆ, ಈ ಕಾರಣದಿಂದ ನಿನ್ನಿಂದ ಕಂಪನಿಗೆ ಲಾಸ್ ಅಂತ್ಹೇಳಿ ಕಿತ್ತುಹಾಕಿದ್ರೆ?
ಲೇ??
ಹೂನಪ್ಪ, ಸರಿ ಹಂಗೂ ಓ,ಕೆ ಅಂದ್ಕೋ, ಆದ್ರೆ ಪ್ರತಿ ದಿನ ನಿನ್ನ ಹೆಂಡ್ತಿ ನಿನ್ನ ಬಟ್ಟೆ ಒಗೀಬೇಕು, ಅವಳು ಕ್ಯಾಕರಿಸಿ ನಿನ್ನ ಮುಖಕ್ಕೆ ಆರತಿ ಮಾಡ್ತಿರ್ತಾಳೆ, ಪ್ರತಿ ಸಲ ಬಟ್ಟೆ ಎತ್ತಿ ಕುಕ್ಕರಿಸೋವಾಗ್ಲೂ ನಿಂಗೆ ಒದ್ದ ಹಾಗೆ ಆಗತ್ತೆ, ಆಗ??
ಗುರುವೇ ಸೈಕಲ್ಲೂ ಬೇಡ ಏನೂ ಬೇಡ ಆರಾಮಾಗಿ ಬೈಕಲ್ಲೇ ಹೋಗಿಬರ್ತೀನಿ
ಅಂತೂ ಸೇವ್ ಅರ್ತ್ ಬದ್ಲು ಸೇವ್ ಮಿ ಅನ್ನೋ ಸ್ಲೋಗನ್ಗೆ ಶರಣಾದ.
Tuesday, April 27, 2010
ಮಿಲನ
ನಿನ್ನ ಗೆಜ್ಜೆಯ ಸದ್ದು ನನ್ನ ಕಿವಿ ತಾಕಲು
ಬಿರಬಿರನೆ ನಾ ಹೆಜ್ಜೆ ಹಾಕಲು
ನಾ ಬಂದ ರಭಸಕೆ ನೀ ನನ್ನ ನೋಡುತಿರಲು
ಸನಿಹಕೆ ಬಂದಾಗ ನಿನ್ನ ಕೈ ನನ್ನ ಮೈ ಸೋಕಲು
ನನಗಾಗೇರಿತ್ತು ಒಂಥರಾ ಅಮಲು
ಇಷ್ಟೊತ್ತು ಎಲ್ಲಿಗೆ ಹೋಗಿದ್ದೆ ಎಂದವನು
ಬರಸೆಳೆದು ಹಿಡಿದಿದ್ದೆ ನಿನ್ನನು
ಅಧರಕೆ ಕೊಟ್ಟೆ ಒಂದು ಮುತ್ತನು
Thursday, April 22, 2010
ಚುರ್ಮುರಿ - ೩
ಇಂಡಿಯಾ ಟೀಮ್ ೪೯.೫ ಓವರಲ್ಲಿ ೯ ವಿಕೆಟ್ಗೆ ೨೭೪ ರನ್ ಹೊಡೆದಿತ್ತು, ಬ್ಯಾಟಿಂಗ್ ಮಾಡ್ತಿದ್ದವನು ಯುವರಾಜ್ ಸಿಂಗ್. ಬೌಲರ್ ಬಂದು ಬಾಲ್ ಎಸೆದ, ಒಂದು ಪಿಚ್ ಬಿದ್ದು ಪುಟಿಯುವಷ್ಟರಲ್ಲಿ ಕರೆಂಟ್ ಹೋಗಿತ್ತು.
೨) ಅಕ್ಕಿಯ ರೇಟು ಗಗನಕ್ಕೇರಿದ್ದರೂ ಭತ್ತ ಇನ್ನೂ ಪಾತಾಳದಲ್ಲಿರುವುದನ್ನು ಮನಗಂಡ ಅವನು ಇದ್ದ ಗದ್ದೆಯನ್ನೆಲ್ಲ ತೋಟ ಮಾಡಿದನು.
೩) ಅವನು ಕಷ್ಟಪಟ್ಟು ದುಡಿದ ದುಡ್ಡನ್ನು ಮಗನಿಗೆ ಸರಕಾರೀ ಕೆಲಸ ಸಿಗಲೆಂದು ಒಬ್ಬ ರಾಜಕಾರಣಿಗೆ ಕೊಟ್ಟ.
ಇವನ ಪಕ್ಕದ ಮನೆಯ ನೆಂಟರೊಬ್ಬರು ಅದೇ ಕೆಲಸಕ್ಕೆ ಅದೇ ರಾಜಕಾರಣಿಗೆ ದುಡ್ಡು ಕೊಟ್ಟಿದ್ದರು.
ವಿಷಯ ತಿಳಿದ ಅವನು ದುಡ್ಡನ್ನು ತಿಮ್ಮಪ್ಪನ ಹುಂಡಿಗೆ ಹಾಕಿದೆನೆಂದು ತನ್ನನ್ನು ತಾನೇ ಸಮಾಧಾನಗೊಳಿಸಿಕೊಂಡ.
Monday, April 19, 2010
ಒಂದು ಶೇವಿಂಗ್ ಪುರಾಣ
ಒಂದೆರಡು ದಿನ ಶೇವ್ ಮಾಡದೇ ಬಿಟ್ಟಿದ್ದರಿಂದ ಗಡ್ಡದ ಕೂದಲುಗಳು ತಲೆ ಕೂದಲಿಗೆ ಪೈಪೋಟಿ ಕೊಡುತ್ತಿದ್ದವು. ಶನಿವಾರ ಬೇರೆ, ವೀಕೆಂಡ್. ಏನಾದರಾಗಲಿ ಇವತ್ತು ಶೇವ್ ಮಾಡೇ ತೀರಬೇಕು ಅಂದ್ಕೊಂಡೆ. ಪಕ್ಕದ ರೂಮಲ್ಲಿ ಮೀಟರ್, ಬಾಬು ಇನ್ನೂ ಮುಸುಕಿ ಹಾಕಿ ಮಲ್ಕೊಂಡಿದ್ರು.
ಮೀಟರ್ ಗೊರಕೆ ಶಬ್ದ ರಾಜ್ಕುಮಾರ್ ರೋಡಲ್ಲಿ ಹೋಗ್ತಿದ್ದ ವಾಹನಗಳಿಗೆ ಪೈಪೋಟಿ ಕೊಡ್ತಿತ್ತು.ಆ ಗೊರಕೆ ಶಬ್ದ ತಡೀಲಾರದೆ ನಾನು ಇನ್ನೊಂದು ರೂಮಿಗೆ ಶಿಫ್ಟ್ ಆಗಿದ್ದೆ. ೩ ಬೆಡ್ರೂಮ್ ಮನೆ ಆಗಿರೋದ್ರಿಂದ ಪುಣ್ಯ, ಇನ್ನು ಸಿಂಗಲ್ ಬೆಡ್ರೂಮ್ ಮಾಡಿದ್ರೆ ನನ್ನ ನಿದ್ದೆನೆಲ್ಲಾ ಮೀಟರ್ ಗೊರಕೆ ತಿಂದು ಮುಗಿಸುತ್ತಿತ್ತೇನೋ.ಈ ನಡುವೆ ಉಲ್ಲನಿಗೆ ಮೈಸೂರಲ್ಲಿ ಕೆಲಸ ಸಿಕ್ಕಿ ಅಲ್ಲಿಗೆ ಹೋದ, ಬಾಬುದು ಮದುವೆ ಇನ್ನೇನು ಸ್ವಲ್ಪ ದಿನಗಳಲ್ಲಿ, ಉಳಿದವರು ಅಂದ್ರೆ ನಾನು, ಮೀಟರ್. ಈಗ ಅವರಿಬ್ಬರು ಇಲ್ಲದ ಕಾರಣ ಸಿಂಗಲ್ ಬೆಡ್ರೂಮ್ ಹುಡುಕಲೇಬೇಕು, ನನ್ನನ್ನ ದೇವ್ರೇ ಕಾಪಾಡಬೇಕು :(
ಒಂದ್ಸಲ ವೆಂಕ ನಮ್ಮ ಮನೆಗೆ ಬೆಳ್ಗೆ ಬಂದಿದ್ದ, ಮೀಟರ್ ಗೊರಕೆ ಶಬ್ದ ಕೇಳಿ 'ಬಾಬು, ನೀನು ಹೇಗೆ ಮೀಟರ್ ಪಕ್ಕ ಮಲಗ್ತೀಯಪ್ಪ? ಏನಾದ್ರೂ ಗೊರಕೆ ಬಗ್ಗೆ ಪಿ.ಎಚ್.ಡಿ ಮಾಡ್ಬೇಕು ಅಂತಿದೀಯಾ?'
ಕೇಳಿಸಿಕೊಂಡ ಮೀಟರ್ 'ನನ್ಮಕ್ಕಳ. ನೀವ್ಯಾರೂ ಗೊರಕೆ ಹೊಡೆಯೋದೇ ಇಲ್ವೇನೋ ಅನ್ನೋ ಹಾಗೆ ಹೇಳ್ತೀರಾ. ಈ ನಡುವೆ ಅಷ್ಟೊಂದು ಗೊರಕೆ ಹೊಡೆಯೊಲ್ಲ, ಅದೂ ಅಲ್ಲದೆ ಬೆಳಗ್ಗೆ ಹೊತ್ತು ಹೊಡೆಯೋಕೆ ಇಲ್ಲ'. ಬಹುಷ ಗೊರಕೆ ಹೊಡೀತಾ ಇದ್ದಾನೋ ಇಲ್ವೋ ಅಂತ ತಿಳಿಯೋದಕ್ಕೆ ಮೀಟರ್ ಆತ್ಮ ರಾತ್ರಿಯೆಲ್ಲ ಎಚ್ಚರ ಇರ್ತಿತ್ತೇನೋ.
ವಿಷಯಾಂತರ ಆಗೋಯ್ತಲ್ಲ ? ನನ್ನ ಶೇವಿಂಗ್ ಪುರಾಣ ಬಿಟ್ಟು ಮೀಟರ್ ಗೊರಕೆ ಪುರಾಣಕ್ಕೆ ಶಿಫ್ಟ್ ಆಗಿದೀನಲ್ವ?
ಬೆಳಗ್ಗೆ ಎದ್ದೆ ಅಂದ್ನಲ್ಲ. ಹಲ್ಲುಜ್ಜಿ, ಕೈ ಕಾಲು ಮುಖ ತೊಳೆದುಕೊಂಡು ಅಂಗಡಿಗೆ ಹೋಗಿ ದಿನಸಿ ತಂದು ಅವಲಕ್ಕಿ ಮಾಡಿ, ತಿಂದು, ಟೀ ಕುಡಿದು, ಸ್ವಲ್ಪ ಹೊತ್ತು ಪೇಪರ್ ಓದಿ ಆದ್ಮೇಲೆ, ಶೇವಿಂಗ್ ಮಾಡ್ಕೊಳ್ಳೋದಕ್ಕೆ ಹೊರಟೆ. ಶೇವಿಂಗ್ ಕಿಟ್ ತಂದು, ಒಳಗಿದ್ದ ಶೇವಿಂಗ್ ಕ್ರೀಮ್ ತೆಗೆದು ಕಷ್ಟಪಟ್ಟು (ತಿಣುಕಾಡಿ) ಪ್ರೆಸ್ ಮಾಡಿ (ಮುಗಿಯುವ ಹಂತದಲ್ಲಿದ್ದುದರಿಂದ , ಟೂತ್ ಪೇಷ್ಟ್ ಮುಗಿಯೋವಾಗ ಕಷ್ಟ ಪಡ್ತೀವಲ್ಲ ಹಾಗೆ) ಸ್ವಲ್ಪ ಹೊತ್ತಾದ ಮೇಲೆ ಒಂದು ಶೇವಿಂಗ್ಗೆ ಆಗಷ್ಟು ಕ್ರೀಮ್ ಬಂತು. ಕ್ರೀಮ್ನ ಬ್ರಶ್ಗೆ ಹಾಕಿ ಗಡ್ದಕ್ಕೆಲ್ಲ ಮೆತ್ತಿ ಕಿಟ್ನಿಂದ ಬ್ಲೇಡ್ ಹೊರತೆಗೆದ್ರೆ ಅದು ನನ್ನನ್ನು ನೋಡಿ ನಗೋರ ಹಾಗೆ ಕಾಣುಸ್ತು. ಯಾಕೆಂದ್ರೆ 'ನಿನ್ನ ಗಡ್ದದಲ್ಲಿರೋ ೧೦% ಕೂದಲು ಸಹ ತೆಗೆಯೋದಕ್ಕೆ ನನ್ನಿಂದ ಆಗಲ್ಲ' ಅಂತ ಬ್ಲೇಡ್ ಗಹಗಹಿಸಿ ನಗೋರ ಹಾಗೆ ಕಾಣುಸ್ತು.
ಮುಖ ತೊಳೆದುಕೊಂಡು ಪ್ಯಾಂಟ್ ಹಾಕೊಂಡು ಬ್ಲೇಡ್ ತರೋದಕ್ಕೆ ಅಂಗಡಿಗೆ ಹೋದೆ. ಬಂದವನು ಶೇವಿಂಗ್ಗೆ ಹೊರಟೆ.
'ಅಯ್ಯೋ ಶಿವನೇ' ಶೇವಿಂಗ್ ಕಿಟ್ ನೋಡಿ ಆಗ ಜ್ಞಾಪಕಕ್ಕೆ ಬಂತು
ಕ್ರೀಮ್ ಕಾಲಿಯಾಗಿದೆ ! ? :(
ಈ ಸಲ ಮುಖ ತೊಳೆಯೋ ಅವಶ್ಯಕತೆ ಇರ್ಲಿಲ್ಲ, ಹೋಗಿ ಕ್ರೀಮ್ ತಂದು ಗಡ್ಡಕ್ಕೆ ಹಚ್ಹ್ಕೊತ್ತಿದ್ದೆ.
ಅಷ್ಟರಲ್ಲಿ 'ಪ್ಲೀಸ್ ಓಪನ್ ದಿ ಡೋರ್' ಅಂತ ಕಾಲಿಂಗ್ ಬೆಲ್ ಸದ್ದಾಯ್ತು.
'ಲೇ, ಚಿಕ್ಕು ಬಾಗಿಲು ತೆಗೆಯೋ' ವೆಂಕ ಹೊರಗಡೆಯಿಂದ ಅರಚುತ್ತಿದ್ದ.
'ಅದ್ಯಾಕೆ ಹಂಗೆ ಆಡ್ತೀಯ ಸ್ವಲ್ಪ ಸಮಾಧಾನ' ಅಂತ ಹೇಳಿ ಬಾಗಿಲು ತೆಗೆದೆ.
'ಬೇಗ ಹೊರಡು, ಸೌಜ (ಯು ಎಸ್ಗೆ ಹೋಗಿ ಬಂದಿದ್ದ) ಮೆಜೆಸ್ಟಿಕ್ ಹತ್ರ ಇದ್ದಾನೆ, ಚಾಕಲೇಟ್ ಇಸ್ಕೊಂಡು ಬರೋಣ'
'ಯಾಕಪ್ಪ, ನೀನೇ ಹೋಗಿ ತಗೊಂಡು ಬರಬಹುದಲ್ಲ?'
'ಮಗನೇ, ಎಲ್ಲ ಕಾಲು ಹತ್ರಾನೇ ಬಂದು ಬೀಳಬೇಕು ನಿಮಗೆ. ಅವ್ನಿಗೆ ನಾನು ಚಾಕಲೇಟ್ ತಂದು ನಿಮಗೆ ಕೊಡಲ್ಲ ಅಂತ ಅನುಮಾನ ಅದ್ಕೆ ಕರ್ಕೊಂಡು ಬಾ' ಅಂತ ಸೌಜ ಹೇಳ್ದ ಅಂದ.
'ಎಂತ ರೆಪ್ಯುಟೇಶೇನ್ ಇಟ್ಟಿದೀಯಾ ನೋಡು, ೧೦ ನಿಮಿಷ ತಡಿ ಶೇವಿಂಗ್ ಮಾಡ್ಕೊಂಡು ಬರ್ತೀನಿ'
'ಏನು ಮಾಡೋದು, ಈಗ ಹೊರಡಪ್ಪ, ಅವ್ನಿಗೆ ೧೧ಕ್ಕೆ ಬಸ್ಸಂತೆ, ಈಗ ೧೦.೪೫ ಬೇಗ ನಡಿ'
ನನ್ನ ಗಡ್ಡ ಕ್ರೀಮ್ ಅಡಿ ಅಳ್ತಿತ್ತು :(
'ಸರಿ' ಅಂತ್ಹೇಳಿ ಮುಖ ತೊಳೆದು ಬಟ್ಟೆ ಚೇಂಜ್ ಮಾಡ್ಕೊಂಡು ವೆಂಕನ ಜೊತೆ ಹೊರಟೆ.
ಮೆಜೆಸ್ಟಿಕ್ನಲ್ಲಿ ಸೌಜ ಸಿಕ್ಕಿದ, ನನ್ನ ನೋಡಿ 'ಏನು ಚಿಕ್ಕು, ಗಡ್ಡ ಹಿಂಗೆ ಬಿಟ್ಟಿದೀಯಲ್ಲೋ, ದೇವದಾಸ್ ತರ ಆಗಿದೀಯಾ. ತಡಿ ಅಂಕಲ್ ಆಂಟಿಗೆ ಹೇಳಿ ಹುಡುಗನಿಗೆ ಬೇಗ ಮದ್ವೆ ಮಾಡ್ಸಿ ಅಂತೀನಿ'
ಪಕ್ಕದಲ್ಲಿದ್ದ ವೆಂಕ ಮುಸಿಮುಸಿ ನಕ್ತಿದ್ದ.
ಬೈಕಲ್ಲಿ ವಾಪಸ್ ಮನೆಗೆ ಹೋಗೋವಾಗ ನವರಂಗ್ ಹತ್ತಿರ ವೆಂಕ 'ಚಿಕ್ಕು, ಆಪ್ತರಕ್ಷಕ ಫಿಲ್ಮ್ ನೋಡ್ಕೊಂಡು ಹೋಗೋಣ'
'ಲೇ ಆಪ್ತಮಿತ್ರ, ಮೊದ್ಲು ನನ್ನನ್ನ ಮನೆಗೆ ಬಿಡು, ಶೇವಿಂಗ್ ಆದ್ಮೇಲೆ ಬೇರೆ ಕೆಲಸ' ಅಂತ ಬೈಕ್ನ ಮನೆ ಕಡೆ ತಿರುಗಿಸೋಕೆ ಹೇಳಿದೆ.
Tuesday, April 13, 2010
ನೀರು ಹಾಕು!
ನಮ್ಮ ಅಕ್ಕನ ಮಗನಿಗೆ ೨ ವರ್ಷ, ಅವನು ಟಾಯ್ಲೆಟ್ನಲ್ಲಿ ಸೂಸು ಮಾಡಿ ಆದ್ಮೇಲೆ ನೀರು ಹಾಕಿ ಬರ್ತಿದ್ರು.
ಮೊನ್ನೆ ಸಂಜೆ ಅಕ್ಕನ ಜೊತೆ ವಾಕ್ ಮಾಡೋವಾಗ ಅವ್ನಿಗೆ ಅರ್ಜೆಂಟ್ ಆಯ್ತು, ಸೂಸು ಆದ್ಮೇಲೆ ಅಮ್ಮನಿಗೆ 'ಅಮ್ಮ, ನೀರು ಹಾಕು' ಅಂತ ರಚ್ಚೆ ಹಿಡಿದು ಕೂತ್ನಂತೆ.
ವಿಧಿ ಇಲ್ಲದೆ ನಮ್ಮಕ್ಕ ಕೈಲಿದ್ದ ನೀರಿನ ಬಾಟಲಿಯಲ್ಲಿದ್ದ ನೀರನ್ನು ಹಾಕಿ ವಾಪಸ್ ಮನೆಗೆ ಕರೆದುಕೊಂಡು ಹೋದ್ಲು.
Sunday, April 11, 2010
ಪ್ರಕೃತಿ
ನಿನ್ನ ಮೇಲೆ ನನಗೆಲ್ಲಿಲ್ಲದ ಒಲವು
ಪರ್ವತದ ಮೇಲೆ ಮಂಜಿನ ತೋರಣ
ಅದರ ಮೇಲೆ ರವಿಯ ಹೊನ್ನಿನ ಕಿರಣ
ಅದೋ ಅಲ್ಲಿ ಕಾಮನಬಿಲ್ಲಿನ ಚಿತ್ತಾರ
ಆ ಸಪ್ತವರ್ಣಗಳ ನೋಡುವುದೇ ಸಡಗರ
ಆಗಸದಲ್ಲಿ ಕಾರ್ಮೋಡದ ಆರ್ಭಟ
ಇನ್ನೇನು ಶುರುವಾಗಲಿದೆ ಧರೆಯ ಮೇಲೆ ಅದರಾಟ
ಇಳೆಯ ಮೇಲೆ ಮಳೆಯ ನರ್ತನ
ಎಲೆಯ ಮೇಲೆ ಹನಿಯ ಸಿಂಚನ
ಎಲ್ಲೆಲ್ಲೂ ಹಸಿರ ಹೊದಿಕೆ
ಸಾಲುವುದಿಲ್ಲ ಎರಡೂ ನಯನ ಅದಕೆ
Monday, April 5, 2010
ಚುರ್ಮುರಿ - ೨
ಕೆಲವೇ ದಿನಗಳಲ್ಲಿ ಕಾಣದ ಕಡೆ ಮೊಬೈಲ್ ಕಂಡು ಕರುಬಲಾರಂಬಿಸಿದ.
೨) ಅವನ ಮಾತಿನ ಮೋಡಿಗೆ ಜನ ಓಟು ಹಾಕಿದರು
ಗೆದ್ದ ಮೇಲೂ ಮಾತನ್ನಾಡುತ್ತಲೇ ಇದ್ದಾನೆ
೩) ಮೊದಲ ಟೆಸ್ಟ್ನಲ್ಲಿ ಮೊದಲನೆಯವನಾಗಬೇಕೆಂದು ಅವನು ಒಂದು ತಿಂಗಳು ಹಗಲೂ ರಾತ್ರಿ ಕಷ್ಟಪಟ್ಟು ಓದಿದ, ಇವನು ಹಿಂದಿನ ದಿನ ಇಂಟರ್ನಲ್ ಬುಕ್ಕಿಗೆ ೮ ಉತ್ತರಗಳನ್ನೂ ಬರೆದಿಟ್ಟಿದ್ದ. ೮ ರಲ್ಲಿ ೬ ಪ್ರಶ್ನೆಗಳನ್ನು ಲೆಕ್ಚರರ್ ಕೊಟ್ಟಿದ್ದರು. ೫ನ್ನು ಬಿಟ್ಟು ಮಿಕ್ಕ ೩ನ್ನು ಹರಿದು, ಟೆಸ್ಟಾದ ಮೇಲೆ ಆ ಬುಕ್ಕನ್ನು ಇಟ್ಟು ಬಂದ. ಇವನು ಅವನಿಗಿಂತ ಮೊದಲಾಗಿದ್ದ.
ಕೈ - ಕೊಟ್ಟಳು
ನೋಡಿ
ಬೈಕಲ್ಲಿ ಬೆಂಬತ್ತಿ
ಓಡಿ
ಕಾಫಿಡೇಯಲ್ಲಿ ಅವಳನ್ನು
ಕಾಡಿ
ಪ್ರೀತಿಯ ಭಿಕ್ಷೆ
ಬೇಡಿ
ಜೊತೆ ಒಂದಾದ
ಜೋಡಿ
ಅವನ ಶ್ರೀಮಂತಿಕೆ
ನೋಡಿ
ಕೈಲಿದ್ದ ಕಾಸೆಲ್ಲ
ಜಾಲಾಡಿ
ಕೈಕೊಟ್ಟಳು ಬೇರೊಬ್ಬನೊಂದಿಗೆ
ಓಡಿ
ಚುರ್ಮುರಿ - ೧
೧) ಅವನು ಸಮಾಜ ಸೇವೆ ಮಾಡಬೇಕೆಂದು ರಾಜಕಾರಣಕ್ಕೆ ಇಳಿದ. ಸಮಾಜದ ಸೇವೆ ಪಡೆದುಕೊಂಡು ರಾಜಕೀಯದಿಂದ ನಿವ್ರ್ರತ್ತಿ ಹೊಂದಿದ.
೨) ಅಪ್ಪ ಅಮ್ಮನ ಮಾತು ಕೇಳದೆ ಇದ್ದ ಬದ್ದ ಹೊಲವನ್ನೆಲ್ಲ ಮಾರಿ ಪೇಟೆಯಲ್ಲಿ ಬ್ಯುಸಿನೆಸ್ ಮಾಡಲು ಹಣ ತೆಗೆದುಕೊಂಡು ಹೋದ.
ರೈಲಿನಲ್ಲಿ ಮೂತ್ರ ಮಾಡಲು ಹೋದಾಗ ಯಾರೋ ದುಡ್ಡಿನ ಚೀಲವನ್ನು ಅಪಹರಿಸಿದ್ದರು.
ಈಗ ಅವನು ತಾನು ಮಾರಿದ ತೋಟದಲ್ಲೇ ಕೂಲಿ ಕೆಲಸ ಮಾಡುತ್ತಿದ್ದಾನೆ.
೩) ಕಾಲೇಜಿನ ಕೊನೆಯ ದಿನ ತನ್ನ ಗರ್ಲ್ ಫ್ರೆಂಡ್ಗೆ ಮೊಬೈಲ್ ಕೊಡಿಸಿದ ಹುಡುಗ ತನ್ನ ನಂಬರ್ ಅವಳಿಗೆ ಕೊಡದೆ ಅವಳು ಹೋದ ಮೇಲೆ ಪರಿತಪಿಸುತ್ತಿದ್ದ.