Monday, April 19, 2010

ಒಂದು ಶೇವಿಂಗ್ ಪುರಾಣ

ಒಂದೆರಡು ದಿನ ಶೇವ್ ಮಾಡದೇ ಬಿಟ್ಟಿದ್ದರಿಂದ ಗಡ್ಡದ ಕೂದಲುಗಳು ತಲೆ ಕೂದಲಿಗೆ ಪೈಪೋಟಿ ಕೊಡುತ್ತಿದ್ದವು. ಶನಿವಾರ ಬೇರೆ, ವೀಕೆಂಡ್. ಏನಾದರಾಗಲಿ ಇವತ್ತು ಶೇವ್ ಮಾಡೇ ತೀರಬೇಕು ಅಂದ್ಕೊಂಡೆ. ಪಕ್ಕದ ರೂಮಲ್ಲಿ ಮೀಟರ್, ಬಾಬು ಇನ್ನೂ ಮುಸುಕಿ ಹಾಕಿ ಮಲ್ಕೊಂಡಿದ್ರು.

ಮೀಟರ್ ಗೊರಕೆ ಶಬ್ದ ರಾಜ್ಕುಮಾರ್ ರೋಡಲ್ಲಿ ಹೋಗ್ತಿದ್ದ ವಾಹನಗಳಿಗೆ ಪೈಪೋಟಿ ಕೊಡ್ತಿತ್ತು.ಆ ಗೊರಕೆ ಶಬ್ದ ತಡೀಲಾರದೆ ನಾನು ಇನ್ನೊಂದು ರೂಮಿಗೆ ಶಿಫ್ಟ್ ಆಗಿದ್ದೆ. ೩ ಬೆಡ್ರೂಮ್ ಮನೆ ಆಗಿರೋದ್ರಿಂದ ಪುಣ್ಯ, ಇನ್ನು ಸಿಂಗಲ್ ಬೆಡ್ರೂಮ್ ಮಾಡಿದ್ರೆ ನನ್ನ ನಿದ್ದೆನೆಲ್ಲಾ ಮೀಟರ್ ಗೊರಕೆ ತಿಂದು ಮುಗಿಸುತ್ತಿತ್ತೇನೋ.

ಈ ನಡುವೆ ಉಲ್ಲನಿಗೆ ಮೈಸೂರಲ್ಲಿ ಕೆಲಸ ಸಿಕ್ಕಿ ಅಲ್ಲಿಗೆ ಹೋದ, ಬಾಬುದು ಮದುವೆ ಇನ್ನೇನು ಸ್ವಲ್ಪ ದಿನಗಳಲ್ಲಿ, ಉಳಿದವರು ಅಂದ್ರೆ ನಾನು, ಮೀಟರ್. ಈಗ ಅವರಿಬ್ಬರು ಇಲ್ಲದ ಕಾರಣ ಸಿಂಗಲ್ ಬೆಡ್ರೂಮ್ ಹುಡುಕಲೇಬೇಕು, ನನ್ನನ್ನ ದೇವ್ರೇ ಕಾಪಾಡಬೇಕು :(

ಒಂದ್ಸಲ ವೆಂಕ ನಮ್ಮ ಮನೆಗೆ ಬೆಳ್ಗೆ ಬಂದಿದ್ದ, ಮೀಟರ್ ಗೊರಕೆ ಶಬ್ದ ಕೇಳಿ 'ಬಾಬು, ನೀನು ಹೇಗೆ ಮೀಟರ್ ಪಕ್ಕ ಮಲಗ್ತೀಯಪ್ಪ? ಏನಾದ್ರೂ ಗೊರಕೆ ಬಗ್ಗೆ ಪಿ.ಎಚ್.ಡಿ ಮಾಡ್ಬೇಕು ಅಂತಿದೀಯಾ?'

ಕೇಳಿಸಿಕೊಂಡ ಮೀಟರ್ 'ನನ್ಮಕ್ಕಳ. ನೀವ್ಯಾರೂ ಗೊರಕೆ ಹೊಡೆಯೋದೇ ಇಲ್ವೇನೋ ಅನ್ನೋ ಹಾಗೆ ಹೇಳ್ತೀರಾ. ಈ ನಡುವೆ ಅಷ್ಟೊಂದು ಗೊರಕೆ ಹೊಡೆಯೊಲ್ಲ, ಅದೂ ಅಲ್ಲದೆ ಬೆಳಗ್ಗೆ ಹೊತ್ತು ಹೊಡೆಯೋಕೆ ಇಲ್ಲ'. ಬಹುಷ ಗೊರಕೆ ಹೊಡೀತಾ ಇದ್ದಾನೋ ಇಲ್ವೋ ಅಂತ ತಿಳಿಯೋದಕ್ಕೆ ಮೀಟರ್ ಆತ್ಮ ರಾತ್ರಿಯೆಲ್ಲ ಎಚ್ಚರ ಇರ್ತಿತ್ತೇನೋ.

ವಿಷಯಾಂತರ ಆಗೋಯ್ತಲ್ಲ ? ನನ್ನ ಶೇವಿಂಗ್ ಪುರಾಣ ಬಿಟ್ಟು ಮೀಟರ್ ಗೊರಕೆ ಪುರಾಣಕ್ಕೆ ಶಿಫ್ಟ್ ಆಗಿದೀನಲ್ವ?

ಬೆಳಗ್ಗೆ ಎದ್ದೆ ಅಂದ್ನಲ್ಲ. ಹಲ್ಲುಜ್ಜಿ, ಕೈ ಕಾಲು ಮುಖ ತೊಳೆದುಕೊಂಡು ಅಂಗಡಿಗೆ ಹೋಗಿ ದಿನಸಿ ತಂದು ಅವಲಕ್ಕಿ ಮಾಡಿ, ತಿಂದು, ಟೀ ಕುಡಿದು, ಸ್ವಲ್ಪ ಹೊತ್ತು ಪೇಪರ್ ಓದಿ ಆದ್ಮೇಲೆ, ಶೇವಿಂಗ್ ಮಾಡ್ಕೊಳ್ಳೋದಕ್ಕೆ ಹೊರಟೆ. ಶೇವಿಂಗ್ ಕಿಟ್ ತಂದು, ಒಳಗಿದ್ದ ಶೇವಿಂಗ್ ಕ್ರೀಮ್ ತೆಗೆದು ಕಷ್ಟಪಟ್ಟು (ತಿಣುಕಾಡಿ) ಪ್ರೆಸ್ ಮಾಡಿ (ಮುಗಿಯುವ ಹಂತದಲ್ಲಿದ್ದುದರಿಂದ , ಟೂತ್ ಪೇಷ್ಟ್ ಮುಗಿಯೋವಾಗ ಕಷ್ಟ ಪಡ್ತೀವಲ್ಲ ಹಾಗೆ) ಸ್ವಲ್ಪ ಹೊತ್ತಾದ ಮೇಲೆ ಒಂದು ಶೇವಿಂಗ್ಗೆ ಆಗಷ್ಟು ಕ್ರೀಮ್ ಬಂತು. ಕ್ರೀಮ್ನ ಬ್ರಶ್ಗೆ ಹಾಕಿ ಗಡ್ದಕ್ಕೆಲ್ಲ ಮೆತ್ತಿ ಕಿಟ್ನಿಂದ ಬ್ಲೇಡ್ ಹೊರತೆಗೆದ್ರೆ ಅದು ನನ್ನನ್ನು ನೋಡಿ ನಗೋರ ಹಾಗೆ ಕಾಣುಸ್ತು. ಯಾಕೆಂದ್ರೆ 'ನಿನ್ನ ಗಡ್ದದಲ್ಲಿರೋ ೧೦% ಕೂದಲು ಸಹ ತೆಗೆಯೋದಕ್ಕೆ ನನ್ನಿಂದ ಆಗಲ್ಲ' ಅಂತ ಬ್ಲೇಡ್ ಗಹಗಹಿಸಿ ನಗೋರ ಹಾಗೆ ಕಾಣುಸ್ತು.

ಮುಖ ತೊಳೆದುಕೊಂಡು ಪ್ಯಾಂಟ್ ಹಾಕೊಂಡು ಬ್ಲೇಡ್ ತರೋದಕ್ಕೆ ಅಂಗಡಿಗೆ ಹೋದೆ. ಬಂದವನು ಶೇವಿಂಗ್ಗೆ ಹೊರಟೆ.

'ಅಯ್ಯೋ ಶಿವನೇ' ಶೇವಿಂಗ್ ಕಿಟ್ ನೋಡಿ ಆಗ ಜ್ಞಾಪಕಕ್ಕೆ ಬಂತು

ಕ್ರೀಮ್ ಕಾಲಿಯಾಗಿದೆ ! ? :(

ಈ ಸಲ ಮುಖ ತೊಳೆಯೋ ಅವಶ್ಯಕತೆ ಇರ್ಲಿಲ್ಲ, ಹೋಗಿ ಕ್ರೀಮ್ ತಂದು ಗಡ್ಡಕ್ಕೆ ಹಚ್ಹ್ಕೊತ್ತಿದ್ದೆ.

ಅಷ್ಟರಲ್ಲಿ 'ಪ್ಲೀಸ್ ಓಪನ್ ದಿ ಡೋರ್' ಅಂತ ಕಾಲಿಂಗ್ ಬೆಲ್ ಸದ್ದಾಯ್ತು.
'ಲೇ, ಚಿಕ್ಕು ಬಾಗಿಲು ತೆಗೆಯೋ' ವೆಂಕ ಹೊರಗಡೆಯಿಂದ ಅರಚುತ್ತಿದ್ದ.

'ಅದ್ಯಾಕೆ ಹಂಗೆ ಆಡ್ತೀಯ ಸ್ವಲ್ಪ ಸಮಾಧಾನ' ಅಂತ ಹೇಳಿ ಬಾಗಿಲು ತೆಗೆದೆ.

'ಬೇಗ ಹೊರಡು, ಸೌಜ (ಯು ಎಸ್ಗೆ ಹೋಗಿ ಬಂದಿದ್ದ) ಮೆಜೆಸ್ಟಿಕ್ ಹತ್ರ ಇದ್ದಾನೆ, ಚಾಕಲೇಟ್ ಇಸ್ಕೊಂಡು ಬರೋಣ'

'ಯಾಕಪ್ಪ, ನೀನೇ ಹೋಗಿ ತಗೊಂಡು ಬರಬಹುದಲ್ಲ?'

'ಮಗನೇ, ಎಲ್ಲ ಕಾಲು ಹತ್ರಾನೇ ಬಂದು ಬೀಳಬೇಕು ನಿಮಗೆ. ಅವ್ನಿಗೆ ನಾನು ಚಾಕಲೇಟ್ ತಂದು ನಿಮಗೆ ಕೊಡಲ್ಲ ಅಂತ ಅನುಮಾನ ಅದ್ಕೆ ಕರ್ಕೊಂಡು ಬಾ' ಅಂತ ಸೌಜ ಹೇಳ್ದ ಅಂದ.

'ಎಂತ ರೆಪ್ಯುಟೇಶೇನ್ ಇಟ್ಟಿದೀಯಾ ನೋಡು, ೧೦ ನಿಮಿಷ ತಡಿ ಶೇವಿಂಗ್ ಮಾಡ್ಕೊಂಡು ಬರ್ತೀನಿ'

'ಏನು ಮಾಡೋದು, ಈಗ ಹೊರಡಪ್ಪ, ಅವ್ನಿಗೆ ೧೧ಕ್ಕೆ ಬಸ್ಸಂತೆ, ಈಗ ೧೦.೪೫ ಬೇಗ ನಡಿ'

ನನ್ನ ಗಡ್ಡ ಕ್ರೀಮ್ ಅಡಿ ಅಳ್ತಿತ್ತು :(

'ಸರಿ' ಅಂತ್ಹೇಳಿ ಮುಖ ತೊಳೆದು ಬಟ್ಟೆ ಚೇಂಜ್ ಮಾಡ್ಕೊಂಡು ವೆಂಕನ ಜೊತೆ ಹೊರಟೆ.

ಮೆಜೆಸ್ಟಿಕ್ನಲ್ಲಿ ಸೌಜ ಸಿಕ್ಕಿದ, ನನ್ನ ನೋಡಿ 'ಏನು ಚಿಕ್ಕು, ಗಡ್ಡ ಹಿಂಗೆ ಬಿಟ್ಟಿದೀಯಲ್ಲೋ, ದೇವದಾಸ್ ತರ ಆಗಿದೀಯಾ. ತಡಿ ಅಂಕಲ್ ಆಂಟಿಗೆ ಹೇಳಿ ಹುಡುಗನಿಗೆ ಬೇಗ ಮದ್ವೆ ಮಾಡ್ಸಿ ಅಂತೀನಿ'

ಪಕ್ಕದಲ್ಲಿದ್ದ ವೆಂಕ ಮುಸಿಮುಸಿ ನಕ್ತಿದ್ದ.

ಬೈಕಲ್ಲಿ ವಾಪಸ್ ಮನೆಗೆ ಹೋಗೋವಾಗ ನವರಂಗ್ ಹತ್ತಿರ ವೆಂಕ 'ಚಿಕ್ಕು, ಆಪ್ತರಕ್ಷಕ ಫಿಲ್ಮ್ ನೋಡ್ಕೊಂಡು ಹೋಗೋಣ'

'ಲೇ ಆಪ್ತಮಿತ್ರ, ಮೊದ್ಲು ನನ್ನನ್ನ ಮನೆಗೆ ಬಿಡು, ಶೇವಿಂಗ್ ಆದ್ಮೇಲೆ ಬೇರೆ ಕೆಲಸ' ಅಂತ ಬೈಕ್ನ ಮನೆ ಕಡೆ ತಿರುಗಿಸೋಕೆ ಹೇಳಿದೆ.

2 comments:

  1. hehehe...ನಿಮ್ಮ ಗಡ್ಡ, ತನ್ನನ್ನು ಕೊಲ್ಲಬೇಡ ಅಂತ ಅಡಿ ಅಳಲಿಲ್ಲವ????

    ReplyDelete
  2. ಇಲ್ರೀ ಅಶ್ವಿನಿಯವರೇ, ಅದು ಕಥೆ.
    ಇಲ್ಲಿ ನೋಡಿ...
    http://sampada.net/article/24869

    ReplyDelete