ಆಗೆಲ್ಲಾ ಮಲೆನಾಡಲ್ಲಿ ಮಳೆಗಾಲ ಬಂತು ಅಂದ್ರೆ ಸಾಕು ಜನ ಗದ್ದೆಮೀನು ಹಿಡಿಯೋದಕ್ಕೆ ಕೂಳೆ ತಗೊಂಡು ಗದ್ದೆ ಕಡೆ ಹೊರಟುಬಿಡ್ತಿದ್ರು. ಯಾವ ಗದ್ದೆ ನೋಡಿದ್ರೂ ಕೂಳೆನೇ. ನಾನೂ ಸಹ ನಮ್ಮ ತಾತನ ಜೊತೆ ಕೂಳೆ ತಗೊಂಡು ನಮ್ಮ ಗದ್ದೆಗೆ ಹೊರಟುಬಿಡ್ತಿದ್ದೆ. ಬೆಳಗ್ಗೆ ಹಾಕಿದ್ರೆ ಮಧ್ಯಾಹ್ನನೋ ಸಂಜೆನೋ ಬಂದು ತಗೊಂಡು ಹೋಗ್ಬೇಕಿತ್ತು.
ಕೂಳೆ ಹಾಕಿ ಮನೆಗೆ ಹೋಗಿ ಅರ್ಧ ಗಂಟೆ ಆಗಿರ್ತಿರ್ಲಿಲ್ಲ ನಮ್ಮ ತಾತಂಗೆ ನಡಿ ತಾತ ಹೋಗಣ ಅಂತಿದ್ದೆ, ನಂಗೆ ತರ ತರಹದ ಮೀನು ನೋಡೋ ಆಸೆ. ನಮ್ಮ ತಾತ ತಡಿ ಮಗ ಸ್ವಲ್ಪ ಹೊತ್ತು ಬಿಟ್ಟು ಹೋಗೋಣ ಅಂತ, ಅವ್ರಿಗೆ ಜಾಸ್ತಿ ಮೀನು ಬೀಳಲಿ ಅಂತ ಆಸೆ. ಅಂತೂ ತಾತನ ಆಸೆಯೇ ಯಾವಾಗ್ಲೂ ಗೆಲ್ತಿತ್ತು (ಮನೆಯವರೆಲ್ಲರೂ ಮೀನು ತಿನ್ನಬೇಕಲ್ಲ, ನನ್ನ ಆಸೆ ಗೆದ್ರೆ ನಾನೊಬ್ನೇ ತಿನ್ನಬೇಕಾಗತ್ತೆ.
ಗದ್ದೆಗೆ ಹೋಗಿ, ನಮ್ಮ ತಾತ ಕೂಳೆ ತೆಗೀತಾ ಇದ್ರೆ ನಾನು ಆ ಬಣ್ಣ ಬಣ್ಣದ ಮೀನುಗಳು ಅವು ಕುಣಿದಾಡೋದನ್ನ ನೋಡ್ತಿದ್ದೆ. ನಮ್ಮಜ್ಜ ಎಲ್ಲಾ ಮೀನು ತೆಗೆದಾದ ಮೇಲೆ ಗದ್ದೆಯಲ್ಲಿ ಇನ್ನೂ ಮೀನು ಇದ್ರೆ ಮತ್ತೆ ಕೂಳೆ ಹಾಕ್ತಿದ್ರು, ಮಾರನೇ ದಿನದ ಊಟಕ್ಕೆ :).
ನಮ್ಮಮ್ಮ ಕಾರ ರೆಡಿ ಮಾಡ್ಕೊಂಡು ಕಾಯ್ತಿದ್ರು, ಅಕಸ್ಮಾತ್ ಮೀನು ಬಿದ್ದಿಲ್ದೆ ಇದ್ರೆ ಅದೇ ಕಾರ ತರಕಾರಿ ಸಾರಿಗೆ :)
ಇನ್ನೋ ತಿನ್ನೋ ವಿಷಯ, ಆಹಾ ಗದ್ದೆಮೀನು ಸಾರು, ಅಕ್ಕಿ ರೊಟ್ಟಿ ಇದ್ರೆ ಸ್ವರ್ಗ ಸುಖ. ಯಾವ ಮೀನು ಸಾರು ಸಹ ಗದ್ದೆಮೀನಿನ ಸಾರಿಗೆ ಪೈಪೋಟಿ ಕೊಡೋಕಾಗಲ್ಲ.
ಒಮ್ಮ್ಮೆ ಹಿಂಗಾಯ್ತು, ಬೆಳಗ್ಗೆ ನಾನು,ತಾತ ಕೂಳೆ ತಗೊಂಡು ನಮ್ಮ ಗದ್ದೆಗೆ ಹೋಗಿ ಹಾಕಿಬಂದ್ವಿ. ಸಾಯಂಕಾಲ ಹೋದ್ವಿ, ನಾನು ಗದ್ದೆ ಬದಿಯಲ್ಲಿ ಕೂತಿದ್ದೆ. ನಮ್ಮಜ್ಜ ಕೂಳೆ ಎತ್ತೋವಾಗ ಯಾಕೋ ತುಂಬಾ ಭಾರ ಇದೆ, ಬಾರೀ ಮೀನು ಬಿದ್ದಿರ್ಬೇಕು ಕಣೋ ಅಂತ ಕೂಳೆಯ ಕೆಳಗಿದ್ದ ಬಟ್ಟೆ ತೆಗೆದ್ರು, ಇದ್ದಕಿದ್ದಂತೆ ಕೇರೆ ಹಾವೊಂದು ಹೊರಗೆ ಬರಬೇಕೇ, ನಾನು ಎದ್ನೋ ಬಿದ್ನೋ ಅಂತ ಪರಾರಿ, ನಮ್ಮ ಗದ್ದೆಯ ಇನ್ನೊಂದು ತುದಿಯಲ್ಲಿದ್ದೆ. ನಮ್ಮ ತಾತ ಕೂಗಿದಾಗ್ಲೇ ಅಲ್ಲಿಗೆ ಹೋಗಿದ್ದು. ಅವ್ರು ಕೂಳೆಯನ್ನ ಎಸೆದಿದ್ರು, ಹಾವು ಹೋಗಿತ್ತು ಸ್ವಲ್ಪ ಮೀನಿತ್ತು. ಇವತ್ತಿಗೆ ತರಕಾರಿ ಸಾರೇ ಗತಿ ಅಂದ್ಕೊಂಡು ಕೂಳೆ ಮತ್ತೆ ಹಾಕಿ ಮನೆಗೆ ಹೆಜ್ಜೆ ಹಾಕಿದ್ವಿ.
ಮಳೆಗಾಲ ಅಂದ್ರೆ ಜ್ನಾಪಕ ಬರೋ ಮತ್ತೊಂದು ವಿಷಯ ಅಂದ್ರೆ ಹಲಸಿನ ಗಾಳ (ಬೀಜ). ಮಳೆ ಬರೋಕೆ ಸ್ವಲ್ಪ ದಿನಗಳ ಹಿಂದೆ ತಿಂದ ಹಲಸಿನಹಣ್ಣಿನಲ್ಲಿ ಗಾಳಗಳನ್ನು ಬೇರೆ ಮಾಡಿ ಬಿಸಿಲಲ್ಲಿ ಒಣಗಿಸ್ತಿದ್ರು. ಅವು ಮಳೆಗಾಲಕ್ಕೆ ಉಪಯೋಗಕ್ಕೆ ಬರ್ತಿದ್ವು. ಕೆಂಡಕ್ಕೆ ಹಾಕಿ ಬೇಯಿಸ್ಕೊಂಡು ಆ ಮಳೆ, ಚಳಿಯಲ್ಲಿ ಅಡಿಗೆ ಮನೆಯಲ್ಲಿ ತಿನ್ತಾ ಕೂತ್ರೆ ಅದೆಷ್ಟು ಹೊಟ್ಟೆಗೆ ಹೋಗ್ತಿದ್ವೋ..
ಮನೆ ಕಡಾಯಕ್ಕೆ ಮಳೆಗಾಲದ ನೀರೇ (ಬೋರ್ವೆಲ್ಗೆ ಹೋಗಿ ಆ ಮಳೆಯಲ್ಲಿ ನೆನೆದು ಯಾರು ನೀರು ತರ್ತಾರೆ). ಹೆಂಚಿನ ಕೆಳಗೆ ಕೊಡ ಇಟ್ಟು ಆ ಕೊಡಕ್ಕೆ ಬೀಳೋ ನೀರು ನೋಡೋದೇ ಪರಮಾನಂದ, ತುಂಬಿದ ತಕ್ಷಣ ಬಚ್ಚಲುಮನೆಯ ಕಡಾಯಕ್ಕೆ ಹೋಗಿ ಹಾಕ್ಬೇಕು, ಒಂದೊಂದ್ಸಲ ನೀರು ತಗೊಂಡು ಹೋಗೋವಾಗ ಚಾವಡಿ ಅಥವಾ ನಡುಮನೆಯಲ್ಲಿ ಜಾರಿಬಿದ್ದು ಕೈ ಕಾಲು ಮುರಿದುಕೊಂಡ ಪ್ರಸಂಗಗಳು, ಕೊಡ ಒಡೆದ ಪ್ರಸಂಗಗಳು ಆಗಿದ್ದುಂಟು. ಕೈ ಕಾಲು ಮುರಿದಾಗ ಸುಮ್ನಿರ್ತಿದ್ದವರು ಕೊಡ ಒಡೆದಾಗ ಮಹಾ ಮಂಗಳಾರತಿ ಮಾಡ್ತಿದ್ರು :)
ಶಾಲೆಗೆ 5 ಕಿ.ಮೀ ನಡೆದುಕೊಂಡು ಹೋಗ್ಬೇಕಾಗಿತ್ತು, ಮಳೆಗಾಲದಲ್ಲಿ ತೋಟದಲ್ಲಿ (ಬೇರೆಯವರದ್ದು) ಹಲಸಿನಹಣ್ಣು, ಕಿತ್ತಲೆಹಣ್ಣು, ಮೂಸಂಬಿ ಇರ್ತಿದ್ವು. ಬೆಳಗ್ಗೆ ಹೋಗೋವಾಗ, ಲೇ ಸಾಯಂಕಾಲ ಈ ಮರಕ್ಕೆ ಹೋಗೋಣ ಕಣ್ಲ ಅಂತ ಸ್ಕೆಚ್ ಹಾಕ್ತಿದ್ವಿ, ಸಾಯಂಕಾಲ ಆ ಮರದ ತಿಥಿ, ಕೆಲವೊಮ್ಮೆ ನಮಗಿಂತ ಮೊದಲು ಬಂದ ಹುಡುಗರು ತಿಥಿ ಮಾಡಿರ್ತಿದ್ರು :)
ಹಿಂಗೆ ಒಂದ್ಸಲ, ನಾನು ನನ್ನ ಫ್ರೆಂಡ್ ಸಾಯಂಕಾಲ ಒಬ್ರ ತೋಟಕ್ಕೆ ನುಗ್ಗಿ, ಅವ್ನು ಹಲಸಿನಮರ ಹತ್ತಿದ್ದ, ನಾನು ಕೆಳಗೆ ಕಾಯ್ತಿದ್ದೆ. 2 ಬಿಳುವ ಹಣ್ಣು ಇದೆ ಕಣೋ ಅಂದ, ಸರಿ ಇಳಿಸ್ಕೊಂಡು ಬಾ ಅಂತ ಅಂದೆ ಅಷ್ಟೊತ್ತಿಗೆ ಎಲ್ಲಿದ್ರೋ ತೋಟದ ಯಜಮಾನ, ನನ್ನ ಎದುರಿಗೆ ಬಂದು ನಿಲ್ಲೋದಾ.
ನಾನು ಎಸ್ಕೇಪಾಗೋಣ ಅಂದ್ರೆ ಅವ್ನು ಮೇಲಿದ್ದಾನೆ, ಫ್ರೆಂಡ್ ಬೇರೆ ಬಿಡೋ ಹಾಗಿಲ್ಲ, ಅಕಸ್ಮಾತ್ ಎಸ್ಕೇಪಾದ್ರೂ ಮುಂದೊಂದು ದಿನ ನಾನು ಮರ ಹತ್ತಿದ್ರೆ ಈ ನನ್ಮಗ ಕೈ ಕೊಟ್ಟೇ ಕೊಡ್ತಾನೆ, ಇನ್ನೇನು ಮಾಡೋದು ಅಂತ ಸುಮ್ನೆ ನಿಂತೆ.
ಅಷ್ಟರಲ್ಲಿ ನಾಲ್ಕೈದು ಏಟು ಪಟ ಪಟ ಬಿದ್ದ ಹಾಗಾಯ್ತು, ಯಾವ್ದೋ ಸೊಪ್ಪು ಮುರ್ಕೊಂಡು ಒಂದೆರಡು ಏಟು ಬಾರ್ಸಿದ್ರು ನಂಗೆ, ಅವ್ನು ಇಳಿಯೋಕೆ ಮೀನ ಮೇಷ ಎಣಿಸ್ತಿದ್ದ, ಇವ್ರೊಂದು ಆವಾಜ್ಃ ಹಾಕಿದ್ರು, 2 ಹಲಸಿನಹಣ್ಣನ್ನು ಇಟ್ಕೊಂಡು ನಿಧಾನ ಇಳಿದ. ಅವ್ನಿಗೂ ಒಂದೆರಡು ಬಿದ್ವು.
'ಇದೇ ಕೆಲ್ಸ ಮಾಡ್ರೋ, ಸ್ಕೂಲ್ ಮುಗಿಸಿ ತೆಪ್ಪಗೆ ಮನೆಗೆ ಹೋಗೋದು ಬಿಟ್ಟು ಕದಿಯೋಕೆ ಹೋಗ್ತೀರಲ್ಲೋ ಅಂದ್ರು, ಇನ್ನೊಂದ್ಸಲ ಹಿಂಗೆ ಮಾಡಿದ್ರೆ ಗೊತ್ತಲ್ಲ ಅಂದ್ರು' ನಾವು ಏನೂ ಹೇಳದೆ ಸುಮ್ನೆ ನಿಂತಿದ್ವಿ.
ಆಮೇಲೆ ಅವ್ರೇ ಹಲಸಿನಹಣ್ಣನ್ನು ಬಗೆದು ನಮ್ಗೆ ಸ್ವಲ್ಪ ಕೊಟ್ರು, ನಾವು ಏನೂ ಮಾಡದೇ ಸುಮ್ನೆ ನಿಂತಿದ್ವಿ.ತಿನ್ರೋ ಅಂದ್ರು, ಅವ್ರೊಟ್ಟಿಗೆ ತಿಂದು ಮನೆಗೆ ಓಡಿದ್ವಿ.
ಇನ್ನು ಶಾಲೆಯಲ್ಲಿ, ಯಾವಾಗ ಸಾಯಂಕಾಲ ಆಗತ್ತೋ ಯಾವಾಗ ಪಿ.ಇ ಕ್ಲಾಸ್ ಶುರುವಾಗತ್ತೋ ಅಂತ ಕಾಯ್ತಿದ್ವಿ. ಆ ಟೈಮ್ ಬಂದ ತಕ್ಷಣ ಫೀಲ್ಡ್ಗೆ ಎಸ್ಕೇಪ್. ಕಬಡ್ಡಿ, ಕೋ ಕೋ ಆಡಿ ನಮ್ಮ ಬಣ್ಣ, ಬಟ್ಟೆಯ ಬಣ್ಣ ಗದ್ದೆಯಲ್ಲಿ ಮಳೆಗಾಲದಲ್ಲಿ ಕೆಲಸ ಮಾಡೋರಿಗೆ ಸ್ಪರ್ಧೆ ಕೊಡೋ ಹಾಗಿರ್ತಿತ್ತು.
ಜೂನ್ ಜುಲೈ ತಿಂಗಳಿರಬಹುದು, ಮಳೆಗಾಲದ ಸಮಯ. ಒಂದ್ಸಲ ನಮ್ಮ ಮನೆಯ ಮಂಜ ಮಧ್ಯಾಹ್ನಕ್ಕೆ ಬೇಸಾಯ ಮುಗಿಸಿದ. ನಾನು ಊಟ ಮಾಡ್ಕೊಂಡು ಗದ್ದೆಗೆ ಹೋದೆ. ಮಂಜ ಇದ್ದವನು, ಗೌಡ್ರೇ ಚೆನ್ನಾಗಿ ಮೇಯ್ಸಿ ನಾಳೆನೂ ಬೇಸಾಯ ಮಾಡ್ಬೇಕು ಅಂದ. ಹೂಂ ಆಯ್ತು ಊಟಕ್ಕೆ ಮನೆಗೆ ಹೋಗು ಅಂದೆ.
ಮಾಮೂಲಿಯಂತೆ ದನ ಕಾಯಬೇಕಾದ ಕೆಲಸ ನನಗೆ ಬಂತು (ಶನಿವಾರ, ಭಾನುವಾರ ಬೇಸಾಯ ಆದ್ಮೇಲೆ ನಮ್ಮ ಕೆಲಸ ದನ ಕಾಯೋದೇ).
ಸರಿ ಅವ್ನು ಎತ್ತು ಬಿಟ್ಟಾದ ಮೇಲೆ ನಾನು ಬಸವ ಮತ್ತೆ ಹಂಡ (ಎತ್ತುಗಳ ಹೆಸರು) ಕಾಯ್ತಾ ಕೂತೆ, ಎಲ್ಲೋ ದೂರದಲ್ಲಿ 4 5 ಹುಡುಗ್ರು ಗೋಲಿ ಆಡ್ತಿದ್ರು. ಆಗೆಲ್ಲಾ ಮನೆ ಬಿಡೋವಾಗ್ಲೇ ಜೇಬಲ್ಲಿ ಗೋಲಿ ಇಟ್ಕೊಂಡು ಹೋಗ್ತಿದ್ವಿ, ನನ್ನ ಜೇಬಲ್ಲೂ ಗೋಲಿ ಇದ್ವು.
ಎತ್ತು ಅಲ್ಲೇ ಬಿಟ್ಟು ಆಡೋಕೆ ಹೋಗೋಣ ಅಂದ್ಕೊಂಡು ಹೊರಟೆ. ಸುಮಾರು 1 ಗಂಟೆ ಆಡಿರಬಹುದು, ಸಂಜೆ 4 ಆಗಿತ್ತು ಅನ್ಸತ್ತೆ. ಎತ್ತು ಇದವೇನೋ ಅಂತ ಕಣ್ಣು ಹಾಯ್ಸಿದ್ರೆ, ಹಂಡ ನಾಪತ್ತೆ.
ಈ ಪರಿಸ್ಥಿಥಿಯಲ್ಲಿ ಮನೆಗೆ ಹೋದ್ರೆ ನಮ್ಮಪ್ಪ ನನ್ನ ತಿಥಿ ಮಾಡ್ತಾರೆ ಹಾಗಾಗಿ ಬಸವನ್ನ ಹಟ್ಟಿಗೆ ಕಟ್ಟಿ ಹಂಡನನ್ನ ಹುಡ್ಕೋಕೆ ಹೋದ್ರೆ ಆಯ್ತು ಅಂತ ಅವ್ನನ್ನ ಹೊಡ್ಕೊಂಡು ಮನೆ ಕಡೆ ಹೆಜ್ಜೆ ಹಾಕಿದೆ.
ನಮ್ಮ ಬೀದಿಯಲ್ಲಿ ನಮ್ದೇ ಕೊನೇ ಮನೆ, ನಮ್ಮ ಮನೆ ಹತ್ತಿರ ಎಡದೆ ಕಡೆ ಹೋದ್ರೆ ತೋಟಕ್ಕೆ ಹೋಗಬಹುದು, ಬಲಕ್ಕೆ ಹೋದ್ರೆ ಹಟ್ಟಿಗೆ. ಬೇಗ ಬೇಗ ಹೆಜ್ಜೆ ಹಾಕ್ತಿದ್ದೆ ನಮ್ಮಪ್ಪ ಮೇಲಿಂದನೇ ನೋಡಿದ್ರು,
ಅವ್ರಿಗೆ ಗೊತ್ತಾಯ್ತು ಈ ನನ್ಮಗ ಎಲ್ಲೋ ಆಡೋದಕ್ಕೆ ಹೋಗಿದ್ದಾನೆ ಹಾಗಾಗಿ ಹಂಡ ಓಡಿಹೋಗಿದೆ ಅಂತ.
ಕೈಲಿ ಕಡಲೆಕಡ್ಡಿ ಬರ್ಲು (ಪರ್ಕೆ, ಹಿಡ್ಲು) ಇಟ್ಕೊಂಡು ಮೆಟ್ಟಿಲು ಇಳಿತಿದ್ರು. ನಾನು, ಇನ್ನು ಇಲ್ಲೇ ಇದ್ರೆ ನನ್ನ ಗ್ರಹಚಾರ ನೆಟ್ಟಗೆ ಇರೋಲ್ಲ ಅಂದ್ಕೊಂಡು, ತೋಟಕ್ಕೆ ನುಗ್ಗಿದೆ (ಮಳೆ ಅಲ್ವ ನಮ್ಮಪ್ಪ ಬರೋಲ್ಲ ಅಂದ್ಕೊಂಡು) ಆದ್ರೆ ನೋಡ್ತೀನಿ ಹಿಂದೆ ನನ್ನನ್ನೇ ಅಟ್ಟಿಸ್ಕೊಂಡು ಬರ್ತಿದ್ರು
ಒಂದು 20 ನಿಮಿಷೆ ಬೆರ್ಸಿರಬಹುದು, ನಾನಂತೂ ಹಿಂದೆ ನೋಡದೆ ಬರೀ ಶಬ್ಧದ ಗ್ರಹಿಕೆಯಿಂದಲೇ ಸುಮ್ನೆ ಓಡ್ತಿದ್ದೆ (ನಾನು ಹಾಗೆ ಓಡ್ತಿದ್ದನ್ನ ನೋಡಿದ ನಮ್ಮ ಮನೆಯ ಚಿಕ್ಕ ಈಗ್ಲೂ ನೆನೆಸಿಕೊಂಡು ನಗಾಡ್ತಿರ್ತಾನೆ). ಸ್ವಲ್ಪ ಹೊತ್ತಾದ ಮೇಲೆ ತಿರುಗಿ ನೋಡಿದೆ, ನಮ್ಮಪ್ಪ ಸುಸ್ತಾಗಿ ನಿಂತಿದ್ರು. ಇನ್ನು ವಾಪಸ್ ಮನೆಗೆ ಹೋದ್ರೆ ಹೊಡ್ದೇ ಹೊಡೀತಾರೆ ಅಂದ್ಕೊಂಡು ಸಾಯಂಕಾಲದ ಹೊತ್ತಿಗೆ ಸಿಟ್ಟು ಸ್ವಲ್ಪವಾದ್ರೂ ಕಡಿಮೆ ಆಗಿರತ್ತೆ ಅಂದ್ಕೊಂಡು ಕೆಳಗಿರೋ ನಮ್ಮಣ್ಣನ ಮನೆಗೆ ಕದ್ದು ಹೋದೆ.
ರಾತ್ರಿ ವಾಪಸ್ ಮನೆಗೆ ಬಂದೆ, ಸದ್ಯ ಅಪ್ಪನ ಕೈಲಿ ಕಡಲೆಕಡ್ಡಿ ಬರ್ಲು ಇರ್ಲಿಲ್ಲ. ಸ್ವಲ್ಪ ಹೊತ್ತು ಕಾಯ್ದಿದ್ದು ಅನುಕೂಲನೇ ಆಯ್ತು, ಒದೆ ತಿನ್ನೋದ್ರಿಂದ ಉಳಿದುಕೊಂಡೆ. ಆದ್ರೆ ಬೈಗುಳ ಎದುರಿಸುವುದಕ್ಕೆ ಸಿದ್ಧನಾಗಬೇಕಿತ್ತು, ನನ್ನನ್ನು ನೋಡಿದ್ದೆ ತಡ 'ಹೊಟ್ಟೆಗೆ ಅನ್ನ ತಿಂತೀರೋ .... ತಿಂತೀರೋ, ನಿಮ್ಗೆಲ್ಲ ಯಾಕೆ ಬೇಕು ಗದ್ದೆ ತೋಟ, ಹೇಳೋ ಒಂದು ಕೆಲ್ಸನೂ ನೆಟ್ಟಗೆ ಮಾಡೋಲ್ಲ, ನಾಳೆಗೆ ಬೇಸಾಯಕ್ಕೆ ಏನು ಮಾಡೋದು ಈಗ. ಬೆಳ್ಗೆ ಬೇಗ ಎದ್ದು ಕಾಲೋನಿಗೆ ಹೋಗಿ ಮಂಜ, ಚಿಕ್ಕನ್ನ ಕರ್ಕೊಂಡು ಬಾ ಅಂತ ಅಂದ್ರು. ಮಲೆನಾಡಲ್ಲಿ ಅದೂ ಮಳೆಗಾಲದಲ್ಲಿ ಬೆಳ್ಗೆ 6ಕ್ಕೆ ಎದ್ದು ಹೋಗೋದು ಬಾರೀ ಕಷ್ಟದ ಕೆಲಸ. ಆ ಚಳಿಗೆ, ರಗ್ಗು ಹೊದ್ಕೊಂಡು ಮಲ್ಗಿದ್ರೆ ಎದ್ದೇಳೋಕೆ ಮನ್ಸೇ ಬರೋಲ್ಲ. ಏನು ಮಾಡೋದು, ವಿಧ್ ಇಲ್ಲ 'ನಾ ಮಾಡಿದ ಕರ್ಮ ಎನಗೆ' ಅಂದ್ಕೊಂಡು ಮಾರನೇ ದಿನ ಬೇಗ ಎದ್ದು ಹೋಗಿ ಅವ್ರಿಗೆ ಹೇಳಿ ಬಂದೆ.
ಒಂದೆರಡು ದಿನಗಳಾದ ಮೇಲೆ ಹಂಡ ಯಾರ್ದೋ ತೋಟದಲ್ಲಿ ಸಿಕ್ತು.
ಮಳೆಗಾಲದಲ್ಲಿ, ತೋಟಗಳಲ್ಲಿ ಚಕೋತ ಮೂಸಂಬಿ ಕಿತ್ತಲೆ ತುಂಬಾ ಹಣ್ಣುಗಳು ಇರ್ತಿದ್ವು. ನಮ್ಮ ಏರಿಯಾದಲ್ಲಿ ನಾವೊಂದು ಏಳೆಂಟು ಮಕ್ಕಳದ್ದೇ ಕಾರುಬಾರು. ಸಾಮಾನ್ಯವಾಗಿ, ಬೇರೆಯವರ ತೋಟದಲ್ಲಿ ಕದಿಯಬೇಕಾದ ಪ್ರಸಂಗ ಬರ್ತಿತ್ತು. ಮರ ಹತ್ತುವುದರಲ್ಲಿ ಪಳಗಿದ್ದ ನಾನು (ಈಗ ಮರೆತುಹೋಗಿದೆ) ಹತ್ತಿ ಹಣ್ಣುಗಳನ್ನು ಕೀಳಬೇಕಾಗುತ್ತಿತ್ತು. ಒಂದಿನ ಎಲ್ಲಾ ಸೇರಿ, ಒಂದು ತೋಟಕ್ಕೆ ನುಗ್ಗಿದೆವು (ಒಳ್ಳೆ ಕಾಡೆಮ್ಮೆ, ಕಾಡು ಕೋಣ ಹೋಗೋ ರೀತಿ ಹೇಳ್ತಾನಲ್ಲ ಅಂದ್ಕೊಂಡಿದ್ರೆ, ನಿಜ, ಹಾಗೇ ನುಗ್ತಿದ್ವಿ).