Wednesday, September 14, 2011

ಬೆಂಗಳೂರಲ್ಲೊಂದಿನ - ೨

ಮೆಜೆಸ್ಟಿಕ್ನಲ್ಲಿ ಇಳಿದು ೧೩೮ ನಂ. ಬಸ್ ಹಿಡಿದು ಕುಳಿತೆ. ಜಾಸ್ತಿ ಜನ ಇರ್ಲಿಲ್ಲ. ಕಂಡಕ್ಟರ್ ಎಲ್ಲರ ಹತ್ತಿರ ಟಿಕೆಟ್/ಪಾಸ್ ಕೊಡ್ತಾ ಚೆಕ್ ಮಾಡ್ತಾ ಬರ್ತಿದ್ದ. ಸೀನಿಯರ್ ಸಿಟಿಜನ್ ಸೀಟಲ್ಲಿ ಕುಳಿತಿದ್ದ ಒಬ್ಬ ವಯಸ್ಸಾದ ವ್ಯಕ್ತಿಯೊಬ್ರು ಇಂದಿರಾನಗರಕ್ಕೆ ಒಂದು ಟಿಕೆಟ್ ಕೊಡ್ರೀ ಅಂದ್ರು.
ಕಂಡಕ್ಟರ್ ಇನ್ನೇನು ಟಿಕೆಟ್ ಕೊಡ್ಬೇಕು ಸೀನಿಯರ್ ಸಿಟಿಜನ್ ಅಂದ್ರು. ಇವ್ನಿಗೂ ಸಿಟ್ಟು ಬಂತು.
ಅಲ್ರೀ ಮೊದ್ಲು ಅದ್ನ ಹೇಳಿ ಆಮೇಲೆ ಟಿಕೆಟ್ ಕೇಳೋದಲ್ವ?
ಆ ವಯ್ಯ ಬಾಯಲಿದ್ದ ಕೆಲವೇ ಕೆಲವು ಹಲ್ಲುಗಳನ್ನು ತೋರಿಸ್ತಿದ್ರು.
ಹಿಂಗೆ ನಗಾಡಿದ್ರೆ ಏನ್ರೀ ಉತ್ರ?

ಆಗ ನಾನು 'ಕಂಡಕ್ಟರ್ರೆ, ವಯಸ್ಸಾದವರನ್ನ ನೀವು ನೋಡಿದ ತಕ್ಷಣವೇ ಗುರುತಿಸೋ ಹಾಗೆ ಒಂದು ಐಡೆನ್ಟಿಟಿ ಇರ್ಬೇಕು, ಅಲ್ವ?'
'ಹೂಂ ಸಾರ್, ಹಾಗಿದ್ದಿದ್ರೆ ಬಾರೀ ಅನುಕೂಲ ಆಗ್ತಿತ್ತು, ನಮ್ಗ್ಯಾವಾಗ್ಲೂ ಇದ್ಹೇ ಪ್ರಾಬ್ಲಂ, ಅರ್ಧಕ್ಕರ್ಧ ಜನಕ್ಕೆ ಮರೆವು ಜಾಸ್ತಿ'
'ಅದೇ ಮತ್ತೆ ಅದ್ಕೆ ನಾನು ಹೇಳಿದ್ದು, ಹೇಗಿರ್ಬೇಕು ಅಂದ್ರೆ ಬಿಳೇ ಕೂದ್ಲು ನೋಡಿದ ತಕ್ಷಣ ಇವ್ರು ಸೀನಿಯರ್ ಸಿಟಿಜನ್ ಅಂತ ಗೊತ್ತಾಗ್ಬೇಕು'
'ಹೌದು ಸಾರ್, ಒಳ್ಳೆ ಐಡಿಯಾ, ನಮ್ಮ ಮೇಲಧಿಕಾರಿಗಳಿಗೆ ಹೇಳ್ಬೇಕು'
'ಆದ್ರೆ ಒಂದು ತೊಂದ್ರೆ ಇದೆ'
'ಅದೇನ್ಸಾರ್'
'ಈಗ ವಯಸ್ಸು ೭೦ ಆದ್ರೂ ಕೂದ್ಲು ಬೆಳ್ಳಗೆ ಆಗಲ್ಲ, ಮಾರ್ಕೆಟ್ನಲ್ಲಿ ಏನೇನೋ ಇದೆ ನೋಡಿ ಕರ್ರಗೆ ಮಾಡ್ಕೊಳ್ಳೋಕೆ'
'ಓ ಹೌದಲ ಸಾರ್'
ನಮ್ಮ ಮಾತು ಕೇಳಿಸ್ಕೊಳ್ತಿದ್ದ ಸೀನಿಯರ್ ಸಿಟಿಜನ್ ನನ್ನ ಕೊನೆ ಮಾತು ಕೇಳಿ, ನನ್ನನ್ನ ದೂರ್ವಾಸ ಮುನಿ ನೋಡಿದ ಹಾಗೆ ನೋಡ್ತಿದ್ರು. ಯಾಕೋ ಎಡವಟ್ಟಾಗ್ತಿದೆ ಅಂತ ಬ್ಯಾಗಲಿದ್ದ ಇಯರ್ ಫೋನ್ ತೆಗ್ದು ಮೊಬೈಲಿಗೆ ಸಿಕ್ಕಿಸಿ ಆಮೇಲೆ ನನ್ನ ಕಿವಿಗೆ ಚುಚ್ಕೊಂಡೆ.

ಬಸ್ ಇಂದಿರಾನಗರದ ಸಿಗ್ನಲ್ ಹತ್ರ ಬಂದಾಗ, ರೇಡಿಯೋ ಜಾಕಿ ತನ್ನ ಮಾತು ಮುಗಿಸ್ತಿದ್ಲು.
ಒಂದು ಸುಂದರವಾದ ಹುಡ್ಗಿ ಅಡ್ಡರಸ್ತೆಯಿಂದ ನಡ್ಕೊಂಡು ಬರ್ತಿದ್ಲು, ತುಂಬಾನೇ ಚೆನ್ನಾಗಿದ್ಳು, ನಾನೂ ಅವಳನ್ನೇ ನೋಡ್ತಿದ್ದೆ, ನನ್ನನ್ನೂ ನೋಡಲಿ ಅಂತ ದೂರದ ಆಸೆ.
ಕಣ್ಣು ಕಣ್ಣು ಬೆರೆತಾ.......(ಮೊಬೈಲ್ನಲ್ಲಿದ್ದ ಚಾರ್ಜ್ ಕುಸಿದು ಮೊಬೈಲ್ ನಿದ್ರೆಗೆ ಶರಣಾಗಿತ್ತು) ಅವ್ಳು ಇನ್ನೇನು ನನ್ನನ್ನ ಕತ್ತೆತ್ತಿ ನೋಡ್ಬೇಕು................ಥತ್ತೆರಿಕೆ :( :( ಅಷ್ಟೊತ್ತಿಗೆ ಸಿಗ್ನಲ್ ಫ್ರೀ ಆಯ್ತು, ಬಸ್ ಹೊರಡ್ತು.

ಜೀವನ್ ಭೀಮಾ ನಗರ್ ತಲುಪಿ ಆಫೀಸಿಗೆ ೩ ಫ್ಲೋರ್ ಹತ್ತಿ ನನ್ನ ಜಾಗಕ್ಕೆ ಹೋಗಿ ಕೂತೆ.

ಸಿಸ್ಟಂಗೆ ಲಾಗಿನ್ ಆಗಿ ಕೆಲಸ ಶುರು ಮಾಡಿದೆ. ಹಾಗೆ ಹೆಡ್ ಫೋನ್ ಕಿವಿಗೆ ಸಿಕ್ಕಿಸಿಕೊಂಡು ಹಳೆ ಹಾಡುಗಳನ್ನ ಕೇಳ್ತಾ ಕೆಲ್ಸ ಮಾಡ್ತಿದ್ದೆ.
ಸ್ವಲ್ಪ ಹೊತ್ತಾದ್ಮೇಲೆ ಸೌಜ ಬಂದ.
ಕೆಲ್ಸ ನಡೀತಿತ್ತು, ಸೌಜ ಎಲ್ಲೋ ಎದ್ದು ಹೋದ.

'ಏನೋ ಸಂತೋಷ, ಏನೋ ಉಲ್ಲಾಸ, ಏನೋ ವಿಶೇಷ ಈ ದಿನ..... ಹಾಡು ಬರ್ತಿತ್ತು.
ಯಾರೋ ಹಿಂದಿಂದ ಬಂದು ಬೆನ್ನು ತಟ್ಟಿದ್ರು, ತಿರುಗಿ ನೋಡಿದ್ರೆ ಸೌಜ. ಹೆಡ್ ಫೋನ್ ತೆಗೆದು 'ಏನಪ್ಪಾ?'
ಡ್ಯಾಮೇಜರ್ (ಮ್ಯಾನೇಜರ್) ಕರೀತವ್ನೆ ಹೋಗು, ಒಳ್ಳೆ ಗಿಫ್ಟ್ ಕಾದಿದೆ ನೋಡು.
ಇರ್ಬೇಕು, ಆ ಟೈಮಿಗೆ ಕರೆಕ್ಟ್ ಹಾಡು ಬೇರೆ ಬರ್ತಿದೆ!!

ಸರಿ ಅಂತ ಮ್ಯಾನೇಜರ್ ರೂಮಿಗೆ ಹೋದೆ.
ನಗಾಡ್ತಾ ವೆಲ್ಕಂ ಅಂದ.
ಸಂತೋಷದಿಂದಲೇ ಹೋಗಿ ಕೂತೆ. ಕರುಣೆ ಬಂದಿದೆ ಮಗ್ನಿಗೆ ಅನ್ಸತ್ತೆ, ಈ ಸೈಕಲ್ಲಾದ್ರೂ ಒಳ್ಳೆ ಹೈಕ್ ಕೊಡ್ತಾನೆ ಅನ್ಸತ್ತೆ ಅಂದ್ಕೊಂಡು ಖುಷಿಯಿಂದಿದ್ದೆ.
ಒಂಧರ್ಧ ಘಂಟೆ ಅದೂ ಇದೂ ಅಂತ ಕಥೆ ಕುಯ್ದ, ಕಂಪನಿ ಗ್ರೋತ್ ಚೆನ್ನಾಗಿದೆ, ಕೆಲ್ಸ ಚೆನ್ನಾಗಿ ಮಾಡ್ಬೇಕು (ಇಷ್ಟು ದಿನ ಏನು ಬೇಕಾಬಿಟ್ಟಿ ಮಾಡ್ತಿದ್ವ).....

ಅದೆಲ್ಲ ಸರಿ ತಂದೆ, ಮೈನ್ ಮ್ಯಾಟರ್ಗೆ ಬಾರಪ್ಪ ಅಂತ ಮನಸಲ್ಲೇ ಅಂದ್ಕೊಂಡೆ.

ಅಂತೂ ಬಂದ ಪುಣ್ಯಾತ್ಮ.
ಇದೊಂದೆರಡು ಕ್ವಾರ್ಟರ್ ಕಂಪನಿನಲ್ಲಿ ಅಷ್ಟೊಂದು ಗ್ರೋತ್ ಇಲ್ಲ, ಹಾಗಾಗಿ ಸ್ಯಾಲರಿ ಹೈಕ್ ಕೆಲವರಿಗೆ ಮಾತ್ರ ಕೊಡ್ತಿರೋದು, ಅದ್ರಲ್ಲಿ ನೀನೂ ಒಬ್ಬ.
ಅದ್ಹೆಂಗೆ ಇಷ್ಟು ಒಳ್ಳೆ ಬುದ್ಧಿ ಬಂತಪ್ಪ ಇವನಿಗೆ, ಹಿಂಗೆಲ್ಲ ಹೇಳಿದ್ರೆ ಬಹುಶ ಒಂದು ೧೨-೧೫% ಇರತ್ತೆ ಅಂದ್ಕೊಂಡು ಓ ಕೆ ಅಂದೆ.
ಯಾರಿಗೂ ಅಷ್ಟು ಕೊಟ್ಟಿಲ್ಲ ನಿಂಗೆ ಜಾಸ್ತಿ
(ಹೌದಪ್ಪ, ಇದು ಕಾಮನ್ ಡೈಲಾಗ್ ಎಲ್ರಿಗೂ).
೩% ಹ್ಯಾಪಿ (ಈ ನನ್ಮಗ ಇವ್ನ ಪ್ಯಾಕೆಟಿಂದ ಕೊಡೋದಾಗಿದ್ರೆ ಏನು ಕಥೆ ಇರ್ತಿತ್ತೋ), ಯು ಶುಡ್ ಬಿ ಹ್ಯಾಪಿ, ಎನಿವೇ, ಆಲ್ ದ ಬೆಸ್ಟ್ ಮ್ಯಾನ್, ಕೀಪ್ ಅಪ್ ದ ಗುಡ್ ವರ್ಕ್.
ಥ್ಯಾಂಕ್ಸ್ ಅಂತ್ಹೇಳಿ ಎದ್ದು ಬಂದೆ.

ಬಾಗ್ಲು ತೆಗ್ದು ಹೊರ್ಗೆ ಬರ್ತಿದ್ದ ಹಾಗೆ ಸೌಜ ನನ್ನನ್ನೇ ನೋಡಿ ನಗ್ತಿದ್ದ.
ಲೇ, ಒಳ್ಳೆ ಹಾಡು ಕೇಳ್ತಿದ್ದೆ ಈಗ ನೋಡು 'ಇದು ಯಾರು ಬರೆದ ಕಥೆಯೋ ನನಗಾಗಿ ಬಂದ ವ್ಯಥೆಯೋ' ಹಾಡು ಕೇಳೋ ಹಾಗಾಗಿದೆ, ನೀನು ಅವ್ನು ಸೇರಿ ಮೂಡೇ ಹಾಳು ಮಾಡಿದ್ರಿ.
ಅಯ್ಯೋ, ನಾನು ಏನಂದೆ, ಅವ್ನು ಕರ್ದ ಹೋಗಪ್ಪ ಅಂದೆ.
ಹೋಗ್ಲಿ ಬಿಡು, ಬಾ ಹೊರ್ಗೋಗಿ ಕಾಫಿ ಕುಡ್ಕೊಂಡು ಬರೋಣ.
ಇಬ್ರೂ ಕೆಳಗೆ ಹೋಗಿ ಕಾಫಿ ಕುಡ್ಕೊಂಡು ನಮ್ಗೆ ಖುಷಿಯಾಗೊವರ್ಗೂ ಡ್ಯಾಮೇಜರ್ಗೆ ಬಯ್ದು ವಾಪಸ್ ಬಂದ್ವಿ.

Friday, September 9, 2011

ಬೆಂಗಳೂರಲ್ಲೊಂದಿನ - ೧

ಭೂಕಂಪ ಏನಾದ್ರೂ ಆಯ್ತಾ?? ಇಲ್ಲ, ನಾನು ಚೆನ್ನಾಗೆ ಇದೀನಲ್ಲ. ಮತ್ತೆ, ಏನದು ಸೌಂಡ್. ಡೈನಮೈಟ್ ಇರ್ಬಹುದಾ, ಛೆ ಚ್ಯಾನ್ಸೆ ಇಲ್ಲ. ನವರಂಗ್ ಹತ್ರ ಯಾವ ಕಲ್ಲು ಇದೆ ಸಿಡಿಸೋಕೆ. ಮಹಾಲಕ್ಷ್ಮಿ ಲೇ ಔಟ್ನಲ್ಲಿರೋ ಆಂಜನೇಯನಿಗೆ ಯಾರಾದ್ರೂ ಇಟ್ರಾ, ಇಲ್ಲ ಅಂತ ಕೆಲಸ ಯಾರೂ ಮಾಡಲ್ಲ. ಮತ್ತೇನದು?? ಮೆಟ್ರೋ ವರ್ಕಾ?? ಅಲ್ಲ, ಅದೂ ಇನ್ನೇನು ಮುಗೀತಾ ಬಂತು. ಇನ್ನೇನಪ್ಪ ಈ ತರ, ಅರ್ಧ ಗಂಟೆಯಿಂದ ನಿದ್ರೆ ಮಾಡೋಕೆ ಬಿಡ್ತಿಲ್ವಲ್ಲ ಈ ಸೌಂಡ್ ಅಂತ ಹಾಸಿಗೆಯಿಂದ ಎದ್ದು ಚಾವಡಿಗೆ ಬಂದೆ.

ಆಗ ಗೊತ್ತಾಯ್ತು ಇದು ಮೆಟ್ರೋ ವರ್ಕಲ್ಲ, ಮೀಟರ್ ವರ್ಕ್ ಅಂತ (ಪುಣ್ಯಾತ್ಮನ ಗೊರಕೆಯ ಸದ್ದು). ಲೇ ಅಂದೆ, ಸ್ವಲ್ಪ ಮಗ್ಗುಲು ಬದಲಿಸಿ ಮಲ್ಕೊಂಡ, ಸೌಂಡ್ ನಿಲ್ತು, ಎಷ್ಟೊತ್ತು ೨ ನಿಮ್ಷ ಮತ್ತೆ ಶುರು. ದೇವ್ರೇ ಕಾಪಾಡಪ್ಪ, ಸೌಂಡ್ ನಿಲ್ಸಪ್ಪ ಅಂತ ಬೇಡ್ಕೊಂಡೆ, ಇಲ್ಲ ಅವನಿಗೂ ಕರುಣೆ ಬರ್ಲಿಲ್ಲ. ಏನಪ್ಪಾ ಮಾಡೋದು ಅಂತ ಯೋಚನೆ ಮಾಡ್ತಿದ್ದಾಗ, ಅಕ್ಕ ಕೊಟ್ಟ ಹತ್ತಿ ನೆನಪಿಗೆ ಬಂತು. ತೆಗೆದು ಎರಡೂ ಕಿವಿಗೆ ಹಾಕಿಕೊಂಡೆ.

ಊಹ್ಮ್ಹ್, ಏನೂ ಉಪಯೋಗ ಇಲ್ಲ.
ಇನ್ನೇನು ಮಾಡೋಕಾಗಲ್ಲ ಅಂತ ಹಾಗೆ ಬಿದ್ಕೊಂಡೆ, ಅರ್ಧ ಗಂಟೆ ಆದ್ಮೇಲೆ ಸೌಂಡ್ ನಿಲ್ತು. ಸದ್ಯ ಬಚಾವಾದೆ ಅಂದ್ಕೊಂಡು ನಿದ್ರೆಗೆ ಶರಣಾದೆ. ಅವ್ನ ಗೊರಕೆ ವಿಚಾರದ ಬಗ್ಗೆ ಯಾರಾದ್ರೂ ಕೇಳಿದ್ರೆ, ಹೌದಾ?? ಗೊರಕೆ ಹೊಡಿತೀನಾ, ನಂಗೆ ಗೊತ್ತೇ ಆಗಲ್ಲ ಅಂತ ಕೇಳ್ತಾನೆ.
ಪಾಪ ಅವ್ನಿಗೆ ಗೊರಕೆ ಹೊಡೆಯೋವಾಗ ತಾನು ನಿದ್ರೆ ಹೋಗಿರ್ತೇನೆ ಅನ್ನೋದು ಗೊತ್ತಿರಲ್ಲ ಅನ್ಸತ್ತೆ.
…..........................................
ಕೌಸಲ್ಯ ಸುಪ್ರಜಾ ರಾಮ ಪೂರ್ವ ಸಂಧ್ಯಾ ಪ್ರವರ್ಥಥೆ ಉತ್ಹಿಷ್ಟ ನರಸರ್ದೂಲ ಕರ್ಥವ್ಯಂ.....
ಕರ್ಥವ್ಯಂ ಕರ್ಥವ್ಯಂ, ಧಿಡೀರನೆ ಎದ್ದೆ. ಕೆಲಸಕ್ಕೆ ಹೋಗಪ್ಪ ಅಂತ ಮೊಬೈಲ್ನಲ್ಲಿಟ್ಟಿದ್ದ ಅಲಾರಾಂ ಕೂಗ್ತಿತ್ತು, ಥತ್ತೆರಿಕೆ, ಆರಾಮಾಗಿ ನಿದ್ರೆ ಮಾಡೋಕೂ ಬಿಡಲ್ಲ, ಕರೆಕ್ಟ್ ಟೈಮಿಗೆ ಹೊಡ್ಕೊಳ್ಳತ್ತೆ.
ಪಾಪ! ಅದು ಏನು ಮಾಡತ್ತೆ, ಆ ಸಾಫ್ಟ್ವೇರ್ ಕರೆಕ್ಟಾಗೆ ಕೆಲಸ ಮಾಡತ್ತೆ, ಲೇಟಾಗಿ ಅನ್ನೋದಕ್ಕೆ ನಮ್ಮ ಸರ್ಕಾರ ಕೆಟ್ಹೋಯ್ತಾ!

ಅಲಾರಾಂ ಆಫ್ ಮಾಡಿ ೧೦ ನಿಮ್ಷ ಮಲ್ಕೊಳ್ಳೋಣ ಅಂತ ಹಾಗೆ ಬಿದ್ಕೊಂಡೆ.
ಲೇ ಚಿಕ್ಕು, ಆಫೀಸಿಗೆ ಹೋಗಲ್ವೇನೋ?, ಮೀಟರ್ ಬಂದು ಕೂಗಿದಾಗಲೇ ಎಚ್ಚರ ಆಗಿದ್ದು, ೧೦ ನಿಮ್ಷ ಹೋಗಿ ಅರ್ಧ ಗಂಟೆ ಆಗಿತ್ತು.
ಯಾಕೋ, ರಜೆನೇನಪ್ಪ?
ಹ್ಮ್ಮ್!!!!!!, ರಜೆ ಹಾಗಂದ್ರೇನು?, ಎಲ್ಲೋ ಕೇಳಿದ ಹಾಗಿದ್ಯಲ್ಲ, ವೀಕೆಂಡ್ನಲ್ಲೇ ರಜೆ ಕೊಡಲ್ಲ ಇನ್ನ ವೀಕ್ ಡೇಸ್ನಲ್ಲಿ ಕೊಡ್ತಾರಾ??
ಸರಿನಪ್ಪ ನಾನು ಹೊರಟೆ ಅಂತ ಹೋದ.

ನಾನು ಎದ್ದು ರೇಡಿಯೋ ಆನ್ ಮಾಡಿ, ನೀರಿಗೆ ಕಾಯ್ಲ್ ಇಟ್ಟು ಹಲ್ಲುಜ್ಜಕ್ಕೆ ಹೋದೆ.

ನೀರು ಕಾದ ಮೇಲೆ ಸ್ನಾನಕ್ಕೆ ಸಿದ್ಧವಾಗಿ ಕಾಯ್ಲ್ ಆಫ್ ಮಾಡಿ ಸೈಡಿಗಿಟ್ಟು ಮಗ್ ತೆಗೆದು ಮೈ ಮೇಲೆ ನೀರು ಹಾಕೊಂಡೆ.
ಅಬ್ಬಬ್ಬ ಬಿಸಿ ಬಿಸಿ, ನೀರು ಕುದೀತಿತ್ತು.
ಹೊರಗೆ ರೇಡಿಯೋದಲ್ಲಿ ಸಕತ್ ಹಾಟ್ ಮಗಾ ಅಂತ ಕೇಳಿಸ್ತಿತ್ತು.

ಸುಮ್ನೆ, ಎಫ್ ಎಂ ರೈನ್ಬೋಗೆ ಹಾಕಿದ್ರೆ ಈ ಗತಿ ಬರ್ತಿರ್ಲಿಲ್ವೇನೋ ಅಂದ್ಕೊಂಡು ತಣ್ಣೀರು ಮಿಕ್ಸ್ ಮಾಡ್ಕೊಂಡು ಸ್ನಾನ ಮಾಡಿ ಹೊರಗೆ ಬಂದೆ.
ತಿಂಡಿ ಮಾಡ್ಕೊಂಡು, ಮಧ್ಯಾಹ್ನದ ಊಟ ಪ್ಯಾಕ್ ಮಾಡ್ಕೊಂಡು ಬ್ಯಾಗ್ ಎತ್ಕೊಂಡು ಹೊರಟೆ.

ನವರಂಗ್ ಹತ್ತಿರ ತುಂಬಿ ತುಳುಕುತ್ತಿದ್ದ ೯೬ ಡಿ ಬಸ್ ಹತ್ತಿ ಕುಳಿತೆ!!!!
ನಿಲ್ಲೋಕೆ ಜಾಗ ಇರಲ್ಲ ಇನ್ನೆಲ್ಲಿ ಕೂತ್ಕೊಳ್ಳೋದು, ಕಷ್ಟಪಟ್ಟು ಬ್ಯಾಗ್ ಹೆಗಲಿಗೆ ನೇತುಹಾಕೊಂಡು ನಿಂತೆ. ಮುಂದಿನ ಸ್ಟಾಪ್ನಲ್ಲಿ ಇಳಿಯೋನು ಒಬ್ಬ ನನ್ನನ್ನ ದಾಟಿ ಹೋಗೋವಾಗ ಬ್ಯಾಗ್ ಅಡ್ಡಬಂದಿದ್ರಿಂದ 'ಏನು ಹುಡುಗ್ರಯ್ಯ, ಕಾಲೇಜಿಗೆ ಹೋಗೋ ಇವಕ್ಕೆ ಸ್ವಲ್ಪನೂ ಗೊತ್ತಾಗಲ್ಲ, ತೆಗ್ದು ಕೈಲಾದ್ರೂ ಇಟ್ಕೊಳ್ಳಯ್ಯ'.

'ಸರಿ' ಅಂತಂದು ಕೈನಲ್ಲಿ ಇಟ್ಕೊಂಡೆ.

ಮಲ್ಲೇಶ್ವರಂ ಹತ್ರ ಬಸ್ ಬಂದಾಗ ಬಸ್ ಅರ್ಧ ಖಾಲಿಯಾಯ್ತು. ಬಸ್ಸಲ್ಲಿ ಹಾಕಿದ್ದ ಎಫ್ ಎಂನಲ್ಲಿ 'ಇದೇನಾ ಸಭ್ಯತೆ, ಇದೇನಾ ಸಂಸ್ಕೃತಿ' ಹಾಡು ಬರ್ತಿತ್ತು, ಒಂದು ಹುಡ್ಗಿ, ಸುಮಾರು ೧೯-೨೦ ವಯಸ್ಸಿರಬಹುದು. ಸಣ್ಣ ಚಡ್ಡಿ, ಶರ್ಟ್ ಡ್ರೆಸ್ ಹಾಕಿದ್ಲು, ಬಸ್ ಮುಂದಿನ ಬಾಗ್ಲಿಂದ ಹತ್ತಿದ್ಳು. ಹತ್ತಿದ ತಕ್ಷಣ ಆ ಹಾಡು ಕೇಳಿ ಅವ್ಳಿಗೆ ಏನನ್ಸಿತೋ ಅಥ್ವ ಅಲ್ಲಿದ್ದವರೆಲ್ಲ ಅವ್ಳನ್ನೇ ನೋಡಿದ್ದಕ್ಕೋ ಅವ್ಳಿಗೆ ಮುಜುಗರ ಆಗಿ ತನ್ನ ಚಡ್ಡಿಯನ್ನ ಕೈನಿಂದ ಎಳೆದುಕೊಳ್ತಿದ್ಲು!!

ಜೀನ್ಸ್ ಚಡ್ಡಿ, ಎಳೆದ್ರೆ ಉದ್ದ ಆಗತ್ತಾ??

ಬಹುಶ, ಈ ಹುಡ್ಗಿ ೮ನೇ ಕ್ರಾಸಲ್ಲೋ, ಮಂತ್ರಿ ಮಾಲಲ್ಲೋ ಯಾವ್ದೋ ಹರಿದ ಜೀನ್ಸ್ ತಗೊಂಡಿರ್ಬೇಕು (ಬಹುತೇಕ ಹುಡುಗರ ಜೀನ್ಸ್ ಪ್ಯಾಂಟ್ ಹಾಗೇ), ಮಲ್ಲೇಶ್ವರಂನಲ್ಲಿ ಈ ಹುಡ್ಗಿ ಆ ಪ್ಯಾಂಟ್ ತಗೊಂಡಿದ್ದು ನೋಡಿ ಶಿವ ತನ್ನ ೩ನೇ ಕಣ್ಣನ್ನೋ ಅಥ್ವಾ ತ್ರಿಶೂಲವನ್ನೋ ಸಿಟ್ಟಿನಿಂದ ಬಿಟ್ಟಿರಬೇಕು, ಆಗ ಅದು ತುಂಡಾಗಿ ಚಡ್ಡಿ ಆಗಿರ್ಬೇಕು, ಇವ್ಳು ವಿಧಿಯಿಲ್ಲದೇ ಅದ್ನ ಹಾಕೊಂಡಿದ್ದಾಳೆ!!

ಮುಂದುವರೆಯುವುದು