ಮೆಜೆಸ್ಟಿಕ್ನಲ್ಲಿ ಇಳಿದು ೧೩೮ ನಂ. ಬಸ್ ಹಿಡಿದು ಕುಳಿತೆ. ಜಾಸ್ತಿ ಜನ ಇರ್ಲಿಲ್ಲ. ಕಂಡಕ್ಟರ್ ಎಲ್ಲರ ಹತ್ತಿರ ಟಿಕೆಟ್/ಪಾಸ್ ಕೊಡ್ತಾ ಚೆಕ್ ಮಾಡ್ತಾ ಬರ್ತಿದ್ದ. ಸೀನಿಯರ್ ಸಿಟಿಜನ್ ಸೀಟಲ್ಲಿ ಕುಳಿತಿದ್ದ ಒಬ್ಬ ವಯಸ್ಸಾದ ವ್ಯಕ್ತಿಯೊಬ್ರು ಇಂದಿರಾನಗರಕ್ಕೆ ಒಂದು ಟಿಕೆಟ್ ಕೊಡ್ರೀ ಅಂದ್ರು.
ಕಂಡಕ್ಟರ್ ಇನ್ನೇನು ಟಿಕೆಟ್ ಕೊಡ್ಬೇಕು ಸೀನಿಯರ್ ಸಿಟಿಜನ್ ಅಂದ್ರು. ಇವ್ನಿಗೂ ಸಿಟ್ಟು ಬಂತು.
ಅಲ್ರೀ ಮೊದ್ಲು ಅದ್ನ ಹೇಳಿ ಆಮೇಲೆ ಟಿಕೆಟ್ ಕೇಳೋದಲ್ವ?
ಆ ವಯ್ಯ ಬಾಯಲಿದ್ದ ಕೆಲವೇ ಕೆಲವು ಹಲ್ಲುಗಳನ್ನು ತೋರಿಸ್ತಿದ್ರು.
ಹಿಂಗೆ ನಗಾಡಿದ್ರೆ ಏನ್ರೀ ಉತ್ರ?
ಆಗ ನಾನು 'ಕಂಡಕ್ಟರ್ರೆ, ವಯಸ್ಸಾದವರನ್ನ ನೀವು ನೋಡಿದ ತಕ್ಷಣವೇ ಗುರುತಿಸೋ ಹಾಗೆ ಒಂದು ಐಡೆನ್ಟಿಟಿ ಇರ್ಬೇಕು, ಅಲ್ವ?'
'ಹೂಂ ಸಾರ್, ಹಾಗಿದ್ದಿದ್ರೆ ಬಾರೀ ಅನುಕೂಲ ಆಗ್ತಿತ್ತು, ನಮ್ಗ್ಯಾವಾಗ್ಲೂ ಇದ್ಹೇ ಪ್ರಾಬ್ಲಂ, ಅರ್ಧಕ್ಕರ್ಧ ಜನಕ್ಕೆ ಮರೆವು ಜಾಸ್ತಿ'
'ಅದೇ ಮತ್ತೆ ಅದ್ಕೆ ನಾನು ಹೇಳಿದ್ದು, ಹೇಗಿರ್ಬೇಕು ಅಂದ್ರೆ ಬಿಳೇ ಕೂದ್ಲು ನೋಡಿದ ತಕ್ಷಣ ಇವ್ರು ಸೀನಿಯರ್ ಸಿಟಿಜನ್ ಅಂತ ಗೊತ್ತಾಗ್ಬೇಕು'
'ಹೌದು ಸಾರ್, ಒಳ್ಳೆ ಐಡಿಯಾ, ನಮ್ಮ ಮೇಲಧಿಕಾರಿಗಳಿಗೆ ಹೇಳ್ಬೇಕು'
'ಆದ್ರೆ ಒಂದು ತೊಂದ್ರೆ ಇದೆ'
'ಅದೇನ್ಸಾರ್'
'ಈಗ ವಯಸ್ಸು ೭೦ ಆದ್ರೂ ಕೂದ್ಲು ಬೆಳ್ಳಗೆ ಆಗಲ್ಲ, ಮಾರ್ಕೆಟ್ನಲ್ಲಿ ಏನೇನೋ ಇದೆ ನೋಡಿ ಕರ್ರಗೆ ಮಾಡ್ಕೊಳ್ಳೋಕೆ'
'ಓ ಹೌದಲ ಸಾರ್'
ನಮ್ಮ ಮಾತು ಕೇಳಿಸ್ಕೊಳ್ತಿದ್ದ ಸೀನಿಯರ್ ಸಿಟಿಜನ್ ನನ್ನ ಕೊನೆ ಮಾತು ಕೇಳಿ, ನನ್ನನ್ನ ದೂರ್ವಾಸ ಮುನಿ ನೋಡಿದ ಹಾಗೆ ನೋಡ್ತಿದ್ರು. ಯಾಕೋ ಎಡವಟ್ಟಾಗ್ತಿದೆ ಅಂತ ಬ್ಯಾಗಲಿದ್ದ ಇಯರ್ ಫೋನ್ ತೆಗ್ದು ಮೊಬೈಲಿಗೆ ಸಿಕ್ಕಿಸಿ ಆಮೇಲೆ ನನ್ನ ಕಿವಿಗೆ ಚುಚ್ಕೊಂಡೆ.
ಬಸ್ ಇಂದಿರಾನಗರದ ಸಿಗ್ನಲ್ ಹತ್ರ ಬಂದಾಗ, ರೇಡಿಯೋ ಜಾಕಿ ತನ್ನ ಮಾತು ಮುಗಿಸ್ತಿದ್ಲು.
ಒಂದು ಸುಂದರವಾದ ಹುಡ್ಗಿ ಅಡ್ಡರಸ್ತೆಯಿಂದ ನಡ್ಕೊಂಡು ಬರ್ತಿದ್ಲು, ತುಂಬಾನೇ ಚೆನ್ನಾಗಿದ್ಳು, ನಾನೂ ಅವಳನ್ನೇ ನೋಡ್ತಿದ್ದೆ, ನನ್ನನ್ನೂ ನೋಡಲಿ ಅಂತ ದೂರದ ಆಸೆ.
ಕಣ್ಣು ಕಣ್ಣು ಬೆರೆತಾ.......(ಮೊಬೈಲ್ನಲ್ಲಿದ್ದ ಚಾರ್ಜ್ ಕುಸಿದು ಮೊಬೈಲ್ ನಿದ್ರೆಗೆ ಶರಣಾಗಿತ್ತು) ಅವ್ಳು ಇನ್ನೇನು ನನ್ನನ್ನ ಕತ್ತೆತ್ತಿ ನೋಡ್ಬೇಕು................ಥತ್ತೆರಿಕೆ :( :( ಅಷ್ಟೊತ್ತಿಗೆ ಸಿಗ್ನಲ್ ಫ್ರೀ ಆಯ್ತು, ಬಸ್ ಹೊರಡ್ತು.
ಜೀವನ್ ಭೀಮಾ ನಗರ್ ತಲುಪಿ ಆಫೀಸಿಗೆ ೩ ಫ್ಲೋರ್ ಹತ್ತಿ ನನ್ನ ಜಾಗಕ್ಕೆ ಹೋಗಿ ಕೂತೆ.
ಸಿಸ್ಟಂಗೆ ಲಾಗಿನ್ ಆಗಿ ಕೆಲಸ ಶುರು ಮಾಡಿದೆ. ಹಾಗೆ ಹೆಡ್ ಫೋನ್ ಕಿವಿಗೆ ಸಿಕ್ಕಿಸಿಕೊಂಡು ಹಳೆ ಹಾಡುಗಳನ್ನ ಕೇಳ್ತಾ ಕೆಲ್ಸ ಮಾಡ್ತಿದ್ದೆ.
ಸ್ವಲ್ಪ ಹೊತ್ತಾದ್ಮೇಲೆ ಸೌಜ ಬಂದ.
ಕೆಲ್ಸ ನಡೀತಿತ್ತು, ಸೌಜ ಎಲ್ಲೋ ಎದ್ದು ಹೋದ.
'ಏನೋ ಸಂತೋಷ, ಏನೋ ಉಲ್ಲಾಸ, ಏನೋ ವಿಶೇಷ ಈ ದಿನ..... ಹಾಡು ಬರ್ತಿತ್ತು.
ಯಾರೋ ಹಿಂದಿಂದ ಬಂದು ಬೆನ್ನು ತಟ್ಟಿದ್ರು, ತಿರುಗಿ ನೋಡಿದ್ರೆ ಸೌಜ. ಹೆಡ್ ಫೋನ್ ತೆಗೆದು 'ಏನಪ್ಪಾ?'
ಡ್ಯಾಮೇಜರ್ (ಮ್ಯಾನೇಜರ್) ಕರೀತವ್ನೆ ಹೋಗು, ಒಳ್ಳೆ ಗಿಫ್ಟ್ ಕಾದಿದೆ ನೋಡು.
ಇರ್ಬೇಕು, ಆ ಟೈಮಿಗೆ ಕರೆಕ್ಟ್ ಹಾಡು ಬೇರೆ ಬರ್ತಿದೆ!!
ಸರಿ ಅಂತ ಮ್ಯಾನೇಜರ್ ರೂಮಿಗೆ ಹೋದೆ.
ನಗಾಡ್ತಾ ವೆಲ್ಕಂ ಅಂದ.
ಸಂತೋಷದಿಂದಲೇ ಹೋಗಿ ಕೂತೆ. ಕರುಣೆ ಬಂದಿದೆ ಮಗ್ನಿಗೆ ಅನ್ಸತ್ತೆ, ಈ ಸೈಕಲ್ಲಾದ್ರೂ ಒಳ್ಳೆ ಹೈಕ್ ಕೊಡ್ತಾನೆ ಅನ್ಸತ್ತೆ ಅಂದ್ಕೊಂಡು ಖುಷಿಯಿಂದಿದ್ದೆ.
ಒಂಧರ್ಧ ಘಂಟೆ ಅದೂ ಇದೂ ಅಂತ ಕಥೆ ಕುಯ್ದ, ಕಂಪನಿ ಗ್ರೋತ್ ಚೆನ್ನಾಗಿದೆ, ಕೆಲ್ಸ ಚೆನ್ನಾಗಿ ಮಾಡ್ಬೇಕು (ಇಷ್ಟು ದಿನ ಏನು ಬೇಕಾಬಿಟ್ಟಿ ಮಾಡ್ತಿದ್ವ).....
ಅದೆಲ್ಲ ಸರಿ ತಂದೆ, ಮೈನ್ ಮ್ಯಾಟರ್ಗೆ ಬಾರಪ್ಪ ಅಂತ ಮನಸಲ್ಲೇ ಅಂದ್ಕೊಂಡೆ.
ಅಂತೂ ಬಂದ ಪುಣ್ಯಾತ್ಮ.
ಇದೊಂದೆರಡು ಕ್ವಾರ್ಟರ್ ಕಂಪನಿನಲ್ಲಿ ಅಷ್ಟೊಂದು ಗ್ರೋತ್ ಇಲ್ಲ, ಹಾಗಾಗಿ ಸ್ಯಾಲರಿ ಹೈಕ್ ಕೆಲವರಿಗೆ ಮಾತ್ರ ಕೊಡ್ತಿರೋದು, ಅದ್ರಲ್ಲಿ ನೀನೂ ಒಬ್ಬ.
ಅದ್ಹೆಂಗೆ ಇಷ್ಟು ಒಳ್ಳೆ ಬುದ್ಧಿ ಬಂತಪ್ಪ ಇವನಿಗೆ, ಹಿಂಗೆಲ್ಲ ಹೇಳಿದ್ರೆ ಬಹುಶ ಒಂದು ೧೨-೧೫% ಇರತ್ತೆ ಅಂದ್ಕೊಂಡು ಓ ಕೆ ಅಂದೆ.
ಯಾರಿಗೂ ಅಷ್ಟು ಕೊಟ್ಟಿಲ್ಲ ನಿಂಗೆ ಜಾಸ್ತಿ
(ಹೌದಪ್ಪ, ಇದು ಕಾಮನ್ ಡೈಲಾಗ್ ಎಲ್ರಿಗೂ).
೩% ಹ್ಯಾಪಿ (ಈ ನನ್ಮಗ ಇವ್ನ ಪ್ಯಾಕೆಟಿಂದ ಕೊಡೋದಾಗಿದ್ರೆ ಏನು ಕಥೆ ಇರ್ತಿತ್ತೋ), ಯು ಶುಡ್ ಬಿ ಹ್ಯಾಪಿ, ಎನಿವೇ, ಆಲ್ ದ ಬೆಸ್ಟ್ ಮ್ಯಾನ್, ಕೀಪ್ ಅಪ್ ದ ಗುಡ್ ವರ್ಕ್.
ಥ್ಯಾಂಕ್ಸ್ ಅಂತ್ಹೇಳಿ ಎದ್ದು ಬಂದೆ.
ಬಾಗ್ಲು ತೆಗ್ದು ಹೊರ್ಗೆ ಬರ್ತಿದ್ದ ಹಾಗೆ ಸೌಜ ನನ್ನನ್ನೇ ನೋಡಿ ನಗ್ತಿದ್ದ.
ಲೇ, ಒಳ್ಳೆ ಹಾಡು ಕೇಳ್ತಿದ್ದೆ ಈಗ ನೋಡು 'ಇದು ಯಾರು ಬರೆದ ಕಥೆಯೋ ನನಗಾಗಿ ಬಂದ ವ್ಯಥೆಯೋ' ಹಾಡು ಕೇಳೋ ಹಾಗಾಗಿದೆ, ನೀನು ಅವ್ನು ಸೇರಿ ಮೂಡೇ ಹಾಳು ಮಾಡಿದ್ರಿ.
ಅಯ್ಯೋ, ನಾನು ಏನಂದೆ, ಅವ್ನು ಕರ್ದ ಹೋಗಪ್ಪ ಅಂದೆ.
ಹೋಗ್ಲಿ ಬಿಡು, ಬಾ ಹೊರ್ಗೋಗಿ ಕಾಫಿ ಕುಡ್ಕೊಂಡು ಬರೋಣ.
ಇಬ್ರೂ ಕೆಳಗೆ ಹೋಗಿ ಕಾಫಿ ಕುಡ್ಕೊಂಡು ನಮ್ಗೆ ಖುಷಿಯಾಗೊವರ್ಗೂ ಡ್ಯಾಮೇಜರ್ಗೆ ಬಯ್ದು ವಾಪಸ್ ಬಂದ್ವಿ.
No comments:
Post a Comment