ಜೂನ್. ಮೇ ತಿಂಗಳವರೆಗೆ ಬೆಚ್ಚಗಿನ ಅನುಭವ ಕಳೆದು ತಂಪಾಗುವ ಕಾಲ.
ಕಾದ ಭುವಿಗೆ ಕಳೆಗಟ್ಟುವ ಸಂಭ್ರಮ.
ಮಳೆ ಶುರುವಾದಾಕ್ಷಣ ಅಪ್ಪನಿಗೆ ನೇಗಿಲು, ಮರವನ್ನು ಹೊರತೆಗೆದು, ಎತ್ತುಗಳನ್ನು ಕೊಟ್ಟಿಗೆಯಿಂದ ಹೊರಡಿಸಿ ಗದ್ದೆಗೆ ಕರೆದುಕೊಂಡು ಹೋಗುವ ಸಂಭ್ರಮ.
ಮನೆಯಾಕೆಗೆ ಒಂದೆಡೆ ಗದ್ದೆಗೆ ಹೋಗುವ ಎಲ್ಲರಿಗೂ ಕಾಫಿ, ರೊಟ್ಟಿ ಮತ್ತು ಪಲ್ಯ ಮಾಡುವ ಕೆಲಸ. ಮತ್ತೊಂದೆಡೆ ಮಗ, ಮಗಳನ್ನು ಶಾಲೆಗೆ ಹೊರಡಿಸುವ ಕಸುಬು.
ಮಕ್ಕಳಿಬ್ಬರಿಗೂ ಬೇಸಿಗೆಯ ರಜೆಯ ನೆನಪುಗಳು ಇನ್ನೂ ಹಸಿರಾಗಿ ಹಾಗೇ ಇರುವಾಗ ಶುರುವಾದ ಶಾಲೆಗೆ ಮನಸ್ಸಿನಲ್ಲೇ ಬಯ್ಯುತ್ತಾ, ಹೇಗೆ ಹೋಗುವುದಪ್ಪಾ ಈ ಜಿಟಿ ಜಿಟಿ ಮಳೆಯಲ್ಲಿ, ಶಾಲೆ ಇಲ್ಲದಿದ್ದರೆ ಅಪ್ಪನ ಜೊತೆ ತಾನೂ ಬೇಸಾಯ ಮಾಡಬಹುದಿತ್ತು ಎಂದು ಮಗನ ಯೋಚನೆಯಾದರೆ, ಮಗಳಿಗೆ ಪಕ್ಕದಮನೆ ಗೆಳತಿಯೊಂದಿಗೆ ಅಲ್ಲಿ ಇಲ್ಲಿ ಸುತ್ತಾಡುವ ಬಯಕೆ, ಆದರೇನು ಮಾಡುವುದು ಅವಳೂ ಶಾಲೆಗೆ ತನ್ನೊಂದಿಗೆ ಬರುತ್ತಾಳೆ. ಅಮ್ಮನಿಗೆ ಯುನಿಫಾರ್ಮ್ ಇಲ್ಲ, ಶೂ ಕಳೆದುಹೋಗಿದೆ ಎಂದು ಸುಳ್ಳು ಹೇಳಿದರೂ ಕೇಳದ ಅಮ್ಮನನ್ನು ಅವಳಿಗೆ ಕೇಳಿಸದ ಹಾಗೆ ಬಯ್ಯುತ್ತಾ ಇಬ್ಬರೂ ಬ್ಯಾಗನ್ನು ಏರಿಸಿಕೊಂಡು, ಕೈಯಲ್ಲಿ ಕೊಡೆ ಹಿಡಿದುಕೊಂಡು ಮನೆಯಿಂದ ಹೊರಟು ಅಮ್ಮನಿಗೆ ಹೇಳಿ ಬೀದಿಯಲ್ಲಿ ಇರುವ ಎಲ್ಲ ತನ್ನ ಸಹಪಾಟಿಗಳನ್ನು ಅಂದರೆ ದೊಡ್ಡಪ್ಪ, ಚಿಕ್ಕಪ್ಪ ಇವರ ಮಕ್ಕಳನ್ನು ದಾರಿಯಲ್ಲೇ ಬನ್ನಿ ಎಂದು ಕೂಗುತ್ತಾ, ಎಲ್ಲರೂ ಒಟ್ಟಿಗೆ ಹೊರಟರೆ ಸ್ವಲ್ಪ ಹೊತ್ತಿಗೆ ಬೇಜಾರಾಗಿದ್ದ ಮನಸ್ಸು ಖುಷಿಯಿಂದ ತೇಲಾಡುತ್ತಿತ್ತು.
ಕೊಡೆಯನ್ನು ಹಿಡಿದುಕೊಂಡು ಬೀಸೋ ಮಳೆ ಗಾಳಿಯಿಂದ ಬ್ಯಾಗನ್ನು ರಕ್ಷಿಸಿಕೊಂಡು, ಮೈ ನೆನೆಯದ ಹಾಗೆ ಹಿಡಿದುಕೊಂಡು ೪-೫ ಕಿ ಮೀ ದೂರದಲ್ಲಿರುವ ಶಾಲೆಗೆ ೧೦-೧೫ ಜನ ಒಟ್ಟಿಗೆ ಹೋಗುತ್ತಾ, ಗದ್ದೆಯಲ್ಲಿ, ಹೊಳೆ ದಾಟುತ್ತಾ ಆಮೇಲೆ ರಸ್ತೆಯಲ್ಲಿ ಸಾಗುತ್ತಾ, ಬ್ಯಾಗಲ್ಲಿದ್ದ ಕೋಡುಬಳೆಯನ್ನೋ ಶಂಕರಪಾಳವನ್ನೋ ತೆಗೆದು ಎಲ್ಲರಿಗೂ ಕೊಡುತ್ತಾ ತಾನೂ ತಿನ್ನುತ್ತಾ ಆ ಚಳಿಯಲ್ಲಿ ಹೋಗುತ್ತಿದ್ದರೆ ಆಹಾ ಮೈಯೆಲ್ಲಾ ರೋಮಾಂಚನ.
ಮನೆಯಿಂದ ಹೊರಟು
ಬ್ಯಾಗನ್ನು ಏರಿಸಿಕೊಂಡು
ಕೊಡೆಯನ್ನು ಹಿಡಿದುಕೊಂಡು
ಗೆಳೆಯರನ್ನು ಕರೆದುಕೊಂಡು
ಪ್ರಕೃತಿಯ ಸೊಬಗನ್ನು ಸವಿದುಕೊಂಡು
ಮಳೆಯಲ್ಲಿ ನೆನೆದುಕೊಂಡು
ಬಟ್ಟೆಯನ್ನು ಒರೆಸಿಕೊಂಡು
ದಾರಿಯಲ್ಲಿ ಸಾಗಿ
ಶಾಲೆ ಸೇರಿ
ಶಾಲೆಯಲ್ಲಿ ಪ್ರಾರ್ಥನೆ ಮುಗಿಸಿ ಪೇಪರ್ ಓದಿ, ಕ್ಲಾಸಿನ ಒಳಗೆ ಹೋದರೆ ಮಧ್ಯಾಹ್ನದವರೆಗೂ ಅಲ್ಲೇ, ಗೆಳೆಯ ಗೆಳತಿಯರ ಜೊತೆ ಹರಟೆ, ಇಷ್ಟವಾದ ಇಷ್ಟವಿಲ್ಲದ ಮೇಷ್ಟ್ರಗಳ ಪಾಠ. ಊಟಕ್ಕೆ ಬಿಟ್ಟಾಗ ಬ್ಯಾಗಲ್ಲಿದ್ದ ಬಾಕ್ಸನ್ನು ತೆಗೆದು ಎಲ್ಲರೊಟ್ಟಿಗೆ ಕೂತರೆ, ಎಲ್ಲರಿಂದಲೂ ಸ್ವಲ್ಪ ಸ್ವಲ್ಪ ತೆಗೆದುಕೊಂಡು ತಾನೂ ಸ್ವಲ್ಪ ಕೊಟ್ಟು ತಿಂದರೆ ಅಲ್ಲಿಗೆ ಮಧ್ಯಾಹ್ನ ಮುಕ್ತಾಯ.
ಮತ್ತೆ ಕ್ಲಾಸ್, ಮಳೆಗಾಲವಾದ್ದರಿಂದ ಹೊರಗಡೆ ಆಟಕ್ಕೆ ರಜೆ. ಸಂಜೆಯಾದೊಡನೆ ಮತ್ತೆ ಊರಿನ ಎಲ್ಲ ಹುಡುಗರು, ಹುಡುಗಿಯರ ಜೊತೆ ವಾಪಸ್ ಮನೆ ಕಡೆ ಪ್ರಯಾಣ.
ಮನೆಗೆ ಬಂದು ಬ್ಯಾಗೆಸೆದು ಅಡಿಗೆ ಮನೆಗೆ ಹೋಗಿ ಅಮ್ಮನಿಂದ ಬಿಸಿ ಬಿಸಿ ಕಾಫಿ ಮಾಡಿಸಿಕೊಂಡು ಕುಡಿದು ಹಿತ್ತಲಿನ ಕಡೆ ಹೋದರೆ ಹಲಸಿನಹಣ್ಣಿನ ಗಮ, ಮನೆಯ ಆಳು ಕತ್ತರಿಸುತ್ತಿದ್ದರೆ ಕೈಗೆ ಎಣ್ಣೆ ಬಳಿದುಕೊಂಡು ಒಂದೊಂದು ಸ್ವಾಡಾವನ್ನು (೧ ಪೀಸ್ ) ತೆಗೆದುಕೊಂಡು ಪೂರ್ತಿ ಮುಗಿಸಿ ಮತ್ತೊಂದು, ಮಗದೊಂದು ಹೊಟ್ಟೆ ತುಂಬುವವರೆಗೆ.
ಸಂಜೆ ಚಾವಡಿಯಲ್ಲಿ ಕುಳಿತು ಪುಸ್ತಕವನ್ನು ತೆಗೆದುಕೊಂಡು ಮನೆಯ ಮುಂದೆ ಬೀಳುತ್ತಿರುವ ಮಳೆ, ಹೆಂಚಿನಿಂದ ಸೋರುತ್ತಿರುವ ಹನಿಯನ್ನು ನೋಡುತ್ತಾ ಓದುವ ಕೆಲಸ.
ಸ್ವಲ್ಪ ತಡೆಯಿರಿ.ಇದೇನು ಕಥೇನಾ ಅಂತ ಕೇಳ್ಬೇಡಿ, ಸ್ವಲ್ಪ ಹಿಂದೆ ಹೋದ್ರೆ ಅಂದ್ರೆ ೧೦-೧೫ ವರ್ಷಗಳವರೆಗೂ ಇದ್ದ ಸ್ತಿತಿ.
ಈಗ, ಮಳೆ ಹಾಗೇ ಬರ್ತಿದೆ, ಅಪ್ಪ ಅಮ್ಮನಿಗೆ ವಯಸ್ಸಾಗಿದೆ, ಅದೇ ಹೆಂಚಿನ ಮನೆಯಲ್ಲಿ ೨ ಜೀವಗಳೂ ಜೀವ ಸವೆಸುತ್ತಿವೆ, ಈಗ ನಗರದಲ್ಲಿರುವ ಮಕ್ಕಳಿಗೆ ಮದುವೆಯಾಗಿ ಮಕ್ಕಳಾಗಿವೆ, ಆದರೆ ಆ ಮಕ್ಕಳಿಗೆ ಹಳ್ಳಿ ಅಂದರೆ ವರ್ಷದಲ್ಲಿ ಒಂದೆರಡು ಬಾರಿ ಅಜ್ಜ ಅಜ್ಜಿಯ ಮನೆಗೆ ಹೋಗಿ ಬರುವ ಒಂದು ಜಾಗವಷ್ಟೆ. ಶಾಲೆ ಇದೆಯೋ ಇಲ್ಲವೋ, ಇದ್ದರೂ ಎಲ್ಲೋ ಕೆಲವರು ಅಲ್ಲಿಗೆ ಕಳಿಸುತ್ತಿದ್ದಾರೆ. ಸದಾ ಮಕ್ಕಳಿಂದ ಗಿಜಿಗಿಜಿಗುಡುತ್ತಿದ್ದ ಊರು ಈಗ ಆ ಶಬ್ಧವನ್ನು ಮರೆತಿದೆ.
ಗದ್ದೆಗಳು ಹಾಗೇ ಇವೆ, ಅದರ ಮೇಲೆ ನೇಗಿಲಿನ ಬರೆಯಿಲ್ಲ, ನೇಗಿಲು ಎನ್ನುವುದು ಈಗ ಮ್ಯೂಸಿಯಂ ಪೀಸಾಗಿದೆ. ಎಲ್ಲರ ಮನೆಯಲ್ಲಿರುತ್ತಿದ್ದ ದನ ಕರುಗಳು ಈಗ ಕೆಲವೇ ಕೆಲವು ಮನೆಗಳಲ್ಲಿವೆ. ಬೇಸಾಯ ಮಾಡಲು, ಸಸಿ ನೆಡಲು ಜನಗಳೇ ಇಲ್ಲ.
ಬರೀ ಮಳೆಯೊಂದೇ ಆಗಿಗೂ ಈಗಿಗೂ ಕೊಂಡಿಯಾಗಿ ನಿಂತಿದೆ. ಮನುಷ್ಯ ಮರಗಳಿಗೂ ಕೊಡಲಿ ಹಾಕುತ್ತಲೇ ಹೋದರೆ ಅದೂ ನೆನಪಿನ ಭಾಗವಾಗಿ ಸೇರುವ ಸಂಭವವಿದೆ.
ಬರಲಿರುವ ಮಳೆಯೇ
ಹಿಂದಿನ ದಿನಗಳನ್ನು ತಿರುಗಿ ತರಲಾಗದಿದ್ದರೂ
ಮುಂಗಾರಿನ ಆ ನೆನಪುಗಳನ್ನು ಮತ್ತೆ ಬರಿಸು
ಯಾಕೋ ಬೆಂಗಳೂರಿನಲ್ಲಿ ನೆನ್ನೆ ಮತ್ತೆ ಇಂದು ಮಳೆಯಾದಾಗ, ಆ ತುಂತುರು ನೀರಿನಲ್ಲಿ ನೆನೆದಾಗ ಹಾಗೂ ಮುಂಗಾರಿನ ಮೋಡಗಳನ್ನು ನೋಡಿದಾಗ ಇದೆಲ್ಲ ನೆನಪಿಗೆ ಬಂತು.
No comments:
Post a Comment