Wednesday, January 27, 2010

ಎಲ್ ಬೋರ್ಡ್ನ ಪರಮಾವಧಿ!

ಮಾರುತಿ ೮೦೦ ಕಾರ್ ತಗೊಂಡು ೧೫ ವರ್ಷ ಓಡಿಸಿ ಚಾಲನೆಯಲ್ಲಿ ಪರಿಪೂರ್ಣನಾಗಿ ಗಾಡಿ ಎಕ್ಷ್ಪೈರ್ ಆದ್ಮೇಲೆ ಹೊಸ ಸೆಡಾನ್ ಕಾರ್ ತಗೊಂಡು ಎಲ್ ಬೋರ್ಡ್ ಹಾಕಿಸಿ ಓಡಿಸುವುದು!!

Thursday, January 21, 2010

ಅ(ಪ್ಪ)ಮ್ಮ

ನವಮಾಸ ನಿನ್ನ ಗರ್ಭದಲ್ಲಿ ನನ್ನ ಸಲಹಿದೆ
ಹೊರಬಂದಾಗ ನನ್ನ ನೋಡಿ ನೀ ಸಂಭ್ರಮಿಸಿದೆ

ನನ್ನ ನಗುವಿಗೆ ನೀ ನಗುವಾದೆ
ನನ್ನ ನೋವಿಗೆ ನೀ ಮರುಗಿದೆ
ನನ್ನ ನಲಿವಿಗೆ ನೀ ನವಿಲಾದೆ

ನನ್ನ ಪುಟ್ಟ ಹೆಜ್ಜೆಗೆ ನೀ ಗೆಜ್ಜೆಯಾದೆ
ನನ್ನ ತೊದಲ ನುಡಿಗೆ ನೀ ಮೊದಲಾದೆ

ನನ್ನ ಬೇಕು ಬೇಡಗಳಿಗೆ ನೀ ಸ್ಪಂದಿಸಿದೆ

ನಾ ಕೇಳಿದೆ ನನ್ನ ಕನಸಲ್ಲಿ ಇದೇಕೆಂದು
ನೀ ಹೇಳಿದೆ ಇದೆಲ್ಲ ನಿನ್ನ ಕರ್ತವ್ಯವೆಂದು
ನಾ ಹೇಳಿದೆ ನೂರು ಜನ್ಮ ಬಂದರೂ ತೀರಿಸಲಾಗದೆಂದು

.............

ಎಲ್ಲ ಸಾಲುಗಳು ಅಮ್ಮನಿಗೆ. ಮೊದಲ ಎರಡು ಸಾಲುಗಳನ್ನು ಬಿಟ್ಟು ಮಿಕ್ಕಿದ್ದು ಅಪ್ಪನಿಗೆ.

ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು

ಅಮ್ಮ ಕರೆಯುತ್ತಿದ್ದಳು ಒಳಗೆ
ಆಗಲ್ಲ ಎಂದಿರುತ್ತಿದ್ದೆ ಹೊರಗೆ

ಲಗೋರಿ ಚಿನ್ನಿದಾಂಡು ಬುಗುರಿ ಮರಕೋತಿಯಾಟ
ಮುಗಿಯುತ್ತಿರಲಿಲ್ಲ ನಮ್ಮ ಚೆಲ್ಲಾಟ

ಮೀನು ಹಿಡಿಯಲು ಹೋಗುತ್ತಿದ್ದೆ ಅಜ್ಜನ ಜೊತೆಗೆ
ಮನೆಗೆ ಬರುತ್ತಿದ್ದೆ ತುಂಬಿದ ಕೂಳೆಯೊಂದಿಗೆ

ಶಾಲೆಯಲ್ಲಾಡುತ್ತಿದ್ದೆ ಖೋ ಖೋ ಕಬಡ್ಡಿ
ಹರಿಯುತ್ತಿದ್ದರೂ ನೋಡುತ್ತಿರಲಿಲ್ಲ ಚಡ್ಡಿ

ಹರಿಯುತ್ತಿದೆ ನೆನಪುಗಳ ಸುರಿಮಳೆ
ಸುರಿಯುತ್ತಿದೆ ಹೊರಗಡೆ ಮಳೆ

ಆಡುತ್ತಿದ್ದಾರೆ ಅದರಲ್ಲೇ ಮಕ್ಕಳು
ಕಚೇರಿಯಿಂದ ನೋಡುತ್ತಾ ಒದ್ದೆಯಾಗಿದೆ ನನ್ನ ಕಂಗಳು
ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು

Monday, January 18, 2010

ಪಕ್ಕದ ಮನೆ ಹುಡುಗಿ!

ಪಕ್ಕದ ಮನೆ ಹುಡುಗಿ ಸೂಪರ್
ನೋಡೋಕಂತ ಹೋದ ಮೀಟರ್
ಅವರಮ್ಮ ಓದ್ತಿದ್ರು ಪೇಪರ್
ಇವನನ್ನ ನೋಡಿ ಹರದ್ರು ಪರ್ ಪರ್

ದೂರ ವಾಣಿ

ನಾ ಬಂದಾಗ ನೀನಿರಲಿಲ್ಲ
ನೀ ಬಂದಾಗ ನನ್ನ ಕೇಳುವವರಿಲ್ಲ

ಆಗೆಲ್ಲ ನನ್ನದೇ ರಾಜ್ಯಭಾರ
ಹರಡಿತ್ತು ನನ್ನ ಪ್ರಸಿದ್ಧಿ ದೂರ ದೂರ

ಕಾಯುತ್ತಿದ್ದರು ಗಂಟೆಗಟ್ಟಲೆ ನನ್ನ ಕರೆಗೆ
ಕಾಯಬೇಕಾಗಿದೆ ನಾ ದಿನಗಟ್ಟಲೆ ಬರುವ ಕರೆಗೆ

ನನ್ನ ಸ್ಥಾನವನ್ನ ನೀ ಅಲಂಕರಿಸಿರುವೆ
ಒಂದರ್ಥದಲ್ಲಿ ನನ್ನ ನೀ ಆಕ್ರಮಿಸಿರುವೆ

ಆಗ ಎಲ್ಲೆಲ್ಲೂ ನನ್ನದೇ ಅಶರೀರವಾಣಿ
ಈಗ ಕೇಳುವವರಿಲ್ಲ ನನ್ನ ವಾಣಿ
ಅದಕ್ಕೆ ನನ್ನ ಹೆಸರು ದೂರ ವಾಣಿ

ಸಣ್ಣತನ

ಗೆಳೆಯ ನೀ ಪಡಬೇಡ ಸಂಶಯ

ನಾ ಹೋಗಿದ್ದೆ ಗೆಳತಿಯ ಕರೆಯ ಮೇರೆಗೆ
ಬಂದಿದ್ದಳವಳು ಗೆಳೆಯನ ಜೊತೆಗೆ

ಮಾತನಾಡಿಸಿದ್ದೆ ಗೆಳತಿಯ ಸಖನೆಂಬ ಸಲಿಗೆಯಿಂದ
ಅದ ತಿಳಿದೆ ನೀ ನಿನ್ನ ಗೆಳೆಯನಿಂದ

ಅಷ್ಟಕ್ಕೆ ನೀ ದೂರವಾದೆ

ನೀನೆ ಗೆದ್ದ ಹೃದಯ
ನಿನ್ನ ಸಣ್ಣತನದಿಂದ ಚೂರಾಯ್ತಲ್ಲ ಇನಿಯ

ಉಪ್ಪಿಟ್ಟು ಉಪ್ಪಾಗಿತ್ತು

ಬರುವೆನೆಂದೆ ನನ್ನಮ್ಮನ ಕರೆಗೆ
ಮಾರನೆ ದಿನ ಹೊರಟೆ ಊರಿಗೆ

ತೋರಿಸಿದಳಮ್ಮ ಹುಡುಗಿಯ ಚಿತ್ರವನ್ನ
ಹಾಕಂದೆ ನಾ ಚಿತ್ರಾನ್ನವನ್ನ

ಅಮ್ಮ ಕೇಳುತ್ತಿದ್ದಳು ಮತ್ತೆ ಮತ್ತೆ ನನ್ನ
ನೋಡಿದಳು ನನ್ನ ನಾಚಿಕೆಯನ್ನ

ಹೋದೆವು ಹುಡುಗಿಯ ಮನೆಗೆ
ಬಂದವು ಉಪ್ಪಿಟ್ಟು ಕೇಸರಿಬಾತು ನಮ್ಮೆಡೆಗೆ

ಚಿತ್ರ ನೋಡಿ ಬಂದಿದ್ದ ನಾನು
ಅವಳನ್ನು ನೋಡಿ ಆಮೇಲೆತ್ತಲಿಲ್ಲ ಮುಖವನು

ಉಪ್ಪಿಟ್ಟು ಉಪ್ಪಾಗಿತ್ತು
ಕೇಸರಿಬಾತು ಕಹಿಯಾಗಿತ್ತು

Friday, January 15, 2010

ಯಾಕೀ ಧೋರಣೆ

ಕೆಲವರು ಮಾಡುತ್ತಿದ್ದಾರೆ ಐ.ಟಿಯವರ ಅಪಹಾಸ್ಯ

ಕನ್ನಡಕ್ಕೇನು ಮಾಡಿದ್ದಾರೆ ಎಂಬುದು ಅವರ ಹಾಸ್ಯ


ತಮ್ಮ ಕೊಡುಗೆ ಏನೆಂಬುದು ಗೊತ್ತಿಲ್ಲ ಅವರಿಗೆ

ಗೊತ್ತಿಲ್ಲದವರ ಬಗ್ಗೆ ಮಾತಾಡಲು ಬರುತ್ತದೆ ಇವರಿಗೆ


ಅದಕ್ಕಲ್ಲವೇ ಇರುವುದು ಗಾದೆ

ಪ್ರತ್ಯಕ್ಷವಾಗಿ ನೋಡಿದರೂ ಪ್ರಮಾಣಿಸಿ ನೋಡೆಂದು

ಇದು ಗೊತ್ತಿಲ್ಲವೇ ಇವರಿಗೆಂದೂ


ಐ.ಟಿಯವರನ್ನು ನಂಬಿ ಬದುಕ್ಕುತ್ತಿರುವವರು ಎಷ್ಟೋ ಜನರು

ಅವರಲ್ಲಿ ಯಾರೂ ಇಲ್ಲವೇ ಈ ತೆಗಳುವ ಕುಟುಂಬದವರು


ತಮಿಳು ತೆಲುಗು ಮಲಯಾಲಿಗಳಿಗೂ ಕಲಿಸುತ್ತಾರವರು ಕನ್ನಡವನ್ನ

ಕಲಿತವರು ಮಾಡುತ್ತಾರೆ ಅವರಿಗೆ ನಮನವನ್ನ


ಅವರ ಮನೆಗೆ ಹೋದ್ರೆ

ಸಿಗುವುದು ಕನ್ನಡ ಪುಸ್ತಕಗಳ ಜಾತ್ರೆ


ಮಾಡದಿರಿ ಒಂದು ವರ್ಗದ ನಿಂದನೆಯನ್ನ

ಬೇರ್ಪಡಿಸದಿರಿ ನಮ್ಮಗಳ ಸಂಬಂಧವನ್ನ


ನಾ ಬಹಳ ನೋಡಿದ್ದೇನೆ ಐ.ಟಿಯಲ್ಲದವರನ್ನು

ಕನ್ನಡ ಬಂದರೂ ಬಾರದಂತೆ ನಟಿಸುವವರನ್ನು


ನಮ್ಮನಮ್ಮಲ್ಲೇ ಯಾಕೀ ಘರ್ಷಣೆ

ಮಾಡಿಕೊಳ್ಳುವ ಹೊರಗಿನವರಿಂದ ನಮ್ಮ ನುಡಿಯ ರಕ್ಷಣೆ

ಮೊದಲ ಕವನ

ವಿಸ್ಮಯವೆಂಬ ನನ್ನ ಮನೆಯ ಮೇಲೆ
ನಾ ಬರೆಯಲು ಕುಳಿತೆ ಕನ್ನಡದ ವರ್ಣಮಾಲೆ
ಆಮೇಲೆ ಹರಿಯಿತು ಪದಗಳ ಸರಮಾಲೆ

ಸೂರ್ಯ ಚಂದ್ರ ಚುಕ್ಕಿಗಳ ಸಂಗಮದಲಿ
ಮೋಡ ಮಂಜಿನ ಮುಸುಕಿನಲಿ
ಮಳೆ ಚಳಿ ಗಾಳಿಯಾಟದಲಿ
ಪ್ರಾಣಿ ಪಕ್ಷಿಗಳ ಒಡನಾಟದಲಿ
ಗಿರಿ ಶೃ೦ಗಗಳ ದೃಶ್ಯ ವೈಭವದಲಿ

ಅದೆಲ್ಲವನ್ನಿಲ್ಲಿಳಿಸಿದ್ದೇನೆ ಕವನಗಳ ರೂಪದಲಿ
ಇದು ಎಂದಿಗೂ ಮೂಡುತಿರಲಿ
ಎಂದು ಪ್ರಾರ್ಥಿಸುವೆ ಆ ದೇವರಲಿ

Wednesday, January 6, 2010

ಒಂದು ರೇಶನ್ ಕಾರ್ಡಿನ ಕಥೆ....

ನಮ್ಮೂರಲ್ಲಿ......

ಅಪ್ಪ ರೇಶನ್ ಕಾರ್ಡ್ನಲ್ಲಿ ನನ್ನ ಹೆಸರು ತೆಗೆಸ್ಬೇಕು ಬೆಂಗಳೂರಲ್ಲಿ ಮಾಡ್ಸ್ಬೇಕು ಅಂದ್ರೆ ಅಂದೆ, 'ಸರಿ, ತಾಲ್ಲೂಕಾಫೀಸಿಗೆ ಹೋಗಿ ಒಂದು ಅರ್ಜಿ ಕೊಟ್ಟು ಬರೋಣ ನಡಿ' ಅಂತ ನಮ್ಮಪ್ಪರು ಅಂದ್ರು. ಊರಿಂದ ಚಿಕ್ಕಮಗಳೂರಿಗೆ ಹೋದ್ವಿ. ಫುಡ್ ಆಪ್ಹೀಸಹತ್ರ ಹೋಗಿ ಕೇಳಿದ್ವಿ 'ನಿನ್ನ ಹೆಸರು ತೆಗೆಸ್ಬೇಕು' ಅಂತ ಒಂದು ಅರ್ಜಿ ಕೊಡಪ್ಪ ಅಂದ್ರು. 'ನನ್ನ ಹೆಸರಲ್ಲೇ ಬರ್ಕೊಟ್ರೆ ಆಗತ್ತಲ್ಲ' ಅಂದೆ. ಹೂಂ ಅಂದ್ರು.


ಆ ದಿನ ಟೈಪಿಂಗ್ ಮಾಡೋರು ಯಾರು ಇರ್ಲಿಲ್ಲ ಅಲ್ಲಿ. ವಿಧಿ ಇಲ್ಲದೆ ನಾನೇ ೨ ಅರ್ಜಿ ಬರೆದೆ (ಅಷ್ಟೊಂದು ಬರೆದ ಕಾರಣ ಕೈ ಬಾರಿ ನೋವ್ತಿತ್ತು, ಪೆನ್ ಅಷ್ಟೊಂದು ಧೀರ್ಘವಾಗಿ ಹಿಡಿದು ತುಂಬಾ ದಿನಗಳಾದ ಕಾರಣ ಅನ್ಸತ್ತೆ).


ಬರೆದು ಹೋಗಿ ಕೊಟ್ರೆ 'ಮನೆ ಯಜಮಾನ್ರ ಹೆಸರು ಮೊದ್ಲು ಬರ್ಬೇಕು, ಅವ್ರು ಹೇಳೋ ಹಾಗೆ ಇರ್ಬೇಕು' ಅಂದ್ರು. 'ನನ್ಮಗ ಮೊದ್ಲೇ ಹೇಳಬಹುದಿತ್ತಲ್ಲ' ಅಂದ್ಕೊಂಡು ಮತ್ತೆ ವಿಧಿ ಇಲ್ಲದೆ ಅಪ್ಪನಿಗೆ ಕೊಟ್ಟು 'ನೀವೇ ಬರೀರಿ ನನ್ನ ಕೈ ನೋಯ್ತಿದೆ' ಅಂತ ಕೊಟ್ಟೆ.


ನಂತರ ಹೋಗಿ ಮತ್ತೆ ಕೊಡೋದಕ್ಕೆ ಹೋದ್ರೆ 'ನಾವು ಇನ್ಸ್ಪೆಕ್ಶನ್ಗೆ ಹೋಗ್ತಿದಿವಿ, ಡಿಲೀಶನ್ ಸರ್ಟಿಫಿಕೆಟ್ ನಾಳೆ ಕೊಡ್ತೀವಿ' ಅಂದ್ರು.

ಸಾರ್ 'ಅದಕ್ಕೋಸ್ಕರ ಮತ್ತೆ ಊರಿಂದ ಬರ್ಬೇಕು, ಇವತ್ತೇ ಕೊಡೋದಕ್ಕೆ ಪ್ರಯತ್ನ ಮಾಡಿ' ಅಂದೆ.
'ಇಲ್ಲ ಇಲ್ಲ, ಆಗಲ್ಲ, ನಾಳೆ ಬರ್ರಿ' ಅಂದ್ರು.

ಮಾರನೆ ದಿನ ನಾನು ಮಾತ್ರ ಹೋದೆ. 'ಸರ್, ಡಿಲೀಶನ್ ಸರ್ಟಿಫಿಕೆಟ್' ರೆಡಿ ಆಯ್ತಾ ಅಂದೆ.


'ಇಲ್ರಿ, ಹೇಗಿದ್ರು ಹೊಸ ರೇಶನ್ ಕಾರ್ಡ್ ಬರ್ತಿದೆ, ಅದ್ರಲ್ಲಿ ನಿಮ್ಮ ಹೆಸರು ಇರತ್ತೆ, ಹಾಗಾಗಿ ಈಗ ಕೊಡೋದಕ್ಕಾಗಲ್ಲ, ಅದು ಬಂದಾದ್ಮೇಲೆ ಮತ್ತೆ ಒಂದು ಅರ್ಜಿ ಬರೆದುಕೊಡಿ' ಅಂದ್ರು.

ಇದು ಆಗದ ಕೆಲಸ ಅಂದ್ಕೊಂಡು, ನಮ್ಮಪ್ಪಂಗೆ ಫೋನ್ ಮಾಡಿ ಹಿಂಗೆ ಹೇಳ್ತಿದ್ದಾರೆ ಏನು ಮಾಡೋದು ಅಂದೆ. 'ನೀನು ಈಗ ಹೊರಡು, ನಾನು ಮಾಡುಸ್ತೀನಿ' ಅಂದ್ರು.


ನಾನು ವಾಪಸ್ ಬೆಂಗಳೂರಿಗೆ ಬಂದೆ.

೧೫ ದಿನ ಆದ್ಮೇಲೆ ನಮ್ಮಪ್ಪರು ಡಿಲೀಶನ್ ಸರ್ಟಿಫಿಕೆಟ್ ನನ್ನ ಕೈಲಿ ಇಟ್ರು.

ಒಂದು ದೊಡ್ಡ ಕೆಲಸ ಆಗಿತ್ತು ಇನ್ನೊಂದು ಬಾಕಿ ಇತ್ತು.



ಬೆಂಗ್ಳೂರಲ್ಲಿ.....

ಇಲ್ಲಿ ಫುಡ್ ಆಫೀಸಿಗೆ ಹೋಗಿ ಅರ್ಜಿ ಬರೆದು ಕೊಟ್ಟೆ.
ನನ್ನ ಪುಣ್ಯಕ್ಕೆ ಅವತ್ತೇ ಅವ್ರು ರಶೀತಿ ಕೊಟ್ಟು ೧ ವಾರ ಆದ್ಮೇಲೆ ಬಂದು ಫೋಟೋ ತೆಗೆಸಿಕೊಳ್ಳೋದಕ್ಕೆ ಹೇಳಿದ್ರು.

ಸರಿ ೧ ವಾರ ಆದ್ಮೇಲೆ ಅಂದ್ರೆ ನೆನ್ನೆ ಹೋದೆ.

ಅಪ್ಪ್ಲಿಕೇಶನ್ ನಂಬರ್ ಕೊಟ್ಟೆ. ಅವ್ರು ಇನ್ನು ಬಂದಿಲ್ಲ ಅಂದ್ರು. ಪಕ್ಕದ ಸೆಕ್ಷನ್ಗೆ ಹೋಗಿ ವಿಚಾರ್ಸಿ ಅಂದ್ರು. ಅಲ್ಲಿ ಕೇಳಿದ್ರೆ ಇಲ್ಲೂ ಬಂದಿಲ್ಲ, ಇನ್ನೊಂದು ಸೆಕ್ಷನ್ಗೆ ಹೋಗಿ ವಿಚಾರ್ಸಿ ಅಂದ್ರು.

ಅಲ್ಲಿ ಹೋದ್ರೆ ೩ ಗಂಟೆಗೆ ಬಾರೋ ಪುಣ್ಯಾತ್ಮ ೩.೪೫ಕ್ಕೆ ಬಂದ್ರು.
ಅವರನ್ನ ಕೇಳಿದ್ರೆ 'ತಡಿರಿ ನೋಡ್ತೀನಿ' ಅಂದ್ರು. ಸ್ವಲ್ಪ ಹೊತ್ತಾದ್ಮೇಲೆ 'ಇದು ನನ್ನ ಏರಿಯಾ ಅಲ್ಲ, ೧ 'ನ' ಬ್ಲಾಕ್ ಅಂತ ನಮಗೆ ಕೊಟ್ಟಿದ್ದಾರೆ ಆದ್ರೆ ನಿಮ್ಮದು ೧ 'ಕ' ಬ್ಲಾಕ್, ಹಾಗಾಗಿ ಎದ್ರುಗಡೆರ್ದು ಆ ಏರಿಯಾ ಅಲ್ಲಿ ಹೋಗಿ ವಿಚಾರ್ಸಿ' ಅಂದ್ರು.

ಅಲ್ಲಿ ಹೋಗಿ ಕೇಳಿದ್ರೆ 'ಈಗ ನಮಗೆ ಬಂದಿರೋದರಿಂದ, ನಾನು ಏರಿಯಾ ಇನ್ಸ್ಪೆಕ್ಶನ್ ಮಾಡ್ಬೇಕು, ಇನ್ನೊಂದು ದಿನ ಬನ್ನಿ' ಅಂದ್ರು.

ಆ ಇನ್ನೊಂದು ದಿನದ ಕಥೆ ಏನೋ....