Wednesday, September 26, 2012

ಬದಲಾವಣೆಯ ಹಾದಿಯಲ್ಲೊಮ್ಮೆ ಹಿಂದಿರುಗಿ ನೋಡಿದಾಗ

ಬೇಡ ಬೇಡ ಅನ್ನುತ್ತಲೇ ಬದಲಾವಣೆಗೆ ಅಂಟಿಕೊಂಡಿದ್ದೇವೆ. ಅದು ಬದುಕಿನ ಅನಿವಾರ್ಯವೂ ಆಗಿದೆ. ಇಲ್ಲದಿದ್ದರೆ ಕಾಲ ಮುಂದೆ ಓಡುತ್ತಿದ್ದರೆ ನಾವೆಲ್ಲಿ ಹಿಂದೆಬೀಳುತ್ತೀವೋ ಎನ್ನುವ ಭಯ, ಭಯದ ಜೊತೆಗೆ ನಮ್ಮನ್ನ ದಾಟಿ ಮುಂದೆ ಹೋಗುತ್ತಿರುವವರ ಜೊತೆ ಹೋಗುವ ಅಥವಾ ಅವರಿಗಿಂತ ಮುಂದೆ ಹೋಗಬೇಕೆನ್ನುವ ಧಾವಂತ, ಈ ಧಾವಂತದಲ್ಲಿ ಅದೆಷ್ಟೊಂದನ್ನ ಕಳೆದುಕೊಂಡಿದ್ದೇವೆ ಅನ್ನುವ ಯೋಚನೆಯೂ, ಆ ಯೋಚನೆಗೆ ಬೇಕಾದ ಸಮಯವೂ ನಮಗೆ ಸಾಲುತ್ತಿಲ್ಲ. ಬದುಕು ಬದಲಾಗಿದೆಯೇ ಅಥವಾ ಬದಲಾಗಿರುವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೀವೋ ಅಥವಾ ಬದಲಾವಣೆಯ ಬಯಸಿ ಆ ಬದುಕಿನ ನಿರೀಕ್ಷೆಯಲ್ಲಿರುವೆವೋ?. ಹೊಸತನ್ನ ಪಡೆಯುವ ಹಂಬಲದಲ್ಲಿ ಹಳತನ್ನ ಮರೆತುಬಿಟ್ಟು ಬಂದಿದ್ದೇವೆ, ಆ ಮರೆತ ವಸ್ತುವನ್ನ ಮತ್ತೆ ಪಡೆಯುವ ಮನಸ್ಸು ಈಗಿಲ್ಲ, ಒಂದು ವೇಳೆ ಇದ್ದರೂ ಹಿಂದಿರುಗಿ ಹೋಗಿ ಪಡೆಯುವ ಉತ್ಸಾಹವಿಲ್ಲ. ಆಗಿದ್ದಾಗಲಿ ಪಡೆದೇ ತೀರುತ್ತೇನೆಂಬ ಹುಮ್ಮಸ್ಸಿನಲ್ಲಿ ಬಂದ ದಾರಿಯಲ್ಲಿ ಹಿಂದಿರುಗಿ ಹೊರಟರೆ ಗಮ್ಯ ಸಿಗುವ ಸಾದ್ಯತೆ ತುಂಬಾಕಡಿಮೆ, ಸಿಕ್ಕರೂ ಆಗ ಅನುಭವಿಸಿದ್ದ ಆ ಭಾವ ಮತ್ತೆ ಮರಳಿ ಬರುವ ಸಾಧ್ಯತೆ ಕ್ಷೀಣ.

ಈ ಬದಲಾವಣೆ ಬೇಕಿತ್ತೇ ಎಂದು ಹಲುಬುತ್ತಿರುವ ಮತ್ತು ಅದರೊಂದಿಗೆ ಅನುಸರಿಸಿಕೊಂಡು ಹೋಗಬೇಕಾದ ಪೀಳಿಗೆ ಒಂದಾದರೆ, ಹಳತನ್ನ ಅನುಭವಿಸಿ ಹೊಸತನಕ್ಕೆ ಕಾಲಿಟ್ಟು ಎರಡಕ್ಕೂ ಸೇತುವೆಯಂತಿರುವ ಪೀಳಿಗೆ ಇನ್ನೊಂದು, ಅವೆರಡೂ ಗೊತ್ತಿರದೇ ಗೊತ್ತಿದ್ದರೂ ಅದನ್ನು ತಿಳಿದುಕೊಳ್ಳುವ ವ್ಯವಧಾನವಿಲ್ಲದೆ ತನ್ನದೇ ಆದ ಲೋಕದಲ್ಲಿ ವಿಹರಿಸುತ್ತಿರುವ ಪೀಳಿಗೆ ಮತ್ತೊಂದು. ಇದು ಹೀಗೆಯೇ ತಿರುಗಬೇಕಾದಂಥಹ ಚಕ್ರ, ಆದರೆ ಈ ಚಕ್ರವು ಸ್ವಲ್ಪ ಜಾಸ್ತಿಯೇತಿರುಗುತ್ತಿದೆ ಅನ್ನುವ ಅನುಮಾನ ಕಾಡದಿರಲಾರದು.

ದೂರದಲ್ಲಿ ಓದುತ್ತಿರುವ ಮಗನು ಹೇಗಿದ್ದಾನೋ, ತಿಂಡಿ ಊಟ ಚೆನ್ನಾಗಿ ಮಾಡುತ್ತಿರುವನೋ, ಬಟ್ಟೆಬರೆಗಳನ್ನ ಚೆನ್ನಾಗಿ ತೊಳೆದುಕೊಳ್ಳುತ್ತಿರುವನೋ ಎಂಬ ಯೋಚನೆ ಅಮ್ಮನಿಗೆ ಅದರಂತೆ ತನ್ನ ಗಂಡನಿಗೆ ಹೇಳಿ ಒಂದು ಇನ್ಲ್ಯಾಂಡ್ ಲೆಟರ್ ತರಿಸಿ ಅದರಲ್ಲಿ ಅವನ ಯೋಗಕ್ಷೇಮದ ಬಗ್ಗೆ ವಿಚಾರಿಸಲು ಬರೆಯಹೊರಟರೆ ಅಕ್ಕ ಮತ್ತೆ ತಂಗಿಗೂ ಅವನನ್ನ ವಿಚಾರಿಸುವ ಆಸೆ, ಖಾಲಿ ಇರುವ  ಜಾಗವನ್ನ  ಆದಷ್ಟು ಸಣ್ಣ  ಸಣ್ಣ ಅಕ್ಷರಗಳಿಂದ  ತುಂಬುವ  ಬಯಕೆ, ಅಂಟು ಹಾಕುವ ಜಾಗದಲ್ಲೂ ಮತ್ತೇನನ್ನೋ ಬರೆಯುವಾಸೆ, ಅಲ್ಲಿ ಬರೆದರೆ ಕಾಗದ ಹರಿಯುವಾಗ ಏನೂ ಕಾಣಿಸುವುದಿಲ್ಲ ಎಂದು ಅಮ್ಮ ಗದರಿಸಿದರೂ ಕೇಳದೆ ಬರೆದು, ಅಜ್ಜ  ಅಜ್ಜಿ ಹೇಳಿದ್ದನ್ನೂ ಸ್ವಲ್ಪ ಬರೆದು ಅಂಟನ್ನು ಹಾಕಿ ಪೋಸ್ಟ್ ಮಾಸ್ಟ್ರಿಗೆ ಕೊಟ್ಟರೆ ಏನೋ ಸಮಾಧಾನ. ಕಾಲೇಜ್ ಮುಗಿಸಿ ಹಾಸ್ಟೆಲ್ ತಲುಪಿ ತನ್ನ ಕೋಣೆಯ ಬಾಗಿಲು ತೆಗೆದ ತಕ್ಷಣ ಅಲ್ಲಿ ಕೆಳಗೆ ಬಿದ್ದಿರುವ  ಇನ್ಲ್ಯಾಂಡ್ ಲೆಟರ್ ತೆಗೆದು ಅದನ್ನು ನಿಧಾನಕ್ಕೆ ಹರಿದು ಓದಲು ತೊಡಗಿದರೆ ಅವನಿಗಾಗುತ್ತಿದ್ದ ಅನುಭೂತಿ ಅವಿಸ್ಮರಣೀಯ. ಕಾಗದ ಓದುತ್ತಿರುವಾಗ  ಆಗುತ್ತಿದ್ದ  ಆ ರೋಮಾಂಚನ ಬಹುಷಃ ಸ್ವತಹ ಅಪ್ಪ ಅಮ್ಮ ಅಕ್ಕ ತಂಗಿ ಎದುರಿಗೆ ಬಂದು ನಿಂತರೂ ಆಗುತ್ತಿರಲಿಲ್ಲವೇನೋ. ಸರಿ, ಘಟ್ಟದ  ಮೇಲಿಂದ  ಪತ್ರವೇನೋ ಬಂದಾಯ್ತು, ಈಗ ಘಟ್ಟದ ಮೇಲೆ ಪತ್ರ ಕಳಿಸಬೇಕಲ್ಲಾ, ಕಬೋರ್ಡಿನಲ್ಲಿರುತ್ತಿದ್ದ  ಪೋಸ್ಟ್ ಕಾರ್ಡ್ಗಳೆಲ್ಲವೂ ಖಾಲಿ.ಆದರೆ ನಾಳೆಯಿಂದ ಟೆಸ್ಟ್ಇದೆ. ಪೋಸ್ಟಾಫೀಸಿಗೆ ಹೋಗಿ ೧೫ ಪೈಸೆಯಒಂದು ಪೋಸ್ಟ್ಕಾರ್ಡ್ ತಂದು ಎಲ್ಲರ ಯೋಗಕ್ಷೇಮ ವಿಚಾರಿಸಿ, ತೋಟದಲ್ಲಿ ಏನು ಕೆಲಸ,  ಬೇಸಾಯಕ್ಕೆ ಮಳೆ ಚೆನ್ನಾಗಿ ಬಂತೇ, ಗದ್ದೆ ನಾಟಿಯಾಯಿತೇ, ಕರಿಯ ಬಿಳಿಯ (ಎತ್ತುಗಳು) ಚೆನ್ನಾಗಿವೆಯೇ, ಮಂಜ, ಭೈರ ಚಿಕ್ಕನನ್ನ ವಿಚಾರಿಸಿ ಟೈಗರನ್ನ (ಮನೆಯ ನಾಯಿ) ವಿಚಾರಿಸಿ, ಮಳೆಗಾಲ ಮುಗಿದ ಕೂಡಲೇ ಊರಿಗೊಮ್ಮೆ ಬರುವುದಾಗಿ ಹೇಳಿ  ಎಂದು ಹೇಳುವಷ್ಟರಲ್ಲಿ ಕಾಗದದ ಕೊನೆ ಬಂದು, ಇನ್ನುಳಿದದ್ದನ್ನ  ಅಡ್ರೆಸ್  ಬರೆಯುವ  ಜಾಗದ ಕೆಳಗೆ  ತುರುಕುವ  ಸನ್ನಾಹ, ಕೋಡುಬಳೆ, ಕರ್ಜಿಕಾಯಿ, ಕೆಸಿನ ಸೊಪ್ಪು ಕಾಯಿ ಕಡುಬು ಎಲ್ಲಾ ಮಾಡಿರು ಎಂದು ಅಮ್ಮನಿಗೆ ಹೇಳುವಲ್ಲಿಗೆ ಕಾಗದ ತನ್ನ ಜೀರ್ಣಶಕ್ತಿಯನ್ನ ಕಳೆದುಕೊಂಡಿರುತ್ತಿತ್ತು.    

ಅಪ್ಪ-ಮಗನಿಗೆ, ಅಳಿಯ-ಮಾವನಿಗೆ, ಮಗಳು-ಅಪ್ಪನಿಗೆ,ಗಂಡ-ಹೆಂಡತಿಗೆ, ಸುಗ್ಗಿಹಬ್ಬಕ್ಕೆ, ಊರ ಜಾತ್ರೆಗೆ, ಸಂತಸಕ್ಕೆ, ಭಾಂದವ್ಯಕ್ಕೆ, ನಲಿವಿಗೆ, ನೋವಿಗೆ ಬರೆದ ಕಾಗದಗಳೆಷ್ಟೋ, ಎಲ್ಲವೂ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ. ಪುಟ ತಿರುಗಿಸ ಹೋದರೆ ಹಳೆಯ ಸುಮಧುರ ನೆನಪುಗಳ ಖೋಡಿ. ಆದರೀಗ ಎಲ್ಲವೂ ಬದಲಾಗಿ ಹೋಗಿದೆ.  ಕೇವಲ ಒಂದು ಕರೆಯಿಂದ  ಮೇಲಿನ ಎಲ್ಲಾ ವಿಷಯಗಳನ್ನ ಬಾಯಿಮಾತಿನಲ್ಲಿ ಹೇಳಿ ಮುಗಿಸುವ ಮಟ್ಟಕ್ಕೆ ಬಂದು ನಿಂತಿದ್ದೇವೆ ನಾವು. ಒಂದು ಮೊಬೈಲ್ ಎನ್ನುವ ಸಾಧನವು ಪತ್ರ ವ್ಯವಹಾರವನ್ನು, ಅದು ಕೊಡುತ್ತಿದ್ದ  ಆ ರೋಮಾಂಚನವನ್ನು, ಆ ಅಕ್ಷರಗಳಲ್ಲಿ ತುಂಬಿರುತ್ತಿದ್ದ  ಭಾವಗಳನ್ನ ನುಂಗಿ ಹಾಕಿದೆ.

ಆಗೆಲ್ಲಾ ದೂರದಲ್ಲಿರುವ ಸಂಬಂಧಿಕರ ಬಳಿ ಫೋನಿನಲ್ಲಿ ಮಾತನಾಡುವುದೆಂದರೆ ಒಂದು ಹಬ್ಬದ ವಾತಾವರಣ ನಿರ್ಮಾಣವಾಗುತ್ತಿತ್ತು. ಆ ಫೋನಿನ ರಿಸೀವರ್ ಎತ್ತಿ ಬೇಕಾದ  ಸಂಖ್ಯೆಯಲ್ಲಿ ಬೆರಳಿಟ್ಟು ಅದಿರುವ ಜಾಗದಿಂದ ಕೊನೆಗೆ ಮುಟ್ಟಿಸಿದರೆ ಏನೋ ಪುಳಕ. ಟ್ರಂಕ್ ಕಾಲ್ ಮಾಡಿ ಆ ಕರೆಗೆ ಮನೆಮಂದಿಯೆಲ್ಲಾ ಚಾತಕ ಪಕ್ಷಿಯಂತೆ ಕಾದು ಕುಳಿತಿರುತ್ತಿದ್ದರು, ಬಂದರೆ ೧೫ ನಿಮಿಷವಾದ ಮೇಲೆ ಇಲ್ಲವೆಂದರೆ ೧ ಘಂಟೆ ೨ ಘಂಟೆ ಕಾಯಬೇಕಾಗುತ್ತಿತ್ತು. ಕಾಲ್ ಬಂದ ನಂತರ ನೆಂಟರ ಜೊತೆ ಮಾತನಾಡುವ ಸಂಭ್ರಮವಿದೆಯಲ್ಲಾ ಅದನ್ನ ನೋಡಿಯೇ ಅನುಭವಿಸಬೇಕು.  ಕೆಲವೊಮ್ಮೆ ರಾತ್ರಿ ಟ್ರಂಕ್ ಕಾಲ್ ಮಾಡಿದರೆ ಬೆಳಗ್ಗೆ ಬರುತ್ತಿದ್ದ ಉದಾಹರಣೆಗಳುಂಟು!. ಈಗ ದೂರವಾಣಿ ಎನ್ನುವುದು ಅದರ ಹೆಸರಿಗೆ ತಕ್ಕಂತೆ ಆಗಿದೆ. ಮನೆಯಲ್ಲಿರುತ್ತಿದ್ದ ಚೆಂದಚೆಂದದ ಫೋನ್ಗಳು ಈಗ ಬರಿಯ ನೆನಪುಗಳು. ಮೊಬೈಲ್ ಎಂಬ ಮಹಾದೈತ್ಯ ಅವುಗಳ ಸ್ಥಾನವನ್ನು ಕಸಿದುಕೊಂಡಿದೆ. ತಂತ್ರಜ್ನ್ನಾನ ಮಾನವನ ಕೆಲಸಗಳನ್ನು ಸುಲಭ ಸಾಧ್ಯವಾಗಿಸಿದೆ, ಆದರೆ ಯಾವ ಪುರುಷಾರ್ಥಕ್ಕೆ? ಮೊಬೈಲ್ ಎದುರಿಗಿದ್ದರೂ ನೆಂಟರಿಷ್ಟರ ಬಳಿ ಮಾತನಾಡಲು ಸಮಯವಿಲ್ಲವೇನೋ ಎಂಬಂತೆ ವರ್ತಿಸುತ್ತಿದ್ದೇವೆ. ಮನಸ್ಸುಗಳು ಅಷ್ಟರ ಮಟ್ಟಿಗೆ ಸಂಕುಚಿತಗೊಂಡಿವೆ.

ನೆಂಟರಿಷ್ಟರ ಮನೆಗೆ ಹೊರಡುವುದೇ ಸಂಭ್ರಮ, ಮಾವನ ಮನೆಗೋ ಅತ್ತೆಯ  ಮನೆಗೋ, ಅಮ್ಮನ ತವರು ಮನೆಗೋಹೋಗಲು ಅಪ್ಪ ಒಪ್ಪಿಗೆ ಕೊಟ್ಟಾಕ್ಷಣ  ಮಾಡಿಯ (ಮಹಡಿ) ಮೇಲೆ ಇರುವ ಬ್ಯಾಗನ್ನ ಹುಡುಕಿ ಅದಕ್ಕೆ ೪-೫ ಜೊತೆ ಬಟ್ಟೆ ಹಾಕಿ ಅಮ್ಮ ಮತ್ತೆ ಅಕ್ಕನ  ಜೊತೆ  ಹೊರಟು ಬಸ್ ಸ್ಟ್ಯಾಂಡಿಗೆ ಬಂದು ಬಸ್ಸಿಗೆ ಕಾಯ್ದು ಅದು ಬಂದಾಕ್ಷಣ ಹತ್ತಿ ಆ ಜನಜಂಗುಳಿಯಲ್ಲಿ ನುಗ್ಗಿ ಪೇಟೆ ಬಂದ ತಕ್ಷಣ ಇಳಿದು ಎದುರುಗಡೆ ಇರುವ ಸಿನೆಮಾ ಮಂದಿರದಲ್ಲಿ ಯಾವ ಸಿನೆಮಾ ಎಂದು ಕಣ್ಕಣ್ಬಿಟ್ಟು ನೋಡುತ್ತಿರುವಷ್ಟರಲ್ಲಿ ಅಮ್ಮ ಕೈ ಎಳೆದು ಇನ್ನೊಂದು ಬಸ್ಸಿಗೆ ಹತ್ತಿಸಿದಾಗಲೇ ಆ ಸ್ವಪ್ನಲೋಕದಿಂದ ಎಚ್ಚರ. ಮಾವನ ಮನೆ ತಲುಪಿದಾಕ್ಷಣ ಅಲ್ಲಿ ಆಡುತ್ತಿದ್ದ ಮಾವನ ಮಕ್ಕಳು ಅತ್ತೆ, ಅಕ್ಕ ಅಣ್ಣ ಬಂದ್ರು ಅಂತ ಕಿರುಚಿ ಒಳಗೆ ಓಡಿದರೆ ಅವರು ಬಂದ ವಿಷಯ ಕ್ಷಣಾರ್ಧದಲ್ಲಿ ತಿಳಿಯುತ್ತಿತ್ತು. ಅತ್ತೆ ಹೊರಬಂದು ಕಾಲು ತೊಳೆಯಲು ತಂಬಿಗೆಯಲ್ಲಿ ನೀರು ತಂದು ಇಡುವಷ್ಟರಲ್ಲಿ ಮಾವನ ಮಕ್ಕಳ ಜೊತೆ ಇವನು ತೋಟದ ಹಾದಿ ಹಿಡಿದಾಗಿರುತ್ತಿತ್ತು, ಸೀಬೆ, ಕಿತ್ತಲೆ, ಚಕೋತ, ನೇರಳೆ ಹಣ್ಣು ಎಲ್ಲವೂ ಆ ಸಣ್ಣ ಹೊಟ್ಟೆಯಲ್ಲಿ ಎಷ್ಟು ಬೇಕೋ ಅಷ್ಟು ಸ್ಥಾನವನ್ನ ಆಕ್ರಮಿಸಿಕೊಂಡಿರುತ್ತಿದ್ದವು.ಅಮ್ಮ ಮಾರನೇ ದಿನ ಮನೆಗೆ ಹೊರಟುಬಿಡುತ್ತಿದ್ದಳು, ಇವನು ಒಂದು ವಾರ ಮಾವನ ಮಕ್ಕಳ ಜೊತೆ ಸೇರಿ ಊರು ಕೊಳ್ಳೆ ಹೊಡೆದೇ ಊರಿಗೆ ಹಿಂದಿರುಗುತ್ತಿದ್ದದ್ದು. ಆದರಿಂದು ನೆಂಟರ ಮನೆಯಲ್ಲಿ ವಾರಗಟ್ಟಲೆ ಉಳಿಯುವುದಿರಲಿ, ಹೋಗಿಬರುವುದೇ ಕಡಿಮೆಯಾಗಿದೆ. ಒಂದೊಮ್ಮೆ ಹೋದರೂ ಒಂದು ಹೊತ್ತು ಊಟ ಮಾಡಿ ತುಂಬಾ ಹೊತ್ತಾಯಿತು ಎಂದು ಹೊರಡುವ ಪರಿಸ್ತಿತಿ ಬಂದಿದೆ. ಸಂಬಂಧಗಳು ಸಂಕೀರ್ಣಗೊಂಡಿವೆ, ಅಪ್ಪನ ಕಡೆಯವರು ಅಮ್ಮನ  ಕಡೆಯವರು ಯಾರೊಬ್ಬರೂ ಗೊತ್ತಿಲ್ಲ, ಅಪ್ಪ,ಅಮ್ಮನನ್ನೇ ಮಾತನಾಡಿಸಲು ಪುರುಸೊತ್ತಿಲ್ಲದಿರುವಾಗ ಅತ್ತೆ ಮಾವ ಅಣ್ಣ ಅತ್ತಿಗೆ ಅಕ್ಕ ಬಾವ ಇನ್ನೆಲ್ಲಿ ನೆನಪಿಗೆ ಬಂದಾರು?.

ಟಿ. ವಿ ನಮ್ಮನ್ನೆಲ್ಲಾ ಆಕ್ರಮಿಸುವ ಮುಂಚೆ ನಮ್ಮೆಲ್ಲರನ್ನ ಸೂರೆಗೊಂಡಿದ್ದ  ಸಾಧನ ರೇಡಿಯೋ, ಕೇಳುಗರಿಗೆ ಒಂದು ಅಭೂತಪೂರ್ವವಾದ ಅನುಭವ ಕೊಡುತ್ತಿದ್ದ ಒಂದು ಅಶರೀರವಾಣಿ. ಬೆಳಗ್ಗೆ ಎದ್ದು ಓದುತ್ತಾ ಕುಳಿತರೆ, ಮನೆಯ ಚಾವಡಿಯಲ್ಲಿ ಅಪ್ಪ ಹಾಕಿಟ್ಟ ರೇಡಿಯೋ ತನ್ನ ಕೆಲಸವನ್ನ ಪ್ರಾರಂಭಿಸುತ್ತಿತ್ತು. ಮೊದಮೊದಲು ಕಿವಿಗೆ ಕೇಳಿಸುತ್ತಿದ್ದದ್ದು ಸಂಸ್ಕೃತ ವಾರ್ತೆ, ಆಮೇಲೆ ಪ್ರದೇಶ ಸಮಾಚಾರ, ಆ ನಂತರ ವಾರ್ತೆಗಳು ನಂತರ ಚಿತ್ರಗೀತೆಗಳು. ಆ ಚಿತ್ರಗೀತಗಳನ್ನ ಕೇಳುವುದೇ ಒಂದು ಆನಂದದ ಕ್ಷಣ. ಕ್ರಿಕೆಟ್  ಪಂದ್ಯ ನಡೆಯುವಾಗ ಯಾರಾದರೂ ರೇಡಿಯೋವನ್ನ ಕಿವಿಗೆ ಆನಿಸಿಕೊಂಡಿದ್ದರೆ ಅವರು ಕಾಮೆಂಟರಿ ಕೇಳುತ್ತಿದ್ದಾರೆ ಎಂದೇ ಅರ್ಥ, ಅವರ ಹತ್ತಿರ ಹೋಗಿ ಸ್ಕೋರ್ ಕೇಳಿದರೇ ಸಮಾಧಾನ. ಸಾಮಾನ್ಯವಾಗಿ ಆಗ ಯಾರಿಗೂ ಕಾಮೆಂಟರಿ ಅರ್ಥವಾಗುತ್ತಿರಲಿಲ್ಲ ಆದರೆ ಓವರ್ ಆದ ತಕ್ಷಣ  ಸ್ಕೋರ್ ಹೇಳುತ್ತಿದ್ದುದರಿಂದ ಗೊತ್ತಾಗುತ್ತಿತ್ತು. ಅದರ ನಂತರ ಕ್ರಮೇಣ  ಟಿ. ವಿ ಕೆಲವರ ಮನೆಗಳನ್ನ ಪ್ರವೇಶಿಸಿತು, ಯಾರದೋ ಮನೆಗೆ  ಟಿ. ವಿ ಬಂತೆಂದರೆ ಇಡೀ ಊರಿನ ಹುಡುಗರ ಹಿಂಡು ಅಲ್ಲಿ ನೆರೆದಿರುತ್ತಿತ್ತು. ಆ ಆಂಟೆನಾ ತಿರುಗಿಸಿ  ಟಿ. ವಿ ಸೆಟ್ ಆದ ಬಳಿಕ  ಟಿ. ವಿಯ ಮುಂದೆ ಇಡೀ ವಟಾರವೇ ಬಂದು ಕುಳಿತಿರುತ್ತಿತ್ತು. ರಾಮಾಯಣ, ಮಹಾಭಾರತ, ಚಿತ್ರಹಾರ್, ಚಿತ್ರಮಂಜರಿ....ದೂರದರ್ಶನ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿತ್ತು. ಆ ಕಾರ್ಯಕ್ರಮಗಳನ್ನ ನೋಡುತ್ತಿದ್ದರೆ ತಾವೇ ಅದರಲ್ಲಿ ಲೀನವಾಗಿ ಹೋಗಿರುವ ಭಾವ. ಆದರಿಂದು ಹಲವಾರು ಎಫ್ ಎಂಗಳ ಭರಾಟೆಯಲ್ಲಿ, ನೂರಾರು ಚಾನೆಲ್ಗಳ ಸಾಗರದಲ್ಲಿ ಮುಳುಗಿಹೋಗಿದ್ದೇವೆ. ಎಷ್ಟು ನೋಡಿದರೂ, ಯಾವುದನ್ನೇ ನೋಡಿದರೂ ಅತೃಪ್ತಿಯೇ. ಚಾನೆಲ್ಗಳಿಗಾಗಿ ಅಣ್ಣ ತಂಗಿ ಅಕ್ಕ ತಮ್ಮನಲ್ಲೇ ಕಿತ್ತಾಟ. ಆಗ ಸ್ವಲ್ಪವಿದ್ದರೂ ಎಲ್ಲವೂ ಸಿಕ್ಕ ಸಂತೃಪ್ತಿ, ಈಗ ಅತಿಯಾಗಿದ್ದರೂ ಏನೂ ಸಿಗದ  ಅತೃಪ್ತಿ.

ಅಮ್ಮ ಮಾಡಿಕೊಟ್ಟ ಕೋಡುಬಳೆ, ಅದನ್ನು ಆ ಮಳೆಯಲ್ಲಿ ಮೆಲ್ಲುತ್ತಾ ಕುಳಿತ ಸಂಭ್ರಮ ಬಹುಷಃ ದೊಡ್ಡ ಬೇಕರಿಯಲ್ಲಿ ಭಿನ್ನ ಭಿನ್ನವಾದ ತಿಂಡಿಗಳನ್ನ ಕೊಂಡು ಆ ಜನಜಂಗುಳಿಯ ಮಧ್ಯೆ ತಿನ್ನುವಾಗ ಬರದು. ಅಪ್ಪ ಕೊಟ್ಟ ೫೦ ಪೈಸೆಯಲ್ಲಿ ಎರಡು ಟಾಫೀ (ಕಡ್ಲೆ ಮಿಠಾಯಿ) ಮತ್ತೆ ೧೦ ಗೋಲಿ ತೆಗೆದುಕೊಂಡಾಗ ಆದ ಸಂತೋಷ ಈಗ ಸಾವಿರ ರೂಪಾಯಿ ಕೊಟ್ಟರೂ ಸಿಗಲಾರದು. ಕೆಂಡದ ಮೇಲೆ ರೊಟ್ಟಿ ಬೇಯುತ್ತಿರುವಾಗ ಅದನ್ನು ತೆಗೆದುಕೊಳ್ಳಲು ಅಣ್ಣನ, ತಮ್ಮನ, ಅಕ್ಕನ, ತಂಗಿಯ ಜೊತೆ ಕಿತ್ತಾಡಿ ತಿಂದಾಗ ಸಿಗುತ್ತಿದ್ದ ತೃಪ್ತಿ ಯಾವುದೇ ಫೈವ್ ಸ್ಟಾರ್ ಹೋಟೆಲ್ನ ನೀರವ ವಾತಾವರಣದಲ್ಲಿ ಕೂತು ತಿನ್ನುವಾಗ ಸಿಗುವುದಿಲ್ಲ. ಜಾತ್ರೆಯಲ್ಲಿ ನಾಲ್ಕಾಣೆಗೆ ಕೊಂಡ ಬಲೂನ್ ಸೃಷ್ಟಿಸುತ್ತಿದ್ದ ಜಾದೂ ಈಗಿನ ಯಾವುದೇ ಮಾಲ್ಗಳಲ್ಲಿ ಕೊಂಡರೂ ಬರುವುದಿಲ್ಲ. ಆ ದಿವ್ಯ  ಮೌನದಲಿ ಮುಂಜಾವಿನಲ್ಲಿ ನೀಲಾಕಾಶದಲ್ಲಿ ಸೂರ್ಯೋದಯ, ಮುಸ್ಸಂಜೆಯಲಿ ದಿಗಂತದಲ್ಲಿ ಸೂರ್ಯಾಸ್ತ, ರಾತ್ರಿಯ ಹೊತ್ತು ಆಗಸದಲ್ಲಿ ಮೂಡುತ್ತಿದ್ದ ನಕ್ಷತ್ರಗಳ ಚಿತ್ತಾರ ನೀಡುತ್ತಿದ್ದ ಆ ದಿವ್ಯಾನುಭವವನ್ನ ಕಾಂಕ್ರೀಟ್ ಕಾಡು ಮುಚ್ಚಿಹಾಕಿದೆ.

ಅಕ್ಕ ತಂಗಿ ತಮ್ಮಂದಿರ ಜೊತೆ ಚೌಕ ಭಾರ, ಚೆನ್ನಮಣೆ ಆಡಿದ, ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳ ಜೊತೆಗೆ ತೋಟಕ್ಕೆ ನುಗ್ಗಿದ, ಬಸ್ಸಿನ ಮೇಲೆ ಕುಳಿತು ಹೋದ, ದನ ಕಾಯ್ದ, ಊರ ಹುಡುಗರೊಂದಿಗೆ ಆಡಿದ ಗೋಲಿ, ಬುಗುರಿ, ಮರಕೋತಿಯಾಟ, ಲಗೋರಿ ಇವೆಲ್ಲವೂ ಈಗ ನೆನಪುಗಳು. ಮತ್ತೊಮ್ಮೆ ಬಯಸಿದರೂ ಬಾರದು, ಬಯಸುವುದು ಒತ್ತಟ್ಟಿಗಿರಲಿ ಈಗ ಹೋಗಿ ನೋಡಿಅನುಭವಿಸೋಣವೆಂದರೂ ಸಿಗದಂತಹ ಹಂತಕ್ಕೆ ಬಂದು ನಿಂತಿದ್ದೇವೆ. ಬಯಸದೆ ಬಂದ ಬದಲಾವಣೆಗೆ ಒಗ್ಗಿಕೊಂಡು ಹಳತನ್ನ ಹಿಂದೆ ಬಿಟ್ಟು ಬಂದಿದ್ದೇವೆ. ಒಮ್ಮೆ ಹಿಂದಿರುಗಿ ನೋಡಿ, ಎಲ್ಲವೂ ಕಾಣೆಯಾಗಿದ್ದರೂ ನಮ್ಮೊಟ್ಟಿಗೆ ಆಡಿದ, ನೋವಿಗೆ, ನಲಿವಿಗೆ ಸ್ಪಂದಿಸಿದ, ಸುಮಧುರ ಕ್ಷಣಗಳಿಗೆ ಸಾಕ್ಷಿಯಾದ, ನೆನಪಿಸಿಕೊಳ್ಳಲಾರದೆ ಮರೆತೇಹೋದ ಎಷ್ಟೋ ಬಂಧು ಬಾಂಧವರು,ಸ್ನೇಹಿತರು, ಹಿತೈಷಿಗಳು ಇದ್ದಾರೆ. ಭೇಟಿಯಾಗಲಾಗದಿದ್ದರೂ ಅವರಿಗೊಂದು ಕರೆ ಮಾಡಿ ಆ ನೆನಪುಗಳು ಮತ್ತೊಮ್ಮೆ ಚಿಮ್ಮಿ ಬರಬಹುದು. ಮರೆತುಹೋದ ಭಾವಗಳೆಲ್ಲಾ ಮತ್ತೊಮ್ಮೆ ಮರಳಿ ಬರಬಹುದೇನೋ.

Wednesday, August 29, 2012

ಕೆರೆತದ ಕಪಿಮುಷ್ಟಿಯಲ್ಲಿ!


ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ರಾಜಹಂಸದ ಜೊತೆಗೆ ಕೊಟ್ಟ ಉಚಿತ ಉಡುಗೊರೆಯಿಂದ ರಾತ್ರಿ ಪೂರ್ತಿ ನಿದ್ರೆ ಎಕ್ಕುಟ್ಟಿ ಹೋಗಿತ್ತು. ಬಹುಶಃ ರಾಜಹಂಸದಲ್ಲಿ ಪ್ರಯಾಣಿಸಿದವರಿಗೆ ಮೊದಲ ಸಾಲು ಓದಿದ ಕೂಡಲೇ ಅವರ ನಿದ್ರೆ ಹಾರಿದ ರಾತ್ರಿಗಳು ನೆನಪಿಗೆ
ಬಂದಿರಬಹುದು. ಸೀಟಿನಲ್ಲಿ ಸುಖವಾಗಿ ನಿದ್ರಿಸುತ್ತಿದ್ದ ತಿಗಣೆಗಳು ನಮ್ಮ ದೇಹವನ್ನು ಸೀಟಿನ ಮೇಲೆ ಊರಿದಾಗ ಬೆಂಗಳೂರಿನ ಹಸಿದ ಬೀದಿ ನಾಯಿಗಳು ಮನುಷ್ಯರ ಮೇಲೆ ಆಕ್ರಮಣ ಮಾಡುವಂತೆ ನಮ್ಮ ದೇಹವನ್ನೆಲ್ಲಾ ಮುತ್ತತೊಡಗಿದವು. ರಕ್ತಕಣ್ಣೀರು ಚಿತ್ರದಲ್ಲಿ ಉಪೇಂದ್ರರ ಕೆರೆತವನ್ನೂ ಮೀರಿಸುವಂತಿತ್ತು ನಮ್ಮ ಕೆರೆತ. ಕಣ್ಮುಚ್ಚಿಕೊಂಡೇ ಕೈಗಳು ಮೈಮೇಲೆ ಹರಿದಾಡುತ್ತಿದ್ದವು. ಅಂತೂ ಇಂತೂ ಮುಂಜಾನೆಯ ಹೊತ್ತಿಗೆ ಪೇಟೆ ತಲುಪಿದ್ದಾಯಿತು. ಪಕ್ಕದಲ್ಲಿ ಕೂತಿದ್ದ ಮಾವನವರಿಗೂ ನಿದ್ರೆ ಬಂದಿರಲಿಲ್ಲ, ಆದರೆ ಫಾರ್ಮಾಲ್ಯಿಟಿಗಾದರೂ
ಕೇಳಬೇಕೆಂದು ಬಸ್ಸಿಂದ ಇಳಿದ ಮೇಲೆ ನಿದ್ರೆ ಬಂತೆ ಚೆನ್ನಾಗಿ? ಅಂದೆ. 'ತಿಗಣೆ' ಅಂತ ಕೇವಲ ಒಂದೇ ಪದದಲ್ಲಿ ನನ್ನ ಪ್ರಶ್ನೆಗೆ ಉತ್ತರ ಹೇಳಿ ಸುಮ್ಮನಾದರು. ಶರ್ಟ್ ಕಾಲರ್ ತೆಗೆದು ತಿಗಣೆ ಏನಾದರೂ ಇದೆಯೋ ನೋಡಿ ಅಂದರು, ನಾನು ನೋಡಿ ಇಲ್ಲ ಅಂದೆ. ಮುಂದೆ ಆ ವಿಚಾರದ ಬಗ್ಗೆ ಯಾವುದೇ ಪ್ರಶ್ನೆಯೆತ್ತಲಿಲ್ಲ.

ಚಳಿಗೆ ನಡುಗುತ್ತಿದ್ದ ದೇಹಕ್ಕೆ ಬೆಚ್ಚನೆಯ ಕಾಫಿ ಕುಡಿಸಿ ಊರಿನ ಬಸ್ಸಿಗಾಗಿ ಕಾಯುತ್ತಾ ಕುಳಿತೆವು. ೧೦ ನಿಮಿಷದ ನಂತರ ಬಸ್ಸು ಬಂತು. ಹಾಲು ತೆಗೆದುಕೊಂಡು ಬಾ ಎಂದು ಅಮ್ಮ ಹೇಳಿದ್ದರಿಂದ ಡ್ರೈವರಿಗೆ ಹೇಳಿ ಬಸ್ಸನ್ನು ನಂದಿನಿ ಹತ್ತಿರ ನಿಲ್ಲಿಸಿ ಹಾಲು ತರಲು ಓಡಿದೆ, ನನ್ನ ನಿದ್ರೆಯಿಲ್ಲದ ನೇತ್ರಗಳನ್ನು ನೋಡಿದ ಮತ್ತು ಬಸ್ಸು ನನಗಾಗಿ ಕಾಯುತ್ತಿದೆ ಎಂದು ಅರಿತ ಡೈರಿಯಲ್ಲಿದ್ದ ವ್ಯಕ್ತಿ ಪರಿಸ್ತಿತಿಯ ಲಾಭ ಪಡೆದು ಎರಡು ರೂಪಾಯಿಯನ್ನು ಜಾಸ್ತಿ ತೆಗೆದುಕೊಂಡು ನನಗೆ ಏಮಾರಿಸಿದ್ದ. ಅರ್ಧ ಘಂಟೆಯ ಹಾದಿ ಊರಿಗೆ, ಆ ಅರ್ಧ ಘಂಟೆ ಸಂಪೂರ್ಣವಾಗಿ ನಿದ್ರಾದೇವಿ ನಮ್ಮ ಸಂಕಷ್ಟವನ್ನ ನೋಡಲಾರದೆ ನಮಗೆ ನಿದ್ರೆಯನ್ನ ದಯಪಾಲಿಸಿದ್ದಳು.

ಊರು ಬಂದ ಬಳಿಕ ಬಸ್ಸಿಂದಿಳಿದು ಮನೆಯ ಕಡೆ ಹೆಜ್ಜೆ ಹಾಕಿದೆವು. ಮಲೆನಾಡಿನಲ್ಲಿ ಸಾಮಾನ್ಯವಾಗಿ ಈ ಸಮಯದಲ್ಲಿ ಮಳೆ ಒಂದೇ ಸಮನೆ ಸಣ್ಣಗೆ ಸುರಿಯಬೇಕಾಗಿತ್ತು ಆದರೆ ಈ ವರ್ಷ ಕಣ್ಣಾಮುಚ್ಚಾಲೆ ಆಡುತ್ತಿದ್ದುದರಿಂದ ಬೇಸಗೆಯಂತೆ ಇತ್ತು. ಮನೆ ತಲುಪಿದ ತಕ್ಷಣ ಅಮ್ಮ ಬಂದು ಯೋಗಕ್ಷೇಮ ವಿಚಾರಿಸಿದ ಬಳಿಕ ಮಾವನವರು ಕೈ-ಕಾಲು ತೊಳೆಯಲು ಒಳಗೆ ಹೋದರು. ನಾನು ಅಲ್ಲೇ ಕೂತದ್ದನ್ನು ನೋಡಿ 'ಯಾಕೆ ಇಲ್ಲೇ ಕೂತ್ಕೊಂಡೆ, ಚಳಿ ಇದೆ ಕೈ ಕಾಲು ತೊಳ್ಕೊಂಡು ಬಿದ್ಕೋ, ಕಾಫಿ ತಂದ್ಕೊಡ್ತೀನಿ' ಅಂದಾಗ 'ಕಾಫೀ ಏನ್ಬೇಡಮ್ಮ, ಬಸ್ಸಲ್ಲಿ ನಿದ್ರೇನೆ ಬರ್ಲಿಲ್ಲ. ತಿಗಣೆಗಳು' ಅಂದಾಗ ಅಮ್ಮ ಹೌಹಾರಿದರು. 'ತಿಗಣೆ ಅನ್ನೋ ಸುದ್ದಿನೇ ಸುತ್ತಮುತ್ತ ಕೇಳಿಲ್ಲ, ಮೊದಲು ಬಟ್ಟೆ ಬಿಚ್ಚಿ ಎಲ್ಲಾ ಕೊಡವಿ ಮನೆ ಒಳಗೆ ಬಾ' ಅಂದಾಕ್ಷಣ 'ಆಹಾ, ಎಂಥಾ ವೆಲ್ಕಂ ಮಗನಿಗೆ!' ಅಂದು ಪಕ್ಕದಲ್ಲಿಯೇ ಇದ್ದ ಶೆಡ್ ಬಳಿ ಹೋಗಿ
ಬಟ್ಟೆಯನ್ನ ಜೋರಾಗಿ ಕೊಡವಿ ಮನೆಯೊಳಕ್ಕೆ ಹೋದೆ. ನಡುಮನೆಯಲ್ಲಿ ಇದ್ದ ಅಪ್ಪನಿಗೆ ನಾನು ಮಾತನಾಡುತ್ತಿದ್ದ ಯಾವ ವಿಷಯಗಳೂ ಕೇಳಿಸುತ್ತಿರಲಿಲ್ಲ. ಒಂದೊಮ್ಮೆ ಕೇಳಿದ್ದರೆ ಚಾವಡಿಗೆ ಬಿಸಿನೀರ ಕಳಿಸಿ ಅಲ್ಲಿಯೇ ಸ್ನಾನ ಮಾಡಲು ಹೇಳಿ ಆಮೇಲೆ ಮನೆ ಒಳಗೆ
ಬಿಟ್ಟುಕೊಳ್ಳುತ್ತಿದ್ದರು!

ಸ್ನಾನ ಮಾಡಿ ಬೇರೆ ಬಟ್ಟೆ ಹಾಕಿಕೊಂಡು ಹೊರಗಿನ ಸುಂದರ ವಾತಾವರಣದಲ್ಲಿ ಚಾವಡಿಯಲ್ಲಿ ಕುಳಿತು ಅಮ್ಮ ತಂದುಕೊಟ್ಟ ಕಾಫಿ ಕುಡಿದ ಬಳಿಕ ನಿದ್ರೆ, ತಿಗಣೆಗಳ ವಿಚಾರ ಎಲ್ಲಾ ಮನಸ್ಸಿನಿಂದ ಹಾರಿಹೋಗಿತ್ತು. ಅಲ್ಲೇ ನಿಂತಿದ್ದ ಅಮ್ಮ ರಾತ್ರಿಯೆಲ್ಲಾ ನಿದ್ರೆ ಮಾಡಿಲ್ವಲ್ಲ ಹೋಗಿ
ಸ್ವಲ್ಪಹೊತ್ತು ಬಿದ್ಕೊಳ್ಳೋ ಅಂದ್ರು ಆದರೆ ಊರಿಗೆ ಹೋದಾಗ ಬೆಳಗಿನ ಸಮಯದಲ್ಲಿ ಗದ್ದೆ ಮತ್ತೆ ತೋಟಕ್ಕೆ ಹೋಗಿ ಪ್ರಕೃತಿ ಸೌಂದರ್ಯ ಅನುಭವಿಸುವ, ಚಿತ್ರಗಳನ್ನ ತೆಗೆಯುವ, ಹಣ್ಣುಗಳ ಅನ್ವೇಷಣೆಯಲ್ಲಿ ತೊಡಗುವ ನಾನು ಅಮ್ಮನಿಗೆ ನಿದ್ರೆ ಯಾವಾಗ್ಲೂ ಇದ್ದಿದ್ದೆ ಗದ್ದೆ ಕಡೆ ಹೋಗಿಬರ್ತೀನಿ ಅಂದು ಚಪ್ಪಲಿ ಹಾಕಿಕೊಂಡು ಹೊರಟೆ. ಊರಲ್ಲಿದ್ದಾಗ ಇಂತಹ ಸಾವಿರಾರು ಹುಚ್ಚಾಟಗಳನ್ನ ನೋಡಿ ಸಹಿಸಿಕೊಂಡಿದ್ದ ನಮ್ಮಮ್ಮ ಬೇರೇನನ್ನೂ ಹೇಳದೆ ಬಾಗಿಲು ಹಾಕಿಕೊಂಡು ಒಳಕ್ಕೆ ಹೋದರು. ನಾನು ಕೆಳಗೆ ಹೊರಟಿದ್ದನ್ನು ನೋಡಿದ ಮೋತಿ ನನ್ನನ್ನು
ಹಿಂಬಾಲಿಸಿತು.

ಸ್ವಲ್ಪ ಸಮಯ ಹಿಂದೆ ಬರುತ್ತಿದ್ದ ಮೋತಿ ನನ್ನನ್ನು ಹಿಂದಕ್ಕೆ ಹಾಕಿ ಅದು ಮುಂದೆಹೋಯಿತು. ಯಜಮಾನ ನಾನೋ ಅಥವಾ ಅದೋ ಎಂಬ ಜಿಜ್ಞಾಸೆಯನ್ನ ನನ್ನಲ್ಲಿ ಉಂಟುಮಾಡಿ ಅದರ ಪಾಡಿಗೆ ಅದು ಮುಂದೆ ಹೋಗುತ್ತಿತ್ತು! ಮೊದಲೆಲ್ಲಾ ಇದ್ದ ನಾಯಿಗಳೆಲ್ಲಾ ಕಂತ್ರಿ ನಾಯಿಗಳಾಗಿದ್ದುದರಿಂದ ಅವು ನಮ್ಮನ್ನು ಹಿಂಬಾಲಿಸುತ್ತಿದ್ದವೇ ಹೊರತು ಮುಂದೆ ಹೋಗುತ್ತಿರಲಿಲ್ಲ, ಆದರೆ ಏನೋ ಅಪಾಯವಿದೆ ಎಂದು ಛೂ ಎಂದರೆ ಸಾಕು ಮುಂದೆ ನುಗ್ಗುತ್ತಿದ್ದವು ಬಾಕಿಯಂತೆ ಹಿಂದೆಯೇ (ಬೇರೆ ಮನೆಯವರ ಕಂತ್ರಿ ನಾಯಿಗಳ ಬಗ್ಗೆ ಗೊತ್ತಿಲ್ಲ!).

ಹೀಗೆ ಮೋತಿಯು ನಮಗಿಂತ ಮುಂದೆ ಹೋಗುವುದರ ಲಾಭವೊಂದಿತ್ತು, ಅಮ್ಮ ನನಗೆ ಹೇಳಿದ ಮೇಲೆ ಗೊತ್ತಾಯ್ತು. ಅದೇನೆಂದರೆ, ಗದ್ದೆ ತೋಟಗಳಲ್ಲಿ ಹಾವುಗಳು ಸಾಮಾನ್ಯವಾಗಿ ಇರುತ್ತವೆ. ಅದಕ್ಕಾಗಿಯೇ ಅಮ್ಮ ಮೋತಿಯನ್ನು ಮುಂದೆ ಬಿಟ್ಟು ತಾನು ಹಿಂದೆ ಹೋಗುತ್ತಿತ್ತು. ಏನಾದರೂ ಇದ್ದಲ್ಲಿ ಮೋತಿ ಬೆರೆಸಿಕೊಂಡು ಹೋಗುತ್ತಿತ್ತು, ಹಾಗಾಗಿ ದಾರಿಯಲ್ಲಿ ನಿಶ್ಚಿಂತೆಯಿಂದ ಸಾಗಬಹುದಿತ್ತು. ನನಗೂ ಇದರ ಅನುಭವವಾಗಿತ್ತು. ಒಮ್ಮೆ ಗದ್ದೆಗೆ ಹೋಗುವಾಗ ಎಂದಿನಂತೆ ಅಂದು ಮುಂದೆ ಹೋಗುತ್ತಿತ್ತು, ಸ್ವಲ್ಪ ದೂರ ಹೋದ ಮೇಲೆ ಅಲ್ಲೇ ನಿಂತು ಬೊಗಳಲಾರಂಭಿಸಿತು, ನಾನು ಸ್ವಲ್ಪ ಮುಂದೆ ಹೋಗಿ ನೋಡಿದರೆ ದೂರದಲ್ಲಿದ್ದ ಬಾವಿಯ ಬಳಿ ಎರಡು ಹಾವುಗಳು ಕುಳಿತಿದ್ದವು??!! ಮೋತಿಯನ್ನು ಹಿಂದಕ್ಕೆ ಕರೆಯಲು ಪ್ರಯತ್ನಪಟ್ಟೆ, ಉಹುಂ ಅಲ್ಲಾಡಲಿಲ್ಲ. ನಾನು ಇನ್ನೂ ಸ್ವಲ್ಪ ಹಿಂದೆ ಹೋಗಿ ಮತ್ತೆ ಕರೆದೆ, ತಿರುಗಿ ನೋಡಿದ ಅದು ಮತ್ತೆ ಮುಂದೆ ತಿರುಗಿ ಬೊಗಳಲಾರಂಭಿಸಿತು. ನಾನು ವಾಪಸ್ ಹೋಗುವ ಹಾಗೆ ನಾಟಕ ಮಾಡಿ ಅದನ್ನು ಕರೆದೆ. ಆಗ ಬಂತು. ನಂತರ ಬೇರೆ ದಾರಿಯಲ್ಲಿ ಗದ್ದೆಗೆ ಹೋದೆ.

ಸದ್ಯ ವಿಷಯಕ್ಕೆ ಬರೋಣ, ಹಾಗೆ ಗದ್ದೆಯಲ್ಲಿ ಹೋಗುವಾಗ ಅಲ್ಲಿದ್ದ ಬೆಟ್ಟದ ನೆಲ್ಲಿ ಕಾಯಿ ಮರ ಕಾಣಿಸಿತು. ಹಲವು ಸಮಯಗಳಲ್ಲಿ ನೋಡಿದಾಗೆಲ್ಲ ಬೋಳು ಮರ ಅಥವಾ ಸ್ವಲ್ಪ ಎಲೆಗಳು ಕಾಣಿಸುತ್ತಿದ್ದವು ಆದರಿಂದು ಸಣ್ಣ ನೆಲ್ಲಿಕಾಯಿ ಕಾಣಿಸಿತು ಹತ್ತಿರವಿದ್ದ ಕೊನೆಯಲ್ಲಿ.
ಹಾಗೇ ಕಣ್ಣರಳಿಸಿ ನೋಡಿದಾಗ ಅಲ್ಲಲ್ಲಿ ಒಂದೊಂದು ಇರುವುದು ಕಾಣಿಸಿತು. ಹತ್ತಲೋ ಬೇಡವೋ ಎಂದು ಯೋಚಿಸಿದೆ, ನಾಳೆ ಬಂದರಾಯಿತು ಅಂತ ಒಮ್ಮೆ ಸುಮ್ನಾದೆ ಆದ್ರೆ ಅಕಸ್ಮಾತ್ ಬೇರೆ ಯಾರಾದರೂ ನೋಡಿ ಕಿತ್ಕೊಂಡು ಹೋಗಬಹುದು ಅದೂ ಅಲ್ಲದೆ ಅಕಸ್ಮಾತ್ ಇದ್ದರೂ ಮೊದಲೇ ಮಳೆಗಾಲದ ಸಮಯ ಯಾವಾಗ ಮಳೆ ಬರುವುದೆಂದು ಹೇಳುವುದಕ್ಕಾಗುವುದಿಲ್ಲ ಎಂದುಕೊಂಡು ಮರ ಹತ್ತಿದೆ (ನನ್ನ ಎಣಿಕೆ ನಿಜವಾಗಿತ್ತು, ಮಾರನೇ ದಿನ ಭಾರೀ ಮಳೆ ಶುರುವಾಗಿತ್ತು).

ಚಿಕ್ಕವನಿದ್ದಾಗ ಹಲಸಿನ ಮರ, ನೇರಳೆ, ಪನ್ನೇರಳೆ, ಚಕೋತ, ಕಿತ್ತಳೆ ಮರಗಳನ್ನ ಸರಾಗವಾಗಿ ಹತ್ತುತ್ತಿದ್ದೆ, ಆದರೆ ಓದುವುದಕ್ಕೆಂದು ಹೊರಗಡೆ ಹೋದಾಗಿನಿಂದ ಅವೆಲ್ಲವೂ ಮರೆತುಹೋಗಿತ್ತು. ನೆಲ್ಲಿಕಾಯಿಯ ಮರ ತುಂಬಾ ಎತ್ತರವೇನೂ ಇರಲಿಲ್ಲ ಹಾಗಂತಾ ಚಿಕ್ಕದೂ
ಆಗಿರಲಿಲ್ಲ. ಆದರೆ ಹತ್ತುವುದಕ್ಕೆ ಕೆಳಗೆ ಯಾವುದೇ ಕೊನೆಗಳಿರಲಿಲ್ಲ, ಹೀಗಾಗಿ ಕಷ್ಟಪಟ್ಟೇ ಹತ್ತಬೇಕಾಗಿತ್ತು ಅದೂ ಅಲ್ಲದೆ ಮರ ಗದ್ದೆಯ ಮೇಲ್ಬದಿಯಲ್ಲಿ ಇದ್ದುದರಿಂದ ಮರದಾಚೆಯ ಸಾಲಿನಲ್ಲಿ ಕಲ್ಲೇವು (ಕಾಲುವೆ) ಹರಿಯುತ್ತಿತ್ತು, ಅಪ್ಪಿ ತಪ್ಪಿ ಜಾರಿದರೆ ಮತ್ತೊಮ್ಮೆ ಸ್ನಾನ ಮಾಡುವ ಸಂದರ್ಭ ಬರುತ್ತಿತ್ತು! ಜೊತೆಗೆ ಮೂಳೆ ಮುರಿಯುವ ಅವಕಾಶವೂ ಒದಗುತ್ತಿತ್ತು!  ಬೆಳಗಿನ ಸಮಯ, ಯಾರೂ ಆ ಗದ್ದೆಯ ಬಯಲಿನಲ್ಲಿ ಕಾಣಿಸುತ್ತಿರಲಿಲ್ಲ. ಬಹುಶಃ ಯಾರಾದ್ರೂ ಬಂದು ನನ್ನನ್ನ ನೋಡಿದ್ರೆ, ಬೆಳ್ಗ್ಬೆಳ್ಗೆ ಬೆಂಗ್ಳೂರಿಂದ ಬಂದು ಇವ್ನಿಗೇನು ಬಂತಪ್ಪಾ!? ಅಂತಿದ್ರು. ಸದ್ಯ ಹಾಗಾಗಲಿಲ್ಲ. ಕೆಳಗೆ ನಿಂತಾಗ ಸ್ವಲ್ಪವೇ ಕಾಣಿಸುತ್ತಿದ್ದ ಕಾಯಿಗಳು ಮೇಲೆ ಹೋದ ಹಾಗೆ ಜಾಸ್ತಿ ಕಾಣಲಾರಂಭಿಸಿತು, ಬಹುಶಃ ಕುಡಿದವರ ಪರಿಸ್ತಿತಿಯೂ ಇದಕ್ಕಿಂತ ಭಿನ್ನವಾಗಿರಲಿಕ್ಕಿಲ್ಲ!!.ಕೈ ಚಾಚುವ ಕಡೆಯೆಲ್ಲಾ ಹೋಗಿ ನೆಲ್ಲಿಕಾಯಿ ಕಿತ್ತು ಜೇಬಿಗೆ ತುಂಬಿಕೊಂಡೆ. ಎರಡೂ ಜೇಬು ತುಂಬಿದ ಬಳಿಕ ಸಾಕೆನ್ನಿಸಿ ಇಳಿಯಲಾರಂಭಿಸಿದೆ. ಇದ್ದಕಿದ್ದಂತೆ ದೂರದಿಂದ ಯಾರೋ ಕೂಗಿದಂತಾಯ್ತು??!!.

'ಓಯ್ ಯಾರ್ರೋ ಅದು ನಮ್ಗೌಡ್ರ ಗದ್ದೆಲೀ ಮರ ಹತ್ತಿರೋದು?' ಎಂದು ದನಿ ಕೇಳಿಸಿತು. ಬೇರೆಯವರ ಗದ್ದೆಯ ಮರಕ್ಕೆ ಹತ್ತಿದ್ದರೆ ಬಹುಶಃ ಹೆದರಿ ಹಾರಿ ಚರಂಡಿಗೆ ಬೀಳುತ್ತಿದ್ದೆನೇನೋ (ಸಣ್ಣವನಾಗಿದ್ದಾಗ!!! ಆದರೆ ಈಗ ಹತ್ತುತ್ತಿರಲಿಲ್ಲ. ವಿಚಿತ್ರ ಎಂದರೆ ಇದೇ ಇರ್ಬೇಕು
ನೋಡಿ, ಬೇರೆಯವರ ಗದ್ದೆ ತೋಟದಲ್ಲಿ ಏನಾದರೂ ಹಣ್ಣುಗಳನ್ನು ಕದಿಯಲು ಹೋದರೆ ಅದರ ವಾರಸುದಾರರು ಆಗ ಬಯ್ದೋ ಇಲ್ಲವೋ ತಮಾಷೆ ಮಾಡಿದರೆ ಈಗ ಗೇಲಿ ಮಾಡುವ ಸಂದರ್ಭ ಬರುತ್ತಿತ್ತು). ನಮ್ಮದೇ ಗದ್ದೆಯಾದುದರಿಂದ ಹೆದರದೆ ಶಬ್ಧ ಬಂದ ಕಡೆ ತಿರುಗಿ ನೋಡಿದೆ. ದೂರದಲ್ಲಿ ಚಿಕ್ಕ ಬರುವುದು ಕಾಣಿಸಿತು, ಮರದ ಮೇಲಿಂದಲೇ 'ನಾನು ಕಣೋ' ಅಂದೆ. 'ಓ ಗೌಡ್ರು, ಯಾವಾಗ ಬಂದದ್ದು? ಇದೇನು ಬೆಳ್ಗ್ಬೆಳ್ಗೆನೆ ನೆಲ್ಲಿಕಾಯಿ ಕೀಳ್ತಿದೀರಾ? ಯಾರ್ಯಾರು ಬಂದ್ರಿ? ಚಿಕ್ಕಮ್ಮೋರು ಬಂದ್ರಾ??' ಉಸಿರಾಡುವುದಕ್ಕೂ ಪುರುಸೊತ್ತಿಲ್ಲದ
ಹಾಗೆ ಒಂದೇ ಸಮನೆ ಪ್ರಶ್ನೆಗಳ ಮಳೆಯನ್ನೇ ಸುರಿದ. ಅವನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟು, ಮರದ ಬಳಿ ಕುಳಿತಿದ್ದ ಮೋತಿಯನ್ನು ಕರೆದುಕೊಂಡು ಮನೆಕಡೆ ಹೊರಟೆ.

ಅಲ್ಲಿಗೆ ಒಂದು ಕೆಲಸ ನೀಟಾಗಿ ಆಗಿತ್ತು. ಮನೆಗೆ ಹೋಗಿ ತಿಂಡಿ ತಿಂದು ಪೇಪರ್ ಓದುತ್ತಾ ಕುಳಿತೆ, ಊರು ಮನೆಯವರು ಒಂದಷ್ಟು ಜನ ಬಂದ್ರು, ಅವರ ಜೊತೆ ಮಾತನಾಡಿ ಅಲ್ಲಿ ಇಲ್ಲಿ ತಿರುಗಾಡುವಷ್ಟರಲ್ಲಿ ಮಧ್ಯಾಹ್ನವಾಗಿತ್ತು. ಊಟವಾದ ನಂತರ ವೀಳ್ಯದೆಲೆ ಬೇಕೆಂದು
ತೆಗೆದುಕೊಂಡು ಬರಲು ಅಮ್ಮ ಹೇಳಿದರು, ಮನೆಯ ಹತ್ತಿರದಲ್ಲೇ ಇರುವ ಹಾಲುವಾಣ ಮರಕ್ಕೆ ಅಮ್ಮ ಹಾಕಿದ ಬಳ್ಳಿಯಿಂದ ಒಂದಷ್ಟು ಕಿತ್ತುಕೊಂಡು ಬರೋಣವೆಂದು ಹೋದೆ. ಸುಮಾರು ೨೦ ಎಲೆಗಳನ್ನು ಕಿತ್ತುಕೊಂಡು ಅದಕ್ಕೆ ಸ್ವಲ್ಪ ಕಾಫಿಯ ಎಲೆಗಳನ್ನು (ಎರಡೂ ಒಂದೇ ರೀತಿ ಕಾಣುವುದರಿಂದ) ಬೆರೆಸಿ ಅಮ್ಮನಿಗೆ ಕೊಟ್ಟೆ!. ಅಮ್ಮ ಹಾಗೇ ನೋಡಿ ಅಲ್ಲೇ ಇಟ್ಟರು, ಮತ್ಯಾಕೋ ಅನುಮಾನ ಬಂದಂತಾಗಿ ತೆಗೆದುನೋಡಿದರು. 'ಇದೇನೋ ಕಾಫೀ ಎಲೇನೂ ಕುಯ್ದಿದೀಯಲ್ಲೋ??' ಅಂದಾಗ ನಾನು ಅಮ್ಮನ ಮುಖ ನೋಡಿ ನಕ್ಕೆ 'ಬರೀ ಇಂಥಾ ಕೆಲ್ಸ್ಗಳ್ನೆ ಮಾಡು!' ಅಂದು ಒಳಗೆ ಹೋದರು.

ಸಂಜೆಯಾಗುತ್ತಿದ್ದಂತೆ ಸೀಬೆಹಣ್ಣನ್ನು ತಿನ್ನುವ ಮನಸ್ಸಾಯಿತು.ತೋಟದ ಕಡೆ ಹೆಜ್ಜೆ ಹಾಕಿದೆ, ಚಾವಡಿಯ ಬಳಿ ಮಲಗಿದ್ದ ಮೋತಿ ಮತ್ತೆ ನನ್ನನ್ನ ಹಿಂಬಾಲಿಸಿತು. ಮನೆಯ ಹತ್ತಿರದಲ್ಲೇ ಇರುವ ಸೀಬೇಗಿಡಗಳ ಬಳಿ ಹೋದೆ. ಒಂದು ಗಿಡದ ತುದಿಯಲ್ಲಿ ಒಂದೆರಡು ಸೀಬೆಹಣ್ಣುಗಳು ಕಂಡವು. ಗಿಡವಾದ್ದರಿಂದ ಹತ್ತುವಂತಿರಲಿಲ್ಲ. ಕೆಳಗಿನಿಂದ ಕೊನೆಗಳನ್ನ ಎಳೆದು ಎಳೆದು ಒಂದೊಂದರ ತುದಿಯನ್ನ ಹಿಡಿದು
ಕೊನೆಗೆ ಕೊನೆಯ ಕೊನೆಯನ್ನು ಕೈಗಳು ತಲುಪಬೇಕಾಗಿತ್ತು!! ಹತ್ತು ನಿಮಿಷಗಳ ಹರಸಾಹಸದ ನಂತರ ಅಂತೂ ಕೊನೆಯನ್ನ ಹಿಡಿದೆ, ಆದರೆ ಕೈ ಬಳಿ ಏನೋ ತುರಿಸಿದಂತಾಗಿ ಹಿಡಿದುಕೊಂಡಿದ್ದ ಕೊನೆಯನ್ನೆಲ್ಲಾ ಬಿಟ್ಟೆ. ಮೋತಿ ನನ್ನ ಮಂಗನಾಟವನ್ನ ನೋಡಿ ಮನೆಯ ಕಡೆ ಹೆಜ್ಜೆ ಹಾಕಿತು. ಕೈಯನ್ನ ಕೆರೆದುಕೊಂಡು ಮತ್ತೆ ಕೊನೆಗೆ ಕೈ ಹಾಕಿದೆ. ಅಂತೂ ಎರಡು ಸೀಬೆಹಣ್ಣನ್ನು ಕಿತ್ತೆ. ಒಂದರ ಅರ್ಧಭಾಗವನ್ನು ದೇವರು ಗಿಳಿಗೆ ಕೊಟ್ಟಿದ್ದ ಹಾಗಾಗಿ ಇನ್ನರ್ಧ ಭಾಗ ನನಗೊಲಿದಿತ್ತು!. ತಿನ್ನುತ್ತಾ ಮನೆಕಡೆ ಹೆಜ್ಜೆ ಹಾಕಿದೆ, ಕೈ ತುರಿಸುತ್ತಲೇ ಇತ್ತು
ನನ್ನ ಬೆರಳುಗಳು ಕೆರೆಯುತ್ತಲೇ ಇತ್ತು!.ಭಯಂಕರ ತುರಿಕೆಯಾಗತೊಡಗಿತು ಇದ್ದಕಿದ್ದಂತೆ ಯೋಚನೆ ಬಂತು, ತಿಗಣೆಗಳು ಇನ್ನೂ ದೇಹವನ್ನು ಬಿಟ್ಟು ತೊಲಗಿಲ್ಲವೇನೋ ಎಂದು. ಚೆನ್ನಾಗಿ ಸ್ನಾನ ಮಾಡಿದ್ದಾಯಿತು, ಬೇರೆ ಬಟ್ಟೆಯನ್ನೂ ಹಾಕಿದ್ದಾಯಿತು ಆದರೂ
ಹೀಗಾಯಿತಲ್ಲವೆಂದುಕೊಂಡೆ. ಹಾಗೇ ಬರುವಾಗ ಅಪ್ಪ ಮತ್ತುಮಾವ ಚಾವಡಿಯ ಬಳಿ ಕೂತಿದ್ದರು. ಕೈ ಊದಿರುವುದನ್ನ ನೋಡಿದ ಮಾವ ಏನಾಯಿತು ಅಂತ ವಿಚಾರಿಸಿ ಅರಶಿನದ ಪುಡಿ ಹಚ್ಕೊಳ್ಳಿ ಅಂದ್ರು, ನಮ್ಮಪ್ಪ ಇವ್ನ್ದಿದ್ದಿದ್ದೆ ಅಂತ ಏನೂ ಹೇಳದೆ ಅವರೊಂದಿಗೆ ಮಾತಾಡುತ್ತಾ ಕುಳಿತರು.

ಅಮ್ಮನ ಬಳಿ ಹೋಗಿ ಅಲ್ಲಲ್ಲಿ ದಪ್ಪದಾಗಿ ಊದಿಕೊಂಡ ಕೈಯನ್ನು ತೋರಿಸಿದೆ, ತಿಗಣೆಗಳು ಇನ್ನೂ ಇರ್ಬೇಕು ನೋಡು ಅಂದೆ. ನನ್ನ ಇಂಥಾ ಅನೇಕ ಹುಚ್ಚಾಟಗಳನ್ನ ನೋಡಿದ್ದ ಅಮ್ಮ 'ತಿಗಣೆನೂ ಇಲ್ಲ, ಮಣ್ಣೂ ಇಲ್ಲ, ಕಂಬ್ಳಿಹುಳ ಇರ್ಬೇಕು. ತಲೆಕೂದ್ಲಲ್ಲಿ ಊದಿರೋ ಜಾಗಕ್ಕೆ ಚೆನ್ನಾಗಿ ತಿಕ್ಕು' ಅಂದು ಅವರ ಕೆಲಸಕ್ಕೆ ಹೋದರು. ಹಾಗೇ ಮಾಡುತ್ತಾ ಕೂತಿದ್ದೆ. ಅಲ್ಲೇ ಇದ್ದ ದೊಡ್ಡತ್ತೆ, ಏನೂ ಆಗಲ್ಲ ರಾತ್ರಿ ಹೊತ್ತಿಗೆ ಸರಿಯಾಗತ್ತೆ ಅಂದ್ರು.  ಅದೇ ಸಮಯಕ್ಕೆ ನನ್ನ ಹೆಂಡತಿಯ ಕಾಲ್ ಬಂತು. ಅವಳಿಗೆ ಈ ವಿಷಯ ಹೇಳಿದೆ. ಕಂಬ್ಳಿ ಇದ್ರೆ ಅದಕ್ಕೆ ಉಜ್ಜಿ ಅಂದ್ಲು (ಪಾಪ, ಹಳ್ಳಿಗಳೂ ನಗರೀಕರಣವಾಗುತ್ತಿದೆ. ಹಳೆಯದೆಲ್ಲವೂ ಹೋಗಿ ಹೊಸತು ಬರುತ್ತಿದೆ ಎಂದು ತಿಳಿದಿದ್ದರೂ ಹಾಗೆ ಹೇಳಿದ್ದಳು!, ಇದ್ದರೂ ಇರಬಹುದೇನೋ ಎಂದು). ಕಂಬ್ಳಿ ನಮ್ಮ ಅಜ್ಜನ ಜೊತೆಯೇ ಹೋಯ್ತು ಅಂತ ಮನಸ್ನಲ್ಲಿ ಅಂದ್ಕೊಂಡು 'ಈಗೆಲ್ಲಿದೆ ಕಂಬ್ಳಿ, ಇದ್ರೂ ಸದ್ಯ ನಮ್ಮನೇನಲ್ಲಿ ಇಲ್ಲ ಕಣೇ' ಅಂದೆ. ರಾತ್ರಿಯ ಹೊತ್ತಿಗೆ ಸ್ವಲ್ಪ ಕಡಿಮೆಯಾಗಿತ್ತು. ಒಟ್ಟಿನಲ್ಲಿ ರಾತ್ರಿ ತಿಗಣೆಯ ಕಾಟ ಸಂಜೆ ಕಂಬ್ಳಿಹುಳದ ಕಾಟ, ಎರಡು ಮೂಕಪ್ರಾಣಿಗಳು ನನ್ನ ನೆಮ್ಮದಿಯನ್ನು ಇನ್ನಿಲ್ಲದಂತೆ ಕೆಡಿಸಿದ್ದವು. ನೆಲ್ಲಿಕಾಯಿ, ವೀಳ್ಯದೆಲೆ ಕೀಳುವಾಗ ಇದ್ದ ಅದೃಷ್ಟ ಸೀಬೆಹಣ್ಣು ಕೀಳುವಾಗ ಹೋಗಿತ್ತು!.