Saturday, December 4, 2010

ಎಲ್ಲ ಮಂಜುನಾಥನ ಮಹಿಮೆ

ಹೊಸ ಪ್ರೊಜೆಕ್ಟ್ , ಮುಗಿಸುವ ಅವಧಿ ಬೇರೆ ಕಡಿಮೆ ಇದ್ದುದರಿಂದ ಹಗಲು-ರಾತ್ರಿಯೆನ್ನದೆ ಆ ವಾರ ಕೆಲಸ ಮಾಡಿದ್ದೆ. ಶುಕ್ರವಾರದ ದಿನ ಸ್ವಲ್ಪ ದಣಿವನ್ನು ನಿವಾರಿಸಿಕೊಳ್ಳಲು ಬೇಗ ಬಂದು ಹಾಸಿಗೆ ಮೇಲೆ ಬಿದ್ದೆ.

ನಮ್ಮ ಗುಂಪಿನಲ್ಲಿರೋ ಹುಡುಗರಲ್ಲಿ ಒಂದಷ್ಟು ಜನದ್ದು ಆಗ್ಲೇ ಮದುವೆ ಆಗಿದೆ. ಇನ್ನೊಂದು ಸ್ವಲ್ಪ ಹುಡುಗರ ಲಗ್ನ ಆಗಿದೆ, ಮತ್ತೆ ಕೆಲವರು ಇನ್ನೂ ಹುಡುಗಿಯರನ್ನ ಹುಡುಕ್ತಿದ್ದಾರೆ.

ಕೊನೆ ಕೆಟಗರಿಯಲ್ಲಿ ನಾನೂ ಒಬ್ಬ.

ನನ್ನ ಆಫೀಸಲ್ಲೂ ಸಹ ನನ್ನ ಜೊತೆಗೆ ಕೆಲಸಕ್ಕೆ ಸೇರಿದ ಬಹುತೇಕ ಮಂದಿ ಮದುವೆ ಆಗಿ ಇನ್ನು ಸ್ವಲ್ಪ ದಿನಗಳಲ್ಲಿ ಮತ್ತೊಂದು ಗುಡ್ ನ್ಯೂಸ್ ಕೊಡೊ ಹಂತದಲ್ಲಿದ್ದಾರೆ.

ನಾನೂ ಸಹ ಊರಿಗೆ ಹೋದಾಗಲೆಲ್ಲ 'ಮದುವೆ ಗಿದುವೆ ಮಾಡೋ ಏನಾದರೂ ಯೋಚನೆ ಇದೆಯಾ ??' ಅಂತ ಕೇಳಿದ್ರೆ....

'ಕಾಫೀ ತಗಬರ್ರೋ ಅಂತ ನಮ್ಮಪ್ಪ ಪೇಪರ್ ಒಳಗೆ ಮುಳುಗಿಬಿಡ್ತಾರೆ'

'ಪಕ್ಕದ್ಮನೆ ರಾಜುಗೆ ೩೪ ವರ್ಷ, ಅದ್ಯಾವಾಗ ಮದುವೆ ಮಾಡ್ತಾರೋ ಏನೋ' ಅಂದು ಮಿಕ್ಸಿ ಆನ್ ಮಾಡ್ತಾರೆ.


ಈ ಸಲ ಏನಾದರಾಗಲಿ ನಾನು ಹೇಳಿದ್ದು ಕೇಳದೆ ಹೋದರೂ ನನ್ನ ಬಾಡಿ ಕಂಡಿಶನ್ ನೋಡಿ ತಿಳಿದುಕೊಳ್ಳಲಿ ಅಂತ ಕಟಿಂಗ್ ಮಾಡಿಸದೆ ಕೂದಲು ಹಾಗೇ ಬಿಟ್ಟೆ, ಶೇವಿಂಗ್ ಸಹ ಮಾಡಿಕೊಳ್ಳಲಿಲ್ಲ. ಈ ಪರಿಸ್ಥಿತಿಯಲ್ಲಿ ಊರಿಗೆ ಹೊರಟೆ.

ನಮ್ಮ ಪಕ್ಕದ ಊರಲ್ಲಿ ಹಿಪ್ಪಿ ಮಂಜ ಅಂತಿದ್ದ, ಅವ್ನು ಕೂದಲು ತುಂಬಾ ಬಿಟ್ಟಿದ್ದರಿಂದ ಜನ ಹಾಗೇ ಕರೆತಿದ್ರು, ನನ್ನನ್ನ ನೋಡಿದ್ರೆ ನಮ್ಮೂರಿನವರು ಹಿಪ್ಪಿ ಚಿಕ್ಕ ಅಂತಿದ್ರೇನೋ.

ಬಸ್ಸಿಂದಿಳಿದು ಮನೆಗೆ ಹೋದ ತಕ್ಷಣ ನನ್ನನ್ನು ನೋಡಿ 'ಯಾಕೆ ಮಗಾ ಹಿಂಗಾಗಿದೀಯಾ, ಮದುವೆ ಮಾಡಿಲ್ಲ ಅಂತ ಕೊರಗಿ ಹಿಂಗಾಗಿದೀಯಾ?, ಆಯ್ತು ಹುಡುಗಿ ಹುಡುಕಿ ಮದುವೆ ಮಾಡೋಣ ತಗೋ' ಹೇಳ್ತಾರೇನೋ

ಅಂತ ಅಂದ್ಕೊಂಡು ಖುಷಿಯಾಗಿ ಮನೆ ಕಡೆ ಹೆಜ್ಜೆ ಹಾಕಿದೆ.

ಹಾಗೇ ನಡೆದುಕೊಂಡು ಹೋಗುವಾಗ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಂಜ
'ಗೌಡ್ರೆ, ಚೆನ್ನಾಗಿದೀರ? ಈಗ ಬಂದ್ರಾ? ಯಾಕೆ ಹಿಂಗೆ ಸೊರಗಿ ಹೋಗಿದ್ದೀರಾ? ಸರ್ಯಾಗಿ ಊಟ ಹಾಕಲ್ವ ಅಲ್ಲಿ?' ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ.

'ಹಂಗೇನಿಲ್ಲ, ಈಗ ಬಂದೆ, ಅದೆಲ್ಲ ಇರ್ಲಿ ಏನು ಕೆಲಸ' ಅಂದೆ.

'ಗೊಬ್ರ ಹಾಕ್ತಿದೀವಿ'

'ಸರಿ, ಕೆಲಸ ಮಾಡಿ' ಅಂತ ಮನೆ ಕಡೆ ನಡೆದೆ.


ಮನೆ ಹತ್ತಿರ ಹೋಗುತ್ತಿದ್ದಂತೆ ಸಾಮಾನ್ಯವಾಗಿ ಬಾಲ ಅಲ್ಲಾಡಿಸಿಕೊಂಡು ಸೊಂಟ ಕುಣಿಸಿಕೊಂಡು ಸ್ವಾಗತಿಸುತ್ತಿದ್ದ ಮೋತಿ ನನ್ನನ್ನು ನೋಡಿ ಒಂದೇ ಸಮನೆ ಬೊಗಳುವುದಕ್ಕೆ ಶುರು ಮಾಡ್ತು (ನನ್ನ ಗುರುತು ಗೊತ್ತಾಗ್ಲಿಲ್ಲ ಅಂತ ಕಾಣ್ಸತ್ತೆ).

ಛೆ ಎಂಥಾ ಸುಸ್ವಾಗತ ಮನೆ ಮಗನಿಗೆ :(

ನಾಯಿ ಬೊಗಳುವ ಶಬ್ಧಕ್ಕೆ ಹೊರಬಂದ ಅಮ್ಮ

'ಯಾಕೆ ಲೇಟ್, ಟ್ರೈನ್ ಲೇಟ್ ಬಂತಾ?'

'ಹೂನಮ್ಮ'

'ಕೈ ಕಾಲು ಮುಖ ತೊಳ್ಕೋ, ಕಾಫೀ ತರ್ತೀನಿ'

ಕಾಫೀ ತಂದಾದ್ಮೇಲೆ 'ಯಾಕೋ, ಕಟಿಂಗ್ ಶೇವಿಂಗ್ ಏನೂ ಮಾಡ್ಕೊಂಡಿಲ್ಲ. ತುಂಬಾ ಕೆಲಸ ಅಂತ ಕಾಣತ್ತೆ, ಪಾಪ. ಅದೇನು ಸಾಪ್ಟೆರೋ ಏನೋ, ಅದ್ಯಾಕಂಗೆ ಕೆಲಸ ಕೊಡ್ತಾರೋ, ಶನಿವಾರ ಭಾನುವಾರನೂ ಕೆಲಸ ಮಾಡ್ಸಿದ್ರೆ ಹೆಂಗೆ. ಒಂದಿನ ರಜೆ ಹಾಕಾದ್ರೂ ಹೋಗಿ ಕಟಿಂಗ್ ಮಾಡ್ಸ್ಕಂಡು ಬರ್ಬಾರ್ದೆ?'

ನನಗೆ ರಜೆಗೆನು ಕೊರತೆ, ಈಗಾಗ್ಲೇ ೨೮ ರಜೆ ಇನ್ನೂ ಬಾಕಿ ಇದೆ, ಜೊತೆಗೆ ಕಾಂಫ್-ಆಫ್ಗಳು. ಅಲ್ದಲೇ ಪ್ರತಿ ತಿಂಗಳೂ ೧.೭೫ ರಜೆ.


ಸಂಜೆಗೆ ನಮ್ಮಪ್ಪ ಕೆಲಸ ಮುಗಿಸಿಕೊಂಡು ಮನೆಗೆ ಬಂದ್ರು.

'ರೀ ಅವನನ್ನು ನೋಡಿದ್ರಾ?' ಅಮ್ಮ ಅಪ್ಪನನ್ನು ಕೇಳಿದ್ರು.

ಅಬ್ಬ, ಈಗಲಾದರೂ ವಿಷಯಕ್ಕೆ ಬರಬಹುದು ಅಂದ್ಕೊಂಡು ಹಾಲ್ನಲ್ಲಿ ಪೇಪರ್ ಓದ್ತಿದ್ದವನು ಇವರ ಮಾತು ಕೇಳೋದಕ್ಕೆ ಕಿವಿ ಅಗಲಿಸಿಕೊಂಡೆ.

'ಯಾಕೆ, ಏನಾಯ್ತು?'

'ಕಂಪನಿಯಲ್ಲಿ ತುಂಬಾ ಕೆಲಸ ಅಂತೆ, ಕಟಿಂಗ್ ಶೇವಿಂಗ್ ಏನೂ ಮಾಡಿಲ್ಲ. ಮೊದಲು ಹೋಗಿ ಅಲ್ದೂರಲ್ಲಿ ಕಟಿಂಗ್ ಮಾಡಿಸಿಕೊಂಡು ಬನ್ನಿ'

'ನಮ್ಮವೇ ಆಫೀಸ್, ತೋಟ-ಗದ್ದೆ, ಆಳು-ಕಾಲು ಅಂತ ಸಾವಿರಾರು ಹಲ್ಲoಡೆ ಇರ್ತವೆ, ಇವಕ್ಕೆ ಅವ್ರ ಕೆಲಸ ಮಾಡ್ಕೊಳ್ಳೋದಕ್ಕೆ ಕಷ್ಟ'

'ಕಾಫೀ ತರದಿಲ್ಲಿ' ಅಂತ ಕಾಫೀ ತರಿಸಿ ಕುಡಿದು 'ನಡಿಯೋ' ಅಂದು ಕಾರನ್ನು ಅಲ್ದೂರಿಗೆ ತಿರುಗಿಸಿದರು.


ನಮ್ಮಜ್ಜನಿಗೆ ಕಟಿಂಗ್ ಮಾಡ್ತಿದ್ದವರ ಹತ್ತಿರ (ಸಣ್ಣವನಿದ್ದಾಗ ಅಜ್ಜ ಆದ್ಮೇಲೆ ನನ್ನ ಕಟಿಂಗ್ ಸರದಿ ಇರ್ತಿತ್ತು) ಕರೆದುಕೊಂಡು ಹೋದರು ನಮ್ಮಪ್ಪ.

ಆ ವಯ್ಯಂಗೆ ಆಗ್ಲೇ ೫೦ ವರ್ಷ ಇತ್ತು, ಈಗ ಏನಿಲ್ಲ ಅಂದ್ರೂ ೬೫.

ಹೈಟೆಕ್ ಸಿಟಿಯ ಹೈಟೆಕ್ ಕಟಿಂಗ್ ಸಲೂನಿನಲ್ಲಿ ಕಟಿಂಗ್ ಮಾಡಿಸಿಕೊಳ್ಳುವ ಅವಕಾಶವಿದ್ದರೂ ವಿಧಿ ನನ್ನನ್ನ ಈ ಸಣ್ಣ ಊರಲ್ಲಿ ಈ ಅಜ್ಜನ ಬಳಿಗೆ ಕರೆದುಕೊಂಡು ಬಂದಿತ್ತು (ವಿಧಿ ಅನ್ನೋದಕ್ಕಿಂತ ನಾ ಆಡಿದ ಆಟವೇ ನನಗೆ ತಿರುಗುಬಾಣವಾದಂತಹ ಪರಿಸ್ಥಿತಿ)

ಕಟಿಂಗ್ ಮಾಡೋ ಛೇರ್ ಮೇಲೆ ಹತ್ತಿದ ತಕ್ಷಣ ಲರಕ್ ಅಂತ ಶಬ್ದ ಬಂತು, ಸ್ವಲ್ಪ ಹೊತ್ತಿಗೆ ಶವದ ಮೇಲೆ ಹಾಕೋ ಬಿಳಿ ಬಟ್ಟೆಯಂತಹ ವಸ್ತ್ರ ನನ್ನ ಮೈಯನ್ನಾವರಿಸಿತು .

ದೊಡ್ಡ ಕನ್ನಡಕ ಹಾಕಿಕೊಂಡ ಅಜ್ಜನ ಕೈಲಿದ್ದ ಕತ್ತರಿ ನಡುಗುತ್ತಿತ್ತು (ವಯಸ್ಸಿನ ಪರಿಣಾಮ). ಅಜ್ಜ ಒಂದೊಂದೇ ಕೂದಲನ್ನು ನಡುಗುತ್ತಿದ್ದ ತನ್ನ ಕೈಯಿಂದ ಕತ್ತರಿಸುತ್ತಿದ್ದ.
ಸುಮಾರು ೩೦ ನಿಮಿಷ ಆದ್ಮೇಲೆ ಅಜ್ಜ 'ಕಟಿಂಗ್ ಆಯ್ತು ಶೇವಿಂಗ್ ಮಾಡ್ಲಾ' ಅಂದ್ರು.

ನಾನು ನನ್ನ ತಲೆಯನ್ನು ಕನ್ನಡಿಯಲ್ಲಿ ನೋಡಿದೆ, ಕೈಯಿಂದ ಕೂದಲುಗಳನ್ನು ಮುಟ್ಟಿದೆ, ಬಹುಷ ಇಲಿಗೆ ಬಿಟ್ಟಿದ್ರೂ ನನ್ನ ತಲೆಯನ್ನು ನೀಟಾಗಿ ಹೆರೆಯುತ್ತಿತ್ತೇನೋ :(

ನನ್ನ ತಲೆಯನ್ನು ನೋಡಿದ್ರೆ ಹಳ್ಳಿಯ ಟಾರ್ ರೋಡ್ ನೆನಪಾಗುವ ಹಾಗಿತ್ತು.

ನಮ್ಮಪ್ಪನಿಗೆ ತೋರಿಸಿ 'ನಿಮಗೆ ಕಟಿಂಗ್ ಮಾಡ್ಸೋಕೆ ಇನ್ಯಾವ ಪುಣ್ಯಾತ್ಮನೂ ಸಿಕ್ಲಿಲ್ಲ್ವ, ಈ ಲುಕ್ಕಲ್ಲಿ ನಾನೇನಾದ್ರೂ ಆಫೀಸಿಗೆ ಹೋದ್ರೆ ವಾಚ್ಮನ್ ಆಗೊಕೂ ಲಾಯಕ್ಕಿಲ್ಲ ಅಂತಾರೆ, ಮೊದ್ಲು ಚಿಕ್ಮಗಳೂರಲ್ಲಿರೋ ಯಾವ್ದಾದ್ರೂ ಒಳ್ಳೆ ಕಟಿಂಗ್ ಸಲೂನಿಗೆ ಕರೆದುಕೊಂಡು ಹೋಗಿ'

ನನ್ನ ಅವಸ್ಥೆ ನೋಡಲಾರದ ನಮ್ಮಪ್ಪ ಚಿಕ್ಕಮಗಳೂರಿನ ಹಾದಿಯಲ್ಲಿ ಸಾಗಿದರು.

ಮಾರ್ಗ ಮಧ್ಯದಲ್ಲಿ ನಮ್ಮ ಸಂಬಂದಿಕರೊಬ್ಬರು ಸಿಕ್ಕಿದ್ರು 'ಏನು ಗುಂಡಣ್ಣ, ಆರಾಮ? ಮಳೆಯೆಲ್ಲಾ ಚೆನ್ನಾಗಾಯ್ತ?, ಕಾಫೀ ಹೇಗಿದೆ? ಎಲ್ಲಿಗೆ ಹೊರಟ್ರಿ?'

ಎಲ್ಲವಕ್ಕೂ ಉತ್ತರಿಸಿದರು ನಮ್ಮಪ್ಪ (ನನ್ನ ಕಟಿಂಗ್ ವಿಷಯನೂ ಬಂತು). ಸ್ವಲ್ಪ ಹೊತ್ತು ಕಷ್ಟ ಸುಖ ಮಾತಾಡಿದ ಅವರು ನನ್ನ ಕಡೆಗೆ ತಿರುಗಿದರು. ಈ ಪುಣ್ಯಾತ್ಮನಾದ್ರೂ ಮದ್ವೆ ವಿಷ್ಯ ಎತ್ತುತ್ತಾರ ಅಂತ ಅವರ ಮುಖ ನೋಡಿದೆ.

'ಏನು ಚೇತನ್, ಯಾವಾಗ ಬಂದೆ ಬೆಂಗಳೂರಿಂದ? ಅಲ್ಲಪ್ಪ, ಅಲ್ಯಾವುದೂ ಕಟಿಂಗ್ ಶಾಪ್ ಸಿಗಲೇ ಇಲ್ವಾ, ಇಲ್ಲಿಗೆ ಬರಬೇಕಿತ್ತಾ. ಏನು ಹುಡುಗ್ರಪ್ಪ ನೀವು. ಸಾಫ್ಟ್ವೇರ್ ಇಂಜಿನಿಯರ್ಸ್ ಅಂತೀರಾ, ಇಷ್ಟೊಂದು ಕಂಜೂಸ್ ಇರಬಾರದು. ೫-೬ ಅಂಕಿ ಸಂಬಳ ತಗೋತೀರಾ, ೧೦-೨೦ ರೂ ಮುಖ ನೋಡ್ತೀರಾ?'

'ಅಂಕಲ್, ನೆನ್ನೆ ಬೆಂಗಳೂರಿಂದ ಬಂದು ನಮ್ಮೂರ ಬಸ್ಸಿಗೆ ಕಾಯ್ತಿದ್ದೆ. ನಿಮ್ಮ ಮಗಳು ಕಾಲೇಜ್ ಟೈಮಲ್ಲಿ ಯಾವ್ದೋ ಹುಡುಗನ ಜೊತೆ ಬೈಕಲ್ಲಿ ಹೋಗ್ತಿದ್ಲು, ಓದೋ ವಯಸ್ನಲ್ಲಿ ಹಿಂಗೆಲ್ಲ ಸುತ್ತಾಡ್ಬಾರ್ದು ಅಂಕಲ್, ಮೊದ್ಲೇ ೧ ವರ್ಷ ಫೈಲ್ ಬೇರೆ ಆಗಿದ್ದಾಳೆ. ಇದೆ ಊರಲ್ಲಿ ಬಾಳಿ ಬೆಳಗಬೇಕಾದವಳು ಯಾರ್ಯಾರ ಜೊತೆ ತಿರುಗಾಡ್ತಿದ್ರೆ ನಿಮಗೆ ಕೆಟ್ಟ ಹೆಸರು ಅಂಕಲ್ ' ನನ್ನ ಸಿಟ್ಟನ್ನು ಒಂದೇ ಸಮನೆ ಅವರ ಮೇಲೆ ಕಾರಿದೆ.

ನನ್ನ ಮುಖ ಸಹ ನೋಡದೆ 'ಗುಂಡಣ್ಣ ಬರ್ತೀನಿ' ಅಂದು ಅಲ್ಲಿಂದ ಕಾಲ್ಕಿತ್ತರು.

ನಮ್ಮಪ್ಪ ನನ್ನನ್ನ ಗುರಾಯ್ಸ್ತಿದ್ರು. 'ಅಪ್ಪ ಕಟಿಂಗ್ ಸಲೂನ್ ೮-೮.೩೦ಕ್ಕೆ ಮುಚ್ತಾರೆ, ಬೇಗ ನಡೀರಿ'.

ಪೇಟೆಗೆ ಹೋಗಿ ನೋಡಿದ್ರೆ ಎಲ್ಲಾ ಕಟಿಂಗ್ ಸಲೂನ್ ಕ್ಲೋಸ್', ವಿಧಿಯಿಲ್ಲದೆ ವಾಪಸ್ ಮನೆಗೆ ಬಂದ್ವಿ.


ಮಾರನೆ ದಿನ ಮಧ್ಯಾಹ್ನ ಬೆಂಗ್ಳೂರಿಗೆ ಹೊರಟೆ. 'ಹೋದ ತಕ್ಷಣ ಕಟಿಂಗ್ ಮಾಡಿಸಿಕೊಳ್ಳೋ' ಅಂತ ಅಮ್ಮ ನಾನು ಹೊರಡೋವಾಗ ಮತ್ತೆ ಹೇಳಿದ್ರು.

ಟ್ರೈನಲ್ಲಿ ಪ್ರಯಾಣ ಮಾಡೋವಾಗ ಸೆಖೆ ಅಂತ ಬಾಗಿಲ ಹತ್ತಿರ ಹೋಗಿ ನಿಂತಿದ್ದೆ, ಒಬ್ಬ ಭಿಕ್ಷುಕ ಬಂದ, ಪರ್ಸಿಂದ ೨ ರೂ ತೆಗೆದು ಕೊಡೋದಕ್ಕೆ ಹೋದೆ.

ಅವನು ನನ್ನನ್ನೇ ಮೇಲಿಂದ ಕೆಳಗೆ ನೋಡಿದ. ವಿಚಿತ್ರವಾದ ತಲೆಗೂದಲು, ಗಡ್ಡ, ಹರಿದ ಜೀನ್ಸ್ ಪ್ಯಾಂಟ್ ನೋಡಿ ಇವನ್ಯಾರೋ ನನ್ನ ಕೆಟಗರಿಯವನೇ ಅಂದ್ಕೊಂಡು ನನ್ನಿಂದ ದುಡ್ಡು ತೆಗೆದುಕೊಳ್ಳದೆ ಮುಂದೆ ಹೋದ (ಅಬ್ಬಬ್ಬ ಒಂದು ಮದುವೆ ಆಗ್ಬೇಕಂದ್ರೆ ಏನೆಲ್ಲಾ ಅವಮಾನ ಸಹಿಸಬೇಕಾಗತ್ತೆ ಅಂತ ಗೊತ್ತಾಗಿದ್ದು ಆಗ).

ಬೆಂಗ್ಳೂರು ತಲ್ಪೋಹೊತ್ತಿಗೆ ಲೇಟ್ ಆದದ್ದರಿಂದ ಬೆಳಗ್ಗೆ ಏಳುವುದು ತಡವಾಯಿತು, ಆಫೀಸಿಗೆ ಹೋಗಿ ಸಂಜೆ ವಾಪಸ್ ಬಂದಾದ್ಮೇಲೆ ಕಟಿಂಗ್ ಮಾಡಿಸಿಕಂಡ್ರಾಯ್ತು ಅಂತ ಆಫೀಸಿಗೆ ಹೊರಟೆ.

ಕೋರಮಂಗಲಕ್ಕೆ ಹೋಗೋ ೧೭೧ ಬಸ್ ತುಂಬಿ ತುಳುಕಾಡ್ತಿದ್ರೂ ನನ್ನ ಪಕ್ಕದಲ್ಲಿ ಯಾರೂ ಬಂದು ಕುಳಿತುಕೊಳ್ಳಲಿಲ್ಲ. ಬಹುಷ ಇಷ್ಟೆಲ್ಲಾ ಆಗಿದ್ರಲ್ಲಿ ಇದೊಂದೆ ನನಗೆ ಅನುಕೂಲಕರವಾದ ಪ್ರಸಂಗ :).


ಆಫೀಸಿನಲ್ಲಿ ನನ್ನ ಪಕ್ಕ ಕೂರೋ ಆಂಟಿ 'ಇವತ್ತೊಂದಿನ ಬೇರೆ ಡೆಸ್ಕಲ್ಲಿ ವರ್ಕ್ ಮಾಡ್ತೀನಿ' ಅಂತ ಶಿಫ್ಟ್ ಆಯ್ತು.

ಸ್ವಲ್ಪ ಹೊತ್ತಾದ ಮೇಲೆ ಮ್ಯಾನೇಜರ್ ಮೀಟಿಂಗ್ ಕರೆದ. ಬಹುಷ ಅಪ್ರೈಸಲ್ ಮೀಟಿಂಗ್ ಇರ್ಬೇಕು ಅಂದ್ಕೊಂಡು ಮನಸ್ನಲ್ಲೇ ಮಂಡಿಗೆತಿಂತಾ ಮೀಟಿಂಗ್ ರೂಮಿನತ್ತ ಹೆಜ್ಜೆ ಹಾಕಿದೆ.

ಅಲ್ಲಿ ಮ್ಯಾನೇಜರ್ 'ಚೇತನ್, ಆ ಮಾಡ್ಯೂಲ್ ನಿಮ್ಮ ಕೈಲಿ ಮಾಡೋಕಾಗ್ಲಿಲ್ಲ ಅಂದಿದ್ರೆ ಇನ್ನೊಬ್ರಿಗೆ ಅಸೈನ್ ಮಾಡ್ತಿದ್ದೆ, ನೀವು ಈ ರೀತಿ ತಲೆ ಕೆಡಿಸಿಕೊಳ್ತೀರಾ ಅಂತ ಗೊತ್ತಿರಲಿಲ್ಲ. ಸುಮ್ನೆ ಟೈಮ್ ಸಹ ವೇಸ್ಟ್ ನೋಡಿ. ಯು ನೋ? ಆಲ್ ದೀಸ್ ತಿಂಗ್ಸ್ ವಿಲ್ ಆಫೆಕ್ಟ್ ಯುವರ್ ಅಪ್ರೈಸಲ್, ಸ್ವಲ್ಪ ಕೆಲಸದ ಕಡೆ ಗಮನ ಕೊಡಿ'.

ಪಕ್ಕದಲ್ಲಿರೋ ಪ್ರೊಜೆಕ್ಟರ್ ತಗೊಂಡು ಅವನ ತಲೆಗೆ ಕುಕ್ಕೊವಷ್ಟು ಕೋಪ ಬಂತು. ಕೆಲಸ ಅಸೈನ್ ಮಾಡಿ ಇನ್ನು ಒಂದು ವಾರ ಆಗಿಲ್ಲ, ನನ್ನ ಗೆಟಪ್ ನೋಡಿ ಹಿಂಗೆ ಹೇಳಿದ್ನಲ್ಲ ಅಂತ ಸಿಟ್ಟು ಬಂತು.

'ಓಕೆ' ಅಂದು ಮೀಟಿಂಗ್ ಮುಗಿಸಿಕೊಂಡು ನನ್ನ ಡೆಸ್ಕ್ ಹತ್ತಿರ ಹೋದೆ.


ಸಂಜೆ ಡ್ಯೂಟಿ ಮುಗಿಸಿ ಕಟಿಂಗ್ ಸಲೂನಿಗೆ ಹೋದೆ. ಕಟಿಂಗ್ ಮಾಡೋನು ನನ್ನ ಕೂದಲನ್ನು ಒಂದ್ನಿಮಿಷ ನೋಡಿ 'ಸಾರ್, ನಿಮ್ಮ ಕೂದಲು ಕಟಿಂಗ್ ಮಾಡೋಕಾಗಲ್ಲ, ಇದಕ್ಕೊಂದೇ ಪರಿಹಾರ'

'ಏನದು'

'ಬೋಳ ಮಾಡಿಸ್ಬಿಡಿ'

ಬೋಳ ??:(

ಶಾಕ್ ಹೊಡೆದಿದ್ರೂ ಆ ರೀತಿ ಶಾಕ್ ಆಗ್ತಿರ್ಲಿಲ್ವೇನೋ. ನಾನು ಬೋಳ ಆಗೋದನ್ನ ಕನಸಿನಲ್ಲಿಯೂ ಊಹಿಸಿಕೊಂಡಿರಲಿಲ್ಲ.
ಅಕಸ್ಮಾತ್ ಆಗಿದ್ರೆ ಸಣ್ಣವನಿದ್ದಾಗ ಧರ್ಮಸ್ಥಳದಲ್ಲಿ ಹರಕೆ ತೀರಿಸೋದಕ್ಕೆ.
ಅದು ಬಿಟ್ರೆ ನನ್ನ ಹಣೆಬರಹ ಸರಿಯಿಲ್ಲ ಅಂದ್ರೆ ವಯಸ್ಸಾದ ಮೇಲೆ.

ಒಂದು ಸ್ವಲ್ಪ ಹೊತ್ತು ಯೋಚನೆ ಮಾಡಿ 'ಬೇಡ ಬಿಡಿ' ಅಂತ ಅಲ್ಲಿಂದ ಎದ್ದು ವಾಪಸ್ ಮನೆಗೆ ಹೋದೆ.

ರಾತ್ರಿ ಹೊರಟು ಧರ್ಮಸ್ಥಳಕ್ಕೆ ಬೆಳಗ್ಗೆ ತಲುಪಿದೆ.

ಬೋಳ ಮಾಡಿಸಿಕೊಳ್ಳಲು ಹೋಗಿ ಕುಳಿತೆ. ಕೂದಲುಗಳ ಮಾರಣಹೋಮ ನೋಡಲಾರದೆ ಕಣ್ಮುಚ್ಚಿಕೊಂಡು ಕುಳಿತೆ. ಕೇವಲ ೨ ನಿಮಿಷದಲ್ಲಿ ಕೂದಲುಗಳು ನನ್ನ ಪಾದ ಸೇರಿದ್ದವು.
ತಲೆಗೆ ಒಂದೆರಡು ಏಟು ಪಟ್ ಅಂತ ಬಿತ್ತು 'ಮಸಾಜ್ ಮಾಡ್ತಿರಬೇಕು' ಅಂದ್ಕೊಂಡು ಹಾಗೆ ಕುಳಿತೆ.

'ಚಿಕ್ಕು ಚಿಕ್ಕು' ಅಂತ ಮತ್ತೆ ಪಟ್ ಅಂತ ಏಟು ಬಿದ್ದಾಗ ಕಣ್ಣುಜ್ಜಿಕೊಂಡು ಎದ್ದೆ.
ಎದುರಿಗೆ ಉಲ್ಲ!!!!!!!!!! ನೀನೇನೋ ಇಲ್ಲಿ ಅಂದೆ ಯಾವಾಗ ಬಂದೆ ಧರ್ಮಸ್ಥಳಕ್ಕೆ? ಮೊದ್ಲೇ ಹೇಳಿದ್ರೆ ಒಟ್ಟಿಗೆ ಬರಬಹುದಿತ್ತಲ್ಲ??

ಧರ್ಮಸ್ಥಳ??? ಯಾಕೋ ಚಿಕ್ಕು ಮೈ ಹುಷಾರಿಲ್ವ?? ಎಲ್ಲಿ ಕಳೆದು ಹೋಗಿದೀಯ? ಧರ್ಮಸ್ಥಳ ತುಂಬಾ ದೂರ ಇದೆ, ' ಅಂದ.

ಓ, ಹಾಗಾದರೆ ಇಷ್ಟೊತ್ತು ಕಂಡಿದ್ದು ಕನಸು, ತಲೆ ಮುಟ್ಟಿ ನೋಡಿದೆ, ಕೂದಲುಗಳು ಹಾಗೆ ಇತ್ತು, ಗಡ್ಡಕ್ಕೆ ಕೈ ಹಾಕಿದೆ, ಗಡ್ಡ ಇಲ್ಲ :)

'ಬರ್ತೀಯಾ, ನಳಪಾಕಕ್ಕೆ ತಿಂಡಿಗೆ ಹೋಗಣ? ಮೀಟರ್, ವೆಂಕ, ಸೌಜ, ಬಾಬು, ಧೋಪ ಆಗ್ಲೇ ಅಲ್ಲಿಗೆ ಹೋಗಿದ್ದಾರೆ'

'ತಡಿ ಸ್ವಲ್ಪ ಹೊತ್ತು, ರೆಡಿ ಆಗ್ತೀನಿ' ಅಂದು ದೇವರ ಕೋಣೆಗೆ ಕೈ ಮುಗಿಯಲಿಕ್ಕೆ ಹೋದೆ.

ದೇವರ ರೂಮಿನಲ್ಲಿದ್ದ ಮಂಜುನಾಥ ನನ್ನನ್ನು ನೋಡಿ ನಗುತ್ತಿದ್ದ

No comments:

Post a Comment