Thursday, May 13, 2010

ಗೌಡ್ರು ರಂಗಣ್ಣ ಮತ್ತೆ ರಾಜಕೀಯ - ೧

ಏನು ರಂಗಣ್ಣ ತುಂಬಾ ದಿನದಿಂದ ಪತ್ತೇನೆ ಇಲ್ಲ, ಎಲ್ಲಿ ಹೋಗಿತ್ತೋ ಸವಾರಿ. ಗೌಡ್ರು ಗದ್ದೆ ಕಡೆ ಹೋಗ್ತಿದ್ದಾಗ ಸಿಕ್ಕ ರಂಗಣ್ಣನ ಕೇಳಿದ್ರು.

ಹೂಂ ಗೌಡ್ರೆ, ಪ್ಯಾಟೆಲಿ ಸ್ವಲ್ಪ ಕೆಲ್ಸ ಇತ್ತು, ಹಂಗಾಗಿ ಅಲ್ಲೇ ಇದ್ದೆ.

ಅದೇನ್ಲ ಅಂತ ಕೆಲ್ಸ? ಅದೆಂತದೋ ಹೋಟ್ಲು ಓಪನ್ ಮಾಡ್ತೀಯಂತೆ ಅದ್ಕಾ?

ಅದೇ ಗೌಡ್ರೆ, ರೆಸಾರ್ಟ್ ಅಂತ, ಅದ್ಕೆ ಸ್ವಲ್ಪ ಓಡಾಡ್ತಿದೀನಿ

ಓ, ಅದೇನೋ ಸರ್ಕಾರ ಬೀಳಸ್ಬೇಕು ಅಂದ್ರೆ ರಾತ್ರಿ ರಾತ್ರಿನೇ ರಾಜಹಂಸದಲ್ಲಿ ಓಡಿಹೋಗಿ ಡೀಲ್ ಮಾಡ್ಕೋತಾ ಇದ್ರಲ್ಲ ಅಂತದ?

ಅಲ್ಲ ಗೌಡ್ರೆ, ಬೆಂಗಳೂರಲ್ಲಿ ಅದೇನೋ ಸಾಪ್ಟೆರ್ ಅಂತಾರಲ್ಲ, ಅಲ್ಲಿ ಕೆಲ್ಸ ಮಾಡ ಹೈಕ್ಳುಗಳು ಕಿತ್ಕೊಂಡು ಕಾಸು ಖರ್ಚು ಮಾಡ್ತಾವಂತೆ ಇಂಥದಕ್ಕೆ, ಅದ್ಕೆ ಅದ್ನ ಹಾಕಿ ನಾನು ನಾಕು ಕಾಸು ಮಾಡನ ಅಂತ.

ಅಲ್ಲ ಕಣ್ಲ, ಊರೋರು ಹೊಟ್ಟೆಗೆ ಹೊಡೆದು ಇಂಥ ಹಲ್ಕಾ ಕೆಲ್ಸ ಮಾಡೋಕೆ ನಿಂಗೆ ಹೆಂಗಾದ್ರೂ ಮನ್ಸು ಬಂತ್ಲಾ?

ನಾನೇನು ಮಾಡ್ದೆ ಗೌಡ್ರೆ, ಅವ್ರಿಗೆ ಅವ್ರ ಕಾಸು ಕೊಟ್ಟಿದೀನಲ್ಲ.

ಹೂಂ ಕೊಟ್ಟಿದೀಯ, ಆದ್ರೆ ಎಷ್ಟು? ಚಿಲ್ರೆ ಕೊಟ್ಟಿದೀಯಲ್ಲ. ಎಕ್ರೆಗೆ ಏನಿಲ್ಲ ಅಂದ್ರೂ ೧.೫ ಲಕ್ಷ ಆದ್ರೆ ನೀನು ಕೊಟ್ಟಿರೋದು ಬರೀ ೬೦ ಸಾವಿರ, ಅಂತೂ ಅವ್ರ ಜೀವನಕ್ಕೆ ಇದ್ದ ಸ್ವಲ್ಪ ಜಾಗನೂ ನುಂಗಿ ನೀರು ಕುಡಿದೆ, ಇರೋ ದುಡ್ಡು ಖಾಲಿ ಆದ್ಮೇಲೆ ನಿನ್ನ ರೆಸಾರ್ಟ್ಗೆ ಕೆಲ್ಸ ಮಾಡಕೆ ಹಾಕೊತೀಯ, ಏನು ಐನಾತಿ ಬುದ್ದಿನಯ್ಯ ನಿಂದು.

ಏನು ಮಾಡೋದು ಗೌಡ್ರೆ, ಎಲ್ಲ ಕಡೆನೂ ಹಿಂಗೆ ಅಲ್ವ, ಅದೆಲ್ಲ ಇರ್ಲಿ ಗೌಡ್ರೆ ನಾನು ಎಂ,ಎಲ್,ಏ ಆಗಣ ಅಂತ ಅದ್ಕೆ ಒಂದು ಪಾರ್ಟಿ ಸೇರಣ ಅಂತ, ಏನಂತೀರ?

ಯಾಕ್ಲಾ, ನಮ್ಮೂರು ಹಾಳು ಮಾಡಿದ್ದು ಸಾಕಾಗ್ಲಿಲ್ವ ಈಗ ಇಡೀ ರಾಜ್ಯನ ನುಂಗ್ಬುಡೋ ಪ್ಲಾನಾ.

ಹಂಗೇನಿಲ್ಲ ಗೌಡ್ರೆ ನನ್ನ ಹೆಸ್ರು ಪ್ಯಾಮಸ್ ಆಗ್ಲಿ ಅಂತ.

ಅಲ್ಲ ಕಣ್ಲ ಸುತ್ತ ಇರೋ ೪-೫ ಹಳ್ಳಿಗೆ ನೀನೆಂಥ ದಗ್ಲಬಾಜಿ ಅಂತ ಗೊತ್ತು, ಇನ್ನ ತುಂಬಾ ಜನ್ಕೆ ಗೊತ್ತಾಗಲಿ ಅಂತನ. ಅದಿರ್ಲಿ ಯಾವ ಪಾರ್ಟಿಗೆ ಸೇರ್ಬೇಕು ಅಂಥ?

ಅದೇ ಗೌಡ್ರೆ, ಈಗ ಸರ್ಕಾರ ನಡೆಸ್ತವ್ರಲ್ಲ ಅವ್ರ ಪಾರ್ಟಿಗೆ.

ಸರ್ಹೋಯ್ತು ಬುಡು, ರಾಕ್ಷಸರ ಗುಂಪಿಗೆ ಇನ್ನೊಬ್ಬ ಸೇರ್ಕಂಡಂಗಾಯ್ತು.

ಅದ್ಯ್ಯಾಕೆ ಹಂಗಂತೀರಿ ಗೌಡ್ರೆ, ನಾನೂ ಸ್ವಲ್ಪ ಸಮಾಜ ಸೇವೆ ಮಾಡಣ ಅಂತ.

ಮುಚ್ಕಂಡಿರ್ಲಾ ಕಂಡಿದೀನಿ ನೀನು ಮಾಡ್ತಿರ ಸಮಾಜ ಸೇವೆನ.

ಅಷ್ಟೊತ್ತಿಗೆ ಎದ್ರುಗಡೆ ಬಂದ ಚಂದ್ರಣ್ಣನ್ನ 'ಏನ್ಲ ಚಂದ್ರ, ಹೆಂಗಿದೀಯ, ಅಲ್ಲ ಕಣ್ಲ ಜಮೀನು ಯಾಕ್ಲಾ ಮಾರಕೆ ಹೋದ್ಲಾ, ಇವ್ನು ಕೊಟ್ಟ ಕಾಸು ಖರ್ಚಾದ್ಮೇಲೆ ಹೊಟ್ಟೆಗೆ ಏನು ನೀರು ಬಿಟ್ಕಂತೀಯೇನ್ಲಾ? ನಿನ್ನ ಹೆಂಡ್ತಿ ಮಕ್ಳು ಗತಿ ಏನ್ಲಾ?

ಗೌಡ್ರೆ ರಂಗಣ್ಣ ಹೇಳವ್ನೆ ಅದೇನೋ ರೆಸಾರ್ಟ್ ಮಾಡ್ತಾವ್ನಲ್ಲ ಅದ್ಕೆ ನನ್ನೇ ಮ್ಯಾನೇಜರ್ ಮಾಡ್ತಾನಂತೆ.

ಸರ್ ಹೋಯ್ತು ಬುಡು, ಆಯ್ತು ಏನಾದ್ರೂ ಮಾಡ್ಕೋ ಹೋಗು.

ಅವ್ನು ಅಲ್ಲಿಂದ ಹೋದ್ಮೇಲೆ 'ಎಂ,ಎಲ್,ಏ ಆಗಕೆ ಸರ್ಯಾಗಿದಿಯ ಬಿಡು ರಂಗಣ್ಣ'

ಅದಿರ್ಲಿ ಅವನ್ಯಾವನೋ ಸ್ವಾಮಿದು ಎಂಥದ್ಲಾ ಅದು ಹಗರಣ, ಅಲ್ಲ ಕಣ್ಲ ಅಂಥರಿಗೆ ಯಾಕ್ಲಾ ಸರ್ಕಾರ ಭೂಮಿ ಕೊಡ್ಬೇಕು? ಇಂಥ ಬ್ಯಾವರ್ಸಿ ಕೆಲ್ಸ ಮಾಡಕೇನ್ಲ ?

ಇಲ್ಲ ಗೌಡ್ರೆ ಅದೇನೋ ಯೋಗ ಮಾಡ್ಲಿಕ್ಕೆ ಜಾಗ ಕೇಳಿದ್ನಂತೆ ಅದ್ಕೆ ಕೊಟ್ರಂತೆ.

ಅಲ್ಲ ಕಣ್ಲ, ಒಂದಡಿ ಅದ್ನಿಡಕೆ ಎಂಥಕಲ ೧೦೦ ಎಕ್ರೆಗಟ್ಲೆ.

ಹೂಂ ಗೌಡ್ರೆ ನಂಗೂ ಅದೇ ಯೋಚ್ನೆ ಎಂತಕೆ ಅಷ್ಟು ಕೊಟ್ಟರೆ ಅಂಥ, ಆಮೇಲೆ ಅದೇನೋ ಬೇರೆ ವಿಸ್ಯಕ್ಕೆ ಅಂತೆ.

ಎಂಥದ್ಲ ಆ ವಿಸ್ಯ?

ಅದೇ ಗೌಡ್ರೆ, ಹಿಂದಿನ ಕಾಲ್ದಲ್ಲಿ ರಾಜ್ರುಗಳು ರಾಜ್ಯ ಗೆದ್ದಾಗ ಸೋತ ರಾಜ ಮತ್ತೆ ಅವ್ರ ಜೊತೆ ಇರ ಹೆಂಗುಸ್ರನ್ನ ಕರ್ಕಬಂದು ಬೇರ್ಬೇರೆ ಅರ್ಮನೆಲಿ ಇಡ್ತಿದ್ನಂತಲ್ಲ ಅಂಗೆ ಈ ಸ್ವಾಮಿನೂ ತಮಿಳ್ನಾಡು, ಆಂಧ್ರ, ಅಮೇರಿಕ, ಇಂಗ್ಲೆಂಡ್ ಅಲ್ಲಿಂದ ಎಲ್ಲ ಹೀರೋಯಿನ್, ಬಿಳೆ ಹುಡ್ಗೀರ್ನ ಕರ್ಕಬಂದು ಇವ್ನು ೧೦೦ ಎಕ್ರೆನಲ್ಲಿ ಕಟ್ಸಿರೋ ಕುಟೀರದಲ್ಲಿ ಇಡ್ತಿದ್ನಂತೆ.

ಆಮೇಲೆ ಈ ರಾಜಕಾರಣಿಗಳು ಅಲ್ಲಿ ಹೋಗರು, ಈ ತರ ಡೀಲ್ಗಳು ಆಗವು ಗೌಡ್ರೆ.

ತಕ್ಕಳಪ್ಪ, ಭಲೇ ಸ್ವಾಮಿ ಕಣ್ಲ ಅವ. ಇಂಥವ್ರಿಂದ್ಲೆ ಸ್ವಾಮ್ಗಳ ಮೇಲೆ ನಂಬಿಕೆ ಹೋಗ್ತಿರೋದು. ಬಡ್ಡಿ ಮಗನೇ ನೀನೇನಾದ್ರೂ ರೆಸಾರ್ಟ್ ಮಾಡಿ ಇಂಥ ಥರ್ಡ್ ಕ್ಲಾಸ್ ಕೆಲ್ಸ ಮಾಡಿದ್ರೆ ಬೆಂಡೆತ್ತಿ ಊರಿಂದ ಬಹಿಷ್ಕಾರ ಹಾಕ್ತೀವಿ.

ಇಲ್ಲ ಗೌಡ್ರೆ ಹಂಗೆಲ್ಲ ಮಾಡಾಕಿಲ್ಲ, ಊರ್ಜನಾನ ಎದ್ರ್ಹಾಕಂಡು ಬದ್ಕಕಾದೀತ ?

ಹಂಗಿದ್ರೆ ಒಳ್ಳೇದು ನೋಡು, ನಾನಿನ್ನು ಬರ್ತೀನಿ ಕಣ್ಲ, ಬೇಸಾಯ ಮಾಡ್ತಾವ್ರೆ ಗದ್ದೆ ಕಡೆ ಹೋಗ್ಬೇಕು ಅಂಥ ಹೊರಟ್ರು ಗೌಡ್ರು.

No comments:

Post a Comment