Friday, July 8, 2011

ಮೊದಲ ಮಳೆಯಲಿ

ಮೊದಲ ಮಳೆಯಲಿ
ನೆನೆಯುವಾಸೆ

ಧರೆಯ ಸ್ಪರ್ಶಿಸುವ ತುಂತುರು ನಾದಕೆ
ಕಿವಿಗೊಡುವಾಸೆ

ಹನಿಗಳ ಚಿಟಪಟ ಶಬ್ಧಕೆ
ನೃತ್ಯವಾಡುವಾಸೆ

ಮಳೆ ನಿಂತ ಮೇಲೆ ಮಣ್ಣಿನ ಸುವಾಸನೆಯ
ಹೀರುವಾಸೆ

ಎಲೆಗಳ ಮೇಲಿನ ದೃಶ್ಯವೈಭವವನ್ನು
ನೋಡುವಾಸೆ

ಕಾನನದ ಸುಂದರ ಸೊಬಗನ್ನು
ಸವಿಯುವಾಸೆ

ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೨

ಲ್ಯಾಪ್ಟಾಪಿನಲ್ಲಿ ಹಾಕಿದ ಎದುರಿಗೆ ಕಂಡ ಮಲೆನಾಡಿನ ಚಿತ್ರವನ್ನು ನೋಡುತ್ತಾ ಹಾಗೆಯೇ ಹಿಂದೆ ಕುರ್ಚಿಗೆ ಒರಗಿ ಕಾಫಿಯನ್ನು ಹೀರುತ್ತಾ, ತನ್ನಊರು, ಮಲೆನಾಡಿನ ಸುಂದರ ಪರಿಸರ, ಅಲ್ಲಲ್ಲಿ ಒಂದೊಂದು ಮನೆ, ಸುತ್ತಲೂ ಕಾಡು, ಮನೆಯ ಪಕ್ಕ ಹರಿಯುವ ಸಣ್ಣ ಹೊಳೆ, ಅಲ್ಲೆಲ್ಲೋ ಹಕ್ಕಿಗಳ ಸದ್ದು, ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನು ಮನೆಯ ಹೊರಗಡೆ ಚಾಚಿ ಅಂಗಳಕ್ಕೆ ಬಂದಾಗ ಅಜ್ಜಿ ಕೂಗಿದರೂ ಕೇಳದೆ ಎದುರಿಗೆ ಬಂದ ಆ ಪುಟ್ಟ ಕರುವನ್ನು ತನ್ನ ಎಳೆಯ ಕೈಗಳಿಂದ ಮುಟ್ಟುವ ಬಯಕೆ, ತನ್ನ ಗೆಳೆಯರೊಡಗೂಡಿ ಆಡಿದ ಗೋಲಿ ಬುಗುರಿ ಲಗೋರಿ ಮರಕೋತಿಯಾಟಗಳು, ಹೊಳೆಗೆ ಹೋಗಿ ಗಾಣ ಹಾಕಿ ಹಿಡಿದ ಮೀನುಗಳು, ಕಾಡಿಗೆ ನುಗ್ಗಿ ಚಾಟಿಬಿಲ್ಲಿನಿಂದ ಹೊಡೆದ ಹಕ್ಕಿ, ಹಕ್ಕಿ ಬಿದ್ದಾಗ ಸಂಭ್ರಮಿಸಿದ ಕ್ಷಣ, ಅಮ್ಮನಿಗೆ ಹೋಗಿ ತೋರಿಸಿದಾಗ ಪಾಪದ ಹಕ್ಕಿಯನ್ನು ಹೊಡೆದದ್ದಕ್ಕೆ ಬೈಸಿಕೊಂಡು ತಾನು ಊಟ ಮಾಡುವುದಿಲ್ಲ ಎಂದು ಸಿಟ್ಟು ಮಾಡಿಕೊಂಡು ಹೋದದ್ದು, ಬೇರೆಯವರ ತೋಟದಲ್ಲಿ ಹಲಸಿನಹಣ್ಣು ಕದಿಯಲು ಹೋಗಿ ಮರದಿಂದಕೆಳಗಿಳಿಸಿ ಇನ್ನೇನು ತಿನ್ನಬೇಕೆನ್ನುವಷ್ಟರಲ್ಲಿ ತೋಟದ ಯಜಮಾನ ಬಂದಿದ್ದು, ಅವರಿಂದ ಸಿಕ್ಕಾಪಟ್ಟೆ ಬೈಸಿಕೊಂಡಿದ್ದು ಆಮೇಲೆಅವರೂ ಒಟ್ಟಿಗೆ ತಿಂದದ್ದು, ಶಾಲೆಗೆ ಹೋಗೋದಕ್ಕೆ ತಪ್ಪಿಸಿಕೊಳ್ಳಬೇಕು ಎಂದುಕೊಂಡು ಅಮ್ಮನಿಗೆ ಹೋಗೋ ದಾರಿಯಲ್ಲಿರೋ ಒಬ್ಬರಮನೆಯಲ್ಲಿ ನಾಯಿ ಇದೆ ಎಂದು ಸುಳ್ಳು ಹೇಳಿದರೂ ಅಮ್ಮ ಕೇಳದೆ ಅವಳೊಟ್ಟಿಗೆ ಕರೆದುಕೊಂಡು ಹೋಗಿ ಅದ್ಯಾವ ನಾಯಿ ತೋರಿಸು ಅಂತಕೇಳಿ ಅಲ್ಲಿಲ್ಲದ್ದು ಗೊತ್ತಾಗಿ ಸುಳ್ಳು ಹೇಳಿದ್ದಕ್ಕೆ ಶಾಲೆಯವರೆಗೆ ಕೋಲಿನಲ್ಲಿ ಹೊಡೆದುಕೊಂಡು ಹೋಗಿದ್ದು, ಅಮ್ಮ ಮನೆಗೆ ಬರುವ ಮೊದಲೇಮನೆಗೆ ಬಂದಿದ್ದು, ಶಾಲೆಯಲ್ಲಿ ಇಂಜೆಕ್ಷನ್ ಕೊಡ್ತಾರೆ ಅಂತ ತಿಳಿದ ತಕ್ಷಣ ಅಲ್ಲಿಂದ ಓಡಿ ಹೋಗಿದ್ದು, ಮಳೆ ಬರುವಾಗ ಕೊಡೆ ಹಾರಿಹೋಗುತ್ತಿದ್ದಕಾರಣ ಅದನ್ನು ಮಡಿಸಿ ಮಳೆಯಲ್ಲೇ ನೆನೆದುಕೊಂಡು ಮನೆಗೆ ಬಂದದ್ದು, ಶಿವರಾತ್ರಿಯ ಪ್ರಸಾದ ತೆಗೆದುಕೊಂಡು ಬರುವಾಗದಾರಿಯಲ್ಲಿ ಮನೆಯ ದನ ಎಲ್ಲೋ ಓಡಿಹೋಗುತ್ತಿದ್ದದ್ದನ್ನು ನೋಡಿ ಪ್ರಸಾದವನ್ನು ಮನೆಯ ಕೆಲಸಕ್ಕ ಬರುವ ಹೆಂಗಸೊಬ್ಬಳಿಗೆ (ದಲಿತ ಮಹಿಳೆ)ಕೊಟ್ಟದ್ದನ್ನು ನೋಡಿದ ದೊಡ್ಡಮ್ಮನಿಂದ ಹಿಗ್ಗಾಮುಗ್ಗಾ ಬೈಗುಳ, ಮಳೆಗಾಲದಲ್ಲಿ ನೇಗಿಲು ಹಿಡಿದುಕೊಂಡು ಬೇಸಾಯ ಮಾಡಲು ಹೋಗಿ ಗದ್ದೆಯಲ್ಲಿ ಬಿದ್ದು ಮೈಯೆಲ್ಲಾ ಗೊಚ್ಚೆ, ಬೇಸಾಯ ಮುಗಿದ ಮೇಲೆ ಅಲ್ಲೇ ಮರದ ಕೆಳಗೆ ಗೋಣಿ ಚೀಲವನ್ನು ಮೈಮೇಲೆ ಹೊದ್ದುಕೊಂಡು ಅವುಚಿ ಕುಳಿತು ತಿಂದ ಬೆಚ್ಚನೆಯ ರೊಟ್ಟಿ, ಆ ಚಳಿಯಲ್ಲಿ ಕುಡಿದ ಬಿಸಿ ಬಿಸಿ ಬೆಲ್ಲದ ಕಾಫಿ, ತನ್ನ ಕಾಯಕ ಮುಗಿಸಿ ಮೇಯಲು ಹೊರಟ ಎತ್ತುಗಳು, ಕಾಫಿ ಕುಡಿದು ದನ ಕಾಯಲು ಹೊರಟ ಇವನು, ದೂರದಲ್ಲಿ ಗೋಲಿ ಆಡುತ್ತಿದ್ದವರನ್ನು ಕಂಡು ತಾನು ಸೇರಿ, ಇತ್ತ ಹೊಟ್ಟೆ ತುಂಬಿದ ಎತ್ತುಗಳು ಕಾಡಿಗೆ ಓಟ, ನೋಡಿದ ಇವನು ಒಂದೇ ಸಮನೆ ಕಾಡಿಗೆ ನುಗ್ಗಿ ವಾಪಸು ಕರೆತಂದ ಎತ್ತುಗಳು, ಇಲ್ಲದಿದ್ದರೆ ನಾಳಿನ ಬೇಸಾಯಕ್ಕೆ ರಜೆ, ಮಳೆಗಾಲ ಮುಗಿದು ಬೇಸಗೆ ಕಾಲಿಡುವ ಹೊತ್ತಿಗೆ ಎಲ್ಲೆಲ್ಲೂ ಭತ್ತದ ತೆನೆಗಳು , ಆಳುಗಳೊಡನೆ ತಾನೂ ಕುಡುಗೋಲು ಹಿಡಿದು ಕೊಯ್ದ ತೆನೆ, ಅಂಗಳಕ್ಕೆ ಹರಡಿದ ಭತ್ತದ ರಾಶಿ, ಒಕ್ಕಲಾಟಕ್ಕೆ ಎತ್ತುಗಳನ್ನು ತಂದು ಭತ್ತದ ರಾಶಿಯ ಮೇಲೆ ಸುತ್ತಿಸಿ ತನ್ನ ಓರಗೆಯವರೊಂದಿಗೆ ತಾನು ಪಲ್ಟಿ ಹೊಡೆದು ಸಂಭ್ರಮಿಸಿದ ಪರಿ, ಬೇಸಗೆ ರಜೆ ಮುಗಿದು ಶಾಲೆಗೆ ಹೋಗುವ ದುಃಖ, ಹೊಸ ತರಗತಿಗೆ ಹೋಗುವ ಸಂಭ್ರಮ, ಶಾಲೆ ಮುಗಿದುನಡೆದುಕೊಂಡು ಹೋಗುತ್ತಿರುವಾಗ ಪೇಟೆಯಿಂದ ಬಂದ ಬಸ್ಸನ್ನೇ ನೋಡುತ್ತಾ ನಿಂತದ್ದು, ತನ್ನ ಅಜ್ಜ ಅದರಿಂದ ಇಳಿದಾಗ ಆದಸಂತೋಷ, ಅಜ್ಜ ತಂದುಕೊಟ್ಟ ವಿವಿಧ ಚಿತ್ರದ ಬಿಸ್ಕತ್ಗಳು, ಅಲ್ಲೇ ಎಲ್ಲರಿಗೂ ಹಂಚಿ ತಾನು ತಿಂದದ್ದು, ಏನೋ ಮಗಾ ಮನೆಗೆ ಹೋಗಲ್ವ ಅಂತ ಪಕ್ಕದವನು ಅಂದಾಗ ಎಚ್ಚರವಾಗಿ ತನ್ನ ಲ್ಯಾಪ್ಟಾಪನ್ನು ಮಡಿಸಿ ಬ್ಯಾಗಿಗೆ ಹಾಕಿ ಕಾರಿನಲ್ಲಿ ಕುಳಿತು ಪ್ರತಿದಿನ ಹೀಗೆ ನಡೆಯುವ ಜೀವನ, ಎಂದೂ ನಿಲ್ಲದ ಟ್ರಾಫಿಕ್ ಎಂಬ ಮಹಾ ಸಾಗರದಲ್ಲಿ ಲೀನವಾದನು.

ಮುಂಗಾರು ಮಳೆಯ ಮಾಂತ್ರಿಕನಿಗೆ

ಮುಂಗಾರು ಮಳೆಯಲ್ಲಿ
ಮಿಂದೆದ್ದ ಮನಸ್ಸು
ಗಾಳಿಯಲ್ಲಿ ಗಾಳಿಪಟದಂತೆ
ಗಿರ್ರೆಂದು
ಮನಸಾರೆ ಮುಗಿಲಿನಲ್ಲಿ
ಮೀಯ್ದು
ಪಂಚರಂಗಿಯಂತೆ ಪೃಥ್ವಿ ಯ
ಪಯಣಿಸುತ್ತ
ಪರಮಾತ್ಮನ ಪಾದದಂಗಳದಲ್ಲಿ
ಪರಿಭ್ರಮಿಸುತ್ತಿಹುದು

ನೆನಪಿನಂಗಳದಲ್ಲಿ ಅಚ್ಚಳಿಯದೆ ನಿಂತಿರುವ ಬಣ್ಣದ ಚಿತ್ತಾರಗಳು

ಆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು
ಅಡುಗೆಮನೆಯಿಂದ ನಡುಮನೆಯವರೆಗೆ
ನಡುಮನೆಯಿಂದ ಚಾವಡಿಯವರೆಗೆ
ಚಾವಡಿಯಿಂದ ಅಂಗಳದವರೆಗೆ
ನಡೆದದ್ದೇ ಹಾದಿ

ಅಮ್ಮ ಅಲ್ಲಿ ಕೇಳಲ್ಲಿ ಶಾಲೆಯ ಘಂಟೆಯ ಸದ್ದು
ಎಂದಂದು ಚೀಲವನ್ನು ಎತ್ತಿಕೊಂಡು ಹೋಗುತ್ತಿದ್ದ
ಆ ಸಂಭ್ರಮದ ಕ್ಷಣಗಳು

ಚಲಿಗಾಲವೋ ಮಳೆಗಾಲವೋ ಬಿರುಬಿಸಿಲೋ
ಯಾವುದನ್ನೂ ಲೆಕ್ಕಿಸದೆ ಕಾಲದ ಹಂಗಿಲ್ಲದೆ
ನಡೆಯುತ್ತಿದ್ದ ಪಾಠಗಳು

ಗೋಲಿ ಬುಗುರಿ ಚಿನ್ನಿದಾಂಡು ಲಗೋರಿ
ಎಷ್ಟು ಆಡಿದರೂ ಮತ್ತೆ ಮತ್ತೆ
ಆಡಬೇಕೆನಿಸುತ್ತಿದ್ದ ಆಟಗಳು

ಚಾಟಿಬಿಲ್ಲು ಹಿಡಿದು ಕಾಡಿಗೆ ನುಗ್ಗಿ
ಗುರಿಗೆ ಬೀಳದಿದ್ದರೂ
ಮರಳಿ ಯತ್ನವ ಮಾಡುತ್ತಿದ್ದ ಕ್ಷಣಗಳು

ನೆನಪಿನಂಗಳದಲ್ಲಿ ಅಚ್ಚಳಿಯದೆ ನಿಂತಿರುವ
ಬಣ್ಣದ ಚಿತ್ತಾರಗಳು

ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೧

ಇಂಜಿನಿಯರಿಂಗ್ ಮುಗಿಸಿಕೊಂಡು ರಾಜ್ಯ ರಸ್ತೆ ಸಾರಿಗೆಯ ಕೆಂಪು ಬಸ್ಸಿನಲ್ಲಿ ಬೆಂಗಳೂರಿಗೆ ಬಂದು ಇಳಿದ ಹುಡುಗ, ಕಣ್ಣುಗಳಲ್ಲಿ ಕನುಸುಗಳ ರಾಶಿ, ಕಷ್ಟಪಟ್ಟು ಓದಿಸಿದ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ, ತಂಗಿಯ ಮದುವೆಯ ಜವಾಬ್ದಾರಿ, ಅದಕ್ಕಿಂತ ಮೊದಲು ತನಗೊಂದು ಸೂರು ಹುಡುಕಿಕೊಳ್ಳುವ, ಆಮೇಲೆ ಬದುಕಿಗೊಂದು ಕೆಲಸ ಪಡೆಯುವ ಸಾಹಸ, ಗೆಳೆಯರ ಜೊತೆಗೂಡಿ ಒಂದು ಬಾಡಿಗೆ ಮನೆ, ನಂತರ ಕೆಲಸ ಹುಡುಕುವ ನಿರಂತರ ಕಾಯಕ, ಬಿ, ಎಂ, ಟಿ, ಸಿಯ ಡೈಲಿ ಪಾಸ್ ತೆಗೆದುಕೊಂಡು ಕಂಡ ಕಂಡ ಕಂಪನಿಗಳಲ್ಲಿ ರೆಸ್ಯುಮ್ಗಳನ್ನು ಸುರಿದು ಸಂಜೆಯ ಹೊತ್ತಿಗೆ ಬಸವಳಿದು ಮನೆಗೆ ಬಂದು ಸೇರಿ, ಅಡಿಗೆ ಮಾಡಿ ತಿಂದು, ಹಾಸಿಗೆಯ ಮೇಲೆ ಬಿದ್ದಾಕ್ಷಣ ನಾಳೆಯೋ ನಾಡಿದ್ದೋ ರೆಸ್ಯುಮ್ಗಳನ್ನು ಕೊಟ್ಟು ಬಂದ ಕಂಪನಿಗಳಿಂದ ಕಾಲ್ ಬರುವುದೋ ಎನ್ನುವ ಕನಸುಗಳು, ಬುಧವಾರದ ಅಸೆಂಟ್ ನೋಡಿ ಶನಿವಾರದ ವಾಕ್ ಇನ್ಗೆ ಸಿದ್ಧತೆ, ಶನಿವಾರ ಅಲ್ಲಿ ಹೋಗಿ ನೋಡಿದರೆ ಜನಸಾಗರ, ಇಷ್ಟು ಜನದಲ್ಲಿ ಕೆಲಸ ಸಿಗುವುದೋ ಇಲ್ಲವೋ ಎನ್ನುವ ಹತಾಶೆಯ ನಡುವೆ ಕಷ್ಟಪಟ್ಟು ನಿಂತು ರಿಟನ್ ಟೆಸ್ಟ್ ಬರೆದು, ಕೊನೆಗೆ ಫಲಿತಾಂಶ ಬಂದ ಮೇಲೆ ಮೊದಲನೇ ಸುತ್ತಿನಲ್ಲೇ ಹೊರಬಿದ್ದು, ತನ್ನ ಗೆಳೆಯರ ಪರಿಸ್ಥಿತಿಯೂ ಹಾಗೆಯೇ ಆಗಿ, ಅಲ್ಲಿಂದ ಮಜೆಸ್ಟಿಕ್ಗೆ ಬಂದು ಕಪಾಲಿಯಲ್ಲೋ ಸಂತೋಷ್ ಥಿಯೇಟರ್ನಲ್ಲೋ ಒಂದು ಸಿನೆಮಾ ನೋಡಿ ಮತ್ತೆ ಮನೆ ಕಡೆಗೆ ಪ್ರಯಾಣ, ಹೀಗೆ ಅಲ್ಲಿ ಇಲ್ಲಿ ಹುಡುಕಿ ಕೊನೆಗೊಂದು ದಿನ ಯಾವುದೋ ಕಂಪನಿಯಲ್ಲಿ ಕೆಲಸ, ತನ್ನ ಗೆಳೆಯರಿಗೂ ಹಾಗೆ ಒಂದೊಂದು ಕಡೆ, ಕೆಲಸ ಸಿಕ್ಕಾಗಲೆಲ್ಲ ಒಬ್ಬೊಬ್ಬರಿಂದ ಪಾರ್ಟಿ, ಈ ನಡುವೆ ಊರಿನಲ್ಲಿ ಕಷ್ಟವಿದ್ದರೂ ತನಗೆ ಬರುತ್ತಿರುವ ಸಂಬಳ ಕಡಿಮೆ ಎಂದುಕೊಂಡು ಸ್ವಲ್ಪವನ್ನೂ ಕಳಿಸದೆ, ವೀಕೆಂಡ್ ಸಿನೆಮಾ, ವಿಂಡೋ ಶಾಪಿಂಗ್, ಬಟ್ಟೆ ಖರೀದಿ, ಬಣ್ಣದ ಲೋಕ, ಅಲ್ಲಲ್ಲಿ ಸುತ್ತಾಟ, ತನಗಾಗಿ ಹೊಸ ಮೊಬೈಲ್, ಲ್ಯಾಪ್ ಟಾಪ್, ತನ್ನ ಆಫೀಸಿನಲ್ಲೇ ತನ್ನೊಂದಿಗೆ ಕೆಲಸ ಮಾಡುತ್ತಿರುವ ಹುಡುಗಿಯೊಂದಿಗೆ ಒಡನಾಟ, ಅವಳ ಜೊತೆ ಸುತ್ತಾಡಲು ಸಾಲದಿಂದ ತೆಗೆದುಕೊಂಡ ಬೈಕ್, ಬಂದ ಸಂಬಳವೆಲ್ಲ ತಮ್ಮಿಬ್ಬರ ಸುತ್ತಾಟಕ್ಕೆ, ತನ್ನ ಮಗ ನೋಡಲು ಬರಲೇ ಇಲ್ಲ ಎಂದು ಅಮ್ಮನ ಚಡಪಡಿಕೆ, ತನ್ನ ಮಗನನ್ನು ಹೋಗಿ ನೋಡಿಕೊಂಡು ಬರಲು ಹೊರಟ ಅಪ್ಪ, ತನ್ನ ಮಗ ಸಾವಿರ ಸಾವಿರ ದುಡಿಯುತ್ತಿದ್ದರೂ ಅದೇ ಕೆಂಪು ಬಸ್ಸಿನಲ್ಲಿ ಬೆಂಗಳೂರಿಗೆ ಪಯಣ, ಸಂಜೆ ತಲುಪಿ ಕಾಯಿನ್ ಬೂತಿಂದ ಕರೆ ಮಾಡಿದರೆ ಮಗನಿಂದ ಬಂದ ಉತ್ತರ ಸ್ವಲ್ಪ ಹೊತ್ತು ಕಾಯಿ ಎಂದು, ಅಲ್ಲಿ ಇವನು ತನ್ನ ಹುಡುಗಿಯೊಂದಿಗೆ ಊರೆಲ್ಲ ಸುತ್ತಾಡಿ ಐಶಾರಾಮಿ ಹೋಟೆಲ್ಲಿನಲ್ಲಿ ಊಟ ಮಾಡಿ ವಾಪಸ್ ಮನೆಗೆ ಬರುವಾಗ ರಾತ್ರಿ, ತನ್ನ ಅಪ್ಪನ ನೆನಪು, ಹೋಗಿ ಕರೆದುಕೊಂಡು ಬಂದು ಅಲ್ಲೇ ಮನೆಯ ಪಕ್ಕದಲ್ಲಿ ತಳ್ಳುವ ಗಾಡಿಯಲ್ಲಿ ಮಾಡಿದ ಊಟವನ್ನು ತಂದು ತಂದೆಗೆ ಕೊಟ್ಟಾದ ಮೇಲೆ ತಂದೆಯ ಹತ್ತಿರ ಸ್ವಲ್ಪ ಯೋಗಕ್ಷೇಮ, ಆಮೇಲೆ ತಾನು ನಿದ್ರಾದೇವಿಗೆ ಶರಣು, ತಂದೆಯ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಮಾತುಗಳೆಲ್ಲವೂ ಕಣ್ಣೀರಿನ ರೂಪದಲ್ಲಿ ಧರೆಗೆ, ಅವನ ಅಮ್ಮನ ಕಾಯಿಲೆ, ತಂಗಿಯ ಕಾಯಿಲೆ, ಬೆಳಗ್ಗೆ ಎದ್ದವನೇ ಆಫೀಸಿಗೆ ರೆಡಿ, ಅಪ್ಪನಿಗೆ ಹತ್ತಿರದಲ್ಲೇ ಇರುವ ಬಸ್ ಸ್ಟಾಪ್ ಹೇಳಿ ಹೊರಟ ಅವನು ಸೀದಾ ಹೋದದ್ದು ಗೆಳತಿಯ ಹತ್ತಿರ, ಕಾಲಚಕ್ರ ಉರುಳುತ್ತಿತ್ತು, ಇವನು ತನ್ನ ಗೆಳತಿಯೊಂದಿಗೆ ಮದುವೆಯಾಗಿಬಿಟ್ಟ, ತನ್ನ ಕುಟುಂಬದವರನ್ನು ಕರೆಯಲೇ ಇಲ್ಲ, ಕಾರಣಗಳು ತುಂಬಾ ಇದ್ದವು, ತನ್ನ ತಂಗಿಯ ಮದುವೆಯ ಜವಾಬ್ದಾರಿ, ಮನೆಯಲ್ಲಿದ್ದ ಬಡತನ, ತಾನು ಮದುವೆಯಾಗಲಿದ್ದ ಹುಡುಗಿಯ ಜಾತಿ, ಆ ಹುಡುಗಿಯ ಮನೆಯಿಂದಲೂ ಯಾರು ಬಂದಿರಲಿಲ್ಲ, ವಿಷಯ ತಿಳಿದ ಅವನ ಅಪ್ಪ ಅಮ್ಮ ಸ್ವಲ್ಪ ದಿನ ಪರಿತಪಿಸಿದರು, ಸ್ವಲ್ಪ ದಿನಗಳ ನಂತರ ಮಗಳ ಮದುವೆ ಮಾಡಿದರು, ಇತ್ತ ಇವನ ಸಂಸಾರ ಮೊದಮೊದಲು ಚೆನ್ನಾಗಿ ನಡೆಯುತ್ತಿತ್ತು, ಒಂದೆರಡು ವರ್ಷ ಅಲ್ಲಿ ಇಲ್ಲಿ ತಿರುಗಾಟ, ಸಿನೆಮಾ, ಪಾರ್ಟಿ, ಕಾರು, ಸ್ವಂತ ಮನೆ, ಹೀಗೆ ಸಾಲವೂ ಏರುತ್ತಲೇ ಹೋಯಿತು, ಅದಾದ ಕೆಲವು ದಿನಗಳಲ್ಲಿಯೇ ಆರ್ಥಿಕ ಹಿಂಜರಿತದಿಂದ ಇಬ್ಬರ ಕೆಲಸಕ್ಕೂ ಕುತ್ತು ಬಂತು, ಇತ್ತ ಸಾಲಗಾರರು ಪೀಡಿಸುತ್ತಿದ್ದರು, ಕೆಲಸ ಹುಡುಕಿ ಹುಡುಕಿ ಸುಸ್ತಾಗಿ, ಬೇರೆ ಏನೂ ಕೆಲಸ ತಿಳಿಯದಿದ್ದ ಇವರು ಇದ್ದ ಮನೆ, ಕಾರು, ಬೈಕ್ ಎಲ್ಲ ಮಾರಿ ಊರಿನ ಕಡೆ ಹೆಜ್ಜೆ ಹಾಕಿದರು, ಅಮ್ಮ ಆಗಲೇ ಈ ಲೋಕವನ್ನು ಬಿಟ್ಟು ಹೋಗಿದ್ದಳು, ಅಪ್ಪ ಇದ್ದ ಜಮೀನಿನಲ್ಲೆ ಗುತ್ತಿಗೆ ಮಾಡಿಸಿ ಜೀವನ ಸಾಗಿಸುತ್ತಿದ್ದ, ಇವರಿಬ್ಬರೂ ಈಗ ಆ ಜಮೀನನ್ನೇ ತಮ್ಮ ಜೀವನೋಪಾಯಕ್ಕಾಗಿ ಅವಲಂಬಿಸಿದ್ದಾರೆ.

ಬರಿಯ ನಿನ್ನ ಚಿತ್ರ

ನಿನ್ನ ನಗುವ ನೋಡಿ
ನಾನಾದೆ ಮೋಡಿ

ನಿನ್ನ ಮೊಗದ ಅಂದ
ತರಿಸಿತು ನನಗಾನಂದ

ನಿನ್ನ ಸ್ನಿಗ್ಧ ಚೆಲುವು
ಮೂಡಿಸಿದೆ ನನ್ನಲ್ಲಿ ಒಲವು

ನಿನ್ನ ಮುಗುಳ್ನಗೆ
ಸದಾ ಇರಲಿ ಹಾಗೆ

ನಾನಿನ್ನೂ ನಿನ್ನ ನೋಡಿಲ್ಲ
ಆದರೆ ಆಕರ್ಷಣೆಗಳಿಗೆ ಬರವಿಲ್ಲ

ಬರಿಯ ನಿನ್ನ ಚಿತ್ರ
ಕೆಡಿಸಿದೆ ನನ್ನ ಚಿತ್ತ

ನಿನ್ನ ಭೇಟಿಯಾಗುವವರೆಗೂ
ಸುರಿಯುತ್ತಿರಲೀ ನೆನಪುಗಳ ರಂಗು

ನೆನ್ನೆ (31-03-2011)

ವೆಂಕ ಬೆಳಗ್ಗೆ ಸ್ವಲ್ಪ ಬೇಗ ಹೋಗೋಣ ಆಫೀಸಿಗೆ ಅಂದಾಗ ಸರಿ ಅಂದಿದ್ದ. ಆಫೀಸಲ್ಲಿ ಮ್ಯಾಚಿಗೆ ಅಂತಾನೇ ಅರ್ಧ ದಿನ ರಜೆ ಕೊಟ್ಟಿದ್ರಿಂದ ಸ್ವಲ್ಪ ಬೇಗ ಹೋಗೋಣ ಅಂದ್ಕೊಂಡು ಬೆಳಗೆ ಹೊರಟ್ವಿ. ಸ್ವಲ್ಪ ಕಂಪನಿಗಳಿಗೆ ರಜೆ ಇದ್ದಿದ್ರಿಂದ ಟ್ರಾಫಿಕ್ ಕಡಿಮೆನೇ ಇತ್ತು. ಅರ್ಧ ದಿನ ಕೆಲಸ ಮುಗಿಸಿ ಹೊರಟಾಗ ರಸ್ತೆಯೆಲ್ಲಾ ಖಾಲಿ ಖಾಲಿ, ಸದ್ಯ ಇವತ್ತೊಂದು ದಿನ ಹೊಗೆ/ಶಬ್ದ ಕಡಿಮೆ ಇರತ್ತೆ ಅಂತ ಖುಷಿಯಾಯ್ತು.

- ಅಕ್ಕನ ಮನೆ ತಲುಪಿದಾಗ ೧ ಓವರ್ ಆಗಿತ್ತು. ಆಮೇಲೆ ನಡೆದದ್ದು ನಮ್ಮವರ ಆಟ. ಪಾಕಿಸ್ತಾನದ ೬ನೇ ವಿಕೆಟ್ ಬಿದ್ದಾಗ ಪಕ್ಕದ ಮನೆಯವನು ಒಂದು ಆಟಂ ಬಾಂಬ್ ಸಿಡಿಸಿದ. ಅಬ್ಬ ಆ ಸದ್ದಿಗೆ ಮನೆಯ ಫೌಂಡೆಶನ್ ಅಲುಗಾಡಿದಂತಾಯ್ತು. ಪಾಪ ರಾತ್ರಿಯ ಹೊತ್ತು ಆ ಶಬ್ಧಕ್ಕೆ ಸಣ್ಣ ಮಕ್ಕಳ, ವಯಸ್ಸಾದವರ ಕಥೆ ಹೇಗಾಗಬೇಡ. ಊರಲ್ಲಿದ್ದ ತೋಟ ಕೋವಿ ತಂದು ಅವನು ಪಟಾಕಿ ಹುಡಿಸಿದ ತಕ್ಷಣ ನಾನು ಟ್ರಿಗರ್ ಎಳೆದು ಅವನಿಗೆ ಹೊಡೆಯುವ ಯೋಚನೆ ಬಂತು :) (ಆ ಸದ್ದಿಗೆ ಯಾರು ಹೊಡೆದ್ರು ಅಂತ ಗೊತ್ತಾಗ್ಬಾರ್ದು).

- ಮ್ಯಾಚ್ ಮುಗಿದ ಮೇಲೆ ಶುರುವಾಯ್ತು ನೋಡಿ ಪಟಾಕಿಗಳ ಸದ್ದು ಆಮೇಲೆ ಬೈಕಿಂದ ಕಾರಿಂದ ರಸ್ತೆಯಲ್ಲಿ ಮನಬಂದಂತೆ ತಿರುಗಿದ ಜನರು ನನ್ನ ಊಹೆಯನ್ನು ತಪ್ಪಾಗಿಸಿದ್ದರು. ೧೦ ಘಂಟೆ ಹೊಗೆ/ಶಬ್ದ ಕಡಿಮೆಯಾಗಿ ತಣ್ಣಗಿದ್ದ ಬೆಂಗಳೂರು, ಮ್ಯಾಚ್ ಮುಗಿದ ತಕ್ಷಣವೇ ಕೇವಲ ೧ ಘಂಟೆಯಲ್ಲಿ ಹೊಗೆ/ಶಬ್ದದಿಂದ ತುಂಬಿ ಹೋಗಿ ನಿಶ್ಯಬ್ಧವಾಗಿದ್ದ ರಾಜಧಾನಿಯನ್ನು ಶಬ್ಧಮಯವಾಗಿಸಿತ್ತು.

- ನನ್ನ ಮನೆಗೆ ನಡೆದುಕೊಂಡು ಹೋಗುವಾಗ ವೆಸ್ಟ್ ಆಫ್ ಕಾರ್ಡ್ ರೋಡಲ್ಲಿ ಒಂದು ೧೦೦ ಜನ ಸುತ್ತುವರಿದು ಕೇಕೆ ಹಾಕುತ್ತಿದ್ದರು. ಅಲ್ಲೇ ಇದ್ದ ಬಾರ್, ದರ್ಶಿನಿ ಜನರಿಂದ ತುಂಬಿ ತುಳುಕುತ್ತಿತ್ತು. ಸ್ವಲ್ಪ ಮುಂದೆ ನವರಂಗ್ ಸಿಗ್ನಲ್ ಹತ್ತಿರ ಸ್ವಲ್ಪ ಯುವಕರ ಗುಂಪೊಂದು ತುಮಕೂರು ಕಡೆಯಿಂದ ಬರುವ ವಾಹನಗಳನ್ನು ನಿಲ್ಲಿಸಿ ಅವರಿಂದ ಮೇರಾ ಭಾರತ ಮಹಾನ್ ಅಥವಾ ಇನ್ನೇನೋ ಕೂಗಿಸಿ ಹೋಗಲು ಬಿಡುತ್ತಿದ್ದರು.

- ಇನ್ನೊಂದು ಸ್ವಲ್ಪ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಒಂದು ೨೦-೨೫ ಯುವಕರ ಗುಂಪೊಂದು ಕೈನಲ್ಲಿ ಬೀರ್ ಬಾಟಲ್ ಹಿಡಿದುಕೊಂಡು ಕೇಕೆ ಹಾಕಿಕೊಂಡು ಹೋಗುತ್ತಿದ್ದರು, ರಸ್ತೆಯ ಪಕ್ಕದ ಫುಟ್ಪಾತಲ್ಲಿ ಆ ದಿನ ಹೊಟ್ಟೆಗೆ ಏನೂ ಇಲ್ಲದೆ ಹಸಿವಿನಿಂದ ಅಂಗಾತ ಮಲಗಿದ್ದ ಮುದಿ ದಂಪತಿಗಳು ಗಾಬರಿಯಿಂದ ಎದ್ದು ಅವರನ್ನೇ ನೋಡುತ್ತಿದ್ದದ್ದು ಅವರಿಗೆ ಕಾಣಿಸುತ್ತಿರಲಿಲ್ಲ.