Thursday, November 14, 2013

ಗದ್ದೆಯಲ್ಲೊಂದು ಗ್ರೂಪ್ ಫೋಟೋ !


ಊರಿಗೆ ಹೋದಾಗ ಕ್ಯಾಮೆರಾ ತೆಗೆದುಕೊಂಡು ಒಂದೆರಡು ಬಾರಿ ಗದ್ದೆಯ ಕಡೆ ಹೋದದ್ದನ್ನು ಮೋಹನ ಗಮನಿಸಿದ್ದ. ನಾನು ಕ್ಯಾಮೆರಾವನ್ನು ಕುತ್ತಿಗೆಗೆ ನೇತಾಕಿಕೊಂಡು ಹೋಗುತ್ತಿದ್ದುದ್ದನ್ನು ಅವರ ಗುಂಪಿನವರಿಗೂ ತೋರಿಸಿದ್ದ. ಯಾವುದೋ ಲೋಕದಿಂದ ಬಂದವನ ಹಾಗೆ ಅವರು ನನ್ನನ್ನು ಗಮನಿಸುತ್ತಿದ್ದರು (ಮದುವೆ ಮನೆಯಲ್ಲಿ ಮಾತ್ರ ಕ್ಯಾಮೆರಾ ನೋಡುತ್ತಿದ್ದವರಿಗೆ ನನ್ನ ಈ ಅವಸ್ಥೆ ನಗು ತರಿಸಿರಬಹುದು).

ಒಂದು ದಿನ ನಡುಮನೆಯಲ್ಲಿ ನಾನು ಪೇಪರ್ ಓದುತ್ತಾ ಕುಳಿತಿದ್ದಾಗ ಮೋಹನ ಬಂದು ಅಮ್ಮನ ಬಳಿ 'ಅಮ್ಮೋರೇ, ಸಣ್ಣ ಗೌಡ್ರಿಗೆ ಹೇಳಿ ನಮ್ದೆಲ್ಲರ್ದೂ ಒಂದು ಫೋಟೋ ತೆಗೀಲಿಕ್ಕೆ ಹೇಳಿ' ಅಂತಿದ್ದ. 'ಇನ್ನೂ ಇಲ್ಲೇ ದನ ಕಾಯ್ತಿದಿರೇನ್ರೋ, ಗದ್ದೆ ಕುಯ್ಯೋದಕ್ಕೆ ಹೋಗ್ರೋ' ಎಂದು ಅಮ್ಮ ಆತನ ಮಾತನ್ನ ಕಿವಿಗೆ ಹಾಕಿಕೊಳ್ಳದೆ ಗದರಿಸುತ್ತಿದ್ದರು. 'ಅಯ್ಯೋ ಅಮ್ಮೋರೇ ಅಲ್ಲೇ ಇರ್ತೀವಿ, ಗೌಡ್ರಿಗೆ ಗದ್ದೆಗೆ ಬರೋವಾಗ ಕ್ಯಾಮೆರಾ ತಕ್ಕಂಬರಕೆ ಹೇಳಿ' ಅಂದ. 'ನಿಮ್ದೊಳ್ಳೆ ಕಥೆ ಕಣ್ರಾ ಮಾರಾಯ, ಸರಿ ಬೇಗ ಹೊರಡಿ, ಅವ್ನಿಗೆ ಹೇಳ್ತೀನಿ' ಎಂದು ಅಮ್ಮ ಅವನನ್ನ ಕಳಿಸಿದ್ಲು. ಅವನು 'ಮರೀಬ್ಯಾಡ್ರೀ ಅಮ್ಮೋರೇ' ಅಂತ ಕೂಗಿಕೊಂಡೇ ಹೋಗ್ತಿದ್ದ.

ನಾನು ತಿಂಡಿ ತಿಂದು ಕ್ಯಾಮೆರಾ ಕುತ್ತಿಗೆಗೇರಿಸಿಕೊಂಡು ಗದ್ದೆಯ ಕಡೆ ಹೊರಟೆ. ದೂರದಿಂದ ನಾನು ಬರುವುದನ್ನು ಗಮನಿಸಿದ ಮೋಹನ ಅಲ್ಲಿಂದಲೇ 'ಸಣ್ಗೌಡ್ರು ಕ್ಯಾಮೆರಾ ತಗೊಂಡು ಬರ್ತಿದ್ದಾರೆ' ಅಂತ ಕೂಗಿ ಹೇಳ್ತಿದ್ದಿದ್ದು ಕೇಳಿಸ್ತಿತ್ತು. ಹತ್ತಿರ ಹೋದಾಗ ಎಲ್ಲಾ ನನ್ನನ್ನ ನೋಡಿ ಹಲ್ಕಿರಿಯುತ್ತಿದ್ದರು. ನನಗೆ ಅವರೆಲ್ಲರನ್ನು ನೋಡಿ ಗಾಬರಿಯಾಯ್ತು, ಎಲ್ಲರೂ ಹೊಸ ಬಟ್ಟೆ ಹಾಕಿಕೊಂಡು ಬಂದಿದ್ರು (ಬಹುಶಃ ಹೊಸ ಬಟ್ಟೆ ಹಾಕ್ಕೊಂಡು ಗದ್ದೆ ಕೊಯ್ಲು ಮಾಡಿದ್ದವ್ರಲ್ಲಿ ಇವ್ರೇ ಮೊದ್ಲು ಅನ್ಸತ್ತೆ).

ನನಗೆ ನಗು ತಡೆಯಲಾಗಲಿಲ್ಲ 'ಅಲ್ವೋ ಮೋಹನ, ಮದ್ವೆಗೆ ಹೋಗ್ಬೇಕಾದವರು ತಪ್ಪಿ ಗದ್ದೆ ಕೊಯ್ಲಿಕ್ಕೆ ಬಂದಿರೋ ಹಾಗೆ ಇದೆಯಲ್ಲೋ?'. ಆತ 'ಗೌಡ್ರೇ ಈ ಗೆಟಪ್ ಫ಼ೋಟೋಕೆ' ಅಂದ. 'ಹಾಗಿದ್ದವ್ರು ಅಲ್ಲೇ ಮನೆ ಹತ್ರಾನೇ ತೆಗೆಸ್ಕೋಬಹುದಿತ್ತಲ್ಲೋ, ಇಲ್ಲಿ ಬಂದು ಹೊಸ ಬಟ್ಟೆ ಎಲ್ಲಾ ಗಲೀಜ್ ಮಡ್ಕೋಳ್ಳೊ ಸ್ತಿತಿ ಯಾಕೆ?' ಮೋಹನ ಅದಕ್ಕೆ 'ನಮ್ಮೂರಲ್ಲಿ ಎಲ್ರಿಗೂ ತೋರಿಸ್ಬೇಕಲ್ಲ ಗೌಡ್ರೇ, ನಮ್ಮ ಗೌಡ್ರ ಗದ್ದೆಲಿ ನಾವು ಕೆಲ್ಸ ಮಾಡ್ತಿರೋದನ್ನ' ಅಂದ.

ಸರಿ ಸರಿ ಎಲ್ಲಾ ಚೆನ್ನಾಗಿ ನಿಂತ್ಕಳಿ ಅಂದೆ. ಎಲ್ರೂ ಕೈಲಿ ಕುಡುಗೋಲು ಹಿಡ್ಕೊಂಡು ಕ್ಯಾಮೆರಾಗೆ ಪೋಸ್ ಕೊಡೋಕೆ ನಿಂತ್ರು, ಯಾರಾದ್ರೂ ದೂರದಿಂದ ಈ ದೃಶ್ಯ ನೋಡಿದ್ರೆ ಕುಡುಗೋಲು ಹಿಡ್ಕೊಂಡು ಸಾಯ್ಸೋಕೆ ಬರ್ತಿರ್ಬೇಕೇನೋ ಅನ್ನೋ ಹಾಗಿತ್ತು. ಹಿಂಗ್ಯಾರಾದ್ರೂ ಪೋಸ್ ಕೊಡ್ತಾರೇನ್ರೋ ಅಂದದ್ದಕ್ಕೆ, ಹಿಂಗೇ ಹೊಡೀರಿ ಗೌಡ್ರೆ ಅಂದ್ರು. ಸರಿ ಕಣ್ರಪ್ಪ ನಿಮ್ಮಿಷ್ಟ ಅಂದು ನಾನು ಕ್ಯಾಮೆರಾ ಆನ್ ಮಾಡಿ ಎಲ್ಲರನ್ನೂ ಸ್ವಲ್ಪ ನಗಾಡ್ರಪ್ಪ ಎಂದೆ, ಅವರ ನಗುಗಿಂತ ನನಗೇ ನಗು ಜಾಸ್ತಿ ಬರ್ತಿತ್ತು ಆದರೂ ತಡೆದುಕೊಂಡು ಕ್ಯಾಮೆರಾ ಕ್ಲಿಕ್ ಮಾಡಿದೆ.

ಆಯ್ತು ಕಣ್ರಪ್ಪಾ ಅಂದೆ, ಕ್ಷಣಾರ್ಧದಲ್ಲಿ ಎಲ್ರೂ ನನ್ನನ್ನ ಸುತ್ತುವರಿದಿದ್ದರು, ಫೋಟೋ ಹೇಗೆ ಬಂದಿದೆ ಎಂದು ನೋಡುವ ಕುತೂಹಲಕ್ಕೆ.ನಾನು ಪ್ಲೇ ಬಟನ್ ಒತ್ತಿದೆ ಆದರೆ ಫೋಟೋ ಕಾಣಿಸಲಿಲ್ಲ. ಆಗ ಗೊತ್ತಾಯ್ತು ಮೆಮೊರಿ ಕಾರ್ಡ್ ಮನೆಯಲ್ಲೇ ಬಿಟ್ಟು ಬಂದಿದ್ದೇನೆಂದು. ಅವರಿಗೆ ವಿಷಯ ಹೇಳಿ ಮೋಹನನನ್ನ ಮನೆಗೋಡಿಸಿದೆ, ಅಮ್ಮನಿಗೆ ಹೇಳಿ ತೆಗೆದುಕೊಂಡು ಬಾ ಎಂದು.

ಮೋಹನ ಒಂದೇ ಉಸುರಿಗೆ ಓಡಿದ್ದ, ತಿರುಗಿ ಬರುವಷ್ಟರಲ್ಲಿ ಹೊಸ ಬಟ್ಟೆಗೆ ಕೆಸರೆಲ್ಲಾ ಮೆತ್ತಿಕೊಂಡಿತ್ತು, ಈಗ ಅವನಿಗೆ ಅದ್ಯಾವುದರ ಬಗ್ಗೆ ಪರಿವೇ ಇರಲಿಲ್ಲ. ಬಟ್ಟೆ ಹಿಂಗಾಗಿದ್ಯಲ್ಲೋ ಎಂದಾಗ, ಹೆಂಗಾದ್ರೂ ಇರ್ಲಿ ಗೌಡ್ರೆ, ಒಂದು ಸಕತ್ತಾಗಿರೋ ಫೋಟೋ ತೆಗೀರಿ ಎಂದು ಎಲ್ಲರೊಳಗೊಂದಾಗಿ ಫೋಟೋಗೆ ಹಲ್ಕಿರಿದು ನಿಂತ.

Tuesday, August 6, 2013

ಸಣ್ಣಕಥೆ - ಅಲಕ್ಷ್ಯ


ಎಲ್ಲ ಒಂಬತ್ತು ಜನ ಸ್ನೇಹಿತರೂ ಮುಂದಿನ ವಾರ ಟ್ರೆಕಿಂಗ್ ಹೋಗುವುದೆಂದು ನಿಶ್ಚಯ ಮಾಡಿದ್ದರು,  ಆ ದಿನ ಬಂತು, ಆದರೆ ಸಂಖ್ಯೆ ಒಂಬತ್ತರಿಂದ ಐದಕ್ಕಿಳಿದಿತ್ತು ಉಳಿದವರಿಗೆ ಆಫೀಸ್ ಕೆಲಸವಿದ್ದುದ್ದರಿಂದ. ಎಲ್ಲರೂ ಬ್ಯಾಗ್ ಹೊತ್ತುಕೊಂಡಿದ್ದರು, ಬ್ಯಾಗಲ್ಲಿ ಚಿಪ್ಸ್, ಬಿಸ್ಕೆಟ್ಸ್, ನೀರಿನ ಬಾಟಲಿ ಇತ್ತು.  ಅದರಲ್ಲಿಬ್ಬರ ಬ್ಯಾಗಿನ ಮೂಲೆಯಲ್ಲಿ ಯಾರಿಗೂ ಕಾಣದಂತೆ ಮದ್ಯದ ಬಾಟಲಿಗಳೂ ಸ್ಥಾನವನ್ನ ಆಕ್ರಮಿಸಿಕೊಂಡಿದ್ದವು. ರಾತ್ರಿ ಬಸ್ ಹತ್ತಿ ಬೆಳಗ್ಗೆ ಟ್ರೆಕಿಂಗ್ ಶುರು ಮಾಡಬೇಕಿದ್ದ ಊರನ್ನ ತಲುಪಿದರು, ಅಕ್ಟೋಬರ್ ತಿಂಗಳ ಚಳಿಗೆ ಎಲ್ಲರೂ ನಡುಗುತ್ತಿದ್ದರು. ಹತ್ತಿರವಿದ್ದ ಒಂದು ಸಣ್ಣ ಅಂಗಡಿಯಲ್ಲಿ ತಿಂಡಿ ತಿಂದು, ಕಾಫಿ ಕುಡಿದು ಟ್ರೆಕಿಂಗ್ ಶುರು ಮಾಡಿದರು. ಬೆಟ್ಟ ಏರುತ್ತಿದ್ದಂತೆ ಚಳಿಯ ತೀವ್ರತೆಯೂ ಏರುತ್ತಿತ್ತು, ಆಹ್ಲಾದಕರ ವಾತಾವರಣ, ಸುಮಾರು ೨ ಗಂಟೆಗಳ ತರುವಾಯ ಎಲ್ಲರ ಹೊಟ್ಟೆ ಚುರುಗುಡುತ್ತಿತ್ತು, ಬ್ಯಾಗ್ ಓಪನ್ ಮಾಡಿ ಸ್ನ್ಯಾಕ್ಸ್ ತಿಂದರು, ಒಬ್ಬ ಮದ್ಯದ ಬಾಟಲಿಯನ್ನ ಓಪನ್ ಮಾಡಿದ, ಉಳಿದವರೆಲ್ಲರೂ ಅವನ ಮೇಲೆ ಮುಗಿಬಿದ್ದು ಬಾಟಲಿಯನ್ನ ಕಿತ್ತುಕೊಂಡು ಖಾಲಿ ಮಾಡಿ ಅಲ್ಲೇ ಎಸೆದರು. ಎಲ್ಲ ಆದ ಮೇಲೆ ಬಾರದಿದ್ದ ಗೆಳೆಯರಲ್ಲೊಬ್ಬನಿಗೆ ಕಾಲ್ ಮಾಡಿ 'ಸಕತ್ತಾಗಿದೆ ಮಗಾ ಜಾಗ, ಲೈಫ಼ಲ್ಲಿ ಒಂದ್ಸಲ ವಿಸಿಟ್ ಮಾಡ್ಲೇಬೇಕು' ಅಂದ. ಅತ್ತ ಕಡೆಯಿಂದ ಆತ ಸದ್ಯದಲ್ಲೇ ಪ್ಲಾನ್ ಮಾಡ್ತೀವಿ ಅಂದ. ಸುಮಾರು ೩ ತಿಂಗಳ ನಂತರ ಉಳಿದ ಸ್ನೇಹಿತರು ಅಲ್ಲಿಗೆ ಟ್ರೆಕಿಂಗ್ ಹೊರಟರು. ಹಿಂದಿನ ದಿನ ಸ್ವಲ್ಪ ಮಳೆ ಬಂದಿತ್ತು, ನಡೆಯುವಾಗ ಅಲ್ಲಲ್ಲಿ ಜಾರುವ ಅನುಭವವಾಗುತ್ತಿತ್ತು, ಎಲ್ಲರೂ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಿದ್ದರು. ಇದ್ದಕ್ಕಿದ್ದಂತೆ ಕೊನೆಯಲ್ಲಿದ್ದವನು ಜಾರಿ ಹೋ ಎಂದು ಕಿರುಚಿದ, ಮುಂದೆ ಹೋಗುತ್ತಿದ್ದವರು ಜೋಪಾನ ಕಣೋ ಎಂದು ಮುನ್ನಡೆಯುತ್ತಿದ್ದರು. ಆದರೆ ಆತ ಜಾರಿದವನು ಅಲ್ಲೇ ಬಿದ್ದಿದ್ದ ಖಾಲಿ ಬಾಟಲಿಯ ಮೇಲೆ ಕಾಲಿರಿಸಿದ್ದ. ಆಯತಪ್ಪಿ ಬೆಟ್ಟದ ಮೇಲಿಂದ ಕೆಳಗೆ ಬಿದ್ದ ಅವನ ಪ್ರಾಣಪಕ್ಷಿ ಹಾರಿಹೋಗಿತ್ತು.
.
.
.
.
.
.
.
.
.
.
.
.
.
.
.
.
.
        
        ಗೆಳೆಯ ಎಸೆದಿದ್ದ ಬಾಟಲಿ ಇವನ ಬಲಿ ಪಡೆದುಕೊಂಡಿತ್ತು.

Tuesday, June 25, 2013

ವಿಜಯವಾಣಿಯಲ್ಲಿ ನನ್ನದೊಂದು ಲೇಖನ


 ಭಾನುವಾರದ ವಿಜಯವಾಣಿಯಲ್ಲಿ ನನ್ನದೊಂದು ಲೇಖನ - ಒಂದು ಮಳೆಯ ಕಥೆ



Friday, June 14, 2013

ವಿಪರ್ಯಾಸ

ಅತ್ತ - >

ಹೊಳೆಯಿಂದ ತನ್ನ ಹೊಲಕ್ಕೆ ನೀರು ಹಾಯಿಸಲು 
ಕರೆಂಟಿಗೆ ಕಾದು ಕಾದು ಬಾರದಿದ್ದಾಗ ಆತ 
ಹಾಡಹಗಲೇ ಆತ್ಮಹತ್ಯೆ ಮಾಡಿಕೊಂಡಿದ್ದ 

ಇತ್ತ - >

ಹಗಲು ಹೊತ್ತಿನಲ್ಲೇ ಆ ಮಾಲ್ ನಲ್ಲಿ 
ಸಾವಿರಾರು ಬಲ್ಬ್ ಗಳ ಬೆಳಕು 
ಎಲ್ಲರ ಕಣ್ಣು ಕುಕ್ಕುತ್ತಿದ್ದವು

Thursday, May 30, 2013

ಮರಳಿ ಬರುತ್ತಿದೆ ಮತ್ತೆ ಮಾನ್ಸೂನ್
........................................


೨ ತಿಂಗಳ ಹಿಂದೆ ಎಲ್ಲೋ ಬಿಸಾಕಿದ್ದ ಸ್ಕೂಲ್ ಬ್ಯಾಗನ್ನ ಹುಡುಕಿ ತಂದು, ಒರೆಸಿ, ಜಾಮಿಟ್ರಿ ಬಾಕ್ಸನ್ನ ತೆಗೆದು ಕೈವಾರ, ಕೋನಮಾಪಕ, ಪೆನ್ಸಿಲ್ ರಬ್ಬರ್, ಮೆಂಡರ್ ಎಲ್ಲ ಸರಿಯಾಗಿ ಇದೆಯೇ ಎಂದು ತೆಗೆದು ನೋಡಿ ಮತ್ತೆ ಬ್ಯಾಗಿನೊಳಗೆ ತುರುಕಿ, ಅಮ್ಮ ಕೊಟ್ಟ ಟಿಫಿನ್ ಬಾಕ್ಸನ್ನ ಹಾಕಿಕೊಂಡು, ತೊಳೆದಿಟ್ಟ ಯುನಿಫಾರ್ಮನ್ನ ಧರಿಸಿ, ಗೋಡೆಯ ಸಂಧಿಯಲ್ಲಿ ಒರಗಿಸಿದ್ದ ಹಳೆಯ ಛತ್ರಿಯನ್ನ ಹೊರತೆಗೆದು ಚಾವಡಿಗೆ ಬಂದು ಚಪ್ಪಲಿಯನ್ನ ಹಾಕಿಕೊಂಡು, ಛತ್ರಿಯ ಬಟನ್ ಅದುಮಿ ಎರಡೂ ಕೈನಿಂದ ಮೇಲೆತ್ತಿ ಸಿಕ್ಕಿಸಿ ಮನೆಯಿಂದ ಅಂಗಳಕ್ಕೆ ಕಾಲಿಟ್ಟರೆ ಈಗಿರುವ ರೀತಿಯಲ್ಲೇ ಹಿಂದಿರುಗಿ ಬರುವ ಸಾಧ್ಯತೆಯಂತೂ ಅಸಂಭವ.


ಮುಂದೆ ಓದಿ.............



ಲೇಖನದ ಶೀರ್ಷಿಕೆಯನ್ನ 'ಮರಳಿ ಬರುತ್ತಿದೆ ಮತ್ತೆ ಮುಂಗಾರು ಮಳೆ' ಅಂತ ಇಡೋಣ ಅಂದ್ರೆ ಆ ಹೆಸರು ಎಷ್ಟು ಪ್ರಸಿದ್ಧಿಯಾಗಿದೆ ಅಂತಂದ್ರೆ ಮುಂಗಾರು ಮಳೆ ಅಂದ್ರೆ ಮಳೆ ಅಲ್ಲ ಫಿಲ್ಮ್ ಅನ್ನುವಷ್ಟರ ಮಟ್ಟಿಗೆ. ಮುಂಗಾರು ಮಳೆ ಅಂದ್ರೆ ಏನು ಅಂತ ಗೊತ್ತಿಲ್ಲದವರಿಗೂ ಆ ಚಿತ್ರ ಬಂದ ಮೇಲೆ ಅದು ಚಿತ್ರವಾಗಿಯೇ ಚಿತ್ತದಲ್ಲಿ ಉಳಿದುಬಿಟ್ಟಿದೆ ಹಾಗಾಗಿ ಮಾನ್ಸೂನ್ ಎಂದು ಹೆಸರಿಸಿದ್ದೇನೆ, ಆದರೂ ಪ್ರಾಸಕ್ಕೇನು ತೊಂದರೆಯಾಗಿಲ್ಲ!!.

ಎಲ್ಲಿಂದಲೋ ಬಂದ ಮೋಡಗಳೆಲ್ಲಾ ಒಂದಾಗಿ ಕಾದ ನೆಲಕೆ ಹನಿಗಳ ಸಿಂಚನವೀಯುತ್ತಿದ್ದರೆ ಮನೆಯಂಗಳಕೆ ಬಂದು ಮಳೆಗೆ ಮೈಯೊಡ್ಡುವ ಹಂಬಲ ಮನಸೊಳಗೆ ಚಿಗುರೊಡೆಯದಿದ್ದರೆ ಕೇಳಿ. ಇಳೆಯನ್ನ ತಂಪಾಗಿಸುವ ಜವಾಬ್ದಾರಿ ತನ್ನದೇ ಎಂಬಂತೆ ವರುಣ ಮಳೆಯನ್ನ ಸುರಿಸುತ್ತಲೇ ಇರುತ್ತಾನೆ. ಆ ಹನಿಗಳ ನೋಡಿ ಒಬ್ಬೊಬ್ಬರ ಮನದಲ್ಲಿ ಥರ ಥರ ಆಲೋಚನೆ. ಕೊಟ್ಟಿಗೆಯಲ್ಲಿರುವ ನೇಗಿಲು ಹಗ್ಗದ ಚಿಂತೆ ರೈತನಿಗಾದರೆ, ಎತ್ತುಗಳಿಗೆ ಇನ್ನು ಮುಂದೆ ಬಿಡುವಿಲ್ಲದ ಕೆಲಸ ಎನ್ನುವ ಚಿಂತೆ! ಬೇಸಿಗೆ ರಜೆಯನ್ನ ಮಳೆಗಾಲಕ್ಕೂ ವಿಸ್ತರಿಸಿದ್ದರೆ ಇವರ ಗಂಟೇನು ಹೋಗುವುದೋ ಎಂದು ಬ್ಯಾಗಿಗೆ ಪುಸ್ತಕವನ್ನ ಹಾಕಿ ಬ್ಯಾಗನ್ನ ನೇತಾಕಿಕೊಂಡು ಕೊಡೆಯನ್ನ ಹಿಡಿದುಕೊಂಡು ಮಳೆಯನ್ನ ಶಪಿಸುತ್ತಾ ಅದರಲ್ಲೇ ಆಟ ಆಡಿಕೊಂಡು ಶಾಲೆಗೆ ತಲುಪುವ ಮಕ್ಕಳ ಪಡೆ ಒಂದು ಕಡೆಯಾದರೆ ಅಮ್ಮನಿಗೆ ಗಂಡನನ್ನ ಹೊಲಕ್ಕೆ ಕಳುಹಿಸಿ ಮಕ್ಕಳಿಗೆ ತಿಂಡಿ ಕೊಟ್ಟು ಮಧ್ಯಾಹ್ನದ ಊಟವನ್ನ ಅವರ ಬ್ಯಾಗಿನಲ್ಲಿ ಹಾಕಿ ಅವರನ್ನ ಕಳುಹಿಸಿ ಆನಂತರ ಗಂಡನಿಗೆ ತಿಂಡಿಯನ್ನ ತೆಗೆದುಕೊಂಡು ಹೋಗುವ ಕಾಯಕ.

ತಿಳಿಯಾದ ಆಗಸವನ್ನ ಮುಂಗಾರಿನ ಮೋಡಗಳು ನಿಧಾನವಾಗಿ ಆವರಿಸುವ ಪ್ರಕ್ರಿಯೆಯೇ ಅದ್ಭುತ. ಮೇ ಕೊನೆಯ ಅಥವಾ ಜೂನ್ ಮೊದಲ ವಾರದ ಯಾವುದೋ ಒಂದು ದಿನದಲ್ಲಿ ನೋಡ ನೋಡುತ್ತಿದ್ದಂತೆಯೇ ನೀಲಿ ಆಗಸವನ್ನ ಮುತ್ತುವಾ ಮೋಡಗಳು ಒಂದೊಂದಾಗಿ ಚಲಿಸುತ್ತಾ ಇಡೀ ವಾತಾವರಣವನ್ನ ಬದಲಾಯಿಸಿಬಿಡುತ್ತವೆ. ಕಣ್ಣಿಗೆ ಕಾಣುತ್ತಿದ್ದ ಸೂರ್ಯ ಒಮ್ಮೆಲೆ ಮರೆಯಾಗಿಬಿಡುತ್ತಾನೆ ಮತ್ತೆ ಅವನು ಕಾಣುವುದು ಮುಂಗಾರು ಮುಗಿದ ನಂತರವೇ ಅಂದರೆ ಏನಿಲ್ಲವೆಂದರೂ ಸುಮಾರು ೩ ತಿಂಗಳ ನಂತರವೇ. ಅಲ್ಲಿಯವರೆಗೂ ಬರೀ ಮೋಡಗಳದ್ದೇ ಸಾಮ್ರಾಜ್ಯ. ಮಿಂಚು, ಗುಡುಗುಗಳದ್ದೇ ಕಾರುಬಾರು. ಹನಿಗಳ ನಡುವೆ ಜಾಗವೇ ಇಲ್ಲವೇನೋ ಎಂಬಂತೆ ಸುರಿಯುವ ಜಿಟಿಜಿಟಿ ಮಳೆ.

ಬೆಳಗ್ಗೆದ್ದು ಬಿಸಿ ಬಿಸಿ ಕಾಫಿ ಕುಡಿದು ಕೊಟ್ಟಿಗೆಗೆ ಹೋಗಿ ನೇಗಿಲನ್ನ ಹೊತ್ತುಕೊಂಡು ಎತ್ತುಗಳನ್ನ ಹೊಡೆದುಕೊಂಡು ಬೆಳಗ್ಗೆ ಹೊರಟರೆ ಸುಮಾರು ೪- ೫ ತಾಸು ರೈತನ ಗಮನ ಗದ್ದೆ, ನೇಗಿಲು, ಹಾಗೂ ಎತ್ತುಗಳ ಮೇಲೆ. ಅದರ ನಡುವೆ ಹೆಂಡತಿ ತಂದುಕೊಟ್ಟ ತಿಂಡಿಯನ್ನ ತಿಂದು ಮತ್ತೆ ಬೇಸಾಯ ಮಾಡಿದರೆ ಅಲ್ಲಿಗೆ ಅಂದಿನ ಕೆಲಸಕ್ಕೆ ವಿರಾಮ. ಇನ್ನೇನಿದ್ದರೂ ಎತ್ತುಗಳನ್ನ ಮೇಯಿಸಿ ಕೊಟ್ಟಿಗೆಗೆ ಹೊಡೆದುಕೊಂಡು ಹೋಗುವುದು, ಅದು ಆತನ ಮಗನ ಕೆಲಸ. ಅವನಿಗೋ ಆ ಮಳೆಯಲ್ಲಿ ತನ್ನ ಗೆಳೆಯರೊಡಗೂಡಿ ಹೊಳೆಗೆ ಈಜಲು ಹೋಗುವಾಸೆ. ಆದರೆ ಅಪ್ಪನ ಕೋಪ ನೆನೆಸಿಕೊಂಡು ವಿಧಿಯಿಲ್ಲದೆ ಮೈಮೇಲೆ ಗೋಣಿ ಚೀಲವನ್ನ ಹಾಕಿಕೊಂಡು ಮಳೆಯಲ್ಲಿ ನೆನೆಯದಂತೆ ಮರದ ಬುಡದಲ್ಲಿ ಕುಳಿತು ಎತ್ತುಗಳನ್ನ ಮೇಯಿಸಲೇಬೇಕು.

೨ ತಿಂಗಳ ಹಿಂದೆ ಎಲ್ಲೋ ಬಿಸಾಕಿದ್ದ ಸ್ಕೂಲ್ ಬ್ಯಾಗನ್ನ ಹುಡುಕಿ ತಂದು, ಒರೆಸಿ, ಜಾಮಿಟ್ರಿ ಬಾಕ್ಸನ್ನ ತೆಗೆದು ಕೈವಾರ, ಕೋನಮಾಪಕ, ಪೆನ್ಸಿಲ್ ರಬ್ಬರ್, ಮೆಂಡರ್ ಎಲ್ಲ ಸರಿಯಾಗಿ ಇದೆಯೇ ಎಂದು ತೆಗೆದು ನೋಡಿ ಮತ್ತೆ ಬ್ಯಾಗಿನೊಳಗೆ ತುರುಕಿ, ಅಮ್ಮ ಕೊಟ್ಟ ಟಿಫಿನ್ ಬಾಕ್ಸನ್ನ ಹಾಕಿಕೊಂಡು, ತೊಳೆದಿಟ್ಟ ಯುನಿಫಾರ್ಮನ್ನ ಧರಿಸಿ, ಗೋಡೆಯ ಸಂಧಿಯಲ್ಲಿ ಒರಗಿಸಿದ್ದ ಹಳೆಯ ಛತ್ರಿಯನ್ನ ಹೊರತೆಗೆದು ಚಾವಡಿಗೆ ಬಂದು ಚಪ್ಪಲಿಯನ್ನ ಹಾಕಿಕೊಂಡು, ಛತ್ರಿಯ ಬಟನ್ ಅದುಮಿ ಎರಡೂ ಕೈನಿಂದ ಮೇಲೆತ್ತಿ ಸಿಕ್ಕಿಸಿ ಮನೆಯಿಂದ ಅಂಗಳಕ್ಕೆ ಕಾಲಿಟ್ಟರೆ ಈಗಿರುವ ರೀತಿಯಲ್ಲೇ ಹಿಂದಿರುಗಿ ಬರುವ ಸಾಧ್ಯತೆಯಂತೂ ಅಸಂಭವ.

ಅದೇ ಬೀದಿಯಲ್ಲಿರುವ ತನ್ನ ಸಹಪಾಠಿಗಳನ್ನೆಲ್ಲಾ ಕರೆದು ಅವರ ಸಂಗಡ ಹೊರಟರೆ ಅಲ್ಲಿಂದ ಮುಂದೆ ಇವರಾಡಿದ್ದೇ ಆಟ. ಎಲ್ಲರೂ ಅವರವರ ಬೇಸಿಗೆ ರಜೆಯ ಅನುಭವಗಳನ್ನ ಹಂಚಿಕೊಳ್ಳುತ್ತಾ ಗದ್ದೆ ತೋಟಗಳನ್ನು ದಾಟುತ್ತ ಕಂಡ ಹಣ್ಣಿನ ಮರಗಳನ್ನ ನೋಡಿ ಸಂಜೆ ವಾಪಸ್ ಬರುವಾಗ ಯಾವ್ಯಾವ ಮರಕ್ಕೆ ಲಗ್ಗೆ ಹಾಕಬೇಕೆಂದು ಪರಸ್ಪರ ಮಾತನಾಡಿಕೊಳ್ಳುತ್ತಾ ಹಳ್ಳ ಕೊಳ್ಳಗಳನ್ನ ಕ್ರಮಿಸಿ ಶಾಲೆಯನ್ನ ತಲುಪಿದರೆ ಒಂದು ಅಧ್ಯಾಯ ಮುಗಿದಂತೆ. ಕ್ಲಾಸ್ ಮುಗಿಸಿ ಕೊನೆಯ ಒಂದು ಗಂಟೆ ಆ ಮಳೆಯಲ್ಲೇ ಆಟವಾಡಿ ಬ್ಯಾಗನ್ನು ಏರಿಸಿಕೊಂಡು ಗೆಳೆಯರೊಂದಿಗೆ ಮನೆಯತ್ತ ಪಯಣ, ದಾರಿಯಲ್ಲಿ ಸಿಕ್ಕ ನೇರಳೆ ಹಣ್ಣೋ, ಹಲಸಿನ ಹಣ್ಣೋ, ಮಾವಿನ ಹಣ್ಣೋ, ಕಿತ್ತಳೆ ಹಣ್ಣಿನ ಮರವನ್ನ ಹತ್ತಿ ಆ ಮರದ ಹಣ್ಣುಗಳು ಇವರ ಉದರಕ್ಕೆ ಹೋಗದಿದ್ದರೆ ಅದು ಅಂದು ಅವರಿಗೆ ಆದ ಅಪಮಾನವೇ ಸರಿ.

ಮನೆಗೆ ಬಂದು ಛತ್ರಿ ಮಡಿಸಿ ಬಾಗಿಲಿನ ಮೂಲೆಯಲ್ಲಿಟ್ಟು, ಚಪ್ಪಲಿ ಕಳಚಿ ಹೆಂಚಿನಿಂದ ಬೀಳುತ್ತಿರುವ ನೀರಿಂದ ಕಾಲು ತೊಳೆದು ಮನೆಯೊಳಕ್ಕೆ ಓಡಿ ಬ್ಯಾಗನ್ನೆತ್ತಿ ಮೂಲೆಯಲ್ಲೆಸೆದು ಅಡುಗೆ ಮನೆಗೆ ಓಡಿ, ಯುನಿಫಾರ್ಮ್ ಸ್ತಿತಿ ನೋಡಿ ಅಮ್ಮ ಬಯ್ಯುತ್ತಿದ್ದರೂ ಲೆಕ್ಕಿಸದೆ ಬೆಂಕಿಯನ್ನ ಕಾಯಿಸುತ್ತಾ ಬಿಸಿಬಿಸಿ ಬೆಲ್ಲದ ಕಾಪಿಯನ್ನ ಹೀರುವ ಹಿತ ಅವಿಸ್ಮರಣೀಯ.

ಬಾಲ್ಕನಿಯಲ್ಲೋ, ಚಾವಡಿಯಲ್ಲೋ ಕುಳಿತು ಎದುರಿಗೆ ಕಾಣುವ ಗಿಡ, ಮರಗಳು ಹಾಗೂ ಬೆಟ್ಟ ಗುಡ್ಡಗಳ ಮೇಲೆ ಸುರಿಯುವ ಮಳೆಯ ಸೊಬಗ ನೋಡುವುದೇ ಒಂದು ಅದ್ಭುತ ದೃಶ್ಯಕಾವ್ಯ. ಆ ತಂಪನೆಯ ವಾತಾವರಣದಲ್ಲಿ ನಿಮ್ಮ ಕೈಗೊಂದು ಲೋಟ ಕಾಫಿ ಬಂದುಬಿಟ್ಟರೆ ಸ್ವರ್ಗ ಮೂರೇ ಗೇಣು. ಒಂದೊಮ್ಮೆ ನೀವು ಕಾಫಿ ಪ್ರಿಯರಾಗಿರದಿದ್ದಲ್ಲಿ ನಿಮ್ಮಷ್ಟು ದುರದೃಷ್ಟವಂತರು ಯಾರೂ ಇರಲಿಕ್ಕಿಲ್ಲ, ಎದುರಿಗಿರುವ ವ್ಯಕ್ತಿಯ ಕೈನಲ್ಲಿ ಬಿಸಿ ಬಿಸಿ ಹಬೆಯಾಡುತ್ತಿರುವ ಕಾಫಿಯನ್ನ ಕಂಡು ಕುಡಿಯುವ ಯೋಚನೆ ಬಂದರೂ ಬರಬಹುದೇನೋ. ಮಳೆಯ ಸಾನಿಧ್ಯ, ಕೈನಲ್ಲಿ ಕಾಫಿ ನಿಮ್ಮ ಮೈಮನ ತಣಿಸುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಹಾಗಂತ ನಿಮ್ಮ ಅಮ್ಮನ ಬಳಿಯೋ ಹೆಂಡತಿಯ ಬಳಿಯೋ ಕೋಲ್ಡ್ ಕಾಫಿ ಕೊಡು ಎಂದು ಕೇಳಿದಿರಾ ಜೋಕೆ.

ಮತ್ತೊಮ್ಮೆ ಬರುತ್ತಿದೆ ಮಳೆಗಾಲ, ಗತಿಸಿ ಹೋದ ಬಾಲ್ಯವನ್ನ ಮತ್ತೊಮ್ಮೆ ಮರಳಿ ನೆನಪಿಸುವ ಕಾಲ. ಕಳೆದುಹೋದ ಭಾವಗಳ ಇನ್ನೊಮ್ಮೆ ಮರಳಿ ಪಡೆಯುವ ಕಾಲ. ಆಗಸದಿಂದ ಮುತ್ತಿಕ್ಕುವ ಹನಿಗೆ ಮೈಯೊಡ್ಡುವ ಕಾಲ. ಮರಳಿ ಬನ್ನಿ ನೆನಪಿನ ಬುಟ್ಟಿಯೊಂದಿಗೆ ಮುಂಗಾರು ಮುಗಿಯುವ ಮುನ್ನ.

...ಚೇತನ್ ಕೋಡುವಳ್ಳಿ

Thursday, April 18, 2013

ಸಣ್ಣಕಥೆ - ಸೇಡು


ಆ ಪಟ್ಟಣದಿಂದ ಸುಮಾರು ೭೦ ಮೈಲು ದೂರದಲ್ಲಿದೆ ಆ ಹಳ್ಳಿ. ಕೃಷಿ ಆಧಾರಿತ ಪ್ರದೇಶ. ಆ ಹಳ್ಳಿ ಮತ್ತು ಸುತ್ತಮುತ್ತಲ ಹಳ್ಳಿ ಹಸಿರಿನಿಂದ ತುಂಬಿತ್ತು. ಅಲ್ಲಾಗುವ ಮಳೆಯ ನೀರೇ ಆ ಪಟ್ಟಣಕ್ಕೆ ಆಧಾರ. ಆ ಹಳ್ಳಿಯಲ್ಲೊಂದು ಪುಟ್ಟ ಸಂಸಾರ, ಅಪ್ಪ, ಅಮ್ಮ, ಮಗ. ತಕ್ಕಮಟ್ಟಿಗೆ ಸ್ಥಿತಿವಂತರಾಗಿದ್ದರು. ಮಗ ಪಟ್ಟಣದಲ್ಲಿ ಓದಲಿ ಎಂದು ಅಪ್ಪ ಅವನಿಗೆ ಅಲ್ಲೊಂದು ವ್ಯವಸ್ಥೆ ಮಾಡಿದ. ಅವನು ಚೆನ್ನಾಗಿ ಓದಿದ, ತಾನು ತುಂಬಾ ಪ್ರಸಿದ್ಧಿಯಾಗಬೇಕೆಂಬುದು ಅವನ ಮಹತ್ವಾಕಾಂಕ್ಷೆಯಾಗಿತ್ತು. ಅದರಂತೆ ಓದು ಮುಗಿದ ನಂತರ ಕೆಲಸಕ್ಕೆ ಸೇರುವ ಬದಲು ಬ್ಯುಸಿನೆಸ್ ಮಾಡಬೇಕೆಂದು ನಿರ್ಧರಿಸಿದ.

ಅಪ್ಪ ಎಷ್ಟು ಹೇಳಿದರೂ ಕೇಳದೆ, ತನ್ನ ತೋಟದಲ್ಲಿದ್ದ ಮರಗಳನ್ನು ಕಡಿದು ಟಿಂಬರ್ ಬ್ಯುಸಿನೆಸ್ ಶುರು ಮಾಡಲಾರಂಭಿಸಿದ. ಅದೇ ಮರಗಳನ್ನ ಉಪಯೋಗಿಸಿ ಪಟ್ಟಣದಲ್ಲಿ ತನಗೊಂದು ಮನೆಯನ್ನೂ ಕಟ್ಟಿಸಿ ಅಲ್ಲಿ ವಾಸಿಸಲಾರಂಭಿಸಿದ . ಅಪ್ಪ ಅಮ್ಮ ಪಟ್ಟಣಕ್ಕೆ ಬರದೆ ಊರಲ್ಲೇ ಉಳಿದರು. ಊರಲ್ಲಿ ಎಲ್ಲರಿಗೂ ಒಳ್ಳೆಯ ಬೆಲೆಯನ್ನು ಕೊಟ್ಟು ಅವರ ತೋಟಗಳಿಂದ ಮರಗಳನ್ನು ಖರೀದಿಸಿದ. ಪರಿಣಾಮ, ಸುತ್ತ ಹಸಿರಿಂದ ನಳನಳಿಸುತ್ತಿದ್ದ ಊರು ಮರಗಳಿಲ್ಲದೆ ಬೆಂಗಾಡಾದಂತಾಗಿತ್ತು. ಇವನು ನೋಡನೋಡುತ್ತಿದ್ದಂತೆ ಶ್ರೀಮಂತನಾಗಿ ಹೋದ. ಕಾಲ ಸರಿಯುತ್ತಾ ಹೋಯಿತು. ಸುತ್ತಮುತ್ತಲ ಹಳ್ಳಿಯ ಯುವಕರಿಗೆ ಇವನು ಸ್ಪೂರ್ತಿಯಾದ, ಅವರಲ್ಲಿ ಹಲವರು ಟಿಂಬರ್ ಬ್ಯುಸಿನೆಸ್ಗೆ ಇಳಿದರು. ಕಾಲಕ್ರಮೇಣ ಎಲ್ಲಾ ಹಳ್ಳಿಗಳು ಇವರ ಆಕ್ರಮಣಕ್ಕೆ ತುತ್ತಾಗಿ ಬರಡಾಗಿ ಹೋಗಿದ್ದವು. ಮಳೆಯ ಪ್ರಮಾಣ ತೀರಾ ಕಡಿಮೆಯಾಗಿ ಪಟ್ಟಣದಲ್ಲಿ ಜನರು ನೀರಿಗಾಗಿ ಒದ್ದಾಡುತ್ತಿದ್ದರು. ದಿನಕ್ಕೊಮ್ಮೆ ಬರುತ್ತಿದ್ದ ನೀರು ವಾರಕ್ಕೊಮ್ಮೆ ಬರುವ ಹಾಗಾಯ್ತು. ಆ ದಿನ ಮಧ್ಯಾಹ್ನದ ಸಮಯ, ಎಂದಿನಂತೆ ಇವನು ತನ್ನ ಕೆಲಸ ಮುಗಿಸಿ ಮನೆಗೆ ಬಂದು ಚಾವಡಿಯಲ್ಲಿ ಕುಳಿತು ತನ್ನ ಪತ್ನಿಗೆ ನೀರನ್ನು ತರಲು ಹೇಳಿ ಹಾಗೆ ದಿವಾನ್ ಮೇಲೆ ಮಲಗಿದ್ದ. ನೀರಿಗೆ ಬರವಿದ್ದ ಕಾರಣ ಪತ್ನಿ ಅರ್ಧ ಲೋಟ ನೀರು ತಂದುಕೊಟ್ಟಳು. ಇದೇನು ಅರ್ಧ ಲೋಟ ತಂದಿದ್ದೀಯ ಎಂದು ಅವಳಿಗೆ ಬೈದು ಲೋಟವನ್ನ ಮೇಲಕ್ಕೆತ್ತಿ ಕುಡಿಯಲಾರಂಭಿಸಿದ, ಕಾಲು ಭಾಗ ನೀರು ಅವನ ದೇಹ ಸೇರಿತ್ತು ಅಷ್ಟರಲ್ಲಿ ಮನೆಯ ಪಕಾಸು ಮುರಿದು ಇವನ ಮೇಲೆ ಬಿತ್ತು. ಅವನ ಪ್ರಾಣಪಕ್ಷಿ ಹಾರಿಹೋಗಿತ್ತು. ನೀರು ಹಾಗೂ ಮರ ಸದ್ದಿಲ್ಲದೇ ಸೇಡನ್ನು ತೀರಿಸಿಕೊಂಡಿದ್ದವು.