Friday, July 1, 2011

ಹೂವೊಂದು ಬಳಿ ಬಂದು ತಾಕಿತು ನನ್ನೆದೆಯಾ!



ನೈಂಟಿಯ ಮಹಿಮೆ

ನೈಂಟಿ ಹೊಡೆದ ಅಂಕಲ್
ನೈಟಿ ಹಿಂದೆ ಹೋಗಿ
ನೈಟ್ ಹೊತ್ತಿಗೆ
ನಾಟ್ರೀಚಬಲ್ ಆಗಿದ್ದ!

ಹಕ್ಕಿ ಹಾರುತಿದೆ ನೋಡಿದಿರಾ!!

ಸುಮಾರು 30 ನಿಮಿಷಗಳ ಕಾಲ ಗದ್ದೆಯಲ್ಲೇ ಕುಳಿತು ಹಕ್ಕಿ ಹಾರುವುದನ್ನೇ ಕಾಯುತ್ತಿದ್ದವನಿಗೆ ಅಂತೂ ಆ ಕ್ಷಣ ಬಂದಾಗ...


ಇನ್ನೇನ ಬರೆಯಲಿ ನಾ

ಏನೆಂದು ಬರೆಯಲಿ ನಾ
ಯಾವುದರ ಮೇಲೆ ಬರೆಯಲಿ ನಾ

ಪದಗಳೇ ಹೊಳೆಯುತ್ತಿಲ್ಲ
ಹೊಳೆದರೂ ಎರಡು ಸಾಲಿನ ಮೇಲೆ ಹೋಗುತ್ತಿಲ್ಲ

ಚಂದಿರನ ಮೇಲೆ ಬರೆಯಲೋ
ಅವನು ನನಗೆ ನಿಲುಕುವುದಿಲ್ಲ!

ಹುಡುಗಿಯ ಮೇಲೆ ಬರೆಯಲೋ
ಅವಳು ಹೊಡೆಯದೇ ಬಿಡುವುದಿಲ್ಲ!

ಮೋಡದ ಮೇಲೆ ಬರೆಯಲೋ
ಮೇಲೆ ನೋಡಿದರೆ ಮೋಡವೇ ಚದುರಿಹೋಗಿದೆ

ಹೂವಿನ ಮೇಲೆ ಬರೆಯಲೋ
ಬರೆಯುವ ಮೊದಲೇ ಮುದುಡಿಹೋಗಿದೆ

ನದಿಯ ಮೇಲೆ ಬರೆಯಲೋ
ಅವಳೂ ಮಾನವನ ಕೃತ್ಯಗಳಿಂದ ಕಲುಷಿತೆಗೊಂಡಿದ್ದಾಳೆ

ಮುಂಗಾರು ಮಳೆಯ ಮೇಲೆ ಬರೆಯಲೋ
ಇಲ್ಲೆಲ್ಲೂ ಅದರ ಸದ್ದೇ ಇಲ್ಲ

ಪ್ರಕೃತಿಯ ಮೇಲೆ ಬರೆಯಲೋ
ಅವಳೋ ಮಾನವನ ಮೇಲೆ ಮುನಿಸಿಕೊಂಡಿದ್ದಾಳೆ

ಹುಟ್ಟುವ ಕವಿತೆ ಭ್ರೂಣಹತ್ಯೆಯಾದಂತೆ
ಹುಟ್ಟುವಾಗಲೇ ಸತ್ತುಹೋಗಿದೆ

ಇನ್ನೇನ ಬರೆಯಲಿ ನಾ

ಚುರ್ಮುರಿ - ೧೪

೪೮) ತಾನು ಕೊಳ್ಳುತ್ತಿದ್ದ ಟೀ ಶರ್ಟ್ಗಳೆಲ್ಲ ಸಣ್ಣದೆಂದು ಗೊತ್ತಿದ್ದೂ ಅದನ್ನು ಹಾಕಿಕೊಂಡಾಗಲೆಲ್ಲಾ ಅವಳು ತನ್ನ ಕೈನಿಂದ ಆಗಾಗ ಕೆಳಗೆ ಎಳೆದುಕೊಳ್ಳುತ್ತಿದ್ದಳು.

೪೯) ಆ ಅಜ್ಜಿ ಹಣೆಗೆ ಕುಂಕುಮ, ಕೈಗೆ ಬಳೆ ಹಾಕಿಕೊಂಡು ಚರ್ಚಿಗೆ ಪ್ರಾರ್ಥನೆಗೆ ಹೋಗುತ್ತಿದ್ದಳು.

೫೦) ಅವನು ಕನ್ನಡಿಗನಾದರೂ ಕನ್ನಡ ಚಲನಚಿತ್ರಗಳನ್ನು ನೋಡುತ್ತಿರಲಿಲ್ಲ ಆದಾಗ್ಯೂ ಬೇರೆಯವರು ಕನ್ನಡ ಚಲನಚಿತ್ರ ಚೆನ್ನಾಗಿದೆ ಅಂದಾಗ ಮೂದಲಿಸುತ್ತಿದ್ದನು.

೫೧) ಅವರಿಬ್ಬರೂ ಅಕ್ಕ ತಂಗಿಯರು, ಇಬ್ಬರೂ ಒಂದೇ ಮನೆಯಲ್ಲಿದ್ದರೂ ತಂಗಿಯ ಹುಟ್ಟುಹಬ್ಬದಂದು ಅಕ್ಕ ಫೇಸ್ಬುಕ್ಕಿನಲ್ಲಿ ವಿಶ್ ಮಾಡಿದ್ದಳು.

೫೨) ಆ ರಸ್ತೆಯಲ್ಲಿ ಯಾವಾಗಲೂ ಅಪಘಾತವಾಗುತ್ತಿತ್ತು ಕಾರಣ ಅಲ್ಲಿದ್ದ ಒಂದು ಜಾಹೀರಾತಿನ ಬೋರ್ಡಿನಲ್ಲಿದ್ದ ಕಿಂಗ್ಫಿಶರ್ ಮಧ್ಯದ ಜೊತೆಗೆ ಕಿಂಗ್ಫಿಶರ್ ರೂಪದರ್ಶಿಯ ಚಿತ್ರ.

ಬದುಕ ಬೆಳಗಿಸುವ ಬಯಕೆ ಬರಲಿ

ಹರೆಯದ ಹಸಿವನ್ನ

ತಡೆಯಲಾರದೇ ಎಡವಿದವರೇ

ಭಾವನೆಗಳ ಬಂಧಿಸದೆ

ಬಯಲಿನಲ್ಲಿ ಬಿಟ್ಟವರೇ

ಆಕರ್ಷಣೆಗಳನ್ನೆಲ್ಲ ಅನುರಾಗವೆಂದರಿತು

ಅಲ್ಪತೃಪ್ತಿಗಾಗಿ ಎಲ್ಲವನ್ನೂ ಅರ್ಪಿಸಿದವರೇ

ದುಶ್ಚಟಗಳಿಗೆ ದಾಸರಾಗಿ

ದಾರಿಕಾಣದೆ ಸಾಗುತ್ತಿರುವವರೇ

ತೆವಲುಗಳ ತೀರಿಸಿಕೊಳ್ಳಲು

ತಪ್ಪು ಹೆಜ್ಜೆಯಿಟ್ಟವರೇ

ಸಜ್ಜನರಂತೆ ಸೋಗುಹಾಕಿ

ಸರ್ವಸ್ವವನ್ನೂ ಸೂರೆಗೈದವರೇ

ಮುಗ್ಧರಿಗೆ ಮೋಸಮಾಡಿ

ಮಾನವೀಯತೆಯನ್ನೇ ಮರೆತವರೇ

ಇನ್ನಾದರೂ ಬದುಕ ಬೆಳಗಿಸುವ

ಬಯಕೆ ಬರಲಿ


ಹೋಗುವ ಮುನ್ನ


ಎಲ್ಲಿ ಹೋಗುವಿರಾ ಮೋಡಗಳೇ

ಸ್ವಲ್ಪ ಇಲ್ಲಿ ನಿಂತು ಹೋಗಿ
ಕಾದು ಕೆಂಪಾಗಿರುವ ಬುವಿಯನ್ನು
ತಂಪು ಮಾಡಿ ಹೋಗಿ
ಉಸಿರಿಲ್ಲದೆ ನಿಂತಿರುವ ಮರಗಳನ್ನು
ಹಸಿರು ಮಾಡಿ ಹೋಗಿ
ದಿನವಿಡೀ ದುಡಿದು ದಣಿದ ದೇಹಕೆ
ಹನಿಗಳ ಸಿಂಚನ ನೀಡಿ ಹೋಗಿ
ಬಾಯಾರಿ ನೀರನ್ನು ಹುಡುಕುತ್ತಿರುವ ಹಕ್ಕಿಗಳಿಗೆ
ಹನಿಗಳನ್ನು ಕೊಟ್ಟು ಹೋಗಿ
ನಿಮ್ಮನ್ನೇ ನಿರೀಕ್ಷಿಸುತ್ತಿರುವ ನೇಗಿಲಯೋಗಿಗೆ
ನೀರನ್ನು ನೀಡಿ ಹೋಗಿ
ಮುಂದೆ ಸಾಗುತ್ತಿರುವ ಮುಂಗಾರಿನ ಮೋಡಗಳೇ
ಮರೆಯದೇ ನಿಂತು ನಮ್ಮನ್ನು ಹರಸಿ ಹೋಗಿ