Thursday, June 2, 2011

ನನಗೂ ಸ್ವಲ್ಪ ಕೊಡಿ




ಮಾರ್ಚ್ ತಿಂಗಳ ಎಲ್ಲ ವೀಕೆಂಡಲ್ಲೂ ಊರಿಗೆಹೋಗಿದ್ದೆ. ಊರಲ್ಲಿ ಮಳೆಗಾಗಿ ಕಾಯ್ತಿದ್ರು. ಸಲನಾದ್ರೂ ಚೆನ್ನಾಗಿ ಮಳೆ ಬಂದು ಕಾಫಿಚೆನ್ನಾಗಿ ಹೂ ಬಿಡ್ಲಿ ಅಂತಿದ್ರು. ನಾನೂಹೋದಾಗಲೆಲ್ಲ ಮಳೆಗೆ ಕಾಯ್ತಿದ್ದೆ, ಜೊತೆಗೆಕಾಫಿಯ ಹೂವಿಗೆ ಸಹ. ಹೂವಿನಿದ ತುಂಬಿಕಂಗೊಳಿಸುವ ತೋಟವನ್ನ ನೋಡೋದೇ ಕಣ್ಣಿಗೆಹಬ್ಬ, ಎಲ್ಲಿ ಕಣ್ಣು ಹಾಯಿಸಿದರೂ ಬಿಳೀಹೂಗಳದ್ದೇ ರಾಶಿ, ಅಲ್ಲದೆ ಹೂವಿನ ಘಮಲು,ಆಹಾ ಏನು ಪರಿಮಳ, ದಿನಾ ಪೂರ್ತಿ ಅಲ್ಲೇಕುಳಿತಿರೋಣ ಎಂದನ್ನಿಸುತ್ತದೆ. ವರ್ಷ ಸೌಭಾಗ್ಯ ಸಿಕ್ಕಿರ್ಲಿಲ್ಲ ಯಾಕಂದ್ರೆ ಹೂವು ಆಗಿದ್ದುವಾರದ ಮಧ್ಯದಲ್ಲಿ :(. ವೀಕೆಂಡ್ ಬರೋಹೊತ್ತಿಗೆ ಎಲ್ಲ ಹೂವು ಉದುರಿಹೋಗಿರ್ತಿತ್ತು.

ಒಂದಿನ ಮೋಡ ಆದ ಹಾಗೆ ಆಗ್ತಿತ್ತು, ದೂರದಗಿರಿಯಲ್ಲಿ ಕಪ್ಪನೆಯ ಮೋಡ, ಸ್ವಲ್ಪ ಹೊತ್ತಾದಮೇಲೆ ಮಳೆ. ಇತ್ತ ಕಡೆ ಗಾಳಿ ಬೀಸುತ್ತಿತ್ತು,ಮಳೆಯೂ ಬರುತ್ತಿರುವ ಹಾಗನ್ನಿಸುತ್ತಿತ್ತು. ಎಲ್ಲೋ ದೂರದ ಆಸೆ, ಇನ್ನೇನು ಕಾಲು ಘಂಟೆಯಲ್ಲಿ ಇಲ್ಲಿಗೆ ಬರತ್ತೆ, ಹೋಗಿ ನೆನೆಯಬಹುದು ಅಂತ.ಆಮೇಲೆ ಮಳೆ ಬಂದ್ರೆ - ದಿನ ಆದ್ಮೇಲೆ ಚಿಗುರು ಬಿಟ್ಟು ಹೂವು ಆಗೋ ಹೊತ್ತಿಗೆ ವಾರ ಆಗತ್ತೆ, ಮುಂದಿನ ವಾರ ಬರಬಹುದು ಅಂತದೂರದ ಆಸೆ. ದೂರದಲ್ಲಿ ಜೋರಾಗಿ ಸುರಿಯುತ್ತಿದ್ದ ಮಳೆ ಗಾಳಿ ಬೀಸುತ್ತಿದ್ದಂತೆ ಇತ್ತ ಕಡೆ ಬರ್ತಾ ಇತ್ತು. ಅಲ್ಲೇ ಕಣದಲ್ಲಿ ನಿಂತು ನೋಡುತ್ತಿದ್ದನನಗೆ, ಪಕ್ಕದ ಊರಲ್ಲಿ ಹನಿಗಳು ಬಿದ್ದಾಗ ಆದ ಸಂತಸ ಅಷ್ಟಿಷ್ಟಲ್ಲ. ಆದರೆ ಸ್ವಲ್ಪ ಹೊತ್ತಾದ ಮೇಲೆ ಅಲ್ಲಿ ಬೀಳುವುದೂ ಕಡಿಮೆಯಾಯ್ತು.ಕಾಯುತ್ತಿದ್ದ ನಾನು ಸಪ್ಪೆ ಮೊರೆ ಹಾಕಿಕೊಂಡು ಮನೆ ಒಳಗೆ ಹೋದೆ.

ಬೆಂಗಳೂರಿಗೆ ಬಂದ ಮಾರನೇ ದಿನ ಅಮ್ಮ ಫೋನ್ ಮಾಡಿ ಮಳೆ ಬಂತು ಅಂದಾಗ ಮೊದಲಿಗೆ ಸ್ವಲ್ಪ ದುಃಖ ಆದರೆ ಮರುಕ್ಷಣವೇ ಖುಷಿ.ಮುಂದಿನ ವಾರ ಹೇಗಿದ್ದರೂ ಯುಗಾದಿಗೆ ಊರಿಗೆ ಹೋಗಬೇಕು ಆಗ ಇಡೀ ತೋಟ ಸುತ್ತಾಡಿ ಅಲ್ಲಿಯ ಸೊಬಗನ್ನು, ಜೊತೆಗೆಸುವಾಸನೆಯನ್ನೂ ಸವಿಯಬಹುದಲ್ಲ ಎಂದೆನಿಸಿತು.

ಯಾವಾಗ ಶುಕ್ರವಾರ ಆಗತ್ತೋ ಅಂತಕಾಯ್ತಿದ್ದೆ. ಅಂತೂ ಬಂತು, ರಾತ್ರಿ ಹೊರಟುಬೆಳಗ್ಗೆ ಚಿಕ್ಕಮಗಳೂರು ತಲುಪಿ ಊರಿನ ಬಸ್ಹತ್ತಿದಾಗ ತಲೆಯಲ್ಲಿದ್ದದ್ದು ಒಂದೇ ಯೋಚನೆ,ಹೂವು ಹೂವು ಹೂವು. ಅರ್ಧ ಘಂಟೆಪ್ರಯಾಣದ ನಂತರ ಊರು ತಲುಪಿಬಸ್ಸಿನಿಂದ ಇಳಿದು ತೋಟದ ಹಾದಿಯಲ್ಲಿಮನೆಯ ಕಡೆ ಹೆಜ್ಜೆ ಹಾಕುವಾಗಸ್ವರ್ಗದಲ್ಲಿದ್ದೆನೇನೋ ಅನ್ನೋ ಅನುಭವ.

ಕಾದು ಕೆಂಪಾಗಿದ್ದ ಇಳೆಯನ್ನು
ಆಗಸವು ವರ್ಷಧಾರೆಯ ಸುರಿಸಿ
ಹನಿಯಿಂದ ಚುಂಬಿಸಿ
ಎಲ್ಲೆಡೆ ಹಸಿರನ್ನು ಪಸರಿಸಿದೆ



ದಿನ ಪೂರ್ತಿ ನಾನು ನನ್ನ ಬಹುತೇಕಸಮಯವನ್ನು ತೋಟದಲ್ಲೇ ಕಳೆದಿದ್ದೆ.
.................................................

ಯುಗಾದಿಯ ದಿನ ನನ್ನ ಕೆಲಸ ಮುಗಿಸಿ, ಅಂದರೆ ತೋಟಕ್ಕೆ ಹೋಗಿ ಮಾವಿನ ಎಲೆ, ಹಲಸಿನ ಎಲೆ ತಂದು ತೋರಣ ಮಾಡಿ ಕಟ್ಟಿದ್ದಾಯ್ತು.ಇನ್ನೇನಿದ್ದರೂ ದೇವರಿಗೆ ಆರತಿ ಮಾಡಿ ಹೊಟ್ಟೆಗೆ ಕೆಲಸ. ಅದಕ್ಕೆ ಇನ್ನೂ ಸಮಯವಿದ್ದುದ್ದರಿಂದ ಅವತ್ತಿನ ಪೇಪರ್ ತಂದು ಅಂಗಳದಲ್ಲಿ ಕುಳಿತೆ.ಬಿಸಿಲು ತುಂಬಾ ಇತ್ತು. ಪೇಪರ್ ಹರಡಿಕೊಂಡು ಏನೋ ಓದುತ್ತಿದ್ದೆ, ಸಡನ್ನಾಗಿ ಮೋತಿ (ಮನೆಯ ನಾಯಿ) ಓಡಿಬಂದು ನನ್ನನ್ನ ನೋಡಿ ಬಾಲಅಲ್ಲಾಡಿಸಿ ಲಾನಲ್ಲಿದ್ದ ಹೂವಿನ ಪಾಟಿನ ಹತ್ತಿರ ಹೋಗಿ ನೀರಿಗೆ ತನ್ನ ನಾಲಿಗೆ ಚಾಚಿ ನೀರನ್ನು ಹೀರತೊಡಗಿತು. ಅಲ್ಲಿ ಅದಕ್ಕೆ ಇದ್ದ ಒಂದೇಒಂದು ನೀರಿನ ಮೂಲ ಅಂದರೆ ಅದೇ :( ನೀರು ಕುಡಿದು ನನ್ನ ಪಕ್ಕ ಬಂದು ಮಲಗಿತು.


ಹಾಗೆ ಸ್ವಲ್ಪ ಹೊತ್ತು ಅಲ್ಲೇ ಕುಳಿತಿದ್ದೆ, ಆಗಪಾರಿವಾಳವೊಂದು ಬಂದು ಪಾಟಿನ ಹತ್ತಿರಕುಳಿತು ಅತ್ತ ಇತ್ತ ಹಲವಾರು ಬಾರಿ ನೋಡಿಆಮೇಲೆ ನೀರಿಗೆ ತನ್ನ ಕೊಕ್ಕನ್ನು ಹಾಕಿತು.ಮಾಡುವುದಕ್ಕೆ ಬೇರೆ ಕೆಲಸಇರಲಿಲ್ಲವಾದುದರಿಂದ
ಅಲ್ಲೇ ಕುಳಿತು ಇನ್ನೂ ಯಾವ್ಯಾವ ಹಕ್ಕಿಗಳುಬರಬಹುದು ಅಂತ ಕಾಯ್ತಿದ್ದೆ. ಕಾಗೆ, ಮಡಿವಾಳಹಕ್ಕಿ, ನನಗೆ ಹೆಸರು ಗೊತ್ತಿಲ್ಲದ ಹಲವುಹಕ್ಕಿಗಳು ಬಂದು ನನ್ನನ್ನು ನೋಡಿ, ಕೆಳಗೆಮಲಗಿದ್ದ ಮೋತಿಯನ್ನೊಮ್ಮೆ ನೋಡಿ ಯಾರೂತೊಂದರೆ ಮಾಡುವುದಿಲ್ಲ ಎಂದರಿತು ನೀರನ್ನುಕುಡಿದು ಹೋಗುತ್ತಿದ್ದವು. ಲಾನ್ ಮಾಡಿ ಪಾಟಲ್ಲಿನೀರು ಇಟ್ಟದ್ದು ಹೀಗಾದರೂ ಉಪಯೋಗಕ್ಕೆಬಂದಿತ್ತು.

..............................................................................

ರಾತ್ರಿ ಹೊರಟು ಬೆಳಗ್ಗೆ ಬೆಂಗಳೂರಿಗೆ ಬಂದೆ, ನಮ್ಮ ಮನೆಯ (ಬೆಂಗಳೂರಿನಲ್ಲಿಯ ಬಾಡಿಗೆ ಮನೆ) ವರಾಂಡ ಅಗಲವಿತ್ತು, ಆಫೀಸಿಗೆ ಹೊರಡುವಮುನ್ನ ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ನೀರನ್ನು ಇಟ್ಟು ಹೋಗಿದ್ದೆ. ಕೆಲಸ ಮುಗಿಸಿ ಸಂಜೆ ವಾಪಸ್ ಬರೋ ಹೊತ್ತಿಗೆ ಕಾಲು ಭಾಗ ನೀರುಖಾಲಿಯಾಗಿತ್ತು, ಅಬ್ಬ ಯಾವ್ದೋ ಹಕ್ಕಿಗಳು ಕುಡಿದಿರಬಹುದು ಅಂತ ಅಂದ್ಕೊಂಡೆ.


ಸಂಜೆ ಬಂದ ಮೀಟರ್, 'ಏನಪ್ಪಾ ನೀರು ಇಟ್ಟಿದೀಯ' .
'
ಹ್ಞೂ, ಬಾಯಾರಿಕೆ ಆದಾಗ ಹೀಗೆ ಯಾವ್ದಾದ್ರೂ ಹಕ್ಕಿಗಳು ಕುಡಿಯಲಿ ಅಂತ'
'
ಅದೇನು ಹಕ್ಕಿ ಕುಡಿದು ಖಾಲಿಯಾಗಿರೋದು ಅಂದ್ಕೊಂಡ್ಯ?'
'
ಹ್ಞೂ, ಮತ್ತೆ ಇನ್ಹೇಗೆ ಖಾಲಿಯಾಗತ್ತೆ?'
'
ಬಿಸಿಲಿಗೆ ಡಬ್ಬ ಕಾದು ನೀರು ಖಾಲಿಯಾಗಿರೋದು'

ನಂಗೆ ಬೇಜಾರಾಯ್ತು. ಛೆ, ಹೀಗಾಯ್ತಲ್ಲ ಅಂತ. ಆದರೂ ವಾರ ಪೂರ್ತಿ ನೀರು ತುಂಬಿಸಿ ಹೋಗ್ತಿದ್ದೆ, ಸಂಜೆ ಹೊತ್ತಿಗೆ ಕಾಲು ಭಾಗಖಾಲಿಯಾಗಿರ್ತಿತ್ತು. ಆದ್ರೆ ಹೇಗೆ ಅನ್ನೋದು ಇನ್ನೂ ನಿಗೂಢವಾಗಿತ್ತು. ಆಗಲಿ ವೀಕೆಂಡ್ನಲ್ಲಿ ಚೆಕ್ ಮಾಡೋಣ ಅಂದ್ಕೊಂಡೆ.
ಶನಿವಾರ ನೀರು ಹಾಕಿ ಚಾವಡಿಯಲ್ಲಿ ಬಂದು ಪೇಪರ್ ಓದುತ್ತಾ ಅಲ್ಲಿ ಆಗಾಗ ನೋಡುತ್ತಾ ಕುಳಿತೆ. ಅರ್ಧ ಘಂಟೆ ಆದರೂ ಯಾವುದರಸುಳಿವಿರಲಿಲ್ಲ. ಮೀಟರ್ ಹೇಳಿದ್ದೇ ಸರಿ ಅಂದ್ಕೊಂಡೆ. ಇನ್ನು ಅಲ್ಲಿಟ್ಟು ಪ್ರಯೋಜನವಿಲ್ಲ, ಸಂಜೆ ಅದನ್ನ ಎಸೆದು ಬಿಡೋಣ ಅಂದ್ಕೊಂಡೆ.
ಒಳಗೆ ಹೋಗಿ ಕಾಫಿ ಮಾಡ್ಕೊಂಡು ಬಂದು ಮತ್ತೆ ಪೇಪರ್ ಓದ್ತಾ ಕೂತೆ. ಹಾಗೆ ಅತ್ತ ಕಡೆ ಕಣ್ಣು ಹಾಯಿಸಿದೆ, ಅಳಿಲೊಂದು ಬಂದು ಡಬ್ಬನಆಕಡೆ ಈಕಡೆ ಮೂಸಿ, ಒಳಗೆ ನೀರಿರುವುದನ್ನು ನೋಡಿ ಕುಡಿದು ಓಡಿಹೋಯ್ತು. ಅಬ್ಬ, ಆಗ ಸಮಾಧಾನವಾಯ್ತು. ಆಮೇಲೆ ಆಗಾಗ ಕಾಗೆ,ಪಾರಿವಾಳಗಳು ಬಂದು ನೀರು ಕುಡಿದು ಹೋಗುತ್ತಿದ್ದವು.

ಅಂದಿನಿಂದ ಡಬ್ಬದಲ್ಲಿ ನೀರು ತುಂಬಿ ಆಫೀಸಿಗೆ ಹೊರಡುವದಾಗಿದೆ.

Wednesday, June 1, 2011

ಚುರ್ಮುರಿ - ೧೩

೪೩) ರಸ್ತೆಯಲ್ಲಿ ಬಿದ್ದಿದ್ದ ಮಾಂಸವನ್ನು ತಿನ್ನಲು ಹೋದ ನಾಯಿ ಸ್ವಲ್ಪ ಹೊತ್ತಿಗೆ ತಾನೇ ಮಾಂಸವಾಗಿತ್ತು.

೪೪) ಮಳೆಯಲ್ಲಿ ತನ್ನ ಕಾರಿನ ಕೊಳೆ ತೊಳೆದುಹೋಗಲಿ ಎಂದು ಅವನು ಹೊರಗಡೆ ಕಾರನ್ನು ನಿಲ್ಲಿಸಿದ, ಬೃಹತ್ ಗಾತ್ರದ ಆಲಿಕಲ್ಲುಗಳು ಅವನ ಕಾರನ್ನು ಮುದ್ದೆ ಮಾಡಿದ್ದವು.

೪೫) ಮೆಜೆಸ್ಟಿಕ್ನಲ್ಲಿ ಕಷ್ಟಪಟ್ಟು, ಎಲ್ಲರೊಂದಿಗೆ ಗುದ್ದಾಡಿ ತನ್ನ ಬ್ಯಾಗನ್ನು ಸ್ವಲ್ಪ ಹರಿದುಕೊಂಡು ಬಸ್ಸಿನಲ್ಲಿ ಹಾಗೂ ಹೀಗೂ ಒಂದು ಸೀಟನ್ನು ಹಿಡಿದುಕೊಂಡು ಕುಳಿತನು. ಆನಂದ್ ರಾವ್ ಸರ್ಕಲ್ ಹತ್ತಿರ ಬಸ್ ಕೆಟ್ಟು ನಿಂತಿತು.

೪೬) ಅವನು ನ್ಯಾನೋ ಕಾರನ್ನು ಕೊಂಡುಕೊಂಡು, ಅದನ್ನು ಓಡಿಸಲು ಒಬ್ಬ ಡ್ರೈವರನ್ನು ಇಟ್ಟುಕೊಂಡನು.

೪೭) ಅವಳ ಮುಖದಲ್ಲಿತ್ತೊಂದು ಪಿಂಪಲ್ ಹಾಗಾಗಿ ಕಾಣುತ್ತಿರಲಿಲ್ಲ ಅವಳ ಡಿಂಪಲ್.

ಮುಖವಾಡವ ಕಳಚಿಬಿಡು

ಬರುವೆನೆಂದು ಹೇಳಿ
ಬಾರದೆ ಹೋದೆ

ಕಾದು ಕುಳಿತಿದ್ದೆ
ನಿನ್ನ ಆಗಮನಕೆ

ಬರೆಯುವೆನೆಂದು ಹೇಳಿ
ಬರೆಯದೆ ಹೋದೆ

ಕಾದು ಕುಳಿತಿದ್ದೆ
ನಿನ್ನ ಆಮಂತ್ರಣಕೆ

ಕರೆಯುವೆನೆಂದು ಹೇಳಿ
ಕರೆಯದೆ ಹೋದೆ

ಕಾದು ಕುಳಿತಿದ್ದೆ
ನಿನ್ನ ಕಾಗದಕೆ

ಸೌಜನ್ಯಕ್ಕಾದರೂ
ಬಾರೆನೆನ್ನಬಹುದಿತ್ತಲ್ಲ

ನಿನ್ನ ಮೇಲಿಟ್ಟ ನಂಬಿಕೆ
ಹುಸಿಯಾಯಿತಲ್ಲ

ಇನ್ನಾದರೂ ಮುಖವಾಡವ ಕಳಚಿ
ಸಹಜದತ್ತ ಮುಖ ಮಾಡು

Wednesday, April 6, 2011

ಮನೆಮಕ್ಕಳೇ ಸಂಕಷ್ಟದಲ್ಲಿರುವಾಗ

ಎಲ್ಲೆಲ್ಲೂ ಸಂಭ್ರಮ, ಆಚರಣೆ, ಹರ್ಷೋಧ್ಗಾರ. ೩ರ ವಯಸ್ಸಿನ ಪೋರನಿಂದ ಹಿಡಿದು ೭೦ ದಾಟಿದ ವೃದ್ಧರವರೆಗೂ ಕ್ರಿಕೆಟ್ನದ್ದೆ ಹುಚ್ಚು. ಯಾರಿಗೆ ಆಗುವುದಿಲ್ಲ?? ೨೮ ವರ್ಷಗಳ ನಂತರ, ಅದೂನಮ್ಮ ನೆಲದಲ್ಲಿ ವಿಶ್ವಕಪ್ಪನ್ನು ಗೆಲ್ಲುವುದೆಂದರೆ ಕ್ರಿಕೆಟ್ ಬಗ್ಗೆ ಗೊತ್ತಿಲ್ಲದವನಿಗೂ ಖುಷಿಯ ವಿಚಾರವೇ. ಧೋನಿಯ ತಾಳ್ಮೆ, ಸಚಿನ್ ಯುವರಾಜ್ ಗಂಭೀರ್ ರೈನಾ ಜಹೀರ್....ಇಡೀ ತಂಡವೇಸಾಂಘಿಕವಾಗಿ ಆಡಿ ಕಪ್ಪನ್ನು ತನ್ನ ಮುಡಿಗೇರಿಸಿಕೊಂಡಿತು.

ಗೆದ್ದ ತಕ್ಷಣವೇ ಬಹುಮಾನಗಳ ಸುರಿಮಳೆ, ಬಿ.ಸಿ.ಸಿ. ಕೋಟಿ ರೂಪಾಯಿಗಳನ್ನು ಪ್ರತಿಯೊಬ್ಬರಿಗೂ ಘೋಷಿಸಿತು. ಒಪ್ಪತಕ್ಕಂತದ್ದೆ. ಆದರೆ ಇದೇ ನೆಪದಲ್ಲಿ ಬೇರೆ ರಾಜ್ಯ ಸರ್ಕಾರಗಳು ದೊಡ್ಡಪ್ರಮಾಣದ ಉಡುಗೊರೆಯನ್ನು ಕೊಟ್ಟದ್ದು ಎಷ್ಟರ ಮಟ್ಟಿಗೆ ಸರಿ? ಎಲ್ಲ ಆಟಗಾರರನ್ನು ಕರೆದು ಗೌರವಿಸಬಹುದಿತ್ತು. ಅದರಲ್ಲೂ ನಮ್ಮ ರಾಜ್ಯದಿಂದ ಪ್ರತಿಯೊಬ್ಬರಿಗೂ ಒಂದೊಂದು ಸೈಟ್ಕೊಡುತ್ತೇವೆ ಎಂಬ ಘೋಷಣೆ ಬಂತು. ೫೦*೮೦ . ವಿಸ್ತೀರ್ಣದ ಸೈಟ್ಗಳು. .ಅಗೆ ಕನಿಷ್ಠ ೧೦೦೦ ರೂ ಎಂದರೂ ೪೦ ಲಕ್ಷ :).

ಪ್ರಯೋಜನ ಪಡೆದುಕೊಂಡವರು ಯಾರು?? ಬೆಂಗಳೂರಿನಿಂದ ಸಾವಿರಾರು ಕಿ.ಮೀ ದೂರ ಇರುವ ಆಟಗಾರರು. ಅವರೇನು ಬಡವರೇ?? ಉಡುಗೊರೆ ಘೋಷಣೆ ಆಗುವುದಕ್ಕೂ ಮೊದಲುಅವರೆಲ್ಲ ಕೋಟ್ಯಾಧಿಪತಿಗಳೇ.

ತನ್ನ ನೆಲದಲ್ಲೇ ಹುಟ್ಟಿ, ಒಲಂಪಿಕ್ಸ್, ಏಷ್ಯನ್ ಗೇಮ್ಸ್ಗಳಲ್ಲಿ ಹಲವು ರಾಷ್ಟ್ರಗಳ ಘಟಾನುಘಟಿಗಳೊಂದಿಗೆ ಸೆಣಸಾಡಿ ಪದಕ ಗೆದ್ದು ತಂದವರಿಗೆ ಇನ್ನೂ ಸೌಭಾಗ್ಯ ದೊರೆತಿಲ್ಲ.

೧೫ ಸೈಟ್ ಎಂದರೆ ಕನಿಷ್ಠ ಕೋಟಿ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಮನೆ, ಹೊಲ ಮತ್ತು ಗದ್ದೆಗಳನ್ನು ಕಳೆದುಕೊಂಡು ಸೂರಿಲ್ಲದೆ ಜೀವಿಸುತ್ತಿರುವ ಕೆಲವೇ ಕೆಲವು ಕುಟುಂಬಗಳಿಗೆಸೂರನ್ನು ನಿರ್ಮಿಸಿಕೊಡಬಹುದಾಗಿತ್ತು. ಸಣ್ಣ ಪ್ರಮಾಣದ ಸಾಲ ಮಾಡಿ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ರೈತಂದಿರ ಬವಣೆಗಳನ್ನ ಸ್ವಲ್ಪ ಪ್ರಮಾಣದಲ್ಲಿ ನೀಗಿಸಬಹುದಿತ್ತು.

ಮನೆಯ ಮಗ/ಮಗಳೇ ಸಂಕಷ್ಟದಲ್ಲಿರುವಾಗ ಪಕ್ಕದ ಮನೆಯವರು ಸುಖದಲ್ಲಿರುವಾಗ ಅವರಿಗೆ ಸಹಾಯ ಮಾಡುವುದು ಯಾವ ಧರ್ಮ??

ಚುರ್ಮುರಿ ೬

೧೬) ಆ ಪತ್ರಿಕೆಯೊಂದಿಗೆ ಕಳಿಸಿದ 'ಸ್ವಲ್ಪ ಅಡ್ಜಸ್ಟ್ ಮಾಡಬೇಡಿ' ಅನ್ನುವ ಸ್ಟಿಕ್ಕರನ್ನು ತಮ್ಮ ಮನೆಯ ರಸ್ತೆಯಲ್ಲಿರುವ ಹಂಪಿಗೆ ಹಾಕುತ್ತೇನೆ ಅಂದ ಮಗಳಿಗೆ ಬೇಡ ಎಂದು ಅವಳಪ್ಪ ಹೇಳಿದನು. ಯಾಕೆ ಎಂದು ಕೇಳಿದ ಮಗಳಿಗೆ ಅದನ್ನು ಹಾಕಿದವರು ನಾವೇ (ಬಿ.ಬಿ.ಎಂ.ಪಿ ನೌಕರ) ಎಂದು ಹೇಳಿದನು ಅವಳಪ್ಪ.

೧೭) ಅವಳು ಚಳಿಗಾಲದಲ್ಲಿ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಮನೆಯಿಂದ ಹೊರಗೆ ಹೊರಟಳು.

೧೮) ಸ್ವಲ್ಪ ದಿನಗಳ ಹಿಂದೆ ಆ ಸ್ವಾಮಿಗೆ ಹಿಗ್ಗಾಮುಗ್ಗಾ ಬಯ್ಯುತ್ತಿದ್ದಳು ಆ ರೇಡಿಯೋ ಜಾಕಿ, ಆದರೆ ಈಚೆಗೆ ಹೊಗಳಲು ಶುರು ಮಾಡಿಕೊಂಡಿದ್ದಾಳೆ.

ಒಂದು ದಿನದ ಸಕಲೇಶಪುರ ಟ್ರೆಕ್....ಮುಕ್ತಾಯ

ಆಗ ನಾನು, ವೆಂಕ ನೀನು ಇಲ್ಲೇ ಇರು ನಾನು ಆ ಸೇತುವೆ ಮ‌ತ್ತೆ ಸುರಂಗ ದಾಟಿ ಜೀಪ್ ನೋಡ್ಕೊಂಡು ಬೇಗ ಓಡಿ ಬರ್ತೀನಿ ಅಂದೆ, ಸರಿ ಹಾಗೇ ಮಾಡು ಆದ್ರೆ ಎಲ್ಲಾ ಬೇಗ ಆಗ್ಬೇಕು ಅಂದ, ಅಂದ್ರೆ ಆ ಟೈಮಲ್ಲಿ ಸೇತುವೆ ಮ‌ತ್ತೆ ಸುರಂಗ ದಾಟಿ ಜೀಪ್ ನೋಡಿ ಮತ್ತೆ ವಾಪಸ್ ಬಂದು ರೈಲ್ ನಿಂತ್ರೆ ಹತ್ತಬೇಕಾದಂತ ಪರಿಸ್ಥಿತಿ.

ಸರಿ ಓಡಿದೆ, ಹೋಗಿ ನೋಡಿದ್ರೆ ಆಗಿನ್ನೂ ಜೀಪ್ ಹೋದ ಸದ್ದು ಕೇಳಿಸ್ತು. ವಿಧಿಯಿಲ್ಲದೆ ಮತ್ತೆ ವಾಪಸ್ ಆಗ್ಬೇಕು, ರೈಲ್ ಬರೋದು ಕಾಣ್ತಿತ್ತು, ನಾನು ಓಡಲೇಬೇಕಿತ್ತು, ಅಂತೂ ಸೇತುವೆ ದಾಟಿ ವೆಂಕ ಇರೋ ಜಾಗ ತಲುಪಿದೆ. ಇನ್ನೇನು ಈ ಕಾರ್ಮಿಕರು ರೈಲ್ ನಿಲ್ಲಿಸ್ತಾರೆ ನಮ್ಮನ್ನೂ ಹತ್ತಿಸಿಕೊಂಡು ಹೋಗ್ತಾರೆ ಅಂತ ಸ್ವಲ್ಪ ಧೈರ್ಯ ಬಂತು (ಯಾಕಂದ್ರೆ ವೆಂಕ,ನಾನು ಅವರೊಟ್ಟಿಗೆ ಮಾತಾಡಿ ಚೆನ್ನಾಗಿ ಪರಿಚಯ ಮಾಡಿಕೊಂಡಿದ್ವಿ).

ರೈಲ್ ಬಂತು ಅವ್ರು ಅಡ್ಡ ಹಾಕಿದ್ರು ಆದ್ರೆ ಉಹುಂ ನಿಲ್ಲಿಸ್ಲಿಲ್ಲ....

ಮುಂದೆ....ತಲೆ ಮೇಲೆ ಕೈ ಹೊತ್ಕೊಂಡು ಕೂತ್ವಿ, ಕಾಡಿನ ಮಧ್ಯೆ, ಕಗ್ಗತ್ತಲು. ವಾಪಸ್ ತಲುಪ್ತೀವೋ ಇಲ್ವೋ ಅನ್ನೋ ಅನುಮಾನ....ನಮ್ಮಿಬ್ಬರ ಮುಖದಲ್ಲಿ ಹತ್ತಾರು ಪ್ರಶ್ನೆಗಳು ಹಾದುಹೋದವು.....



ನಾನು,ವೆಂಕ ಜೊತೆಗೆ ಆ ಕಾರ್ಮಿಕರು, ಬ್ಯಾಗ್ನಲ್ಲಿ ತಿನ್ನೋದಕ್ಕೆ ಏನೂ ಇಲ್ಲ, ವೆಂಕ ಟ್ರಿಪ್ನಲ್ಲಿ ದುಡ್ಡು ಕೊಟ್ಟು ಪರ್ಸ್ ಖಾಲಿ ಮಾಡ್ಕೊಂಡಿದ್ದ, ನಾನು ಆ ತಿಂಗಳು ಬರ್ಬಾದ್ ಆಗಿಹೋಗಿದ್ದೆ.

ಚಿಕ್ಕು ಎಷ್ಟಿದೆಯೋ ದುಡ್ಡು ಅಂದ, ತೆಗೆದು ನೋಡಿದೆ 100 ಇತ್ತು, ತೋರ್ಸಿದೆ.


ರಾತ್ರಿ 7:30, ಜೇಬ‌ಲ್ಲಿ ದುಡ್ಡಿಲ್ಲ, ತಿನ್ನೋದ‌ಕ್ಕೆ ಏನಿಲ್ಲ, ಮೊಬೈಲ್ ಸಿಗ್ನಲ್ ಇಲ್ಲ, ವೆಂಕ‌ನ‌ ಮೊಬೈಲ್ ಚಾರ್ಜಿಲ್ಲದೆ ಬೇಸ‌ತ್ತು ನಿದ್ರೆ ಮಾಡ್ತಿತ್ತು, ನ‌ನ್ನ ಮೊಬೈಲ್ ಎಲ್ಲೋ ಸ್ವಲ್ಪ ಜೀವ‌ ಇಟ್ಕೊಂಡಿತ್ತು, ಅದಕ್ಕೂ ಸುಸ್ತಾಗಿ ಹೋಗಿತ್ತು, 2 ದಿನ‌ ಚಾರ್ಜಿಲ್ಲದೆ.

ಈಗೇನು ಮಾಡ್ಬೇಕು ಅಂತ‌ ಗೊತ್ತಾಗ‌ದೆ ಸ್ವಲ್ಪ ಹೊತ್ತು ಹಾಗೆ ಕೂತ್ಕೊಂಡ್ವಿ
ವೆಂಕ‌, ಮುಂದೆ ಹೋಗಿ ಸಿಗ್ನಲ್ ಸಿಗ‌ತ್ತೇನು ಅಂತ‌ ನೋಡ್ಕೊಂಡು ಬ‌ರ್ತೀನಿ ಇಲ್ಲೇ ಇರು ಅಂದೆ, ಸ‌ರಿ ಅಂದ‌. ತುಂಬಾ ಕ‌ತ್ತಲು, ಕ್ಷಣ ಕ್ಷಣ‌ ಮೊಬೈಲ್ ಚಾರ್ಜ್ ಕ‌ಡಿಮೆಯಾಗ್ತಿತ್ತು.

ಸ್ವಲ್ಪ ಮುಂದೆ ಹೋದ ತಕ್ಷಣ ೧ ಸಿಗ್ನಲ್ ಬಂತು, ಆ ಖುಷಿಗೆ ವೆಂಕ ಸಿಗ್ನಲ್ ಸಿಕ್ತು ಕಣೋ ಅಂದೆ.
ಸೌಜನ್ಗೋ ಪಕ್ಯನ್ಗೋ ಕಾಲ್ ಮಾಡು ಅಂದ.

ಪಕ್ಯಂಗೆ ಕಾಲ್ ಹೋಯ್ತು, ಲೇ ಗೂಡ್ಸ್ ಟ್ರೈನ್ ಹೋಯ್ತು ಅದ್ರಲ್ಲಿ ಇದೀರಾ ಅಥವ ಯಡಕಮುರಿಯಲ್ಲೇ ಇದೀರಾ ಅಂದೆ.

ಇಲ್ಲಪ್ಪ ಗೂಡ್ಸ್ ಟ್ರೈನ್ ನಿಲ್ಲಿಸ್ಲೇ ಇಲ್ಲ, ನೀವು ವಾಪಸ್ ಬನ್ನಿ.

ಸರಿ ಅಂತ್ಹೇಳಿ ವೆಂಕಂಗೆ ಹೇಳಿ ಅಲ್ಲಿಂದ ಹೊರಟೆವು.

ಆಗಲೇ ರಾತ್ರಿ ೭.೪೫, ಎಲ್ಲೆಲ್ಲೂ ಕತ್ತಲೆ, ನನ್ನ ಮೊಬೈಲ್ನಲ್ಲಿದ್ದ ಟಾರ್ಚನ್ನು ಹಾಕಿಕೊಂಡು ಹೊರಟೆವು, ಮೊದಲೇ ಚಾರ್ಜ್ ಕಡಿಮೆ ಇತ್ತು ಇನ್ನು ಟಾರ್ಚ್ ಉಪಯೋಗಿಸುತ್ತಿದ್ದುದ್ದರಿಂದ ಇನ್ನೂ ಕಡಿಮೆ ಆಗುತ್ತಿತ್ತು. ೩ ಕಿ.ಮೀ ಹೋಗಬೇಕಿತ್ತು, ಅಲ್ಲಿವರೆಗೆ ಬಂದರೆ ಸಾಕಪ್ಪಾ ಎಂದು ಬೇಗ ಬೇಗ ಹೆಜ್ಜೆ ಹಾಕಿದೆವು.

ಸುತ್ತಲೂ ಕಾಡು, ಅಲ್ಲಲ್ಲಿ ಕಾಡು ಪ್ರಾಣಿಗಳ ಸದ್ದು, ಆನೆ ಕಾಡೆಮ್ಮೆಗಳ ಕೂಗು ನಮ್ಮ ಹೆಜ್ಜೆಯ ವೇಗವನ್ನು ಜಾಸ್ತಿ ಮಾಡುತ್ತಿದ್ದವು. ನಡುನಡುವೆ ಸೇತುವೆಗಳು, ಅಕಸ್ಮಾತ್ ಮಧ್ಯೆ ಇದ್ದಾಗ ಯಾವುದಾದರೂ ರೈಲ್ ಬರಬಹುದು ಎಂದು ಒಂದೇ ಸಮನೆ ಓಡಿಬಿಡುತ್ತಿದ್ದೆವು. ಅಂತೂ ೮.೩೦ಕ್ಕೆ ಯಡಕಮುರಿ ಸ್ಟೇಶನ್ ತಲುಪಿದೆವು.

ಸೌಜ ಇದ್ದವನು ೧೧.೩೦ಕ್ಕೆ ಗೂಡ್ಸ್ ಟ್ರೈನ್ ಇದೆಯಂತೆ, ಅಕಸ್ಮಾತ್ ನಿಲ್ಸಿದ್ರೆ ಅದ್ರಲ್ಲಿ ಹತ್ಕೊಂಡು ಹೋಗಿ ಅಂತ ಸ್ಟೇಶನ್ ಮಾಸ್ಟರ್ ಹೇಳ್ದ ಅಂದ.

ನಿಲ್ಲಿಸ್ದೆ ಇದ್ರೆ??

ನೀವೇ ನಿಲ್ಸಿ ಅಂತ ಅಂದೆ, ಆಸಾಮಿ ಯಾಕೋ ಒಪ್ಲಿಲ್ಲ.

ಸರಿ ಬಿಡು ಇನ್ನೇನ್ಮಾಡೋದು ಅಲ್ಲಿ

ವರೆಗೆ ಕಾಯೋಣ ಅಂತ ಕೇಕ್, ಬನ್, ಬ್ರೆಡ್ ತಿಂದು ಪ್ಲಾಟ್ಫಾರ್ಮ್ ಮೇಲೆ ಮಲಗಿಕೊಂಡ್ವಿ. ಪಕ್ಯ ಸೌಜ ಎಚ್ಚರ ಇದ್ರು. ಸುಮಾರು ೧೧.೪೦ಕ್ಕೆ ಗೂಡ್ಸ್ ಟ್ರೈನ್ ಸದ್ದಾಯ್ತು, ಎಲ್ಲ ಎದ್ದು ನಿಂತೆವು. ಬಂದ ಸ್ಪೀಡಿನಲ್ಲೇ ಹತ್ತಿ ಹೋಯಿತು (ಹಗಲು ಹೊತ್ತಾಗಿದ್ರೆ ಓಡಿ ಹೋಗಿ ಹತ್ತುತಿದ್ವೇ

ನೋ ಆದ್ರೆ ರಾತ್ರಿ).

ಥತ್ತೇರಿಕೆ ಅಂದು ಮತ್ತೆ ಪ್ಲಾಟ್ಫಾರ್ಮ್ ಮೇಲೆ ಬಿದ್ವಿ, ಸೌಜ ಹೋಗಿ ಮತ್ತೆ ಕೇಳ್ಕೊಂಡು ಬಂದ.

ರಾತ್ರಿ ೧.೩೦ಕ್ಕೆ ಮತ್ತೊಂದು ಗೂಡ್ಸ್ ಟ್ರೈನ್ ಇದೆ ಅಂದ.ನಮಗೆ ಸುಸ್ತಾಗಿದ್ದಿದ್ರಿಂದ ನಾವು ಪಾಚ್ಕೊಂಡ್ವಿ, ಸೌಜ ಪಕ್ಯ ಜಾಗರಣೆ ಮಾಡ್ತಿದ್ರು.

೧.೩೦ಕ್ಕೆ ಬಂತು, ಆಗ್ಲೂ ನಿಲ್ಲಿಸ್ಲಿಲ್ಲ.

ಸ್ಟೇಶನ್ ಮಾಸ್ಟರ್ಗೆ ನಮ್ಮನ್ನ ನೋಡಿ ಸ್ವಲ್ಪ ಕರುಣೆ ಬಂತು ಅನ್ಸತ್ತೆ. ೩.೩೦ ಸುಮಾರಿಗೆ ಪ್ಯಾಸೆಂಜರ್ ಗಾಡಿ ಬರತ್ತೆ, ನಿಲ್ಲಿಸ್ತೀನಿ ಹತ್ಕೊಂಡು ಹೋಗಿ ಅಂದ.

ಅಂತೂ ತಲುಪ್ತೀವಿ ಅನ್ನೋ ಸಮಾಧಾನ ಆಯ್ತು.೪ಕ್ಕೆ ಬಂತು ಟ್ರೈನ್, ಹತ್ತಿದೆವು, ಟ್ರೈನ್ ತುಂಬಿ ಹೋಗಿತ್ತು, ಹೆಂಗೋ ಜಾಗ ಮಾಡ್ಕಂಡು ಕೆಳಗೆ ಕೂತ್ವಿ. ೫.೩೦ರ ಸುಮಾರಿಗೆ ಸಕಲೇಶಪುರಕ್ಕೆ ಬಂದ್ವಿ.

ಸರಿಯಾಗಿ ನಿದ್ರೆ ಇಲ್ಲದೆ ಎಲ್ಲರೂ ಸುಸ್ತಾಗಿದ್ವಿ.ಈಗ ಮತ್ತೊಂದು ಸಮಸ್ಯೆ ಶುರುವಾಯಿತು.

ವ್ಯಾನ್ ಡ್ರೈವರ್ಗೆ ಸುಬ್ರಮಣ್ಯಕ್ಕೆ ಹೋಗೋಕೆ ಹೇಳಿದ್ವಿ (ಟ್ರೆಕ್ ಮಾಡಿ ಅಲ್ಲಿಗೆ ಹೋಗಿ ಅಲ್ಲಿಂದ ವ್ಯಾನ್ ಹತ್ತಿ ಬೆಂಗಳೂರಿನ ಹಾದಿ ಹಿಡ್ಯಣ ಅಂತ).

ಡ್ರೈವರ್ಗೆ ಕಾಲ್ ಮಾಡಿದ್ರೆ ನಾಟ್ ರೀಚಬಲ್. ೧

೦ ನಿಮಿಷ ಪ್ರಯತ್ನ ಮಾಡಿದ್ವಿ ಆದ್ರೆ ಸಿಗ್ಲೇ ಇಲ್ಲ.ಅಯ್ಯೋ ಶಿವನೆ, ಈಗ ಮತ್ತೆ ಸುಬ್ರಮಣ್ಯಕ್ಕೆ ಹೋಗ್ಬೇಕು :(.

ಮತ್ತೆ ನಾನು ವೆಂಕ ಸಕಲೇಶಪುರ ಬಸ್ ನಿಲ್ದಾಣಕ್ಕೆ ಹೊರಟೆವು. ಬೆಳಗ್ಗೆ ೫.೪೫, ಇಬ್ರೂ ತೂಕಡಿಸುತ್ತಿದ್ವಿ.

ಬಸ್ ಹತ್ತಿ ೨ ಸೀಟ್ ಮುಂದೆ ಹೋದ ತಕ್ಷಣ ಇಬ್ಬರು ಆಸಾಮಿಗಳು ಕಂಠಪೂರ್ತಿ ಕುಡಿದು ಸೀಟ್ ಕೆಳಗೆ ಅಡ್ಡಡ್ಡ ಬಿದ್ದಿದ್ರು, ಅವರನ್ನ ದಾಟಿಕೊಂಡು ಹೋಗಿ ಹಿಂದ್ಗಡೆ ಸೀಟಲ್ಲಿ ಕೂತ್ವಿ.

ಶಿರಾಡಿ ಘಾಟ್ ಬರೋತಂಕ ಆರಾಮಾಗಿ ಹೋಗ್ತಿದ್ವಿ. ಆಮೇಲೆ ನೋಡಿ ಶುರುವಾಯ್ತು, ಕೆಳಗೆ ಕುಡಿದು ಬಿದ್ದವರಿಗೂ ನಮಗೂ ವ್ಯತ್ಯಾಸ ಇಲ್ಲವೇನೋ ಅನ್ನೋ ಹಾಗೆ ತೂರಾಡೋಕೆ ಶುರು ಮಾಡಿದ್ವಿ, ಕಾರಣ ರಸ್ತೆಯಲ್ಲಿದ್ದ ಗುಂಡಿಗಳು (ರಸ್ತೆಯಲ್ಲಿ ಗುಂಡಿ ಅನ್ನೋದ್ರ ಬದ್ಲು ಗುಂಡಿನೇ ರಸ್ತೆ ಆಗಿತ್ತು), ಪಾಪ ಬಸ್ಸಿನಲ್ಲಿದ್ದ ಹೆಂಗಸರು ಮಕ್ಕಳಪಾಡನ್ಥೂ ಹೇಳತೀರದು.

ನಾವಂತೂ ಗುಂಡ್ಯ ಹತ್ರ ಬರೋ ಹೊತ್ತಿಗೆ ಹಣ್ಣುಗಾಯಿ ನೀರುಗಾಯಿ ಆಗಿದ್ವಿ. ಆಮೇಲೆ ಯೋಚನೆ ಮಾಡಿದಾಗ ಗೊತ್ತಾಯ್ತು ಬಸ್ಸಿನಲ್ಲಿದ್ದ ಇಬ್ಬರು ಯಾಕೆ ಕುಡಿದಿದ್ರು ಅಂತ.

ಸುಬ್ರಮಣ್ಯಕ್ಕೆ ಹೋಗೋ ಯಾವ್ದಾದ್ರೂ ಬಸ್ ಬರತ್ತಾ ಅಂತ ಕಾಯ್ತಾ ಅಲ್ಲೇ ಸುತ್ತಾಡ್ತಿದ್ವಿ, ಸುಬ್ರಮಣ್ಯ ರಸ್ತೆ ಹಾದಿಯಲ್ಲಿ ಒಂದು ವ್ಯಾನ್ ಕಾಣಿಸ್ತು, ನಮ್ದೆ ಇರ್ಬೇಕು ಅಂದ್ಕೊಂಡು ಹೋಗಿ ನೋಡಿದ್ರೆ

ಅದೇ.

ಅಬ್ಬ ಅಂತೂ ನಮ್ಮ ಹುಡುಕಾಟ ಮುಗಿಯಿತಲ್ಲ ಇನ್ನು ಬೆಂಗಳೂರಿಗೆ ಆರಾಮಾಗಿ ಹೋಗಬಹುದು ಅಂತ ವ್ಯಾನ್ ಹತ್ತಿ ಕೂತ್ವಿ. ನಮಗೆ ನಿದ್ರೆ ಎಷ್ಟು ಬಂತು ಅಂದ್ರೆ ಶಿರಾಡಿ ಘಾಟ್ನ ಗುಂಡಿಗಳು ನಿದ್ರಾದೇವಿಯ ಮುಂದೆ ಸೋತು ಶರಣಾಗಿದ್ದವು.

ಸಕಲೇಶಪುರದಲ್ಲಿ ಉಳಿದವರನ್ನು ಹತ್ತಿಸಿಕೊಂಡು ಬೆಂಗಳೂರಿಗೆ ಬಂದಾಗ ಸದ್ಯ ತಲುಪಿದೆವಲ್ಲ ಅನ್ನೋ ಸಮಾಧಾನ


ಕಾಂಕ್ರೀಟ್ ಕಾಡಿನಲ್ಲಿ

ಕಾಂಕ್ರೀಟ್ ಕಾಡಿನಲ್ಲಿ ಕೂತೊಂದು ಕನಸ ಕಂಡ
ನಾ ಕೋಟ್ಯಾಧಿಪತಿಯಾಗಬೇಕೆಂದುಕೊಂಡ

ಸಾಫ್ಟ್ವೇರ್ ಇಂಜಿನಿಯರಾಗಿ ಸೇರಿಕೊಂಡ
ಇನ್ನೇನು ಕನಸು ನನಸಾಯಿತೆಂದುಕೊಂಡ

ದುಡಿದಿದರ್ಧದಷ್ಟನ್ನು ಟ್ಯಾಕ್ಸ್ ಕಟ್ಟಿದ
ಸ್ವಲ್ಪ ಬಾಡಿಗೆ ಮನೆಗೆ ಸುರಿದ
ಮಿಕ್ಕಿದ್ದರಲ್ಲಿ ಬೈಕ್ ತಗೊಂಡ

ಸ್ವಲ್ಪ ವರುಷದ ನಂತರ
ಸಂಬಳ ಜಾಸ್ತಿಯಾದ ನಂತರ

ಬೈಕನ್ನು ಎಸೆದ
ಲೋನನ್ನು ತೆಗೆದ
ಕಾರನ್ನು ಪಡೆದ

ಮದುವೆಯಾಯಿತು
ಹೆಂಡತಿ ಬಂದಳು
ಮನೆ ಬೇಕೆಂದಳು

ಅರವತ್ತಾದರೂ ಮುಗಿಯುವ ಹಾಗಿಲ್ಲ
ತೆಗೆದುಕೊಂಡ ಸಾಲ