Wednesday, April 6, 2011
ಚುರ್ಮುರಿ ೬
೧೭) ಅವಳು ಚಳಿಗಾಲದಲ್ಲಿ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಮನೆಯಿಂದ ಹೊರಗೆ ಹೊರಟಳು.
೧೮) ಸ್ವಲ್ಪ ದಿನಗಳ ಹಿಂದೆ ಆ ಸ್ವಾಮಿಗೆ ಹಿಗ್ಗಾಮುಗ್ಗಾ ಬಯ್ಯುತ್ತಿದ್ದಳು ಆ ರೇಡಿಯೋ ಜಾಕಿ, ಆದರೆ ಈಚೆಗೆ ಹೊಗಳಲು ಶುರು ಮಾಡಿಕೊಂಡಿದ್ದಾಳೆ.
ಒಂದು ದಿನದ ಸಕಲೇಶಪುರ ಟ್ರೆಕ್....ಮುಕ್ತಾಯ
ಆಗ ನಾನು, ವೆಂಕ ನೀನು ಇಲ್ಲೇ ಇರು ನಾನು ಆ ಸೇತುವೆ ಮತ್ತೆ ಸುರಂಗ ದಾಟಿ ಜೀಪ್ ನೋಡ್ಕೊಂಡು ಬೇಗ ಓಡಿ ಬರ್ತೀನಿ ಅಂದೆ, ಸರಿ ಹಾಗೇ ಮಾಡು ಆದ್ರೆ ಎಲ್ಲಾ ಬೇಗ ಆಗ್ಬೇಕು ಅಂದ, ಅಂದ್ರೆ ಆ ಟೈಮಲ್ಲಿ ಸೇತುವೆ ಮತ್ತೆ ಸುರಂಗ ದಾಟಿ ಜೀಪ್ ನೋಡಿ ಮತ್ತೆ ವಾಪಸ್ ಬಂದು ರೈಲ್ ನಿಂತ್ರೆ ಹತ್ತಬೇಕಾದಂತ ಪರಿಸ್ಥಿತಿ.
ಸರಿ ಓಡಿದೆ, ಹೋಗಿ ನೋಡಿದ್ರೆ ಆಗಿನ್ನೂ ಜೀಪ್ ಹೋದ ಸದ್ದು ಕೇಳಿಸ್ತು. ವಿಧಿಯಿಲ್ಲದೆ ಮತ್ತೆ ವಾಪಸ್ ಆಗ್ಬೇಕು, ರೈಲ್ ಬರೋದು ಕಾಣ್ತಿತ್ತು, ನಾನು ಓಡಲೇಬೇಕಿತ್ತು, ಅಂತೂ ಸೇತುವೆ ದಾಟಿ ವೆಂಕ ಇರೋ ಜಾಗ ತಲುಪಿದೆ. ಇನ್ನೇನು ಈ ಕಾರ್ಮಿಕರು ರೈಲ್ ನಿಲ್ಲಿಸ್ತಾರೆ ನಮ್ಮನ್ನೂ ಹತ್ತಿಸಿಕೊಂಡು ಹೋಗ್ತಾರೆ ಅಂತ ಸ್ವಲ್ಪ ಧೈರ್ಯ ಬಂತು (ಯಾಕಂದ್ರೆ ವೆಂಕ,ನಾನು ಅವರೊಟ್ಟಿಗೆ ಮಾತಾಡಿ ಚೆನ್ನಾಗಿ ಪರಿಚಯ ಮಾಡಿಕೊಂಡಿದ್ವಿ).
ರೈಲ್ ಬಂತು ಅವ್ರು ಅಡ್ಡ ಹಾಕಿದ್ರು ಆದ್ರೆ ಉಹುಂ ನಿಲ್ಲಿಸ್ಲಿಲ್ಲ....
ಮುಂದೆ....ತಲೆ ಮೇಲೆ ಕೈ ಹೊತ್ಕೊಂಡು ಕೂತ್ವಿ, ಕಾಡಿನ ಮಧ್ಯೆ, ಕಗ್ಗತ್ತಲು. ವಾಪಸ್ ತಲುಪ್ತೀವೋ ಇಲ್ವೋ ಅನ್ನೋ ಅನುಮಾನ....ನಮ್ಮಿಬ್ಬರ ಮುಖದಲ್ಲಿ ಹತ್ತಾರು ಪ್ರಶ್ನೆಗಳು ಹಾದುಹೋದವು.....
ನಾನು,ವೆಂಕ ಜೊತೆಗೆ ಆ ಕಾರ್ಮಿಕರು, ಬ್ಯಾಗ್ನಲ್ಲಿ ತಿನ್ನೋದಕ್ಕೆ ಏನೂ ಇಲ್ಲ, ವೆಂಕ ಟ್ರಿಪ್ನಲ್ಲಿ ದುಡ್ಡು ಕೊಟ್ಟು ಪರ್ಸ್ ಖಾಲಿ ಮಾಡ್ಕೊಂಡಿದ್ದ, ನಾನು ಆ ತಿಂಗಳು ಬರ್ಬಾದ್ ಆಗಿಹೋಗಿದ್ದೆ.
ಚಿಕ್ಕು ಎಷ್ಟಿದೆಯೋ ದುಡ್ಡು ಅಂದ, ತೆಗೆದು ನೋಡಿದೆ 100 ಇತ್ತು, ತೋರ್ಸಿದೆ.
ರಾತ್ರಿ 7:30, ಜೇಬಲ್ಲಿ ದುಡ್ಡಿಲ್ಲ, ತಿನ್ನೋದಕ್ಕೆ ಏನಿಲ್ಲ, ಮೊಬೈಲ್ ಸಿಗ್ನಲ್ ಇಲ್ಲ, ವೆಂಕನ ಮೊಬೈಲ್ ಚಾರ್ಜಿಲ್ಲದೆ ಬೇಸತ್ತು ನಿದ್ರೆ ಮಾಡ್ತಿತ್ತು, ನನ್ನ ಮೊಬೈಲ್ ಎಲ್ಲೋ ಸ್ವಲ್ಪ ಜೀವ ಇಟ್ಕೊಂಡಿತ್ತು, ಅದಕ್ಕೂ ಸುಸ್ತಾಗಿ ಹೋಗಿತ್ತು, 2 ದಿನ ಚಾರ್ಜಿಲ್ಲದೆ.
ಈಗೇನು ಮಾಡ್ಬೇಕು ಅಂತ ಗೊತ್ತಾಗದೆ ಸ್ವಲ್ಪ ಹೊತ್ತು ಹಾಗೆ ಕೂತ್ಕೊಂಡ್ವಿ
ವೆಂಕ, ಮುಂದೆ ಹೋಗಿ ಸಿಗ್ನಲ್ ಸಿಗತ್ತೇನು ಅಂತ ನೋಡ್ಕೊಂಡು ಬರ್ತೀನಿ ಇಲ್ಲೇ ಇರು ಅಂದೆ, ಸರಿ ಅಂದ. ತುಂಬಾ ಕತ್ತಲು, ಕ್ಷಣ ಕ್ಷಣ ಮೊಬೈಲ್ ಚಾರ್ಜ್ ಕಡಿಮೆಯಾಗ್ತಿತ್ತು.
ಸ್ವಲ್ಪ ಮುಂದೆ ಹೋದ ತಕ್ಷಣ ೧ ಸಿಗ್ನಲ್ ಬಂತು, ಆ ಖುಷಿಗೆ ವೆಂಕ ಸಿಗ್ನಲ್ ಸಿಕ್ತು ಕಣೋ ಅಂದೆ.
ಸೌಜನ್ಗೋ ಪಕ್ಯನ್ಗೋ ಕಾಲ್ ಮಾಡು ಅಂದ.
ಪಕ್ಯಂಗೆ ಕಾಲ್ ಹೋಯ್ತು, ಲೇ ಗೂಡ್ಸ್ ಟ್ರೈನ್ ಹೋಯ್ತು ಅದ್ರಲ್ಲಿ ಇದೀರಾ ಅಥವ ಯಡಕಮುರಿಯಲ್ಲೇ ಇದೀರಾ ಅಂದೆ.
ಇಲ್ಲಪ್ಪ ಗೂಡ್ಸ್ ಟ್ರೈನ್ ನಿಲ್ಲಿಸ್ಲೇ ಇಲ್ಲ, ನೀವು ವಾಪಸ್ ಬನ್ನಿ.
ಸರಿ ಅಂತ್ಹೇಳಿ ವೆಂಕಂಗೆ ಹೇಳಿ ಅಲ್ಲಿಂದ ಹೊರಟೆವು.
ಆಗಲೇ ರಾತ್ರಿ ೭.೪೫, ಎಲ್ಲೆಲ್ಲೂ ಕತ್ತಲೆ, ನನ್ನ ಮೊಬೈಲ್ನಲ್ಲಿದ್ದ ಟಾರ್ಚನ್ನು ಹಾಕಿಕೊಂಡು ಹೊರಟೆವು, ಮೊದಲೇ ಚಾರ್ಜ್ ಕಡಿಮೆ ಇತ್ತು ಇನ್ನು ಟಾರ್ಚ್ ಉಪಯೋಗಿಸುತ್ತಿದ್ದುದ್ದರಿಂದ ಇನ್ನೂ ಕಡಿಮೆ ಆಗುತ್ತಿತ್ತು. ೩ ಕಿ.ಮೀ ಹೋಗಬೇಕಿತ್ತು, ಅಲ್ಲಿವರೆಗೆ ಬಂದರೆ ಸಾಕಪ್ಪಾ ಎಂದು ಬೇಗ ಬೇಗ ಹೆಜ್ಜೆ ಹಾಕಿದೆವು.
ಸುತ್ತಲೂ ಕಾಡು, ಅಲ್ಲಲ್ಲಿ ಕಾಡು ಪ್ರಾಣಿಗಳ ಸದ್ದು, ಆನೆ ಕಾಡೆಮ್ಮೆಗಳ ಕೂಗು ನಮ್ಮ ಹೆಜ್ಜೆಯ ವೇಗವನ್ನು ಜಾಸ್ತಿ ಮಾಡುತ್ತಿದ್ದವು. ನಡುನಡುವೆ ಸೇತುವೆಗಳು, ಅಕಸ್ಮಾತ್ ಮಧ್ಯೆ ಇದ್ದಾಗ ಯಾವುದಾದರೂ ರೈಲ್ ಬರಬಹುದು ಎಂದು ಒಂದೇ ಸಮನೆ ಓಡಿಬಿಡುತ್ತಿದ್ದೆವು. ಅಂತೂ ೮.೩೦ಕ್ಕೆ ಯಡಕಮುರಿ ಸ್ಟೇಶನ್ ತಲುಪಿದೆವು.
ಸೌಜ ಇದ್ದವನು ೧೧.೩೦ಕ್ಕೆ ಗೂಡ್ಸ್ ಟ್ರೈನ್ ಇದೆಯಂತೆ, ಅಕಸ್ಮಾತ್ ನಿಲ್ಸಿದ್ರೆ ಅದ್ರಲ್ಲಿ ಹತ್ಕೊಂಡು ಹೋಗಿ ಅಂತ ಸ್ಟೇಶನ್ ಮಾಸ್ಟರ್ ಹೇಳ್ದ ಅಂದ.
ನಿಲ್ಲಿಸ್ದೆ ಇದ್ರೆ??
ನೀವೇ ನಿಲ್ಸಿ ಅಂತ ಅಂದೆ, ಆಸಾಮಿ ಯಾಕೋ ಒಪ್ಲಿಲ್ಲ.
ಸರಿ ಬಿಡು ಇನ್ನೇನ್ಮಾಡೋದು ಅಲ್ಲಿ
ವರೆಗೆ ಕಾಯೋಣ ಅಂತ ಕೇಕ್, ಬನ್, ಬ್ರೆಡ್ ತಿಂದು ಪ್ಲಾಟ್ಫಾರ್ಮ್ ಮೇಲೆ ಮಲಗಿಕೊಂಡ್ವಿ. ಪಕ್ಯ ಸೌಜ ಎಚ್ಚರ ಇದ್ರು. ಸುಮಾರು ೧೧.೪೦ಕ್ಕೆ ಗೂಡ್ಸ್ ಟ್ರೈನ್ ಸದ್ದಾಯ್ತು, ಎಲ್ಲ ಎದ್ದು ನಿಂತೆವು. ಬಂದ ಸ್ಪೀಡಿನಲ್ಲೇ ಹತ್ತಿ ಹೋಯಿತು (ಹಗಲು ಹೊತ್ತಾಗಿದ್ರೆ ಓಡಿ ಹೋಗಿ ಹತ್ತುತಿದ್ವೇ
ನೋ ಆದ್ರೆ ರಾತ್ರಿ).
ಥತ್ತೇರಿಕೆ ಅಂದು ಮತ್ತೆ ಪ್ಲಾಟ್ಫಾರ್ಮ್ ಮೇಲೆ ಬಿದ್ವಿ, ಸೌಜ ಹೋಗಿ ಮತ್ತೆ ಕೇಳ್ಕೊಂಡು ಬಂದ.
ರಾತ್ರಿ ೧.೩೦ಕ್ಕೆ ಮತ್ತೊಂದು ಗೂಡ್ಸ್ ಟ್ರೈನ್ ಇದೆ ಅಂದ.ನಮಗೆ ಸುಸ್ತಾಗಿದ್ದಿದ್ರಿಂದ ನಾವು ಪಾಚ್ಕೊಂಡ್ವಿ, ಸೌಜ ಪಕ್ಯ ಜಾಗರಣೆ ಮಾಡ್ತಿದ್ರು.
೧.೩೦ಕ್ಕೆ ಬಂತು, ಆಗ್ಲೂ ನಿಲ್ಲಿಸ್ಲಿಲ್ಲ.
ಸ್ಟೇಶನ್ ಮಾಸ್ಟರ್ಗೆ ನಮ್ಮನ್ನ ನೋಡಿ ಸ್ವಲ್ಪ ಕರುಣೆ ಬಂತು ಅನ್ಸತ್ತೆ. ೩.೩೦ ಸುಮಾರಿಗೆ ಪ್ಯಾಸೆಂಜರ್ ಗಾಡಿ ಬರತ್ತೆ, ನಿಲ್ಲಿಸ್ತೀನಿ ಹತ್ಕೊಂಡು ಹೋಗಿ ಅಂದ.
ಅಂತೂ ತಲುಪ್ತೀವಿ ಅನ್ನೋ ಸಮಾಧಾನ ಆಯ್ತು.೪ಕ್ಕೆ ಬಂತು ಟ್ರೈನ್, ಹತ್ತಿದೆವು, ಟ್ರೈನ್ ತುಂಬಿ ಹೋಗಿತ್ತು, ಹೆಂಗೋ ಜಾಗ ಮಾಡ್ಕಂಡು ಕೆಳಗೆ ಕೂತ್ವಿ. ೫.೩೦ರ ಸುಮಾರಿಗೆ ಸಕಲೇಶಪುರಕ್ಕೆ ಬಂದ್ವಿ.
ಸರಿಯಾಗಿ ನಿದ್ರೆ ಇಲ್ಲದೆ ಎಲ್ಲರೂ ಸುಸ್ತಾಗಿದ್ವಿ.ಈಗ ಮತ್ತೊಂದು ಸಮಸ್ಯೆ ಶುರುವಾಯಿತು.
ವ್ಯಾನ್ ಡ್ರೈವರ್ಗೆ ಸುಬ್ರಮಣ್ಯಕ್ಕೆ ಹೋಗೋಕೆ ಹೇಳಿದ್ವಿ (ಟ್ರೆಕ್ ಮಾಡಿ ಅಲ್ಲಿಗೆ ಹೋಗಿ ಅಲ್ಲಿಂದ ವ್ಯಾನ್ ಹತ್ತಿ ಬೆಂಗಳೂರಿನ ಹಾದಿ ಹಿಡ್ಯಣ ಅಂತ).
ಡ್ರೈವರ್ಗೆ ಕಾಲ್ ಮಾಡಿದ್ರೆ ನಾಟ್ ರೀಚಬಲ್. ೧
೦ ನಿಮಿಷ ಪ್ರಯತ್ನ ಮಾಡಿದ್ವಿ ಆದ್ರೆ ಸಿಗ್ಲೇ ಇಲ್ಲ.ಅಯ್ಯೋ ಶಿವನೆ, ಈಗ ಮತ್ತೆ ಸುಬ್ರಮಣ್ಯಕ್ಕೆ ಹೋಗ್ಬೇಕು :(.
ಮತ್ತೆ ನಾನು ವೆಂಕ ಸಕಲೇಶಪುರ ಬಸ್ ನಿಲ್ದಾಣಕ್ಕೆ ಹೊರಟೆವು. ಬೆಳಗ್ಗೆ ೫.೪೫, ಇಬ್ರೂ ತೂಕಡಿಸುತ್ತಿದ್ವಿ.
ಬಸ್ ಹತ್ತಿ ೨ ಸೀಟ್ ಮುಂದೆ ಹೋದ ತಕ್ಷಣ ಇಬ್ಬರು ಆಸಾಮಿಗಳು ಕಂಠಪೂರ್ತಿ ಕುಡಿದು ಸೀಟ್ ಕೆಳಗೆ ಅಡ್ಡಡ್ಡ ಬಿದ್ದಿದ್ರು, ಅವರನ್ನ ದಾಟಿಕೊಂಡು ಹೋಗಿ ಹಿಂದ್ಗಡೆ ಸೀಟಲ್ಲಿ ಕೂತ್ವಿ.
ಶಿರಾಡಿ ಘಾಟ್ ಬರೋತಂಕ ಆರಾಮಾಗಿ ಹೋಗ್ತಿದ್ವಿ. ಆಮೇಲೆ ನೋಡಿ ಶುರುವಾಯ್ತು, ಕೆಳಗೆ ಕುಡಿದು ಬಿದ್ದವರಿಗೂ ನಮಗೂ ವ್ಯತ್ಯಾಸ ಇಲ್ಲವೇನೋ ಅನ್ನೋ ಹಾಗೆ ತೂರಾಡೋಕೆ ಶುರು ಮಾಡಿದ್ವಿ, ಕಾರಣ ರಸ್ತೆಯಲ್ಲಿದ್ದ ಗುಂಡಿಗಳು (ರಸ್ತೆಯಲ್ಲಿ ಗುಂಡಿ ಅನ್ನೋದ್ರ ಬದ್ಲು ಗುಂಡಿನೇ ರಸ್ತೆ ಆಗಿತ್ತು), ಪಾಪ ಬಸ್ಸಿನಲ್ಲಿದ್ದ ಹೆಂಗಸರು ಮಕ್ಕಳಪಾಡನ್ಥೂ ಹೇಳತೀರದು.
ನಾವಂತೂ ಗುಂಡ್ಯ ಹತ್ರ ಬರೋ ಹೊತ್ತಿಗೆ ಹಣ್ಣುಗಾಯಿ ನೀರುಗಾಯಿ ಆಗಿದ್ವಿ. ಆಮೇಲೆ ಯೋಚನೆ ಮಾಡಿದಾಗ ಗೊತ್ತಾಯ್ತು ಬಸ್ಸಿನಲ್ಲಿದ್ದ ಇಬ್ಬರು ಯಾಕೆ ಕುಡಿದಿದ್ರು ಅಂತ.
ಸುಬ್ರಮಣ್ಯಕ್ಕೆ ಹೋಗೋ ಯಾವ್ದಾದ್ರೂ ಬಸ್ ಬರತ್ತಾ ಅಂತ ಕಾಯ್ತಾ ಅಲ್ಲೇ ಸುತ್ತಾಡ್ತಿದ್ವಿ, ಸುಬ್ರಮಣ್ಯ ರಸ್ತೆ ಹಾದಿಯಲ್ಲಿ ಒಂದು ವ್ಯಾನ್ ಕಾಣಿಸ್ತು, ನಮ್ದೆ ಇರ್ಬೇಕು ಅಂದ್ಕೊಂಡು ಹೋಗಿ ನೋಡಿದ್ರೆ
ಅದೇ.
ಅಬ್ಬ ಅಂತೂ ನಮ್ಮ ಹುಡುಕಾಟ ಮುಗಿಯಿತಲ್ಲ ಇನ್ನು ಬೆಂಗಳೂರಿಗೆ ಆರಾಮಾಗಿ ಹೋಗಬಹುದು ಅಂತ ವ್ಯಾನ್ ಹತ್ತಿ ಕೂತ್ವಿ. ನಮಗೆ ನಿದ್ರೆ ಎಷ್ಟು ಬಂತು ಅಂದ್ರೆ ಶಿರಾಡಿ ಘಾಟ್ನ ಗುಂಡಿಗಳು ನಿದ್ರಾದೇವಿಯ ಮುಂದೆ ಸೋತು ಶರಣಾಗಿದ್ದವು.
ಸಕಲೇಶಪುರದಲ್ಲಿ ಉಳಿದವರನ್ನು ಹತ್ತಿಸಿಕೊಂಡು ಬೆಂಗಳೂರಿಗೆ ಬಂದಾಗ ಸದ್ಯ ತಲುಪಿದೆವಲ್ಲ ಅನ್ನೋ ಸಮಾಧಾನ
ಕಾಂಕ್ರೀಟ್ ಕಾಡಿನಲ್ಲಿ
ನಾ ಕೋಟ್ಯಾಧಿಪತಿಯಾಗಬೇಕೆಂದುಕೊಂಡ
ಸಾಫ್ಟ್ವೇರ್ ಇಂಜಿನಿಯರಾಗಿ ಸೇರಿಕೊಂಡ
ಇನ್ನೇನು ಕನಸು ನನಸಾಯಿತೆಂದುಕೊಂಡ
ದುಡಿದಿದರ್ಧದಷ್ಟನ್ನು ಟ್ಯಾಕ್ಸ್ ಕಟ್ಟಿದ
ಸ್ವಲ್ಪ ಬಾಡಿಗೆ ಮನೆಗೆ ಸುರಿದ
ಮಿಕ್ಕಿದ್ದರಲ್ಲಿ ಬೈಕ್ ತಗೊಂಡ
ಸ್ವಲ್ಪ ವರುಷದ ನಂತರ
ಸಂಬಳ ಜಾಸ್ತಿಯಾದ ನಂತರ
ಬೈಕನ್ನು ಎಸೆದ
ಲೋನನ್ನು ತೆಗೆದ
ಕಾರನ್ನು ಪಡೆದ
ಮದುವೆಯಾಯಿತು
ಹೆಂಡತಿ ಬಂದಳು
ಮನೆ ಬೇಕೆಂದಳು
ಅರವತ್ತಾದರೂ ಮುಗಿಯುವ ಹಾಗಿಲ್ಲ
ತೆಗೆದುಕೊಂಡ ಸಾಲ
Thursday, February 24, 2011
ಚುರ್ಮುರಿ ೫
೧೩) ಹೆಲ್ಮೆಟ್ ಹಾಕದೆ ಹೋಗುತ್ತಿದ್ದ ಅವನನ್ನು ಟ್ರಾಫಿಕ್ ಪೋಲಿಸ್ ತನ್ನ ಬೈಕ್ನಲ್ಲಿ ಹಿಂಬಾಲಿಸಿ ಧಮಕಿ ಹಾಕಲು ಶುರುಮಾಡಿದ ಆದರೆ ಸ್ವತಃ ಹೆಲ್ಮೆಟ್ ಹಾಕುವುದನ್ನು ಮರೆತಿದ್ದ.
೧೪) ಅಮ್ಮ ಸೆಕೆ ಅಂದರೂ ಏ.ಸಿ ಹಾಕದ ಮಗ ತನ್ನ ಗೆಳತಿ ಸೆಕೆ ಅಂದ ಕೂಡಲೇ ಏ.ಸಿಯ ಸ್ವಿಚ್ಚನ್ನು ೫ಕ್ಕೆ ತಿರುಗಿಸಿದ್ದ.
೧೫) ಸರ್ಕಾರಿ ಶಾಲೆಯಲ್ಲಿ ಓದಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಅವನು ಕೇವಲ ಸಾವಿರಗಳಲ್ಲಿ ತನ್ನ ವಿಧ್ಯಾಭ್ಯಾಸ ಮುಗಿದಾಗ ಉಬ್ಬಿಹೊಗಿದ್ದ, ತನ್ನ ಮಗನನ್ನು ಯು.ಕೆ.ಜಿಗೆ ಸೇರಿಸುವಾಗ
ಗೌಡ್ರು ರಂಗಣ್ಣ ಮತ್ತೆ ರಾಜಕೀಯ - ೩
ಪ್ಯಾಟೆಗೆ ಹೋಗಿದ್ದ ಗೌಡ್ರು ಬಸ್ಸಿಂದಿಳಿದು ಮನೆ ಕಡೆಗೆ ಹೆಜ್ಜೆ ಹಾಕ್ತಿದ್ರು. ಹಿಂದ್ಗಡೆಯಿಂದ ಸ್ಪೀಡಾಗಿ ಬಂದ ಸ್ಕಾರ್ಪಿಯೋ ಸಡನ್ ಆಗಿ ನಿಲ್ತು.
ಸ್ಕಾರ್ಪಿಯೋದಿಂದ ಇಳಿದ ರಂಗಣ್ಣನ ನೋಡಿ ಗೌಡ್ರು 'ಏನ್ಲಾ ರಂಗಣ್ಣ ಯಾರ್ದಲ ಗಾಡಿ?'
ನಂದೇ ಗೌಡ್ರೆ, ಇವತ್ತು ಹೊಸದು ತಂದೆ, ಹೆಂಗಿದೆ ಗೌಡ್ರೆ?
ಸಕತ್ತಾಗಿದೆ ಕಣ್ಲ. ಅದೆಲ್ಲಿಂದ ಇಷ್ಟು ಕಾಸು ಬಂತ್ಲಾ?
ಅದೇ ಗೌಡ್ರೆ, ರೆಸಾರ್ಟ್ನಿಂದ ದುಡಿದಿದ್ದು.
ಆಗ್ಬಹುದು ಬುಡ್ಲ, ಬಲ್ಬೇಗ ಅವ್ರಿವ್ರನ್ನ ಏಮಾರ್ಸಿ ಎಲ್ಲ ಮಾಡ್ಕಂಬಿಟ್ಟೆ.
ದೊಡ್ಡ ಮೀನು ಬದ್ಕ್ಬೇಕಂದ್ರೆ ಸಣ್ಣ ಮೀನು ಸಾಯ್ಲೆಬೇಕಲ್ವ ಗೌಡ್ರೆ? ಅದಿರ್ಲಿ, ಸೋಮನಹಳ್ಳಿ ಹತ್ರ ಒಂದು ೨೦೦ ಎಕ್ರೆ ಜಾಗ ಕೊಂಡ್ಕಂಡೆ ಗೌಡ್ರೆ.
ಎಂಥಕ್ಲ ಅಷ್ಟೊಂದು?? ಇಲ್ಲಿಂದ ಅಲ್ಲಿ ಹೋಗಿ ಜಮೀನು ಹೆಂಗೆ ನೋಡ್ಕೋತೀಯಾ? ತೋಟದಲ್ಲಿ ಕೆಲಸ ಮಾಡಿಸ್ಲಿಕ್ಕೆ ಜನ ಹೆಂಗೆ ಹೊಂದುಸ್ತೀಯ?
ತೋಟ ಗೀಟ ಏನು ಇಲ್ಲ ಗೌಡ್ರೆ, ಸರ್ಕಾರದವ್ರು ಗಣಿಗೆ ಅನುಮತಿ ಕೊಟ್ಟಿಲ್ವ, ನಾನೂ ಗಣಿ ವ್ಯವಹಾರ ಮಾಡುವ ಅಂತ.
ಸರಿಹೋಯ್ತು ಬುಡ್ಲ, ಅಲ್ಲ ಕಣ್ಲ ಅನ್ನ ಹಾಕೋ ಜಮೀನನ್ನೇ ಕನ್ನ ಮಾಡೋಕೆ ಹೊಂಟೀಯಲ್ಲೋ, ನಾಳೆ ನಿನ್ನ ಮಕ್ಳಿಗೆ ಅನ್ನಕ್ಕೆ ಬರ ಬಂದ್ರೆ ಅದಿರು ತಿನ್ಸ್ತೀಯೇನ್ಲಾ, ಮನ್ಸಂಗೆ ಆಸೆ ಇರ್ಬೇಕು ಕಣ್ಲಾ, ದುರಾಸೆ ಇರ್ಬಾರ್ದು.
ಅಯ್ಯೋ ಬಿಡಿ ಗೌಡ್ರೆ, ನಂದಕ್ಕೆ ಹಿಂಗಂತೀರಾ ಬಳ್ಳಾರಿ ಕಡೆ ಹೋಗಿ ನೋಡಿ ಒಂದ್ಸಲ.
ನಿಂದ್ಯಾಕ್ಲ ಬಿಡ್ಬೇಕು, ಇವಾಗ ೨೦೦ ಎಕ್ರೆ ತಗೊಂಡೋನು ನಾಳೆ ೨೦೦೦ ಎಕ್ರೆ ತಗೋತೀಯಾ. ಆಮೇಲೆ ನಾವೆಲ್ಲಾ ಎಲ್ಲಿ ಹೋಗ್ಬೇಕು.
ಏನಂದೆ ಬಳ್ಳಾರಿ ಅಂದ್ಯಲ್ಲ ಅಲ್ಲಿ ವಿಸ್ಯ ಏನು ಅಂತ ಹೇಳದು. ಅಲ್ಲಿ ಗಣಿ ನಡೆಸೋವ್ರೆಲ್ಲ 'ಭೂಮಿತಾಯಿಗೆ ಭೂಮಿ ಅಂದ್ರೆ ಏನು' ಅನ್ನೋ ಪರಿಸ್ಥಿತಿನ ಸೃಷ್ಟಿ ಮಾಡಿದ್ದಾರೆ.
ನೋಡಿದ್ರಾ ಗೌಡ್ರೆ, ನಾವು ಸ್ವಲ್ಪ ಮಾಡ್ತೀವಿ ಅಂದಿದ್ದಕ್ಕೆ ನೀವು ಹಂಗೆ ಎಗ್ರಾಡ್ತಿದ್ರಿ.
ಅದೇ ಕಣ್ಲಾ ನಾನು ಹೇಳ್ತಿರೋದು, ನದಿ ಹೋಗಿ ಹೆಂಗೆ ಸಮುದ್ರ ಸೇರುತ್ತೋ ಹಾಗೆ ನೀನು ದೊಡ್ಡದಾಗಿ ನಡೆಸೋರನ್ನ ಸೇರ್ಕೊಂಡು ದಂಧೆ ನಡುಸ್ತೀಯ ಅಂತ. ನಿಮ್ಗೆಲ್ಲ ಯಾವನು ಬುದ್ಧಿ ಹೇಳೋಕಾಗತ್ತೆ, ಕೆಟ್ಮೇಲೆ ಬುದ್ಧಿ ಬರೋದು, ನಾನಿನ್ನು ಬರ್ತೀನಿ ಕಣ್ಲ. ಅದೇನೇನು ಮಾಡ್ತೀರಾ ನೋಡ್ತೀನಿ ಅಂತ ಗೌಡ್ರು ಮನೆ ಕಡೆ ಹೆಜ್ಜೆ ಹಾಕಿದ್ರು.
Monday, February 14, 2011
ಸಾಕಪ್ಪಾ ಸಾಕು
ಇಲ್ಲ ಅಮ್ಮ ನಾನು ಬರಲ್ಲ, ಬೆಂಗಳೂರಿಂದ ಬಂದು ಒಂದೆರಡು ದಿನ ಆರಾಮಾಗಿ ಇರಣ ಅಂದ್ರೆ ನೀನೊಳ್ಳೆ ಯಾವಾಗ್ಲೂ ಮದ್ವೆ, ಸಾವು, ತಿಥಿ ಅಂತ ಕರೀತಿಯಲ್ಲ.
ಹೂಂ ಕಣಪ್ಪ ಬರ್ಲೇಬೇಕು ಅವ್ರು ನಿಂದಕ್ಕೆ ಬರೋದು ಬೇಡ್ವ?
'ಏನಕ್ಕೆ, ತಿಥಿಗಾ?'
ನಿಂದೆಲ್ಲಿ ತಿಥಿ ಆಗತ್ತೆ ಯಾರದಾದ್ರೂ ತಿಥಿ ಮಾಡ್ತೀಯ, ಕಥೆ ಎಲ್ಲ ಬೇಡ ಈಗ ಸುಮ್ನೆ ಹೊರಡು.
ನಂಗಾಗಲ್ಲ.
ಹಾಗಿದ್ರೆ ಅಡಿಗೆ ನೀನೆ ಮಾಡಿ ಊಟ ಮಾಡಿ ಅಜ್ಜಿಗೆ ಬಡಿಸಿ ಇಲ್ಲೇ ಇರು.
ಯಾಕೋ ಎಡವಟ್ಟಾಗ್ತಿದೆ ಅನ್ನಿಸ್ತು. ಬರ್ತೀನಿ ಅಂತ ಹೊರಟೆ.
ಕಲ್ಯಾಣ ಮಂಟಪದ ಹತ್ತಿರ ಹೋದ್ರೆ, ಇಂಥ ಕುಟುಂಬದವರಿಂದ ಸ್ವಾಗತ ಅನ್ನೋ ಬೋರ್ಡ್ ಇಲ್ಲ :(
ಏನಮ್ಮ ಇದು ಅಂದೆ.
ನಿಂಗೇನಕ್ಕೆ ಅದು, ಮದ್ವೆಗೆ ಬರ್ತಿದೀಯ. ತೆಪ್ಪಗೆ ಕೂತು ವಿಶ್ ಮಾಡಿ ಊಟ ಮಾಡಿ ಹೊರಡು.
ಯಾಕೋ ಏನೋ ಸರಿ ಇಲ್ಲ ಅಂದ್ಕಂಡು ಕಲ್ಯಾಣ ಮಂಟಪದ ಒಳಗೆ ಹೆಜ್ಜೆ ಹಾಕಿದೆ.
ನೋಡಿದ ತಕ್ಷಣ ಶಾಕ್ ಹೊಡೆದ ಹಾಗಾಯ್ತು. ಎಲ್ಲೆಲ್ಲೂ ಜನ, ೧ ಮದ್ವೆ ಅಂದ್ಕೊಂಡು ಹೋದ್ರೆ ೧೦ ಮದ್ವೆ. ಸಾಮೂಹಿಕ ಮದುವೆ :(. ಊಟ ಸಿಗತ್ತೋ ಇಲ್ವೋ ಅನ್ನೋ ಚಿಂತೆ ಬೇರೆ.
ಭಯಂಕರ ಸಿಟ್ಟು ಬಂತು. ನಮ್ಮಮ್ಮಂಗೆ ಕ್ಲಾಸ್ ತಗೋಬೇಕು ಅಂತ ಪಕ್ಕದಲ್ಲಿ ತಿರುಗಿದ್ರೆ ಅಮ್ಮ ಇಲ್ಲ.
ಇನ್ನು ಮುಗಿತು, ನನ್ನ ಜೊತೆ ಯಾರೂ ಇಲ್ಲ, ನಮ್ಮಮ್ಮ ಇನ್ನು ನನ್ನ ಕೈಗೆ ಸಿಗೋದು ಸಂಜೆನೇ. ನಾನು ಬಂದಿರೋ ಮದ್ವೆ ಯಾವ ಮಂಟಪದಲ್ಲಿದೆ ಅಂತ ಗೊತ್ತಿಲ್ಲ. ವಿಧಿಯಿಲ್ಲದೇ ಖಾಲಿ ಇರುವ ಛೇರ್ ಹುಡುಕಲು ಹೊರಟೆ.
೧೦ ನಿಮಿಷದ ಒದ್ದಾಟದ ಬಳಿಕ ಒಂದು ಛೇರ್ ಸಿಕ್ತು. ೫ ಮಂಟಪ ಒಂದು ದಿಕ್ಕು, ಉಳಿದ ಐದು ಮತ್ತೊಂದು ದಿಕ್ಕು. ನಾನು ಯಾವ ಮದ್ವೆಗೆ ಮುಖ ಮಾಡಿ ಕೂತಿದ್ನೋ??
ಯಾರಾದ್ರೂ ಪರಿಚಯದವರು ಇದ್ದಾರ ಅಂತ ಸುತ್ತಲೂ ಕಣ್ಣಾಡಿಸಿದೆ, ಉಹೂಂ ಯಾರೂ ಕಾಣ್ಲಿಲ್ಲ. ಏನಪ್ಪಾ ಮಾಡೋದು ಅಂತ ಅಂದ್ಕೊಂಡು ಎದ್ರುಗಡೆ ನಡೀತಿದ್ದ ಮದ್ವೆ ನೋಡ್ತಾ ಕೂತೆ.
ಒಂದು ಮಂಟಪ ಕಾಲಿ, ಇನ್ನೊಂದ್ರಲ್ಲಿ ಆಗ್ಲೇ ಮಹೂರ್ತ ಮುಗಿದಿದೆ, ಹೆಣ್ಣು ಗಂಡು ಎದ್ದೇಳ್ತಿದ್ದಾರೆ. ಮತ್ತೊಂದ್ರಲ್ಲಿ ಸೂರ್ಯನಮಸ್ಕಾರ ಮಾಡಿಸಲಿಕ್ಕೆ ನವಜೋಡಿನ ಕರ್ಕೊಂಡು ಹೋಗ್ತಿದ್ದಾರೆ. ಮಗದೊಂದ್ರಲ್ಲಿ ಗಂಡು, ಹೆಣ್ಣಿಗೆ ಕಾಯ್ತಾ ಕೂತಿದ್ದಾನೆ, ಆ ಕಡೆಯಿಂದ ಹುಡುಗಿಯ ಸೋದರಮಾವ ಹೆಣ್ಣನ್ನ ಕರ್ಕೊಂಡು ಬರ್ತಿದ್ದಾನೆ.
ಅಷ್ಟೊತ್ತಿಗೆ ನನ್ನ ಭುಜನ ಹಿಂದ್ಗಡೆಯಿಂದ ಯಾರೋ ಅಲ್ಲಾಡಿಸಿದ ಹಾಗಾಯಿತು. ತಿರುಗಿ ನೋಡಿದ್ರೆ ನಮ್ಮ ಸಂಬಂಧಿಕರೊಬ್ರು 'ಏನು ಚೇತನ್, ಆರಾಮ?' ಅಂದ್ರು.
ಎಲ್ಲ ಕುಶಲೋಪರಿ ಆದ್ಮೇಲೆ ಅವ್ರು 'ಯಾವ ಮದ್ವೆಗೆ ಬಂದಿರೋದು?'.
ಬೆಳ್ಗೆ ಬರೋವಾಗ ಮದ್ವೆ ಕಾಗದ ನೋಡ್ಕೊಂಡು ಬಂದಿದ್ರಿಂದ ಇಂಥೋರ ಮದ್ವೆ ಅಂದೆ.
ಓ ನಾನೂ ಅದ್ಕೆ ಬಂದಿರೋದು, ಯಾವ ಮಂಟಪದಲ್ಲಿ ಇದೆ?
ಯಾವ ಪ್ರಶ್ನೆ ನನ್ನನ್ನ ಅವ್ರು ಕೇಳ್ಬಾರದಿತ್ತೋ ಅದನ್ನೇ ನನಗೆ ಕೇಳಿದ್ರು. ಈಗ ನನಗೆ ಧರ್ಮಸಂಕಟ. ಗೊತ್ತಿಲ್ಲ ಅಂದ್ರೆ ಮರ್ಯಾದೆ ಪ್ರಶ್ನೆ.
ಹಾಗೆ ಎಲ್ಲ ಮಂಟಪದ ಕಡೆ ಕಣ್ಣು ಹಾಯಿಸಿದೆ. ಒಂದು ಮಂಟಪದ ಹತ್ರ ನಮ್ಮ ಇನ್ನೊಬ್ರು ಸಂಬಂಧಿಕರೊಬ್ರು ಕಾಣ್ಸಿದ್ರು, ಅಬ್ಬ ಅಂತೂ ಬಚಾವ್ ಅಂತ್ಹೇಳಿ, ಅವರನ್ನ ತೋರಿಸಿ ಅದೇ ನೋಡಿ ಅಂದೆ.
ಇಷ್ಟೊಂದು ಮದ್ವೇನಲ್ಲಿ ಯಾವ್ದು ಅಂತ ಹುಡ್ಕದು ಬಾರೀ ಕಷ್ಟ, ನೀವು ಸಿಕ್ಕಿದ್ದು ಒಳ್ಳೆದಾಯ್ತು, ಮುಯ್ಯಿ ಕೊಟ್ಟು ಬರ್ತೀನಿ ತುಂಬಾ ಥ್ಯಾಕ್ಸ್ ಅಂದು ಹೊರಟ್ರು.
ಅಬ್ಬ ಅಂತೂ ಒಂದು ಸಮಸ್ಯೆ ಮುಗಿತು ಅಂತ ಕೂತ್ಕೊಂಡೆ.
ಸ್ವಲ್ಪ ಹೊತ್ತಾದ್ಮೇಲೆ ಒಂದು ಮಂಟಪದ ಹತ್ರ ಅದೇನೋ ಗಲಾಟೆ ನಡೀತಿತ್ತು. ಅದೇನು ನೋಡಣ ಅಂತ ಕಷ್ಟಪಟ್ಟು ಮಂಟಪದ ಕಡೆ ಹೋದೆ. ಮದ್ವೆ ಗಂಡು ಕ್ಯಾಮೆರಾದವ್ನನ್ನ ಹಿಡ್ಕಂಡು ತದುಕ್ತಿದ್ದ.
ವಿಷಯ ಏನಂದ್ರೆ ಕ್ಯಾಮೆರಾದವ್ನು ಇವರ ಮದ್ವೆ ಫೋಟೋ ತೆಗೆಯೋದ್ರ ಬದ್ಲು ಪಕ್ಕದಲ್ಲಿ ನಡೀತಿದ್ದ ಮದ್ವೆ ಫೋಟೋ ತೆಗೀತಿದ್ನಂತೆ. 'ಮಗನೆ ಕಾಸು ಕೊಟ್ಟಿರೋನು ನಾನು, ಅವ್ನ್ದ್ಯಾವಂದೋ ಫೋಟೋ ತೆಗಿತಿದೀಯಲ್ಲೋ' ಅಂತ ಗಂಡು ಅಂದಿದಕ್ಕೆ 'ಸಾರ್ ಅವ್ನು ನನ್ನ ದೋಸ್ತ್, ಪಾಪ ಅವ್ನು ಕ್ಯಾಮೆರಾದರ್ನ ಕರ್ಸಿಲ್ಲ ಅದ್ಕೆ ನಂಗೆ ಹೇಳ್ದಾ' ಅಂತ ಕ್ಯಾಮೆರಾದವ್ನು ಹೇಳ್ತಿದ್ದ.
ಪಕ್ಕದಲ್ಲಿರೋರು ಜಗ್ಳ ಬಿಡ್ಸೋಕೆ ಭಾರೀ ಪ್ರಯತ್ನ ಮಾಡ್ತಿದ್ರು, ಮದ್ವೆ ಗಂಡು ತುಂಬಾ ಬಲಶಾಲಿ ಇದ್ದಿದ್ರಿಂದ ಇವರ ಕೈಲಿ ಆಗ್ತಿರ್ಲಿಲ್ಲ, ಅಂತೂ ಹೆಂಗೋ ತುಂಬಾ ಜನ ಸೇರಿ ಜಗ್ಳ ನಿಲ್ಸಿದ್ರು. ಮತ್ತೆ ಮಾಮೂಲಿನಂತೆ ಮದ್ವೆ ಕಾರ್ಯಕ್ರಮ ನಡೀತು.
ಈ ಕಥೆ ಮುಗಿಯೋದ್ರೊಳಗೆ ಇನ್ನೊಂದು ಮಂಟಪದಲ್ಲಿ ಏನೋ ಗಲಾಟೆ ಶುರುವಾಯ್ತು. ನಂಗೆ ಮಾಡೋಕೆ ಬೇರೆ ಕೆಲಸ ಇರ್ಲಿಲ್ವಲ್ಲ ಅದೇನು ನೋಡಣ ಅಂತ ಅಲ್ಲಿಗೆ ಹೋದೆ. ಹುಡುಗಿ ಅಪ್ಪ ಪೂಜಾರಿ ಎಲ್ಲಿ ಅಂತ ಕೂಗ್ತಿದ್ರು. ಸ್ವಲ್ಪ ಹೊತ್ತಾದ್ಮೇಲೆ ಪೂಜಾರಿ ಬಂದ್ರು.
ಪಾಪ ಆ ವಯ್ಯಂಗೆ ಅರ್ಜೆಂಟಾಗಿತ್ತು, ಹೋಗಿ ವಾಪಸ್ ಬರೋದ್ರೊಳಗೆ ಮಿಕ್ಕಿದ ಜೋಡಿಗಳು ಅವ್ರ್ಗಳ ಮಂಟಪದಲ್ಲಿ ಕೂತಿದ್ರು, ಇವ್ರಿಗೆ ಕನ್ಫ್ಯೂಶನ್ ಆಗಿ ಯಾವ್ದಕ್ಕೋ ಅದೇ ಮದ್ವೆ ಅಂತ ಹೋಗಿ ಕೂತಿದ್ದಾರೆ, ಅದನ್ನ ನೋಡಿದ ಒಬ್ರು ಈ ಮದ್ವೆ ಹುಡುಗಿ ಅಪ್ಪಂಗೆ ಹೇಳಿದ್ದಾರೆ, ಪೂಜಾರಿ ಬಂದಾದ್ಮೇಲೆ ಮುಹೂರ್ತದ ಟೈಮ್ ಮುಗೀತಿದೆ ನೀವು ನೋಡಿದ್ರೆ ಅಂತ ಏನೇನೋ ಕ್ಯಾಕರಿಸಿ ಉಗೀತಿದ್ರು ಆಮೇಲೆ ಎಲ್ಲ ಸಮಾಧಾನ ಮಾಡಿ ಕೂರ್ಸಿದ್ರು, ಮದ್ವೆ ಮುಂದುವರೆಯಿತು.
ಸ್ವಲ್ಪ ಹೊತ್ತಾದ್ಮೇಲೆ ಯಾರೋ ಊಟ ಅಂದ್ರು ನೋಡಿ, ಬೆಂಗಳೂರಿನಲ್ಲಿರೋ ಬೀದಿ ನಾಯಿಗಳೆಲ್ಲ ಸಣ್ಣ ಪಾಪುನ ಅಟ್ಟಿಸಿಕೊಂಡು ಹೋಗಿ ಕಿತ್ತು ತಿನ್ನೋ ಹಾಗೆ, ಸಿಗ್ನಲ್ ಸಿಕ್ಕ ಕೂಡಲೇ ಎಲ್ಲ ಗಾಡಿಗಳು ಕಿತ್ಕೊಂಡು ನುಗ್ಗೋ ಹಾಗೆ, ಖಾಲಿ ಬಿ,ಎಂ,ಟಿ, ಸಿ ಬಸ್ಸಿಗೆ ಜನ ತೂರಿ ಕೊಳ್ಳೋ ಹಾಗೆ, ಜನಗಳೆಲ್ಲ ಊಟದ ಹಾಲಿಗೆ ನುಗ್ತಿದ್ರು ಊಟ ಸೆಳೆಯೋಕೆ. ನಾನು ಇನ್ನು ಕೂತರೆ ಸಂಕಷ್ಟಿನೇ ಅಂದ್ಕೊಂಡು ನುಗ್ಗಿದೆ, ಹಾಸ್ಟೆಲ್ನಲ್ಲಿದ್ದ ಅನುಭವ ಆಗ ನೆರವಿಗೆ ಬಂತು ಅಂತೂ ಒಂದು ಸೀಟ್ ಸಿಕ್ತು.
ನನ್ನ ಸೀಟ್ ಹಿಂದೆ ತಿರುಗಿ ನೋಡಿದ್ರೆ ಮುಂದಿನ ಹಂತಿನ ಊಟಕ್ಕೆ ಆಗ್ಲೇ ಬಂದು ನಿಂತಿದ್ರು. ಯಾಕಪ್ಪ ಬೇಕು ಈ ಕರ್ಮ, ಸುಮ್ನೆ ಊರಲ್ಲಿದ್ದಿದ್ದರೆ ನೆಮ್ಮದಿಯಿಂದ ಊಟ ಮಾಡ್ಬಹುದಿತ್ತು ಅಂತ ವಿಧಿ ಇಲ್ಲದೆ ಬಾಳೆ ಎಲೆಗೆ ಕೈ ಹಾಕಿದೆ, ಹಾಗೆ ತಿನ್ನೋವಾಗ ಪಕ್ಕದವನನ್ನ ನೋಡಿದೆ, ಆಸಾಮಿ ಗಬ ಗಬ ಅಂತ ತಿನ್ತವ್ನೆ.
ಇದ್ಯಾಕ್ರೀ ಹಿಂಗೆ ತಿನ್ತಿದೀರಾ? ಊರಿಗೆ ಹೋಗೋಕೆ ಬಸ್ ಸಿಗಲ್ವ?.
ಇಲ್ರೀ, ಇನ್ನ ೨ ಮದ್ವೆ ಊಟ ಮಾಡ್ಬೇಕು.
ಆಂ!!!!!!!!!
ಈಗಾಗ್ಲೇ ತುಂಬಾ ಐಟಂ ಬಂದು ಹೋಗಿದೆ, ಆಸಾಮಿ ಕಿತ್ಕಂಡು (ಸಕತ್ತಾಗಿ) ತಿಂತಿದ್ದ, ಇನ್ನ ೨ ಮದ್ವೆ ಅನ್ತಾನಲಪ್ಪ, ಅದೇನು ಸರ್ಯಾಗಿ ವಿಚಾರ್ಸಣ ಅಂದ್ಕಂಡು....
ಇನ್ಯಾವ ಕಡೆ ಹೋಗ್ಬೇಕ್ರೀ?
ಎಲ್ಲೂ ಇಲ್ರೀ, ಇದೇ ಕಲ್ಯಾಣ ಮಂಟಪದಲ್ಲೇ, ನಮ್ಗೆ ಪರಿಚಯ ಇರೋರ ೩ ಮದ್ವೆ ಇದೆ ಅದ್ಕೆ.
ಅಲ್ರೀ ೧ ಮಂಟಪಕ್ಕೆ ಬಂದಿದೀರಾ ಅಂದ್ರೆ ೧ ಸಲ ಊಟ ಮಾಡಿದ್ರೆ ಆಯ್ತಪ್ಪ.
ಹಂಗೆ ಹೆಂಗಾಗತ್ತೆ, ಅವರೆಲ್ಲರೂ ನಮ್ಮನೆ ಮದ್ವೆಗೆ ಬಂದಿಲ್ವಾ, ಜೊತೆಗೆ ಎಲ್ರೂ ಸಿಕ್ಕಿ ಊಟ ಮಾಡ್ಕೊಂಡು ಹೋಗಿ ಅಂದಿದ್ದಾರೆ, ಮಾಡ್ಲಿಲ್ಲ ಅಂದ್ರೆ ಅವ್ರಿಗೆ ಬೇಜಾರಾಗತ್ತಲ್ವ?
ನನಗಿನ್ನೇನೂ ಹೇಳಲು ತೋಚದೆ ಹೌದು ಹೌದು ಅಂತ ತಲೆ ಅಲ್ಲಾಡಿಸಿ ಊಟ ಮುಗಿಸಿ ಎದ್ದೆ.
ಮಂಟಪದ ಹತ್ತಿರ ಹೋಗಿ ಕೂತೆ, ಅರ್ಧ ಗಂಟೆ ಆದ್ಮೇಲೆ ನಮ್ಮಮ್ಮ ಮೊದ್ಲು ಸಿಕ್ಕಿದ ಸಂಬಂಧಿಕರ ಜೊತೆ ಬಂದ್ರು. ಅವ್ರ್ಯಾಕೋ ನನ್ನನ್ನ ಗುರಾಯ್ಸಿದ ಹಾಗೆ ಕಾಣ್ಸ್ತಿತ್ತು.
ಹೊರಡಣ್ವ ಅಮ್ಮ?
ಹೂಂ ಹೊರಡಣ, ಅದಿರ್ಲಿ, ಅಲ್ಲ ಕಣೋ ಇವ್ರೇನೋ ಯಾವ ಮದ್ವೆ ತೋರ್ಸು ಅಂತ ಕೇಳಿದ್ರೆ ಬೇರೆ ಯಾವ್ದೋ ತೋರ್ಸಿದ್ಯಂತಲ್ಲೋ, ಪಾಪ ಅಲ್ಲೂ ಮುಯ್ಯಿ ಕೊಟ್ಟು ಬಂದ್ರು ಆಮೇಲೆ ನಾನು ಹೇಳಿದ್ಮೇಲೆ ಮತ್ತೆ ಕೊಟ್ಟು ಬಂದಿದ್ದಾರೆ.
ನೋಡಮ್ಮ, ಮದ್ವೆಗೆ ಬರಲ್ಲ ಅಂದೆ ಆದ್ರೂ ನೀನೇ ಬಲವಂತ ಮಾಡಿ ಕರ್ಕೊಂಡು ಬಂದೆ, ಈಗ ನೋಡು ಹಿಂಗೆ.
ಹೋಗ್ಲಿ ಬಿಡು ಈಗೆಲ್ಲ ಸರಿ ಆಯ್ತಲ್ಲ, ಮುಂದೆ ಯಾವ್ದೇ ಸಾಮೂಹಿಕ ಮದ್ವೆ ಇದ್ರೂ ನಿನ್ನನ್ನ ಕರೆಯಲ್ಲ.
ಹಂಗೆ ಬಾ ದಾರಿಗೆ ಮತ್ತೆ ಅಂದು ಊರಿನ ಕಡೆ ಹೋಗುವ ಬಸ್ಸಿನ ಹಾದಿ ಹಿಡಿದೆವು
ಚುರ್ಮುರಿ ೪
೧೧) ಅವಳು ಅರ್ಧ ಗಂಟೆ ಮೇಕಪ್ ಮಾಡಿಕೊಂಡಾದ ಮೇಲೆ ಬುರ್ಖಾ ಹಾಕಿಕೊಂಡು ಕೆಲಸಕ್ಕೆ ಹೊರಟಳು.
೧೨) ತನ್ನ ಜೀವನವೇ ಛಿದ್ರ ಛಿದ್ರವಾಗಿರುವಾಗ ತನ್ನ ಮನೆಯಲ್ಲಿರುವ ಒಡೆದ ಕನ್ನಡಿಯಿಂದ ಮುಖವನ್ನು ನೋಡದೆ ಇರುವುದರಿಂದ ಆಗುವ ಲಾಭವಾದರೂ ಏನೆಂದು ಅವನು ಹೊಸ ಕನ್ನಡಿಯನ್ನು ತೆಗೆದುಕೊಳ್ಳಲಿಲ್ಲ.