Monday, November 25, 2013
ನಿಮ್ ಲೈಫ್: ಜಾಸ್ತಿ ಫಸ್ಟ್ ಹಾಫ್, ಚೂರೇ ಸೆಕಂಡ್ ಹಾಫ್! (ಹೀಗೊಂದು Flashback)
Sunday, November 17, 2013
ಬ್ಯಾ-ಸಾಯ - > ಕೆಲವೇ ಗಂಟೆಗಳ ಕಥೆ
ಭತ್ತ ಹಾಕೋಕೆ ಸರಿಯಾಗತ್ತೆ. ಕೆಂಪ ಮತ್ತೆ ಬಸವ ಎರಡೂ ಕಾಡು ಹತ್ತದೆ ಹಟ್ಟಿಯಲ್ಲೇ ಬಿದ್ಕಂಡಿವೆ ಆದ್ರೆ ಇವ್ನೇ ಪತ್ತೆ ಎಲ್ಲಿ ಹಾಳಾಗಿ ಹೋದಾ ಇವ್ನು, ನೆನ್ನೆ ಚೆನ್ನಾಗಿ ಮಳೆ ಬಂದಿದೆ , ಇವತ್ತೊಂದು ಸಾಲು ಹೂಡಿಬಿಟ್ರೆ ನಾಟಿ ಮಾಡಿ ಬಿಡಬಹುದಿತ್ತು ಅಂಥಾ ಗೌಡ್ರು ಚಾವಡಿಯ ಬಳಿ ಶತಪಥ ತಿರುಗ್ತಿದ್ರು. ಲೇ ಒಂದ್ಲೋಟ ಕಾಪಿ ತಾರೇ ಅಂಥಾ ಅಲ್ಲಿಂದ್ಲೇ ಕೂಗಿ ಹೇಳಿದ್ರು ಅವರ ಹೆಂಡತಿಗೆ.
ಆ ಜಿಟಿಜಿಟಿ ಮಳೆಯಲ್ಲೇ ಕೊಟ್ಟಿಗೆಯಿಂದ ಸೌದೆ ತಂದು ಹೊರಗಡೆ ಇದ್ದ ನೀರಿನ ಒಲೆಗೆ ಬೆಂಕಿ ಹಾಕಲು ಕೊಳಪೆ ಹಿಡಿದುಕೊಂಡು ಒಂದೇ ಸಮನೆ ಉಸಿರುಬಿಡುತ್ತಿದ್ದ ಲಕ್ಷ್ಮಿಗೆ ತನ್ನ ಗಂಡನ ಕೂಗು ಕೇಳಿಸಿ ಅಲ್ಲಿಂದ ಅಡಿಗೆ ಮನೆಗೆ ಹೆಜ್ಜೆ ಹಾಕುವಾಗ ಅಲ್ಲೇ ಒಲೆಯ ಬಳಿ ಬೂದಿಯ ಮೇಲೆ ಮಲಗಿ ಸುಖ ನಿದ್ರೆ ಅನುಭವಿಸುತ್ತಿದ್ದ ಕರಿಯನ ಬಾಲದ ಮೇಲೆ ಅವಳ ಕಾಲು ಅವಳಿಗರಿವಿಲ್ಲದಂತೆ ಸೋಕಿದಾಗ ಕಯ್ಯಯೋ ಅಂದು ಎದ್ದು ಕುಳಿತು ತನ್ನ ಒಡತಿಯಾದ್ದರಿಂದ ಹಾಗೆ ಸುಮ್ಮನೆ ಬಾಲವನ್ನು ಮುದುಡಿಕೊಂಡು ಮತ್ತೆ ಬೂದಿಯ ಮೇಲೆ ಮೈ ಚಾಚಿತು.
ಹಿಂದಿನ ಒಲೆಯಲ್ಲಿ ಇಟ್ಟಿದ್ದ ಕಾಪಿ ಪಾತ್ರೆಯನ್ನ ಮುಂದಿನ ಒಲೆಗಿರಿಸಿ ಕಾದ ಬಳಿಕ ಲೋಟಕ್ಕೆ ಸುರಿದುಕೊಂಡು ಚಾವಡಿಯ ಬಳಿ ಹೋದಳು. ಕಾಪಿಯನ್ನ ಗಂಡನ ಕೈಗಿರಿಸಿ ಹಿಂದಿರುವಾಗ ಗೌಡ್ರು, ಎಲ್ಲಿ ಸತ್ನೇ ಇವ್ನು? ನೆನ್ನೆ ಸರ್ಯಾಗಿ ಹೇಳಿದ್ಯಾ ಇಲ್ವಾ?. ಹೇಳಿದ್ದೆ, ಬರ್ತೀನಿ ಅಂದಿದ್ದ. ಎಂಥ ಬರೋದು, ೯:೩೦ ಆಗ್ತಾ ಬಂತು, ಇಷ್ಟೊತ್ತಿಗೆ ಬೇಸಾಯ ಮಾಡಿ ಎತ್ಗಳ್ನ ಮೇಯಕ್ಕೆ ಬಿಡಬೇಕಾಗಿತ್ತು. ಮನೆಹಾಳು ಮಾಡೋಕೆ ಇರೋದು ಇವು ಅಂಥಾ ಕಾಪಿಯನ್ನ ಕುಡೀತಾ ಕೂತ್ರು.
ಬರ್ಲಿ ನನ್ಮಗಾ ಈ ವಾರ ಬಟ್ವಾಡೆ ಕೊಡದೆ ಎಲ್ಲದನ್ನೂ ಮುರ್ಕಂಡ್ರೆ ಬಡ್ಡಿಮಗಂಗೆ ಆಗ ಬುದ್ದಿ ಬರತ್ತೆ, ಕೇಳ್ದಾಗೆಲ್ಲಾ ಸಾಲ ಕೊಟ್ಟು ಕೊಟ್ಟು ಈಗ ಕೊಬ್ಬಿ ಕೂತಿದ್ದಾರೆ, ಸೊಸೈಟಿ ಅಕ್ಕಿ ಬೇರೆ ಚೆನ್ನಾಗಿ ಸಿಕ್ಬಿಟ್ಟಿದೆ, ಈ ಸರ್ಕಾರ್ದವ್ರಿಗೆ ಮೆಟ್ನಲ್ಲಿ ಹೊಡೀಬೇಕು. ಗೌಡನ ಮನೆ ಹಾಳಾದ್ರೆ ಹಾಳಾಗ್ಲಿ ನಂಗೇನು ಅಂಥಾ ಸುಖವಾಗಿ ತಿಂದು ತಿರುಗ್ತಾವ್ರೆ. ಕಾಪಿ ಕುಡಿಯುತ್ತಿದ್ದ ಗೌಡರ ಮನದಲ್ಲಿ ಅಸಂಖ್ಯ ಪ್ರಶ್ನೆಗಳು, ಬೈಗುಳಗಳು ಹಾದುಹೋಗುತ್ತಿದ್ದವು.
ಅಮ್ಮೋರೆ? ಕೊಳಪೆ ಊದುತ್ತಿದ್ದ ಲಕ್ಷ್ಮಿ ಮಂಜನ ಸ್ವರ ಕೇಳಿ ಹಿಂದಕ್ಕೆ ತಿರುಗಿದಳು. ಎಂಥದ ಮಾರಾಯಾ ನೀನು? ಅಲ್ನೋಡಿದ್ರೆ ಗೌಡ್ರು ಕ್ಯಾಕರಿಸಿ ಉಗೀತಿದ್ದಾರೆ ನೀನು ಬಂದಿಲ್ಲ ಅಂಥಾ ಇಲ್ಲಿ ನೋಡಿದ್ರೆ ಹಿಂದ್ಗಡೆ ಬಂದಿದೀಯಾ. ಗೌಡ್ರೆನಾದ್ರೂ ನಿನ್ನನ್ ನೋಡಿದ್ರೆ ಕೊಲೆ ಮಾಡ್ತಾರೆ! ಯಾವ ಭಾವವನ್ನೂ ಪ್ರದರ್ಶಿಸದೆ ಹೇಳಿದಳು ಲಕ್ಷ್ಮಿ. ಹಲ್ಕಿರಿದು ನಿಂತಿದ್ದ ಮಂಜ (ಗೌಡ್ರು ಹಿಂದ್ಗಡೆ ಬರೋದು ಕಡಿಮೆ ಹಾಗಾಗಿ ಸಿಕ್ಕಿಕೊಳ್ಳುವ ಸಂಭವವೂ ಕಡಿಮೆಯೆಂದು ತಿಳಿದಿದ್ದ ಮಂಜ ತನ್ನ ೩೨ ಹಲ್ಲುಗಳನ್ನು ಪ್ರದರ್ಶಿಸಿದ್ದ).
ಅಮ್ಮೋರೆ ಗೌಡ್ರು ಬಯ್ತಿದ್ದಿದ್ದು ದೂರ್ದಿಂದಾನೆ ಕೇಳುಸ್ತು ಅದ್ಕೆ ತೋಟದಲ್ಲಿ ನುಗ್ಗಿ ಹಿಂಗ್ಬಂದೆ ಅಂದ. ಒಂದ್ಲೋಟ ಕಾಪಿ ಕೊಡಿ ಕುಡ್ಕೊಂಡು ಬೇಸಾಯಕ್ಕೆ ಹೋಗ್ತೀನಿ ಅಂದು ಅಡಿಗೆ ಮನೆಯ ಕಿಟಕಿಯ ಹಿಂದೆ ಸಿಕ್ಕಿಸಿದ್ದ ತೆಂಗಿನ ಚಿಪ್ಪನ್ನು ತೆಕ್ಕೊಂಡು ಅಲ್ಲೇ ಕೂತ್ಕೊಂಡ. ಆಹಾಹ್ಹ ಯಜ್ಮಾನ ಚಿಪ್ಪು ಹಿಡ್ಕಂಡು ಕೂತ್ಕಂಡ, ನೀನು ಇಲ್ಲಿದೀಯಾ ಅಂಥಾ ಗೊತ್ತಾದ್ರೆ ಇಬ್ರುನ್ನು ನೇಣಿಘಾಕ್ತಾರೆ, ನೀನು ಬಂದಿರೋದನ್ನ ನಾನು ಹೇಳಿಲ್ಲ ಅಂಥಾ. ಬಾ ಇಲ್ಲಿ ಒಲೆಗೆ ಬೆಂಕಿ ಹಾಕು ಅಷ್ಟೊತ್ತಿಗೆ ಕಾಪಿ ಕೊಡ್ತೀನಿ ಅಂದು ಮನೆಯೊಳಕ್ಕೆ ಹೋದ್ಲು.
ಏನೋ ಕರಿಯಾ, ಗಡದ್ದಾಗಿ ನಿದ್ದೆ ಮಾಡ್ತಿದೀಯಾ? ನಿಂದೇ ಪುಣ್ಯ ನೋಡು. ಬೆಚ್ಚಗೆ ನಿದ್ರೆ, ತಿನ್ನಾಕೆ ಮೀನು ಮಾಂಸ ಮೂಳೆ! ಕರಿಯನಿಗೆ ಅರ್ಥವಾಯಿತೋ ಇಲ್ವೋ ಆದ್ರೆ ಮಂಜನನ್ನ ನೆಕ್ತಾ ಕೂರ್ತು. ಹಚಾ ಆಚೆ ಹೋಗು ಅಂಥಾ ಜೋರು ಮಾಡಿ ಕೊಳಪೆಯಿಂದ ಉರುವಲು ಶುರುಮಾಡಿದ.ಲಕ್ಷ್ಮಿ ಕಾಫಿಯನ್ನ ತಂದಳು. ಮಂಜ ಬೆಂಕಿ ಹೊತ್ತಿಸಿ ಮೈ ಕಾಯಿಸುತ್ತಾ ಕುಳಿತಿದ್ದ. ಕಾಫಿ ಕಂಡ ತಕ್ಷಣ ಮೇಲೆ ಇಟ್ಟಿದ್ದ ತೆಂಗಿನ ಚಿಪ್ಪನ್ನು ತೆಗೆದು ಅಮ್ಮೋರ ಮುಂದೆ ತನ್ನ ಕೈಯನ್ನು ಒಡ್ಡಿದ.
ಅಮ್ಮೋರೆ ನಾನು ದನ ಬಿಟ್ಟಾದ್ಮೇಲೆ ಆ ಮೆಟ್ಲ್ಹತ್ರ ಸ್ವಲ್ಪ ನಿಂತ್ಕಳಿ. ಇಲ್ಲಾಂದ್ರೆ ಮಾಮೂಲಂತೆ ಕಾಡಿನ ಕಡೆಗೆ ಓಡ್ತಾವೆ ಅಂದು ಕಾಪಿಯನ್ನ ಸೊರ ಸೊರ ಅಂಥಾ ಹೀರಿ ಚಿಪ್ಪನ್ನು ತೊಳೆದು ಮೇಲಿಟ್ಟು, ಒಲೆಯಿಂದ ಉರಿಯುತ್ತಿರುವ ಒಂದು ಕಟ್ಟಿಗೆಯನ್ನ ತೆಗೆದುಕೊಂಡು ಬೀಡಿಯನ್ನು ಹತ್ತಿಸಿ ಸೇದುತ್ತಾ ಹಟ್ಟಿಯ ಕಡೆ ಮೆಲ್ಲನೆ ಹೆಜ್ಜೆ ಹಾಕಿದನು.
ಏಯ್ ಮಂಜ ಎಲ್ಲಿ ಸಾಯೋಕೆ ಹೋಗಿದ್ಯೋ? ಇಲ್ಲೆಲ್ಲಿ ತೋಟದ ಒಳಗಿಂದ ಬರ್ತಿದೀಯಾ? ಹೊಟ್ಟೆಗೆ ಅನ್ನ ತಿನ್ತೀರೋ ...ತಿನ್ತೀರೋ? ಸಾಲ ಬೇಕು ಬೇಕೆಂದಾಗ ಕೊಟ್ಟು ಸಾಯ್ತೀವಿ ಆದ್ರೆ ಕೆಲ್ಸಕ್ಕೆ ಬೇಕೆಂದಾಗ ಊರೂರು ತಿರುಗ್ತೀರಾ? ಗೌಡನ ಮನೆ ಕಡೆ ಕಣ್ಣೆತ್ತಿ ಸಹ ನೋಡಲ್ಲ. ನಿಮ್ಮಂಥರನ್ನ ಕಟ್ಕಂಡು ಸಾಯಕಿಂತ ಗದ್ದೆ ಮಾರೋದೇ ವಾಸಿ.
ಅನೀರೀಕ್ಷಿತವಾಗಿ ಗೌಡ್ರು ಎದುರಿಗೆ ಕಂಡ ತಕ್ಷಣ ಮಂಜ ನಡುಗಹತ್ತಿದ ಆದರೂ ಸಾವರಿಸಿಕೊಂಡು ಕೈಲಿದ್ದ ಬೀಡಿಯನ್ನೆಸೆದು 'ಗೌಡ್ರೆ ಮನೆ ಕಡೆನೇ ಬರ್ತಿದ್ದೆ ಆದ್ರೆ ಆ ನಂಜ ಬರೋವಾಗ ಮಧ್ಯೆ ಸಿಕ್ಕಿ ನಿಮ್ಗೌಡ್ರ ಗದ್ದೆಲಿ ಹುಗುಳು ಬಿದ್ದು ನೀರೆಲ್ಲಾ ಖಾಲಿಯಾಗಿದೆ ಅಂದ, ಅದ್ಕೆ ಹೋಗಿ ಹುಗುಳು ಕಟ್ಟಿ ನೀರು ಬಿಟ್ಟು ಬರೋಹೊತ್ತಿಗೆ ಇಷ್ತೊತ್ತಾಯ್ತು' ಅಂಥಾ ಸುಳ್ಳನ್ನ ಬಹಳ ಚೆನ್ನಾಗಿಯೇ ಹೇಳಿದ. ಗೌಡ್ರು 'ಸರಿ ಸರಿ ಬೇಗ ಹೋಗಿ ಬೇಸಾಯ ಕಟ್ಟು ಮತ್ತೆ, ಹಿಂಗೆ ನಿಧಾನ ಮಾಡ್ತಾ ಹೋದ್ರೆ ಎಲ್ರೂ ಗದ್ದೆ ಕುಯ್ಲು ಶುರು ಮಾಡ್ತಾರೆ ನಾವು ನಾಟಿ ಮಾಡ್ತಿರ್ತೀವಿ'. ಮಂಜ ಬಚಾವಾದೆ ಅಂದ್ಕೊಂಡು ಹಟ್ಟಿಯ ಬಳಿ ಹೋದ.
ಹಟ್ಟಿಯಿಂದ ಮುಂದೆ ಹೋಗಿ ಬಲಕ್ಕೆ ತಿರುಗಿದರೆ ಗೌಡರ ಮನೆಗೆ ಹತ್ತಲು ಮೆಟ್ಟಿಲುಗಳ ಸಾಲು, ಅದೇ ಹಾದಿಯಲ್ಲಿ ಸಾಗಿದರೆ ದಟ್ಟವಾದ ಕಾಡು. ಎಡಕ್ಕೆ ಹೋದರೆ ೭ ರಿಂದ ೮ ಮನೆಗಳು ನಂತರ ಗದ್ದೆಗೆ ಸಾಗುವ ಹಾದಿ. ಕೆಂಪ ಮತ್ತು ಬಸವ ಬಿಳೀ ಹುಲ್ಲನ್ನ ಮೆಲ್ಲುತ್ತಾ ಕೂತಿದ್ದವು. ಮಂಜ ಬಂದೊಡನೆ ಎದ್ದು ನಿಂತವು. ಒಂದೆರಡು ದಿನದಿಂದ ಹೊರಗಡೆ ಬಿಟ್ಟಿರಲಿಲ್ಲವಾದ್ದರಿಂದ ಇಂದು ಆ ಭಾಗ್ಯ ದೊರಕಬಹುದೆಂದು ಮಂಜನನ್ನೇ ನೋಡುತ್ತಿದ್ದವು. ಎರಡರ ಹಗ್ಗವನ್ನ ಬಿಚ್ಚಿದ.
ನೇಗಿಲು ತೆಗೆದುಕೊಂಡು ಅವುಗಳ ಹಿಂದೆ ಹೊರಟನು. ಬಸವ ಮುಂದೆ ಹೋಗುತ್ತಾ ಗದ್ದೆಯ ಕಡೆ ತನ್ನ ಹೆಜ್ಜೆಯನ್ನು ಹಾಕಿತ್ತು, ಹಿಂದೆ ಬರುತ್ತಿದ್ದ ಕೆಂಪನೂ ಸಹ ಬಿಳಿಯನನ್ನೇ ಹಿಂಬಾಲಿಸಿತು. ದನಗಳು ಗದ್ದೆಯ ಕಡೆ ಹೋದದ್ದನ್ನ ನೋಡಿ ಲಕ್ಷ್ಮಿ ಮನೆಗೆ ಹೋದಳು. ಮಂಜನಿಗೆ ಇನ್ನು ಬೇಸಾಯ ಮಾಡಬಹುದೆಂದು ಸಮಾಧಾನವಾಯಿತು.
ಹಾಗೆ ಸಾಗುವಾಗ ಕೆಳಗಿನ ಮನೆಯ ಈರೆಗೌಡ್ರು ಮಂಜನನ್ನ ನೋಡಿ 'ಏನೋ ಮಂಜ, ಇಷ್ಟೊತ್ತಿಗೆ ಬೇಸಾಯಕ್ಕೆ ಹೋಗ್ತಿದೀಯಲ್ಲೋ? ಅಲ್ನೋಡಿದ್ರೆ ನಿಮ್ಗೌಡ್ರು ನಿಂಗೆ ಕ್ಯಾಕರಿಸಿ ಉಗೀತಿದ್ರು, ಎಂಥದ್ಲಾ ನಿನ್ ಕಥೆ?'. ಮಂಜ ಹಲ್ಕಿರಿದು 'ಎದ್ದೇಳೋವಾಗ್ಲೆ ತುಂಬಾ ಹೊತಾಯ್ತು ಗೌಡ್ರೆ ಹಂಗಾಗಿ ಇಷ್ಟೊತ್ತು, ನಮ್ಗೌಡ್ರದ್ದು ಯಾವಾಗ್ಲೂ ಇದ್ದದ್ದೇ, ಅದ್ಸರಿ ನಿಮ್ ಗದ್ದೆ ಬ್ಯಾಸಾಯ ಆಯ್ತೋ?. ಗೌಡ್ರು ಜೋರಾಗಿ ನಗುತ್ತಾ 'ಬ್ಯಾಸಾಯನೂ ಆಯ್ತೂ ನಾಟಿನೂ ಆಯ್ತು, ಹೋಗ್ಹೊಗು ಬ್ಯಾಸ್ಯಾಯ ಮಾಡ್ನಡಿ ಇಲ್ಲಾಂದ್ರೆ ಎತ್ಗಳು ಕಾಡ್ನ ಹತ್ತುತವೆ' ಅಂಥಾ ಅಂದ್ರು.
ಆಗ್ಲಿ ಗೌಡ್ರೆ, ಬೀಡಿ ಏನಾರ ಇದ್ರೆ ಒಂದು ಇತ್ಲಾಗೆ ಕೊಡೋಕಾಗತ್ತೆನು ನೋಡಿ' ಮಂಜ ಗೌಡ್ರ ಕಣ್ಗಳನ್ನೇ ನೋಡ್ತಾ ಕೇಳ್ದ. 'ನಿನ್ನನ್ನ ನಿಲ್ಸಿ ಮಾತಾಡ್ಸಿದ್ದಕ್ಕೆ ಒಂದು ಬೀಡಿನೂ ಹೋಯ್ತು' ಅಂತಂದು ಗೌಡ್ರು ಜೇಬಿಗೆ ಕೈ ಹಾಕಿ ಬೀಡಿಯ ಕಟ್ಟನ್ನು ತೆಗೆದು ಒಂದನ್ನು ಮಂಜನ ಕೈಗಿತ್ತರು. ಮಂಜ ಬೀಡಿಯನ್ನು ತೆಗೆದುಕೊಂಡು ಬರ್ತೀನಿ ಗೌಡ್ರೆ, ಬ್ಯಾಸಾಯ ಆದ್ಮೇಲೆ ನಿಮ್ಗದ್ದೆ ಕಡೆ ಹೋಗಿ ನೀರಿದೆಯಾ ಇಲ್ವಾ ಅಂತ ನೋಡ್ಕಂಬತೀನಿ ಅಂದು ಮುಂದೆ ಸಾಗಿದ.
ಇದ್ದಕಿದ್ದಂತೆ ಕಂತ್ರಿನಾಯಿಗಳ ಕಿರುಚಾಟ ಕೇಳಲಾರಂಭಿಸಿತು. ೬-೭ ನಾಯಿಗಳು ಕಚ್ಹಾಡುತ್ತಿದ್ದವು. ಕೆಂಪ ಮತ್ತು ಬಸವನನ್ನ ನೋಡಿದ ತಕ್ಷಣ ಅವುಗಳನ್ನ ಬೆರೆಸಿಕೊಂಡು ಬಂದವು. ದನಗಳು ಮತ್ತು ನಾಯಿಗಳು ಮುನ್ನುಗ್ಗುವುದನ್ನ ನೋಡಿದ ಮಂಜ ಕೈನಲ್ಲಿದ್ದ ನೇಗಿಲನ್ನು ಎಸೆದು ಬೇಲಿಯನ್ನ ಹಾರಿ ನಿಂತನು. ಎರಡೂ ದನಗಳು ಮೆಟ್ಟಿಲನ್ನು ಹತ್ತಿ ಕಾಡಿನ ಕಡೆ ಓಡಿದವು. ಬೇಲಿ ದಾಟಿ ರಸ್ತೆಗೆ ಬಂದು ಮಂಜ ಅವುಗಳನ್ನ ಹಿಂಬಾಲಿಸಿದ. ಗೌಡ್ರು ಮತ್ತೆ ಲಕ್ಷ್ಮಿ, ನಾಯಿಗಳ ಕಿರುಚಾಟ ಕೇಳಿ ಕಣಕ್ಕೆ ಬರುವಷ್ಟರಲ್ಲಿ ದನಗಳು ಕಾಡಿನ ಮುಖ ನೋಡಿಯಾಗಿತ್ತು. ಕರಿಯ ಕಂತ್ರಿನಾಯಿಗಳನ್ನ ಸೇರಿಕೊಂಡಿತ್ತು. ಮೆಟ್ಟಿಲು ಹತ್ತಿ ಏದುಸುರಿನಿಂದ ಓಡುತ್ತಿದ್ದ ಮಂಜ, ಕಣದಲ್ಲಿ ನಿಂತಿದ್ದ ಗೌಡ್ರ ಮುಖ ನೋಡಿ ಮತ್ತಷ್ಟು ಬಿರುಸಿಂದ ಓಡಲಾರಂಭಿಸಿದ !
Thursday, November 14, 2013
ಗದ್ದೆಯಲ್ಲೊಂದು ಗ್ರೂಪ್ ಫೋಟೋ !
ಊರಿಗೆ ಹೋದಾಗ ಕ್ಯಾಮೆರಾ ತೆಗೆದುಕೊಂಡು ಒಂದೆರಡು ಬಾರಿ ಗದ್ದೆಯ ಕಡೆ ಹೋದದ್ದನ್ನು ಮೋಹನ ಗಮನಿಸಿದ್ದ. ನಾನು ಕ್ಯಾಮೆರಾವನ್ನು ಕುತ್ತಿಗೆಗೆ ನೇತಾಕಿಕೊಂಡು ಹೋಗುತ್ತಿದ್ದುದ್ದನ್ನು ಅವರ ಗುಂಪಿನವರಿಗೂ ತೋರಿಸಿದ್ದ. ಯಾವುದೋ ಲೋಕದಿಂದ ಬಂದವನ ಹಾಗೆ ಅವರು ನನ್ನನ್ನು ಗಮನಿಸುತ್ತಿದ್ದರು (ಮದುವೆ ಮನೆಯಲ್ಲಿ ಮಾತ್ರ ಕ್ಯಾಮೆರಾ ನೋಡುತ್ತಿದ್ದವರಿಗೆ ನನ್ನ ಈ ಅವಸ್ಥೆ ನಗು ತರಿಸಿರಬಹುದು).
ಒಂದು ದಿನ ನಡುಮನೆಯಲ್ಲಿ ನಾನು ಪೇಪರ್ ಓದುತ್ತಾ ಕುಳಿತಿದ್ದಾಗ ಮೋಹನ ಬಂದು ಅಮ್ಮನ ಬಳಿ 'ಅಮ್ಮೋರೇ, ಸಣ್ಣ ಗೌಡ್ರಿಗೆ ಹೇಳಿ ನಮ್ದೆಲ್ಲರ್ದೂ ಒಂದು ಫೋಟೋ ತೆಗೀಲಿಕ್ಕೆ ಹೇಳಿ' ಅಂತಿದ್ದ. 'ಇನ್ನೂ ಇಲ್ಲೇ ದನ ಕಾಯ್ತಿದಿರೇನ್ರೋ, ಗದ್ದೆ ಕುಯ್ಯೋದಕ್ಕೆ ಹೋಗ್ರೋ' ಎಂದು ಅಮ್ಮ ಆತನ ಮಾತನ್ನ ಕಿವಿಗೆ ಹಾಕಿಕೊಳ್ಳದೆ ಗದರಿಸುತ್ತಿದ್ದರು. 'ಅಯ್ಯೋ ಅಮ್ಮೋರೇ ಅಲ್ಲೇ ಇರ್ತೀವಿ, ಗೌಡ್ರಿಗೆ ಗದ್ದೆಗೆ ಬರೋವಾಗ ಕ್ಯಾಮೆರಾ ತಕ್ಕಂಬರಕೆ ಹೇಳಿ' ಅಂದ. 'ನಿಮ್ದೊಳ್ಳೆ ಕಥೆ ಕಣ್ರಾ ಮಾರಾಯ, ಸರಿ ಬೇಗ ಹೊರಡಿ, ಅವ್ನಿಗೆ ಹೇಳ್ತೀನಿ' ಎಂದು ಅಮ್ಮ ಅವನನ್ನ ಕಳಿಸಿದ್ಲು. ಅವನು 'ಮರೀಬ್ಯಾಡ್ರೀ ಅಮ್ಮೋರೇ' ಅಂತ ಕೂಗಿಕೊಂಡೇ ಹೋಗ್ತಿದ್ದ.
ನಾನು ತಿಂಡಿ ತಿಂದು ಕ್ಯಾಮೆರಾ ಕುತ್ತಿಗೆಗೇರಿಸಿಕೊಂಡು ಗದ್ದೆಯ ಕಡೆ ಹೊರಟೆ. ದೂರದಿಂದ ನಾನು ಬರುವುದನ್ನು ಗಮನಿಸಿದ ಮೋಹನ ಅಲ್ಲಿಂದಲೇ 'ಸಣ್ಗೌಡ್ರು ಕ್ಯಾಮೆರಾ ತಗೊಂಡು ಬರ್ತಿದ್ದಾರೆ' ಅಂತ ಕೂಗಿ ಹೇಳ್ತಿದ್ದಿದ್ದು ಕೇಳಿಸ್ತಿತ್ತು. ಹತ್ತಿರ ಹೋದಾಗ ಎಲ್ಲಾ ನನ್ನನ್ನ ನೋಡಿ ಹಲ್ಕಿರಿಯುತ್ತಿದ್ದರು. ನನಗೆ ಅವರೆಲ್ಲರನ್ನು ನೋಡಿ ಗಾಬರಿಯಾಯ್ತು, ಎಲ್ಲರೂ ಹೊಸ ಬಟ್ಟೆ ಹಾಕಿಕೊಂಡು ಬಂದಿದ್ರು (ಬಹುಶಃ ಹೊಸ ಬಟ್ಟೆ ಹಾಕ್ಕೊಂಡು ಗದ್ದೆ ಕೊಯ್ಲು ಮಾಡಿದ್ದವ್ರಲ್ಲಿ ಇವ್ರೇ ಮೊದ್ಲು ಅನ್ಸತ್ತೆ).
ನನಗೆ ನಗು ತಡೆಯಲಾಗಲಿಲ್ಲ 'ಅಲ್ವೋ ಮೋಹನ, ಮದ್ವೆಗೆ ಹೋಗ್ಬೇಕಾದವರು ತಪ್ಪಿ ಗದ್ದೆ ಕೊಯ್ಲಿಕ್ಕೆ ಬಂದಿರೋ ಹಾಗೆ ಇದೆಯಲ್ಲೋ?'. ಆತ 'ಗೌಡ್ರೇ ಈ ಗೆಟಪ್ ಫ಼ೋಟೋಕೆ' ಅಂದ. 'ಹಾಗಿದ್ದವ್ರು ಅಲ್ಲೇ ಮನೆ ಹತ್ರಾನೇ ತೆಗೆಸ್ಕೋಬಹುದಿತ್ತಲ್ಲೋ, ಇಲ್ಲಿ ಬಂದು ಹೊಸ ಬಟ್ಟೆ ಎಲ್ಲಾ ಗಲೀಜ್ ಮಡ್ಕೋಳ್ಳೊ ಸ್ತಿತಿ ಯಾಕೆ?' ಮೋಹನ ಅದಕ್ಕೆ 'ನಮ್ಮೂರಲ್ಲಿ ಎಲ್ರಿಗೂ ತೋರಿಸ್ಬೇಕಲ್ಲ ಗೌಡ್ರೇ, ನಮ್ಮ ಗೌಡ್ರ ಗದ್ದೆಲಿ ನಾವು ಕೆಲ್ಸ ಮಾಡ್ತಿರೋದನ್ನ' ಅಂದ.
ಸರಿ ಸರಿ ಎಲ್ಲಾ ಚೆನ್ನಾಗಿ ನಿಂತ್ಕಳಿ ಅಂದೆ. ಎಲ್ರೂ ಕೈಲಿ ಕುಡುಗೋಲು ಹಿಡ್ಕೊಂಡು ಕ್ಯಾಮೆರಾಗೆ ಪೋಸ್ ಕೊಡೋಕೆ ನಿಂತ್ರು, ಯಾರಾದ್ರೂ ದೂರದಿಂದ ಈ ದೃಶ್ಯ ನೋಡಿದ್ರೆ ಕುಡುಗೋಲು ಹಿಡ್ಕೊಂಡು ಸಾಯ್ಸೋಕೆ ಬರ್ತಿರ್ಬೇಕೇನೋ ಅನ್ನೋ ಹಾಗಿತ್ತು. ಹಿಂಗ್ಯಾರಾದ್ರೂ ಪೋಸ್ ಕೊಡ್ತಾರೇನ್ರೋ ಅಂದದ್ದಕ್ಕೆ, ಹಿಂಗೇ ಹೊಡೀರಿ ಗೌಡ್ರೆ ಅಂದ್ರು. ಸರಿ ಕಣ್ರಪ್ಪ ನಿಮ್ಮಿಷ್ಟ ಅಂದು ನಾನು ಕ್ಯಾಮೆರಾ ಆನ್ ಮಾಡಿ ಎಲ್ಲರನ್ನೂ ಸ್ವಲ್ಪ ನಗಾಡ್ರಪ್ಪ ಎಂದೆ, ಅವರ ನಗುಗಿಂತ ನನಗೇ ನಗು ಜಾಸ್ತಿ ಬರ್ತಿತ್ತು ಆದರೂ ತಡೆದುಕೊಂಡು ಕ್ಯಾಮೆರಾ ಕ್ಲಿಕ್ ಮಾಡಿದೆ.
ಆಯ್ತು ಕಣ್ರಪ್ಪಾ ಅಂದೆ, ಕ್ಷಣಾರ್ಧದಲ್ಲಿ ಎಲ್ರೂ ನನ್ನನ್ನ ಸುತ್ತುವರಿದಿದ್ದರು, ಫೋಟೋ ಹೇಗೆ ಬಂದಿದೆ ಎಂದು ನೋಡುವ ಕುತೂಹಲಕ್ಕೆ.ನಾನು ಪ್ಲೇ ಬಟನ್ ಒತ್ತಿದೆ ಆದರೆ ಫೋಟೋ ಕಾಣಿಸಲಿಲ್ಲ. ಆಗ ಗೊತ್ತಾಯ್ತು ಮೆಮೊರಿ ಕಾರ್ಡ್ ಮನೆಯಲ್ಲೇ ಬಿಟ್ಟು ಬಂದಿದ್ದೇನೆಂದು. ಅವರಿಗೆ ವಿಷಯ ಹೇಳಿ ಮೋಹನನನ್ನ ಮನೆಗೋಡಿಸಿದೆ, ಅಮ್ಮನಿಗೆ ಹೇಳಿ ತೆಗೆದುಕೊಂಡು ಬಾ ಎಂದು.
ಮೋಹನ ಒಂದೇ ಉಸುರಿಗೆ ಓಡಿದ್ದ, ತಿರುಗಿ ಬರುವಷ್ಟರಲ್ಲಿ ಹೊಸ ಬಟ್ಟೆಗೆ ಕೆಸರೆಲ್ಲಾ ಮೆತ್ತಿಕೊಂಡಿತ್ತು, ಈಗ ಅವನಿಗೆ ಅದ್ಯಾವುದರ ಬಗ್ಗೆ ಪರಿವೇ ಇರಲಿಲ್ಲ. ಬಟ್ಟೆ ಹಿಂಗಾಗಿದ್ಯಲ್ಲೋ ಎಂದಾಗ, ಹೆಂಗಾದ್ರೂ ಇರ್ಲಿ ಗೌಡ್ರೆ, ಒಂದು ಸಕತ್ತಾಗಿರೋ ಫೋಟೋ ತೆಗೀರಿ ಎಂದು ಎಲ್ಲರೊಳಗೊಂದಾಗಿ ಫೋಟೋಗೆ ಹಲ್ಕಿರಿದು ನಿಂತ.
Tuesday, August 6, 2013
ಸಣ್ಣಕಥೆ - ಅಲಕ್ಷ್ಯ
ಗೆಳೆಯ ಎಸೆದಿದ್ದ ಬಾಟಲಿ ಇವನ ಬಲಿ ಪಡೆದುಕೊಂಡಿತ್ತು.
Sunday, July 7, 2013
Tuesday, June 25, 2013
Friday, June 14, 2013
ವಿಪರ್ಯಾಸ
ಹೊಳೆಯಿಂದ ತನ್ನ ಹೊಲಕ್ಕೆ ನೀರು ಹಾಯಿಸಲು
ಕರೆಂಟಿಗೆ ಕಾದು ಕಾದು ಬಾರದಿದ್ದಾಗ ಆತ
ಹಾಡಹಗಲೇ ಆತ್ಮಹತ್ಯೆ ಮಾಡಿಕೊಂಡಿದ್ದ
ಇತ್ತ - >
ಹಗಲು ಹೊತ್ತಿನಲ್ಲೇ ಆ ಮಾಲ್ ನಲ್ಲಿ
ಸಾವಿರಾರು ಬಲ್ಬ್ ಗಳ ಬೆಳಕು
ಎಲ್ಲರ ಕಣ್ಣು ಕುಕ್ಕುತ್ತಿದ್ದವು
Thursday, May 30, 2013
........................................
೨ ತಿಂಗಳ ಹಿಂದೆ ಎಲ್ಲೋ ಬಿಸಾಕಿದ್ದ ಸ್ಕೂಲ್ ಬ್ಯಾಗನ್ನ ಹುಡುಕಿ ತಂದು, ಒರೆಸಿ, ಜಾಮಿಟ್ರಿ ಬಾಕ್ಸನ್ನ ತೆಗೆದು ಕೈವಾರ, ಕೋನಮಾಪಕ, ಪೆನ್ಸಿಲ್ ರಬ್ಬರ್, ಮೆಂಡರ್ ಎಲ್ಲ ಸರಿಯಾಗಿ ಇದೆಯೇ ಎಂದು ತೆಗೆದು ನೋಡಿ ಮತ್ತೆ ಬ್ಯಾಗಿನೊಳಗೆ ತುರುಕಿ, ಅಮ್ಮ ಕೊಟ್ಟ ಟಿಫಿನ್ ಬಾಕ್ಸನ್ನ ಹಾಕಿಕೊಂಡು, ತೊಳೆದಿಟ್ಟ ಯುನಿಫಾರ್ಮನ್ನ ಧರಿಸಿ, ಗೋಡೆಯ ಸಂಧಿಯಲ್ಲಿ ಒರಗಿಸಿದ್ದ ಹಳೆಯ ಛತ್ರಿಯನ್ನ ಹೊರತೆಗೆದು ಚಾವಡಿಗೆ ಬಂದು ಚಪ್ಪಲಿಯನ್ನ ಹಾಕಿಕೊಂಡು, ಛತ್ರಿಯ ಬಟನ್ ಅದುಮಿ ಎರಡೂ ಕೈನಿಂದ ಮೇಲೆತ್ತಿ ಸಿಕ್ಕಿಸಿ ಮನೆಯಿಂದ ಅಂಗಳಕ್ಕೆ ಕಾಲಿಟ್ಟರೆ ಈಗಿರುವ ರೀತಿಯಲ್ಲೇ ಹಿಂದಿರುಗಿ ಬರುವ ಸಾಧ್ಯತೆಯಂತೂ ಅಸಂಭವ.
ಮುಂದೆ ಓದಿ.............
ಲೇಖನದ ಶೀರ್ಷಿಕೆಯನ್ನ 'ಮರಳಿ ಬರುತ್ತಿದೆ ಮತ್ತೆ ಮುಂಗಾರು ಮಳೆ' ಅಂತ ಇಡೋಣ ಅಂದ್ರೆ ಆ ಹೆಸರು ಎಷ್ಟು ಪ್ರಸಿದ್ಧಿಯಾಗಿದೆ ಅಂತಂದ್ರೆ ಮುಂಗಾರು ಮಳೆ ಅಂದ್ರೆ ಮಳೆ ಅಲ್ಲ ಫಿಲ್ಮ್ ಅನ್ನುವಷ್ಟರ ಮಟ್ಟಿಗೆ. ಮುಂಗಾರು ಮಳೆ ಅಂದ್ರೆ ಏನು ಅಂತ ಗೊತ್ತಿಲ್ಲದವರಿಗೂ ಆ ಚಿತ್ರ ಬಂದ ಮೇಲೆ ಅದು ಚಿತ್ರವಾಗಿಯೇ ಚಿತ್ತದಲ್ಲಿ ಉಳಿದುಬಿಟ್ಟಿದೆ ಹಾಗಾಗಿ ಮಾನ್ಸೂನ್ ಎಂದು ಹೆಸರಿಸಿದ್ದೇನೆ, ಆದರೂ ಪ್ರಾಸಕ್ಕೇನು ತೊಂದರೆಯಾಗಿಲ್ಲ!!.
ಎಲ್ಲಿಂದಲೋ ಬಂದ ಮೋಡಗಳೆಲ್ಲಾ ಒಂದಾಗಿ ಕಾದ ನೆಲಕೆ ಹನಿಗಳ ಸಿಂಚನವೀಯುತ್ತಿದ್ದರೆ ಮನೆಯಂಗಳಕೆ ಬಂದು ಮಳೆಗೆ ಮೈಯೊಡ್ಡುವ ಹಂಬಲ ಮನಸೊಳಗೆ ಚಿಗುರೊಡೆಯದಿದ್ದರೆ ಕೇಳಿ. ಇಳೆಯನ್ನ ತಂಪಾಗಿಸುವ ಜವಾಬ್ದಾರಿ ತನ್ನದೇ ಎಂಬಂತೆ ವರುಣ ಮಳೆಯನ್ನ ಸುರಿಸುತ್ತಲೇ ಇರುತ್ತಾನೆ. ಆ ಹನಿಗಳ ನೋಡಿ ಒಬ್ಬೊಬ್ಬರ ಮನದಲ್ಲಿ ಥರ ಥರ ಆಲೋಚನೆ. ಕೊಟ್ಟಿಗೆಯಲ್ಲಿರುವ ನೇಗಿಲು ಹಗ್ಗದ ಚಿಂತೆ ರೈತನಿಗಾದರೆ, ಎತ್ತುಗಳಿಗೆ ಇನ್ನು ಮುಂದೆ ಬಿಡುವಿಲ್ಲದ ಕೆಲಸ ಎನ್ನುವ ಚಿಂತೆ! ಬೇಸಿಗೆ ರಜೆಯನ್ನ ಮಳೆಗಾಲಕ್ಕೂ ವಿಸ್ತರಿಸಿದ್ದರೆ ಇವರ ಗಂಟೇನು ಹೋಗುವುದೋ ಎಂದು ಬ್ಯಾಗಿಗೆ ಪುಸ್ತಕವನ್ನ ಹಾಕಿ ಬ್ಯಾಗನ್ನ ನೇತಾಕಿಕೊಂಡು ಕೊಡೆಯನ್ನ ಹಿಡಿದುಕೊಂಡು ಮಳೆಯನ್ನ ಶಪಿಸುತ್ತಾ ಅದರಲ್ಲೇ ಆಟ ಆಡಿಕೊಂಡು ಶಾಲೆಗೆ ತಲುಪುವ ಮಕ್ಕಳ ಪಡೆ ಒಂದು ಕಡೆಯಾದರೆ ಅಮ್ಮನಿಗೆ ಗಂಡನನ್ನ ಹೊಲಕ್ಕೆ ಕಳುಹಿಸಿ ಮಕ್ಕಳಿಗೆ ತಿಂಡಿ ಕೊಟ್ಟು ಮಧ್ಯಾಹ್ನದ ಊಟವನ್ನ ಅವರ ಬ್ಯಾಗಿನಲ್ಲಿ ಹಾಕಿ ಅವರನ್ನ ಕಳುಹಿಸಿ ಆನಂತರ ಗಂಡನಿಗೆ ತಿಂಡಿಯನ್ನ ತೆಗೆದುಕೊಂಡು ಹೋಗುವ ಕಾಯಕ.
ತಿಳಿಯಾದ ಆಗಸವನ್ನ ಮುಂಗಾರಿನ ಮೋಡಗಳು ನಿಧಾನವಾಗಿ ಆವರಿಸುವ ಪ್ರಕ್ರಿಯೆಯೇ ಅದ್ಭುತ. ಮೇ ಕೊನೆಯ ಅಥವಾ ಜೂನ್ ಮೊದಲ ವಾರದ ಯಾವುದೋ ಒಂದು ದಿನದಲ್ಲಿ ನೋಡ ನೋಡುತ್ತಿದ್ದಂತೆಯೇ ನೀಲಿ ಆಗಸವನ್ನ ಮುತ್ತುವಾ ಮೋಡಗಳು ಒಂದೊಂದಾಗಿ ಚಲಿಸುತ್ತಾ ಇಡೀ ವಾತಾವರಣವನ್ನ ಬದಲಾಯಿಸಿಬಿಡುತ್ತವೆ. ಕಣ್ಣಿಗೆ ಕಾಣುತ್ತಿದ್ದ ಸೂರ್ಯ ಒಮ್ಮೆಲೆ ಮರೆಯಾಗಿಬಿಡುತ್ತಾನೆ ಮತ್ತೆ ಅವನು ಕಾಣುವುದು ಮುಂಗಾರು ಮುಗಿದ ನಂತರವೇ ಅಂದರೆ ಏನಿಲ್ಲವೆಂದರೂ ಸುಮಾರು ೩ ತಿಂಗಳ ನಂತರವೇ. ಅಲ್ಲಿಯವರೆಗೂ ಬರೀ ಮೋಡಗಳದ್ದೇ ಸಾಮ್ರಾಜ್ಯ. ಮಿಂಚು, ಗುಡುಗುಗಳದ್ದೇ ಕಾರುಬಾರು. ಹನಿಗಳ ನಡುವೆ ಜಾಗವೇ ಇಲ್ಲವೇನೋ ಎಂಬಂತೆ ಸುರಿಯುವ ಜಿಟಿಜಿಟಿ ಮಳೆ.
ಬೆಳಗ್ಗೆದ್ದು ಬಿಸಿ ಬಿಸಿ ಕಾಫಿ ಕುಡಿದು ಕೊಟ್ಟಿಗೆಗೆ ಹೋಗಿ ನೇಗಿಲನ್ನ ಹೊತ್ತುಕೊಂಡು ಎತ್ತುಗಳನ್ನ ಹೊಡೆದುಕೊಂಡು ಬೆಳಗ್ಗೆ ಹೊರಟರೆ ಸುಮಾರು ೪- ೫ ತಾಸು ರೈತನ ಗಮನ ಗದ್ದೆ, ನೇಗಿಲು, ಹಾಗೂ ಎತ್ತುಗಳ ಮೇಲೆ. ಅದರ ನಡುವೆ ಹೆಂಡತಿ ತಂದುಕೊಟ್ಟ ತಿಂಡಿಯನ್ನ ತಿಂದು ಮತ್ತೆ ಬೇಸಾಯ ಮಾಡಿದರೆ ಅಲ್ಲಿಗೆ ಅಂದಿನ ಕೆಲಸಕ್ಕೆ ವಿರಾಮ. ಇನ್ನೇನಿದ್ದರೂ ಎತ್ತುಗಳನ್ನ ಮೇಯಿಸಿ ಕೊಟ್ಟಿಗೆಗೆ ಹೊಡೆದುಕೊಂಡು ಹೋಗುವುದು, ಅದು ಆತನ ಮಗನ ಕೆಲಸ. ಅವನಿಗೋ ಆ ಮಳೆಯಲ್ಲಿ ತನ್ನ ಗೆಳೆಯರೊಡಗೂಡಿ ಹೊಳೆಗೆ ಈಜಲು ಹೋಗುವಾಸೆ. ಆದರೆ ಅಪ್ಪನ ಕೋಪ ನೆನೆಸಿಕೊಂಡು ವಿಧಿಯಿಲ್ಲದೆ ಮೈಮೇಲೆ ಗೋಣಿ ಚೀಲವನ್ನ ಹಾಕಿಕೊಂಡು ಮಳೆಯಲ್ಲಿ ನೆನೆಯದಂತೆ ಮರದ ಬುಡದಲ್ಲಿ ಕುಳಿತು ಎತ್ತುಗಳನ್ನ ಮೇಯಿಸಲೇಬೇಕು.
೨ ತಿಂಗಳ ಹಿಂದೆ ಎಲ್ಲೋ ಬಿಸಾಕಿದ್ದ ಸ್ಕೂಲ್ ಬ್ಯಾಗನ್ನ ಹುಡುಕಿ ತಂದು, ಒರೆಸಿ, ಜಾಮಿಟ್ರಿ ಬಾಕ್ಸನ್ನ ತೆಗೆದು ಕೈವಾರ, ಕೋನಮಾಪಕ, ಪೆನ್ಸಿಲ್ ರಬ್ಬರ್, ಮೆಂಡರ್ ಎಲ್ಲ ಸರಿಯಾಗಿ ಇದೆಯೇ ಎಂದು ತೆಗೆದು ನೋಡಿ ಮತ್ತೆ ಬ್ಯಾಗಿನೊಳಗೆ ತುರುಕಿ, ಅಮ್ಮ ಕೊಟ್ಟ ಟಿಫಿನ್ ಬಾಕ್ಸನ್ನ ಹಾಕಿಕೊಂಡು, ತೊಳೆದಿಟ್ಟ ಯುನಿಫಾರ್ಮನ್ನ ಧರಿಸಿ, ಗೋಡೆಯ ಸಂಧಿಯಲ್ಲಿ ಒರಗಿಸಿದ್ದ ಹಳೆಯ ಛತ್ರಿಯನ್ನ ಹೊರತೆಗೆದು ಚಾವಡಿಗೆ ಬಂದು ಚಪ್ಪಲಿಯನ್ನ ಹಾಕಿಕೊಂಡು, ಛತ್ರಿಯ ಬಟನ್ ಅದುಮಿ ಎರಡೂ ಕೈನಿಂದ ಮೇಲೆತ್ತಿ ಸಿಕ್ಕಿಸಿ ಮನೆಯಿಂದ ಅಂಗಳಕ್ಕೆ ಕಾಲಿಟ್ಟರೆ ಈಗಿರುವ ರೀತಿಯಲ್ಲೇ ಹಿಂದಿರುಗಿ ಬರುವ ಸಾಧ್ಯತೆಯಂತೂ ಅಸಂಭವ.
ಅದೇ ಬೀದಿಯಲ್ಲಿರುವ ತನ್ನ ಸಹಪಾಠಿಗಳನ್ನೆಲ್ಲಾ ಕರೆದು ಅವರ ಸಂಗಡ ಹೊರಟರೆ ಅಲ್ಲಿಂದ ಮುಂದೆ ಇವರಾಡಿದ್ದೇ ಆಟ. ಎಲ್ಲರೂ ಅವರವರ ಬೇಸಿಗೆ ರಜೆಯ ಅನುಭವಗಳನ್ನ ಹಂಚಿಕೊಳ್ಳುತ್ತಾ ಗದ್ದೆ ತೋಟಗಳನ್ನು ದಾಟುತ್ತ ಕಂಡ ಹಣ್ಣಿನ ಮರಗಳನ್ನ ನೋಡಿ ಸಂಜೆ ವಾಪಸ್ ಬರುವಾಗ ಯಾವ್ಯಾವ ಮರಕ್ಕೆ ಲಗ್ಗೆ ಹಾಕಬೇಕೆಂದು ಪರಸ್ಪರ ಮಾತನಾಡಿಕೊಳ್ಳುತ್ತಾ ಹಳ್ಳ ಕೊಳ್ಳಗಳನ್ನ ಕ್ರಮಿಸಿ ಶಾಲೆಯನ್ನ ತಲುಪಿದರೆ ಒಂದು ಅಧ್ಯಾಯ ಮುಗಿದಂತೆ. ಕ್ಲಾಸ್ ಮುಗಿಸಿ ಕೊನೆಯ ಒಂದು ಗಂಟೆ ಆ ಮಳೆಯಲ್ಲೇ ಆಟವಾಡಿ ಬ್ಯಾಗನ್ನು ಏರಿಸಿಕೊಂಡು ಗೆಳೆಯರೊಂದಿಗೆ ಮನೆಯತ್ತ ಪಯಣ, ದಾರಿಯಲ್ಲಿ ಸಿಕ್ಕ ನೇರಳೆ ಹಣ್ಣೋ, ಹಲಸಿನ ಹಣ್ಣೋ, ಮಾವಿನ ಹಣ್ಣೋ, ಕಿತ್ತಳೆ ಹಣ್ಣಿನ ಮರವನ್ನ ಹತ್ತಿ ಆ ಮರದ ಹಣ್ಣುಗಳು ಇವರ ಉದರಕ್ಕೆ ಹೋಗದಿದ್ದರೆ ಅದು ಅಂದು ಅವರಿಗೆ ಆದ ಅಪಮಾನವೇ ಸರಿ.
ಮನೆಗೆ ಬಂದು ಛತ್ರಿ ಮಡಿಸಿ ಬಾಗಿಲಿನ ಮೂಲೆಯಲ್ಲಿಟ್ಟು, ಚಪ್ಪಲಿ ಕಳಚಿ ಹೆಂಚಿನಿಂದ ಬೀಳುತ್ತಿರುವ ನೀರಿಂದ ಕಾಲು ತೊಳೆದು ಮನೆಯೊಳಕ್ಕೆ ಓಡಿ ಬ್ಯಾಗನ್ನೆತ್ತಿ ಮೂಲೆಯಲ್ಲೆಸೆದು ಅಡುಗೆ ಮನೆಗೆ ಓಡಿ, ಯುನಿಫಾರ್ಮ್ ಸ್ತಿತಿ ನೋಡಿ ಅಮ್ಮ ಬಯ್ಯುತ್ತಿದ್ದರೂ ಲೆಕ್ಕಿಸದೆ ಬೆಂಕಿಯನ್ನ ಕಾಯಿಸುತ್ತಾ ಬಿಸಿಬಿಸಿ ಬೆಲ್ಲದ ಕಾಪಿಯನ್ನ ಹೀರುವ ಹಿತ ಅವಿಸ್ಮರಣೀಯ.
ಬಾಲ್ಕನಿಯಲ್ಲೋ, ಚಾವಡಿಯಲ್ಲೋ ಕುಳಿತು ಎದುರಿಗೆ ಕಾಣುವ ಗಿಡ, ಮರಗಳು ಹಾಗೂ ಬೆಟ್ಟ ಗುಡ್ಡಗಳ ಮೇಲೆ ಸುರಿಯುವ ಮಳೆಯ ಸೊಬಗ ನೋಡುವುದೇ ಒಂದು ಅದ್ಭುತ ದೃಶ್ಯಕಾವ್ಯ. ಆ ತಂಪನೆಯ ವಾತಾವರಣದಲ್ಲಿ ನಿಮ್ಮ ಕೈಗೊಂದು ಲೋಟ ಕಾಫಿ ಬಂದುಬಿಟ್ಟರೆ ಸ್ವರ್ಗ ಮೂರೇ ಗೇಣು. ಒಂದೊಮ್ಮೆ ನೀವು ಕಾಫಿ ಪ್ರಿಯರಾಗಿರದಿದ್ದಲ್ಲಿ ನಿಮ್ಮಷ್ಟು ದುರದೃಷ್ಟವಂತರು ಯಾರೂ ಇರಲಿಕ್ಕಿಲ್ಲ, ಎದುರಿಗಿರುವ ವ್ಯಕ್ತಿಯ ಕೈನಲ್ಲಿ ಬಿಸಿ ಬಿಸಿ ಹಬೆಯಾಡುತ್ತಿರುವ ಕಾಫಿಯನ್ನ ಕಂಡು ಕುಡಿಯುವ ಯೋಚನೆ ಬಂದರೂ ಬರಬಹುದೇನೋ. ಮಳೆಯ ಸಾನಿಧ್ಯ, ಕೈನಲ್ಲಿ ಕಾಫಿ ನಿಮ್ಮ ಮೈಮನ ತಣಿಸುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಹಾಗಂತ ನಿಮ್ಮ ಅಮ್ಮನ ಬಳಿಯೋ ಹೆಂಡತಿಯ ಬಳಿಯೋ ಕೋಲ್ಡ್ ಕಾಫಿ ಕೊಡು ಎಂದು ಕೇಳಿದಿರಾ ಜೋಕೆ.
ಮತ್ತೊಮ್ಮೆ ಬರುತ್ತಿದೆ ಮಳೆಗಾಲ, ಗತಿಸಿ ಹೋದ ಬಾಲ್ಯವನ್ನ ಮತ್ತೊಮ್ಮೆ ಮರಳಿ ನೆನಪಿಸುವ ಕಾಲ. ಕಳೆದುಹೋದ ಭಾವಗಳ ಇನ್ನೊಮ್ಮೆ ಮರಳಿ ಪಡೆಯುವ ಕಾಲ. ಆಗಸದಿಂದ ಮುತ್ತಿಕ್ಕುವ ಹನಿಗೆ ಮೈಯೊಡ್ಡುವ ಕಾಲ. ಮರಳಿ ಬನ್ನಿ ನೆನಪಿನ ಬುಟ್ಟಿಯೊಂದಿಗೆ ಮುಂಗಾರು ಮುಗಿಯುವ ಮುನ್ನ.
...ಚೇತನ್ ಕೋಡುವಳ್ಳಿ
Thursday, April 18, 2013
ಸಣ್ಣಕಥೆ - ಸೇಡು
ಆ ಪಟ್ಟಣದಿಂದ ಸುಮಾರು ೭೦ ಮೈಲು ದೂರದಲ್ಲಿದೆ ಆ ಹಳ್ಳಿ. ಕೃಷಿ ಆಧಾರಿತ ಪ್ರದೇಶ. ಆ ಹಳ್ಳಿ ಮತ್ತು ಸುತ್ತಮುತ್ತಲ ಹಳ್ಳಿ ಹಸಿರಿನಿಂದ ತುಂಬಿತ್ತು. ಅಲ್ಲಾಗುವ ಮಳೆಯ ನೀರೇ ಆ ಪಟ್ಟಣಕ್ಕೆ ಆಧಾರ. ಆ ಹಳ್ಳಿಯಲ್ಲೊಂದು ಪುಟ್ಟ ಸಂಸಾರ, ಅಪ್ಪ, ಅಮ್ಮ, ಮಗ. ತಕ್ಕಮಟ್ಟಿಗೆ ಸ್ಥಿತಿವಂತರಾಗಿದ್ದರು. ಮಗ ಪಟ್ಟಣದಲ್ಲಿ ಓದಲಿ ಎಂದು ಅಪ್ಪ ಅವನಿಗೆ ಅಲ್ಲೊಂದು ವ್ಯವಸ್ಥೆ ಮಾಡಿದ. ಅವನು ಚೆನ್ನಾಗಿ ಓದಿದ, ತಾನು ತುಂಬಾ ಪ್ರಸಿದ್ಧಿಯಾಗಬೇಕೆಂಬುದು ಅವನ ಮಹತ್ವಾಕಾಂಕ್ಷೆಯಾಗಿತ್ತು. ಅದರಂತೆ ಓದು ಮುಗಿದ ನಂತರ ಕೆಲಸಕ್ಕೆ ಸೇರುವ ಬದಲು ಬ್ಯುಸಿನೆಸ್ ಮಾಡಬೇಕೆಂದು ನಿರ್ಧರಿಸಿದ.
ಅಪ್ಪ ಎಷ್ಟು ಹೇಳಿದರೂ ಕೇಳದೆ, ತನ್ನ ತೋಟದಲ್ಲಿದ್ದ ಮರಗಳನ್ನು ಕಡಿದು ಟಿಂಬರ್ ಬ್ಯುಸಿನೆಸ್ ಶುರು ಮಾಡಲಾರಂಭಿಸಿದ. ಅದೇ ಮರಗಳನ್ನ ಉಪಯೋಗಿಸಿ ಪಟ್ಟಣದಲ್ಲಿ ತನಗೊಂದು ಮನೆಯನ್ನೂ ಕಟ್ಟಿಸಿ ಅಲ್ಲಿ ವಾಸಿಸಲಾರಂಭಿಸಿದ . ಅಪ್ಪ ಅಮ್ಮ ಪಟ್ಟಣಕ್ಕೆ ಬರದೆ ಊರಲ್ಲೇ ಉಳಿದರು. ಊರಲ್ಲಿ ಎಲ್ಲರಿಗೂ ಒಳ್ಳೆಯ ಬೆಲೆಯನ್ನು ಕೊಟ್ಟು ಅವರ ತೋಟಗಳಿಂದ ಮರಗಳನ್ನು ಖರೀದಿಸಿದ. ಪರಿಣಾಮ, ಸುತ್ತ ಹಸಿರಿಂದ ನಳನಳಿಸುತ್ತಿದ್ದ ಊರು ಮರಗಳಿಲ್ಲದೆ ಬೆಂಗಾಡಾದಂತಾಗಿತ್ತು. ಇವನು ನೋಡನೋಡುತ್ತಿದ್ದಂತೆ ಶ್ರೀಮಂತನಾಗಿ ಹೋದ. ಕಾಲ ಸರಿಯುತ್ತಾ ಹೋಯಿತು. ಸುತ್ತಮುತ್ತಲ ಹಳ್ಳಿಯ ಯುವಕರಿಗೆ ಇವನು ಸ್ಪೂರ್ತಿಯಾದ, ಅವರಲ್ಲಿ ಹಲವರು ಟಿಂಬರ್ ಬ್ಯುಸಿನೆಸ್ಗೆ ಇಳಿದರು. ಕಾಲಕ್ರಮೇಣ ಎಲ್ಲಾ ಹಳ್ಳಿಗಳು ಇವರ ಆಕ್ರಮಣಕ್ಕೆ ತುತ್ತಾಗಿ ಬರಡಾಗಿ ಹೋಗಿದ್ದವು. ಮಳೆಯ ಪ್ರಮಾಣ ತೀರಾ ಕಡಿಮೆಯಾಗಿ ಪಟ್ಟಣದಲ್ಲಿ ಜನರು ನೀರಿಗಾಗಿ ಒದ್ದಾಡುತ್ತಿದ್ದರು. ದಿನಕ್ಕೊಮ್ಮೆ ಬರುತ್ತಿದ್ದ ನೀರು ವಾರಕ್ಕೊಮ್ಮೆ ಬರುವ ಹಾಗಾಯ್ತು. ಆ ದಿನ ಮಧ್ಯಾಹ್ನದ ಸಮಯ, ಎಂದಿನಂತೆ ಇವನು ತನ್ನ ಕೆಲಸ ಮುಗಿಸಿ ಮನೆಗೆ ಬಂದು ಚಾವಡಿಯಲ್ಲಿ ಕುಳಿತು ತನ್ನ ಪತ್ನಿಗೆ ನೀರನ್ನು ತರಲು ಹೇಳಿ ಹಾಗೆ ದಿವಾನ್ ಮೇಲೆ ಮಲಗಿದ್ದ. ನೀರಿಗೆ ಬರವಿದ್ದ ಕಾರಣ ಪತ್ನಿ ಅರ್ಧ ಲೋಟ ನೀರು ತಂದುಕೊಟ್ಟಳು. ಇದೇನು ಅರ್ಧ ಲೋಟ ತಂದಿದ್ದೀಯ ಎಂದು ಅವಳಿಗೆ ಬೈದು ಲೋಟವನ್ನ ಮೇಲಕ್ಕೆತ್ತಿ ಕುಡಿಯಲಾರಂಭಿಸಿದ, ಕಾಲು ಭಾಗ ನೀರು ಅವನ ದೇಹ ಸೇರಿತ್ತು ಅಷ್ಟರಲ್ಲಿ ಮನೆಯ ಪಕಾಸು ಮುರಿದು ಇವನ ಮೇಲೆ ಬಿತ್ತು. ಅವನ ಪ್ರಾಣಪಕ್ಷಿ ಹಾರಿಹೋಗಿತ್ತು. ನೀರು ಹಾಗೂ ಮರ ಸದ್ದಿಲ್ಲದೇ ಸೇಡನ್ನು ತೀರಿಸಿಕೊಂಡಿದ್ದವು.
Wednesday, September 26, 2012
ಬದಲಾವಣೆಯ ಹಾದಿಯಲ್ಲೊಮ್ಮೆ ಹಿಂದಿರುಗಿ ನೋಡಿದಾಗ
ಈ ಬದಲಾವಣೆ ಬೇಕಿತ್ತೇ ಎಂದು ಹಲುಬುತ್ತಿರುವ ಮತ್ತು ಅದರೊಂದಿಗೆ ಅನುಸರಿಸಿಕೊಂಡು ಹೋಗಬೇಕಾದ ಪೀಳಿಗೆ ಒಂದಾದರೆ, ಹಳತನ್ನ ಅನುಭವಿಸಿ ಹೊಸತನಕ್ಕೆ ಕಾಲಿಟ್ಟು ಎರಡಕ್ಕೂ ಸೇತುವೆಯಂತಿರುವ ಪೀಳಿಗೆ ಇನ್ನೊಂದು, ಅವೆರಡೂ ಗೊತ್ತಿರದೇ ಗೊತ್ತಿದ್ದರೂ ಅದನ್ನು ತಿಳಿದುಕೊಳ್ಳುವ ವ್ಯವಧಾನವಿಲ್ಲದೆ ತನ್ನದೇ ಆದ ಲೋಕದಲ್ಲಿ ವಿಹರಿಸುತ್ತಿರುವ ಪೀಳಿಗೆ ಮತ್ತೊಂದು. ಇದು ಹೀಗೆಯೇ ತಿರುಗಬೇಕಾದಂಥಹ ಚಕ್ರ, ಆದರೆ ಈ ಚಕ್ರವು ಸ್ವಲ್ಪ ಜಾಸ್ತಿಯೇತಿರುಗುತ್ತಿದೆ ಅನ್ನುವ ಅನುಮಾನ ಕಾಡದಿರಲಾರದು.
ದೂರದಲ್ಲಿ ಓದುತ್ತಿರುವ ಮಗನು ಹೇಗಿದ್ದಾನೋ, ತಿಂಡಿ ಊಟ ಚೆನ್ನಾಗಿ ಮಾಡುತ್ತಿರುವನೋ, ಬಟ್ಟೆಬರೆಗಳನ್ನ ಚೆನ್ನಾಗಿ ತೊಳೆದುಕೊಳ್ಳುತ್ತಿರುವನೋ ಎಂಬ ಯೋಚನೆ ಅಮ್ಮನಿಗೆ ಅದರಂತೆ ತನ್ನ ಗಂಡನಿಗೆ ಹೇಳಿ ಒಂದು ಇನ್ಲ್ಯಾಂಡ್ ಲೆಟರ್ ತರಿಸಿ ಅದರಲ್ಲಿ ಅವನ ಯೋಗಕ್ಷೇಮದ ಬಗ್ಗೆ ವಿಚಾರಿಸಲು ಬರೆಯಹೊರಟರೆ ಅಕ್ಕ ಮತ್ತೆ ತಂಗಿಗೂ ಅವನನ್ನ ವಿಚಾರಿಸುವ ಆಸೆ, ಖಾಲಿ ಇರುವ ಜಾಗವನ್ನ ಆದಷ್ಟು ಸಣ್ಣ ಸಣ್ಣ ಅಕ್ಷರಗಳಿಂದ ತುಂಬುವ ಬಯಕೆ, ಅಂಟು ಹಾಕುವ ಜಾಗದಲ್ಲೂ ಮತ್ತೇನನ್ನೋ ಬರೆಯುವಾಸೆ, ಅಲ್ಲಿ ಬರೆದರೆ ಕಾಗದ ಹರಿಯುವಾಗ ಏನೂ ಕಾಣಿಸುವುದಿಲ್ಲ ಎಂದು ಅಮ್ಮ ಗದರಿಸಿದರೂ ಕೇಳದೆ ಬರೆದು, ಅಜ್ಜ ಅಜ್ಜಿ ಹೇಳಿದ್ದನ್ನೂ ಸ್ವಲ್ಪ ಬರೆದು ಅಂಟನ್ನು ಹಾಕಿ ಪೋಸ್ಟ್ ಮಾಸ್ಟ್ರಿಗೆ ಕೊಟ್ಟರೆ ಏನೋ ಸಮಾಧಾನ. ಕಾಲೇಜ್ ಮುಗಿಸಿ ಹಾಸ್ಟೆಲ್ ತಲುಪಿ ತನ್ನ ಕೋಣೆಯ ಬಾಗಿಲು ತೆಗೆದ ತಕ್ಷಣ ಅಲ್ಲಿ ಕೆಳಗೆ ಬಿದ್ದಿರುವ ಇನ್ಲ್ಯಾಂಡ್ ಲೆಟರ್ ತೆಗೆದು ಅದನ್ನು ನಿಧಾನಕ್ಕೆ ಹರಿದು ಓದಲು ತೊಡಗಿದರೆ ಅವನಿಗಾಗುತ್ತಿದ್ದ ಅನುಭೂತಿ ಅವಿಸ್ಮರಣೀಯ. ಕಾಗದ ಓದುತ್ತಿರುವಾಗ ಆಗುತ್ತಿದ್ದ ಆ ರೋಮಾಂಚನ ಬಹುಷಃ ಸ್ವತಹ ಅಪ್ಪ ಅಮ್ಮ ಅಕ್ಕ ತಂಗಿ ಎದುರಿಗೆ ಬಂದು ನಿಂತರೂ ಆಗುತ್ತಿರಲಿಲ್ಲವೇನೋ. ಸರಿ, ಘಟ್ಟದ ಮೇಲಿಂದ ಪತ್ರವೇನೋ ಬಂದಾಯ್ತು, ಈಗ ಘಟ್ಟದ ಮೇಲೆ ಪತ್ರ ಕಳಿಸಬೇಕಲ್ಲಾ, ಕಬೋರ್ಡಿನಲ್ಲಿರುತ್ತಿದ್ದ ಪೋಸ್ಟ್ ಕಾರ್ಡ್ಗಳೆಲ್ಲವೂ ಖಾಲಿ.ಆದರೆ ನಾಳೆಯಿಂದ ಟೆಸ್ಟ್ಇದೆ. ಪೋಸ್ಟಾಫೀಸಿಗೆ ಹೋಗಿ ೧೫ ಪೈಸೆಯಒಂದು ಪೋಸ್ಟ್ಕಾರ್ಡ್ ತಂದು ಎಲ್ಲರ ಯೋಗಕ್ಷೇಮ ವಿಚಾರಿಸಿ, ತೋಟದಲ್ಲಿ ಏನು ಕೆಲಸ, ಬೇಸಾಯಕ್ಕೆ ಮಳೆ ಚೆನ್ನಾಗಿ ಬಂತೇ, ಗದ್ದೆ ನಾಟಿಯಾಯಿತೇ, ಕರಿಯ ಬಿಳಿಯ (ಎತ್ತುಗಳು) ಚೆನ್ನಾಗಿವೆಯೇ, ಮಂಜ, ಭೈರ ಚಿಕ್ಕನನ್ನ ವಿಚಾರಿಸಿ ಟೈಗರನ್ನ (ಮನೆಯ ನಾಯಿ) ವಿಚಾರಿಸಿ, ಮಳೆಗಾಲ ಮುಗಿದ ಕೂಡಲೇ ಊರಿಗೊಮ್ಮೆ ಬರುವುದಾಗಿ ಹೇಳಿ ಎಂದು ಹೇಳುವಷ್ಟರಲ್ಲಿ ಕಾಗದದ ಕೊನೆ ಬಂದು, ಇನ್ನುಳಿದದ್ದನ್ನ ಅಡ್ರೆಸ್ ಬರೆಯುವ ಜಾಗದ ಕೆಳಗೆ ತುರುಕುವ ಸನ್ನಾಹ, ಕೋಡುಬಳೆ, ಕರ್ಜಿಕಾಯಿ, ಕೆಸಿನ ಸೊಪ್ಪು ಕಾಯಿ ಕಡುಬು ಎಲ್ಲಾ ಮಾಡಿರು ಎಂದು ಅಮ್ಮನಿಗೆ ಹೇಳುವಲ್ಲಿಗೆ ಕಾಗದ ತನ್ನ ಜೀರ್ಣಶಕ್ತಿಯನ್ನ ಕಳೆದುಕೊಂಡಿರುತ್ತಿತ್ತು.
ಅಪ್ಪ-ಮಗನಿಗೆ, ಅಳಿಯ-ಮಾವನಿಗೆ, ಮಗಳು-ಅಪ್ಪನಿಗೆ,ಗಂಡ-ಹೆಂಡತಿಗೆ, ಸುಗ್ಗಿಹಬ್ಬಕ್ಕೆ, ಊರ ಜಾತ್ರೆಗೆ, ಸಂತಸಕ್ಕೆ, ಭಾಂದವ್ಯಕ್ಕೆ, ನಲಿವಿಗೆ, ನೋವಿಗೆ ಬರೆದ ಕಾಗದಗಳೆಷ್ಟೋ, ಎಲ್ಲವೂ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ. ಪುಟ ತಿರುಗಿಸ ಹೋದರೆ ಹಳೆಯ ಸುಮಧುರ ನೆನಪುಗಳ ಖೋಡಿ. ಆದರೀಗ ಎಲ್ಲವೂ ಬದಲಾಗಿ ಹೋಗಿದೆ. ಕೇವಲ ಒಂದು ಕರೆಯಿಂದ ಮೇಲಿನ ಎಲ್ಲಾ ವಿಷಯಗಳನ್ನ ಬಾಯಿಮಾತಿನಲ್ಲಿ ಹೇಳಿ ಮುಗಿಸುವ ಮಟ್ಟಕ್ಕೆ ಬಂದು ನಿಂತಿದ್ದೇವೆ ನಾವು. ಒಂದು ಮೊಬೈಲ್ ಎನ್ನುವ ಸಾಧನವು ಪತ್ರ ವ್ಯವಹಾರವನ್ನು, ಅದು ಕೊಡುತ್ತಿದ್ದ ಆ ರೋಮಾಂಚನವನ್ನು, ಆ ಅಕ್ಷರಗಳಲ್ಲಿ ತುಂಬಿರುತ್ತಿದ್ದ ಭಾವಗಳನ್ನ ನುಂಗಿ ಹಾಕಿದೆ.
ಆಗೆಲ್ಲಾ ದೂರದಲ್ಲಿರುವ ಸಂಬಂಧಿಕರ ಬಳಿ ಫೋನಿನಲ್ಲಿ ಮಾತನಾಡುವುದೆಂದರೆ ಒಂದು ಹಬ್ಬದ ವಾತಾವರಣ ನಿರ್ಮಾಣವಾಗುತ್ತಿತ್ತು. ಆ ಫೋನಿನ ರಿಸೀವರ್ ಎತ್ತಿ ಬೇಕಾದ ಸಂಖ್ಯೆಯಲ್ಲಿ ಬೆರಳಿಟ್ಟು ಅದಿರುವ ಜಾಗದಿಂದ ಕೊನೆಗೆ ಮುಟ್ಟಿಸಿದರೆ ಏನೋ ಪುಳಕ. ಟ್ರಂಕ್ ಕಾಲ್ ಮಾಡಿ ಆ ಕರೆಗೆ ಮನೆಮಂದಿಯೆಲ್ಲಾ ಚಾತಕ ಪಕ್ಷಿಯಂತೆ ಕಾದು ಕುಳಿತಿರುತ್ತಿದ್ದರು, ಬಂದರೆ ೧೫ ನಿಮಿಷವಾದ ಮೇಲೆ ಇಲ್ಲವೆಂದರೆ ೧ ಘಂಟೆ ೨ ಘಂಟೆ ಕಾಯಬೇಕಾಗುತ್ತಿತ್ತು. ಕಾಲ್ ಬಂದ ನಂತರ ನೆಂಟರ ಜೊತೆ ಮಾತನಾಡುವ ಸಂಭ್ರಮವಿದೆಯಲ್ಲಾ ಅದನ್ನ ನೋಡಿಯೇ ಅನುಭವಿಸಬೇಕು. ಕೆಲವೊಮ್ಮೆ ರಾತ್ರಿ ಟ್ರಂಕ್ ಕಾಲ್ ಮಾಡಿದರೆ ಬೆಳಗ್ಗೆ ಬರುತ್ತಿದ್ದ ಉದಾಹರಣೆಗಳುಂಟು!. ಈಗ ದೂರವಾಣಿ ಎನ್ನುವುದು ಅದರ ಹೆಸರಿಗೆ ತಕ್ಕಂತೆ ಆಗಿದೆ. ಮನೆಯಲ್ಲಿರುತ್ತಿದ್ದ ಚೆಂದಚೆಂದದ ಫೋನ್ಗಳು ಈಗ ಬರಿಯ ನೆನಪುಗಳು. ಮೊಬೈಲ್ ಎಂಬ ಮಹಾದೈತ್ಯ ಅವುಗಳ ಸ್ಥಾನವನ್ನು ಕಸಿದುಕೊಂಡಿದೆ. ತಂತ್ರಜ್ನ್ನಾನ ಮಾನವನ ಕೆಲಸಗಳನ್ನು ಸುಲಭ ಸಾಧ್ಯವಾಗಿಸಿದೆ, ಆದರೆ ಯಾವ ಪುರುಷಾರ್ಥಕ್ಕೆ? ಮೊಬೈಲ್ ಎದುರಿಗಿದ್ದರೂ ನೆಂಟರಿಷ್ಟರ ಬಳಿ ಮಾತನಾಡಲು ಸಮಯವಿಲ್ಲವೇನೋ ಎಂಬಂತೆ ವರ್ತಿಸುತ್ತಿದ್ದೇವೆ. ಮನಸ್ಸುಗಳು ಅಷ್ಟರ ಮಟ್ಟಿಗೆ ಸಂಕುಚಿತಗೊಂಡಿವೆ.
ನೆಂಟರಿಷ್ಟರ ಮನೆಗೆ ಹೊರಡುವುದೇ ಸಂಭ್ರಮ, ಮಾವನ ಮನೆಗೋ ಅತ್ತೆಯ ಮನೆಗೋ, ಅಮ್ಮನ ತವರು ಮನೆಗೋಹೋಗಲು ಅಪ್ಪ ಒಪ್ಪಿಗೆ ಕೊಟ್ಟಾಕ್ಷಣ ಮಾಡಿಯ (ಮಹಡಿ) ಮೇಲೆ ಇರುವ ಬ್ಯಾಗನ್ನ ಹುಡುಕಿ ಅದಕ್ಕೆ ೪-೫ ಜೊತೆ ಬಟ್ಟೆ ಹಾಕಿ ಅಮ್ಮ ಮತ್ತೆ ಅಕ್ಕನ ಜೊತೆ ಹೊರಟು ಬಸ್ ಸ್ಟ್ಯಾಂಡಿಗೆ ಬಂದು ಬಸ್ಸಿಗೆ ಕಾಯ್ದು ಅದು ಬಂದಾಕ್ಷಣ ಹತ್ತಿ ಆ ಜನಜಂಗುಳಿಯಲ್ಲಿ ನುಗ್ಗಿ ಪೇಟೆ ಬಂದ ತಕ್ಷಣ ಇಳಿದು ಎದುರುಗಡೆ ಇರುವ ಸಿನೆಮಾ ಮಂದಿರದಲ್ಲಿ ಯಾವ ಸಿನೆಮಾ ಎಂದು ಕಣ್ಕಣ್ಬಿಟ್ಟು ನೋಡುತ್ತಿರುವಷ್ಟರಲ್ಲಿ ಅಮ್ಮ ಕೈ ಎಳೆದು ಇನ್ನೊಂದು ಬಸ್ಸಿಗೆ ಹತ್ತಿಸಿದಾಗಲೇ ಆ ಸ್ವಪ್ನಲೋಕದಿಂದ ಎಚ್ಚರ. ಮಾವನ ಮನೆ ತಲುಪಿದಾಕ್ಷಣ ಅಲ್ಲಿ ಆಡುತ್ತಿದ್ದ ಮಾವನ ಮಕ್ಕಳು ಅತ್ತೆ, ಅಕ್ಕ ಅಣ್ಣ ಬಂದ್ರು ಅಂತ ಕಿರುಚಿ ಒಳಗೆ ಓಡಿದರೆ ಅವರು ಬಂದ ವಿಷಯ ಕ್ಷಣಾರ್ಧದಲ್ಲಿ ತಿಳಿಯುತ್ತಿತ್ತು. ಅತ್ತೆ ಹೊರಬಂದು ಕಾಲು ತೊಳೆಯಲು ತಂಬಿಗೆಯಲ್ಲಿ ನೀರು ತಂದು ಇಡುವಷ್ಟರಲ್ಲಿ ಮಾವನ ಮಕ್ಕಳ ಜೊತೆ ಇವನು ತೋಟದ ಹಾದಿ ಹಿಡಿದಾಗಿರುತ್ತಿತ್ತು, ಸೀಬೆ, ಕಿತ್ತಲೆ, ಚಕೋತ, ನೇರಳೆ ಹಣ್ಣು ಎಲ್ಲವೂ ಆ ಸಣ್ಣ ಹೊಟ್ಟೆಯಲ್ಲಿ ಎಷ್ಟು ಬೇಕೋ ಅಷ್ಟು ಸ್ಥಾನವನ್ನ ಆಕ್ರಮಿಸಿಕೊಂಡಿರುತ್ತಿದ್ದವು.ಅಮ್ಮ ಮಾರನೇ ದಿನ ಮನೆಗೆ ಹೊರಟುಬಿಡುತ್ತಿದ್ದಳು, ಇವನು ಒಂದು ವಾರ ಮಾವನ ಮಕ್ಕಳ ಜೊತೆ ಸೇರಿ ಊರು ಕೊಳ್ಳೆ ಹೊಡೆದೇ ಊರಿಗೆ ಹಿಂದಿರುಗುತ್ತಿದ್ದದ್ದು. ಆದರಿಂದು ನೆಂಟರ ಮನೆಯಲ್ಲಿ ವಾರಗಟ್ಟಲೆ ಉಳಿಯುವುದಿರಲಿ, ಹೋಗಿಬರುವುದೇ ಕಡಿಮೆಯಾಗಿದೆ. ಒಂದೊಮ್ಮೆ ಹೋದರೂ ಒಂದು ಹೊತ್ತು ಊಟ ಮಾಡಿ ತುಂಬಾ ಹೊತ್ತಾಯಿತು ಎಂದು ಹೊರಡುವ ಪರಿಸ್ತಿತಿ ಬಂದಿದೆ. ಸಂಬಂಧಗಳು ಸಂಕೀರ್ಣಗೊಂಡಿವೆ, ಅಪ್ಪನ ಕಡೆಯವರು ಅಮ್ಮನ ಕಡೆಯವರು ಯಾರೊಬ್ಬರೂ ಗೊತ್ತಿಲ್ಲ, ಅಪ್ಪ,ಅಮ್ಮನನ್ನೇ ಮಾತನಾಡಿಸಲು ಪುರುಸೊತ್ತಿಲ್ಲದಿರುವಾಗ ಅತ್ತೆ ಮಾವ ಅಣ್ಣ ಅತ್ತಿಗೆ ಅಕ್ಕ ಬಾವ ಇನ್ನೆಲ್ಲಿ ನೆನಪಿಗೆ ಬಂದಾರು?.
ಟಿ. ವಿ ನಮ್ಮನ್ನೆಲ್ಲಾ ಆಕ್ರಮಿಸುವ ಮುಂಚೆ ನಮ್ಮೆಲ್ಲರನ್ನ ಸೂರೆಗೊಂಡಿದ್ದ ಸಾಧನ ರೇಡಿಯೋ, ಕೇಳುಗರಿಗೆ ಒಂದು ಅಭೂತಪೂರ್ವವಾದ ಅನುಭವ ಕೊಡುತ್ತಿದ್ದ ಒಂದು ಅಶರೀರವಾಣಿ. ಬೆಳಗ್ಗೆ ಎದ್ದು ಓದುತ್ತಾ ಕುಳಿತರೆ, ಮನೆಯ ಚಾವಡಿಯಲ್ಲಿ ಅಪ್ಪ ಹಾಕಿಟ್ಟ ರೇಡಿಯೋ ತನ್ನ ಕೆಲಸವನ್ನ ಪ್ರಾರಂಭಿಸುತ್ತಿತ್ತು. ಮೊದಮೊದಲು ಕಿವಿಗೆ ಕೇಳಿಸುತ್ತಿದ್ದದ್ದು ಸಂಸ್ಕೃತ ವಾರ್ತೆ, ಆಮೇಲೆ ಪ್ರದೇಶ ಸಮಾಚಾರ, ಆ ನಂತರ ವಾರ್ತೆಗಳು ನಂತರ ಚಿತ್ರಗೀತೆಗಳು. ಆ ಚಿತ್ರಗೀತಗಳನ್ನ ಕೇಳುವುದೇ ಒಂದು ಆನಂದದ ಕ್ಷಣ. ಕ್ರಿಕೆಟ್ ಪಂದ್ಯ ನಡೆಯುವಾಗ ಯಾರಾದರೂ ರೇಡಿಯೋವನ್ನ ಕಿವಿಗೆ ಆನಿಸಿಕೊಂಡಿದ್ದರೆ ಅವರು ಕಾಮೆಂಟರಿ ಕೇಳುತ್ತಿದ್ದಾರೆ ಎಂದೇ ಅರ್ಥ, ಅವರ ಹತ್ತಿರ ಹೋಗಿ ಸ್ಕೋರ್ ಕೇಳಿದರೇ ಸಮಾಧಾನ. ಸಾಮಾನ್ಯವಾಗಿ ಆಗ ಯಾರಿಗೂ ಕಾಮೆಂಟರಿ ಅರ್ಥವಾಗುತ್ತಿರಲಿಲ್ಲ ಆದರೆ ಓವರ್ ಆದ ತಕ್ಷಣ ಸ್ಕೋರ್ ಹೇಳುತ್ತಿದ್ದುದರಿಂದ ಗೊತ್ತಾಗುತ್ತಿತ್ತು. ಅದರ ನಂತರ ಕ್ರಮೇಣ ಟಿ. ವಿ ಕೆಲವರ ಮನೆಗಳನ್ನ ಪ್ರವೇಶಿಸಿತು, ಯಾರದೋ ಮನೆಗೆ ಟಿ. ವಿ ಬಂತೆಂದರೆ ಇಡೀ ಊರಿನ ಹುಡುಗರ ಹಿಂಡು ಅಲ್ಲಿ ನೆರೆದಿರುತ್ತಿತ್ತು. ಆ ಆಂಟೆನಾ ತಿರುಗಿಸಿ ಟಿ. ವಿ ಸೆಟ್ ಆದ ಬಳಿಕ ಟಿ. ವಿಯ ಮುಂದೆ ಇಡೀ ವಟಾರವೇ ಬಂದು ಕುಳಿತಿರುತ್ತಿತ್ತು. ರಾಮಾಯಣ, ಮಹಾಭಾರತ, ಚಿತ್ರಹಾರ್, ಚಿತ್ರಮಂಜರಿ....ದೂರದರ್ಶನ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿತ್ತು. ಆ ಕಾರ್ಯಕ್ರಮಗಳನ್ನ ನೋಡುತ್ತಿದ್ದರೆ ತಾವೇ ಅದರಲ್ಲಿ ಲೀನವಾಗಿ ಹೋಗಿರುವ ಭಾವ. ಆದರಿಂದು ಹಲವಾರು ಎಫ್ ಎಂಗಳ ಭರಾಟೆಯಲ್ಲಿ, ನೂರಾರು ಚಾನೆಲ್ಗಳ ಸಾಗರದಲ್ಲಿ ಮುಳುಗಿಹೋಗಿದ್ದೇವೆ. ಎಷ್ಟು ನೋಡಿದರೂ, ಯಾವುದನ್ನೇ ನೋಡಿದರೂ ಅತೃಪ್ತಿಯೇ. ಚಾನೆಲ್ಗಳಿಗಾಗಿ ಅಣ್ಣ ತಂಗಿ ಅಕ್ಕ ತಮ್ಮನಲ್ಲೇ ಕಿತ್ತಾಟ. ಆಗ ಸ್ವಲ್ಪವಿದ್ದರೂ ಎಲ್ಲವೂ ಸಿಕ್ಕ ಸಂತೃಪ್ತಿ, ಈಗ ಅತಿಯಾಗಿದ್ದರೂ ಏನೂ ಸಿಗದ ಅತೃಪ್ತಿ.
ಅಮ್ಮ ಮಾಡಿಕೊಟ್ಟ ಕೋಡುಬಳೆ, ಅದನ್ನು ಆ ಮಳೆಯಲ್ಲಿ ಮೆಲ್ಲುತ್ತಾ ಕುಳಿತ ಸಂಭ್ರಮ ಬಹುಷಃ ದೊಡ್ಡ ಬೇಕರಿಯಲ್ಲಿ ಭಿನ್ನ ಭಿನ್ನವಾದ ತಿಂಡಿಗಳನ್ನ ಕೊಂಡು ಆ ಜನಜಂಗುಳಿಯ ಮಧ್ಯೆ ತಿನ್ನುವಾಗ ಬರದು. ಅಪ್ಪ ಕೊಟ್ಟ ೫೦ ಪೈಸೆಯಲ್ಲಿ ಎರಡು ಟಾಫೀ (ಕಡ್ಲೆ ಮಿಠಾಯಿ) ಮತ್ತೆ ೧೦ ಗೋಲಿ ತೆಗೆದುಕೊಂಡಾಗ ಆದ ಸಂತೋಷ ಈಗ ಸಾವಿರ ರೂಪಾಯಿ ಕೊಟ್ಟರೂ ಸಿಗಲಾರದು. ಕೆಂಡದ ಮೇಲೆ ರೊಟ್ಟಿ ಬೇಯುತ್ತಿರುವಾಗ ಅದನ್ನು ತೆಗೆದುಕೊಳ್ಳಲು ಅಣ್ಣನ, ತಮ್ಮನ, ಅಕ್ಕನ, ತಂಗಿಯ ಜೊತೆ ಕಿತ್ತಾಡಿ ತಿಂದಾಗ ಸಿಗುತ್ತಿದ್ದ ತೃಪ್ತಿ ಯಾವುದೇ ಫೈವ್ ಸ್ಟಾರ್ ಹೋಟೆಲ್ನ ನೀರವ ವಾತಾವರಣದಲ್ಲಿ ಕೂತು ತಿನ್ನುವಾಗ ಸಿಗುವುದಿಲ್ಲ. ಜಾತ್ರೆಯಲ್ಲಿ ನಾಲ್ಕಾಣೆಗೆ ಕೊಂಡ ಬಲೂನ್ ಸೃಷ್ಟಿಸುತ್ತಿದ್ದ ಜಾದೂ ಈಗಿನ ಯಾವುದೇ ಮಾಲ್ಗಳಲ್ಲಿ ಕೊಂಡರೂ ಬರುವುದಿಲ್ಲ. ಆ ದಿವ್ಯ ಮೌನದಲಿ ಮುಂಜಾವಿನಲ್ಲಿ ನೀಲಾಕಾಶದಲ್ಲಿ ಸೂರ್ಯೋದಯ, ಮುಸ್ಸಂಜೆಯಲಿ ದಿಗಂತದಲ್ಲಿ ಸೂರ್ಯಾಸ್ತ, ರಾತ್ರಿಯ ಹೊತ್ತು ಆಗಸದಲ್ಲಿ ಮೂಡುತ್ತಿದ್ದ ನಕ್ಷತ್ರಗಳ ಚಿತ್ತಾರ ನೀಡುತ್ತಿದ್ದ ಆ ದಿವ್ಯಾನುಭವವನ್ನ ಕಾಂಕ್ರೀಟ್ ಕಾಡು ಮುಚ್ಚಿಹಾಕಿದೆ.
ಅಕ್ಕ ತಂಗಿ ತಮ್ಮಂದಿರ ಜೊತೆ ಚೌಕ ಭಾರ, ಚೆನ್ನಮಣೆ ಆಡಿದ, ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳ ಜೊತೆಗೆ ತೋಟಕ್ಕೆ ನುಗ್ಗಿದ, ಬಸ್ಸಿನ ಮೇಲೆ ಕುಳಿತು ಹೋದ, ದನ ಕಾಯ್ದ, ಊರ ಹುಡುಗರೊಂದಿಗೆ ಆಡಿದ ಗೋಲಿ, ಬುಗುರಿ, ಮರಕೋತಿಯಾಟ, ಲಗೋರಿ ಇವೆಲ್ಲವೂ ಈಗ ನೆನಪುಗಳು. ಮತ್ತೊಮ್ಮೆ ಬಯಸಿದರೂ ಬಾರದು, ಬಯಸುವುದು ಒತ್ತಟ್ಟಿಗಿರಲಿ ಈಗ ಹೋಗಿ ನೋಡಿಅನುಭವಿಸೋಣವೆಂದರೂ ಸಿಗದಂತಹ ಹಂತಕ್ಕೆ ಬಂದು ನಿಂತಿದ್ದೇವೆ. ಬಯಸದೆ ಬಂದ ಬದಲಾವಣೆಗೆ ಒಗ್ಗಿಕೊಂಡು ಹಳತನ್ನ ಹಿಂದೆ ಬಿಟ್ಟು ಬಂದಿದ್ದೇವೆ. ಒಮ್ಮೆ ಹಿಂದಿರುಗಿ ನೋಡಿ, ಎಲ್ಲವೂ ಕಾಣೆಯಾಗಿದ್ದರೂ ನಮ್ಮೊಟ್ಟಿಗೆ ಆಡಿದ, ನೋವಿಗೆ, ನಲಿವಿಗೆ ಸ್ಪಂದಿಸಿದ, ಸುಮಧುರ ಕ್ಷಣಗಳಿಗೆ ಸಾಕ್ಷಿಯಾದ, ನೆನಪಿಸಿಕೊಳ್ಳಲಾರದೆ ಮರೆತೇಹೋದ ಎಷ್ಟೋ ಬಂಧು ಬಾಂಧವರು,ಸ್ನೇಹಿತರು, ಹಿತೈಷಿಗಳು ಇದ್ದಾರೆ. ಭೇಟಿಯಾಗಲಾಗದಿದ್ದರೂ ಅವರಿಗೊಂದು ಕರೆ ಮಾಡಿ ಆ ನೆನಪುಗಳು ಮತ್ತೊಮ್ಮೆ ಚಿಮ್ಮಿ ಬರಬಹುದು. ಮರೆತುಹೋದ ಭಾವಗಳೆಲ್ಲಾ ಮತ್ತೊಮ್ಮೆ ಮರಳಿ ಬರಬಹುದೇನೋ.
Wednesday, August 29, 2012
ಕೆರೆತದ ಕಪಿಮುಷ್ಟಿಯಲ್ಲಿ!
ಬಂದಿರಬಹುದು. ಸೀಟಿನಲ್ಲಿ ಸುಖವಾಗಿ ನಿದ್ರಿಸುತ್ತಿದ್ದ ತಿಗಣೆಗಳು ನಮ್ಮ ದೇಹವನ್ನು ಸೀಟಿನ ಮೇಲೆ ಊರಿದಾಗ ಬೆಂಗಳೂರಿನ ಹಸಿದ ಬೀದಿ ನಾಯಿಗಳು ಮನುಷ್ಯರ ಮೇಲೆ ಆಕ್ರಮಣ ಮಾಡುವಂತೆ ನಮ್ಮ ದೇಹವನ್ನೆಲ್ಲಾ ಮುತ್ತತೊಡಗಿದವು. ರಕ್ತಕಣ್ಣೀರು ಚಿತ್ರದಲ್ಲಿ ಉಪೇಂದ್ರರ ಕೆರೆತವನ್ನೂ ಮೀರಿಸುವಂತಿತ್ತು ನಮ್ಮ ಕೆರೆತ. ಕಣ್ಮುಚ್ಚಿಕೊಂಡೇ ಕೈಗಳು ಮೈಮೇಲೆ ಹರಿದಾಡುತ್ತಿದ್ದವು. ಅಂತೂ ಇಂತೂ ಮುಂಜಾನೆಯ ಹೊತ್ತಿಗೆ ಪೇಟೆ ತಲುಪಿದ್ದಾಯಿತು. ಪಕ್ಕದಲ್ಲಿ ಕೂತಿದ್ದ ಮಾವನವರಿಗೂ ನಿದ್ರೆ ಬಂದಿರಲಿಲ್ಲ, ಆದರೆ ಫಾರ್ಮಾಲ್ಯಿಟಿಗಾದರೂ
ಕೇಳಬೇಕೆಂದು ಬಸ್ಸಿಂದ ಇಳಿದ ಮೇಲೆ ನಿದ್ರೆ ಬಂತೆ ಚೆನ್ನಾಗಿ? ಅಂದೆ. 'ತಿಗಣೆ' ಅಂತ ಕೇವಲ ಒಂದೇ ಪದದಲ್ಲಿ ನನ್ನ ಪ್ರಶ್ನೆಗೆ ಉತ್ತರ ಹೇಳಿ ಸುಮ್ಮನಾದರು. ಶರ್ಟ್ ಕಾಲರ್ ತೆಗೆದು ತಿಗಣೆ ಏನಾದರೂ ಇದೆಯೋ ನೋಡಿ ಅಂದರು, ನಾನು ನೋಡಿ ಇಲ್ಲ ಅಂದೆ. ಮುಂದೆ ಆ ವಿಚಾರದ ಬಗ್ಗೆ ಯಾವುದೇ ಪ್ರಶ್ನೆಯೆತ್ತಲಿಲ್ಲ.
ಬಟ್ಟೆಯನ್ನ ಜೋರಾಗಿ ಕೊಡವಿ ಮನೆಯೊಳಕ್ಕೆ ಹೋದೆ. ನಡುಮನೆಯಲ್ಲಿ ಇದ್ದ ಅಪ್ಪನಿಗೆ ನಾನು ಮಾತನಾಡುತ್ತಿದ್ದ ಯಾವ ವಿಷಯಗಳೂ ಕೇಳಿಸುತ್ತಿರಲಿಲ್ಲ. ಒಂದೊಮ್ಮೆ ಕೇಳಿದ್ದರೆ ಚಾವಡಿಗೆ ಬಿಸಿನೀರ ಕಳಿಸಿ ಅಲ್ಲಿಯೇ ಸ್ನಾನ ಮಾಡಲು ಹೇಳಿ ಆಮೇಲೆ ಮನೆ ಒಳಗೆ
ಬಿಟ್ಟುಕೊಳ್ಳುತ್ತಿದ್ದರು!
ಸ್ವಲ್ಪಹೊತ್ತು ಬಿದ್ಕೊಳ್ಳೋ ಅಂದ್ರು ಆದರೆ ಊರಿಗೆ ಹೋದಾಗ ಬೆಳಗಿನ ಸಮಯದಲ್ಲಿ ಗದ್ದೆ ಮತ್ತೆ ತೋಟಕ್ಕೆ ಹೋಗಿ ಪ್ರಕೃತಿ ಸೌಂದರ್ಯ ಅನುಭವಿಸುವ, ಚಿತ್ರಗಳನ್ನ ತೆಗೆಯುವ, ಹಣ್ಣುಗಳ ಅನ್ವೇಷಣೆಯಲ್ಲಿ ತೊಡಗುವ ನಾನು ಅಮ್ಮನಿಗೆ ನಿದ್ರೆ ಯಾವಾಗ್ಲೂ ಇದ್ದಿದ್ದೆ ಗದ್ದೆ ಕಡೆ ಹೋಗಿಬರ್ತೀನಿ ಅಂದು ಚಪ್ಪಲಿ ಹಾಕಿಕೊಂಡು ಹೊರಟೆ. ಊರಲ್ಲಿದ್ದಾಗ ಇಂತಹ ಸಾವಿರಾರು ಹುಚ್ಚಾಟಗಳನ್ನ ನೋಡಿ ಸಹಿಸಿಕೊಂಡಿದ್ದ ನಮ್ಮಮ್ಮ ಬೇರೇನನ್ನೂ ಹೇಳದೆ ಬಾಗಿಲು ಹಾಕಿಕೊಂಡು ಒಳಕ್ಕೆ ಹೋದರು. ನಾನು ಕೆಳಗೆ ಹೊರಟಿದ್ದನ್ನು ನೋಡಿದ ಮೋತಿ ನನ್ನನ್ನು
ಹಿಂಬಾಲಿಸಿತು.
ಹಾಗೇ ಕಣ್ಣರಳಿಸಿ ನೋಡಿದಾಗ ಅಲ್ಲಲ್ಲಿ ಒಂದೊಂದು ಇರುವುದು ಕಾಣಿಸಿತು. ಹತ್ತಲೋ ಬೇಡವೋ ಎಂದು ಯೋಚಿಸಿದೆ, ನಾಳೆ ಬಂದರಾಯಿತು ಅಂತ ಒಮ್ಮೆ ಸುಮ್ನಾದೆ ಆದ್ರೆ ಅಕಸ್ಮಾತ್ ಬೇರೆ ಯಾರಾದರೂ ನೋಡಿ ಕಿತ್ಕೊಂಡು ಹೋಗಬಹುದು ಅದೂ ಅಲ್ಲದೆ ಅಕಸ್ಮಾತ್ ಇದ್ದರೂ ಮೊದಲೇ ಮಳೆಗಾಲದ ಸಮಯ ಯಾವಾಗ ಮಳೆ ಬರುವುದೆಂದು ಹೇಳುವುದಕ್ಕಾಗುವುದಿಲ್ಲ ಎಂದುಕೊಂಡು ಮರ ಹತ್ತಿದೆ (ನನ್ನ ಎಣಿಕೆ ನಿಜವಾಗಿತ್ತು, ಮಾರನೇ ದಿನ ಭಾರೀ ಮಳೆ ಶುರುವಾಗಿತ್ತು).
ಆಗಿರಲಿಲ್ಲ. ಆದರೆ ಹತ್ತುವುದಕ್ಕೆ ಕೆಳಗೆ ಯಾವುದೇ ಕೊನೆಗಳಿರಲಿಲ್ಲ, ಹೀಗಾಗಿ ಕಷ್ಟಪಟ್ಟೇ ಹತ್ತಬೇಕಾಗಿತ್ತು ಅದೂ ಅಲ್ಲದೆ ಮರ ಗದ್ದೆಯ ಮೇಲ್ಬದಿಯಲ್ಲಿ ಇದ್ದುದರಿಂದ ಮರದಾಚೆಯ ಸಾಲಿನಲ್ಲಿ ಕಲ್ಲೇವು (ಕಾಲುವೆ) ಹರಿಯುತ್ತಿತ್ತು, ಅಪ್ಪಿ ತಪ್ಪಿ ಜಾರಿದರೆ ಮತ್ತೊಮ್ಮೆ ಸ್ನಾನ ಮಾಡುವ ಸಂದರ್ಭ ಬರುತ್ತಿತ್ತು! ಜೊತೆಗೆ ಮೂಳೆ ಮುರಿಯುವ ಅವಕಾಶವೂ ಒದಗುತ್ತಿತ್ತು! ಬೆಳಗಿನ ಸಮಯ, ಯಾರೂ ಆ ಗದ್ದೆಯ ಬಯಲಿನಲ್ಲಿ ಕಾಣಿಸುತ್ತಿರಲಿಲ್ಲ. ಬಹುಶಃ ಯಾರಾದ್ರೂ ಬಂದು ನನ್ನನ್ನ ನೋಡಿದ್ರೆ, ಬೆಳ್ಗ್ಬೆಳ್ಗೆ ಬೆಂಗ್ಳೂರಿಂದ ಬಂದು ಇವ್ನಿಗೇನು ಬಂತಪ್ಪಾ!? ಅಂತಿದ್ರು. ಸದ್ಯ ಹಾಗಾಗಲಿಲ್ಲ. ಕೆಳಗೆ ನಿಂತಾಗ ಸ್ವಲ್ಪವೇ ಕಾಣಿಸುತ್ತಿದ್ದ ಕಾಯಿಗಳು ಮೇಲೆ ಹೋದ ಹಾಗೆ ಜಾಸ್ತಿ ಕಾಣಲಾರಂಭಿಸಿತು, ಬಹುಶಃ ಕುಡಿದವರ ಪರಿಸ್ತಿತಿಯೂ ಇದಕ್ಕಿಂತ ಭಿನ್ನವಾಗಿರಲಿಕ್ಕಿಲ್ಲ!!.ಕೈ ಚಾಚುವ ಕಡೆಯೆಲ್ಲಾ ಹೋಗಿ ನೆಲ್ಲಿಕಾಯಿ ಕಿತ್ತು ಜೇಬಿಗೆ ತುಂಬಿಕೊಂಡೆ. ಎರಡೂ ಜೇಬು ತುಂಬಿದ ಬಳಿಕ ಸಾಕೆನ್ನಿಸಿ ಇಳಿಯಲಾರಂಭಿಸಿದೆ. ಇದ್ದಕಿದ್ದಂತೆ ದೂರದಿಂದ ಯಾರೋ ಕೂಗಿದಂತಾಯ್ತು??!!.
'ಓಯ್ ಯಾರ್ರೋ ಅದು ನಮ್ಗೌಡ್ರ ಗದ್ದೆಲೀ ಮರ ಹತ್ತಿರೋದು?' ಎಂದು ದನಿ ಕೇಳಿಸಿತು. ಬೇರೆಯವರ ಗದ್ದೆಯ ಮರಕ್ಕೆ ಹತ್ತಿದ್ದರೆ ಬಹುಶಃ ಹೆದರಿ ಹಾರಿ ಚರಂಡಿಗೆ ಬೀಳುತ್ತಿದ್ದೆನೇನೋ (ಸಣ್ಣವನಾಗಿದ್ದಾಗ!!! ಆದರೆ ಈಗ ಹತ್ತುತ್ತಿರಲಿಲ್ಲ. ವಿಚಿತ್ರ ಎಂದರೆ ಇದೇ ಇರ್ಬೇಕು ನೋಡಿ, ಬೇರೆಯವರ ಗದ್ದೆ ತೋಟದಲ್ಲಿ ಏನಾದರೂ ಹಣ್ಣುಗಳನ್ನು ಕದಿಯಲು ಹೋದರೆ ಅದರ ವಾರಸುದಾರರು ಆಗ ಬಯ್ದೋ ಇಲ್ಲವೋ ತಮಾಷೆ ಮಾಡಿದರೆ ಈಗ ಗೇಲಿ ಮಾಡುವ ಸಂದರ್ಭ ಬರುತ್ತಿತ್ತು). ನಮ್ಮದೇ ಗದ್ದೆಯಾದುದರಿಂದ ಹೆದರದೆ ಶಬ್ಧ ಬಂದ ಕಡೆ ತಿರುಗಿ ನೋಡಿದೆ. ದೂರದಲ್ಲಿ ಚಿಕ್ಕ ಬರುವುದು ಕಾಣಿಸಿತು, ಮರದ ಮೇಲಿಂದಲೇ 'ನಾನು ಕಣೋ' ಅಂದೆ. 'ಓ ಗೌಡ್ರು, ಯಾವಾಗ ಬಂದದ್ದು? ಇದೇನು ಬೆಳ್ಗ್ಬೆಳ್ಗೆನೆ ನೆಲ್ಲಿಕಾಯಿ ಕೀಳ್ತಿದೀರಾ? ಯಾರ್ಯಾರು ಬಂದ್ರಿ? ಚಿಕ್ಕಮ್ಮೋರು ಬಂದ್ರಾ??' ಉಸಿರಾಡುವುದಕ್ಕೂ ಪುರುಸೊತ್ತಿಲ್ಲದ
ಹಾಗೆ ಒಂದೇ ಸಮನೆ ಪ್ರಶ್ನೆಗಳ ಮಳೆಯನ್ನೇ ಸುರಿದ. ಅವನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟು, ಮರದ ಬಳಿ ಕುಳಿತಿದ್ದ ಮೋತಿಯನ್ನು ಕರೆದುಕೊಂಡು ಮನೆಕಡೆ ಹೊರಟೆ.
ತೆಗೆದುಕೊಂಡು ಬರಲು ಅಮ್ಮ ಹೇಳಿದರು, ಮನೆಯ ಹತ್ತಿರದಲ್ಲೇ ಇರುವ ಹಾಲುವಾಣ ಮರಕ್ಕೆ ಅಮ್ಮ ಹಾಕಿದ ಬಳ್ಳಿಯಿಂದ ಒಂದಷ್ಟು ಕಿತ್ತುಕೊಂಡು ಬರೋಣವೆಂದು ಹೋದೆ. ಸುಮಾರು ೨೦ ಎಲೆಗಳನ್ನು ಕಿತ್ತುಕೊಂಡು ಅದಕ್ಕೆ ಸ್ವಲ್ಪ ಕಾಫಿಯ ಎಲೆಗಳನ್ನು (ಎರಡೂ ಒಂದೇ ರೀತಿ ಕಾಣುವುದರಿಂದ) ಬೆರೆಸಿ ಅಮ್ಮನಿಗೆ ಕೊಟ್ಟೆ!. ಅಮ್ಮ ಹಾಗೇ ನೋಡಿ ಅಲ್ಲೇ ಇಟ್ಟರು, ಮತ್ಯಾಕೋ ಅನುಮಾನ ಬಂದಂತಾಗಿ ತೆಗೆದುನೋಡಿದರು. 'ಇದೇನೋ ಕಾಫೀ ಎಲೇನೂ ಕುಯ್ದಿದೀಯಲ್ಲೋ??' ಅಂದಾಗ ನಾನು ಅಮ್ಮನ ಮುಖ ನೋಡಿ ನಕ್ಕೆ 'ಬರೀ ಇಂಥಾ ಕೆಲ್ಸ್ಗಳ್ನೆ ಮಾಡು!' ಅಂದು ಒಳಗೆ ಹೋದರು.
ಕೊನೆಗೆ ಕೊನೆಯ ಕೊನೆಯನ್ನು ಕೈಗಳು ತಲುಪಬೇಕಾಗಿತ್ತು!! ಹತ್ತು ನಿಮಿಷಗಳ ಹರಸಾಹಸದ ನಂತರ ಅಂತೂ ಕೊನೆಯನ್ನ ಹಿಡಿದೆ, ಆದರೆ ಕೈ ಬಳಿ ಏನೋ ತುರಿಸಿದಂತಾಗಿ ಹಿಡಿದುಕೊಂಡಿದ್ದ ಕೊನೆಯನ್ನೆಲ್ಲಾ ಬಿಟ್ಟೆ. ಮೋತಿ ನನ್ನ ಮಂಗನಾಟವನ್ನ ನೋಡಿ ಮನೆಯ ಕಡೆ ಹೆಜ್ಜೆ ಹಾಕಿತು. ಕೈಯನ್ನ ಕೆರೆದುಕೊಂಡು ಮತ್ತೆ ಕೊನೆಗೆ ಕೈ ಹಾಕಿದೆ. ಅಂತೂ ಎರಡು ಸೀಬೆಹಣ್ಣನ್ನು ಕಿತ್ತೆ. ಒಂದರ ಅರ್ಧಭಾಗವನ್ನು ದೇವರು ಗಿಳಿಗೆ ಕೊಟ್ಟಿದ್ದ ಹಾಗಾಗಿ ಇನ್ನರ್ಧ ಭಾಗ ನನಗೊಲಿದಿತ್ತು!. ತಿನ್ನುತ್ತಾ ಮನೆಕಡೆ ಹೆಜ್ಜೆ ಹಾಕಿದೆ, ಕೈ ತುರಿಸುತ್ತಲೇ ಇತ್ತು
ನನ್ನ ಬೆರಳುಗಳು ಕೆರೆಯುತ್ತಲೇ ಇತ್ತು!.ಭಯಂಕರ ತುರಿಕೆಯಾಗತೊಡಗಿತು ಇದ್ದಕಿದ್ದಂತೆ ಯೋಚನೆ ಬಂತು, ತಿಗಣೆಗಳು ಇನ್ನೂ ದೇಹವನ್ನು ಬಿಟ್ಟು ತೊಲಗಿಲ್ಲವೇನೋ ಎಂದು. ಚೆನ್ನಾಗಿ ಸ್ನಾನ ಮಾಡಿದ್ದಾಯಿತು, ಬೇರೆ ಬಟ್ಟೆಯನ್ನೂ ಹಾಕಿದ್ದಾಯಿತು ಆದರೂ
ಹೀಗಾಯಿತಲ್ಲವೆಂದುಕೊಂಡೆ. ಹಾಗೇ ಬರುವಾಗ ಅಪ್ಪ ಮತ್ತುಮಾವ ಚಾವಡಿಯ ಬಳಿ ಕೂತಿದ್ದರು. ಕೈ ಊದಿರುವುದನ್ನ ನೋಡಿದ ಮಾವ ಏನಾಯಿತು ಅಂತ ವಿಚಾರಿಸಿ ಅರಶಿನದ ಪುಡಿ ಹಚ್ಕೊಳ್ಳಿ ಅಂದ್ರು, ನಮ್ಮಪ್ಪ ಇವ್ನ್ದಿದ್ದಿದ್ದೆ ಅಂತ ಏನೂ ಹೇಳದೆ ಅವರೊಂದಿಗೆ ಮಾತಾಡುತ್ತಾ ಕುಳಿತರು.
Monday, October 24, 2011
ಬೆಳಗಬೇಕಾದ ಮನಸ್ಸುಗಳೇ ಕೊಳೆತುಹೋದರೇ??
ಮೊನ್ನೆ ಟಿ.ವಿ ನೋಡ್ತಿದ್ದಾಗ ಒಂದು ಸುದ್ದಿ ಬಂತು ಅದನ್ನ ನೋಡಿದಾಗ ಒಂದು ವಿಷಯ ಹೇಳುವ ಮನಸ್ಸಾಯಿತು (ಬಹುಶ ಇದು ತುಂಬಾ ಜನರ ಜೀವನದಲ್ಲಿ ನಡೆದ ಘಟನೆಗಳೂ ಆಗಿರಬಹುದು), ಟಿ. ವಿಯಲ್ಲಿ ಬಂದ ಸುದ್ದಿ ಈ ಕಥೆಯಾದ ಮೇಲೆ.
..............
ಸುಷ್ಮಾ, ಒಂದು ಒಳ್ಳೆಯ ಕುಟುಂಬದ ಹುಡುಗಿ. ಅಪ್ಪ ಸರ್ಕಾರಿ ನೌಕರ, ಅಮ್ಮ ಗೃಹಿಣಿ. ಒಬ್ಬಳೇ ಮಗಳಾದ್ದರಿಂದ ಪೋಷಕರು ಅವಳನ್ನು ತುಂಬಾ ಪ್ರೀತಿಯಿಂದ ಚೆನ್ನಾಗಿ ಸಾಕಿದ್ದರು. ನೋಡುವುದಕ್ಕೆ ಲಕ್ಷಣವಾಗಿದ್ದಳು, ಸುಷ್ಮಾ ಓದಿನಲ್ಲಿ ಚೂಟಿ ಇದ್ದಳು, ಹೈಸ್ಕೂಲ್ ಮುಗಿಸಿ ಆ ಊರಿನ ಒಂದು ಒಳ್ಳೆಯ ಕಾಲೇಜಿಗೆ ಸೇರಿದ್ದಳು. ಕಾಲೇಜಿನಲ್ಲೂ ಓದಿನಲ್ಲಿ ಮುಂದಿದ್ದಳು.
ರಮೇಶ್, ಶ್ರೀಮಂತ ಮನೆತನದ ಹುಡುಗ, ಸುಸಂಸ್ಕೃತ ಕುಟುಂಬ. ಅಪ್ಪ ಬ್ಯುಸಿನೆಸ್ಸ್ಮೆನ್, ಅಮ್ಮ ಗೃಹಿಣಿ, ರಮೇಶನಿಗೊಬ್ಬಳು ತಂಗಿ. ರಮೇಶನು ಅತಿ ಬುದ್ದಿವಂತನಲ್ಲದಿದ್ದರೂ ಫಸ್ಟ್ ಕ್ಲಾಸ್ನಲ್ಲಿ ಎಲ್ಲ ಕ್ಲಾಸಲ್ಲೂ ಪಾಸಾಗುತ್ತಿದ್ದನು. ರಮೇಶನದು ಕಟ್ಟುಮಸ್ತಾದ ದೇಹ ಜೊತೆಗೆ ನೋಡಲೂ ಚೆಂದವಾಗಿದ್ದನು. ಅವನೂ ಕೂಡ ಸುಷ್ಮಾ ಸೇರಿದ ಕಾಲೇಜಿಗೆ ಸೇರಿದ್ದನು.
ಇಬ್ಬರೂ ಒಂದೇ ಬ್ಯಾಚಿನಲ್ಲಿದ್ದರು. ಕ್ಲಾಸಲ್ಲಿ ಲೆಕ್ಚರರ್ ಕೇಳುತ್ತಿದ್ದ ಪ್ರಶ್ನೆಗಳಿಗೆ ಹಲವೊಮ್ಮೆ ಇವಳೇ ಎದ್ದುನಿಂತು ಉತ್ತರಿಸುತ್ತಿದ್ದುದರಿಂದ ಇವನಿಗೂ ಅವಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ. ಒಂದು ದಿನ ಟೆಸ್ಟ್ ನೆಪದಲ್ಲಿ ಅವಳನ್ನು ಮಾತಾನಾಡಿಸಬೇಕು ಎಂದು ನಿರ್ಧಾರ ಮಾಡಿ ಕಾಲೇಜ್ ಬಿಟ್ಟ ತಕ್ಷಣ ಅವಳಿಗೆ ಗೊತ್ತಾಗದಂತೆ ಅವಳನ್ನು ಹಿಂಬಾಲಿಸಿದನು. ಅವಳ ಗೆಳತಿಯರೆಲ್ಲ ಬೇರೆಯಾಗಿ ಇವಳು ಒಂಟಿಯಾದ ತಕ್ಷಣ ಅವಳ ಹತ್ತಿರ ಹೋಗಿ ಯಾವುದೋ ನೋಟ್ಸ್ ಕೇಳುವ ನೆಪದಲ್ಲಿ ಮಾತನಾಡಿಸಿದನು.
ಹೀಗೆ ಶುರುವಾದ ಭೇಟಿ ಇಬ್ಬರೂ ಇಷ್ಟಪಡುವ ಹಂತದವರೆಗೆ ಹೋಯ್ತು. ಇಬ್ಬರೂ ಬುದ್ಧಿವಂತರಾದ್ದರಿಂದ ಮದುವೆಯ ಪ್ರಸ್ತಾಪವನ್ನು ಮನೆಯವರಿಗೆ ತಿಳಿಸಬೇಕು ಆದರೆ ಅದಕ್ಕೂ ಮುನ್ನ ಇಬ್ಬರ ಡಿಗ್ರಿ ಮುಗಿಯಲಿ ಎಂದು ನಿರ್ಧರಿಸಿದರು. ಡಿಗ್ರಿಯೂ ಆಯಿತು, ಇಬ್ಬರೂ ಮನೆಯಲ್ಲಿ ಕೇಳುವ ಆ ದಿನವೂ ಬಂತು. ಇಬ್ಬರ ಮನೆಯಲ್ಲೂ ಬಂದ ಒಂದೇ ಉತ್ತರ ಅಂದರೆ ಬೇರೆ ಜಾತಿಯೆಂದು.
ಇಬ್ಬರಿಗೂ ಒಬ್ಬರನ್ನೊಬ್ಬರನ್ನು ಬಿಡುವ ಮನಸ್ಸಿಲ್ಲ ಜೊತೆಗೆ ಮನೆಯವರನ್ನೂ ನೋಯಿಸುವ ಮನಸ್ಸಿರಲಿಲ್ಲ. ಮರಳಿ ಯತ್ನವ ಮಾಡು ಅನ್ನುವಂತೆ ಅವರಿಬ್ಬರೂ ಮತ್ತೆ ಮತ್ತೆ ಈ ವಿಷಯದ ಬಗ್ಗೆ ಮನೆಯಲ್ಲಿ ಪ್ರಸ್ತಾಪವನ್ನೆತ್ತುತಿದ್ದರು. ಯಾವಾಗಲೂ ಸಿಗುತ್ತಿದ್ದುದು ಒಂದೇ ಉತ್ತರ, ಈ ನಡುವೆ ಸುಷ್ಮಾಳ ಮನೆಯಲ್ಲಿ ಬೇರೊಬ್ಬ ಹುಡುಗನನ್ನು ಹುಡುಕಲು ಶುರುಮಾಡಿದರು, ತಿಳಿದ ಸುಷ್ಮಾ ಇದನ್ನ ರಮೇಶನಿಗೆ ತಿಳಿಸಿದಾಗ ಅವನಿಗೂ ಗಾಬರಿಯಾಯಿತು. ವಿಧಿಯಿಲ್ಲದೆ ಮನಸ್ಸಿಲ್ಲದ ಮನಸ್ಸಿನಿಂದ ಓಡಿಹೋಗುವ ನಿರ್ಧಾರ ಮಾಡಿದರು.
ಬೇರೊಂದು ಊರಲ್ಲಿ ಸಂಸಾರ ಶುರುಮಾಡಿದ ಇಬ್ಬರೂ ಒಂದೊಂದು ಕೆಲಸವನ್ನು ಹುಡುಕಿಕೊಂಡರು. ಈ ನಡುವೆ ವಿಷಯ ತಿಳಿದ ಸುಷ್ಮಾಳ ಅಪ್ಪ ಅಮ್ಮನಿಗೆ ಬೇಸರವಾದರೂ ಅದನ್ನು ತೋರ್ಪಡಿಸದೆ ಆದದ್ದಾಯ್ತು ಎಂದು ಮಗಳು ಮತ್ತು ಅಳಿಯನನ್ನು ಒಮ್ಮೆ ಹೋಗಿ ನೋಡಿಕೊಂಡು ಬಂದಿದ್ದರು. ಆದರೆ ರಮೇಶನ ಮನೆಯಲ್ಲಿನ ಚಿತ್ರಣ ಬೇರೆಯ ತೆರನಿತ್ತು. ವಾಸ್ತವದಲ್ಲಿ ರಮೇಶನ ಅಪ್ಪ ಒಳ್ಳೆಯವರಿದ್ದರೂ ಮಗ ಹೀಗೆ ಮಾಡಿದ ಎಂದು ಕೋಪಗೊಂಡಿದ್ದರು. ಇವನೇನೋ ಮದುವೆಯಾಗಿ ಹೋದ ಆದರೆ ಮಗಳಿಗೆ ಗಂಡು ಕೊಡುವವರು ಯಾರು ಎಂದು ಮನಸ್ಸಿನಲ್ಲಿಯೇ ಕೊರೆಯುತ್ತಿತ್ತು, ಆ ಕೋಪವೇ ಒಂದೆರಡು ಸಲ ಸುಷ್ಮಾ, ರಮೇಶನ ಮೇಲೆ ಹಲ್ಲೆಯ ರೀತಿಯಲ್ಲಿ ವ್ಯಕ್ತವಾಗಿತ್ತು. ಅದ್ಹೇಗೋ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದರು.
ಇಲ್ಲಿದ್ದರೆ ಅಪಾಯವೆಂದರಿತು ಬೆಂಗಳೂರಿಗೆ ಬಂದರು. ಕಾಲ ಸರಿಯಿತು, ದಂಪತಿಗಳಿಬ್ಬರೂ ಅನ್ಯೋನ್ಯವಾಗಿ ಸಂಸಾರ ಸಾಗಿಸಿಕೊಂಡು ಹೋಗುತ್ತಿದ್ದರು, ಆದ್ರೆ ಒಂದು ಕೊರಗು ಇಬ್ಬರಲ್ಲೂ ಕಾಡುತ್ತಿತ್ತು ಅದೇನೆಂದರೆ ಮಕ್ಕಳಾಗಲಿಲ್ಲವೆಂದು. ಆಸ್ಪತ್ರೆ, ದೇವಸ್ಥಾನ ಹೀಗೆ ಎಲ್ಲಾ ರೀತಿಯ ಪ್ರಯತ್ನಗಳೂ ಆದವು ಆದರೆ ಏನೊಂದೂ ಪ್ರಯೋಜನವಾಗಲಿಲ್ಲ. ಒಂದು ದಿನ ಸುಷ್ಮಾ ರಮೇಶನಲ್ಲಿ ನಾವೊಂದು ಮಗುವನ್ನು ದತ್ತು ತೆಗೆದುಕೊಂಡರೆ ಹೇಗೆ ಎಂದಳು, ರಮೇಶನಿಗೂ ಅದು ಸರಿಯೆಂದೆನಿಸಿ ಒಂದು ಆಶ್ರಮಕ್ಕೆ ಹೋಗಿ ಒಂದು ಮಗುವನ್ನು ದತ್ತು ತೆಗೆದುಕೊಂಡರು.
..................
ಈಗ ಟಿ. ವಿಯಲ್ಲಿ ಬಂದ ಸುದ್ದಿಯತ್ತ ಗಮನಹರಿಸೋಣ.
ಹೀಗೆ ಚಾನೆಲ್ ಚೇಂಜ್ ಮಾಡ್ತಿದ್ದೆ, ಒಂದು ಚಾನೆಲ್ನಲ್ಲಿ ಯಾವುದೋ ಒಂದು ಹಸುಳೆಯ ತಲೆ ಮತ್ತು ಕೈಯನ್ನು ನಾಯಿಗಳು ತಿಂದಿದ್ದರ ಸುದ್ದಿ ಬರುತ್ತಿತ್ತು, ಜೊತೆಗೆ ಆ ದಿನ ಬೆಳಗ್ಗೆ ಯಾರೋ ಅಲ್ಲಿ ಹಸುಳೆಯನ್ನು ಹಾಕಿಹೋಗಿದ್ದಾರೆ ಎಂಬ ಸುದ್ದಿ ಬರುತ್ತಿತ್ತು. ಹದಿಹರೆಯದ ಆಕರ್ಷಣೆಗಳನ್ನು ತಡೆಯಲಾರದೆ ಬರೀ ನೋಟವೇ ಪ್ರೇಮವೆಂದು ಭಾವಿಸಿ ಮನಸ್ಸಿನ್ನೂ ಪಕ್ವವಾಗಿರದ ಸಮಯದಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಣಯಿಸಲಾಗದೆ, ಜೀವನಸಂಗಾತಿಯೆಂಬ ಪದಕೆ ಅರ್ಥವೇ ತಿಳಿಯದ ವಯಸ್ಸಿನಲ್ಲಿ ಮೈಮರೆತು ಮಾಡಿದ ತಪ್ಪಿಗೆ ಪಾಪದ ಕೂಸು ಜಗತ್ತನ್ನೇ ನೋಡಲಾಗದೆ ಅತ್ಯಂತ ದಾರುಣವಾಗಿ ಕೊಲೆಗೀಡಾಗಿತ್ತು.
ಬೇಕೇ ಇಂಥಾ ಆಕರ್ಷಣೆ????
ಎರಡು ಪ್ರಸಂಗಗಳೂ ಪ್ರೇಮಕ್ಕೆ ಸಂಬಂಧಿಸಿದ್ದೇ, ಆದರೆ ಫಲಿತಾಂಶ ಬೇರೆ ಬೇರೆ .
ಚಿತ್ರಕೃಪೆ: ಅಂತರ್ಜಾಲ.

